Advertisement

ಅಲುಗಾಡುತ್ತಿದೆ ಬಹುತ್ವ ಭಾರತದ ಅಡಿಪಾಯ| ಪ್ರತಿಪಕ್ಷಗಳ ಸೋಲಿಗೆ ಬರೀ ಇವಿಎಂ ಬೈದರೆ, ಮಾಯಾವತಿ ಹಾಗೂ ಓವೈಸಿಯನ್ನು ದೂರಿದರೆ ಸಾಕೇ?

Advertisement
ಬರಹ: ಸನತ್ ಕುಮಾರ ಬೆಳಗಲಿ (ಲೇಖಕರು ಹಿರಿಯ ಪತ್ರಕರ್ತರು, ಅಂಕಣಕಾರರು ಹಾಗೂ ಜನಪರ ಚಿಂತಕರು)

ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಪ್ರತಿಪಕ್ಷಗಳ ಸೋಲನ್ನು ಬರೀ ಚುನಾವಣೆಯ ಸೋಲು ಗೆಲುವು ಮಾತ್ರವಲ್ಲ, ಇದು ಮತನಿರಪೇಕ್ಷ ಭಾರತ 'ಮನುವಾದಿ ಹಿಂದುರಾಷ್ಟ್ರ' ಆಗಿಸುವತ್ತ ಮತ್ತೊಂದು ಹೆಜ್ಜೆ. ಸಂಸದೀಯ ಪ್ರಜಾಪ್ರಭುತ್ವದ ಜನಾದೇಶದ ಮೂಲಕವೇ ನಿಧಾನವಾಗಿ ಸಂವಿಧಾನಕ್ಕೆ ಚಟ್ಟ ಕಟ್ಟುವ ಮಸಲತ್ತು.

ಈ ಚುನಾವಣೆಯಲ್ಲಿ ಪ್ರತಿಪಕ್ಷ ಗಳ ಸೋಲಿಗೆ ಬರೀ ಇವಿಎಂ ಬೈದರೆ, ಇಲ್ಲವೇ ಮಾಯಾವತಿ, ಅಸಾದುದ್ದೀನ ಓವೈಸಿ, ಅವರನ್ನು ದೂರಿದರೆ ಉಪಯೋಗವಿಲ್ಲ. ಬರೀ ಚುನಾವಣೆಯ ಮತ ವಿಭಜನೆಯ ಲೆಕ್ಕಾಚಾರಗಳಿಂದ ಈ ಚುನಾವಣೆಯ ಫಲಿತಾಂಶವನ್ನು ವ್ಯಾಖ್ಯಾನಿಸುವುದು ಸಾಧ್ಯವಿಲ್ಲ.

ಚುನಾವಣೆ ಬಂದಾಗ ಕಾರ್ಯಾಚರಣೆಗೆ ಇಳಿಯುವ ಪ್ರತಿಪಕ್ಷಗಳ ಸೋಮಾರಿತನ, ಒಬ್ಬರ ಮುಖ ಇನ್ನೊಬ್ಬರು ನೋಡದ ಸಣ್ಣತನ, ಸಂಘ ಪರಿವಾರವನ್ನು ಪ್ರಬಲವಾದ ಸೈದ್ಧಾಂತಿಕ ಅಸ್ತ್ರದೊಂದಿಗೆ ಎದುರಿಸುವಲ್ಲಿ ಪ್ರತಿಪಕ್ಷ ಗಳ ವೈಫಲ್ಯ, ಎಲ್ಲಕ್ಕಿಂತ ಮುಖ್ಯವಾಗಿ ಒಟ್ಟು ಮತದಾರರ ಸಂಖ್ಯೆಯಲ್ಲಿ ಅರ್ಧದಷ್ಟಿರುವ ಇಪ್ಪತೈದು ವರ್ಷದೊಳಗಿನ ಯುವಕರ ಮೆದುಳಿನ ಸುತ್ತ ಕೋಮುವಾದಿಗಳು ಹೆಣೆದ ಜೇಡರ ಬಲೆಯನ್ನು ಹರಿದು ಬಿಸಾಡುವಲ್ಲಿ ವಿಫಲಗೊಂಡ ಸೆಕ್ಯುಲರ್ ಪಕ್ಷಗಳು ಇವೆಲ್ಲವೂ ಬಿಜೆಪಿ ಗೆಲುವಿಗೆ ಕಾರಣ.

ಕೇವಲ ಮೋದಿ, ಯೋಗಿ ಭಾಷಣಗಳಿಂದ, ಜನಪ್ರಿಯ ಘೋಷಣೆಗಳಿಂದ ಬಿಜೆಪಿಗೆ ಈ ಗೆಲುವು ಸಾಧ್ಯವಾಗಿಲ್ಲ. ಈ ಸೋಲು ಗೆಲುವಿನ ಹಿಂದಿನ ಮೂರು ದಶಕಗಳ ಇತಿಹಾಸದ ಪುಟಗಳನ್ನು ತೆರೆದು ನೋಡಬೇಕಾಗುತ್ತದೆ. ಇತರ ಹಿಂದುಳಿದ ವರ್ಗಗಳಿಗಾಗಿ ವಿ.ಪಿ.ಸಿಂಗ್ ಸರ್ಕಾರ ತಂದ ಮಂಡಲ ಆಯೋಗದ ಮೀಸಲು ವ್ಯವಸ್ಥೆ, ಅದಕ್ಕೆ ಪ್ರತಿಯಾಗಿ ಸಂಘ ಪರಿವಾರ ಬಳಸಿದ ಅಯೋಧ್ಯೆಯ ಮಂದಿರ ಎಂಬ ಕಮಂಡಲ ಅಸ್ತ್ರ, ಹಲವಾರು ದಶಕಗಳ ಕಾಲದ ಸಂಘಟನಾತ್ಮಕ ಕಾರ್ಯತಂತ್ರ,ಹಿಂದುತ್ವದ ಹೆಸರಿನಲ್ಲಿ ಕಟ್ಟಲಾದ ನೆರೆಟಿವ್ ಗಳು ಇವುಗಳು ಫಲಿತಾಂಶ ದಲ್ಲಿ ಮಹತ್ವದ ಪಾತ್ರ ವಹಿಸಿವೆ.

ಒಂದೂವರೆ ವರ್ಷದಷ್ಟು ಸುದೀರ್ಘವಾಗಿ ನಡೆದ ಉತ್ತರ ಭಾರತದ ರೈತ ಹೋರಾಟ ಕೂಡ ಈ ಚುನಾವಣೆಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ. ಬಿಜೆಪಿ ವಿರುದ್ಧ ಕಾಪ್ ಪಂಚಾಯತಗಳ ತೀರ್ಮಾನಗಳೂ ಕೆಲಸಕ್ಕೆ ಬರಲಿಲ್ಲ. ಪಂಜಾಬಿನಲ್ಲೇನೋ ಆಮ್ ಆದ್ಮಿ ಪಕ್ಷ ಬಂತು. ಆದರೆ ಉತ್ತರ ಪ್ರದೇಶ, ಉತ್ತರಖಂಡ, ಮಣಿಪುರ, ಗೋವಾಗಳಲ್ಲಿ ಬಿಜೆಪಿ ಗೆಲುವಿನ ಬಾವುಟ ಹಾರಿಸಿತು. ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಜೀಪು ಹರಿಸಿ ಕೊಂದ ಲಖೀಮ್ ಪುರ ಖೇರಿಯಲ್ಲಿ ಕೂಡ ಎಂಟರಲ್ಲಿ ಏಳು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದು ಕೊಂಡಿದೆ ಎಂಬುದೇ ಇದಕ್ಕೊಂದು ಉದಾಹರಣೆ.

ಬರೀ ಜನ ಚಳವಳಿಗಳಿಂದ ಚುನಾವಣೆಯ ಗೆಲುವು ಸಾಧ್ಯವಿಲ್ಲ ಎಂಬುದು ಈ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ. ಭಾರತದಲ್ಲಿ ರೈತ ,ಕಾರ್ಮಿಕರ ಹೋರಾಟಗಳು ನಡೆಯುತ್ತಲೇ ಇವೆ. ಮೋದಿ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಧಿಕ್ಕಾರದ ಘೋಷಣೆಗಳು ಮೊಳಗುತ್ತಲೇ ಇವೆ. ಆದರೆ, ಚುನಾವಣೆಯಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸುತ್ತಲೇ ಇದೆ.

ಇನ್ನು ಸಂಘಟಿತ ಕಾರ್ಮಿಕ ವರ್ಗ ಪ್ರತಿವರ್ಷ ಮುಷ್ಕರ, ಭಾರತ ಬಂದ್ ನಡೆಸುತ್ತಲೇ ಬಂದಿದೆ‌.ಹೋರಾಟದಲ್ಲಿ ಭಾಗವಹಿಸುವವರೆಲ್ಲ ಬಿಜೆಪಿ ವಿರುದ್ಧ ಮತ ಹಾಕುವುದಿಲ್ಲ ಎಂದು ಐದಾರು ದಶಕಗಳ ಕಾಲ ಟ್ರೇಡ್ ಯುನಿಯನ್ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಎಡಪಂಥೀಯ ಕಾರ್ಮಿಕ ನಾಯಕರೊಬ್ಬರು ನನಗೆ ಹೇಳಿದರು. ಅನೇಕ ಸಂದರ್ಭಗಳಲ್ಲಿ ಯುನಿಯನ್ ಚುನಾವಣೆಗಳಲ್ಲಿ ಕಮ್ಯುನಿಸ್ಟರನ್ನು ಬೆಂಬಲಿಸುವ ಕಾರ್ಮಿಕರು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಯನ್ನು ಬೆಂಬಲಿಸುತ್ತಾರೆ. ಇಂಥ ಕಳವಳಕಾರಿ ವಿಷಯಗಳ ಬಗ್ಗೆ ಪರಾಮರ್ಶೆ ನಡೆಸಬೇಕಾದ ಸಂಗಾತಿಗಳು ಪ್ರಶ್ನೆ ಗಳನ್ನು ಇಷ್ಟ ಪಡುವುದಿಲ್ಲ. ವೈಯಕ್ತಿಕ ದಾಳಿಗೆ ಇಳಿಯುತ್ತಾರೆ.

ಉತ್ತರ ಪ್ರದೇಶ ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರ ಕೋಟೆ.ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ರಾಜ್ಯ. ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಇದೇ ರಾಜ್ಯದವರು. ಎಂಬತ್ತರ ದಶಕದ ಕೊನೆಯವರೆಗೆ ಕಮ್ಯುನಿಸ್ಟ್ ಚಳವಳಿ ಕೆಲವು ಕಡೆ ಅತ್ಯಂತ ಪ್ರಭಾವಶಾಲಿಯಾಗಿತ್ತು. ಕಾನಪುರ ಲೋಕಸಭಾ ಕ್ಷೇತ್ರದಿಂದ ಹಿರಿಯ ಕಮ್ಯುನಿಸ್ಟ್ ನಾಯಕ ಎಸ್.ಎಂ.ಬ್ಯಾನರ್ಜಿ 30 ವರ್ಷ ನಿರಂತರವಾಗಿ ಚುನಾಯಿತರಾಗಿ ಬಂದಿದ್ದರು. ನಂತರ ಈ ಮತಕ್ಷೇತ್ರದಿಂದ ಸಿಪಿಎಂ ನಾಯಕಿ ಸುಭಾಷಿಣಿ ಅಲಿ ಆರಿಸಿ ಬಂದಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಮ್ಯುನಿಸ್ಟ್ ನಾಯಕ ಝಾರ್ಖಂಡರಾಯ್ ಅನೇಕ ಬಾರಿ ಲೋಕಸಭೆಗೆ ಚುನಾಯಿತರಾಗಿ ಬಂದಿದ್ದರು. ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದ ಪ್ರಕ್ಷುಬ್ಧ ಸನ್ನಿವೇಶದಲ್ಲೂ ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್ ಲೋಕಸಭಾ ಕ್ಷೇತ್ರದಿಂದ ಸಿಪಿಐನ ಮಿತ್ರಸೇನ್ ಯಾದವ್ ಲೋಕಸಭೆಗೆ ಆರಿಸಿ ಬಂದಿದ್ದರು. ಇನ್ನು ಲೋಹಿಯಾರ ಪಟ್ಟಶಿಷ್ಯ ಮುಲಾಯಂ ಸಿಂಗ್ ಯಾದವ್ ಕೋಮುವಾದಿಗಳು ನೆಲೆಯೂರಲು ಬಿಟ್ಟಿರಲಿಲ್ಲ.ಆದರೆ ಇವರಾರೂ ತಮ್ಮ ನೆಲೆಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ. ಸದಾ ದ್ವೇಷವನ್ನು ಕಕ್ಕುವ ಆದಿತ್ಯನಾಥನಂಥವರು ಅಲ್ಲಿನ ಜನರ ಆಯ್ಕೆಯಾಗಿದ್ದಾರೆ.

ಯಾರನ್ನಾದರೂ ಟೀಕಿಸಲು ಈ ಮಾತನ್ನು ಹೇಳುತ್ತಿಲ್ಲ. ಸ್ಥಗಿತತೆಯಿಂದ ಹೊರಬಂದು ಈ ಬಿಕ್ಕಟ್ಟಿನಿಂದ ಹೊರಗೆ ಬರಲಿ ಎಂಬ ಆಶಯ ನನ್ನಂಥ ಅನೇಕರದು. ಬರೀ ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ಕೊಂಡು ಸರ್ಕಾರದ ಮುಂದೆ ಬೇಡಿಕೆ ಪಟ್ಟಿ ಮಂಡಿಸುವದರಿಂದ ಫ್ಯಾಸಿಸ್ಟ್ ಶಕ್ತಿಗಳನ್ನು ಹಿಮ್ಮೆಟ್ಟಿ ಸಲು ಸಾಧ್ಯವಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಬಹುದೊಡ್ಡ ಸೈದ್ಧಾಂತಿಕ ,ವೈಚಾರಿಕ ರಾಜಿ ರಹಿತ ಸಮರ ಮಾತ್ರ ಹೊಸ ದಾರಿ ತೋರಿಸಬಲ್ಲದು.

ಉತ್ತರ ಪ್ರದೇಶ ಜಾತೀಯವಾದಿಗಳ , ಕೋಮುವಾದಿಗಳ, ಕಂದಾಚಾರಿಗಳ ಪ್ರಾಬಲ್ಯದ ರಾಜ್ಯ. ಆದರೂ ಬಾಬಾಸಾಹೇಬರ ನಂತರ ದಲಿತ ಚಳವಳಿಗೆ ಹೊಸ ಚೈತನ್ಯ ನೀಡಿದ ಕಾನ್ಶಿರಾಮ್‌ಜಿ ಅವರ ಕಾರ್ಯ ಕ್ಷೇತ್ರವೂ ಹೌದು. ಸೈಕಲ್ ಮೇಲೆ ಇಡೀ ರಾಜ್ಯವನ್ನು ಸುತ್ತಾಡಿ ಪಕ್ಷ ಕಟ್ಟಿದ ಅವರು ರಾಜ್ಯಾಧಿಕಾರ ವಶಪಡಿಸಿಕೊಂಡು ಮಾಯಾವತಿಯವರನ್ನು ಮುಖ್ಯ ಮಂತ್ರಿಯನ್ನಾಗಿ ಮಾಡಿದರು. ಈ ಬಾರಿ ಬಹುಜನ ಸಮಾಜ ಪಕ್ಷವೂ ಶೋಚನೀಯವಾಗಿ ಸೋತಿದೆ.

ಇದರ ಜೊತೆಗೆ ಕೋವಿಡ್ ಕಾಲದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಉಚಿತ ಪಡಿತರದಂಥ ಯೋಜನೆಗಳು ಯೋಗಿಯ ನೆರವಿಗೆ ಬಂದವು. ಕರ್ನಾಟಕದಲ್ಲಿ ಅನ್ನಭಾಗ್ಯ ತಂದ ಸಿದ್ದರಾಮಯ್ಯನವರಿಗೆ ಮತ್ತೆ ಅಧಿಕಾರ ನೀಡದ ಜನ ಉತ್ತರ ಪ್ರದೇಶದಲ್ಲಿ ಯೋಗಿ ಕೈ ಹಿಡಿದರು.

ಬಿಜೆಪಿ ಗೆಲುವಿನ ಮೂಲ ಆರ್.ಎಸ್.ಎಸ್ ಅದರ ಸಂಘಟನಾ ಸಾಮರ್ಥ್ಯ, ತಂತ್ರಗಾರಿಕೆ ಊಹಾತೀತ. ಸಮಾಜವಾದಿಗಳು ಮಂಡಲ ಅಸ್ತ್ರ ಪ್ರಯೋಗಿಸಿದರೆ ,ಸಂಘ ಪರಿವಾರ ಸೋಶಿಯಲ್ ಇಂಜನಿಯರಿಂಗ್ ಮಾಡಿ ಹಿಂದುಳಿದವರಲ್ಲೇ ನಿರ್ಲಕ್ಷಿಸಲ್ಪಟ್ಟ ಯಾದವೇತರ ಕುರ್ಮಿ ಮುಂತಾದ ಸಮುದಾಯಗಳಿಗೆ ಬಲೆ ಬೀಸಿದವು.ದಲಿತ ರಲ್ಲಿ ಕರ್ನಾಟಕದಲ್ಲಿ ಎಡಗೈ ,ಬಲಗೈ ಎಂದು ಹುಳಿ ಹಿಂಡಿದಂತೆ ಉತ್ತರ ಪ್ರದೇಶದಲ್ಲಿ ಕೂಡ ದಲಿತ ರ ಮತಗಳನ್ನು ಒಡೆದು ಲಾಭ ಮಾಡಿಕೊಂಡಿದೆ.

ಒಟ್ಟಾರೆ ಇಡೀ ಭಾರತದ ಚುನಾವಣಾ ಫಲಿತಾಂಶಗಳ ಸಮೀಕ್ಷೆ ಮಾಡಿದರೆ ದಕ್ಷಿಣದ ರಾಜ್ಯಗಳು ಮುಖ್ಯ ವಾಗಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜ್ಯಗಳಲ್ಲಿ ಬಿಜೆಪಿಯ ಕೋಮುವಾದಿ ರಾಜಕಾರಣ ಕಾಲೂರಲು ಮತದಾರರು ಅವಕಾಶ ನೀಡಿಲ್ಲ. ಆದರೆ ಬಸವಣ್ಣ, ಕನಕದಾಸ, ಕುವೆಂಪು ಜನಿಸಿದ ಕರ್ನಾಟಕವೊಂದೇ ದಕ್ಷಿಣದಲ್ಲಿ ಹಿಂದುತ್ವದ ಪ್ರಯೋಗ ಶಾಲೆಯಾಗುವ ಸೂಚನೆಗಳು ಗೋಚರಿಸುತ್ತಿವೆ. ಕಾಂಗ್ರೆಸ್ ಇಲ್ಲಿ ಮುಖ್ಯ ವಿರೋಧ ಪಕ್ಷ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ ಒಂದಾಗಿ ಸೆಣಸಿದರೆ ಮತ್ತೆ ಇಲ್ಲಿ ಅವಕಾಶವಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯವಾಹಿನಿ ಮಾಧ್ಯಮಗಳು ಹಿಂದಿನಂತೆ ಈ ಬಾರಿಯೂ ಬಿಜೆಪಿ ಯ ತುತ್ತೂರಿಯಾದವು. ಭೂಮಾಲೀಕರು, ಬಂಡವಾಳಶಾಹಿಗಳು, ಧರ್ಮಗುರುಗಳು, ಜನಾಂಗ ದ್ವೇಷ ಎಲ್ಲ ಸೇರಿ ಬಿಜೆಪಿ ಗೆಲ್ಲಲು ಅನುಕೂಲ ವಾಯಿತು.

ಚುನಾವಣೆಗಳು ಬರುತ್ತವೆ ಹೋಗುತ್ತವೆ. ಚುನಾವಣಾ ಲೆಕ್ಕಾಚಾರದಿಂದ ಈಗ ಹೊರಟಿರುವ ನಾಜಿ ಮಾದರಿಯ ಹಿಂದುತ್ವದ ರಥವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಚುನಾವಣೆಯ ರಾಜಕೀಯದ ಆಚೆಗೂ ಜನರ ನಡುವೆ ಬಿರುಕು ಮೂಡಿಸುವ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ನಿರಂತರವಾಗಿ ಜನ ಜಾಗೃತಿಯ ಆಂದೋಲನ ಕೈಗೊಳ್ಳಬೇಕು‌. ಇದರಲ್ಲಿ ಕಾಂಗ್ರೆಸ್ ಪಾತ್ರ ಮುಖ್ಯವಾಗಿದೆ. ಕಾಂಗ್ರೆಸ್ ನ ಕೆಲ ನಾಯಕರಿಗೆ ಪದಾಧಿಕಾರಿಗಳಿಗೆ ತಮ್ಮ ಪಕ್ಷದ ಸಿದ್ದಾಂತವೇ ಗೊತ್ತಿಲ್ಲ. ಇನ್ನು ಕೆಲವರು ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳಾಗಿ ನಿಧಿ ಸಂಗ್ರಹಿಸಿಕೊಡುತ್ತಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿನ ಹೀನಾಯ ಸೋಲಿಗೆ ಕಾರಣ ಕೋಮುವಾದದ ಬಗೆಗಿನ ಅದರ ಇಬ್ಬಂದಿತನ. ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಬಾಬರಿ ಮಸೀದಿ ಕೆಡವಲು ಅವಕಾಶ ನೀಡಿದ್ದು ಹಳೆಯ ಕತೆ. ಆದರೆ, ಇತ್ತೀಚಿಗೆ ಅಯೋಧ್ಯೆಯಲ್ಲಿ ವಿ.ಎಚ್.ಪಿ‌.ನಿರ್ಮಿಸಲು ಹೊರಟಿರುವ ರಾಮ ಮಂದಿರ ಶಿಲಾನ್ಯಾಸದ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಶಿಲಾನ್ಯಾಸ ಕಾರ್ಯಕ್ರಮ ತಮ್ಮದೇ ಎಂಬಂತೆ ಸಂಭ್ರಮ ಪಟ್ಟರು. ಈ ರೀತಿಯ ತಾತ್ವಿಕ ದಿವಾಳಿಕೋರತನ ಕಾಂಗ್ರೆಸ್ ಪಕ್ಷದ ಇಮೇಜಿಗೆ ಧಕ್ಕೆ ಉಂಟು ಮಾಡಿತು.

ಆದರೆ ಇಲ್ಲಿಗೆ ಎಲ್ಲಾ ಮುಗಿಯಿತೆಂದಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದರೂ ಭಾರತದ ಬಹುತೇಕ ರಾಜ್ಯಗಳಲ್ಲಿ ಅದರ ಸಂಘಟನಾ ಜಾಲ ಇನ್ನೂ ಬಿಗಿಯಾಗಿದೆ. ಏಳು ರಾಜ್ಯಗಳಲ್ಲಿ ಅದು ಅಧಿಕಾರದಲ್ಲಿ ಇದೆ. ಅದು ಅಹಂ ಬಿಟ್ಟು ಎಲ್ಲ ಜಾತ್ಯತೀತ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾಣ್ಮೆಯಿಂದ ತಂತ್ರ ರೂಪಿಸಿದರೆ ಭವಿಷ್ಯವಿದೆ.

ಬಹುತ್ವ ಭಾರತ ಅಪಾಯದಲ್ಲಿದೆ. ಪ್ರಜಾಪ್ರಭುತ್ವದ ಬುಡ ಅಲ್ಲಾಡುತ್ತಿದೆ. ಸಂವಿಧಾನದ ವಿರುದ್ಧ ಸಂಚು ನಡೆದಿದೆ ಎಂದು ಹೇಳುತ್ತಲೇ ಇದ್ದೇವೆ. ಆದರೆ ಜನರು ವಿಶೇಷವಾಗಿ ಯುವಜನರು ಯಾಕೆ ನಮ್ಮ ಮಾತು ಕೇಳಿಸಿಕೊಳ್ಳುತ್ತಿಲ್ಲ? ಯಾಕೆ ನಮ್ಮ ಜೊತೆಗೆ ಬರುತ್ತಿಲ್ಲ? ಮುಷ್ಕರ ಮೆರವಣಿಗಳಲ್ಲಿ ಬರುವವರ ಮತ್ತು ಅವರ ಮನೆಯವರ ಓಟುಗಳು ಯಾರಿಗೆ ಹೋಗುತ್ತವೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ತಡಕಾಡಬೇಕಿಲ್ಲ. ಸವಲತ್ತುಗಳನ್ನು ಕೊಡಿಸುವ ಕಾಟಾಚಾರದ ಹೋರಾಟಗಳಲ್ಲಿ ಸಿದ್ದಾಂತಗಳು ಸೊರಗಿ ಹೋಗುತ್ತಿವೆ ಎಂದರೆ ಅತಿಶಯೋಕ್ತಿಯಲ್ಲ.

ಇದು ಯಾವುದೇ ಪಕ್ಷದ ಸೋಲು ಗೆಲುವಿನ ಪ್ರಶ್ನೆ ಮಾತ್ರವಲ್ಲ. ಭಾರತದ ಪ್ರಜಾಪ್ರಭುತ್ವದ ,ಸಂವಿಧಾನದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಬಿಜೆಪಿಗೆ ಮತ ಹಾಕುವ ಅನೇಕರು ವಿಶೇಷವಾಗಿ ಮೇಲ್ವರ್ಗಕ್ಕೆ ಸೇರಿದವರು " ಬಿಜೆಪಿ ಗೆದ್ದು ಮೋದಿ ಪ್ರಧಾನಿಯಾಗಿ ಮುಂದುವರಿದರೆ ತಳ ಸಮುದಾಯಗಳಿಗೆ ಇರುವ ಮೀಸಲಾತಿ ಸೌಕರ್ಯಗಳನ್ನು ರದ್ದು ಮಾಡುತ್ತಾರೆ. ಸರ್ವರಿಗೂ ಸಮಾನ ಅವಕಾಶ ನೀಡಿರುವ ಸಂವಿಧಾನವನ್ನು ಬದಲಿಸುತ್ತಾರೆ " ಎಂದು ನಿರೀಕ್ಷೆ ಹಾಗೂ ಭರವಸೆ ಇಟ್ಟುಕೊಂಡು ಬಿಜೆಪಿ ಗೆ ಮತ ಹಾಕಿದ್ದಾರೆ.ಹೀಗಾಗಿ ಬರಲಿರುವ ದಿನಗಳು ಅತ್ಯಂತ ನಿರ್ಣಾಯಕ ದಿನಗಳಾಗಿವೆ.

ಈಗಲೂ ಕಾಲ ಮಿಂಚಿಲ್ಲ ಬಿಜೆಪಿಯೇತರ ಪ್ರತಿಪಕ್ಷಗಳು (ಕಾಂಗ್ರೆಸ್ ಸಹಿತ) ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವ ಏಕೈಕ ಗುರಿಯಿಟ್ಟುಕೊಂಡು ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುತ್ವ ಶತ್ರುಗಳ ರಥಯಾತ್ರೆ ತಡೆಯಲು ಸಾಧ್ಯ.

ಭಾರತದ ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ಸೇತರ ಪ್ರತಿಪಕ್ಷ ಗಳು ಕಾರಣ. ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ಅವರ ಸರಕಾರದ ವಿರುದ್ಧ ಟೆಲಿಕಾಂ ಹಗರಣದ ಸುಳ್ಳು ಕತೆ ಕಟ್ಟಿ ಅಣ್ಣಾ ಹಜಾರೆಯನ್ನು ಮತ್ತು ಬಾಬಾ ರಾಮದೇವ್‌ನನ್ನು ಮುಂದಿಟ್ಟುಕೊಂಡ ನಡೆದ ಸಂಘ ಪರಿವಾರ ಸೃಷ್ಟಿತ ಚಳವಳಿಯಲ್ಲಿ ಎರಡೂ ಕಮ್ಯುನಿಸ್ಟ್ ಪಕ್ಷಗಳ ನಾಯಕರು ಉತ್ಸಾಹದಿಂದ ಪಾಲ್ಗೊಂಡರು. ಇದರಿಂದ ಮೋಹನ ಭಾಗವತರು ಖುಷಿಗೊಂಡರು. ಕಾಂಗ್ರೆಸ್ ,ಬಿಜೆಪಿ ಒಂದೇ ನಾಣ್ಯದ ಮುಖಗಳು ಎಂದು ಹೇಳುತ್ತಲೇ ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತರುವ ಮಸಲತ್ತು ನಡೆಯಿತು. ಆಗ ಕಾರ್ಯಾಚರಣೆ ಗೆ ಇಳಿದ ಆರ್.ಎಸ್.ಎಸ್ ಕಾರ್ಯಕರ್ತರ ಪಡೆ ಯುವಜನರ ಮೆದುಳಿಗೆ ವಿಷ ಬೆರೆಸುವಲ್ಲಿ ಯಶಸ್ವಿಯಾಯಿತು.

ಇದಕ್ಕೆ ಅಂಬಾನಿ,ಅದಾನಿ ಮುಂತಾದ ಕಾರ್ಪೊರೇಟ್ ಖದೀಮರ ಹಣ ಹರಿದು ಬಂತು. ಆದರೆ ಟೆಲಿಕಾಂ ಹಗರಣದ ಆರೋಪ ಸುಳ್ಳೆಂದು ಇತ್ತೀಚೆಗೆ ಬಯಲಾಗಿದೆ.ಅಧಿಕಾರ ಫ್ಯಾಸಿಸ್ಟ್ ಶಕ್ತಿಗಳ ‌ಕೈಗೆ ಸಿಕ್ಕಿದೆ.

ಕಾಂಗ್ರೆಸ್ ತನ್ನ ಆರ್ಥಿಕ ನೀತಿಗಳನ್ನು ಬದಲಿಸಿಕೊಳ್ಖಬೇಕೆಂಬ ಎಡಪಂಥೀಯ ಪಕ್ಷಗಳ ಆಗ್ರಹ ಸರಿಯಾಗಿದೆ. ಆದರೆ ಕಾಂಗ್ರೆಸ್ಸನ್ನು ದುರ್ಬಲಗೊಳಿಸಿ ಬಿಜೆಪಿಯನ್ನು ಬಲಪಡಿಸುವದು ಸರಿಯಾದ ದಾರಿಯಲ್ಲ.

ಈಗಲೂ ಕಾಲ ಮಿಂಚಿಲ್ಲ ಬಿಜೆಪಿಯೇತರ ಪ್ರತಿಪಕ್ಷಗಳು (ಕಾಂಗ್ರೆಸ್ ಸಹಿತ) ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವ ಏಕೈಕ ಗುರಿಯಿಟ್ಟುಕೊಂಡು ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುತ್ವದ ಶತ್ರುಗಳ ರಥಯಾತ್ರೆ ತಡೆಯಲು ಸಾಧ್ಯ.

ಕೃಪೆ: ವಾರ್ತಾಭಾರತಿ (ಪ್ರಚಲಿತ ಅಂಕಣ)

Advertisement
Advertisement
Recent Posts
Advertisement