Advertisement

"ಪ್ರವಾದಿ ಪೈಗಂಬರ್ ಕಾಲದ ಹುಸೇನಿ ಬ್ರಾಹ್ಮಣರು" ಒಂದು ಅಪರೂಪದ ಸಮುದಾಯದ ಚರಿತ್ರೆಯ ಮೇಲೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಬೆಳಕು ಚೆಲ್ಲುವ ಪುಸ್ತಕ

Advertisement

 

ಬರಹ: ಸನತ್‌ಕುಮಾರ ಬೆಳಗಲಿ (ಲೇಖಕರು ಹಿರಿಯ ಅಂಕಣಕಾರರು ಹಾಗೂ ಪ್ರಗತಿಪರ ಚಿಂತಕರು)

ಭಾವೈಕ್ಯದ ಬದುಕಿಗೆ ಜೀವಸೆಲೆಯಾಗಬಲ್ಲ ಅನೇಕ ಅಂಶಗಳು ಚರಿತ್ರೆಯ ಪುಟಗಳಲ್ಲಿ ಅಡಗಿ ಹೋಗಿವೆ. ವರ್ತಮಾನದ ಕೋಮು ರಾಜಕಾರಣಕ್ಕಾಗಿ ಅವುಗಳನ್ನು ಅಳಿಸಿ ಹಾಕಿ ಹೊಸ ಚರಿತ್ರೆಯನ್ನು ಬರೆಯುವ ಹುನ್ನಾರವೂ ನಡೆದಿದೆ. ಇಂಥ ಸಂದರ್ಭದಲ್ಲಿ (ಪ್ರವಾದಿ ಕಾಲದ ಹುಸೇನಿ ಬ್ರಾಹ್ಮಣರು ) ಈ ಪುಸ್ತಕ ಹೊರಬಂದಿರುವುದು ಶ್ಲಾಘನೀಯವಾಗಿದೆ.ಇಂಥ ಸತ್ಯಶೋಧನೆಯ ಕೆಲಸ ಇನ್ನಷ್ಟು ನಡೆಯಬೇಕಾಗಿದೆ.

ಕೆಲ ತಿಂಗಳ ಹಿಂದೆ ಭಾರತೀಯ ‘ಮುಸ್ಲಿಮರ ಅನಾಥ ಪ್ರಜ್ಞೆ’ ಎಂಬ ಅಪರೂಪದ ಕೃತಿಯನ್ನು ಕನ್ನಡಕ್ಕೆ ನೀಡಿದ ಗೆಳೆಯ ಎನ್.ಕೆ. ಮೋಹನರಾಮ ಈಗ ಅಷ್ಟೇ ಮಹತ್ವದ ಸಂಶೋಧನಾತ್ಮಕವಾದ ಪುಸ್ತಕ ಬರೆದಿದ್ದಾರೆ. ಈ ಪುಸ್ತಕದ ಹೆಸರೇ ಕುತೂಹಲಕಾರಿಯಾಗಿದೆ. ಈವರೆಗೂ ಯಾರಿಗೂ ಗೊತ್ತಿರದ ಒಂದು ಅಪರೂಪದ ಸಮುದಾಯದ ಇತಿಹಾಸದ ಮೇಲೆ ಮೋಹನರಾಮ ಬೆಳಕು ಚೆಲ್ಲಿದ್ದಾರೆ.

ಮಹಮ್ಮದ್ ಪೈಗಂಬರರ ಕಾಲದಲ್ಲಿ ಅಂದರೆ ಕ್ರಿ ಶ 570- 630 ಕಾಲಘಟ್ಟದಲ್ಲಿ ಇರಾಕಿನ ರಾಜಧಾನಿ ಬಗ್ದಾದ್ ಸುತ್ತಮುತ್ತ ಬ್ರಾಹ್ಮಣರು ವಾಸಿಸುತ್ತಿದ್ದರಂತೆ. ಅವರನ್ನು ಮೊಹೈಲ್ ಬ್ರಾಹ್ಮಣರು ಎಂದು ಕರೆಯುತ್ತಿದ್ದರಂತೆ. ಇದು ಬರೀ ಅಂತೆ ಕಂತೆಯಲ್ಲ . ಸೂಕ್ತ ಸಾಕ್ಷ್ಯಾಧಾರ ಗಳೊಂದಿಗೆ ಮೋಹನರಾಮ ದಾಖಲಿಸಿದ್ದಾರೆ. ಜನಾಂಗ ದ್ವೇಷದ ಸದ್ಯದ ಆತಂಕದ ಕ್ಷಣಗಳಲ್ಲಿ ಈ ಪುಸ್ತಕ ಪ್ರವಾದಿಯವರೊಂದಿಗಿನ ಬ್ರಾಹ್ಮಣರ ಸಂಪರ್ಕ ಮತ್ತು ಅವರಿಂದ ಪ್ರಭಾವಿತರಾದುದನ್ನು ಸಹಬಾಳ್ವೆಯ ಹೊಸ ಭರವಸೆಯನ್ನು ಮೂಡಿಸುತ್ತದೆ.

ಪೈಗಂಬರರ ಕಾಲದಲ್ಲಿ ಬ್ರಾ ಅಂದರೆ ಕ್ರಿ,ಶ 6 ಮತ್ತು 7ನೇ ಶತಮಾನದಲ್ಲಿ ಅರಬ್ ಪ್ರದೇಶದಲ್ಲಿ ಬ್ರಾಹ್ಮಣರು ನೆಲೆಸಿದ್ದರೆ? ಅಲ್ಲಿ ನಡೆದ ಯುದ್ಧದಲ್ಲಿ ಪಾಲ್ಗೊಂಡಿದ್ದರೆ? ಅವರಿಗೆ ಹುಸೇನಿ ಬ್ರಾಹ್ಮಣರು ಎಂಬ ಹೆಸರು ಹೇಗೆ ಬಂತು ಎಂದು ತಿಳಿಯಲು ಈ 84 ಪುಟಗಳ ಈ ಪುಸ್ತಕವನ್ನು ಓದಬೇಕು. ಚರಿತ್ರೆಯನ್ನು ವಿರೂಪಗೊಳಿಸುತ್ತಿರುವ ಈ ದಿನಗಳಲ್ಲಿ ಈ ಅಪರೂಪದ ನೈಜ ಇತಿಹಾಸದ ಪುಟಗಳು ಕಸದ ಬುಟ್ಟಿಗೆ ಸೇರಬಾರದು ಎಂಬ ಆತಂಕದಿಂದಲೇ ತುಂಬಾ ಕಷ್ಟಪಟ್ಟು ಮೋಹನರಾಮ ಈ ಪುಸ್ತಕ ಬರೆದಿದ್ದಾರೆ.

ಈಗ ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳ ಮೂಲಕ ಚರಿತ್ರೆ ವಿರೂಪಗೊಳಿಸುವ, ನೈಜ ಇತಿಹಾಸ ಮುಚ್ಚಿ ಹಾಕುವ, ನಾಯಕರನ್ನು ಖಳ ನಾಯಕರನ್ನಾಗಿ ಖಳ ನಾಯಕರನ್ನು ನಾಯಕರನ್ನಾಗಿ ವಿಜೃಂಭಿಸುವ ಕಾಲ. ಮೋಹನರಾಮ ಶ್ರಮ ಹಾಕಿ ಎಲ್ಲೆಲ್ಲೊ ಹುಡುಕಿ ಹೊಸ ನೈಜ ಚರಿತ್ರೆ ಕಟ್ಟಿಕೊಟ್ಟಿದ್ದಾರೆ.

ವಾಟ್ಸ್‌ಆ್ಯಪ್, ಫೇಸ್‌ಬುಕ್, ಖಾಸಗಿ ಟಿವಿಗಳ ಮೂಲಕ ಜನಸಾಮಾನ್ಯರ ನಡುವೆ ದ್ವೇಷದ ದಳ್ಳುರಿ ಎಬ್ಬಿಸಿ ಹೆಣಗಳ ರಾಶಿಯ ಮೇಲೆ ಓಟಿನ ಬೆಳೆ ತೆಗೆಯುವ ಈ ದಿನಗಳಲ್ಲಿ ವಿವಿಧ ಸಮುದಾಯಗಳ ನಡುವಿನ ಪ್ರೀತಿ, ಬಾಂಧವ್ಯ, ಸ್ನೇಹದ ಚರಿತ್ರೆಯ ಅವಿತು ಹೋದ ಸಂಗತಿಗಳ ಮೇಲೆ ಮೋಹನರಾಮ ಹೊಸ ಬೆಳಕು ಚೆಲ್ಲಿದ್ದಾರೆ.

ಇತಿಹಾಸದ ಪುಟಗಳನ್ನು ಹುಡುಕುತ್ತ ಹೋದ ಮೋಹನರಾಮ ಯಾರಿಗೂ ಗೊತ್ತಿರದ ಹಲವಾರು ವಿಷಯಗಳನ್ನು ಕಂಡು ಅಚ್ಚರಿಗೊಂಡಿದ್ದಾರೆ. ಮೊಹೈಲ್ ಬ್ರಾಹ್ಮಣರು ಇಂಡಿಯಾದಿಂದ ಇರಾಕ್, ಅರಬ್ ಭಾಗಗಳಿಗೆ ಹೋಗಿದ್ದು ಮತ್ತು ಅಲ್ಲಿ ನೆಲೆಸಿದ್ದು ರೇಶ್ಮೆ ವ್ಯಾಪಾರದ ಕಾರಣಕ್ಕಾಗಿ. ವ್ಯಾಪಾರಕ್ಕೆಂದು ಹೋದವರು ಅಲ್ಲೇ ವಾಸ್ತವ್ಯ ಮಾಡಿದರು. ಕ್ರಿಸ್ತ ಪೂರ್ವದ ಕೊನೆಯ ಎರಡು ಮತ್ತು ಮೂರನೇ ಶತಮಾನದಿಂದ ಕ್ರಿಸ್ತ ಶಕೆಯ ಎಂಟನೇ ಶತಮಾನದವರೆಗೆ ಅಂದರೆ ಇಸ್ಲಾಮ್ ಪ್ರಬಲ ಶಕ್ತಿಯಾಗಿ ಹೊರ ಹೊಮ್ಮುವ ವರೆಗೆ ಮರಳುಗಾಡಿನ ಆ ಪ್ರದೇಶದಲ್ಲಿ ಮೆಸಪಟೋಮಿಯಾ ಸಂಸ್ಕೃತಿಯ ಭಾಗವಾಗಿ ಸಾವಿರಾರು ಬೌದ್ಧ ಮತ್ತು ಹಿಂದು ಕುಟುಂಬಗಳು ನೆಲೆಸಿದ್ದವು. ಬುದ್ಧ ವಿಹಾರಗಳೊಂದಿಗೆ ಶಿವ, ಮರಕೇಶ ಮೊದಲಾದ ಶಕ್ತಿ ದೇವರ ದೇವಾಲಯಗಳು ಇದ್ದವು ಎಂಬುದು ಲೇಖಕರ ಅಭಿಪ್ರಾಯ.

ಪ್ರವಾದಿಯ ಕಾಲದಲ್ಲಿ ಅರೇಬಿಯದಲ್ಲಿದ್ದು ಇಸ್ಲಾಮ್ ಧರ್ಮ ಹುಟ್ಟಿದ ದಿನಗಳಿಗೆ ಸಾಕ್ಷಿಯಾಗಿದ್ದ ಅದನ್ನು ಕಣ್ಣಾರೆ ಕಂಡ ಪ್ರವಾದಿಯ ನಂಬಿಕೆಗಳಿಗಾಗಿ ಪ್ರಾಣವನ್ನು ನೀಡಿದ ಇಮಾಮರ ಬಲಿದಾನಕ್ಕೆ ಶೋಕಿಸುವ ಮೊಹೈಲ್ ಬ್ರಾಹ್ಮಣರು ಬದುಕಿದ್ದು ಬ್ರಾಹ್ಮಣರಾಗಿಯೇ ಎಂಬುದು ಕೂಡ ಸತ್ಯ. ಮತಾಂತರವಾಗಲು ಇವರನ್ನು ಯಾರೂ ಒತ್ತಾಯಿಸಲಿಲ್ಲ. ಬ್ರಾಹ್ಮಣ ಆಸ್ಮಿತೆಗೆ ಚ್ಯುತಿ ತರಲಿಲ್ಲ.ಈ ಮೊಹೈಲ್ ಬ್ರಾಹ್ಮಣರ ಬಗ್ಗೆ ಗೂಗಲ್‌ನಲ್ಲಿ ತಡಕಾಡಿದಾಗ ಸಯ್ಯದ್ ನಸೀರ್ ಅಹ್ಮದ್ ಎಂಬವರು ಮೊಹೈಲ್ ಬ್ರಾಹ್ಮಣರ ಬಗ್ಗೆ ಬರೆದಿದ್ದಾರೆ ಎಂದು ತಿಳಿದು ಬರುತ್ತದೆ. ಆದರೆ ಆ ಪುಸ್ತಕದ ವಿವರಗಳು ಲಭ್ಯವಿಲ್ಲ.
ಮೊಹೈಲ್ ಬ್ರಾಹ್ಮಣರು ಶುದ್ಧ ಹಿಂದು ಗಳಂತೆಯೂ ಬದುಕಲಿಲ್ಲ. ಮುಸಲ್ಮಾನರಂತೆ ಕೂಡ ಬದುಕಲಿಲ್ಲ. ಎರಡೂ ಧರ್ಮಗಳ ಸಂಪ್ರದಾಯ ಅಳವಡಿಸಿಕೊಂಡರು. ಮಾಂಸಾಹಾರಿಗಳಾದರೂ ಗೋಮಾಂಸ ತಿನ್ನಲಿಲ್ಲ. ಇಂದಿಗೂ ಮೊಹೈಲ್ ಬ್ರಾಹ್ಮಣರ ಕುಟುಂಬ ಗಳಲ್ಲಿ ಮಕ್ಕಳ ಕೇಶ ಮುಂಡನ ಇಮಾಮರ ಹೆಸರಿನಲ್ಲಿ ನಡೆಯುತ್ತದೆ. ಮದುವೆಯ ಸಂದರ್ಭದಲ್ಲಿ ಇಮಾಮ ಸಾಹೇಬರ ಹೆಸರಿನಲ್ಲಿ ವಿಶೇಷ ಹಲ್ವಾವನ್ನು ತಯಾರು ಮಾಡುತ್ತಾರೆ. ಕರ್ಬಲ ಯುದ್ಧದಲ್ಲಿ ರಹಬ ದತ್ತನ ಕತ್ತಿನ ಕೆಳ ಭಾಗದಲ್ಲಿ ಆದ ಗಾಯದ ಗುರುತು ಇಂದಿಗೂ ಮೊಹೈಲ್ ಬ್ರಾಹ್ಮಣರ ಕತ್ತಿನಲ್ಲಿರುತ್ತದೆ ಎಂಬ ನಂಬಿಕೆ ಇವರಲ್ಲಿ ದಟ್ಟವಾಗಿದೆ.
ಇಂದಿಗೂ ಪಂಜಾಬ್, ರಾಜಸ್ಥಾನ ಹಾಗೂ ಪಾಕಿಸ್ತಾನದ ಪಂಜಾಬ್ ಭಾಗಗಳಲ್ಲಿ ಅನೇಕ ಊರುಗಳಲ್ಲಿ ಮೊಹರಂ ಹಬ್ಬದ ತಾಜಿಯಾಗೆ (ಮೆರವಣಿಗೆಯಲ್ಲಿ ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಮಂಟಪ) ಮೊದಲು ಹೆಗಲು ಕೊಡಬೇಕಾದವರು ಈ ಮೊಹೈಲ್ ಬ್ರಾಹ್ಮಣರು.ಹೀಗೆ ಹಲವಾರು ಕುತೂಹಲಕಾರಿ ಅಂಶಗಳ ಮೇಲೆ ಲೇಖಕರು ಬೆಳಕು ಚೆಲ್ಲಿದ್ದಾರೆ.

ಕರ್ಬಲ ಯುದ್ಧದಲ್ಲಿ ಭಾಗಿಯಾಗಿದ್ದ ಇಸ್ಲಾಮ್ ಧರ್ಮವಾಗಿ ಬೆಳೆದ ಕಾಲದಲ್ಲಿ ಆ ಭಾಗದಲ್ಲಿ ಬದುಕಿದ ಮೊಹೈಲ್ ಬ್ರಾಹ್ಮಣ ರಹಬ ದತ್ತನ ಪ್ರಸಂಗ ಇತಿಹಾಸ ಪುಟಗಳಿಂದ ಮರೆಯಾಗಿದ್ದು ವಿಷಾದದ ಸಂಗತಿಯಾಗಿದೆ.ಅನೇಕ ಮುಸಲ್ಮಾನರಿಗೂ ಗೊತ್ತಿಲ್ಲ.ಹಿಂದೂ ಮುಸಲ್ಮಾನರು ಕೂಡಿ ಆಚರಿಸುವ ಮೊಹರಂ ಹಿನ್ನೆಲೆಯಲ್ಲಿ 1,500 ವರ್ಷಗಳ ಹಿಂದಿನ ಕರ್ಬಲ ಯುದ್ಧಕ್ಕೆ ರಹಬ ದತ್ತನ ಕೊಡುಗೆಯೂ ಕಾರಣವಾಗಿರಬಹುದು. ದೇಶ ವಿಭಜನೆಯ ಹಿಂದಿನ ಭಾರತದಲ್ಲಿ ಹಿಂದೂ ಮತ್ತು ಮುಸಲ್ಮಾನರು ಒಟ್ಟಾಗಿ ಆಚರಿಸುತ್ತಿದ್ದರು. ಈಗಲೂ ಅನೇಕ ಕಡೆ ಆಚರಿಸಲ್ಪಡುತ್ತದೆ.

ಹನ್ನೊಂದನೇ ಶತಮಾನದಲ್ಲಿ ದಲಿತರಿಗೆ ದೇವಾಲಯ ಪ್ರವೇಶದ ಹಕ್ಕನ್ನು ಕೊಟ್ಟ, ಜನಸಾಮಾನ್ಯರ ಭಾಷೆಯನ್ನು ದೇವಾಲಯಗಳ ಗರ್ಭಗುಡಿಗೆ ತಂದ ದಲಿತ_ ಹಿಂದುಳಿದ ಜಾತಿಗಳ ಮೌಖಿಕ ಪರಂಪರೆಯ ಆಳ್ವಾರುಗಳನ್ನು ತನ್ನ ಪಂಥದ ದೇವಸ್ಥಾನಗಳಲ್ಲಿ ಸ್ಥಾಪಿಸಿ ಅವರಿಗೆ ದೇವರ ಸ್ಥಾನವನ್ನು ಕೊಟ್ಟ ರಾಮಾನುಜಾಚಾರ್ಯರು ಮುಸ್ಲಿಮ್ ಮಹಿಳೆಯೊಬ್ಬಳಿಗೆ ದೇವತೆಯ ಸ್ಥಾನವನ್ನು ನೀಡಿದ್ದು, ಮಾತ್ರವಲ್ಲ ಆಕೆಯ ವಿಗ್ರಹವನ್ನು ಮೇಲುಕೋಟೆಯ ಗರ್ಭಗುಡಿಯಲ್ಲಿ ಸ್ಥಾಪಿಸಿದ ಬಗ್ಗೆ ಲೇಖಕರು ಗಮನ ಸೆಳೆಯುತ್ತಾರೆ. ರಾಮಾನುಜಾಚಾರ್ಯರು ಸ್ವತಃ ಮೇಲುಕೋಟೆ ಮತ್ತು ತಮಿಳುನಾಡಿನ ಶ್ರೀ ರಂಗಂ ದೇವಾಲಯಗಳಲ್ಲಿ ಸ್ಥಾಪಿಸಿದ ಮುಸ್ಲಿಮ್ ದೇವತೆ ಬೀಬಿ ನಾಚಿಯಾರಗೆ ಈಗಲೂ ನಿತ್ಯ ಪೂಜೆ ಮಾಡಲಾಗುತ್ತದೆ.

ಹೀಗೆ ಬರೆಯುತ್ತ 579 ರಿಂದ ಒಮ್ಮೆಲೇ 2022ಕ್ಕೆ ಮಹಾಲಂಘನ ಮಾಡುವ ಲೇಖಕರು ಬೇಲೂರಿನ ಚೆನ್ನಕೇಶವ ಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ ಸಂದರ್ಭದಲ್ಲಿ ನಡೆಯುವ ಕುರ್‌ಆನ್ ಪಠಣದ ವಿರುದ್ಧ ಹಿಂದುತ್ವದ ಸೋಗುಹಾಕಿದ ಮತಾಂಧರು ಹುಯಿಲೆಬ್ಬಿಸಿದ ಸಂಗತಿಯ ಮೇಲೆ ಬೆಳಕು ಚೆಲ್ಲುತ್ತಾರೆ.

ಭಾರತದಲ್ಲಿ ಮುಸಲ್ಮಾನರ ಪ್ರಾಬಲ್ಯ ಆಗುವ ಮೊದಲೇ ರಾಮಾನುಜಾಚಾರ್ಯರಿಗೂ ಮುಸಲ್ಮಾನರಿಗೂ ಅತ್ಯಂತ ಆತ್ಮೀಯ ಬಾಂಧವ್ಯವಿತ್ತು. ರಾಮಾನುಜಾಚಾರ್ಯರು ಜೀವಿತ ಕಾಲದಲ್ಲಿ ಮುಸ್ಲಿಮರು ಅಲ್ಲಿ ಕೊಡುವ ತೀರ್ಥ ಪ್ರಸಾದವನ್ನು ಸೇವಿಸುತ್ತಾ ಬಂದಿದ್ದಾರೆ.

ಬಾಲಾಜಿ ಬೀಬಿ ನಾಚಿಯಾರಳನ್ನು ಮದುವೆಯಾದ ಕಾರಣದಿಂದ ಆಂಧ್ರಪ್ರದೇಶದ ಕಡಪಾ, ಗುಂಟೂರು ಭಾಗಗಳಲ್ಲಿ ಇಂದಿಗೂ ಮುಸಲ್ಮಾನರು ಬಾಲಾಜಿ ದೇವಾಲಯಕ್ಕೆ ಹೋಗುತ್ತಾರೆ. ದೇವಾಲಯಕ್ಕೆ ಹೋಗುವ ಹಿಂದಿನ ದಿನವೇ ಮಾಂಸಾಹಾರವನ್ನು ತ್ಯಜಿಸುತ್ತಾರೆ. ಇಷ್ಟೇ ಅಲ್ಲ ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ದೇವಾಲಯದಲ್ಲಿ ಸಲಾಮ್ ಆರತಿ ನಡೆಸಲಾಗುತ್ತದೆ. ಇದು ಟಿಪ್ಪು ಸುಲ್ತಾನ ಕಾಲದಿಂದಲೂ ನಡೆದು ಬಂದಿದೆ.

ಬಹುತ್ವ ಭಾರತದ ಸೌಹಾರ್ದ ಬದುಕಿನ ಹಲವಾರು ಸಂಗತಿಗಳನ್ನು ಕುರಿತು ಲೇಖಕರು ವಿವರವಾಗಿ ಬರೆದಿದ್ದಾರೆ. ಆದರೆ ಇದು ಅತ್ಯಂತ ಕೆಟ್ಟ ಕಾಲ. ಶತಮಾನಗಳ ಕಾಲ ಕೂಡಿ ಬಾಳಿದ ಇಡೀ ವಚನ ವಿಶ್ವವೇ ಹಿಂದೂ ಮತ್ತು ಮುಸಲ್ಮಾನರ ನಡುವಿನ ಸೌಹಾರ್ದದ ಬದುಕನ್ನು, ಬಾಂಧವ್ಯದ ಬಳ್ಳಿಯನ್ನು ನಾಶ ಮಾಡಲು ಜನಾಂಗದ್ವೇಷಿ ಶಕ್ತಿಗಳು ಹೇಗೆಲ್ಲ ಯತ್ನಿಸುತ್ತಿವೆ ಎಂಬ ಬಗ್ಗೆ ಲೇಖಕರು ಸಾಕಷ್ಟು ಸಾಕ್ಷ್ಯಾಧಾರಗಳನ್ನು ನೀಡಿದ್ದಾರೆ.
ಪುಸ್ತಕದ ಮೊದಲ ಭಾಗದ ‘ಹುಸೇನಿ ಬ್ರಾಹ್ಮಣರ’ ಅಧ್ಯಾಯ ಅತಿರಂಜಿತ ಅನಿಸಬಹುದು.ಇದು ಸಹಜ,ಅದನ್ನು ಬದಿಗಿಟ್ಟು ಎಲ್ಲರೂ ಓದಬೇಕಾದ, ಓದಿ ಇನ್ನಷ್ಟು ಸತ್ಯಾಂಶಗಳನ್ನು ಶೋಧಿಸಲು ಈ ಪುಸ್ತಕ ಪ್ರೇರಣೆ ನೀಡುತ್ತದೆ. ಈ ಚಾರಿತ್ರಿಕ ವಿಷಯದ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕಾಗಿದೆ.

ಭಾವೈಕ್ಯದ ಬದುಕಿಗೆ ಜೀವಸೆಲೆಯಾಗಬಲ್ಲ ಅನೇಕ ಅಂಶಗಳು ಚರಿತ್ರೆಯ ಪುಟಗಳಲ್ಲಿ ಅಡಗಿಹೋಗಿವೆ. ವರ್ತಮಾನದ ಕೋಮು ರಾಜಕಾರಣಕ್ಕಾಗಿ ಅವುಗಳನ್ನು ಅಳಿಸಿ ಹಾಕಿ ಹೊಸ ಚರಿತ್ರೆಯನ್ನು ಬರೆಯುವ ಹುನ್ನಾರವೂ ನಡೆದಿದೆ. ಇಂಥ ಸಂದರ್ಭದಲ್ಲಿ ಈ ಪುಸ್ತಕ ಹೊರಬಂದಿರುವುದು ಶ್ಲಾಘನೀಯವಾಗಿದೆ.ಇಂಥ ಸತ್ಯಶೋಧನೆಯ ಕೆಲಸ ಇನ್ನಷ್ಟು ನಡೆಯಬೇಕಾಗಿದೆ.

•ಸನತ್ ಕುಮಾರ್ ಬೆಳಗಲಿ
(ಕೃಪೆ: ಪ್ರಚಲಿತ ಅಂಕಣ- ವಾರ್ತಾಭಾರತಿ ೧೮.೭.೨೦೨೨)

 

Advertisement
Advertisement
Recent Posts
Advertisement