Advertisement

ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವು ಕೂಡ ದ್ರಾವಿಡರೇ. ನಾನು ದ್ರಾವಿಡ ಮೂಲ ಉಳಿಸಿಕೊಂಡಿದ್ದೇನೆ‌. ನೀವು ಅಧಿಕಾರದ ದುರಾಸೆಯಿಂದ ಮೂಲವನ್ನು ತೊರೆದಿದ್ದೀರಿ: ಸಿದ್ದರಾಮಯ್ಯ

Advertisement
"ಬಸವರಾಜ ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವೂ ದ್ರಾವಿಡರೇ ಆಗಿದ್ದೀರಿ. ಈ ಸ್ಪಷ್ಟತೆ ನನಗಿದೆ. ನಾನು ದ್ರಾವಿಡ ಮೂಲವನ್ನು ಉಳಿಸಿಕೊಂಡಿದ್ದೇನೆ, ನೀವು ಮಾತ್ರ ಅಧಿಕಾರದ ದುರಾಸೆಯಿಂದ ಮೂಲವನ್ನು ತೊರೆದು ಪಕ್ಷಾಂತರ ಮಾಡಿದ್ದೀರಿ. ಬೇಗ ಘರ್ ವಾಪ್ಸಿ ಆಗಿಬಿಡಿ" ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಇಂದು " ಸಿದ್ದರಾಮಯ್ಯ ಆರ್ಯರೋ, ದ್ರಾವಿಡರೋ ಎಂದು ಸ್ಪಷ್ಟಪಡಿಸಲಿ" ಎಂದು ಬಸವರಾಜ ಬೊಮ್ಮಾಯಿಯವರು ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

"ಆರೆಸ್ಸೆಸ್ ನೊಳಗಿನ ಆರ್ಯರು ಭಾರತೀಯ ಮೂಲದವರಲ್ಲ, ಅವರು ಮದ್ಯೆ ಪ್ರಾಚ್ಯ ಮೂಲದವರು. ಅವರು ಅಲ್ಲಿಂದ ಭಾರತಕ್ಕೆ ವಲಸೆ ಬಂದವರು. ನಾವು ದ್ರಾವಿಡರು ಈ ನೆಲದ ಮೂಲ ನಿವಾಸಿಗಳು" ಎಂದು ಎರಡು ದಿನಗಳ ಹಿಂದೆ ಸಿದ್ದರಾಮಯ್ಯ ನವರು ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಆರೆಸ್ಸೆಸ್ ನಾಯಕರುಗಳ ಪರವಾಗಿ ಬಸವರಾಜ ಬೊಮ್ಮಾಯಿಯವರು ಮೇಲಿನ ಪ್ರಶ್ನೆ ಕೇಳಿದ್ದರು.

ನೆಹರೂ ಅವರನ್ನು ಮೋದಿಗೆ ಹೋಲಿಸಲು ಸಾಧ್ಯವೇ ಇಲ್ಲ ಎಂದು ಮತ್ತೆ ಮತ್ತೆ ಹೇಳುತ್ತೇನೆ. ಇಬ್ಬರು ನಾಯಕರ ಸಾಧನೆ ಬಗ್ಗೆ ಮುಕ್ತ ಚರ್ಚೆಗೆ ನೀವು ಸಿದ್ಧ ಇದ್ದರೆ ನಾನೂ ಸಿದ್ಧನಿದ್ದೇನೆ. ನನ್ನ ಮಾತಿಗೆ ನೀವು ಖರೀದಿಸಿಟ್ಟಿರುವ ‘’ಟ್ರೋಲ್ ಗ್ಯಾಂಗ್’’ ಮೂಲಕ ಉತ್ತರ ಕೊಡಿಸಲು ಹೋಗಬೇಡಿ.
‘’ಭಾರತ ಮಾತೆ ತನ್ನ ಭಕ್ತನನ್ನು ಕಳೆದುಕೊಂಡಿದ್ದಾಳೆ, ಶಾಂತಿ ತನ್ನ ರಕ್ಷಕನನ್ನು ಕಳೆದುಕೊಂಡು ಅನಾಥಳಾಗಿದ್ದಾಳೆ, ನಿರಾಶ್ರಿತರು ತನ್ನ ಆಶ್ರಯದಾತನನ್ನು, ಸಾಮಾನ್ಯ ಜನ ತಮ್ಮ ಕಣ್ಮಣಿಯನ್ನು ಕಳೆದುಕೊಂಡಿದ್ದಾರೆ.. ಪರದೆ ಬಿದ್ದಿದೆ’’ -ಹೀಗೆಂದು ನೆಹರೂ ಸಾವಿಗೆ ಎ.ಬಿ.ವಾಜಪೇಯಿ ಕಂಬನಿ ಮಿಡಿದಿದ್ದನ್ನು ಹಿರಿಯ ಬಿಜೆಪಿ ನಾಯಕರಿಂದ ಕೇಳಿ ತಿಳಿದುಕೊಳ್ಳಿ ಎಂದು ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಹೇಳಿದ್ದಾರೆ.

‘ದೇಶ ವಿಭಜನೆಯ ಗಾಯಕ್ಕೆ ಸೌಹಾರ್ದತೆಯ ಮುಲಾಮು ಹಚ್ಚಿದವರು ಜವಾಹರಲಾಲ ನೆಹರೂ. ಒಣಗಿದ ಗಾಯಗಳನ್ನು ಕೋಮುದ್ವೇಷದ ಮೂಲಕ ಕೆದಕುತ್ತಾ ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತಿರುವವರು ನಿಮ್ಮ ನರೇಂದ್ರ ಮೋದಿ ಅವರು. ಭಾಕ್ರಾ ನಂಗಲ್, ಹಿರಾಕುಡ್, ದಾಮೋದರ ಕಣಿವೆ ಯೋಜನೆಗಳ ಮೂಲಕ ಭಾರತವೆಂಬ ಆಧುನಿಕ ದೇವಾಲಯವನ್ನು ನಿರ್ಮಾಣ ಮಾಡಿದ್ದ ಜವಾಹರಲಾಲ ನೆಹರೂ ಅಭಿವೃದ್ದಿಯ ಮುನ್ನೋಟದಿಂದ ದೇಶ ಕಟ್ಟಿದ್ದರು. ಅವರಿಗೆ ಕಟ್ಟುವುದಷ್ಟೇ ಗೊತ್ತಿತ್ತು, ನಿಮ್ಮ ನರೇಂದ್ರ ಮೋದಿ ಅವರು ಕೆಡಹುವುದನ್ನಷ್ಟೇ ಕಲಿತಿದ್ದಾರೆ ಎಂದು ಹೇಳಿದರು.

ಎಸ್.ಬಿ.ಐ, ಎಲ್.ಐ.ಸಿ ಯಿಂದ ಹಿಡಿದು ಭಾರತೀಯ ತೈಲ ನಿಗಮ, ಏರ್ ಇಂಡಿಯಾದ ವರೆಗೆ ನೂರಾರು ಸರ್ಕಾರಿ ಸಂಸ್ಥೆಗಳನ್ನು ಕಟ್ಟಿದವರು ಪಂಡಿತ ಜವಾಹರಲಾಲ ನೆಹರೂ. ಅದನ್ನು ಮಾರಾಟಕ್ಕಿಟ್ಟವರು ಯಾರೆಂದು ಬಿಡಿಸಿ ಹೇಳಬೇಕೇ? ಉಕ್ಕಿನ ಕಾರ್ಖಾನೆ, ರೈಲ್ವೆ ಎಂಜಿನ್-ಕೋಚ್ ನಿರ್ಮಾಣ ಘಟಕಗಳು, ಯುದ್ಧ ವಿಮಾನ-ಟ್ಯಾಂಕ್ ಗಳು, ಉಷ್ಣವಿದ್ಯುತ್ ಉತ್ಪಾದನಾ ಸಲಕರಣೆಗಳು ಹೀಗೆ ಸರ್ಕಾರಿ ಸ್ವಾಮ್ಯದಲ್ಲಿ ಸಾಲು ಸಾಲು ಉದ್ಯಮಗಳನ್ನು ಕಟ್ಟಿ ಬೆಳೆಸಿದ್ದವರು ಜವಾಹರಲಾಲ ನೆಹರೂ. ಮೋದಿಯವರು ಕಟ್ಟಿದೆಷ್ಟು, ಕೆಡವಿದೆಷ್ಟು ಎಂದವರು ವಿಶ್ಲೇಷಿಸಿದ್ದಾರೆ.

ಆಧುನಿಕ ಸಂಶೋಧನಾ ಸಂಸ್ಥೆಗಳ ಸ್ಥಾಪನೆ ಮೂಲಕ ಸಂವಿಧಾನದ ಆಶಯವಾದ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಶ್ರಮಿಸಿದವರು ಪಂಡಿತ ನೆಹರೂ. ಪ್ಲಾಸ್ಟಿಕ್ ಸರ್ಜರಿ, ಚರಂಡಿ ನೀರಿನಿಂದ ಗ್ಯಾಸ್, ಪೆನ್ ಡ್ರೈವ್ ಗಳ ಹೇಳಿಕೆಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೀಡಾದವರು ಯಾರೆಂದು ನಿಮಗೆ ಗೊತ್ತಿಲ್ಲವೇ? ಎಂದವರು ಪ್ರಶ್ನಿಸಿದ್ದಾರೆ.

ಬೊಮ್ಮಾಯಿವರೇ, ಭಾರತ-ಚೀನಾ ಗಡಿಪ್ರದೇಶದ ಬೆಳವಣಿಗೆ ಬಗ್ಗೆ ಸರಿಯಾದ ಮಾಹಿತಿ ತರಿಸಿಕೊಳ್ಳಿ. ಇತಿಹಾಸದ ವ್ಯಸನದಲ್ಲಿ ಮೈಮರೆಯಬೇಡಿ. ವರ್ಷದ ಹಿಂದೆ ಚೀನಾ ದೇಶದ ಎದುರು ಭಾರತ ಮಂಡಿ ಊರುವಂತೆ ಮಾಡಿ ಭಾರತೀಯರು ತಲೆ ತಗ್ಗಿಸುವಂತೆ ಮಾಡಿದ್ದು ಯಾರೆಂದು ನಿಮಗೆ ಗೊತ್ತಿಲ್ಲವೇ?
ಭಾರತ ಚೀನಾ ಗಡಿಯನ್ನು ಆ ದೇಶದ ಬೇಡಿಕೆಯಂತೆ 1959ರ ಗಡಿರೇಖೆಗೆ ಒಪ್ಪಿಕೊಂಡು ರಾಜಿ ಮಾಡಿಕೊಂಡಿದ್ದು ಇತ್ತೀಚಿನ ಇತಿಹಾಸ. ಗಾಲ್ವಾನ್ ಕಣಿವೆಯಲ್ಲಿ ನಮ್ಮ ಸೈನಿಕರನ್ನು ಲಾಠಿ, ದೊಣ್ಣೆಗಳಿಂದ ಕಾದಾಡುವಂತೆ ಮಾಡಿದ್ದನ್ನು ಕೂಡಾ ದೇಶದ ಜನ ಮರೆತಿಲ್ಲ ಎಂದು ಹೇಳಿದರು.

ಪಾಕಿಸ್ಥಾನ ಎಂಬ ದುರ್ಬಲ ದೇಶದ ಎದುರು ವೀರಾವೇಶ ಮೆರೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಪಾಕಿಸ್ಥಾನಕ್ಕಿಂತ ದೊಡ್ಡ ಶತ್ರುವಾದ ಚೀನಾದ ಹೆಸರನ್ನು ಉಚ್ಚರಿಸಲು ಕೂಡಾ ಅಂಜುವುದು ಯಾಕೆ ಎಂದು ಹೇಳಬಲ್ಲಿರಾ ಬೊಮ್ಮಾಯಿ ಅವರೇ? ಎಂದವರು ಪ್ರಶ್ನಿಸಿದ್ದಾರೆ.
Advertisement
Advertisement
Recent Posts
Advertisement