Advertisement

ಹಿಜಾಬ್ ಮತ್ತು ಶಿಕ್ಷಣ: ಹಳೆ ತಲೆಮಾರಿನ ಮುಸ್ಲಿಂ ಲೇಖಕರ ಗೊಂದಲಕ್ಕೆ ಕಾರಣವಾದರೂ ಏನು? - ವಸಂತ ಬನ್ನಾಡಿ

Advertisement

ಬರಹ: ವಸಂತ ಬನ್ನಾಡಿ (ಲೇಖಕರು ಮೋದಿ ಸರ್ಕಾರ ಜಾರಿಗೊಳಿಸಿದ ಸಿಎಎ, ಎನ್‌ಆರ್‌ಸಿ ಜನವಿರೋಧಿ ಕಾಯ್ದೆಯನ್ನು ವಿರೋಧಿಸಿ 'ನಾಟಕ ಅಕಾಡಮಿ ಪ್ರಶಸ್ತಿ'ಯನ್ನು ಹಿಂತಿರುಗಿಸಿದ್ದ ಹಿರಿಯ ರಂಗ ನಿರ್ದೇಶಕರು, ಕವಿ ಹಾಗೂ ಜನಪರ ಚಿಂತಕರು) 'ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡಿ' ಎಂದು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಲೇಖಕಿ ಬಾನು ಮುಷ್ತಾಕ್ ತಮ್ಮ ಲೇಖನವೊಂದರ ಮೂಲಕ ಮನವಿ ಮಾಡಿಕೊಂಡಿರುವುದನ್ನು ನೋಡಿದೆ. 'ಹಿಜಾಬ್ ತೆಗೆದು ಕ್ಲಾಸಿಗೆ ಹೋಗಿ'ಎನ್ನುವುದು ಅವರ ವಿನಂತಿ. ಇದರ ಹಿಂದಿರುವುದು ಆತಂಕ,ಅಸಹಾಯಕತೆ ಮತ್ತು ಸಮಾಜದ ಶಾಂತಿ ಮುಖ್ಯ ಎಂಬ ಕಳಕಳಿ. ಇದೇ ಸಂದರ್ಭದಲ್ಲಿ ಯಾವತ್ತೂ ಹಿಜಾಬ್ ಧರಿಸದ ಮುಸ್ಲಿಮ್ ಹುಡುಗಿಯೊಬ್ಬಳು ಇದ್ದಕ್ಕಿದ್ದ ಹಾಗೆ ಹಿಜಾಬ್ ಧರಿಸಿ ತರಗತಿಗೆ ಹೋದುದರ ಬಗ್ಗೆ ಬಿ.ಎಂ. ಬಶೀರ್ ಬರೆದಿದ್ದಾರೆ. 'ತನ್ನ ಸ್ನೇಹಿತೆಯರು ಹಿಜಾಬ್ ಧರಿಸುವುದರಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದಾದರೆ ತಾನೂ ಅವರ ಜೊತೆಗೆ ಇರಲು ಬಯಸುತ್ತೇನೆ'ಎನ್ನುವುದು ಆ ಹುಡುಗಿಯ ದೃಢ ನಿರ್ಧಾರವಾಗಿತ್ತು. ಸದ್ಯದ ಈ ಪರಿಸ್ಥಿತಿಗೆ ಯಾರಲ್ಲೂ ಉತ್ತರ ಇರುವುದು ಸಾಧ್ಯವಿಲ್ಲ.ಇದರಿಂದ ಸಂಭ್ರಮಗೊಂಡು ಕೇಕೆ ಹೊಡೆಯುವವರು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ನೀಡಿ ಬೀದಿಗಿಳಿಸಿದವರು ಎಂಬುದು ಗೊತ್ತಿದ್ದೂ ಆ ಹುಡುಗಿ ಹಾಗೆ ಅಂದಿದ್ದಾಳೆ. ಸಮಸ್ಯೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಾದ ಸಂದರ್ಭ ಇದು. ಭಾನು ಮುಷ್ತಾಕ್ ಸೇರಿದಂತೆ ಎಪ್ಪತ್ತು ಎಂಬತ್ತರ ದಶಕದಲ್ಲಿ ಬರೆಯತೊಡಗಿದ ಮುಸ್ಲಿಂ ಲೇಖಕರ ಮನಸ್ಥಿತಿ ಬೇರೆಯೇ ರೀತಿಯಲ್ಲಿ ಇರಲು ಕಾರಣವಿದೆ. ಆಗಿನ್ನೂ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಪಡೆಯುತ್ತಿರಲಿಲ್ಲ. ಫ್ಯಾಸಿಸಂ ಕೂಡ ಈ ಮಟ್ಟದಲ್ಲಿ ಬೆಳೆದಿರಲಿಲ್ಲ. ಯೋಚಿಸುವ ಎಲ್ಲರೂ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತವಾದವನ್ನು ಆವತ್ತು ಬಲವಾಗಿ ಪ್ರತಿಪಾದಿಸಿದವರೇ.ಅದೇ ಸಂದರ್ಭದಲ್ಲಿ ಅದ್ವಾನಿ ಅಂಥವರು ಸಹಬಾಳ್ವೆಯನ್ನು ಬಯಸಿದ್ದ ಮನಸ್ಸುಗಳನ್ನು 'ಡೋಂಗಿ ಜಾತ್ಯಾತೀತವಾದಿ'ಗಳು ಎಂದು ಕರೆದು ತಮ್ಮ ಒಳ ಅಜೆಂಡಾವನ್ನು ಬಿತ್ತಲು ತೊಡಗಿದ್ದು ಅಷ್ಟಾಗಿ ಯಾರ ಗಮನಕ್ಕೂ ಬರಲಿಲ್ಲ. ತನ್ನಷ್ಟಕ್ಕೆ ತಾನು ನಿಧಾನವಾಗಿ ಚಲಿಸುತ್ತಿದ್ದ ದೋಣಿಯೊಳಗೆ ನೀರು ನುಗ್ಗಲು ಇಷ್ಟು ಸಾಕಾಗಿತ್ತು. ಆದರೆ ನಮ್ಮ ಚಿಂತಕರು ಮತ್ತು ಬರಹಗಾರರು ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಇದೇ ಸರಿಸುಮಾರಿಗೆ ಬಂಡಾಯ ಮತ್ತು ದಲಿತ ಚಳುವಳಿ ಕಾಣಿಸಿಕೊಂಡವು. ಬಂಡಾಯ ಚಳುವಳಿ ಸಮಯಸಾಧಕತೆ,ಸ್ವಾರ್ಥ ಪ್ರೇರಿತ ಗುಂಪುಗಾರಿಕೆ ಮತ್ತು ವರ್ತಮಾನಕ್ಕೆ ಹೊಸ ಪರಿಭಾಷೆಯಲ್ಲಿ ಸ್ಪಂದಿಸದ ಕೃತಿಗಳಿಂದಾಗಿ 'ಡಂಬಾಯ' ಎಂಬ ಹೀಗಳಿಕೆಗೆ ಒಳಗಾದದ್ದು ಬೇರೆ ವಿಷಯ. ಅದರಲ್ಲಿ ಸತ್ಯವೂ ಇದೆ.ಆ ಚರ್ಚೆಗೆ ಹೋಗದೆ ಅಂದಿನ ಸಂದರ್ಭದಲ್ಲಿ ಆದ ಸಾಹಿತ್ಯಕ ಬೆಳವಣಿಗೆಯೊಂದರ ಬಗ್ಗೆ ಗಮನ ಸೆಳೆಯಲು ಇಲ್ಲಿ ಪ್ರಯತ್ನಿಸುತ್ತೇನೆ. ಅಂದಿನ ಹೆಚ್ಚಿನ ಲೇಖಕರ ಗಮನ ತಮ್ಮ ಮತ,ಧರ್ಮದೊಳಗೇ ಇರುವ ಹುಳುಕುಗಳನ್ನು ಎತ್ತಿ ಹಿಡಿಯುವುದರ ಕಡೆಗೇ ಇತ್ತು. ಯು.ಆರ್.ಅನಂತಮೂರ್ತಿ ತನ್ನನ್ನು ತಾನು 'ಕ್ರಿಟಿಕಲ್ ಇನ್ಸೈಡರ್' ಎಂದು ಕರೆದುಕೊಂಡ ಸಂದರ್ಭ ಅದು. ಅದನ್ನು ಪ್ರತಿಪಾದಿಸಲು 'ಸಂಸ್ಕಾರ' ವನ್ನೂ ಅವರು ಬರೆದರು. ಉಡುಪಿ ಮಠ ಮತ್ತು ಪೇಜಾವರ ಸ್ವಾಮಿಗಳ ಸಂಪರ್ಕವನ್ನು ಕಳೆದುಕೊಳ್ಳದೇ 'ಒಳ ವಿಮರ್ಶಕ'ನಾಗಿ ಇರುವ ದಾರಿಯನ್ನು ಅವರು ಆರಿಸಿಕೊಂಡರು.ಅನಂತಮೂರ್ತಿ ಹಾಕಿಕೊಟ್ಟ ಈ ಮಾದರಿ ರಾಡಿಕಲ್ ಆಗಿರಲು ಸಾಧ್ಯವೇ ಇರಲಿಲ್ಲ. ಅವರ ಬಳಿಕ ಬಂದ ಅನೇಕ ಬ್ರಾಹ್ಮಣ ಲೇಖಕರ ಸೋಲು ಇದನ್ನೇ ಸೂಚಿಸುತ್ತದೆ. ಅವರೆಲ್ಲ ತಮ್ಮ ಜಾತಿ,ಧರ್ಮಗಳನ್ನು ಒಪ್ಪಿ ಬರೆಯತೊಡಗಿದರು. ಆ ಕಾಲದ ಮುಸ್ಲಿಂ ಲೇಖಕರು ಹೆಚ್ಚು ಕಡಿಮೆ ಈ ಮಾದರಿಯನ್ನು ಅನುಸರಿಸಿದವರೇ. ಬಾನು ಮುಷ್ಕಾಕ್, ಸಾರಾ ಅಬೂಬಕರ್, ಫಕೀರ್ ಮಹಮ್ಮದ್ ಕಟ್ಪಾಡಿ,ಬೊಳುವಾರು ಮಹಮ್ಮದ್ ಕುಂಞಿ ಇತ್ಯಾದಿ. ಬರವಣಿಗೆಯ ಅಚ್ಚುಕಟ್ಟುತನದ ಬಗ್ಗೆ ಗಮನ ಕೊಡದಿದ್ದರೂ, ಸಾರಾ ಅವರ 'ಚಂದ್ರಗಿರಿಯ ತೀರದಲ್ಲಿ' ಈ ಹಿನ್ನಲೆಯಲ್ಲಿ ಬಂದ ಅತ್ಯಂತ ಪ್ರಭಾವಶಾಲಿ ಕೃತಿ. ಬಾನು ಮುಷ್ತಾಕ್ ಬರೆದ 'ಹಸೀನಾ' ದಲ್ಲಿ ಕೂಡ ಬೇರೆ ಜಾತಿ,ವರ್ಗಗಳಿಂದ ಬಂದ ಪಾತ್ರಗಳೇ ಇಲ್ಲ ಎಂಬುದನ್ನು ಗಮನಿಸಿ. ಸಹಜವಾಗಿ ಈ ಎಲ್ಲಾ ಲೇಖಕರೂ ಬುರ್ಖಾ,ಹಿಜಾಬ್ ಗಳಂತಹ ರೂಢಿಗತ ಪದ್ಧತಿಗಳ ಬಗ್ಗೆ ಪ್ರತಿರೋಧ ಒಡ್ಡಿದವರೇ. ಇವತ್ತು ಬಾನು ಮುಸ್ತಾಕ್ ಮಾತುಗಳಲ್ಲಿ ಸೂಕ್ಷ್ಮವಾಗಿ ಕಾಣಿಸಿಕೊಂಡಿರುವುದು ಅದೇ ನಿಲುವು. ಇದೇ ಸಂದರ್ಭದಲ್ಲಿ ಬರೆಯತೊಡಗಿದ ದಲಿತ ಲೇಖಕರ ನಿಲುವುಗಳು ಭಿನ್ನವಾಗಿದ್ದವು.ದಲಿತರು ಆ ಕಾಲದಲ್ಲಿ ಮತ್ತು ಇಂದಿಗೂ ನೇರವಾಗಿ ಒತ್ತಡಕ್ಕೆ ಒಳಗಾಗುದುದು ಫ್ಯೂಡಲ್ ವರ್ಗದ ಮಂದಿಯಿಂದ. ದೇವನೂರು ಕಥೆಗಳಲ್ಲಿ 'ಕ್ರಿಟಿಕಲ್ ಇನ್ಸೈಡರ್' ತತ್ವಕ್ಕಿಂತ ಗೌಡಿಕೆ ತೋರುವ ಫ್ಯೂಡಲ್ ವರ್ಗದ ಬಗ್ಗೆ ತಣ್ಣನೆಯ ಪ್ರತಿರೋಧ ವ್ಯಕ್ತವಾಗಿರುವುದನ್ನು ಗಮನಿಸಬೇಕು. ಸಿದ್ದಲಿಂಗಯ್ಯನವರ ಆರಂಭದ ಕವನಗಳಲ್ಲಿ ಇದು ಗಟ್ಟಿ ದನಿಯ ಆಕ್ರೋಶದ ರೂಪದಲ್ಲಿ ಕಾಣಿಸಿಕೊಂಡಿತು.ಜೊತೆಗೆ ಸನಾತನಿಗಳ ಬಗ್ಗೆಯೂ ದೇವನೂರರ ಕಥೆಗಳಲ್ಲಿ ಪ್ರತಿರೋಧ ಇತ್ತು. ಸಮಾಜದ ಒಳಗೆ ತಾರತಮ್ಯ ಕಣ್ಣಿಗೆ ಹೊಡೆದು ಕಾಣುವಂತೆ ಕಾಣಿಸುತ್ತಿರುವಾಗ 'ಕ್ರಿಟಿಕಲ್ ಇನ್ಸೈಡರ್' ಆಗಿ ಉಳಿಯುವುದು ಅವರಿಗೆ ಸಾಧ್ಯವಿರಲಿಲ್ಲ.ಇದೇ ಬಹಳ ಮುಖ್ಯವಾದ ಮಾರ್ಗ ಎಂದು ನನಗೆ ಅನ್ನಿಸಿದೆ. ಇದರ ಜೊತೆಗೆ ಫ್ಯಾಸಿಸ್ಟರ ಬಗೆಗಿನ ಪ್ರತಿರೋಧ ಕೂಡ ಇಂದು ಸೇರಿಕೊಳ್ಳಬೇಕಾಗಿದೆ. ಇದು ಇಂದಿನ ಲೇಖಕರ ಮುಂದಿರುವ ದೊಡ್ಡ ಸವಾಲು. ಯೋಚನೆಯ ಅಸ್ಪಷ್ಟತೆಯೇ ಇವತ್ತಿನ ಮುಸ್ಲಿಂ ಲೇಖಕರ ಗೊಂದಲಮಯ ನಿಲುವಿಗೆ ಕಾರಣ.ವಿಷಕಾರಿಯಾಗಿ 'ಬ್ರಾಹ್ಮಣ್ಯ'ದ ಬಗ್ಗೆ ಅವರು ಯೋಚಿಸಲೇ ಇಲ್ಲ.ಸಾಂಸ್ಕೃತಿಕ ವಲಯದಲ್ಲಿಯೂ 'ಅಡಿಗರಂತವರು ಹೇಗೆ ಹಿಂದುತ್ವ ವಾದವನ್ನು ಎತ್ತಿಹಿಡಿದರು' ಎಂಬ ಚರ್ಚೆ ಬಿರುಸಾಗಿ ನಡೆಯುತ್ತಿದ್ದಾಗ ಅವರು ಭಾಗವಹಿಸಲೇ ಇಲ್ಲ. ಲಂಕೇಶ್ ಮತ್ತು ತೇಜಸ್ವಿ ಈ ಬಗ್ಗೆ ಮಾತನಾಡುತ್ತಿದ್ದಾಗ ಮೌನವಾಗಿ ಕುಳಿತರು.ಈಗಲೂ ಮೌನವಾಗಿಯೇ ಇದ್ದಾರೆ.ಅನಂತಮೂರ್ತಿಯಂತವರ ಶಿಫಾರಸ್ಸಿನ ಮೂಲಕ ಯಾವುದೋ ಅಕಾಡೆಮಿ ಪ್ರಶಸ್ತಿಯೋ ಇನ್ನೊಂದೋ ಸಿಕ್ಕಿದರೆ ಸಾಕು ಎಂಬ ಇರಾದೆ ಅವರದಾಗಿದ್ದಂತೆ ತೋರುತ್ತದೆ .ಆದುದರಿಂದಲೇ ಈಗ ಕಣ್ಣ ಮುಂದೆ ಬಂದಿರುವ ಫ್ಯಾಸಿಸಂ ಬಗ್ಗೆ ಮಾತನಾಡಲು ಅವರಲ್ಲಿ ಯಾವ ಶಕ್ತಿಯೂ ಉಳಿದಿಲ್ಲ.ತಮ್ಮದೇ ಧರ್ಮದ ಮಂದಿಯನ್ನು ದೇಶದಾದ್ಯಂತ ಫ್ಯಾಸಿಸ್ಟ್ ಶಕ್ತಿಗಳು ಬರ್ಬರವಾಗಿ ನಡೆಸಿಕೊಳ್ಳುತ್ತಿರುವಾಗಲೂ ಅವರು ಚಕಾರವೆತ್ತುತ್ತಿಲ್ಲ. ಎಲ್ಲರ ಜೊತೆಗೆ ಚೆನ್ನಾಗಿರೋಣ ಎನ್ನುತ್ತಿದ್ದಾರೆ. 'ಇನ್ಕ್ಲೂಸಿವ್ ತತ್ವ'ದ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯದ ಮಟ್ಟಿಗೆ 'ಇನ್ಕ್ಲೂಸಿವ್' ಆಗಿರುವುದು ಅಂದರೆ ತಮ್ಮ ಲಾಭಕ್ಕಾಗಿ ಸಣ್ಣಪುಟ್ಟ ಹೊಂದಾಣಿಕೆ ಮಾಡಿಕೊಂಡು ತಗ್ಗಿ ಬಗ್ಗಿ ನಡೆಯುವುದು ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ. ಹತ್ತು ವರ್ಷದ ಹಿಂದೆ ನಡೆದ 'ದೇಶಕಾಲ' ಪತ್ರಿಕೆಯ ಬಗ್ಗೆ ನಡೆದ ಚರ್ಚೆಯ ಸಂದರ್ಭವನ್ನೇ ನೋಡಿ. ಒಬ್ಬ ಮುಸ್ಲಿಂ ಲೇಖಕ ಕೂಡ 'ದೇಶಕಾಲ'ದ ಬಗ್ಗೆ ಧ್ವನಿಯೆತ್ತಲಿಲ್ಲ.'ದೇಶಕಾಲ' ದಲಿತರನ್ನೂ ಮುಸ್ಲಿಮರನ್ನೂ ಕಡೆಗಣಿಸಿರುವ ಪತ್ರಿಕೆ ಎಂಬ ಟೀಕೆಗಳು ಬಂದಾಗ, ರಹಮತ್ ತರೀಕೆರೆ ಅವಸರವಸರದಲ್ಲಿ ಬಂದು, 'ನಾವು ಹುದುಳದಲ್ಲಿ ಸಿಕ್ಕಿಹಾಕಿಕೊಳ್ಳಬಾರದು' ಎಂಬ ಮಾತನ್ನೆಸೆದು ಮರೆಯಾಗಿಬಿಟ್ಟರು.ಅವತ್ತು ಯಾವ ಹುದುಳದ ಬಗ್ಗೆ ಅವರು ಮಾತನಾಡಿದ್ದರು? 'ಬ್ರಾಹ್ಮಣ್ಯ'ದ ವಿರುದ್ಧ ಮಾತನಾಡುವುದು ಹೇಗೆ ಹುದುಳದಲ್ಲಿ ಸಿಕ್ಕಿಹಾಕಿಕೊಂಡ ಹಾಗಾಗುತ್ತದೆ? ಮುಂದೆ ಅದೇ ಪತ್ರಿಕೆಯಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸಿಕೊಳ್ಳುತ್ತಾ ಹುದುಳದಲ್ಲಿ ಸಿಕ್ಕಿಬಿದ್ದವರು ಯಾರು? ಅಲ್ಲಿ ಇಲ್ಲಿ ಕೋಮು ಬೆಳವಣಿಗೆ ಬಗ್ಗೆ ಖಂಡಿಸಿದ್ದರೂ ಪ್ರಖರವಾಗಿ ಮಾತನಾಡಲು ಅವರಿಗೆ ಸಾಧ್ಯವಾಗಿರುವುದಕ್ಕೆ ಕಾರಣ ಇದು. ಯಾರಿಗೂ ನೋವುಂಟು ಮಾಡಬಾರದು ಎಂಬ 'ಸೌಹಾರ್ದ ತತ್ವ'.ಇಂತಹ ವಾತಾವರಣದಲ್ಲಿ ಹಿಜಾಬಿಗೆ ಸಂಬಂಧಪಟ್ಟಂತೆ ಈಚೆಗೆ ಗಟ್ಟಿಯಾಗಿ ಮಾತನಾಡಲು ತೊಡಗಿರುವವರು ಪೀರ್ ಬಾಷಾ,ಫೈಝ್ ಮುಂತಾದ ಹೊಸ ಲೇಖಕರು. ಈ ಹಿನ್ನೆಲೆಯಲ್ಲಿ ಮತ್ತೆ ಮುಸ್ಲಿಂ ಹುಡುಗಿ ಆಡಿರುವ ಮಾತನ್ನು ನೋಡಿ. ಆಕೆ ಹಳೆ ಕಾಲದ ಮುಸ್ಲಿಂ ಲೇಖಕರಂತೆ ತಾನು ಕೇವಲ 'ಕ್ರಿಟಿಕಲ್ ಇನ್ಸೈಡರ್' ಆಗಿರಲು ಒಪ್ಪುತ್ತಿಲ್ಲ.ಆಕೆಗೆ ತಾನು ಎದುರಿಸುತ್ತಿರುವ ದುಷ್ಟಶಕ್ತಿಗಳ ಬಗ್ಗೆ ಸಂಪೂರ್ಣ ಅರಿವಿದೆ. ಅದರ ಬಗ್ಗೆ ಹೆದರಿಕೆಯೂ ಇಲ್ಲ.ಅದರಿಂದ ತನ್ನ ಶೈಕ್ಷಣಿಕ ಪ್ರಗತಿಗೆ ತೊಂದರೆ ಬರಬಹುದು ಎಂಬ ಅರಿವೂ ಆಕೆಗಿದೆ. ಆದುದರಿಂದಲೇ ಆಕೆಗೆ ಹಿರಿಯ ಮುಸ್ಲಿಂ ಲೇಖಕ,ಲೇಖಕಿಯರ ಮಾತುಗಳು ಮುಖ್ಯ ಅನಿಸುತ್ತಿಲ್ಲ.'ನಿರಂಕುಶಮತಿಗಳಾಗಿ' ಎಂಬ ಕುವೆಂಪು ಮಾತುಗಳಾದರೂ ಆಕೆಗೆ ಅರ್ಥವಾದೀತು. 'ಬುರ್ಖಾ ಹಿಜಾಬ್ ಮನೆಯೊಳಗಿಟ್ಟು ಬನ್ನಿ 'ಎನ್ನುವ ಮುಸ್ಲಿಂ ಲೇಖಕರ ಮಾತುಗಳಲ್ಲ. ಮುಸ್ಲಿಂ ಹುಡುಗಿಯರು ಇಂದು ತೋರುತ್ತಿರುವುದು ಪ್ರಾಮಾಣಿಕ ಪ್ರತಿರೋಧ.ಅವರಿಗೆ ಕಳೆದುಕೊಳ್ಳುವುದು ಏನೂ ಉಳಿದಿಲ್ಲ. ಅವರ ಮುಂದೆ ಯಾವ ಪ್ರಶಸ್ತಿ ಸನ್ಮಾನ ಸ್ಥಾನಮಾನ ಗೌರವಗಳ ಆಮಿಷಗಳೂ ಇಲ್ಲ.ಬಾನು ಮುಷ್ತಾಕ್ ಸೌಹಾರ್ದದ ಮಾತುಗಳನ್ನು ಮಾಡುತ್ತಿರುವಾಗಲೇ 'ಕೇಸರಿ ವಿದ್ಯಾರ್ಥಿ'ಗಳನ್ನು ಬುರ್ಖಾ ಧರಿಸಿಯೇ ಒಂಟಿಯಾಗಿ ಎದುರಿಸಿದ ಮಂಡ್ಯದ ಮುಸ್ಕಾನ್ ಮತ್ತು ಪ್ರಾಂಶುಪಾಲರ ಅಮಾನವೀಯ ವರ್ತನೆ ಪ್ರತಿಭಟಿಸಿ ಗೇಟಿನ ಮುಂದೆ ಕುಳಿತ ಕುಂದಾಪುರದ ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿರೋಧದ ದೊಡ್ಡ ಸಂಕೇತ. ಸೌಹಾರ್ದ ಬೇಡುವಂಥದ್ದು ಆಗಿರಬಾರದು. ಸೌಹಾರ್ದ ರಾಜಿ ಕಬೂಲಿ ಆಗಿರಬಾರದು. ಸ್ವಾಭಿಮಾನದಿಂದ ಗಳಿಸಿಕೊಳ್ಳುವಂಥದ್ದಾಗಿರಬೇಕು. ಇದನ್ನು ದಿಟ್ಟತನದಿಂದ ತೋರಿಸಿಕೊಟ್ಟವರು ಇವರು. ಮಾತುಗಳನ್ನು ಕಲಿಸಿಕೊಡಲು ಆಗುವುದಿಲ್ಲ. ಕೇಸರಿ ಧರಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಯಾರೋ ಕಲಿಸಿಕೊಟ್ಟ 'ತಮಗೆ ಸಮಾನತೆ ಬೇಕು'ಎಂದೆಲ್ಲ ಹೇಳುತ್ತಿದ್ದರಲ್ಲ.ತಮ್ಮ ಮನೆಗೆ ಮರಳಿದ ಮೇಲೆ ಸುತ್ತಮುತ್ತಲಿನ ಸಮಾಜ ತನ್ನನ್ನು ಯಾವ 'ಸಮಾನತೆ'ಯಿಂದ ನೋಡಿಕೊಳ್ಳುತ್ತಿದೆ ಎಂಬುದು ಅರಿವಾದ ದಿನ ಅವರು ಸಹಪಾಠಿಗಳಾದ ಮುಸ್ಲಿಂ ವಿದ್ಯಾರ್ಥಿನಿಯರ ಜೊತೆಗೆ ತಾವೂ ನಿಲ್ಲಬೇಕಾದ ಮಹತ್ವವನ್ನು ಅರ್ಥಮಾಡಿಕೊಳ್ಳಬಲ್ಲರು. ಕೊನೆಯದಾಗಿ ಒಂದು ಮಾತು. ಎಂಬತ್ತರ ದಶಕದ ನನ್ನ ರಂಗಭೂಮಿ ಸ್ನೇಹಿತರೊಬ್ಬರು 'ಕೇಸರಿ ಶಾಲು ಎಂಬುದು ಕೇಡು. ಬುರ್ಖಾ ಕೂಡ ಒಂದು ಕೇಡು'ಎಂದು ನಿನ್ನೆಯ ತಮ್ಮ ವಿಡಿಯೋ ಒಂದರಲ್ಲಿ ಒತ್ತಿ ಹೇಳುತ್ತಿರುವುದನ್ನು ನೋಡಿದೆ. ನಾನು ಹೇಳುವುದು ಇಷ್ಟೇ.ಇದು ಈಗ ಆಡುವ ಮಾತಲ್ಲ. ಇವತ್ತು ಹಿಜಾಬ್ ಒಂದು ಸಮಸ್ಯೆ ಅಲ್ಲ. ಸದ್ಯ ಫ್ಯಾಸಿಸಂ ಮಾತ್ರ ನಮ್ಮ ಮುಂದಿರುವ ಕೇಡು. ಮಾತ್ರವಲ್ಲ ಬಹುದೊಡ್ಡ ಕೇಡು.ಇದನ್ನು ಮತ್ತೆ ಮತ್ತೆ ಹೇಳಲು ಇಚ್ಚಿಸುತ್ತೇನೆ. ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ:

Advertisement
Advertisement
Recent Posts
Advertisement