Advertisement

ಬೊಮ್ಮಾಯಿಯವರೆ, ದೇವರಿಂದಲೂ 30%ಕಮಿಷನ್ ಕೇಳುವ ನಿಮ್ಮದೆಂತಹ ಧರ್ಮ ರಕ್ಷಣೆ? ದೇವರಿಗೆ 10%ಡಿಸ್ಕೌಂಟ್ ಯಾಕೆ ಮಾಡುತ್ತೀರಿ? ಅದನ್ನೂ ತಿಂದುಬಿಡಿ!: ಸಿದ್ದರಾಮಯ್ಯ

Advertisement
ಕರ್ನಾಟಕದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾಮಗಾರಿಯಲ್ಲಿ 40% ಕಮಿಷನ್ ಪಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಕೇಂದ್ರ ಸರ್ಕಾರಕ್ಕೆ ದೂರು ನೀಡಿದ ಬೆನ್ನಿಗೆಯೇ ಬಿಜೆಪಿಯ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಬೆಳಗಾವಿಯ ಸಂತೋಷ್ ಪಾಟೀಲ್ ತಾನು ಮಾಡಿದ 4ಕೋಟಿ ರೂಪಾಯಿ ಕಾಮಗಾರಿಯ ಬಿಲ್ಲನ್ನು ತಡೆಹಿಡಿದಿರುವ ಸಚಿವ ಈಶ್ವರಪ್ಪ ನವರು 40% ಕಮಿಷನ್ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಆ ನಂತರ ಉಡುಪಿಯ ವಸತಿಗ್ರಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ನಂತರ ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು ಮಠಗಳಿಗೆ ಬಿಡುಗಡೆ ಮಾಡುವ ಅನುದಾನದಲ್ಲೂ ಕರ್ನಾಟಕದ ಸರ್ಕಾರ 30% ಕಮಿಷನ್ ಪಡೆಯುತ್ತಿರುವುದಾಗಿ ಅಪಾದಿಸಿದ್ದರು.

ಈ ನಡುವೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ನಾಯಕರುಗಳು ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿದ ಪರಿಣಾಮ ಈಶ್ವರಪ್ಪನವರು "ಪಕ್ಷಕ್ಕಾಗುವ ಮುಜುಗರ ತಪ್ಪಿಸಲು ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೆನೆ" ಎಂದು ಘೋಷಿಸಿ ರಾಜೀನಾಮೆ ನೀಡಿದ್ದರು. ಆದರೆ ಕಾಂಗ್ರೆಸ್ ನಾಯಕರು ಈಶ್ವರಪ್ಪ ಬಂಧನ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ಮುಂದುವರಿಸಿರುವ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇದೀಗ "ಕಾಂಗ್ರೆಸ್ ಅವಧಿಯ ಹಗರಣಗಳನ್ನು ಜನತೆಯ ಮುಂದಿಡುತ್ತೇವೆ" ಎಂದು ಹೇಳಿಕೆ ನೀಡಿದ್ದರು.

ಆ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ನವರು "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನನ್ನ ಬಳಿ ಸಾಕ್ಷಿಯಿದೆ ಎಂದು ಖಾಲಿ ಬುಟ್ಟಿಯ ಮುಂದೆ ನಿಂತು ಪುಂಗಿ ಊದಬೇಡಿ, ದಾಖಲೆಗಳನ್ನು ಬಿಡುಗಡೆ ಮಾಡಿ‌ ಮಾತನಾಡಿ. ಬುಟ್ಟಿಯ ಒಳಗಿರುವುದು ನಾಗರ ಹಾವೋ, ಹಾವಿನಪುರದ ಹಾವೋ ನೋಡಿಯೇ ಬಿಡೋಣ" ಎಂದು ಸವಾಲೆಸೆದಿದ್ದಾರೆ.

"ಧರ್ಮ ರಕ್ಷಕರು ಎಂದು ತಮ್ಮನ್ನು ಕರೆದುಕೊಳ್ಳುವ ಬಿಜೆಪಿಯವರು ಮಠ, ಮಂದಿರಗಳ ಅನುದಾನವನ್ನೂ ಬಿಡದೆ 30% ಕಮಿಷನ್ ತಿಂದು ತೇಗುತ್ತಿರುವುದು ನಾಚಿಕೆಗೇಡು. ಅಭಿವೃದ್ಧಿ ಕಾಮಗಾರಿಯಲ್ಲಿ 40%ಕಮಿಷನ್ ಹೊಡೆವ ನೀವು ದೇವರಿಗೆ 10% ಡಿಸ್ಕೌಂಟ್ ಯಾಕೆ ಮಾಡುತ್ತೀರಿ? ಅದನ್ನೂ ತಿಂದು ಬಿಡಿ. ದೇವರಿಂದಲೂ ಕಮಿಷನ್ ಕೇಳುವ ನಿಮ್ಮದು ಯಾವ ರೀತಿಯ ಧರ್ಮ ರಕ್ಷಣೆ?" ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
Advertisement
Advertisement
Recent Posts
Advertisement