Advertisement

ಸರ್ಕಾರ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ಮಾಡಿರುವ ತಿದ್ದುಪಡಿ ರೈತರನ್ನು ನಾಶಗೊಳಿಸುವ ಹುನ್ನಾರ; ಸಿದ್ದರಾಮಯ್ಯ!

Advertisement

ನಾಡಿನ ರೈತರು ಬರಗಾಲ, ಪ್ರವಾಹ, ಕೊರೊನಾ ಹಾವಳಿಗಳಿಂದಾಗಿ ಈಗಾಗಲೇ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ, ಇಂತಹ ಸಂಕಷ್ಟದ ಸಮಯದಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲಬೇಕಿದ್ದ ಸರ್ಕಾರ ಭೂಸುಧಾರಣಾ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರನ್ನು ಸರ್ವನಾಶ ಮಾಡಲು ಹೊರಟಿರುವುದು ದುರಂತದ ವಿಚಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರು ಖೇದ ವ್ಯಕ್ತಪಡಿಸಿದ್ದಾರೆ. ಅವರು ಆದಿತ್ಯವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರು ಬರೆದಿರುವ "ರೈತರ ಭದ್ರತೆ -ದೇಶದ ಭದ್ರತೆ" ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ರಾಜ್ಯ ಸರ್ಕಾರದ ಜನ ವಿರೋಧಿ, ರೈತ ವಿರೋಧಿ ಕಾಯ್ದೆಗಳ ವಿರುದ್ಧ ಸದನದಲ್ಲಿ ಸುಧೀರ್ಘ ಚರ್ಚೆ ನಡೆಸಿ, ಅವುಗಳ ಸಾಧಕ- ಬಾಧಕಗಳನ್ನು ರಾಜ್ಯದ ಜನರ ಮುಂದೆ ಇಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಆಶಯವಾಗಿದೆ. ಆದರೆ ಈ ಬಾರಿಯ ಅಧಿವೇಶನದಲ್ಲಿ ಪ್ರಮುಖ ವಿಚಾರಗಳ ಚರ್ಚೆಗೆ ಅಗತ್ಯ ಸಮಯ ಸಿಗುವುದೇ ಅನುಮಾನ ಎಂದವರು ಹೇಳಿದ್ದಾರೆ. 12ನೇ ಶತಮಾನದಲ್ಲಿಯೇ ಬಸವಾದಿ ಶರಣರು ಕಾಯಕ, ದಾಸೋಹ ತತ್ವವನ್ನು ಪ್ರತಿಪಾದನೆ ಮಾಡಿದ್ದರು. ಎಲ್ಲರೂ ದುಡಿಯಬೇಕು, ಎಲ್ಲರೂ ಉಣ್ಣಬೇಕು ಎಂಬುದು ಇದರ ಆಶಯ. ಅವರ ಈ ತತ್ವಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಿದ್ದರೆ ಇಂದು ಸಾಮಾಜಿಕ ಅಂತರ ಕಣ್ಮರೆಯಾಗಿ, ಸಮಸಮಾಜ ಸ್ಥಾಪನೆಯಾಗಿರುತ್ತಿತ್ತು. ದಶಕಗಳ ಹಿಂದಿದ್ದ ಅವಿಭಜಿತ ಕುಟುಂಬಗಳೆಲ್ಲಾ ಕಾಲಕ್ರಮೇಣ ವಿಭಜನೆಯಾಗುತ್ತಾ, ಇಂದು ಸಮಾಜದಲ್ಲಿ ಕೂಡು ಕುಟುಂಬಗಳು ಕಣ್ಮರೆಯಾಗುತ್ತಿವೆ. ಇದರಿಂದ ಬೃಹತ್ ಹಿಡುವಳಿಗಳು ಕುಟುಂಬಗಳ ನಡುವೆ ಹರಿದು ಹಂಚಿಹೋಗಿ ಕೃಷಿ ಕ್ಷೇತ್ರ ಬಡವಾಗುವ ಜೊತೆಗೆ ರೈತರೂ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕೃಷಿಯನ್ನು ಹೊರತುಪಡಿಸಿ ಇತರೆ ಎಲ್ಲಾ ಉತ್ಪಾದನಾ ವಲಯಗಳಲ್ಲೂ ಬೆಲೆ ನಿಗದಿ ಮಾಡುವ ಹಕ್ಕು ಉತ್ಪಾದಕರಿಗೇ ಇದೆ. ಆದರೆ ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡುವುದು ಕೊಳ್ಳುವವರೆ ಆಗಿರುವುದರಿಂದ ರೈತಾಪಿ ವರ್ಗ ನಿರಂತರ ಅರ್ಥಿಕ ಶೋಷಣೆ ಎದುರಿಸುವಂತಾಗಿದೆ. ಭವಿಷ್ಯದಲ್ಲಿ ಈ ವ್ಯವಸ್ಥೆಯೂ ಬದಲಾಗಬೇಕು, ಆ ಮೂಲಕ ಮಾತ್ರವೇ ಕೃಷಿಕರ ಬಾಳು ಹಸನಾಗಲಿದೆ ಎಂದವರು ಹೇಳಿದ್ದಾರೆ.

Advertisement
Advertisement
Recent Posts
Advertisement