ಮಂಗಳೂರು

ವೈಸ್ ಚಾನ್ಸೆಲರ್ ಎಂಬ ಹುದ್ದೆಯೂ ಪ್ರಸಾದ್ ಅತ್ತಾವರ್ ಎಂಬ ಸಂಘಿಯೂ..!

ರಾಯಚೂರು ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿ ಹುದ್ದೆ ಕೊಡಿಸುವುದಾಗಿ ನಂಬಿಸಿ ರಾಯಚೂರು ವಿಶ್ವ ವಿದ್ಯಾಲಯದಲ್ಲಿ ಕೆಮಿಸ್ಟ್ರಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವಿವೇಕ್ ಆಚಾರ್ಯ ಎಂಬುವರಿಂದ 17.5 ಲಕ್ಷ ರೂ ಹಣ ಪಡೆದು ವಂಚಿಸಿದ್ದ ಆರೋಪದ ಮೇಲೆ ರಾಮಸೇನೆ ನಾಯಕ ಪ್ರಸಾದ್ ಅತ್ತಾವರ ಎಂಬಾತನನ್ನು ಬಂಧಿಸಿರುವ ಹಿನ್ನಲೆಯಲ್ಲಿ ಸಾಮಾಜಿಕ ಕಳಕಳಿಯ ಪತ್ರಕರ್ತ ನವೀನ್ ಸೂರಿಂಜೆಯವರು ಬರೆದಿರುವ ಈ ಕಿರು ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ. – ಸಂಪಾದಕರುಆವತ್ತು ಮಂಗಳೂರು ಹೃದಯಭಾಗದ ಪಿಯು ಕಾಲೇಜು ಅಕ್ಷರಶಃ ರಣರಂಗವಾಗಿತ್ತು. ಕಾರಣ ಏನು ಅಂದ್ರೆ ಕಾಲೇಜಿನ ವಿದ್ಯಾರ್ಥಿನಿಯರಾದ ಆಯಿಶಾ ಮತ್ತು ಸುರೇಖಾ ಆಗಷ್ಟೇ ಕಾಲೇಜು ಆವರಣದ ಒಳ ಬಂದು ಜಗಲಿ ಮೇಲೆ ಕುಳಿತಿದ್ದರು. ಅಷ್ಟರೊಳಗೆ ಕಾಲೇಜಿನೊಳಗೆ ಆಯಿಶಾಳ ಅಣ್ಣ ಬೈಕ್ ನಲ್ಲಿ ಬಂದಿದ್ದ. ಆಯಿಶಾಳ ಅಣ್ಣ ಅದೇನೋ ಆಯಿಶಾಳಿಗೆ ನೀಡಿ ಟಾಟಾ ಮಾಡಿ ಹೊರಟಿದ್ದ. ಸಹಜವಾಗಿ ಆತ ಆಯಿಶಾ ಜೊತೆಗಿದ್ದ ಸುರೇಖಾಗೂ ಟಾಟಾ ಮಾಡಿದ್ದ. ಅಷ್ಟೆ ಆಗಿದ್ದು ನೋಡಿ. ಒಂದೈದು ನಿಮಿಷ ಆಗುತ್ತಿದ್ದಂತೆ ಕೇಸರಿ ಶಾಲು ಹಾಕಿಕೊಂಡ ಯುವಕರ ತಂಡ ಕಂಪೌಂಡ್ ಒಳಗೆ ಬಂದು. ಬಂದವರೇ ನೇರ ಆಯಿಶಾ ಮತ್ತು ಸುರೇಖಾಗೆ ಕೆನ್ನೆಗೆರಡು ಬಾರಿದ್ರು. ಇಡೀ ಕಾಲೇಜಿನ ವಿದ್ಯಾರ್ಥಿಗಳು ಆಯಿಶಾ ಮತ್ತು ಸುರೇಖಾ ಸುತ್ತಾ ನೆರೆದಿದ್ದರು. “ಬೇ…ರ್ಸಿಗಳಿಗೆ ಬ್ಯಾರಿಗಳೇ ಆಗಬೇಕು. ಇಲ್ಲಿ ಹಿಂದೂ ಹುಡುಗರು ಇಲ್ವಾ ?” ಎಂದು ಒಬ್ಬ ಕೇಳಿ ಇನ್ನೆರಡು ಬಾರಿಸಿದ. “ಈ ನಾಯಿಗಳನ್ನು ಕೇಳಿದ್ರೆ ಪ್ರಯೋಜನ ಇಲ್ಲ. ಕಾಲೇಜಿನ ಮೇಷ್ಟ್ರುಗಳಿಗೆ ಸಮಾ ನಾಲ್ಕು ಬಿದ್ದರೆ ಸರಿಯಾಗುತ್ತೆ” ಅಂತ ಗುಂಪು ಪ್ರಿನ್ಸಿಪಾಲ್ ಚೇಂಬರಿನತ್ತಾ ಹೋದರು.

ಅಷ್ಟರಲ್ಲಿ ಗದ್ದಲದ ಸುದ್ದಿ ಕೇಳಿ ಹೊರ ಬಂದ ಪ್ರಾಂಶುಪಾಲರು ಸುರೇಖಾ ಮತ್ತು ಆಯಿಶಾಳನ್ನು ವಿಚಾರಿಸಿದ್ರು. “ಸರ್, ನನ್ನ ಚಿಕ್ಕಪ್ಪ ಕಾಪುವಿನಲ್ಲಿ ಡೆತ್ ಆಗಿದ್ದಾರೆ. ಅಮ್ಮ, ಅಪ್ಪ ಮತ್ತು ಅಣ್ಣ ಕಾಪು ಹೋಗ್ತಿದ್ದಾರೆ. ಅದಕ್ಕಾಗಿ ಮನೆ ಕೀ ಕೊಡೋಕೆ ಅಣ್ಣ ಕಾಲೇಜಿಗೆ ಬಂದಿದ್ದ. ಸುರೇಖಾಳ ಹತ್ರ ಮಾತಾಡೋಕೆ ಬಂದಿದ್ದಲ್ಲ” ಎಂದು ಅಳುತ್ತಾ ಗೋಗರೆದಳು ಆಯಿಶಾ. ಸರ್ ಸರ್ ಅಂತ ಮತ್ತೊಮ್ಮೆ ಬಾಯಿ ತೆರೆಯುತ್ತಿದ್ದಂತೆ ಚಟೀರ್ ಅಂತ ಮತ್ತೊಂದು ಏಟು ಕೇಸರಿ ವಸ್ತ್ರದಾರಿಯಿಂದ ಬಿತ್ತು. ಅಷ್ಟರಲ್ಲಿ ನನಗೆ ಸುದ್ದಿ ಮುಟ್ಟಿತ್ತು. ನಾನಲ್ಲಿ ಹಾಜರ್ ಆಗಿದ್ದೆ. ಪ್ರಿನ್ಸಿಪಾಲರು ತನ್ನ ಕಾಲೇಜು ಹುಡುಗಿಯರ ಪರ ನಿಲ್ಲೋ ಬದಲು ಕೇಸರಿ ಶಾಲು ಹಾಕಿಕೊಂಡವರ ಪರ ನಿಂತರು. ಯಾಕಮ್ಮಾ ಹೀಗೆಲ್ಲಾ ಮಾಡ್ತೀರಿ ಅಂತ ಹೇಳ್ತಾ ಹೇಳ್ತಾನೆ “ಬನ್ನಿ ಕೂತ್ಕೊಂಡು ಮಾತಾಡೋಣಾ” ಎಂದು ಕೇಸರಿ ವಸ್ತ್ರಧಾರಿಗಳನ್ನು ಪ್ರಾಂಶುಪಾಲರು ಚೇಂಬರಿನೊಳಗೆ ಕರೆದರು.

ಚೆಂಬರಿನಲ್ಲಿ ಪ್ರಿನ್ಸಿಪಾಲರ ಎದುರು ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡ ಕೇಸರಿ ಶಾಲಿನ ಹುಡುಗರು, “ಎಂತದು ನೀವು ? ಹೀಗಾ ಕಾಲೇಜು ನಡೆಸೋದು? ಬ್ಯಾರಿಗಳಿಗೆ ಹಿಂದೂ ಹುಡುಗರ ಜೊತೆ ಚಕ್ಕಂದ ಆಡ್ಲಿಕ್ಕಾ ಕಾಲೇಜಿರೋದು. ಕಂಟ್ರೋಲ್ ಮಾಡಿದ್ರೀ ಸರಿ. ಇಲ್ಲಾಂದ್ರೆ ಕಾಲೇಜು ಪುಡಿ ಪುಡಿ ಆಗ್ತದೆ ಗೊತ್ತಾಯ್ತಲ್ಲ” ಅನ್ತಿದ್ದರು. ಅದೇಗೋ ಸುದ್ದಿ ಪೊಲೀಸರಿಗೆ ತಲುಪಿತು. ಆಗಷ್ಟೆ ಐಪಿಎಸ್ ಮುಗಿಸಿಕೊಂಡಿದ್ದ ಅಮಿತ್ ಸಿಂಗ್ ಮಂಗಳೂರಿಗೆ (ಪ್ರೊಬೆಷನರಿ) ಡಿವೈಎಸ್ಪಿ ಆಗಿ ಬಂದಿದ್ದರು. ಕಾಲೇಜಿನೊಳಗೆ ಬಂದ ಡಿವೈಎಸ್ಪಿ ಅಮಿತ್ ಸಿಂಗ್ ನೇರವಾಗಿ ಪ್ರಾಂಶುಪಾಲರ ಕೊಠಡಿಗೆ ತೆರಳಿದ್ರು. ರಾಜಿ ಪಂಚಾಯಿತಿಗೆ ಆಗುತ್ತಿತ್ತು. ಕೈಕಟ್ಟಿಕೊಂಡು ಎರಡೂ ಕಡೆಯವರ ಮಾತು ಕೇಳುತ್ತಿದ್ದರು ಅಮಿತ್ ಸಿಂಗ್. ಉತ್ತರ ಭಾರತದವರಾದ ಅಮಿತ್ ಸಿಂಗ್ ಗೆ ಕರಾವಳಿಯ ಕನ್ನಡ ಸಂಪೂರ್ಣ ಅರ್ಥ ಆಗುತ್ತಿರಲಿಲ್ಲ. ಆದರೂ ಪಿಸಿ ಬಳಿ ಕೇಳಿಕೊಂಡು ಅರ್ಥ ಮಾಡಿಕೊಳ್ಳುತ್ತಿದ್ದರು.

“ನೋಡಿ ಇವರೇ….. ಆ ಹುಡುಗಿಯ ಚಿಕ್ಕಪ್ಪ ತೀರಿ ಹೋಗಿದ್ದಾರೆ ಅನ್ನೋದನ್ನು ಹೇಳಿ ಮನೆ ಕೀ ಕೊಡೊಕೆ ಬಂದ್ರೆ ಹೀಗೆ ಹೃದಯ ಇಲ್ಲದ ಹಾಗೆ ನೀವು ವರ್ತಿಸಿದ್ರೆ ತಪ್ಪು” ಎಂದು ಪ್ರಾಂಶುಪಾಲರು ಹೇಳುತ್ತಿದ್ದರು. “ಎಂತ ಹೃದಯ ? ನೀವು ಪೆಟ್ಟುಕಮ್ಮಿಯ ಹಾಗೆ ಮಾತಾಡಿದ್ರೆ ಜಾಗೃತೆ. ನಮ್ಮ ಹಿಂದೂ ಹುಡುಗಿ ಹತ್ರ ಏನ್ ಕೆಲಸ ಆ ಬ್ಯಾರಿಗೆ ? ನೀವು ಸಮ ಇದ್ರೆ ಎಲ್ಲಾ ಸಮ ಇರುತ್ತೆ. ಇಲ್ಲಾಂದ್ರೆ ನಮ್ ವಿಷ್ಯ ಗೊತ್ತಲ್ವಾ?” ಅಂತ ಟೇಬಲ್ ಗುದ್ದಿ ಹೇಳುತ್ತಿದ್ದ ಕೇಸರಿ ಶಾಲುಧಾರಿ. ಕೈ ಕಟ್ಟಿ ನಿಂತು ಕೇಳುತ್ತಿದ್ದ ಅಮಿತ್ ಸಿಂಗ್ ಎರಡೆಜ್ಜೆ ಹಿಂದೆ ಹೋದ್ರು. ಕೈ ಮೇಲೆತ್ತಿ ಪ್ರಿನ್ಸಿಪಾಲ್ ಚೇಂಬರಿನ ಬಾಗಿಲು ಚಿಲಕ ಹಾಕಿದ್ರು. ಪಿಸಿ ಕೈಯ್ಯಲ್ಲಿದ್ದ ಲಾಠಿ ತೆಗೆದು ಕೇಸರಿ ಶಾಲಿನ ಹುಡುಗರ ಕಾಲರ್ ಹಿಡಿದು ಮೇಲೆಬ್ಬಿಸಿ ರಪ್ ರಪ್ ಎಂದು ಬಾರಿಸಿದ್ರು. “ಏನ್ ನಿಮ್ ಕ್ವಾಲಿಫಿಕೇಷನ್ ? ಏನ್ ಓದಿದ್ದಿಯಾ ಬೊಗಳು” ಎಂದು ಹಿಂದಿ ಮಿಶ್ರಿತ ಕನ್ನಡದಲ್ಲಿ ಕೇಳಿದ್ರು. ಆ ಉಚ್ಚಾರ ಶೈಲಿಯೇ ಒಂದು ಮಜಾ..! “ಸಾರ್ 8 ನೇ ಕ್ಲಾಸು ಸರ್” ಅಂದ ಒಬ್ಬ. 8 ನೇ ಕ್ಲಾಸ್ ಓದಿರೋ ನೀವು ಎಂಎ ಮಾಡಿ ಡಾಕ್ಟರೇಟ್ ಪಡೆದಿರುವ ಪ್ರಿನ್ಸಿಪಾಲರ ಎದುರು ಕಾಲ ಮೇಲೆ ಕಾಲು ಹಾಕಿ ಅವರಿಗೇ ಪಾಠ ಮಾಡ್ರೀರಾ ? ಎಂದು ಮತ್ತೆ ಎರ್ರಾಬಿರ್ರಿ ಲಾಠಿ ರುಚಿ ತೋರಿಸಿ ಪೊಲೀಸ್ ಗಾಡಿ ಹತ್ತಿಸಿದ್ರು ಅಮಿತ್ ಸಿಂಗ್. ಆ ಬಳಿಕ ಅವರ್ಯಾರೂ ಕಾಲೇಜು ಒಳಗೆ ನೈತಿಕ ಪೊಲೀಸ್ ಗಿರಿ ಮಾಡಲು ಬಂದಿಲ್ಲ.

ಪ್ರಸಾದ್ ಅತ್ತಾವರ್ ಅಂಡರ್ ವಲ್ಡ್ ಮತ್ತು ಕೋಮುಸಂಘಟನೆಯಲ್ಲಿ ಅಪಾಯಕಾರಿಯಾಗಿ ಬೆಳೀತಾ ಇದ್ದಾಗಲೇ ಚಿವುಟಿದವರು ಖಡಕ್ ಐಪಿಎಸ್ ಅಧಿಕಾರಿ ಡಾ ಸುಬ್ರಹ್ಮಣ್ಯೇಶ್ವರ ರಾವ್. ಆಗ ಬಿಜೆಪಿ ಸರ್ಕಾರವಾಗಿದ್ದರೂ ಮಂಗಳೂರಿನಲ್ಲೊಂದು ಒಳ್ಳೆ ಪೊಲೀಸ್ ಟೀಮ್ ಇತ್ತು. ಐಜಿಪಿ ಗೋಪಾಲ್ ಹೊಸೂರ್, ಎಸ್ಪಿ ಸುಬ್ರಹ್ಮಣ್ಯೇಶ್ವರ ರಾವ್, ಡಿವೈಎಸ್ಪಿ ಅಮಿತ್ ಸಿಂಗ್, ಗಿರೀಶ್ ಎಸ್ ಇದ್ದ ತಂಡ ಜನಪರವಾಗಿ ಕೆಲಸ ಮಾಡುತ್ತಿತ್ತು. ಅವರೆಲ್ಲಾ ವರ್ಗಾವಣೆಯಾದ ಬಳಿಕ ಅದೇ ಪೊಲೀಸ್ ವ್ಯವಸ್ಥೆ ಮುಂದುವರೆದಿದ್ದರೆ ಇವತ್ತು ಕುಲಪತಿ ಹುದ್ದೆ ಕೊಡಿಸುತ್ತೇನೆಂದು ಕೇಸರಿ ಶಾಲು ಹಾಕಿಕೊಂಡ ಪ್ರಸಾದ್ ಅತ್ತಾವರ್ ವಂಚನೆ ಮಾಡುತ್ತಿರಲಿಲ್ಲ. ಅವತ್ತು ಪ್ರಾಂಶುಪಾಲರಿಗೆ ನೈತಿಕ ಪಾಠ ಮಾಡುತ್ತಿದ್ದ 9th ಫೇಲ್ ಕೇಸರಿ ಹುಡುಗರಿಗೆ ಅಮಿತ್ ಸಿಂಗ್ ಲಾಠಿ ರುಚಿ ತೋರಿಸಿದಂತೆ, ಕಾಲ ಕಾಲಕ್ಕೆ ಪೊಲೀಸರು ಪ್ರಸಾದ್ ಅತ್ತಾವರ್ ನನ್ನು ವಿಚಾರಿಸಿದ್ದರೆ ವೈಸ್ ಚಾನ್ಸೆಲರ್ ಎಂದು ಇಂಗ್ಲೀಷ್ ನಲ್ಲಿ ಬರೆಯಲು ಬಾರದ ಪ್ರಸಾದ್ ಅತ್ತಾವರ್ “ವಿವಿ ಕುಲಪತಿ” ಮಾಡುತ್ತೇನೆ ಎಂದು ಲಕ್ಷಗಟ್ಟಲೆ ವಸೂಲಿ ಮಾಡೋ ಧೈರ್ಯ ಮಾಡುತ್ತಿರಲಿಲ್ಲ.

ಬರಹ: ನವೀನ್ ಸೂರಿಂಜೆ (ಲೇಖಕರು ಖ್ಯಾತ ಪತ್ರಕರ್ತರು ಹಾಗೂ ಸಾಮಾಜಿಕ ಚಿಂತಕರು)

__________________________________

►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares