Advertisement

ಕಲ್ಕುಳಿ ವಿಠ್ಠಲ ಹೆಗ್ಡೆ ವಿರುದ್ಧ ಮಾನಹಾನಿಕರ ವರದಿ: ಹೊಸದಿಂಗತ ಪತ್ರಿಕೆಯ ಸಂಪಾದಕ, ಪ್ರಕಾಶಕರಿಗೆ ಶಿಕ್ಷೆ.

Advertisement

1993ರಲ್ಲಿ ಕಲ್ಕುಳಿ ವಿಠ್ಠಲ ಹೆಗ್ಡೆ, ಕಡಿದಾಳ ಶಾಮಣ್ಣ, ಆಗಿನ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ, ಕುದುರೆಮುಖ- ಕಳಸ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಜಾಂಬ್ಳಿಯಲ್ಲಿ ನಡೆದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟದ ಜನಜಾಗೃತಿ ಕಾಲ್ನಡಿಗೆ ಜಾಥಾದ ಸಮಾರೋಪ ಸಮಾರಂಭದ ಫೋಟೋ ಬಳಸಿ, 2007ರ ಜುಲೈ 7ರಂದು 'ನಕ್ಸಲಿಯರ ರಹಸ್ಯ ಸಭೆ' ಎಂಬರ್ಥದ(?) ಶಿರೋನಾಮೆ ಬಳಸಿ ಪ್ರಕಟಿಸುವ ಮೂಲಕ ಕಲ್ಕುಳಿ ವಿಠ್ಠಲ ಹೆಗ್ಡೆ ಮತ್ತವರ ಸ್ನೇಹಿತರ ವಿರುದ್ಧ ಕಪೋಲ ಕಲ್ಪಿತ ಆರೋಪ, ಮಾನಹಾನಿ, ಚಾರಿತ್ರ್ಯ ಹರಣ ಮತ್ತು ಗೌರವಕ್ಕೆ ಚ್ಯುತಿ ತರುವಂತಹ ವರದಿ ಪ್ರಕಟಿಸಿದ ಹಿನ್ನಲೆಯಲ್ಲಿ ಹೊಸದಿಗಂತ ದಿನ ಪತ್ರಿಕೆಯ ಸಂಪಾದಕರಾದ ದು.ಗು ಲಕ್ಷ್ಮಣ್, ಮುಖ್ಯಮಂತ್ರಿ ಯಡಿಯೂರಪ್ಪನವರ ಈಗಿನ ಮಾಧ್ಯಮ ಸಲಹೆಗಾರ ಹಾಗೂ ಹೊಸದಿಗಂತ ಪತ್ರಿಕೆಯ ಪ್ರಕಾಶಕರಾದ ಎಸ್. ಶಾಂತಾರಾಮ್ ವಿರುದ್ದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅಂದು ದಾವೆ ಹೂಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ 2019, ಜ.25ರಂದು ತೀರ್ಪು ಪ್ರಕಟಿಸಿ 4 ಸೆಕ್ಷನ್‍ಗಳಡಿಯಲ್ಲಿ ಶಿಕ್ಷೆಯನ್ನು ವಿಧಿಸಿತ್ತು. ಆರೋಪಿತರು ಮೇಲ್ಮನವಿ ಸಲ್ಲಿಸಿದ್ದರು. ಆದರೆ ಇದೀಗ ಈ ತೀರ್ಪನ್ನು ಜಿಲ್ಲಾ ಸತ್ರ ನ್ಯಾಯಾಲಯ ಎತ್ತಿ ಹಿಡಿದು, ಶಿಕ್ಷೆಯನ್ನು ಕಾಯಂಗೊಳಿಸಿ ಆದೇಶಿಸಿದೆ ಎಂದು ಜನಪರ ಚಿಂತಕ, ಸಾಮಾಜಿಕ ಹೋರಾಟಗಾರ ಹಾಗೂ ಪರಿಸರವಾದಿ ಕಲ್ಕುಳಿ ವಿಠ್ಠಲ ಹೆಗ್ಡೆ ಯವರು ಕನ್ನಡ ಮೀಡಿಯಾ ಡಾಟ್ ಕಾಮ್ ಗೆ ತಿಳಿಸಿದ್ದಾರೆ. ಜಿಲ್ಲಾ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ 40 ಸಾವಿರ ರೂ. ದಂಡ ಹಾಗೂ 7 ತಿಂಗಳ ಸಜೆಯನ್ನು ಖಾಯಂಗೊಳಿಸಿ ಆದೇಶಿಸಿದೆ. ಚಾರಿತ್ರ್ಯ ಹರಣ ಮಾಡಿರುವುದರಿಂದ ದೂರುದಾರರಿಗೆ 35 ಸಾವಿರ ರೂ. ಪರಿಹಾರವನ್ನು ಹಾಗೂ ಸರಕಾರಕ್ಕೆ 5 ಸಾವಿರ ರೂ. ದಂಡವನ್ನು ಪಾವತಿಸಬೇಕೆಂದು, ತಪ್ಪಿದಲ್ಲಿ 7 ತಿಂಗಳ ಜೈಲು ಶಿಕ್ಷೆ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ ಎಂದವರು ತಿಳಿಸಿದ್ದಾರೆ. "ಜನಪರ ಹೋರಾಟಗಾರನಾದ ನನ್ನ ಹಾಗೂ ನಮ್ಮ ಚಳವಳಿಗಳನ್ನು ಹತ್ತಿಕ್ಕುವ ದುರುದ್ದೇಶದಿಂದ ಸಾರ್ವಜನಿಕರಲ್ಲಿ ನನ್ನ ಬಗ್ಗೆ ಅಗೌರವವನ್ನುಂಟು ಮಾಡಿ ನನ್ನನ್ನು ಮತ್ತು ಚಳವಳಿಗಳನ್ನು ಹತ್ತಿಕ್ಕಲು ಈ ವರದಿಯ ಮೂಲಕ ಸಂಚು ಹೂಡಲಾಗಿತ್ತು. ಆ ವರದಿಯು ಪೂರ್ವಾಗ್ರಹ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹಿನ್ನಲೆಯಲ್ಲಿ ಪ್ರಕಟಿಸಲಾಗಿತ್ತು. ಪತ್ರಿಕಾಧರ್ಮದ ವಿರುದ್ಧವಾಗಿ ವರದಿ ಪ್ರಕಟಿಸಿದ ಈ ಇಬ್ಬರು ಪತ್ರಕರ್ತರಿಗೆ ಜಿಲ್ಲಾ ನ್ಯಾಯಾಲಯದ ಈ ತೀರ್ಪುನಿಂದಾಗಿ ತಕ್ಕ ಶಿಕ್ಷೆಯಾಗಿದೆ. ನಮ್ಮ ಹೋರಾಟ ಎಂದಿಗೂ ಪ್ರಜಾ ತಾಂತ್ರಿಕವಾಗಿಯೂ, ಕಾನೂನಿನ ಚೌಕಟ್ಟಿನಲ್ಲಿಯೇ ನಡೆಯುತ್ತಿರುವುದಕ್ಕೆ ಈ ತೀರ್ಪು ಪುರಾವೆ ಒದಗಿಸಿದೆ ಹಾಗೂ ಈ ತೀರ್ಪು ನಮ್ಮಂತಹ ನೂರಾರು, ಸಾವಿರಾರು ಜನಪರ ಹೋರಾಟಗಾರರಿಗೆ ಸಿಕ್ಕ ಬಹುದೊಡ್ಡ ಜಯವಾಗಿದೆ. ನಾನು ಈ ದೇಶದ ಕಾನೂನಿನ ಮೇಲೆ ನಂಬಿಕೆ ಇರಿಸಿದ್ದೇನೆ. ಹೊಸದಿಗಂತ ಪತ್ರಿಕೆಯ ಸಂಪಾದಕ ದು.ಗು.ಲಕ್ಷ್ಮಣ್ ಹಾಗೂ ಪ್ರಕಾಶಕ ಎಸ್.ಶಾಂತರಾಮ್ ಅವರು ಮಾಡಿರುವ ತಪ್ಪು ನ್ಯಾಯಾಲಯದಲ್ಲಿ ಸಾಬೀತಾಗುವ ಮೂಲಕ ಸಂವಿಧಾನದ ಮೇಲಿನ ಗೌರವ ಹಾಗೂ ನಂಬಿಕೆಯನ್ನು ಇಮ್ಮಡಿಗೊಳಿಸಿದೆ" ಎಂದವರು ತಿಳಿಸಿದ್ದಾರೆ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement