Advertisement

RSS ತನ್ನ ಅಸ್ತಿತ್ವ ಹಾಗೂ ಸ್ವಾರ್ಥಕ್ಕಾಗಿ ಕಾಲಕ್ಕೆ ತಕ್ಕಂತೆ ಜನರ ಭಾವನೆಗಳನ್ನು ಮಾರುಕಟ್ಟೆ ಮಾಡುವ ಮಧ್ಯವರ್ತಿ ಸಂಸ್ಥೆ: ಪ್ರಿಯಾಂಕ್ ಖರ್ಗೆ

Advertisement

'ದೇಶ ಪ್ರೇಮವನ್ನು ಮಾರುಕಟ್ಟೆಯ ಸರಕನ್ನಾಗಿಸಿ ತನ್ನ ಸ್ವಾರ್ಥದ ಬೆಳೆ ಬೇಯಿಸಿಕೊಳ್ಳಲು ಸಂಘ ಪರಿವಾರ ಸದಾ ಕಾಲ ಹವಣಿಸುತ್ತಿರುತ್ತದೆ. ಸ್ವಾತಂತ್ರ್ಯಾ ಪೂರ್ವದಲ್ಲಿ ಬ್ರಿಟೀಷ್ ಆಡಳಿತದಲ್ಲಿ ಆಧಿಕಾರಿಗಳಾಗಿದ್ದ ಬಹಳಷ್ಟು ಮಂದಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಜನಸಂಘ ಅಥವಾ ಅದರ ಅಂಗಸಂಸ್ಥೆಗಳ ಯಾರೂ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಲಿಲ್ಲ. ಬೀಡಾಡಿಯಾಗಿ ಬ್ರಿಟೀಷರ ಜೊತೆಗಿದ್ದವರಿಗೆ ಸ್ವಾತಂತ್ರ್ಯ ನಂತರ ಅಸ್ತಿತ್ವದ ಭಯ ಕಾಡಿತ್ತು. ಅದಕ್ಕಾಗಿ ಹಿಂದು ಮಹಾಸಭಾ ಧರ್ಮ ರಕ್ಷಣೆಯ ಹೆಸರಿನಲ್ಲಿ ಸಮಾಜದಲ್ಲಿ ಸಂಘರ್ಷ ಉಂಟು ಮಾಡಿ ತನ್ನ ಸಂಘಟನೆ ಬಲ ಪಡಿಸಿಕೊಳ್ಳಲು ಯತ್ನಿಸಿತ್ತು. ಆದರೆ ಅದಕ್ಕೆ ಬಾಬಾಸಾಹೇಬ್ ಡಾ ಬಿ.ಆರ್ ಅಂಬೇಡ್ಕರ್, ಮಹಾತ್ಮಾ ಗಾಂಧಿಯವರಂತಹ ಮಹಾತ್ಮರು ಅವಕಾಶ ನೀಡಲಿಲ್ಲ. ಸಂಘ ಪರಿವಾರದ ಕೋಮು ಚಟುವಟಿಕೆಗಳನ್ನು ನೋಡಿ ಅದನ್ನು ನಿಷೇಧ ಮಾಡಲು ಸರ್ದಾರ್ ವಲ್ಲಭಭಾಯಿ ಪಟೇಲ್ ಮುಂದಾಗಿದ್ದರು. ಅಂದು ಸಂಘ ಪರಿವಾರಕ್ಕೆ ಜೀವದಾನ ಮಾಡಿದ್ದೆ ಜವಾಹರ ಲಾಲ್ ನೆಹರು ಅವರು. ದುರಂತವೆಂದರೆ ಅದೇ ನೆಹರು ಅವರನ್ನು ಸಂಘ ಪರಿವಾರ ಕೆಟ್ಟದಾಗಿ ಚಿತ್ರಿಸಲು ಯತ್ನಿಸುತ್ತಿದೆ' ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಹಾಗೂ ಕೆಪಿಸಿಸಿ ಐಟಿ ಸೆಲ್ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

'ಗಾಂಧೀಜಿ ಹತ್ಯೆ ಮಾಡಿ ಅದಕ್ಕೆ ಧರ್ಮ ರಕ್ಷಣೆಯ ಲೇಪ ಹಚ್ಚಲು ಹೋದ ಸಂಘ ಪರಿವಾರವನ್ನು ಜನ ತಿರಸ್ಕರಿಸಿದ್ದರು. ಧರ್ಮದ ಹೆಸರಿನಲ್ಲಿ ಪರಿವಾರ ನಡೆಸಿದ ಢೋಂಗಿತನಗಳೆಲ್ಲವೂ ಗಾಂಧೀಜಿ ಹತ್ಯೆಯ ಮೂಲಕ ಜನರ ಮುಂದೆ ಬೆತ್ತಲಾದವು. ಬಹಳಷ್ಟು ವರ್ಷಗಳ ಕಾಲ ಹಿಂದು ಮಹಾಸಭಾ ಮತ್ತು ಸಂಘ ಪರಿವಾರಕ್ಕೆ ತಲೆ ಎತ್ತಿ ನಡೆಯಲು ಅರ್ಹತೆಯೇ ಇಲ್ಲ ಎಂಬ ಪರಿಸ್ಥಿತಿ ಇತ್ತು. ಗಾಂಧೀಜಿ ಕೊಂದ ಕಳಂಕದಿಂದ ಹೊರ ಬರಲು ಸಾಧ್ಯವಾಗಲಿಲ್ಲ. ರಾಮನ ಹೆಸರಿನಲ್ಲಿ ನಡೆದ ರಥಯಾತ್ರೆಯೂ ಪರಿಣಾಮ ಬೀರಲಿಲ್ಲ.
ಆಗ ನಿಲುವು ಬದಲಿಸಿದ ಸಂಘ ಪರಿವಾರ ಇದ್ದಕ್ಕಿದ್ದಂತೆ ದೇಶ ಪ್ರೇಮದ ಮಂತ್ರ ಪಠಿಸಲಾರಂಭಿಸಿತ್ತು. 'ಸದಾ ವಸ್ತಲೇ' ಎನ್ನುತ್ತಿದ್ದವರು ಭಾರತ್ ಮಾತಾ ಕೀ ಜೈ ಎನ್ನಲಾರಂಭಿಸಿದರು. 52 ವರ್ಷ ಕಾಲ ಸಂಘ ಪರಿವಾರ ಕೇಂದ್ರ ಕಚೇರಿಯ ಮೇಲೆ ರಾಷ್ಟ್ರ ಧ್ವಜ ಹಾರಿಸದೆ ತ್ರಿವರ್ಣ ಧ್ವಜದಲ್ಲಿರುವ ಮೂರು ಬಣ್ಣಗಳು ಅಪಶಕುನ, ದೇಶಕ್ಕೆ ಕೆಟ್ಟದಾಗುತ್ತದೆ ಎಂದು ಅಪಪ್ರಚಾರ ಮಾಡಿದವರು ಕೊನೆಗೆ ಅದೇ ಧ್ವಜದ ಕೆಳಗೆ ನಿಂತು ಸಲ್ಯೂಟ್ ಹೊಡೆಯುವ ಮೂಲಕ ತಮ್ಮನ್ನು ತಾವು ದೇಶ ಭಕ್ತರೆಂದು ಕರೆದುಕೊಳ್ಳಲಾರಂಭಿಸಿದರು' ಎಂದವರು ಹೇಳಿದರು.

'ಧರ್ಮ ಲೇಪಿತ ರಾಜಕಾರಣದಿಂದ ಮಾತ್ರವೇ ಉಳಿಗಾಲ ಸಾಧ್ಯವಿಲ್ಲ ಎಂದು ಅರಿವಾದಾಗ ಸಂಘ ಪರಿವಾರಕ್ಕೆ ಕಾಣಸಿಕ್ಕಿದ್ದೆ ದೇಶಪ್ರೇಮದ ಮುಖವಾಡ. ಆದರೆ ಇವರ ದೇಶಭಕ್ತಿ ಸಂಪೂರ್ಣ ಡೋಂಗಿತನದ್ದು, ಅದರಲ್ಲಿ ಪ್ರಾಮಾಣಿಕತೆಯೇ ಇಲ್ಲ. ಕೇವಲ ಬಿಜೆಪಿಗೆ ಬೆಂಬಲ ನೀಡಲು, ಬಿಜೆಪಿ ನಾಯಕತ್ವವನ್ನು ಬೆಂಬಲಿಸಲು, ಬಿಜೆಪಿಗೆ ಚುನಾವಣೆಯಲ್ಲಿ ಸಹಕಾರ ಮಾಡಲು, ಅಧಿಕಾರ ಹಿಡಿಯಲು ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಬಿಜೆಪಿಗೆ ರಾಜಕೀಯಕ್ಕೆ ಅಡಮಾನ ಮಾಡಲಾಗುತ್ತಿದೆ. ಯಾಕೆ ಬೇರೆ ಪಕ್ಷಗಳಲ್ಲಿ ಹಿಂದುಗಳಿಲ್ಲವೇ?' ಎಂದವರು ಪ್ರಶ್ನಿಸಿದ್ದಾರೆ.

'ಆದರೆ ಕೇವಲ ಬಿಜೆಪಿಗೆ ಮಾತ್ರ ಬೆಂಬಲ ನೀಡಿ, ಆ ಪಕ್ಷ ಅಧಿಕಾರಕ್ಕೆ ಬಂದಾಗ ತನ್ನ ಮನುವಾದಿ ಸಿದ್ಧಾಂತ ಹಿಡನ್ ಅಜೆಂಡಾವನ್ನು ಕಳ್ಳದಾರಿಯಲ್ಲಿ ಜಾರಿಗೆ ತರುವ ಹುನ್ನಾರ ನಡೆಸುತ್ತದೆ. ಮೊದಲು ಅಲ್ಪಸಂಖ್ಯಾತರನ್ನು ಗುರಿ ಮಾಡುವುದು, ನಂತರ ದಲಿತರ ಮೇಲೆ ಸಾಂಸ್ಕೃತಿಕ ಹಾಗೂ ಮಾನಸಿಕ ದಾಳಿ ಮಾಡುವುದು, ನಂತರ ಹಿಂದುಳಿದ ವರ್ಗಗಳನ್ನು ಮೂಲೆಗುಂಪು ಮಾಡುವುದು ಸಂಘ ಪರಿವಾರದ ಹಿಡನ್ ಅಜೆಂಡಾ ಎಂಬುದರಲ್ಲಿ ಎರಡು ಮಾತಿಲ್ಲ. ಇಂದು ರಾಜಕೀಯ ಮಾತ್ರವಲ್ಲ ಎಲ್ಲ ಕಡೆ ಕೊರೊನಾ ಮಾದರಿಯಲ್ಲಿ ಸಂಘ ಪರಿವಾರದ ಸೋಂಕನ್ನು ಹರಡಿಸಲಾಗಿದೆ. ಸಂಘ ಪರಿವಾದ ಮತ್ತು ಅದರ ಡೋಂಗಿತನದ ವಿರುದ್ಧ ಧ್ವನಿ ಎತ್ತಿದವರನ್ನು ಅಪಹಾಸ್ಯ ಮಾಡುವುದು, ವೈಯಕ್ತಿಕ ದಾಳಿ ನಡೆಸುವ ಅಸಹ್ಯ ಪರಂಪರೆ ಬೆಳೆಸಲಾಗಿದೆ' ಎಂದವರು ವಿವರಿಸಿದ್ದಾರೆ.

'ಬಿಜೆಪಿ ನಾಯಕರು ಹೇಳುವಂತೆ ಸಂಘ ಪರಿವಾರ ನಿಜವಾದ ದೇಶ ಪ್ರೇಮಿ ಸಂಘಟನೆ ಅಲ್ಲ. ಅದು ತನ್ನ ಅಸ್ತಿತ್ವ ಹಾಗೂ ಸ್ವಾರ್ಥಕ್ಕಾಗಿ ಕಾಲಕ್ಕೆ ತಕ್ಕಂತೆ ಜನರ ಭಾವನೆಗಳನ್ನು ಮಾರುಕಟ್ಟೆ ಮಾಡುವ ಮಧ್ಯವರ್ತಿ ಸಂಸ್ಥೆ ಅಷ್ಟೆ. ಅದನ್ನು ಪರಿವಾರ ಎಂದು ಕರೆಯುವ ಬದಲು ಮಾರುಕಟ್ಟೆ ಪ್ರೈವೇಟ್ ಲಿಮಿಟೆಡ್ ಎಂದು ಕರೆಯವುದು ಸೂಕ್ತ. ಬಿಜೆಪಿ ಪ್ರತಿಯೊಂದಕ್ಕೆ ಸಂಘ ಪರಿವಾರದ ನೆರಳಿನಲ್ಲಿ ಅಡಗಿ ಕುಳಿತು ಕೊಳ್ಳುವ ಬದಲು ನೇರವಾಗಿ ರಾಜಕಾರಣ ಮಾಡಿ ಪ್ರಜಾಪ್ರಭುತ್ವವನ್ನು ಅನುಸರಣೆ ಮಾಡಲಿ. ಶಿವಮೊಗ್ಗದಲ್ಲಿ ಕಾಲೇಜಿನ ಧ್ವಜಕಂಬದ ಮೇಲೆ ಕೇಸರಿ ಧ್ವಜ ಹಾರಿಸಿದಷ್ಟು ಸುಲಭ ಅಲ್ಲ ಕೆಂಪುಕೋಟೆಯ ಮೇಲೆ ಧ್ವಜ ಹಾರಿಸುವುದು' ಎಂದವರು ಬಿಜೆಪಿ ಸಂಘಪರಿವಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

'ನಿಮ್ಮ ಬೂಟಾಟಿಕೆಯ ಮಾತುಗಳನ್ನು ನಂಬಿ ನಿಮಗಾಗಿ ದುಡಿದವರು, ಕಷ್ಟ ಪಟ್ಟವರು ನೀವು ಆಡಳಿತ ನಡೆಸುವ ರೀತಿ, ದೇಶವನ್ನು ಕೊಳ್ಳೆ ಹೊಡೆದು ಶ್ರೀಮಂತರಿಗೆ ಮಾರಿ, ಬಡವರ ಬದುಕನ್ನು ಮೂರಾಬಟ್ಟೆ ಮಾಡಿದ್ದು ನೋಡಿ ದಂಗಾಗಿ ಹೋಗಿದ್ದಾರೆ. ಇಂತಹವರಿಗೇನಾ ನಾವು ಹಗಲು ರಾತ್ರಿ ದುಡಿದಿದ್ದು ಎಂದು ಹತಾಶರಾಗಿದ್ದಾರೆ. ಹಣದುಬ್ಬರ, ಆರ್ಥಿಕ ಹಿಂಜರಿತ ಸ್ವಂತ ಜೀವನ ನಿರ್ವಹಣೆಗೆ ಕಷ್ಟ ಪಡುವಂತಾಗಿ ಬಿಜೆಪಿಯನ್ನು ದೂಷಿಸುತ್ತಿದ್ದಾರೆ. ಪೆಟ್ರೋಲ್, ಡಿಸೇಲ್ ಹಾಕಿಸುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ವಾಹನ ಮಾಲೀಕರು ಹೆಜ್ಜೆ ಹೆಜ್ಜೆಗೂ ದುಬಾರಿ ತೆರಿಗೆ, ಟೋಲ್, ವಿಮೆ ಪಾವತಿಸಿ ಹೈರಾಣಾಗಿ ಹೋಗಿದ್ದಾರೆ' ಎಂದವರು ಖೇದ ವ್ಯಕ್ತಪಡಿಸಿದರು.

'ನಿಮ್ಮ ಮಾರುಕಟ್ಟೆ ಅಡ್ಡೆಗಳು ಸಾಮಾಜಿಕ ಜಾಲತಾಣಗಳಲ್ಲಿ ಊಳಿಟ್ಟು ಸತ್ಯ ಮರೆ ಮಾಚಿ ಎಲ್ಲವೂ ಸರಿಯಿದೆ. ದೇಶ ಸಮೃದ್ಧಿ ಯಾಗಿದೆ ಎಂದು ಬಿಂಬಿಸಲು ಯತ್ನಿಸುತ್ತಿವೆ. ಹಿಂದೆ ಇಂಡಿಯಾ ಶೈನಿಂಗ್ ಎಂಬ ಘೋಷಣೆ ಮಾಡಿ ಜನರನ್ನು ಮರಳು ಮಾಡಲು ಹೋಗಿ ಸೋಲನ್ನು ಅನುಭವಿಸಿದ ಬಿಜೆಪಿಗೆ ಈ ಬಾರಿಯೂ ಅದೇ ಗತಿ ಕಾದಿದೆ. ಪೇಮೆಂಟ್ ಸಾಮಾಜಿಕ ಜಾಲತಾಣ ಕಾರ್ಯಕರ್ತರಿಂದ ಏನೆಲ್ಲಾ ಅಬ್ಬರ ಮಾಡಿದರೂ, ಕೊನೆಗೆ ಹೊಟ್ಟೆ ಪಾಡಿಗೆ ನಿಮ್ಮ ಪರವಾಗಿ ಊಳಿಟ್ಟವರೆ ವೈಯಕ್ತಿಕ ಕಷ್ಟದಿಂದ ಪಾಠ ಕಲಿತು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ, ಇದು ಅಕ್ಷರಶಃ ಸತ್ಯ' ಎಂದವರು ಎಚ್ಚರಿಕೆ ನೀಡಿದ್ದಾರೆ.

'ಕೇಬಲ್ ಬಿಲ್, ಮೊಬೈಲ್ ರಿಚಾರ್ಜ್, ಪೆಟ್ರೋಲ್, ಡಿಸೇಲ್, ವಿಮೆ, ತಿನ್ನುವ ಅನ್ನಕ್ಕೆ GST, ಕುಡಿಯುವ ನೀರಿಗೆ GST ಹಾಕುತ್ತಿರುವ ಬಿಜೆಪಿ ಸರ್ಕಾರ ಜನರನ್ನು ಹಾಡು ಹಗಲೇ ದರೋಡೆ ಮಾಡುತ್ತಿದೆ. ಪ್ರತಿ ಹಂತದಲ್ಲೂ ಹಣ ಖರ್ಚು ಮಾಡಲಾಗದೆ ಜನ ಸತ್ತು ಬದುಕುತ್ತಿದ್ದಾರೆ. NDA ಸರ್ಕಾರದ ಅವಧಿಯಲ್ಲಿ ಜನರ ತಲಾ ಆದಾಯ ಹೆಚ್ಚಾಗಿಲ್ಲ, ಬದಲಾಗಿ ಜೀವನ ನಿರ್ವಹಣಾ ವೆಚ್ಚು ದುಬಾರಿಯಾಗಿದೆ. ಆದಾಯ ಶೇ.30ರಷ್ಟು ಕಡಿತವಾಗಿದ್ದರೆ, ಜೀವನ ನಿರ್ವಹಣೆ ವೆಚ್ಚ ಶೇ.60ರಷ್ಟು ಹೆಚ್ಚಾಗಿದೆ' ಎಂದವರು ವಿಶ್ಲೇಷಿಸಿದ್ದಾರೆ.

'ಆದಾಯಕ್ಕಿಂತ ಖರ್ಚೆ ಹೆಚ್ಚಾಗಿದೆ. ಈ ನಡುವೆ ಕೊರೊನಾವನ್ನು ದೇಶಕ್ಕೆ ಬಿಟ್ಟುಕೊಂಡು ಆರೋಗ್ಯ ಕ್ಷೇತ್ರದಲ್ಲೂ ಜನರನ್ನು ಮರಣ ಶಯ್ಯೆಗೆ ಕಳುಹಿಸಲಾಗಿದೆ. ಕೊರೊನಾ ಹೆಸರು ಹೇಳಿಯೇ ಜನ ಸಾಮಾನ್ಯರನ್ನು ದೋಚಲಾಗಿದೆ. ಕೊರೊನಾ ನಿರ್ವಹಣೆಯಲ್ಲಿ ವಿಫಲರಾದ ಪ್ರಧಾನಿಗಳ ವಿರುದ್ಧ ಬಹಳಷ್ಟು ದೇಶಗಳಲ್ಲಿ ಆಯಾ ಪ್ರಜೆಗಳು ಪ್ರತಿಭಟನೆ ನಡೆಸಿದ್ದಾರೆ. ನಮ್ಮಲ್ಲೂ ಪ್ರತಿಭಟನೆಗೆ ಜನ ಸೆಟೆದು ಕುಳಿತಿದ್ದಾರೆ. ಸರ್ಕಾರ ಕೊರೊನಾ ಹೆಸರಿನಲ್ಲೇ ಪ್ರತಿಭಟನೆಗಳನ್ನು ನಿಷೇಧಿಸಿ ಸ್ವಯಂ ರಕ್ಷಣೆ ಮಾಡಿಕೊಳ್ಳುತ್ತಿದೆ. ಇಲ್ಲವಾದರೆ ಭಾರತದಲ್ಲಿ ಪ್ರತಿಭಟನೆಯ ಕಿಚ್ಚು ಇಷ್ಟೊತ್ತಿಗೆ ಕೇಂದ್ರ ಸರ್ಕಾರವನ್ನು ಸುಡುತ್ತಿತ್ತು. ಕಾನೂನಿನ ನೆರಳಿನಲ್ಲಿ ಜನರ ಹಕ್ಕುಗಳನ್ನು ಹತ್ತಿಕ್ಕಿ ತನ್ನ ತಲೆ ಉಳಿಸಿಕೊಳ್ಳುತ್ತಿರುವುದಕ್ಕೆ ಸರ್ಕಾರಕ್ಕೆ ನಾಚಿಕೆಯಾಗಬೇಕು' ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Advertisement
Recent Posts
Advertisement