Advertisement

'ಹಿಜಾಬ್' ಹಾಗೂ 'ಹಲಾಲ್' ಗೊಂದಲಗಳು ಅಧಿಕಾರಹಾಹಿ ಬಿಜೆಪಿ ಮತ್ತು ಮಾರಿಕೊಂಡ ಮಾಧ್ಯಮಗಳ ಕೊಡುಗೆ: ಹೆಚ್‌.ಸಿ ಮಹಾದೇವಪ್ಪ ಕಿಡಿ

Advertisement

ಹೀಗೇ ಕನ್ನಡದ ಒಂದೆರಡು ಸುದ್ದಿ ವಾಹಿನಿಗಳನ್ನು ಗಮನಿಸುತ್ತಿದ್ದೆ. "ಹಿಜಾಬ್ ನಂತರ ಬಿಜೆಪಿಗೆ ಸಿಕ್ತು ಹಲಾಲ್ ಅಸ್ತ್ರ, ಕೌಂಟರ್ ಕೊಡಲಾಗದೇ ಕಾಂಗ್ರೆಸ್ ಕಂಗಾಲು" ಅಂತ ಬರುತ್ತಿತ್ತು. ಮತ್ತೊಂದು ವಾಹಿನಿಯಲ್ಲಿ, "ಕಾಂಗ್ರೆಸ್ ಗೆ ಹಲಾಲ್ ಸಂಕಷ್ಟ, ಬಿಜೆಪಿಗೆ ಅದೇ ಇಷ್ಟ" ಅಂತ ಬರುತ್ತಿತ್ತು. ವಾಸ್ತವವಾಗಿ ನೋಡುವುದಾದರೆ ಈ ಎರಡೂ ಮಾತುಗಳೂ ಸಹ ಮೂರ್ಖತನದಿಂದ ಕೂಡಿವೆ. ಕಾರಣ ಹಲಾಲ್ ಎನ್ನುವುದು ಧಾರ್ಮಿಕ ಆಚರಣೆ ಮತ್ತು ಆಹಾರ ಪದ್ದತಿಗೆ ಸಂಬಂಧಿಸಿದ ಸಂಗತಿಯಾಗಿದ್ದು ಇದು ಬಹಳ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಾ. ಎಚ್‌.ಸಿ ಮಹಾದೇವಪ್ಪ ವಿಶ್ಲೇಷಿಸಿದ್ದಾರೆ.

ಹಿಂದೂ ಪದ್ದತಿಯಲ್ಲಿ ಕೋಳಿಯನ್ನು ಎಡೆ ಮತ್ತು ಪೂಜೆಗಾಗಿ ಕೊಯ್ಯುವಂತೆ, ಮುಸ್ಲಿಮರಲ್ಲಿ ದೇವರಿಗೆ ಗೌರವ ಸಲ್ಲಿಸಲು ಹಲಾಲ್ ರೂಪದಲ್ಲಿ ಕೊಯ್ಯುತ್ತಾರೆ. ಇದು ಯಾವ ಕಾರಣಕ್ಕೂ ವಿವಾದಾತ್ಮಕ ಅಂಶವಲ್ಲ. ಈ ಸಹಜ ಸಂಗತಿಯನ್ನು ಬಿಜೆಪಿಗರು ದ್ವೇಷ ಹಬ್ಬಿಸಲು ಬಳಸಿಕೊಳ್ಳುವಾಗ ಅಲ್ಲಿ ಕಾಂಗ್ರೆಸ್ ನ ಪಾತ್ರ ಏನಿಲ್ಲದಿದ್ದರೂ ಕಾಂಗ್ರೆಸ್ ನವರನ್ನು ಎಳೆದು ತರುವುದು ಬೇಸರದ ಸಂಗತಿ. ಕಾಂಗ್ರೆಸ್ ಇಂತಹ ಸಂವಿಧಾನ ವಿರೋಧಿ ಘಟನೆಗಳನ್ನು, ಜನಾಂಗೀಯ ದ್ವೇಷವನ್ನು ಹುಟ್ಟು ಹಾಕುವ ದುರುದ್ದೇಶಗಳನ್ನು ಹಿಂದೆ ಖಂಡಿಸಿದೆ, ಇಂದು ಖಂಡಿಸುತ್ತದೆ ನಾಳೆಯೂ ಖಂಡಿಸಲಿದೆ. ಕಾರಣ ಸಂವಿಧಾನದ ಕುರಿತಂತೆ ಕಾಂಗ್ರೆಸ್ ಗೆ ಇರುವ ನಂಬಿಕೆ ಮತ್ತು ತಿಳುವಳಿಕೆ ಅಂತದ್ದು. ಆದರೆ ಈ ಸಾಮಾನ್ಯ ತಿಳುವಳಿಕೆಯು ಮಾಧ್ಯಮಕ್ಕೆ ಇಲ್ಲವೆಂದು ತೋರುತ್ತಿದೆ. ಅಥವಾ ಇದ್ದರೂ ಅದರ ಪ್ರಸ್ತಾಪ ಮಾಡದ ಇವರ ಒಳಗೆ ದುರುದ್ದೇಶವೊಂದು ಅಡಗಿದೆ ಎಂದವರು ಖೇದ ವ್ಯಕ್ತಪಡಿಸಿದ್ದಾರೆ.

ನಿಜಕ್ಕೂ ಸಂವಿಧಾನ ಬಾಹಿರವಾದ ಜನಾಂಗೀಯ ದ್ವೇಷದ ಘಟನೆಗಳನ್ನು ಯಾರಾದರೂ ಹುಟ್ಟು ಹಾಕಲು ಯತ್ನಿಸಿದರೆ
" ಅವರು ಮಾಡುತ್ತಿರುವುದು ತಪ್ಪು ಮತ್ತು ಅಸಂವಿಧಾನಿಕ. ಇದರಿಂದ ಪ್ರಜಾಪ್ರಭುತ್ವ ನಾಶವಾಗುತ್ತದೆ ಎಂದು ಮಾಧ್ಯಮಗಳೇ
ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಹಾಗೆ ದ್ವೇಷ ಹರಡುವವರನ್ನು ಪ್ರಬಲವಾಗಿ ವಿರೋಧಿಸಬೇಕು. ಅದನ್ನು ಬಿಟ್ಟು 'ಕಾಂಗ್ರೆಸ್ ಕೌಂಟರ್ ಕೊಡಲು ವೈಫಲ್ಯ', 'ಕಾಂಗ್ರೆಸ್ ಗೆ ಶಾಕ್' ಎಂದರೆ ಇದು ಕಾಂಗ್ರೆಸ್ ನ ವೈಫಲ್ಯವಲ್ಲ. ಬದಲಿಗೆ ಅದು ಒಂದು ಜವಾಬ್ದಾರಿಯುತ ಮಾಧ್ಯಮದ ವೈಫಲ್ಯ ಎಂದು ವಿವರಿಸಿದರು.

ಹೇಳುವುದು ಹೇಳುತ್ತಲೇ ಇರುತ್ತೇವೆ, ಕೇಳುವವರು ಅದನ್ನು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಟ್ಟು ಮತ್ತೆ ತಮ್ಮದೇ ಆದ ಅಸಂವಿಧಾನಿಕ ಮಾರ್ಗದಲ್ಲಿ ಮುಳುಗಿದ್ದರೆ ಇವರಿಗೆ ಏನು ಹೇಳುವುದೋ ತಿಳಿಯುತ್ತಿಲ್ಲ ಎಂದವರು ಹೇಳಿದ್ದಾರೆ.

Advertisement
Advertisement
Recent Posts
Advertisement