Advertisement

ಕೃಷಿ ಮಸೂದೆ ವಾಪಾಸು ಪಡೆದರಷ್ಟೆ ಸಾಲದು ಪ್ರತಿಭಟನೆಯ ವೇಳೆ ಮೃತರಾದ 700 ರೈತರ ಕುಟುಂಬಕ್ಕೆ ತಲಾ 25ಲಕ್ಷ ರೂ. ಪರಿಹಾರ ಕೊಡಿ: ಸಿದ್ದರಾಮಯ್ಯ ಆಗ್ರಹ

Advertisement

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೃಷಿ ಮಸೂದೆ ವಾಪಾಸು ಪಡೆದರಷ್ಟೆ ಸಾಲದು ಪ್ರತಿಭಟನೆಯ ವೇಳೆ ಮೃತರಾದ 700ರೈತರ ಕುಟುಂಬಕ್ಕೆ ತಲಾ 25ಲಕ್ಷ ರೂ. ಪರಿಹಾರ ಕೊಡಬೇಕು ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಕೂಡಾ ಎಪಿಎಂಸಿ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ' ಮತ್ತು 'ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ'ಗಳನ್ನು ವಾಪಾಸು ಪಡೆಯಬೇಕು : ಸಿದ್ದರಾಮಯ್ಯ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳ ಪ್ರಬಲ ವಿರೋಧಗಳ ನಡುವೆಯೂ ಸುಗ್ರಿವಾಜ್ಞೆಯ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ ವರ್ಷ ಜಾರಿ ಮಾಡಿದ್ದ ಕರಾಳ ಕೃಷಿ ಕಾಯ್ದೆಗಳನ್ನು ಇದೀಗ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ರೈತಹೋರಾಟಕ್ಕೆ ಮಣಿದು ವಾಪಸು ಪಡೆದಂತೆ ರಾಜ್ಯದ ಬಿಜೆಪಿ ಸರ್ಕಾರ ಕೂಡಾ ರೈತ ವಿರೋಧಿಯಾಗಿರುವ 'ಎಪಿಎಂಸಿ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ' ಮತ್ತು 'ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ'ಯನ್ನು ತಕ್ಷಣ ವಾಪಾಸು ಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಕರಾಳ ಕೃಷಿ ಕಾಯ್ದೆಗಳನ್ನು ದೇಶದ ರೈತರ ಮೇಲೆ ಹೇರುವ ಮೂಲಕ ನರೇಂದ್ರ ಮೋದಿ ಸರ್ಕಾರ ಮಾಡಿದ್ದ ಘೋರ ಅಪರಾಧದಲ್ಲಿ ರಾಜ್ಯದ ಬಿಜೆಪಿ ಸರ್ಕಾರದ ಸಮಾನ ಪಾಲಿದೆ. ನರೇಂದ್ರ ಮೋದಿ ಅವರು ಕೊಂದ ಪಾಪವನ್ನು ತಿಂದು ಪರಿಹರಿಸಿಕೊಂಡರು, ಈಗ ರಾಜ್ಯ ಬಿಜೆಪಿ ಸರ್ಕಾರದ ಸರದಿ ಎಂದವರು ವಿಶ್ಲೇಷಿಸಿದ್ದಾರೆ. ರೈತರು ಬೆಳೆದ ಬೆಳೆಗೆ 'ಕನಿಷ್ಠ ಬೆಂಬಲ ಬೆಲೆ' ನೀಡುವ ಮೂಲಕ ರೈತರಿಗೆ ಕೃಷಿಯ ಮೂಲಕ ಯಾವುದೇ ತೆರನಾದ ನಷ್ಟವಾಗದಂತೆ ಉತ್ತೇಜನ ನೀಡುವ ಸಲುವಾಗಿ ಈ ಹಿಂದೆ ಆಳಿದ್ದ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಆರಂಭಿಸಲ್ಪಟ್ಟಿದ್ದ ಎಪಿಎಂಸಿಗಳ ಯಾವುದೇ ನಿಯಂತ್ರಣಕ್ಕೊಳಪಡದೆ ರೈತರಿಗೆ ವಂಚಿಸಿ ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಬಂದಿರುವ ಖಾಸಗಿ ಕಂಪೆನಿಗಳಿಗೆ ಹೆಬ್ಬಾಗಿಲು ತೆರೆಯುವುದೇ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿದ್ದ ಹೊಸ 'ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ'ಯ ದುರುದ್ದೇಶವಾಗಿದೆ ಎಂದವರು ಹೇಳಿದ್ದಾರೆ. 'ಎಪಿಎಂಸಿ ಹೊಸ ತಿದ್ದುಪಡಿ ಕಾಯ್ದೆ' ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಎಪಿಎಂಸಿಯಿಂದ ಹೊರಗಿರುವ ವರ್ತಕರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಆ ವರ್ತಕರ ವ್ಯವಹಾರಗಳ ಮೇಲೆ ನಿಗಾ ಇಡುವಂತಿಲ್ಲ, ಶುಲ್ಕ, ಸೆಸ್, ಲೆವಿ ಸಂಗ್ರಹಿಸುವಂತಿಲ್ಲ. ಇದು ಸರ್ಕಾರದ ಸಂಪೂರ್ಣ ಶರಣಾಗತಿಯಾಗಿದೆ. ಪ್ರಸ್ತುತ 6% ರೈತರು ಎಪಿಎಂಸಿಗಳಲ್ಲಿ ಬೆಳೆ ಮಾರಾಟ ಮಾಡುತ್ತಿದ್ದು 94% ರೈತರಿಗೆ ಮಾರುಕಟ್ಟೆ ಸೌಲಭ್ಯಗಳಿಲ್ಲ. ನಿಜಕ್ಕೂ ರೈತರಿಗೆ ನೆರವಾಗುವ ಉದ್ದೇಶ ಸರ್ಕಾರಕ್ಕಿದ್ದಿದ್ದರೆ ಮಾರುಕಟ್ಟೆಗಳಿಲ್ಲದ ಕಡೆಗಳಲ್ಲಿ ಎಪಿಎಂಸಿಯಿಂದ ಪರವಾನಿಗೆ ಪಡೆದು ಮಾರುಕಟ್ಟೆಗಳನ್ನು ಸ್ಥಾಪಿಸಲು ಸರ್ಕಾರ ಉತ್ತೇಜನ ನೀಡಬಹುದಾಗಿದೆ. ರೈತರ ಭೂಮಿಗಿದ್ದ ರಕ್ಷಣೆಯನ್ನು ಕಿತ್ತು ಹಾಕಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಭೂಗಳ್ಳರಿಗೆ ನೆರವಾಗುವ ದುರುದ್ದೇಶದ್ದು. ಕಾಂಗ್ರೆಸ್ ನ ವಿರೋಧವನ್ನು ಧಿಕ್ಕರಿಸಿ ರಾಜ್ಯ ಸರ್ಕಾರ ಅನುಷ್ಠಾನ ಗೊಳಿಸಲು ಹೊರಟಿದೆ. ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರ ಕೂಡಾ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ. ಕೃಷಿ ಭೂಮಿ ಖರೀದಿಗೆ ಈ ಹಿಂದೆ ಜಾರಿಯಲ್ಲಿದ್ದ 'ರೂ.25 ಲಕ್ಷ ಆದಾಯದ ಮಿತಿ'ಯನ್ನು ರದ್ದುಗೊಳಿಸಿ, ಕೃಷಿಕರಲ್ಲದವರು ಕೂಡಾ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲು, ಭೂ ಸುಧಾರಣಾ ಕಾಯ್ದೆ 1961ರ ಸೆಕ್ಟನ್ 80 ಮತ್ತು 79 ಎ ಬಿ ಸಿ ಗಳನ್ನು ರದ್ದು ಮಾಡಿರುವ ಬಿಜೆಪಿ ಸರ್ಕಾರ, ರೈತರನ್ನು ಬೀದಿಪಾಲು ಮಾಡಲು ಹೊರಟಿದೆ. ಭೂ ಸುಧಾರಣಾ ಕಾಯ್ದೆ 1961ರ ಸೆಕ್ಷನ್ A,B,C ಯಡಿಯಲ್ಲಿ ಸುಮಾರು 1.7 ಲಕ್ಷ ಎಕರೆ ಜಮೀನಿಗೆ ಸಂಬಂಧಿಸಿದ 13,814 ಪ್ರಕರಣಗಳು ದಾಖಲಾಗಿತ್ತು. ಭೂ ಸುಧಾರಣೆ ತಿದ್ದುಪಡಿ ಮಸೂದೆಯಿಂದ ಈ ಪ್ರಕರಣಗಳು ರದ್ದಾಗಿ ಸರ್ಕಾರದ ಖಜಾನೆಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಲಿದೆ ಎಂದವರು ಖೇಧ ವ್ಯಕ್ತಪಡಿಸಿದ್ದಾರೆ. ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಈ ಎರಡು ಕರಾಳ ಕಾಯ್ದೆಗಳನ್ನು ರಾಜ್ಯ ಕಾಂಗ್ರೆಸ್ ಪಕ್ಷ ವಿರೋಧಿಸಿದೆ. ಇಂತಹ ಕಾಯ್ದೆಗಳನ್ನು ರೂಪಿಸುವ ಹಂತದಲ್ಲಿ ರೈತ ನಾಯಕರು ಮತ್ತು ವಿರೋಧಪಕ್ಷಗಳ ಜೊತೆ ಚರ್ಚೆ ನಡೆಸುವುದು ಪ್ರಜಾಪ್ರಭುತ್ವದ ನಡವಳಿಕೆ. ಆದರೆ ಬಿಜೆಪಿ ಸರ್ಕಾರ ಹಾಗೆ ಮಾಡದೆ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ. ಎಪಿಎಂಸಿ(ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಾಪಸು ಪಡೆಯಲು ರಾಜ್ಯ ಕಾಂಗ್ರೆಸ್ ಪಕ್ಷ ಹೋರಾಟ ನಡೆಸುವುದರ ಜೊತೆಗೆ ರಾಜ್ಯದ ರೈತ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಹೋರಾಟಕ್ಕೂ ಬೆಂಬಲ ನೀಡಲಿದೆ ಎಂದವರು ಘೋಷಿಸಿದ್ದಾರೆ. 'ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕೇಂದ್ರದ ಮೋದಿ ಸರ್ಕಾರದ ನಿರ್ಧಾರ' ದೇಶದ ಮಣ್ಣಿನ ಮಕ್ಕಳ‌ ಅಭೂತಪೂರ್ವ ಹೋರಾಟಕ್ಕೆ‌ ಸಿಕ್ಕ ಗೆಲುವಾಗಿದೆ. ರೈತ ಹೋರಾಟಗಾರರಿಗೆ ಅಭಿನಂದನೆಗಳು. ಕೃಷಿ‌ಕಾಯ್ದೆಯನ್ನು ರದ್ದುಗೊಳಿಸಿದರಷ್ಟೇ ಸಾಲದು ಈ ಕರಾಳ ಕಾಯ್ದೆ ರದ್ದತಿಗಾಗಿ ನಡೆದ ಹೋರಾಟದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ 25 ಲಕ್ಷ ರೂಪಾಯಿ‌ ಪರಿಹಾರ ಕೊಡಬೇಕೆಂದು ಒತ್ತಾಯಿಸುತ್ತೇನೆ ಎಂದವರು ಆಗ್ರಹಿಸಿದ್ದಾರೆ. ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಎದೆಯಗಲ ಎಷ್ಟೇ ಇಂಚಿನದ್ದಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇಬೇಕು. ಇದುವೇ ಪ್ರಜಾಪ್ರಭುತ್ವದ ಸೊಗಸು. ಇದುವೇ ರೈತರ ಸ್ವಾತಂತ್ರ್ಯೋತ್ಸವ. ಕೃಷಿ ಕಾಯ್ದೆ‌ಯಷ್ಟೇ ಅಲ್ಲ, ಕೇಂದ್ರ ಸರ್ಕಾರದ ಪ್ರತಿಯೊಂದು ನೀತಿ ಮತ್ತು ಕಾರ್ಯಕ್ರಮಗಳು ರೈತ ವಿರೋಧಿಯಾದುದಾಗಿದೆ. ಇದು ವಿರಮಿಸುವ ಕಾಲ ಅಲ್ಲ,‌ ರೈತ ವಿರೋಧಿ ಬಿಜೆಪಿ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದವರು ದೇಶದ ಜನರಿಗೆ ಕರೆ ನೀಡಿದ್ದಾರೆ. ರೈತರ ಹೋರಾಟಕ್ಕೆ ಸಿಕ್ಕ ಗೆಲುವಿನ‌‌ ಸ್ಪೂರ್ತಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧದ ಜನ ಹೋರಾಟಕ್ಕೆ ನಾಂದಿಯಾಗಲಿದೆ. ಪೆಟ್ರೋಲ್- ಡೀಸೆಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ವಿರುದ್ಧದ ಹೋರಾಟಕ್ಕೆ ದೇಶದ ಜನ ಅಣಿಯಾಗಿದ್ದಾರೆ ಎಂದವರು ಹೇಳಿದ್ದಾರೆ.

Advertisement
Advertisement
Recent Posts
Advertisement