Advertisement

ಭೀಮಾ ಕೊರೆಗಾಂವ್ ಎಂಬ ಮೋದಿ ಸೃಷ್ಟಿಯ ಪ್ರಕರಣ ಮತ್ತು ಆನಂದ್ ತೇಲ್ತುಂಬ್ಡೆ ಬಂಧನದ ನಂತರದ ಈ ಎರಡು ವರ್ಷಗಳು: ರಮಾ ಅಂಬೇಡ್ಕರ್

Advertisement
ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)

ಇದೇ 'ಏಪ್ರಿಲ್ 14'ಕ್ಕೆ ಈ ದೇಶದ ಮಹತ್ವದ ಚಿಂತಕ, ಕಾರ್ಯಕರ್ತ ಮತ್ತು ವಿದ್ವಾಂಸ ಆನಂದ್ ತೇಲ್ತುಂಬ್ಡೆ ಯವರು ಭೀಮಾ ಕೊರೆಗಾಂವ್ ಎಂಬ ಮೋದಿ ಸೃಷ್ಟಿಯ ಪ್ರಕರಣದಲ್ಲಿ ಸುಳ್ಳು ಆರೋಪವನ್ನು ಹೊತ್ತು ಬಂಧನಕ್ಕೊಳಗಾಗಿ ಎರಡು ವರ್ಷಗಳಾದವು. ಈ ಪ್ರಕರಣದ ಇತರ ಬಂಧಿತರು  ಈಗಾಗಲೇ ಯಾವುದೇ ಬಗೆಯ ವಿಚಾರಣೆಯಿಲ್ಲದೆ ಮೂರು ವರ್ಷಗಳನ್ನು ಪೂರೈಸಿದ್ದಾರೆ. ಫ಼ಾದರ್ ಸ್ಟಾನ್ ಸ್ವಾಮಿಯವರು ಜೈಲಿನಲ್ಲಿದಾಗಲೇ ಅನಾರೋಗ್ಯದಿಂದ ನಿಧನ ಹೊಂದಿದರು. ಅವರಷ್ಟೇ ವಯಸ್ಸಾಗಿರುವ 83 ವಯಸ್ಸಿನ ಕ್ರಾಂತಿಕಾರಿ ಕವಿ ವರವರರಾವ್ ಅವರ ಮೆಡಿಕಲ್ ಜಾಮೀನು ಕೂಡಾ ಇನ್ನು ಮೂರು ತಿಂಗಳಿಗೆ ಮುಗಿಯಲಿದೆ.

ಅತ್ಯಂತ ಕರಾಳವಾದ ಹಾಗೂ ಸಂವಿಧಾನ ವಿರೋಧಿಯಾದ ಯುಎಪಿಎ ಕಾಯಿದೆಯಡಿ ಇವರೆಲ್ಲರನ್ನೂ ಬಂಧಿಸಲಾಗಿದೆ. ಇದರಡಿಯಲ್ಲಿ ವಿಚಾರಣೆ ಮುಗಿಯುವ ತನಕವೂ ಜಾಮೀನು ನಿರಾಕರಿಸಬಹುದಾದ ಅತ್ಯಂತ ಕರಾಳವಾದ ಅವಕಾಶವಿದೆ. ಇಂಥ ಒಂದು ಅವಕಾಶವು ನಾಗರಿಕ ಸಮಾಜದ ಪರಿಕಲ್ಪನೆಗೇ ವಿರುದ್ಧವಾಗಿದ್ದರೂ ಅದನ್ನು ಬೇಕೆಂಬಂತೆ ಪೊಲೀಸರು ಹಾಗೂ ನ್ಯಾಯಾಲಯಗಳು ಬಳಸುತ್ತಿವೆ. ಆದ್ದರಿಂದಾಗಿ ಶಿಕ್ಷೆಗೆ ಒಳಗಾಗುವುದು ಕೇವಲ ಆರೋಪಿ ಮಾತ್ರವಲ್ಲ. ಅಮಾಯಕರಾದ ಅವರ ಕುಟುಂಬದವರೂ ಸಹ ನಿರಂತರವಾದ ಶಿಕ್ಷೆಗೆ ಗುರಿಯಾಗುತ್ತಿರುತ್ತಾರು. ಇದೂ ಕೂಡ ಒಂದು ನಾಗರಿಕ ಹಾಗೂ ಪ್ರಜಾತಾಂತ್ರಿಕ ನ್ಯಾಯಸಂಹಿತೆಗೇ ವಿರುದ್ಧವಾದದ್ದು.
ಮನೆ ಮತ್ತು ಮನಸ್ಸುಗಳು ಬಯಲು ಬಂದೀಖಾನೆಯಾಗಿಬಿಡುವ ಇಂಥಾ ಪರಿಸ್ಥಿತಿಯನ್ನು ವಿಶೇಷವಾಗಿ ಹೆಂಗಸರು ಎದುರಿಸುವ ರೀತಿ ಅಸಾಧಾರಣವಾದದ್ದು. ಸಂದರ್ಭದ ಕರೆಗೆ ಅವರು ಎದ್ದುನಿಲ್ಲುವ ರೀತಿ, ಸಹಜ ಮತ್ತು ಸರಳ ನ್ಯಾಯ-ನೀತಿ ಯ ಮಾನದಂಡಗಳಲ್ಲಿ ಅವರು ರೂಪಿಸಿಕೊಳ್ಳುವ ಹೋರಾಟದ ಕಸುವು, ಏಕಕಾಲದಲ್ಲಿ ಅವರು ಕುಟುಂಬ, ಸಮಾಜ, ಜೈಲು, ಪೊಲೀಸು, ಕೋರ್ಟುಗಳಲ್ಲಿ ನಡೆಸಬೇಕಾದ ಹೋರಾಟಗಳು ದಾಖಲಾಗುವುದು ಬಹಳ  ಅಪರೂಪ. ಅವು ಯಾವುದೇ ಬಗೆಯ ಘೋಷಿತ ಹೋರಾಟಗಾರರಿಗೂ ಸ್ಪೂರ್ತಿಯನ್ನು ಮಾತ್ರವಲ್ಲದೆ ಪಾಠಗಳನ್ನು ಕಲಿಸುವಂತಿರುತ್ತದೆ.

ಅಂಥಾ ಒಂದು ಸ್ವಾನುಭವ ಕಥನವನ್ನು  ಡಾ. ಆನಂದ್ ತೇಲ್‌ತುಂಬ್ಡೆಯವರ ಮಡದಿಯಾದ ರಮಾ ಅಂಬೇಡ್ಕರ್ ಅವರು The  leaflet ಎಂಬ ವೆಬ್ ಪತ್ರಿಕೆಗೆ ಬರೆದ ಲೇಖನದಲ್ಲಿ ಕಟ್ಟಿಕೊಟ್ಟಿದ್ದಾರೆ.
ರಮಾ ಅಂಬೇಡ್ಕರ್ ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗಳು. ಡಾ. ಆನಂದ್ ತೇಲ್‌ತುಂಬ್ಡೆಯವರನ್ನು ಮದುವೆಯಾದ ಮೇಲೆ ಬಹಿರಂಗವಾಗಿ ದೊಡ್ಡ ದೊಡ್ಡ ಹೋರಾಟಗಳಲ್ಲಿ ಕಾಣಿಸಿಕೊಳ್ಳದಿದ್ದರೂ ತಮ್ಮದೇ ಆದ ರೀತಿಯಲ್ಲಿ ಅನಂದ ಅವರ ಹೋರಾಟದ ಬದುಕಿಗೆ ಒತ್ತಾಸೆಯಾಗಿ ನಿಂತವರು. 2020ರ ಏಪ್ರಿಲ್ 14ರಂದು ಆನಂದ್ ಅವರು ಬಂಧನಕ್ಕೊಳಗಾದ ಮೇಲೆ ಬೇರೆಯೇ ಓಘದಲ್ಲಿದ್ದ ಅವರ ಬದುಕು  ಅನಿರೀಕ್ಷಿತ ಸವಾಲುಗಳನ್ನು ಎದುರಿಸಬೇಕಾಯಿತು. ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಲೇ ಬಂದಿರುವ ರಮಾ ಅಂಬೇಡ್ಕರ್ ಅವರು ಅದರ ಒಂದು ಸಣ್ಣ ಚಿತ್ರಣವನ್ನು ಈ ಲೇಖನ ಒದಗಿಸುತ್ತದೆ.
ಈ ಬಾರಿಯ ಅಂಕಣ ರಮಾ ಅಂಬೇಡ್ಕರ್ ಅವರ ಆ ಅಪರೂಪದ ಲೇಖನದ ಅನುವಾದ. ಈ ಲೇಖನದ ಇಂಗ್ಲೀಷ್ ಮೂಲವನ್ನು ಅಸಕ್ತರು ಈ ವೆಬ್ ವಿಳಾಸದಲ್ಲಿ ಪಡೆಯಬಹುದು:
►►https://theleaflet.in/reflecting-on-the-most-poignant-moments-of-last-two-years-during-anands-incarceration
ಈ ಎರಡು ವರ್ಷಗಳು- ರಮಾ ಅಂಬೇಡ್ಕರ್

ಆನಂದ್ ಮತ್ತು ನಾನು 1983ರ ನವಂಬರ್ 13 ರಂದು ಮದುವೆಯಾದವು. ನಮ್ಮದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜೇ. ಇಬ್ಬರಿಗೂ ಸ್ನೇಹಿತರಾಗಿದ್ದವರೊಬ್ಬರ ಮೂಲಕ ನಮ್ಮ ಮದುವೆ ನಿಗದಿಯಯಿತು. ಕಳೆದ 37 ವರ್ಷಗಳ ಕಾಲ ನಾನು ಒಬ್ಬ ಗೃಹಿಣಿಯಾಗಿಯೇ ಬದುಕಿದೆ. ಮನೆ ವಾರ್ತೆಗಳನ್ನು ಗಮನಿಸುತ್ತಾ, ನನ್ನ ಎರಡು ಹೆಣ್ಣು ಮಕ್ಕಳನ್ನು ಬೆಳೆಸುತ್ತಾ ಮತ್ತು ಅವರ ಅಗತ್ಯಗಳನ್ನು ಗಮನಿಸುತ್ತಾ ಮನೆಯನ್ನು ನಿಭಾಯಿಸಿದೆ. ಅದು ಅನಂದ್ ಗೆ ನಾನು ಕೊಡುತ್ತಿದ್ದ ಬೆಂಬಲವೂ ಆಗಿತ್ತು. ಏಕೆಂದರೆ ಈ ಎಲ್ಲ ಜವಾಬ್ದಾರಿಗಳನ್ನು ನಾನು ನಿರ್ವಹಿಸುತ್ತಿದ್ದರಿಂದಲೇ ಆನಂದ್ ತನ್ನ ವೃತ್ತಿ ಜೀವನದ ಮೇಲೂ ಹಾಗೂ ತಾನು ತೆತ್ತುಕೊಂಡಿದ್ದ ಸಾಮಾಜಿಕ ಧ್ಯೇಯಗಳ ಮೇಲೂ ಸಂಪೂರ್ಣವಾಗಿ ಗಮನಹರಿಸಲು ಸಾಧ್ಯವಾಗುತ್ತಿತ್ತು. ತನ್ನ ಜವಾಬ್ದಾರಿಯುತ ವೃತ್ತಿ ಜೀವನ ಮತ್ತು ಸಾಮಾಜಿಕ ಕಾರ್ಯಕರ್ತನ ಬದ್ಧತೆಯ ಬದುಕಿನ ಜಂಜಡದ ನಡುವೆಯೂ ಆನಂದ್ ನನ್ನ ಎರಡೂ ಹೆಣ್ಣು ಮಕ್ಕಳ ಎಲ್ಲಾ ಅಗತ್ಯಗಳನ್ನು ಪೂರೈಸಲು ಬಿಡುವುಮಾಡಿಕೊಳ್ಳುತ್ತಿದ್ದ ಒಬ್ಬ ಅದ್ಭುತ ತಂದೆಯೂ ಆಗಿದ್ದರು.

ಕೆಲವೇ ವರ್ಷಗಳ ಹಿಂದಿನ ನನ್ನ ನಿತ್ಯ ಜೀವನ ಹೇಗಿತ್ತು ಅಂತಾ ಹಿಂತಿರುಗಿ ನೋಡುತ್ತೇನೆ. ಅದರ ತುಂಬಾ ಸಾಂಸಾರಿಕ ತಾಪತ್ರಯಗಳು ಮತ್ತು ಚಿಂತೆಗಳು ತುಂಬಿಕೊಂಡಿರುತ್ತಿದ್ದವು. ಟೆನ್ನಿಸ್ ಆಡುತ್ತಿದ್ದ ಮಗಳ ಜೊತೆಗೆ ಪಂದ್ಯ ಪ್ರವಾಸಗಳಿಗೆ ಹೋಗುವುದು, ಅವಳ ಗೆಲುವನ್ನು ಸಂಭ್ರಮಿಸುವುದೂ, ಸೋತಾಗ ಸಮಾಧಾನಿಸುವುದೂ.. ನಿದ್ರೆಗೆಟ್ಟು ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದ ಮತ್ತೊಬ್ಬ ಮಗಳಿಗೆ ಕಂಪನಿ ನೀಡುವುದು, ಅವರ ಇಷ್ಟದ ತಿಂಡಿ-ತಿನಿಸುಗಳನ್ನು ಮಾಡುವುದು, ಅವರಿಗೆ ಗೈಡ್ ಮಾಡುವುದು, ವಯಸ್ಸಿಗೆ ಬಂದ ಮೇಲೆ ಜೀವನದಲ್ಲಿ ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳಿಗೆ ಒತ್ತಾಸೆಯಾಗಿ ನಿಲ್ಲುವುದೂ.. ಅವೆಲ್ಲಾ ಈಗ ಯಾವುದೋ ಬೇರೆ ಕಾಲದ ಕಥೆಗಳೇನೋ ಎನಿಸುತ್ತದೆ.
ನನಗೆ ಈಗ 66 ವರ್ಷ. ಈ ವಯಸ್ಸಿನಲ್ಲಿ ಬಹುಪಾಲು ಮಹಿಳೆಯರು ಒಂದೋ ತಮ್ಮ ನಿವೃತ್ತಿ ಜೀವನವನ್ನು ಅನುಭವಿಸುತ್ತಿರುತ್ತಾರೆ ಅಥವಾ ನಿವೃತ್ತರಾದ ತಮ್ಮ ಗಂಡನ ಜೊತೆ ತಣ್ಣಗೆ ಜೀವನ ನಡೆಸುತ್ತಿರುತ್ತಾರೆ. ಆದರೆ ಈ ವಯಸ್ಸಿನಲ್ಲಿ ನನ್ನ ಬದುಕು ಸಂಪೂರ್ಣವಾಗಿ ಬೇರೆಯೇ ದಿಕ್ಕನ್ನು ಪಡೆಯಿತು.
ಇದು ನನ್ನದೇ ಇನ್ನೊಂದು ಮುಖವನ್ನು ನನಗೆ ಪರಿಚಯಿಸಿದೆ. ಈವರೆಗೆ ನನ್ನೊಳಗೆ ಅಂಥದೊಂದು ನಾನು ಇದ್ದೇನೆಂಬುದೇ ನನಗೆ ಗೊತ್ತಿರಲಿಲ್ಲ.

ಇದೆಲ್ಲಾ ಪ್ರಾರಂಭವಾದದ್ದು ಹೀಗೆ..
ನಾವು ಯಾರೂ ಊರಲ್ಲಿ ಇಲ್ಲದಿರುವಾಗ ಗೋವಾದಲ್ಲಿರುವ ನಮ್ಮ ಮನೆಯ ಮೇಲೆ ಪೊಲೀಸರು ದಾಳಿ ಮಾಡುವುದರೊಂದಿಗೆ ನಮ್ಮ ಬದುಕಿನ ದಿಕ್ಕು ಬದಲಾಗಿ ಹೋಯಿತು. ನನ್ನ ಕುಟುಂಬದವರಿಗೆ ದೈರ್ಯ ತುಂಬಲೆಂದು ನಾನು ಹೊರಗಡೆ ವಿಚಲಿತಳಾಗದವಳಂತೆ ತೋರಿಸಿಕೊಂಡರೂ ಒಳಗಡೆ ಮಾತ್ರ ಭಯಂಕರವಾದ ಆತಂಕ ಮಡುಗಟ್ಟಿತ್ತು. ಟಿವಿ ಸ್ಕ್ರೀನ್ ಮೇಲೆ ನನ್ನ ಗಂಡನ ಮತ್ತು ನಮ್ಮ ಮನೆಯ ಪೋಟೊಗಳು ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರವಾಗುತ್ತಿತ್ತು. ನಾನು ಮುಂಬೈಯಿಂದ ಗೋವಾಗೆ ವಿಮಾನದ ಟಿಕೆಟ್ಟನ್ನು ಬುಕ್ ಮಾಡಿಸಿಕೊಂಡೆ. ನಮಗೆ ಯಾವುದೇ ಸುಳಿವು ಸೂಚನೆ ಕೊಡದೆ ಪ್ರವೇಶಿಸಿದ್ದ ಈ ಅಪರಿಚಿತರು ನಮ್ಮ ಖಾಸಗಿ ಬದುಕಿನಲ್ಲಿ ಏನನ್ನು ಉಳಿಸಿದ್ದಾರೆ ಎಂದು ನಾನು ನೋಡಬೇಕಿತ್ತು. ನಂತರ ನಮ್ಮ ವಕೀಲರ ಜೊತೆಗೂಡಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಬೇಕಿತ್ತು.
ಕಾರಿನಲ್ಲಿ ಕೂತು ಠಾಣೆಯ ಕಡೆ ಹೋಗುತ್ತಿರುವಾಗ ನಾನು ಮಾತಾಡದೆ ಮೌನಕ್ಕೆ ಶರಣಾದೆ. ನಾನು ಮತ್ತು ನನ್ನ ಗಂಡ ಭಯಪಡುವಂಥದೇನೂ ಇಲ್ಲವೆಂದು ನನಗೆ ನಾನು ಹೇಳಿಕೊಳ್ಳುತ್ತಿದ್ದೆ. ನಾವು ಕಾನೂನನ್ನು ಪಾಲಿಸುವ ನಾಗರಿಕರು. ಪ್ರಾಮಾಣಿಕವಾಗಿ ಬದುಕಿದ್ದೇವೆ. ಈ ಸಮಾಜದ ಅತ್ಯಂತ ದಮನಿತರ ಬದುಕನ್ನು ಉತ್ತಮಪಡಿಸಲು ದಣಿವರಿಯದೇ ಕೆಲಸ ಮಾಡುತ್ತಿರುವ ನನ್ನ ಗಂಡನಿಗೆ ಯಾವುದೇ ಹಾನಿಯಾಗಬಹುದು ಎಂದು ಊಹಿಸಲು ಕಾರಣಗಳೇ ಇರಲಿಲ್ಲ.

ಆದರೆ ನಾನು ನನ್ನ ಜೀವನದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ಪೊಲೀಸ್ ಠಾಣೆಗೆ ಮಾಡಿದ ಆ ಭೇಟಿಯು ಆ ನಂತರ ಕೊನೆಯಿಲ್ಲದಂತೆ ಮುಂದುವರೆದಿರುವ ಯಾತನಾಮಯ ಕಾನೂನು ಸಮರದ ಮೊದಲನೆ ಹೆಜ್ಜೆಯೆಂಬುದು ನನ್ನ ಕಲ್ಪನೆಯಲ್ಲೇ ಇರಲಿಲ್ಲ.

ಆ ಘಟನೆಯ ನಂತರ ನಮ್ಮ ಬದುಕು ನಾವು ಊಹಿಸಿದ್ದಕ್ಕಿಂತ ಹೆಚ್ಚಿನ ರೀತಿಗಳಲ್ಲಿ ಬದಲಾಗಿ ಹೋಯಿತು. ಆದರೆ ಆನಂದ್ ಜೀವನದ ಒಂದು ಕ್ಷಣವನ್ನು ವೃಥಾ ಕಳೆಯುತ್ತಿರಲಿಲ್ಲ. ಮತ್ತು ಅದನ್ನೇ ಅವರು ತಮ್ಮ ಕುಟುಂಬದಿಂದಲೂ ನಿರೀಕ್ಷಿಸುತ್ತಿದ್ದರು. ಆನಂದ್ ಎಂದಿನಂತೆ ತನ್ನ ಉಪನ್ಯಾಸಗಳನ್ನು ಮಾಡುವುದನ್ನೂ ಹಾಗೂ ತನ್ನ ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸುವುದನ್ನೂ ಒಂದಿಷ್ಟೂ ತಪ್ಪಿಸದಂತೆ ಮುಂದುವರೆಸಿದರು. ಈ ದಾಳಿಯು ತನ್ನನ್ನು ಬೆದರಿಸಲೆಂದೇ ರೂಪಿಸಲಾದ ಸಂಚು ಎಂಬುದನ್ನು  ಸ್ಪಷ್ಟವಾಗಿ ಸಾಬೀತುಪಡಿಸಿದ ಘಟನೆಗಳು ಕೆಲವೇ ದಿನಗಳ ಹಿಂದೆ ನಡೆದಿದ್ದರೂ ಅದರಿಂದ ಕಿಂಚಿತ್ತೂ ವಿಚಲಿತನಾಗದೆ ಆನಂದ್ ಸಂದರ್ಭವನ್ನು ಎದುರಿಸಿದ್ದನ್ನು ನಾನು ಆಶರ್ಯ- ಅಭಿಮಾನಗಳಿಂದ ಗಮನಿಸುತ್ತಿದ್ದೆ. ತನ್ನ ಅನುಪಸ್ಥಿತಿಯ ಅವಧಿಯಲ್ಲಿ ತನ್ನ ವಿದ್ಯಾರ್ಥಿಗಳಿಗಾಗಲೀ ಅಥವಾ ತನ್ನ ಸಹೋದ್ಯೋಗಿಗಳಿಗಾಗಲೀ ಯಾವುದೇ ತೊಂದರೆಯಾಗಬಾರದೆಂದು ತಾನು ಶರಣಾಗುವ ಹಿಂದಿನ ರಾತ್ರಿಯವರೆಗೂ  ಆನಂದ ಕೆಲಸ ಮಾಡುತ್ತಲೇ ಇದ್ದರು. ಆದರೆ ಹೀಗೆ ಎಷ್ಟು ಕಾಲ ಆನಂದ್ ಕೆಲಸಕ್ಕೆ ಗೈರುಹಾಜರಾಗಬಹುದೆಂಬುದು ಮಾತ್ರ ಆಗ ಯಾರಿಗೂ ಗೊತ್ತಿರಲಿಲ್ಲ.
ಅಂದು ರಾತ್ರಿ ಗಡಿಯಾರದ ಮುಳ್ಳು 12 ಗಂಟೆಯನ್ನು ತಲುಪುತ್ತಿದ್ದಂತೆ ಅನಂದ್ ತನ್ನ ಬಿಳಿ ಕುರ್ತಾ-ಪೈಜಾಮ ಧರಿಸಿ ರಾಜಗೃಹದ ಸ್ಮಾರಕಕ್ಕೆ ಭೇಟಿ ನೀಡಲು ಸಿದ್ಧರಾಗಿ ನನಗಾಗಿ ಕಾಯುತ್ತಾ ನಿಂತಿದ್ದರು. ಅಲ್ಲಿಗೆ ತೆರಳಿ  ಬಾಬಾಸಾಹೇಬರ ದೇಹದ ಬೂದಿಯಿಟ್ಟಿದ್ದ ಕುಂಡದೆದುರು ತಲೆಬಾಗಿ ನಮಿಸಿ ದೀಪವನ್ನು ಹಚ್ಚಿಸುತ್ತಿರುವಾಗಲೂ ಅನಂದ್ ಮುಖದಲ್ಲಿ ಯಾವಾಗಲೂ ಇರುತ್ತಿದ್ದ ಅ ನಸುನಗೆಯು ಕಿಂಚಿತ್ತೂ ಮಾಸಿರಲಿಲ್ಲ. ನಾನೂ ಅಲ್ಲಿನ ವಿಧಿಗಳಲ್ಲಿ ಭಾಗವಹಿಸಿದ್ದರೂ ಇನ್ನು ಕೆಲವು ಗಂಟೆಗಳ ನಂತರದಲ್ಲಿ ಏನು ನಡೆಯಲಿದೆ ಎಂಬ ಚಿಂತೆಯೇ ತಲೆಯನ್ನು ತುಂಬಿಕೊಂಡಿತ್ತು.

2020ರ ಏಪ್ರಿಲ್ 14ರಂದು ನಡೆದ ಘಟನೆಗಳು ಈ ಹಿಂದಿನ ವರ್ಷಗಳಲ್ಲಿ ಇದೇ ದಿನದ ಬಗ್ಗೆ ಇದ್ದ ಎಲ್ಲಾ ಒಳ್ಳೆಯ ನೆನಪುಗಳನ್ನು ಮರೆಸಿಬಿಟ್ಟಿದೆ. ಮತ್ತು ಅ ನಂತರದ ಪ್ರತಿ ಏಪ್ರಿಲ್ 14 ಆ ದಿನ ನಾವು ಅನುಭವಿಸಿದ ಯಾತನೆಯನ್ನು ಮತ್ತು ಆ ನಂತರ ಪ್ರತಿನಿಮಿಷವೂ  ನಮ್ಮ ಜೀವನದಲ್ಲಿ ನಾವು ಅನುಭವಿಸುತ್ತಲೇ ಇರುವ ನೋವುಗಳನ್ನು ನೆನೆಪಿಸುತ್ತದೆ. ಅಂದು ಕೋರ್ಟಿನ ಆದೇಶದಂತೆ ಶರಣಾಗಲು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎನ್‌ಐಎ) ಕಚೇರಿಗೆ ಆನಂದ್ ಜೊತೆಗೆ ನಾನೂ ಹೋದೆ. ಎನ್‌ಐಎ ಆಫೀಸಿನ ಒಳಗೆ ಪ್ರವೇಶಿಸುವಾಗಲೂ ಆನಂದ್ ಕಿಂಚಿತ್ತೂ ವಿಚಲಿತರಾಗಿರಲಿಲ್ಲ. ಆನಂದ್ ಗೆ ತನ್ನ ಬಗ್ಗೆ ಚಿಂತೆ ಇರಲಿಲ್ಲ. ಅವರ ತಾಯಿಯ ಬಗ್ಗೆ ಹೆಚ್ಚು ಚಿಂತೆಯಿತ್ತು. ಅಷ್ಟು ಮಾತ್ರವಲ್ಲ. ಅವತ್ತು ಫೊನನ್ನು ಬಳಸಲು ಅವಕಾಶವಿದ್ದ ಕೊನೆಯ ನಿಮಿಷದವರೆಗೂ ತನ್ನ ಇಬ್ಬರೂ ಹೆಣ್ಣುಮಕ್ಕಳೊಂದಿಗೆ ನಿರಂತರವಾಗಿ ಮಾತಾಡುತ್ತಿದ್ದರು. ಧೈರ್ಯಗೆಡಬಾರದೆಂದೂ, ಪ್ರಾಮಾಣಿಕವಾಗಿರಬೇಕೆಂದೂ, ಉತ್ತಮ ಬದುಕನ್ನು ಬದುಕಬೇಕೆಂದೂ ಎಲ್ಲವೂ ಸರಿಹೋಗುತ್ತದೆಂದೂ ಅಳುತ್ತಲೇ ಇದ್ದ ಅವರಿಬ್ಬರಿಗೂ ಧೈರ್ಯತುಂಬುತ್ತಿದ್ದರು.

ಆದರೆ ಅದು ಇಂದಿಗೂ ಮುಂದುವರೆಯುತ್ತಿರುವ ನನ್ನ ಗಂಡನಿಗಾದ ಕ್ರೂರ ಅನ್ಯಾಯಗಳ ಹಾಗೂ ದಿನಗಳೆದಂತೆ ಸಹಿಸಲಸಾಧ್ಯವಾಗುತ್ತಿರುವ ನನ್ನ ಮತ್ತು ನನ್ನ ಮಕ್ಕಳ ಯಾತನೆಗಳ ಪ್ರಾರಂಭವಷ್ಟೆ ಆಗಿತ್ತು.
ಕೋವಿಡ್ ಸಾಂಕ್ರಾಮಿಕ
ಕೋವಿಡ್-19 ಸಾಂಕ್ರಾಮಿಕ ಕಾಲಾವಧಿಯು ಜಗತ್ತಿನಾದ್ಯಂತ ಈ ಹಿಂದೆಂದೂ ಕಂಡು ಕೇಳರಿಯದಂಥ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿತು. ನನ್ನ ಮಟ್ಟಿಗಂತೂ, ಆ ಕಾಲಾವಧಿಯು ಹಲವು ಸ್ವರೂಪಗಳ ಮತ್ತು ಊಹಿಸಲಸಾಧ್ಯವಾದಂಥ ಹೋರಾಟಗಳನ್ನು ನನ್ನ ಮುಂದೊಡ್ಡಿತು.
ನಾನೂ ಪೂರ್ತಿ ಒಬ್ಬಂಟಿಯಾಗಿದ್ದೆ. ಗಂಡ ಜೈಲಿನಲ್ಲಿ. ಹೆಣ್ಣು ಮಕ್ಕಳಿಬ್ಬರೂ ದೂರದ ಊರಿನಲ್ಲಿ. ಕೋವಿಡ್ ನಿರ್ಬಂಧಗಳಿಂದಾಗಿ ಅವರಿಬ್ಬರಿಗೂ ನಾನಿರುವ ಕಡೆ ಬರಲಾಗದ ಪರಿಸ್ಥಿತಿ. ಆನಂದ್ ಶರಣಾದಾಗಲಿಂದಲೂ ನಾನು ಹೆಚ್ಚು ಕಡಿಮೆ ಒಬ್ಬಂಟಿಯಾಗಿಯೇ ಸಂದರ್ಭವನ್ನು ಎದುರಿಸುತ್ತಿದ್ದೇನೆ. ಹಲವಾರು ಬಾರಿ ಭೀತಿ ಹುಟ್ಟಿಸುವಂಥ ಆಲೋಚನೆಗಳೂ ತಲೆಯನ್ನು ಕೆಡಿಸುತ್ತಿದ್ದರೂ, ಅನಂದ್ ಎದುರಿಸುತ್ತಿರುವ ಅನ್ಯಾಯಯುತವಾದ ಯಾತನೆಗಳನ್ನು ಆದಷ್ಟು ಬೇಗ ಕೊನೆಗಾಣಿಸಲು ಏನೊ ಮಾಡಬಹುದೋ ಅವೆಲ್ಲವನ್ನೂ ಒಂಟಿಯಾಗಿಯೇ ಮಾಡಲು ಯತ್ನಿಸುತ್ತಿದ್ದೇನೆ.

ಸಾಮಾಜಿಕ ಅಂತರ, ಲಾಕ್‌ಡೌನುಗಳ ನಂತರವೂ ಕೋವಿಡ್‌ನ ಹೊಸ ಅವತಾರಗಳು ಭಾರತವನ್ನು  ಕಂಗಾಲುಗೊಳಿಸಿದ್ದ ಹೊತ್ತಿನಲ್ಲಿ ಟಿವಿಯಲ್ಲಿ ಬರುವ ಸುದ್ದಿಗಳನ್ನು ನೋಡುವುದು ಕಷ್ಟಕರವಾಗಿಬಿಟ್ಟಿತ್ತು. ಇವೆಲ್ಲದರ ನಡುವೆ ಆನಂದ್ ಜೈಲಿನಲ್ಲಿದ್ದರು-ತನ್ನ ಸಾಮರ್ಥ್ಯಕ್ಕಿಂತ ಮೂರುಪಟ್ಟು ಹೆಚ್ಚು ಜನರನ್ನು ತುಂಬಿಕೊಂಡು ಕಿಕ್ಕಿರಿದಿದ್ದ ಜಾಗದಲ್ಲಿ! ಕೋವಿಡ್ ಕಾರಣದಿಂದ ಸಾಮಾಜಿಕ ಅಂತರಪಾಲಿಸುತ್ತಾ ಒಂಟಿಯಾಗುವುದರಿಂದ ಅವರ ಮಾನಸಿಕ ಆರೋಗ್ಯದ ಮೇಲಾಗಬಹುದಾದ ಪರಿಣಾಮಗಳ ಬಗ್ಗೆ ಜನರು ಮಾತನಾಡುತ್ತಿರುವಾಗ ನಾನು ಒಂಟಿಯಾಗಿ ಕುಳಿತು ಆನಂದರ ಆರೋಗ್ಯದ ಬಗ್ಗೆ ಮತ್ತು ನಮ್ಮ ಪರಿಸ್ಥಿತಿ ಹೀಗೆ ಆಗಿರುವ ಬಗ್ಗೆ ಯೋಚಿಸುತ್ತಿದೆ. ಅನಂದ್ ಗೆ ಅಸ್ತಮಾ ಇರುವುದರಿಂದ ಆಗಾಗ ತೀವ್ರವಾದ ಉಸಿರಾಟದ ಸಮಸ್ಯೆಯಿಂದ ನರಳುತ್ತಿರುತ್ತಾರೆ. ಒಂದು ವೇಳೆ ಅವರಿಗೆ ಕೋವಿಡ್ ತಗುಲಿದರೆ! ಆ ಯೋಚನೆ ಬಂದರೆ ಸಾಕು, ನಾನು ನಡುಗಿಹೋಗುತ್ತಿದ್ದೆ.
ಕೋವಿಡ್ ಸಾಂಕ್ರಾಮಿಕ ಹರಡುತ್ತಿರುವ ಭೀಕರ ಸಂದರ್ಭದಲ್ಲ್ಲಿ ತಮ್ಮ ಆಪ್ತೇಷ್ಟರಿಂದ ದೂರವಾಗಿ ಒಬ್ಬಂಟಿಯಾಗಿ ಜೈಲಿನೊಳಗೆ ಇರುವವರ ಮಾನಸಿಕ ಆರೋಗ್ಯದ ಬಗ್ಗೆ ಯಾರೂ ಚರ್ಚಿಸುವುದಿಲ್ಲ. ಈ ರಾಷ್ಟ್ರೀಯ ಲಾಕ್‌ಡೌನ್‌ಗಳು ಜೈಲಿನೊಳಗಿರುವವರ ಕುಟುಂಬಸ್ಥರಿಗೆ ವ್ಯವಸ್ಥೆಯು ಒದಗಿಸಿದ್ದ ವಾರಕ್ಕೆ ಒಮ್ಮೆ ಮುಲಾಖಾತ್- ಭೇಟಿ ಯೆಂಬ ಸಣ್ಣ ಅವಕಾಶವನ್ನೂ ಇಲ್ಲದಂತೆ ಮಾಡಿತು. ಅದರ ಬದಲಿಗೆ ಪ್ರತಿವಾರ ಹತ್ತುನಿಮಿಷಗಳ ಅವಧಿಯ ವಾಟ್ಸಾಪ್ ವಿಡಿಯೋ ಕರೆಯ ಅವಕಾಶವನ್ನು ಒದಗಿಸಲಾಯಿತು.

ಹೀಗಾಗಿ ನಾನು ನನ್ನ ಫ಼ೋನಿನ ಕರೆಗಂಟೆಯನ್ನು  ಯಾವಾಗಲೂ ಅತ್ಯಧಿಕ ವಾಲ್ಯುಮಿನಲ್ಲಿ ಇರುವಂತೆ ನೋಡಿಕೊಳ್ಳುತ್ತಿದ್ದೆ. ಹಾಗೂ ನಮ್ಮ ವೈ-ಫ಼ೈ ಮೋಡೆಮ್ಮು ಒಳ್ಳೆಯ ಕನೆಕ್ಟಿವಿಟಿ ಇದೆ ಎಂದು ತೋರಿಸುತ್ತಿದೆಯೇ ಎಂದು ಪದೇಪದೇ ಪರಿಶೀಲಿಸುತ್ತಿದ್ದೆ. ಆನಂದ್ ಜೊತೆ ಮಾತನಾಡುವ ಅವಕಾಶವನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಲು ನಾನು ಸಿದ್ಧವಿರಲಿಲ್ಲ.

ನಿಜ ಹೇಳಬೇಕೆಂದರೆ, ನನ್ನ ದೈನಂದಿನ ಬದುಕೆಲ್ಲವೂ ಈ ಪೂರ್ವನಿಗದಿಯಾಗದ ವಾರದ ಕರೆಗಳ ಸುತ್ತಲೇ ಗಿರಕಿಹೊಡೆಯುತ್ತಿತ್ತು. ಆ ನಂತರ ನನ್ನ ಇಬ್ಬರೂ ಹೆಣ್ಣು ಮಕ್ಕಳಿಗೆ ಅವರ ಅಪ್ಪನ ಜೊತೆ ಮಾತಾಡಿದ್ದನ್ನು ವರದಿ ಮಾಡುವುದು ವಾರದ ರಿವಾಜೇ ಆಗಿಬಿಟ್ಟಿತು. ಏಕೆಂದರೆ ಆನಂದ್ ಅವರಿಬ್ಬರ ಫೊನುಗಳಿಗೆ ಕರೆ ಮಾಡುವಂತಿರಲಿಲ್ಲ.
(ಅಂಬೇಡ್ಕರ್ ಪ್ರತಿಮೆಯೆದುರು ಆನಂದ್ ತೇಲ್ತುಂಬ್ಡೆ, ರಮಾ ಅಂಬೇಡ್ಕರ್ ದಂಪತಿ)

ಒಂದು ಸರಳ ವಿಡಿಯೋ ಕಾಲ್ ಮಾಡುವುದನ್ನು ಐಷಾರಾಮಿ ಸೌಲಭ್ಯ ಎಂದು ಪರಿಗಣಿಸುವುದಾದರೆ ಅದು ನನಗೆ ಮಾತ್ರ ಲಭ್ಯವಿತ್ತು. ಉಳಿದ ಆಪ್ತ ಸಂಬಂಧಿಗಳು ಕೇವಲ ಪತ್ರದ ಮೂಲಕ ಸಂಪರ್ಕಿಸಬಹುದಿತ್ತು. ಆದರೆ ನಾವು ಕಳಿಸಿದ ಪತ್ರಗಳು ಆನಂದನ್ನು ತಲುಪುವುದು ತುಂಬಾ ತಡವಾಗುತ್ತಿತ್ತು. ಏಕೆಂದರೆ ಜೈಲಿನ ಅಧಿಕಾರಿಗಳು ಆನಂದ್ ಅವರ ಎಲ್ಲಾ ಖಾಸಗಿ ಪತ್ರಗಳನ್ನು ಕಡ್ಡಾಯವಾಗಿ ಸೆನ್ಸಾರ್ ಮಾಡದ ಹೊರತು ಕೊಡುತ್ತಿರಲಿಲ್ಲ. ಆದರೆ ವ್ಯವಸ್ಥೆ ಒದಗಿಸಿರುವ ಈ ಸಣ್ಣ ಕರುಣೆಯೂ ಬಗ್ಗೆಯೂ ಇದ್ದಿದ್ದರಲ್ಲಿ ತೃಪ್ತಿಪಟ್ಟುಕೊಳ್ಳುವಂಥಾ ಪರಿಸ್ಥಿತಿಯಲ್ಲಿ ನಾವಿದ್ದೆವು.

ತಮ್ಮ ಕೆಲಸದ ಕಾರಣಗಳಿಂದಾಗಿ ಆನಂದ್ ಹೆಚ್ಚು ಪ್ರವಾಸದಲ್ಲಿರುತ್ತಿದ್ದರು. ಆದರೆ ಅವರು ಎಲ್ಲಿಗೇ ಹೋದರೂ ದಿನಕ್ಕೊಮ್ಮೆಯಾದರೂ ಕರೆ ಮಾಡಿ ನಮ್ಮೆಲ್ಲರನ್ನೂ ವಿಚಾರಿಸಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಅದರಲ್ಲೂ, ಮಕ್ಕಳ ಪರೀಕ್ಷಾ ಸಮಯದಲ್ಲಂತೂ ಎಲ್ಲಿದ್ದರೂ ಕರೆ ಮಾಡಿ ಶುಭಕೋರುವುದನ್ನು ತಪ್ಪಿಸುತ್ತಿರಲಿಲ್ಲ. ಅದು ಆನಂದ್ ಗೆ  ಮಕ್ಕಳ ಜೊತೆಗಿದ್ದ ಸಂಬಂಧ. ಇಂಥಾ ಆನಂದ್  ಕಳೆದ ಎರಡು ವರ್ಷಗಳಿಂದ ಒಮ್ಮೆಯೂ ಮಕ್ಕಳ ಜೊತೆ ಮಾತನಾಡಿಲ್ಲ.
 
ಆನಂದ್ ಈಗ ಕರಾಳವಾದ ಯುಎಪಿಎ ಕಾಯಿದೆಯಡಿ ಸುಳ್ಳು ಆರೋಪಗಳಡಿ ಬಂಧಿಸಲ್ಪಟ್ಟಿರುವ ಒಬ್ಬ ವಿಚಾರಣಾಧೀನ ಖೈದಿ. ಅವರಿಗೆ ಈಗ 72 ವರ್ಷ. ಈ ವಯಸ್ಸಿನವರು ಸಾಮಾನ್ಯವಾಗಿ ತಮ್ಮ ಮಕ್ಕಳ ಆರೈಕೆಯಲ್ಲಿರುತ್ತಾರೆ. ಮತ್ತು ತಮ್ಮ ಸುತ್ತಮುತ್ತ ಕುಟುಂಬ ವರ್ಗದವರು ಇರಬೇಕೆಂದು ಬಯಸುತ್ತಾರೆ. ಆದರೆ ಈ ವಯಸ್ಸಿನಲ್ಲಿ ನಾನು ಮತ್ತು ಆನಂದ್ ನಡೆಸುತ್ತಿರುವ ಹೋರಾಟಗಳೇ ಬೇರೆ! ಈ ದುಸ್ಥಿತಿ ಒದಗಿ ಬಂದದ್ದು ಎನ್‌ಐಎ ಕೋರ್ಟಿನೆದುರು ಪೊಲೀಸರು ಮುಂದಿಟ್ಟಿರುವ ಕೇವಲ ಒಂದು ಸುಳ್ಳು ಕಥೆಯ ಕಾರಣದಿಂದಾಗಿ.. ಅದರ ಸತ್ಯಾಸತ್ಯತೆಗಳ ವಿಚಾರಣೆಯೇ ಇನ್ನು ಪ್ರಾರಂಭವಾಗಿಲ್ಲ.

ವಾರದ ಮುಲಾಖಾತ್

ಕೋವಿಡ್ ಸಾಂಕ್ರಾಮಿಕವು ಸ್ವಲ್ಪ ಕಡಿಮೆಯಾದ ನಂತರ ವಾರದ ಮುಲಾಖಾತ್ (ಭೇಟಿಗಳು)ಮತ್ತೆ ಪ್ರಾರಂಭವಾದವು. ಇದು ವಾರಕ್ಕೊಮ್ಮೆ  ನಡೆಯುತ್ತವೆ ಮತ್ತು ಹತ್ತು ನಿಮಿಷಗಳ ಅವಕಾಶವಿರುತ್ತದೆ. ನಾನು ಪ್ರತಿವಾರ ನನ್ನ ಮನೆಯಿಂದ ಒಂದು ಗಂಟೆಯ ಕಾಲ ಪ್ರಯಾಣ ಮಾಡಿ ಬಂದು ಸಾಲಿನಲ್ಲ್ಲಿ ನಿಂತು ರಿಜಿಸ್ಟರಿನಲ್ಲಿ ಮುಲಾಖಾತ್ ದಾಖಲಿಸಿ ನನ್ನ ಸರದಿಗಾಗಿ ಕಾಯುತ್ತಾ ನಿಲ್ಲುತ್ತೇನೆ. ಈ ಕಾಯುವಿಕೆ ಕೆಲವೊಮ್ಮೆ ಒಂದೆರಡು ಗಂಟೆಗಳಷ್ಟು ದೀರ್ಘವೂ ಆಗಬಹುದು. ಇವೆಲ್ಲದರ ನಂತರ ದೊರೆಯುವ ಮುಲಖಾತ್ ನಲ್ಲಿ ಧೂಳು ತುಂಬಿದ ಗಾಜಿನ ಪರದೆಯ ಅ ಬದಿಯಲ್ಲಿರುವ ಆನಂದ್ ರನ್ನು  ನೋಡಿ ಕಣ್ಣುತುಂಬಿಕೊಳ್ಳುತ್ತೇನೆ. ಇಂಟರ್‌ಕಾಮ್ ಮೂಲಕ ಕೇಳಿಬರುವ ಅವರ ಮಾತಿನಿಂದ ಕಿವಿತುಂಬಿಕೊಳ್ಳುತ್ತೇನೆ. ಸುತ್ತಮುತ್ತಲೂ ಇತರ ಜೈಲುವಾಸಿಗಳು ತಮ್ಮ ಸಂಬಂಧಿಕರ ಜೊತೆಗೋ, ಜೈಲು ಸಿಬ್ಬಂದಿಗಳ ಜೊತೆಗೋ ಜೋರು ಧ್ವನಿಯಲ್ಲಿ ನಡೆಸುತ್ತಿರುವ ಸಂಭಾಷಣೆಗಳ ಗದ್ದಲದಲ್ಲಿ ನಾವಿಬ್ಬರೂ ನಮ್ಮ ಈ ಇಳಿವಯಸ್ಸಿನಲ್ಲಿ ಇಳಿ ಧ್ವನಿಯಲ್ಲಿ ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ಮಾತಾಡಲು ಯತ್ನಿಸುತ್ತೇವೆ. ಆನಂದ್ ಕೂಡಾ ವಾರದ ಈ ಮುಲಾಖಾತಿನ ದಿನಕ್ಕಾಗಿ, ಬಲವಂತವಾಗಿ ತನ್ನಿಂದ ದೂರಗೊಳಿಸಿರುವ ಹೊರ ಜಗತ್ತಿನ ಸುದ್ದಿಗಳನ್ನು ಹೊತ್ತು ತರುವ ಆಪ್ತ ಮುಖವೊಂದರ ಬರುವಿಗಾಗಿ  ಕಾತರದಿಂದ ಕಾಯುತ್ತಾರೆ.  

ಎಲ್ಲರಂತೆ ನಾನೂ ಕೂಡ ಸಿನಿಮಾಗಳನ್ನು ನೋಡಿಯೇ ಜೈಲು ಮುಲಾಖಾತ್ ಬಗ್ಗೆ ಒಂದು ಚಿತ್ರಣವನ್ನು ಕಲ್ಪಿಸಿಕೊಂಡಿದ್ದೆ. ಆದರೆ ಸಿನಿಮಾದಲ್ಲಿ ತೋರುವ ಮುಲಾಖಾತುಗಳು ಗಾಜಿನ ಗೋಡೆಯ ಎರಡೂ ಬದಿಯಲ್ಲಿರುವರು ಅನುಭವಿಸುವ ಯಾತನೆ ಮತ್ತು ಅಪಮಾನಗಳನ್ನು ತೋರಿಸುವುದಿಲ್ಲ.

ಆ ಮುಲಾಖಾತುಗಳಲ್ಲಿ ನಾವು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ಮಾತನಾಡುವಂತಿಲ್ಲ. ಅಥವಾ ಒಬ್ಬರನ್ನೊಬ್ಬರು ತಬ್ಬಿಕೊಂಡು ಸಮಾಧಾನಿಸುವಂತಿಲ್ಲ. ಆದರೆ ಈಗ ನಮ್ಮ ಭೇಟಿಯ ಆ ಅಮೂಲ್ಯ ಹತ್ತು ನಿಮಿಷಗಳ ಅವಧಿಯಲ್ಲಿ ಯಾವ ದುಃಖವನ್ನು ತೋರಿಸಿಕೊಳ್ಳದಂತೆ ನಿಭಾಯಿಸುವಲ್ಲಿ  ಇಬ್ಬರೂ ಪರಿಣಿತಿಯನ್ನು ಪಡೆದುಕೊಂಡಿದ್ದೇವೆ.
 
ಆನಂದ್ ಮತ್ತು ನಾನು 2020ರ ಮಾರ್ಚ್‌ವರೆಗೂ ಗೌರವಯುತವಾದ ಹಾಗೂ ಸುಖಕರವಾದ ಜೀವನವನ್ನೇ ನಡೆಸಿದ್ದೆವು. ಆದರೆ ಮುಂದೊಮ್ಮೆ ಹೀಗೆ ಪರಸ್ಪರ ಭೇಟಿಯಾಗುವ ದಿನಗಳು ಬರುತ್ತವೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ.

ನನ್ನ ಮಕ್ಕಳ ಬಗ್ಗೆ ಹೇಳುವುದಾದರೆ ಅವರಿಬ್ಬರೂ ಪ್ರತಿವಾರವೂ ಪತ್ರಗಳನ್ನು ಬರೆಯುತ್ತಾರೆ. ಮತ್ತು ಆನಂದ್ ಪ್ರತಿವಾರವೂ ತಪ್ಪದಂತೆ ಅವರಿಗೆ ಉತ್ತರವನ್ನು ಬರೆಯುತ್ತಾರೆ. 2020ರ ಏಪ್ರಿಲ್ 14 ರಂದು ಮಾಡಿದ ಕೊನೆಯ ಕರೆಯಲ್ಲಿ ಯಾವ ರೀತಿಯಲ್ಲಿ ಅವರಿಗೆ ಶಕ್ತಿ ಮತ್ತು ಸಾಮಾಧಾನಗಳನ್ನು ತುಂಬಿದರೋ ಅದೇ ರೀತಿಯಲ್ಲೇ ಪ್ರತಿಪತ್ರದಲ್ಲೂ ಸಮಾಧಾನ ಮಾಡುತ್ತಾರೆ.

ಆನಂದ್ ಮತ್ತು ನನಗೆ ನಮ್ಮಿಬ್ಬರ ಜೀವನವನ್ನು ಇದ್ದಕ್ಕಿದ್ದ ಹಾಗೆ ಅಮಾನತ್ತುಗೊಳಿಸಲಾಗಿದೆಯೆಂದು ಅನಿಸುತ್ತಿರುತ್ತದೆ. ಕೆಲವೊಮ್ಮೆ ಇವೆಲ್ಲಾ ಕೇವಲ ಕನಸಿರಬೇಕೆಂದೂ, ಎಂದಿನಂತೆ ಬೆಳಗಾಗೆದ್ದು ಅನಂದ್ ಬಾಲ್ಕನಿಯಲ್ಲಿ ನನ್ನ ಜೊತೆ ಟೀ ಕುಡಿಯುತ್ತಾ, ಪತ್ರಿಕೆ ಓದುತ್ತಾ, ಎಂದಿನ ಲಘು ಹರಟೆ ಮತ್ತು ಹುಸಿ ಲೇವಡಿಗಳಿಗೆ ಜೊತೆಯಾಗುತ್ತಾರೆಂದೂ ಎದುರುನೋಡುತ್ತೇನೆ.
 
ಆದರೆ ಹಾಗಾಗುತ್ತಿಲ್ಲ.
 
ದಿನಗಳು ಉರುಳುತ್ತಿವೆ. ಕೋರ್ಟಿನಲ್ಲಿ ಪ್ರತಿ ಹಿಯರಿಂಗುಗಳು ಮತ್ತೊಂದು ಹಿಯರಿಂಗುಗಳಿಗೆ ಮುಂದೂಡಲ್ಪಡುತ್ತಿವೆ.  ನಮ್ಮ ಇಂದಿನ ಈ ಸ್ಥಿತಿಗೆ ಕಾರಣವಾಗಿರುವ ಅನ್ಯಾಯಗಳನ್ನು ಯಾರೂ ಅರ್ಥಮಾಡಿಕೊಳ್ಳುವುದೇ ಇಲ್ಲವೇನೋ ಎಂದೆನಿಸುತ್ತದೆ. ಪ್ರಾಯಶಃ ಇಂಥದ್ದು  ಯಾರಿಗೆ ಬೇಕಾದರೂ ಆಗಬಹುದು ಎಂದು ಅವರು ಅರ್ಥಮಾಡಿಕೊಳ್ಳುತ್ತಿಲ್ಲವೇನೋ?

ಕೃಪೆ: ವಾರ್ತಾಭಾರತಿ

Advertisement
Advertisement
Recent Posts
Advertisement