Advertisement

ಧ್ವೇಷ ಭಾಷಣ: ನೂಪೂರ್ ಶರ್ಮಾ, ನವೀನ್ ಜಿಂದಾಲ್ ಉಚ್ಚಾಟನೆ ಸಾಕೆ? ತೇಜಸ್ವಿ ಸೂರ್ಯ, ಅನಂತ್‌ ಹೆಗಡೆ, ಮೋದಿ- ಶಾ, ಸಾವರ್ಕರ್, ಹೆಡಗೇವಾರ್ ಗಳನ್ನು ಉಚ್ಚಾಟಿಸ ಬೇಡವೇ?

Advertisement
ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)

ಪ್ರವಾದಿ ಪೈಗಂಬರ್ ಮತ್ತು ಇಸ್ಲಾಮಿನ ಬಗ್ಗೆ ಹಾಗೂ ಮುಸ್ಲಿಮರ ಬಗ್ಗೆ ಮಾಧ್ಯಮಗಳಲ್ಲಿ ಪ್ರಚೋದನಾಕಾರಿಯಾಗಿ ಮಾತನಾಡಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಿಜೆಪಿ ತನ್ನ ಸದಸ್ಯತ್ವದಿಂದ ಅಮಾನತು ಮಾಡಿದೆ. ಮತ್ತು ಮತ್ತು ಬಿಜೆಪಿಯ ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಜಿಂದಾಲ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಿದೆ.

ಅದಕ್ಕೆ ಪ್ರಮುಖ ಕಾರಣ ಅವರು ಮಾಧ್ಯಮಗಳಲ್ಲಿ ಉದುರಿಸಿದ ಅಣಿಮುತ್ತುಗಳು ಅನಾಮತ್ತಾಗಿ ಜಗತ್ತಿನಾದ್ಯಂತ ಬಿತ್ತರಗೊಂಡು ಜಗತ್ತಿನ ಹಲವಾರು ಇಸ್ಲಾಮಿಕ ದೇಶಗಳಲ್ಲಿ ಆಕ್ರೋಶ ಹುಟ್ಟುಹಾಕಿದ್ದು. ಈಗಾಗಲೇ ಖತಾರ್, ಕುವೈತ್, ಸೌದಿ ಅರೇಬಿಯಾ, ಇರಾನ್, ಇಂಡೊನೇಶಿಯಾ ಗಳನ್ನೂ ಒಳಗೊಂಡಂತೆ ಜಗತ್ತಿನ ೧೨ ದೇಶಗಳ ಸರ್ಕಾರಗಳು ತಮ್ಮ ದೇಶಗಳ ಭಾರತದ ರಾಯಭಾರಿಯನ್ನು ಕರೆದು ತಮ್ಮ ಅಸಮಾಧಾನ, ಆಕ್ಷೇಪಣೆ ಮತ್ತು ಆಕ್ರೋಶಗಳನ್ನು ಅಧಿಕೃತವಾಗಿ ತಿಳಿಯಪಡಿಸಿವೆ. ಕುವೈತ್ ನಲ್ಲಂತೂ ಹಲವಾರು ಮಾಲ್ ಗಳು ಭಾರತದ ಸರಕಿನ ಮಾರಾಟಗಳ ಮೇಲೆ ನಿಷೇಧ ಹೇರಿವೆ.

ಮೊನ್ನೆಮೊನ್ನೆ ತಾನೇ ಪ್ರಧಾನಿ ಮೋದಿ ತನ್ನ ಎಂಟು ವರ್ಷಗಳ ಅವಧಿಯಲ್ಲಿ ಭಾರತವು ತಲೆತಗ್ಗಿ ನಿಲ್ಲುವಂಥ ಯಾವುದೇ ಕೆಲಸವನ್ನೂ ಮಾಡಿಲ್ಲ ಎಂದು ಕೊಚ್ಚಿಕೊಂಡಿದ್ದರು. ಅದಾದ ಒಂದು ವಾರದಲ್ಲೇ ಮೋದಿಯವರ ಪಕ್ಷದ ನಾಯಕರ ಹೇಳಿಕೆಗಳು ಮತ್ತು ನಡೆಗಳಿಂದ ಭಾರತ ಮತ್ತೊಮ್ಮೆ ಜಗತ್ತಿನಾದ್ಯಂತ ತಲೆತಗ್ಗಿಸಿ ನಿಲ್ಲುವಂತಾಗಿದೆ.

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಘನತೆ ಹರಾಜಾಗುತ್ತಿದ್ದಂತೆ ನಿಧಾನವಾಗಿ ಎಚ್ಚೆತ್ತ ಬಿಜೆಪಿ ಪಕ್ಷ ನೂಪುರ್ ಶರ್ಮ ಮತ್ತು ನವೀನ್ ಜಿಂದಾಲ್ ಅವರುಗಳು ಬಿಜೆಪಿ ಪಕ್ಷದ ಪ್ರಧಾನ ನಾಯಕರೇನೂ ಅಲ್ಲವೆಂದೂ, ಅವರು ಪಕ್ಷದ ಅಂಚಿನಲ್ಲಿರುವ (ಫ಼್ರಿಂಜ್) ನಾಯಕರೆಂದೂ, ಅದನ್ನು ಪಕ್ಷದ ಅಥವಾ ಭಾರತ ಸರ್ಕಾರದ ಅಧಿಕೃತ ನಿಲುವೆಂದೂ ಪರಿಗಣಿಸಬಾರದೆಂದೂ ಸಮಜಾಯಿಶಿ ನೀಡಿ ಅವಸರವಸರವಾಗಿ ಅವರಿಬ್ಬರ ಮೇಲೆ ಕ್ರಮ ತೆಗೆದುಕೊಂಡಿದೆ.

ಅಂಚು-ಕೇಂದ್ರ ಗಳೆಂಬ ಕಾರ್ಯ ವಿಭಜನೆ

ಆದರೆ ನೂಪುರ್ ಶರ್ಮ ಮತ್ತು ನವೀನ್ ಜಿಂದಾಲ್ ಪಕ್ಷದ ಪ್ರಮುಖ ನಾಯಕರೇ ವಿನಾ ಅಂಚಿನಲ್ಲಿದ್ದ ನಗಣ್ಯ ನಾಯಕರೇನಲ್ಲ. ನೂಪುರ್ ಶರ್ಮಾ ಬಿಜೆಪಿ ಪಕ್ಷದ ಅಧಿಕೃತ ವಕ್ತಾರೆ. ಅಂಚಿನಲ್ಲಿದ್ದವರು ಅಧಿಕೃತ ವಕ್ತಾರರಾಗುತ್ತಾರೆಯೇ?

ಹಾಗೆಯೇ ಜಿಂದಾಲ್ ಮತ್ತು ಶರ್ಮ ಇಬ್ಬರೂ ಕಳೆದ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿದ್ದವರೇ. ಅಷ್ಟು ಮಾತ್ರವಲ್ಲ. ಅಮಾನತುಗೊಳ್ಳುವ ಎರಡು ದಿನಗಳ ಮೊದಲು ನೂಪುರ್ ಶರ್ಮಾ ಅವರೇ ನೀಡಿದ ಟಿವಿ ಸಂದರ್ಶನಗಳಲ್ಲಿ ತಮ್ಮ ಹೇಳಿಕೆಯನ್ನು ಪ್ರಧಾನಿ ಕಾರ್ಯಾಲಯ, ಗೃಹಮಂತ್ರಿ ಕಾರ್ಯಾಲಯ ಸಂಪೂರ್ಣವಾಗಿ ಬೆಂಬಲಿಸುತ್ತಿದೆ ಎಂದಿದ್ದರು. ಅಲ್ಲದೆ ಜಿಂದಾಲ್ ಮತ್ತು ಶರ್ಮಾ ಇಬ್ಬರ ಟ್ವೀಟ್ ಗಳನ್ನು ಈ ದೇಶದ ಪ್ರಧಾನಿ ಮತ್ತು ಗೃಹಮಂತ್ರಿಗಳೆಲ್ಲಾ ಫ಼ಾಲೋ ಮಾಡುತ್ತಾರೆ. ಹೀಗಾಗಿ ಅವರಿಬ್ಬರೂ ಅಂಚಿನ ನಾಯಕರೇನಲ್ಲ. ಬದಲಿಗೆ ಪ್ರಧಾನ ಗಣದ ನಾಯಕರೇ. ಆರೆಸ್ಸೆಸ್ಸಿನ ಉತ್ಪಾದನೆಗಳೇ.

ಆರೆಸ್ಸೆಸ್ಸೇ ಪರಿವಾರದ ಕೇಂದ್ರವಾಗಿರುವಾಗ ಸಂಘಪರಿವಾರದಲ್ಲಿ ಅಂಚು-ಕೇಂದ್ರ ಎಂಬುದೆಲ್ಲಾ ವ್ಯೂಹಾತ್ಮಕ ಕಾರ್ಯ ವಿಭಜನೆಯೇ ವಿನಾ ಸ್ಥಾನ ಸೂಚಕಗಳಲ್ಲ.

ಆದ್ದರಿಂದಲೇ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥನಂಥ ಬಿಜೆಪಿಯ ರಾಷ್ಟ್ರೀಯ , ಅಧಿಕೃತ, ಕೇಂದ್ರ ನಾಯಕರಿಂದ ಹಿಡಿದು ನಮ್ಮ ರಾಜ್ಯದ ಈಶ್ವರಪ್ಪ ಹಾಗೂ ಇನ್ನಿತರ ಬಿಜೆಪಿಯ ಅಧಿಕೃತ ಹಾಗೂ ಪ್ರಧಾನ ಧಾರೆ ಮಂತ್ರಿ-ಶಾಸಕರು ನೀಡಿರುವ ಹೇಳಿಕೆಗಳು ಹಾಗೂ ಮಾಡಿರುವ, ಮಾಡುತ್ತಿರುವ ದ್ವೇಷ ಕಾರ್ಯಕ್ರಮಗಳನ್ನು ನೋಡಿದವರಿಗೆ ಶರ್ಮ ಮತ್ತು ಜಿಂದಾಲ್ ಅವರ ಹೇಳಿಕೆ ಏನೂ ಅಲ್ಲ ಎನಿಸುತ್ತದೆ.

ಹಾಗಿದ್ದರೂ ಬಿಜೆಪಿ ಶರ್ಮ ಮತ್ತು ಜಿಂದಾಲರ ಹೇಳಿಕೆಯನ್ನು ಮಾತ್ರ ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಕ್ರಮ ತೆಗೆದುಕೊಂಡಿದ್ದೇಕೆ?

ಹಿಂದೂ ರಾಷ್ಟ್ರದ ಪ್ರೀತಿ- ಅರಬ್ಬರ ಪೆಟ್ರೋ- ಡಾಲರಿನ ಮೇಲೆ ಆಸೆ

ಅಂಗೈ ಹುಣ್ಣಿಗೆ ಕನ್ನಡಿ ಬೇಡ.

ಈ ಅದ್ವಾನಗಳು ಅರಬ್ ದೇಶಗಳ ಸರ್ಕಾರಗಳ ಗಮನಕ್ಕೂ ಹೋಗಿ ಅವರು ಅಧಿಕೃತವಾಗಿ ಖಂಡಿಸಿರುವುದು ಮತ್ತು ಅದು ಇಡಿ ಜಗತ್ತಿನ ಗಮನವನ್ನು ಸೆಳೆದಿರುವುದು ಇದಕ್ಕೆ ಮೊದಲನೇ ಮುಖ್ಯ ಕಾರಣ.

ಅಲ್ಲದೆ ಈ ದೇಶಗಳಲ್ಲಿ ಹೊಟ್ಟೆ ಪಾಡಿಗಾಗಿ ದುಡಿಮೆ ಮಾಡುತ್ತಿರುವ ಹಾಗೂ ಉದ್ಯಮಗಳನ್ನು ನಡೆಸುತ್ತಾ ಕೊಟ್ಯಾಂತರ ಆಸ್ತಿಪಾಸ್ತಿ ಮಾಡಿರುವ ಭಾರತದ ವಿವಿಧ ಮತಧರ್ಮಗಳಿಗೆ ಸೇರಿದ ಕೋಟಿಗೂ ಹೆಚ್ಚು ಭಾರತೀಯರಿದ್ದಾರೆ. ಅವರು ಅಲ್ಲಿಂದ ಕಳಿಸುವ ಡಾಲರ್ ಗಳು ನಮ್ಮ ದೇಶದ ವಿದೇಶಿ ವಿನಿಮಯದ ಪ್ರಮುಖ ಮೂಲ. ಅಲ್ಲದೆ ಅರಬ್ ದೇಶದ ತೈಲವೂ ಭಾರತದ ಆರ್ಥಿಕತೆಯ ಜೀವ ಜಲ. ಹೀಗಾಗಿ ಒಮ್ಮೆ ಅರಬ್ ದೇಶಗಳು ಭಾರತದ ಮೇಲೆ ಮತ್ತು ಅಲ್ಲಿರುವ ಭಾರತೀಯರ ಮೇಲೆ ಪ್ರತಿಕ್ರಮ ತೆಗೆದುಕೊಂಡರೆ ಭಾರತದ ಆರ್ಥಿಕತೆ ದಿಕ್ಕೆಡುತ್ತದೆ. ಈ ಹಿಂದೆಯೂ ಅಲ್ಲಿನ ಭಾರತೀಯ ಹೋಟೆಲ್ ಮಾಲೀಕ ತನ್ನ ಹೋಟೆಲ್‌ನಲ್ಲಿ ಹಿಜಾಬ್ ಹಾಕಿರುವ ಮಹಿಳೆಯರಿಗೆ ಅವಕಾಶವಿಲ್ಲ ಎಂದು ನೋಟಿಸ್ ಹಾಕಿದಾಗ ಅಲ್ಲಿನ ಸರ್ಕಾರ ಆ ಹೋಟೆಲ್ ಮೇಲೆ ಕಠಿಣ ಕ್ರಮ ತೆಗೆದುಕೊಂಡಿತ್ತು. ಕೆಲವು ವರ್ಷಗಳ ಮುಂಚೆ ಕರ್ನಾಟಕದ ಜಾರು-ನಾಲಿಗೆ ಸಂಸದ ತೇಜಸ್ವಿ ಸೂರ್ಯ ಅರಬ್ ಮಹಿಳೆಯರಿಗೆ ಅರಬ್ ಪುರುಷರು ಮಕ್ಕಳನ್ನು ಕೊಡುತ್ತಿದ್ದಾರೆಯೇ ವಿನ ಲೈಂಗಿಕ ಸುಖ ಕೊಡುತ್ತಿಲ್ಲ ಎಂದು ಅಪಮಾನಿಸುವ ಟ್ವೀಟ್ ಹಾಕಿದ್ದಾಗ ಸೌದಿಯ ರಾಜಕುಮಾರಿಯೊಬ್ಬರು ಸೂರ್ಯನಿಗೆ ಮುಟ್ಟಿಕೊಳ್ಳುವಂಥ ಉತ್ತರ ಕೊಟ್ಟಿದ್ದರು. ಆರೆಸ್ಸೆಸ್ ತರಬೇತಿ ಪಡೆದ ಇಂಥಾ ಬಿಜೆಪಿ ನಾಯಕರಿಂದ ಈಗಾಗಲೇ ಸೃಷ್ಟಿಯಾಗಿದ್ದ ಭಾರತ ವಿರೋಧಿ ಮನಸ್ಥಿತಿಗೆ ಶರ್ಮ ಮತ್ತು ಜಿಂದಾಲ್ ಅವರ ಹೇಳಿಕೆ ಮತ್ತಷ್ಟು ಬೆಂಕಿ ಸುರಿದಿದೆ.

ಎರಡನೆಯದಾಗಿ ಮೋದಿ ಸರ್ಕಾರದಡಿಯಲ್ಲಿ ಈಗಾಗಲೇ ಪತ್ರಿಕಾ ಸ್ವಾತಂತ್ರ್ಯ, ಮಾನವ ಹಕ್ಕುಗಳು, ಪ್ರಜಾತಂತ್ರ ಎಲ್ಲವೂ ಕುಸಿಯುತ್ತಿದೆ ಎಂದು ಜಗತ್ತಿನ ಬಹಳಷ್ಟು ಸ್ವತಂತ್ರ ಅಂತರರಾಷ್ಟ್ರೀಯ ಸಂಸ್ಥೆಗಳು ವರದಿ ಮಾಡುತ್ತಿವೆ. ಆಕಾರ್ ಪಟೇಲ್ ಅವರ ಅಧ್ಯಯನವೊಂದು ಹೇಳುವಂತೆ ಮೋದಿ ಅವಧಿಯಲ್ಲಿ ಭಾರತವು ೪೪ ಅಭಿವೃದ್ಧಿ ಸೂಚ್ಯಂಕಗಳಲ್ಲಿ ೪೧ ರಲ್ಲಿ ಹೀನಾಯವಾದ ಪರಿಸ್ಥಿತಿಗೆ ದೂಡಲ್ಪಟ್ಟಿದೆ. ಭಾರತವನ್ನು ಒಂದು ಚುನಾವಣಾ ಸರ್ವಾಧಿಕಾರಿ ದೇಶವೆಂದೂ, ಭಾಗಶಃ ಸ್ವಾತಂತ್ರ್ಯವನ್ನು ಮಾತ್ರ ಹೊಂದಿರುವ ದೇಶವೆಂದು ಜಗತ್ತು ಬಣ್ಣಿಸುತ್ತಿದೆ. ಇದರಿಂದಾಗಿ ಮೋದಿ ಸರ್ಕಾರದ ಪ್ರತಿಷ್ಟೆಯೂ ಕಡಿಮೆಯಾಗುತ್ತಿದೆ. ಇವುಗಳನ್ನು ಆಧರಿಸಿಯೇ ಅಂತರಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳು ಭಾರತದಲ್ಲಿ ವಿದೇಶಿ ಹೂಡಿಕೆಯ ಸುರಕ್ಷತೆಯನ್ನು ಅಳೆಯುವುದರಿಂದ ಭಾರತಕ್ಕೆ ವಿದೇಶಿ ಬಂಡವಾಳ ಹೂಡಿಕೆಯೂ ಕಡಿಮೆಯಾಗಬಹುದೆಂಬುದು ಸರ್ಕಾರದ ಆತಂಕ. ಇದರಿಂದಾಗಿಯೂ ಭಾರತ ಒಂದು ಭಿನ್ನಮತವನ್ನು , ಹಾಗೂ ಎಲ್ಲಾ ಮತಧರ್ಮಗಳನ್ನು ಗೌರವದಿಂದ ಕಾಣುವ ಪ್ರಜಾತಂತ್ರಿಕ ರಾಷ್ಟ್ರ ಎಂದು ಪ್ರಚಾರ ಮಾಡಿಕೊಳ್ಳುವ ಅಗತ್ಯ ಮೋದಿ ಸರ್ಕಾರಕ್ಕಿದೆ.


ಇದಲ್ಲದೆ. ಮೂರನೆಯದಾಗಿ, ಭಾರತವು ಒಂದು ಅಗ್ರಮಾನ್ಯ ಪ್ರಜಾತಂತ್ರಿಕ ರಾಷ್ಟ್ರ ಎಂಬ ಹೆಗ್ಗಳಿಕೆಯಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯ ಸ್ಥಾನವನ್ನು ಪಡೆದುಕೊಳ್ಳುವುದಕ್ಕೂ ಇಂಥಾ ಬೆಳವಣಿಗೆಗಳು ಮತ್ತದರ ಅಂತರ್ರಾಷ್ಟೀಯ ಪ್ರಚಾರಗಳು ಅಡ್ಡಗಾಲು ಹಾಕುತ್ತವೆ. ಇದರ ಜೊತೆಗೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಮೋದಿಯವರ ಘೋಷಣೆಯ ಸೋಗಲಾಡಿತನವು ಜಗತ್ತಿಗೆ ಜಾಹೀರಾಗಿ ಮೋದಿಯವರು ತನಗೇ ತಾನೆ ವಿಶ್ವಗುರು ಎಂದು ಕಟ್ಟಿಕೊಂಡಿರುವ ಭ್ರಾಂತಿ ಕವಚವೂ ಕುಸಿಯುವ ಸಾಧ್ಯತೆ ಇದೆ.

ಈ ಎಲ್ಲಾ ಕಾರಣಗಳಿಂದ ಮೋದಿ ಸರ್ಕಾರ ಮತ್ತು ಬಿಜೆಪಿ ಪಕ್ಷ ಶರ್ಮ ಮತ್ತು ನವೀನರ ಮಾಧ್ಯಮ ಹೇಳಿಕೆಗಳು ವಿಶ್ವಾದ್ಯಂತ ವೈರಲ್ ಆದಮೇಲೆ ಮತ್ತು ವಿವಿಧ ಸರ್ಕಾರಗಳಿಂದ ಅಧಿಕೃತವಾಗಿ ಛೀಮಾರಿ ಹಾಕಿಸಿಕೊಂಡ ಮೇಲೆ ಏನಾದರೂ ಕ್ರಮಗಳನ್ನು ತೆಗೆದುಕೊಂಡ ನಾಟಕಗಳನ್ನು ಆಡಲೇ ಬೇಕಿತ್ತು. ಅದರ ಭಾಗವಾಗಿಯೇ ಪಕ್ಷದಿಂದ ಅಮಾನತು ಉಚ್ಚಾಟನೆಯೆಂಬ ಹೇಳಿಕೆಗಳು ಹೊರಬಿದ್ದಿವೆ.

ಆದರೆ ಇವೆಲ್ಲಾ ಢೋಂಗಿ ನಾಟಕಗಳು ಮತ್ತು ಜಗತ್ತಿನ ಕಣ್ಣಿಗೆ ಮಣ್ಣೆರೆಚುವ ಕ್ರಮಗಳೇ ಆಗಿವೆ. ಏಕೆಂದರೆ ಈಗಾಗಲೇ ನೋಡಿದಂತೆ ಈ ಶರ್ಮಗಳು ಮತ್ತು ಜಿಂದಾಲಗಳು ಈಬಗೆಯ ಹೇಳಿಕೆ ಮಾಡಿ ವಾರ ಕಳೆದಿತ್ತು. ಕಾನ್ಪುರದಲ್ಲಿ ಇದರ ಬಗ್ಗೆ ಪ್ರತಿಭಟನೆ ನಡೆದು , ಈ ಹೇಳಿಕೆಯನ್ನು ವಿರೋಧಿಸಿದವರ ಮನೆಯ ಮುಂದೆ ಆದಿತ್ಯನಾಥ ಸರ್ಕಾರದ ಬುಲ್ಡೋಜರುಗಳು ನಿಂತಿವೆ. ಅರಬ್ ದೇಶಗಳ ಪ್ರತಿಕ್ರಿಯೆ ಹೊರಬರುವ ಮುನ್ನ ಇಡಿ ಈ ಒಂದು ವಾರದ ಅವಧಿಯಲ್ಲಿ ಮೋದಿ ಸರ್ಕಾರ ಹಾಗೂ ಇಡಿ ಬಿಜೆಪಿ ಪಕ್ಷ ಈ ಶ್ರಾಮಗಳ ಮತ್ತು ಜಿಂದಾಲ್ ಗಳ ಬೆಂಬಲಕ್ಕೆ ನಿಂತು ವಿರೋಧಿಗಳನ್ನು ಮಟ್ಟ ಹಾಕುತ್ತಿತ್ತು.

ತನ್ನ ಸಂವಿಧಾನದ ವಿರುದ್ದ ತಾನೇ ಕೆಲಸ ಮಾಡುತ್ತಿರುವ ಬಿಜೆಪಿ!!


ಈಗ ಇದ್ದಕ್ಕಿದ್ದಂತೆ ಬಿಜೆಪಿ ಪಕ್ಷ ಇವರಿಬ್ಬರನ್ನು ಹೊರಹಾಕಿದೆ. ಮತ್ತು ಅದಕ್ಕೆ ಯಾರೂ ನಂಬಲಾಗದ ಮತ್ತು ಹಾಸ್ಯಾಸ್ಪದವಾದ ಹೇಳಿಕೆಯನ್ನು ಕೊಟ್ಟಿದೆ. ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲರನ್ನು ಪಕ್ಷದ ಸಂವಿಧಾನದ ೧೦ (ಎ) ಕಲಮು ಕೊಟ್ಟಿರುವ ಅಧಿಕಾರವನ್ನು ಬಳಸಿ ಬಿಜೆಪಿ ಅಧ್ಯಕ್ಷರು ಕ್ರಮ ತೆಗೆದುಕೊಂಡಿದ್ದಾರೆ ಎಂದು ಪಕ್ಷದ ಹೇಳಿಕೆ ತಿಳಿಸುತ್ತದೆ. ಅವರ ಸಂವಿಧಾನದ ೧೦ (ಎ) ಪ್ರಕಾರ ಪಕ್ಷದ ಧ್ಯೇಯ, ಉದ್ದೆಶ ಹಾಗೂ ಕಾರ್ಯಕ್ರಮಗಳಿಗೆ ಧಕ್ಕೆ ತಂದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬಹುದು.

ಹಾಗಿದ್ದಲ್ಲಿ ಪಕ್ಷದ ಧ್ಯೇಯ ಮತ್ತು ಉದ್ದೇಶಗಳೇನು?

ಇದರ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಕುಮರ್ ಅವರು ಅರಬ್ ದೇಶಗಳ ಸರ್ಕಾರಗಳಿಗೆ ಕಳಿಸಿಕೊಟ್ಟಿರುವ ಹೇಳಿಕೆಯ ಪ್ರಕಾರ ಬಿಜೆಪಿ ಪಕ್ಷವು:

" ಭಾರತದಲ್ಲಿ ಕಳೆದ ಸಾವಿರಾರು ವರ್ಷಗಳಲ್ಲಿ ಹಲವಾರು ಮತಧರ್ಮಗಳು ಹುಟ್ಟಿಕೊಂಡಿವೆ. ಬಿಜೆಪಿ ಪಕ್ಷವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತದೆ. ಹಾಗೂ ಯಾವುದೇ ಧರ್ಮಕ್ಕೆ ಅಥವಾ ಧಾರ್ಮಿಕ ನಾಯಕರಿಗೆ ಅವಮಾನ ಮಾಡುವುದನ್ನು ಸಹಿಸುವುದಿಲ್ಲ. ಹಾಗೆಯೇ ಭಾರತೀಯ ಜನತಾ ಪಕ್ಷವು ಯಾವುದೇ ಧರ್ಮವನ್ನು ಅಥವಾ ಪಂಥವನ್ನು ಹೀಯಾಳಿಸುವ ಅಥವಾ ಅಪಮಾನಿಸುವ ಯಾವುದೇ ಸಿದ್ಧಾಂತವನ್ನು ಕಟುವಾಗಿ ಖಂಡಿಸುತ್ತದೆ. ಬಿಜೆಪಿ ಪಕ್ಷವು ಅಂಥಾ ಸಿದ್ಧಾಂತಗಳನ್ನಾಗಲೀ ಅಥವ ವ್ಯಕ್ತಿಗಳನ್ನಾಗಲೀ ಪ್ರೋತ್ಸಾಹಿಸುವುದಿಲ್ಲ"!!!!
►►https://www.bjp.org/pressreleases/press-release-bjp-national-general-secretary-shri-arun-singh-7

ಇದು ಎಂಥಾ ಸೋಗಲಾಡಿತನವೆಂದರೆ ಈ ಹೇಳಿಕೆಯಂತೆ ಯಾವುದೇ ಧರ್ಮವನ್ನು ಅಥವಾ ಪಂಥವನ್ನು ಹೀಯಾಳಿಸುವ ಅಥವಾ ಅಪಮಾನಿಸುವ ಯಾವುದೇ ಸಿದ್ಧಾಂತವನ್ನು ಕಟುವಾಗಿ ಖಂಡಿಸುತ್ತದೆ. ಬಿಜೆಪಿ ಪಕ್ಷವು ಅಂಥಾ ಸಿದ್ಧಾಂತಗಳನ್ನಾಗಲೀ ಅಥವ ವ್ಯಕ್ತಿಗಳನ್ನಾಗಲೀ ಪ್ರೋತ್ಸಾಹಿಸುವುದಿಲ್ಲ ಎಂಬುದನ್ನು ಜಾರಿ ಮಾಡಿದರೆ ಪ್ರಧಾನಿ ಮೋದಿ, ಶಾ, ಅಧ್ಯಕ್ಷ ನಡ್ಡಾ ಒಳಗೊಂಡು ಇಡಿ ಬಿಜೆಪಿ ಪಕ್ಷವನ್ನೇ ಬರ್ಖಾಸ್ತು ಮಾಡಬೇಕಾಗುತ್ತದೆ ಮತ್ತು ಆರೆಸ್ಸಸ್ಸನ್ನು ದೇಶಬಿಟ್ಟು ಓಡಿಸಬೇಕಾಗುತ್ತದೆ.

ಹೆಡಗೇವಾರ್ ಮತ್ತು ಸಾವರ್ಕರ್ ಗಳನ್ನು ಬಿಜೆಪಿಯೇ ಹೊರಗಟ್ಟಬೇಕಾಗುತ್ತದೆ.!

ಸಾವರ್ಕರ್-ಹೆಡಗೇವಾರ್-ಮೋದಿ-ಶಾ: ಅಂಚೇ ಕೇಂದ್ರ-ಕೇಂದ್ರವೇ ಅಂಚು

ಏಕೆಂದರೆ ಈ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರವಾದಿ ಎಂಬ ಸುಳ್ಳು ಇತಿಹಾಸ ಸೃಷ್ಟಿಸುತ್ತಾ ಬಿಜೆಪಿ ಸ್ಥಾಪಿಸ ಬಯಸಿರುವ ಅವರ ನಾಯಕ ಸಾವರ್ಕರ್ ಹಿಂದುಯೇತರ ಧರ್ಮಗಳ ಬಗ್ಗೆ ಹೇಳಿರುವುದೇನು?

೧೯೨೫ರಲ್ಲಿ ಸಾವರ್ಕರ್ ಅವರು ಬರೆದ ಹಿಂದೂತ್ವ ಎಂದರೇನು ಎನ್ನುವುದು ಮೋದಿಯ ಬಿಜೆಪಿಗೆ ಮತ್ತು ಆರೆಸ್ಸೆಸ್ಸಿಗೆ ಬೈಬಲ್ ಸ್ವರೂಪದ್ದು. ಅದರಲ್ಲಿ ಅವರು:

" ಈ ಭರತವರ್ಷವನ್ನು ಪಿತೃಭೂಮಿ ಮತ್ತು ಪುಣ್ಯಭೂಮಿ ಎಂದು ಭಾವಿಸುವವರು ಮಾತ್ರ ಈ ದೇಶದ ನಿಜವಾದ ವಾರಸುದಾರರು. ಮುಸ್ಲಿಮರು ಮತ್ತು ಕ್ರಿಷ್ಚಿಯನ್ನರು ಈ ದೇಶದಲ್ಲಿ ಹುಟ್ಟಿದರೂ ಅವರ ಪುಣ್ಯಭೂಮಿ ಈ ದೇಶದ ಹೊರಗಡೆ ಇದೆ. ಆದ್ದರಿಂದ ಅವರು ಈ ದೇಶದ ನಿಜವಾದ ನಾಗರಿಕರು ಸಾಧ್ಯವಿಲ್ಲ. ಆದ್ದರಿಂದ ಹಿಂದೂಗಳು ಮಾತ್ರ ಈ ರಾಷ್ಟ್ರದ ಅಡಿಗಲ್ಲಾಗಲು ಸಾಧ್ಯ" ಎಂದು ಘೋಷಿಸಿದ್ದವರು.

ಈ ದೇಶದಲ್ಲಿ ಮುಸ್ಲಿಮರು ಎರಡನೇ ದರ್ಜೆ ಪ್ರಜೆಗಳಾಗಿ ಮಾತ್ರ ಬದುಕಬೇಕು ಅಥವಾ ಹಿಂದೂಗಳಾಗಿ ಬದಲಾಗಬೇಕು ಎಂದು ಕರೆಕೊಟ್ಟಿದ್ದರು.

ಅಷ್ಟು ಮಾತ್ರವಲ್ಲ . ತಮ್ಮ Six Glorious Epochs Of Indian History ಎಂಬ ಪುಸ್ತಕದಲ್ಲಿ ಬೌದ್ಧ ಧರ್ಮವು ದೇಶದ್ರೋಹೀ ಧರ್ಮ ವೆಂದು ಹತ್ತಾರು ಸಾರಿ ಉಲ್ಲೇಖಿಸುತ್ತಾರೆ. ಆದ್ದರಿಂದ ಸಾವರ್ಕರ್ ಅವರು ಹಿಂದುಯೇತರ ಧರ್ಮಗಳನ್ನು ಅಪಮಾನಿಸುವ ನಾಯಕರಾಗಿರುವುದರಿಂದ ಅವರು ಬಿಜೆಪಿಯ ಧ್ಯೇಯಗಳಿಗೆ ವಿರುದ್ಧವಾದವರು ಎಂದು ಅವರನ್ನು ಖಂಡಿಸಬೇಕಲ್ಲವೇ? ಅದರ ಬದಲಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೆಸರಿನಲ್ಲಿ ಸಾವರ್ಕರ್ ಅವರನ್ನು ಇಡೀ ಭಾರತವು ಆರಾಧಿಸಬೇಕೆಂದು ಕರೆಕೊಟ್ಟಿರುವುದೇಕೆ?

ಹಾಗೆಯೇ ಬಿಜೆಪಿಯ ಗುರುಮಠವಾದ ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಅವರು ೧೯೨೦ರಲ್ಲಿ ಅಸಹಕಾರ ಚಳವಳಿಯ ನಂತರ ಸ್ವಾತಂತ್ರ್ಯ ಚಳವಳಿಯಿಂದ ಮತ್ತು ಕಾಂಗ್ರೆಸ್ಸಿನಿಂದ ಹಿಂದೆ ಸರಿದದ್ದಕ್ಕೇ ಕಾರಣವೇ ಗಾಂಧಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ ಮುಸ್ಲಿಂ ಐಕ್ಯತೆಗೆ ಶ್ರಮಿಸುತ್ತಿದ್ದದ್ದು ಎಂದು ಅವರ ಜೀವನ ಚರಿತ್ರೆಕಾರರಾದ ಆರೆಸ್ಸಿಸ್ಸಿನ ಹಿರಿಯ ನಾಯಕ ಹೂ.ವೆ. ಶೇಶಾದ್ರಿ ಅಭಿಪ್ರಾಯ ಪಡುತ್ತಾರೆ. ಅವರ ಪ್ರಕಾರ:

" ಅಸಹಕಾರ ಚಳವಳಿಯು ಉಡಿಸಿದ ಹಾಲನ್ನು ಕುಡಿದು ಕೊಬ್ಬಿದ ಯವನ ಸರ್ಪಗಳು ಅರ್ಥಾತ್ ಮುಸ್ಲಿಮರು ಹೆಡೆಯೆತ್ತಿ ಭುಸುಗುಡುತ್ತಿದ್ದಾರೆ"

ಎಂಬುದು ಆಗ ಮುಸ್ಲಿಮರ ಬಗ್ಗೆ ಹೆಡಗೇವಾರ ಅಭಿಪ್ರಾಯವಾಗಿತ್ತು. ಈ ದೇಶದ ಸ್ವಾತಂತ್ರ್ಯವೆಂದರೆ ಬ್ರಿಟಿಷರನ್ನು ಭಾರತ ಬಿಟ್ಟು ಓಡಿಸುವುದಲ್ಲ ಬದಲಿಗೆ ಇದನ್ನು ಹಿಂದೂ ರಾಷ್ಟ್ರ, ಹಿಂದೂಗಳ ರಾಷ್ಟ್ರವನಾಗಿ ಮಾತ್ರ ಮಾಡುವುದು ಆರೆಸ್ಸೆಸ್ ನ ಗುರಿ ಎಂದು ಅವರು ೧೯೨೫ರಲ್ಲೇ ಸ್ಪಷ್ಟವಾಗಿ ಘೋಷಿಸಿದ್ದರು. ಅದನ್ನು ಸಾಧಿಸಲೆಂದೇ ಆರೆಸ್ಸೆಸ್ ಮೊದಲು ೧೯೫೦ರಲ್ಲಿ ಭಾರತೀಯ ಜನಸಂಘ (ಬಿಜೆಎಸ್) ಮತ್ತು ಆ ನಂತರ ೧೯೮೦ರಲ್ಲಿ (ಬಿಜೆಪಿ) ಯನ್ನು ಸ್ಥಾಪಿಸಿತು.

ಬಿಜೆಪಿ ಕಾರ್ಯದರ್ಶಿಯ ಪ್ರಕಾರ ಎಲ್ಲಾ ಧರ್ಮಗಳನ್ನು ಸಮಾನವಾಗಿ ನೋಡುವುದಾದರೆ ಬಿಜೆಪಿಯು ಮೊದಲು ಆರೆಸ್ಸಸ್ಸನ್ನು ವಿಸರ್ಜಿಸಬೇಕಲ್ಲವೇ?

ಆರೆಸ್ಸೆಸ್ ನ ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ " ವಿ ಆರ್ ಅವರ್ ನೇಶನ್ ಹುಡ್ ದಿಫ಼ೈನ್ಡ್" ಪುಸ್ತಕದಲ್ಲಿ;

" ಈ ದೇಶದಲ್ಲಿ, ಹಿಂದೂಸ್ಥಾನದಲ್ಲಿ, ಹಿಂದೂ ಜನಾಂಗವು ಮಾತ್ರ ತನ್ನ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಹಿಂದೂ ಭಾಷೆ ಗಳ ಮೂಲಕ ರಾಷ್ಟ್ರ ಎಂಬ ಪರಿಕಲ್ಪನೆಯನ್ನು ಪರಿಪೂರ್ಣಗೊಳಿಸುತ್ತದೆ. ಅದರ ಅರ್ಥ ಇಷ್ಟೆ. ಹಿಂದೂಸ್ಥಾನವು ಹಿಂದೂ ರಾಷ್ಟ್ರವಾಗಿ ಮತ್ತು ಹಿಂದೂರಾಷ್ಯ್ರವಾಗಿ ಮಾತ್ರ ಅಸ್ಥಿತ್ವದಲ್ಲಿ ಇರಬೇಕು. ಇತರರು ಹಿಂದೂ ರಾಷ್ಟ್ರಜೀವನದಿಂದ ಸಹಜವಾಗಿಯೇ ಹೊರಗುಳಿಯುತ್ತಾರೆ."

ಬಿಜೆಪಿ ಕಾರ್ಯದರ್ಶಿಯ ಹೇಳಿಕೆ ಪ್ರಾಮಾಣಿಕವೇ ಆಗಿದ್ದರೆ ಬಿಜೆಪಿ ಗೋಳ್ವಾಲ್ಕರ್ ಅವರ ಚಿಂತನೆಯನ್ನು ಕಟುವಾಗಿ ಖಂಡಿಸಬೇಕೇ ವಿನಹ ಅದನ್ನು ಚಾಚೂ ತಪ್ಪದಂತೆ ಪಾಲಿಸಬಾರದಲ್ಲವೇ?

ಆರೆಸ್ಸೆಸ್ ಕೇಂದ್ರದ ಅಂಚು-ಸಂಚುಗಳು

ಈ ಸಾವರ್ಕರ್, ಹೆಡಗೇವಾರ್, ಗೋಳ್ವಾಲ್ಕರ್ ಎಂಬ ಬ್ರಾಹ್ಮಣಶಾಹಿ ತಾಯಿಬೇರಿನ ರೆಂಬೆಕೊಂಬೆಗಳೇ ಆದ ಮೋದಿ, ಶಾ, ಆದಿತ್ಯನಾಥ್, ಸೂರ್ಯ ತೇಜಸ್ವಿ, ಅನಂತ ಕುಮಾರ್ ಹೆಗಡೆ, ಇದೀಗ ಬೊಮ್ಮಾಯಿಯಂಥವರು ಈ ದೇಶ ಹಿಂದೂ ರಾಷ್ಟ್ರ ಎಂದು ಪ್ರತಿಪಾದಿಸಲು ಮತ್ತು ಅದನ್ನು ಜಾರಿಗೆ ತರಲು ಹಲವಾರು ಕಾಯಿದೆ- ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಉದಾಹರಣೆಗೆ, ಬಿಜೆಪಿ ಪಕ್ಷದಿಂದ ಆರು ಬಾರಿ ಸಂಸದನಾಗಿ ಆಯ್ಕೆಯಾಗಿರುವ ಹಾಗೂ ಮೋದಿಯವರ ಕಳೆದ ಮಂತ್ರಿ ಮಂಡಲದಲ್ಲಿ ಮಂತ್ರಿಯೂ ಆಗಿದ್ದ ಅರ್ಥಾತ್ ಬಿಜೆಪಿಯ ಅಂಚಿನ ನಾಯಕನಲ್ಲ, ಪ್ರಧಾನ ನಾಯಕನೇ ಆಗಿರುವ ಅನಂತ ಕುಮಾರ್ ಹೆಗಡೆ ೨೦೧೭ರಲ್ಲಿ ಸ್ಪಷ್ಟವಾಗಿ ಹೀಗೆ ಘೋಷಿಸಿದ್ದರು:

" ನಿಮಗೆ ಮಾಧ್ಯಮದವರಿಗೆ ಅವಕಾಶವಿದ್ದರೆ ಈಗ ನಾನು ಹೇಳುತ್ತಿರುವುದನ್ನು ಹೀಗೆಯೇ ಸ್ಪಷ್ಟವಾಗಿ ಬರೆಯಿರಿ ಮತ್ತು ತೋರಿಸಿರಿ. ಇಸ್ಲಾಮ್ ಎಂಬುದು ವಿಶ್ವಶಾಂತಿಯನ್ನು ಧ್ವಂಸಗೊಳಿಸುವ ಬಾಂಬ್ ಇದ್ದಂತೆ. ಜಗತ್ತಿನಲ್ಲಿ ಇಸ್ಲಾಮ್ ಇರುವವರೆಗೆ ಶಾಂತಿ ನೆಲೆಸಲು ಸಾಧ್ಯವಿಲ್ಲ"

►►https://www.ndtv.com/india-news/union-minister-anantkumar-hegde-cant-wipe-out-terrorism-till-we-uproot-islam-1785351

ಬಿಜೆಪಿ ಪಕ್ಷದ ಅಂಚಿನವರು ಎಂದು ಹೇಳಲಾಗುವ ನೂಪುರ್ ಶರ್ಮಾ ಹಾಗೂ ಜಿಂದಾಲ್ ಗಳ ಹೇಳಿಕೆಗಿಂತ ಈ ಬಿಜೆಪಿಯ ಸಂಸದ ಹಾಗೂ ಮಾಜಿ ಮಂತ್ರಿಯ ಹೇಳಿಕೆ ನೂರು ಪಟ್ಟು ಪರಧರ್ಮದ್ವೇಷದಿಂದ ಕೋಡಿದೆಯಲ್ಲವೇ? ಇಂಥಾ ಅಸಹಿಷ್ಣು ವ್ಯಕ್ತಿಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂಬ ಬಿಜೆಪಿ ಕಾರ್ಯದರ್ಶಿಗಳ ಹೇಳಿಕೆ ನಿಜಾಯತಿಯಿಂದ ಕೂಡಿದ್ದರೇ…

ಅನಂತ್ ಕುಮಾರ್ ಹೆಗಡೆಯನ್ನು ಬಿಜೆಪಿಯಿಂದ ಉಚ್ಚಾಟಿಸುವರೇ ?

ಹಾಗೆಯೇ ಬಿಜೆಪಿಯ ಮತ್ತೊಬ್ಬ ಪ್ರಧಾನ ಯುವ ನಾಯಕ ಹಾಗೂ ಈಗ ಬಿಜೆಪಿಯ ಯುವಮೋರ್ಚಾದ ಅಧಿಕೃತ ರಾಷ್ಟ್ರೀಯ ನಾಯಕನೂ ಆಗಿರುವ ಸಂಸದ ಸೂರ್ಯ ತೇಜಸ್ವಿ ಕೆಲವು ತಿಂಗಳ ಕೆಳಗೆ ಉಡುಪಿಯ ಕೃಷ್ಣ ಮಠದಲ್ಲಿ :

" ಕ್ರಿಶ್ಚಿಯನ್ ಮತ್ತು ಇಸ್ಲಾಂ ಗಳು ಕೇವಲ ಮತ್ತೊಂದು ಮತ ಧರ್ಮಗಳಲ್ಲ. ಅವು ರಾಜಕೀಯ ಸಾಮ್ರಾಜ್ಯಶಾಹಿ ಸಿದ್ಧಾಂತಗಳು. ಮತ್ತು ಹಿಂದೂಗಳು ಅದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು"

ಎಂದು ಭಾಷಣ ಕಕ್ಕಿದ್ದರು. ಕಳೆದ ಐದಾರು ವರ್ಷಗಳಲ್ಲಿ ಅವರು ನಾಯಕರಾಗಿ ಬೆಳೆದದ್ದೇ ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ದ್ವೇಷವನ್ನು ಕಕ್ಕುತ್ತಾ..

ಇವರು ಅಂಚಿನ ನಾಯಕರೇ? ಇವರನ್ನು ಬಿಜೆಪಿ ಉಚ್ಚಾಟಿಸುವುದೇ?

►►https://www.siasat.com/bjp-mp-tejasvi-surya-calls-for-ghar-wapsi-of-muslims-christians-2248199/

ಇನ್ನು ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಆದಿತ್ಯನಾಥ್ ಮತ್ತು ಅವರ ಪಟಾಲಂ ಎಂಥಾ ಮುಸ್ಲಿಮ್ ದ್ವೇಷ ಹಾಗೂ ಇಸ್ಲಾಮನ್ನು ಹೀಯಾಳಿಸುವ ಭಾಷಣವನ್ನು ಮಾಡಿದ್ದರು ಎಂಬುದನ್ನು ಹಲವಾರು ಪತ್ರಿಕೆಗಳು ಸಾಧಾರವಾಗಿ ದಾಖಲಿಸಿವೆ. ಬಿಜೆಪಿಯ ಅರುಣ ಕುಮಾರ್ ಅವರ ಹೇಳಿಕೆ ಪ್ರಾಮಾಣಿಕವೇ ಆಗಿದ್ದಲ್ಲಿ ಇಡಿ ಉತ್ತರ ಪ್ರದೇಶ ಸರ್ಕಾರವನ್ನು ಬಿಜೆಪಿ ಬರ್ಖಾಸ್ತು ಮಾಡಬೇಕು.

►►https://thewire.in/communalism/100-instances-of-hate-speech-religious-polarisation-hindutva-supremacy-in-adityanaths-poll-speeches

ಅಷ್ಟೆಲ್ಲಾ ಏಕೆ?

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಗಳು ಚುನಾವಣೆಯ ಸಂದರ್ಭದಲ್ಲಿ ಮಾಡಿದ ಮುಸ್ಲಿಂ ದ್ವೇಷ ಭಾಷಣಗಳು ಮತ್ತು ಅಧಿಕಾರದಲ್ಲಿ ಬಂದ ಮೇಲೆ ತೆಗೆದುಕೊಂಡಿರುವ ಕಾಶ್ಮೀರ, ನಾಗರಿಕತ್ವ, ಲಿಂಚಿಂಗ್, ಮತಾಂತರ ನಿಶೇಧ, ಗೋಹತ್ಯಾ ನಿಶೇಧ, ಹಿಜಾಬ್ ನಿಶೇಧ, ಮಸೀದ್ ನಾಶ, ಆರ್ಥಿಕ ದಿಗ್ಭಂಧನ ಇನ್ನಿತ್ಯಾದಿ ನೀತಿಗಳು ಮತ್ತು ಯೋಜನೆಗಳು, ಮುಸ್ಲಿಮರ ನರಮೇಧ ಮಾಡ ಬೇಕೆಂಬ ಸಾವರ್ಕರ್ ಕರೆಯನ್ನು ನೆನಪಿಸುವ ನರಸಿಂಗಾನಂದನ ನರಮೇಧ ಕರೆಗೆ ಹಾಜರಿದ್ದು ಪರೋಕ್ಷ ಬೆಂಬಲ - ಕಾನೂನು ರಕ್ಷೆ ನೀಡುವ ಬಿಜೆಪಿ ಸರ್ಕಾರಗಳು.. ಇವೆಲ್ಲವೂ ಸಾವರ್ಕರ್ -ಹೆಡಗೇವಾರ್ ಕಂಡ ಪರಧರ್ಮ ದ್ವೇಷೀ ಬ್ರಾಹ್ಮಣಶಾಹಿ ಹಿಂದೂ ರಾಷ್ಟ್ರ ನಿರ್ಮಾಣದ ಹೆಜ್ಜೆಗಳೇ ಆಗಿವೆ.

ಬಿಜೆಪಿ ಕೇಂದ್ರದಲ್ಲಿ ಸರ್ಕಾರದಲ್ಲಿದೆ. ಹಾಗೂ ೧೭ ರಾಜ್ಯಗಳಲ್ಲಿ ಮಿತ್ರಪಕ್ಷಗಳ ಜೊತೆಗೆ ಅಥವಾ ಏಕಾಂಗಿಯಾಗಿ ಬಹುಮತವನ್ನು ಪಡೆದು ಸರ್ಕಾರ ನಡೆಸುತ್ತಿದೆ. ಆದರೆ ಎಲ್ಲಾ ಧರ್ಮಗಳ ಬಗ್ಗೆ ಸಮಭಾವ ಎನ್ನುವ ಧ್ಯೇಯ ನಮ್ಮದು ಎಂದು ಬರೆದುಕೊಳ್ಳುವ ಈ ಬಿಜೆಪಿ ಪಕ್ಷವನ್ನು ಪ್ರತಿನಿಧಿಸುವ ಒಬ್ಬ ಮುಸ್ಲಿಮ್ ಸಂಸದನಾಗಲೀ ಅಥವಾ ಶಾಸಕನಾಗಲೀ ಜೂನ್ ನಂತರ ಇರುವುದಿಲ್ಲ.

ಮುಸ್ಲಿಂ ಮುಕ್ತ ಬಿಜೆಪಿ ಅದರ ಮುಂದಿನ ನಡೆಯನ್ನು ಸೂಚಿಸುತ್ತಿಲ್ಲವೇ?

ಬಿಜೆಪಿಯ ಈ ನಾಯಕರು ಮಾಡುತ್ತಿರುವುದನ್ನೇ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಎತ್ತಿ ಹಿಡಿದು ಹೇಳಿಕೆ ನೀಡಿದ್ದರು. ಅಷ್ಟೆ.

ಹೀಗಾಗಿ ಬಿಜೆಪಿ ಪಕ್ಷವು ನಿಜಕ್ಕೂ ಪರಧರ್ಮ ದ್ವೇಷವನ್ನು ಬಿತ್ತುವ ಸಿದ್ಧಾಂತ ಮತ್ತು ವ್ಯಕ್ತಿಗಳನ್ನು ಪ್ರೋತ್ಸಾಹಿಸಬಾರದೆಂದರೆ…..

ಸ್ವತಃ ಬಿಜೆಪಿ ಪಕ್ಷವನ್ನು ಬರ್ಖಾಸ್ತುಗೊಳಿಸಬೇಕು ಮತ್ತು ರಾಷ್ಟ್ರ ಜೀವನದಿಂದ ಆರೆಸ್ಸೆಸ್ ಅನ್ನು ಉಚ್ಚಾಟಿಸಬೇಕು..

ಅಲ್ಲವೇ?

ಶಿವಸುಂದರ್

ಕೃಪೆ: ವಾರ್ತಾಭಾರತಿ

Advertisement
Advertisement
Recent Posts
Advertisement