Advertisement

ಕರಾವಳಿಯ ಯುವಜನತೆಯಲ್ಲಿ ಕೈ ಮುಗಿದು ವಿನಂತಿಸುತ್ತೇನೆ. ಧರ್ಮ, ಕೋಮು ದ್ವೇಷವನ್ನು ದೂರ ಮಾಡಿ. 30 ವರ್ಷಗಳ ಹಿಂದಿದ್ದ ಕರಾವಳಿಯನ್ನು ಮತ್ತೆ ನಿರ್ಮಾಣ ಮಾಡಿ: ಸಿದ್ದರಾಮಯ್ಯ ವಿನಂತಿ

Advertisement

 

ಪ್ರೀತಿಯ ಯುವ ಬಂಧುಗಳೆ,

ರಾಜ್ಯದಲ್ಲಿ, ಮುಖ್ಯವಾಗಿ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನನ್ನನ್ನು ಆತಂಕಿತಗೊಳಿಸಿವೆ, ನೋವಿನಲ್ಲಿ ಮುಳುಗಿಸಿವೆ. ಬಾಳಿ ಬದುಕಬೇಕಾದ ಯುವಕರು ಕ್ಷುಲ್ಲಕ ಕಾರಣಗಳಿಗಾಗಿ, ಕೆಲವೊಮ್ಮೆ ಕಾರಣಗಳೆ ಇಲ್ಲದೆ ಹತ್ಯೆಗೀಡಾಗುತ್ತಿರುವುದನ್ನು ಕನ್ನಡ ನಾಡಿನ ಆತ್ಮಸಾಕ್ಷಿ ಸಹಿಸಬಾರದು. ದುಡಿಯುವ ಜಾತಿ, ಪಂಗಡ, ಧರ್ಮಗಳಿಗೆ ಸೇರಿದ ಮಕ್ಕಳು ವಿನಾ ಕಾರಣ ಹತ್ಯೆಯಾಗುತ್ತಿರುವುದನ್ನು ಯಾವ ನಾಗರಿಕ ಸಮಾಜವೂ ಸಹಿಸಲಾಗದು. ಸಹಿಸಬಾರದು. ಶಾಂತಿ, ಸೌಹಾರ್ದತೆಗೆ ಹೆಸರಾದ ಕರ್ನಾಟಕವನ್ನು ವಿನಾ ಕಾರಣ ಅಶಾಂತಿಯ ಕಡಲಲ್ಲಿ ಮುಳುಗಿಸಲಾಗುತ್ತಿದೆ.

ನಾಡಿನ ಆತ್ಮಸಾಕ್ಷಿಯಂತಿದ್ದ ಪೂರ್ಣಚಂದ್ರ ತೇಜಸ್ವಿಯವರು ಒಮ್ಮೆ ‘ಕೊಂದು ಉಳಿಸಿಕೊಳ್ಳುವ ಧರ್ಮವಿದ್ದರೆ ಅದನ್ನು ಧರ್ಮವೆನ್ನಲಾಗುತ್ತದೆಯೇ’ ಎಂದು ಪ್ರಶ್ನಿಸಿದ್ದರು. ಬಸವಣ್ಣನವರು ‘ಕೊಂದವರುಳಿದರೆ ಕೂಡಲ ಸಂಗಮದೇವಾ’ ಎಂದು ಆರ್ತವಾಗಿ ಕೇಳಿದ್ದರು. ಧರ್ಮಕ್ಕಾಗಿ ಕೊಲೆ ಮಾಡಿದ್ದೇವೆ ಎನ್ನುವವರನ್ನು ಯಾವ ದೇವರೂ ಕ್ಷಮಿಸುವುದಿಲ್ಲ ಎಂಬ ಮಾತುಗಳನ್ನು ಗುರು ಹಿರಿಯರು ಹೇಳುತ್ತಲೇ ಬಂದಿದ್ದಾರೆ.

ಧರ್ಮವನ್ನು ನೀನು ರಕ್ಷಿಸಿದರೆ ಅದೆ ಧರ್ಮವು ನಿನ್ನನ್ನು ರಕ್ಷಿಸುತ್ತದೆ ಎಂಬ ಮಹಾಭಾರತದ ಮಾತುಗಳನ್ನು ಕೆಲವು ಮತಾಂಧರು ಹಾಗೂ ನಿರ್ಧಿಷ್ಟ ಹಿತಾಸಕ್ತಿಯುಳ್ಳ ಜನರು ಅದರ ಅರ್ಥವನ್ನೆ ಕುಗ್ಗಿಸಿದ್ದಾರೆ. ದಯೆ, ಕರುಣೆ, ಅಸಹಾಯಕರ ರಕ್ಷಣೆ ಮುಂತಾದ ಉದಾತ್ತವಾದ ವಿಶ್ವ ಆದರ್ಶದ ಮಾತುಗಳನ್ನು ತಿರುಚಿ ಧರ್ಮಕ್ಕಾಗಿ ಕೊಲ್ಲು ಎಂಬ ದುಷ್ಟ ವ್ಯಾಖ್ಯಾನ ಮಾಡಿ ಶೂದ್ರ, ದಲಿತ ಮಕ್ಕಳನ್ನು ಹಾದಿ ತಪ್ಪಿಸಲಾಗುತ್ತಿದೆ.

ಇಸ್ಲಾಮಿನ ಉದಾತ್ತ ತತ್ವಗಳನ್ನು ಮತ್ತು ಶಾಂತಿ, ಸತ್ಯಗಳನ್ನು ಮುಂದು ಮಾಡುವ ಬದಲು ಅಪವ್ಯಾಖ್ಯಾನ ಮಾಡುವ ದುಷ್ಟರಿಂದಾಗಿ ಮುಸ್ಲಿಂ ಬಡ ಯುವಕರ ಮೆದುಳೂ ಹಾಳಾಗುತ್ತಿದೆ. ಹಿಂದುವಿನ ಕೊಲೆಗೆ ಪ್ರತೀಕಾರವಾಗಿ ಕೈಗೆ ಸಿಕ್ಕ ಯಾರಾದರೂ ಮುಸ್ಲಿಮನನ್ನು ಕೊಲ್ಲು, ಮುಸ್ಲಿಮನ ಕೊಲೆಗೆ ಪ್ರತೀಕಾರವಾಗಿ ಕೈಗೆ ಸಿಕ್ಕ ಯಾರಾದರೂ ಹಿಂದುವನ್ನು ಕೊಲ್ಲು ಎಂಬ ಕ್ರೌರ್ಯವನ್ನು ಈ ಮಕ್ಕಳ ತಲೆಗೆ ತುಂಬಿದವರು ಯಾರು? ಅಂಥ ಕ್ರೌರ್ಯವನ್ನು ವ್ಯವಸ್ಥಿತವಾಗಿ ತುಂಬಿದವರನ್ನು ಅಪರಾಧಿಗಳನ್ನಾಗಿ ಮಾಡುವ ಕಾನೂನಿನ ಅವಶ್ಯಕತೆ ಎಲ್ಲಕ್ಕಿಂತ ಹೆಚ್ಚಾಗಿದೆ.

ದುಷ್ಟರ ತಾಳಕ್ಕೆ ತಕ್ಕಂತೆ ಈ ಬೇಜವಾಬ್ಧಾರಿ ಸರ್ಕಾರವೂ ಕುಣಿಯುತ್ತಿದೆ ಅಥವಾ ಸರ್ಕಾರದ ಕ್ರೂರವಾದ, ಪಕ್ಷಪಾತಿಯಾದ ಕ್ರೂರ ದೊರೆ ಹಮ್ಮುರಾಬಿ ಕಾಲದ ನಿಲುವುಗಳೆ ಅಮಾಯಕ ಮಕ್ಕಳ ಕೊಲೆಗಳಿಗೆ ಕಾರಣವಾಗುತ್ತಿವೆ ಎಂಬ ಅನುಮಾನ ಕೂಡ ಬರುತ್ತಿದೆ.

ಬ್ಯಾಬಿಲೋನಿಯಾದಲ್ಲಿ ಸುಮಾರು 3800 ವರ್ಷಗಳ ಹಿಂದೆ ಹಮ್ಮುರಾಬಿ ಎಂಬ ರಾಜನಿದ್ದ, ಆತ ಕಾನೂನೊಂದನ್ನು ಜಾರಿಗೆ ತಂದಿದ್ದ. ಯಾರಾದರೂ ಇನ್ನೊಬ್ಬರ ಕಣ್ಣಿಗೆ ಹಾನಿ ಮಾಡಿದರೆ ಹಾನಿ ಮಾಡಿದವನ ಕಣ್ಣುಗಳನ್ನು ಕಿತ್ತು ಹಾಕುವ, ಕೊಲೆ ಮಾಡಿದರೆ ಕೊಲೆ ಮಾಡುವ, ಕೈ ಕಾಲು ಊನವಾದರೆ, ಊನ ಮಾಡಿದವನ ಅಂಗಾಂಗಗಳನ್ನು ಊನ ಮಾಡುವ ಬರ್ಬರ ಕಾನೂನುಗಳನ್ನು ಜಾರಿಗೆ ತಂದಿದ್ದ. ಹಮ್ಮುರಾಬಿಯನ್ನು ಜಗತ್ತಿನ ಕ್ರೂರ ದೊರೆ ಎನ್ನಲಾಗುತ್ತದೆ. ನಮ್ಮ ರಾಜ್ಯದ ಬೇಜವಾಬ್ಧಾರಿಯುತ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಕರಾವಳಿಯಲ್ಲಿ ಹೇಳಿದ “ಕ್ರಿಯೆಗೆ ಪ್ರತಿಕ್ರಿಯೆ” ಎಂಬ ಮಾತುಗಳು ಥೇಟ್ ಹಮ್ಮುರಾಬಿಯ ಬರ್ಬರವಾದ, ಅನಾಗರಿಕವಾದ ಕಾನೂನನ್ನೆ ನೆನಪಿಸುತ್ತದೆ. ಕರ್ನಾಟಕದ ಇತಿಹಾಸದಲ್ಲಿ ಬೊಮ್ಮಾಯಿಯವರು 21ನೆ ಶತಮಾನದ ಹಮ್ಮುರಾಬಿ ಎಂದು ಕುಖ್ಯಾತವಾಗುತ್ತಾರೆ.

ನಮ್ಮ ಮಹಾಕಾವ್ಯವಾದ ಮಹಾಭಾರತದಲ್ಲಿ ಕೊಲೆಯನ್ನು ಖಂಡಿಸುವ ಮಾತುಗಳು ಅನೇಕ ಕಡೆ ಬರುತ್ತವೆ. ಮಹಾ ಭಾರತದ ಮೂಲ ಆಶಯವು ಭಗವದ್ಗೀತೆ ಹೇಳುವುದಕ್ಕೆ ಸಂಪೂರ್ಣ ಭಿನ್ನವಾದ ಹಾಗೆ ಕಾಣುತ್ತದೆ. ಈ ಮಹಾಕಾವ್ಯದಲ್ಲಿ ಪಾಂಡವರಿಗೆ ಅಧಿಕಾರ ತಪ್ಪಿಸಿದ ಕೌರವರ ಬಗ್ಗೆ ಅಲ್ಲಿನ ಜನರು ಶಾಪ ಹಾಕುತ್ತಾರೆ. ಆದರೆ ಯುದ್ಧ ಮುಗಿಯುತ್ತದೆ. ಎರಡೂ ಕಡೆಯ ಅಸಂಖ್ಯಾತ ಜನ ಮರಣ ಹೊಂದುತ್ತಾರೆ. ನಾಡಿನ ತುಂಬೆಲ್ಲ ವಿಧವೆಯರು, ತಬ್ಬಲಿಗಳಾದ ಮಕ್ಕಳು, ತಬ್ಬಲಿಗಳಾದ ತಂದೆ ತಾಯಿಗಳ ಕಣ್ಣೀರು ಒರೆಸುವುದಕ್ಕೂ ಜನ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಧರ್ಮರಾಯನ ನೇತೃತ್ವದಲ್ಲಿ ಪಾಂಡವರು ಊರೊಳಗೆ ಪ್ರವೇಶಿಸುತ್ತಾರೆ. ಆಗ ಊರ ಜನ ಪಾಂಡವರನ್ನು ಅತ್ಯಂತ ಕಠಿಣ ಭಾಷೆಯಲ್ಲಿ ನಿಂದಿಸುತ್ತಾರೆ. ಅಧಿಕಾರಕ್ಕಾಗಿ ತಂದೆ ಸಮಾನರನ್ನು, ಗುರುಗಳನ್ನು, ಸೋದರರನ್ನು, ಬಂಧುಗಳನ್ನು, ಅಮಾಯಕರನ್ನು ಕೊಂದ ಕ್ರೂರ ಪಾಂಡವರೆ, ನಿಮ್ಮ ಅಧಿಕಾರ ಜನರ ಸಮಾಧಿಗಳ ಮೇಲಷ್ಟೆ ಎಂದು ಶಾಪ ಹಾಕುತ್ತಾರೆ. ಮಹಾಕವಿ ವ್ಯಾಸಮುನಿಗಳು ಕೊಲೆಗೆ ಕೊಲೆ ಎಂಬ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬ ಅನಾಗರಿಕವಾದ, ಬರ್ಬರವಾದ ತತ್ವವನ್ನು ಹೇಸಿಗೆಯೆಂಬಂತೆ ವ್ಯಾಖ್ಯಾನಿಸುತ್ತಾರೆ. ಹಾಗಾಗಿ ಮಹಾಭಾರತ ಕಾವ್ಯ ಜನರ ಕಾವ್ಯವಾಗಿದೆ.

ಕರಾವಳಿಯಲ್ಲಿ ಅಮಾಯಕ ಯುವಕರು ವಿನಾಕಾರಣ ದುರಂತ ಸಾವನ್ನಪ್ಪುತ್ತಿದ್ದಾರೆ. ಕರಾವಳಿ ಜಿಲ್ಲೆಗಳ ದುಡಿಯುವ ಸಮುದಾಯಗಳು ಅತಿ ಜರೂರಾಗಿ ಜಾಗೃತಗೊಳ್ಳಬೇಕು. ಕರಾವಳಿಯ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶೇ.99 ರಷ್ಟು ಅತ್ಯಂತ ಬಡ ಹುಡುಗರು ಹಾಗೂ ಎರಡೆ ಸಮುದಾಯಗಳವರು. ಕೊಲೆಯಾಗುತ್ತಿರುವ ಎರಡೂ ಕಡೆಯ ಹುಡುಗರು ದುಡಿದು, ಕೂಲಿ ಮಾಡಿ ಬದುಕುತ್ತಿರುವವರು. ಈ ಎರಡೂ ಕಡೆಯ ಹುಡುಗರ ಮೆದುಳಿಗೆ ವಿಷ ಹಾಕುತ್ತಿರುವವರು ಮಕ್ಕಳು ಮಾತ್ರ ಬೆಂಗಳೂರು, ಮುಂಬೈ ನಗರಗಳಲ್ಲಿ ಹಾಗೂ ಕೊಲ್ಲಿ ಯುರೋಪು, ಅಮೆರಿಕ ಮುಂತಾದ ದೇಶಗಳಲ್ಲಿ ಲಕ್ಷ, ಕೋಟಿಗಳ ಹೆಸರಲ್ಲಿ ಸಂಬಳ ದುಡಿಯುತ್ತಾ ವಾರದ ಕೊನೆಯಲ್ಲಿ ಲಕ್ಷಾಂತರ ಖರ್ಚು ಮಾಡಿ ಪಾರ್ಟಿ ಮಾಡುತ್ತಾ ಮೋಜು ಮಾಡುತ್ತಿದ್ದಾರೆ. ಜೊತೆಗೆ ಬಹುಪಾಲು ಜನ ಸೋಷಿಯಲ್ ಮೀಡಿಯಾಗಳಲ್ಲಿ ಉಚಿತವಾಗಿ ಧರ್ಮ ಉಳಿಸುವ ಕುರಿತು ಸಲಹೆಗಳನ್ನು ನೀಡುವ ಕ್ರೌರ್ಯವನ್ನು ಮೆರೆಯುತ್ತಿದ್ದಾರೆ. ಬಡವರ ಮಕ್ಕಳನ್ನು ಬೆಂಕಿಗೆ, ಜೈಲಿಗೆ ತಳ್ಳಿ ತಮ್ಮ ಮಕ್ಕಳ ಏಳಿಗೆಗೆ ಸ್ಪರ್ಧೆ ಬರದ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಈ ಕುತಂತ್ರವನ್ನು ದುಡಿದು ಬದುಕುವ ಎಲ್ಲ ಸಮುದಾಯಗಳ ಯುವಕರು ಅರ್ಥ ಮಾಡಿಕೊಳ್ಳಬೇಕು. ಒಳ್ಳೆಯ ಶಿಕ್ಷಣ, ಒಳ್ಳೆಯ ಉದ್ಯೋಗ, ಉದಾತ್ತವಾದ ಆಲೋಚನೆ, ಶಾಂತಿ, ಸಹಬಾಳ್ವೆಗಳು ಮಾತ್ರ ಯುವಜನರನ್ನು ಏಳಿಗೆಯತ್ತ ಕೊಂಡೊಯ್ಯಲು ಸಾಧ್ಯ. ಕರಾವಳಿಯ ಯುವಜನತೆಗೆ ಇದೆಲ್ಲವನ್ನೂ ವ್ಯವಸ್ಥಿತವಾಗಿ ತಪ್ಪಿಸಲಾಗುತ್ತಿದೆ.

ಕರಾವಳಿಯ ಯುವಜನತೆಯಲ್ಲಿ ಕೈ ಮುಗಿದು ವಿನಂತಿಸುತ್ತೇನೆ. ದಯಮಾಡಿ ಸಾಕು ಮಾಡಿ. ಧರ್ಮ, ಕೋಮು ದ್ವೇಷವನ್ನು ದೂರ ಮಾಡಿ. 30 ವರ್ಷಗಳ ಹಿಂದಿದ್ದ ಕರಾವಳಿಯನ್ನು ಮತ್ತೆ ನಿರ್ಮಾಣ ಮಾಡಿ. ವೃದ್ಧಾಪ್ಯದಲ್ಲಿ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಗಳನ್ನು, ಎಳೆ ವಯಸ್ಸಿನಲ್ಲಿ ಅಣ್ಣ ತಮ್ಮಂದಿರನ್ನು, ಗಂಡಂದಿರನ್ನು ಕಳೆದುಕೊಂಡವರ ಹೃದಯದ ಬೆಂಕಿಯನ್ನೊಮ್ಮೆ ಅರ್ಥ ಮಾಡಿಕೊಳ್ಳಿ. ಅನಾಥರಾದ ಎಳೆಯ ಮಕ್ಕಳಿಗೆ ಎಷ್ಟು ಹಣ ಕೊಟ್ಟರೆ ತಾನೆ ಅಪ್ಪಂದಿರನ್ನು ತಂದುಕೊಡಲು ಸಾಧ್ಯವೆ? ಬದುಕಿದ್ದು ಶಾಶ್ವತ ಜೈಲಿಗೆ ಹೋದವರ ಕುಟುಂಬಗಳ ಕಷ್ಟ ದುಃಖಗಳನ್ನು ಒಮ್ಮೆ ನೆನೆಯಿರಿ, ವಕೀಲರುಗಳಿಗೆ ಫೀಸು ಕೊಡಲು ಮನೆ ಮಠ ಮಾರಿ ಬೀದಿಗೆ ಬಿದ್ದವರ ಸಂಕಷ್ಟಗಳು ನಿಮ್ಮ ಕಣ್ಮುಂದೆ ಬರಲಿ. ನಿಮ್ಮದೆ ಸ್ಕೂಲಿನಲ್ಲಿ, ನಿಮ್ಮ ಜೊತೆಯೆ ಕಲಿತ ಗೆಳೆಯ ಗೆಳತಿಯರು ಉತ್ತಮ ಉದ್ಯೋಗ ಮಾಡಿ ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿರುವಾಗ, ನಿಮ್ಮ ಬದುಕನ್ನು ಯಾರು ಕಿತ್ತುಕೊಂಡರು ಎಂದು ಯೋಚಿಸಿ. ದೇವರಂತೂ ಖಂಡಿತ ನಿಮ್ಮ ಬದುಕನ್ನು ಹಾಳು ಮಾಡುವುದಿಲ್ಲ. ನೀವೆ, ನೀವೆ ಕೈಯಾರೆ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ.

ಕರಾವಳಿಯಲ್ಲಿ ಮಾದಕದ್ರವ್ಯಗಳ ಮಾಫಿಯಾ ಅಟ್ಟ ಹಾಸ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೋದಿ ಸರ್ಕಾರ ಅದಾನಿಗಳಿಗೆ ಎಲ್ಲ ಬಂದರುಗಳನ್ನು ಬಿಟ್ಟುಕೊಡುತ್ತಿದೆ. ಗುಜರಾತಿನ ಮುಂದ್ರಾ ಬಂದರಿನಲ್ಲಿ ಒಂದೆ ದಿನ 21000 ಕೋಟಿ ಮೌಲ್ಯದ ಡ್ರಗ್ಸ್ ಸೀಝ್ ಆಯಿತು. ಆದರೆ ದೇಶದ ಒಳಗೆ ಲಕ್ಷಾಂತರ ಕೋಟಿ ಮೌಲ್ಯದ ಮಾದಕ ಪದಾರ್ಥಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಈ ಮಾದಕ ಪದಾರ್ಥಗಳು ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿವೆ. ಈ ಕೆಟ್ಟ ಸರ್ಕಾರದಿಂದ ಯವ ನ್ಯಾಯವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಸರ್ಕಾರದ ವರ್ತನೆ ಇನ್ನಷ್ಟು ಹಿಂಸೆ ಸೃಷ್ಟಿಸುವಂತೆ ಇದೆಯೆ ಹೊರತು, ಶಾಂತಿ ಸ್ಥಾಪಿಸುವ ಕಡೆಗೆ ಇಲ್ಲ. ಇನ್ನಷ್ಟು ಅಮಾಯಕರ ಹೆಣ ಬಿದ್ದರೆ ಮಾತ್ರ ತಮ್ಮ ರಾಜಕೀಯ ನಡೆಯುತ್ತದೆ ಎಂದು ಈ ದುಷ್ಟರು ಭಾವಿಸಿದ್ದಾರೆ. 2018 ರ ಬಿಜೆಪಿಯ ಪ್ರಣಾಳಿಕೆಯಲ್ಲಿ ಎನ್ ಐ ಎ ಸ್ಥಾಪಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದರು. ಈಗ ಅದನ್ನು ಮರೆತವರಂತೆ ವರ್ತಿಸುತ್ತಿದ್ದಾರೆ. ಇಷ್ಟೊಂದು ದುರ್ಬಲವಾದ ಹಾಗೂ ಕ್ರೂರ ಮನಸ್ಥಿತಿಯ ಮುಖ್ಯಮಂತ್ರಿ, ಬೇಜವಾಬ್ಧಾರಿ ನಡವಳಿಕೆಯ ಗೃಹಮಂತ್ರಿಯನ್ನು ರಾಜ್ಯ ಕಂಡಿರಲಿಲ್ಲ.

ಆದ್ದರಿಂದ ಮತ್ತೊಮ್ಮೆ ತಮ್ಮನ್ನು ವಿನಂತಿಸುತ್ತೇನೆ. ಕೆಟ್ಟ ಕಾರಣಕ್ಕಾಗಿ ಕರಾವಳಿಯು ರಾಜ್ಯಕ್ಕೆ ಮಾದರಿಯಾಗುವುದು ಬೇಡ. 30 ವರ್ಷಗಳ ಹಿಂದೆ ಕರಾವಳಿಯನ್ನು ರಾಜ್ಯ- ದೇಶಗಳ ಜನರು ಪ್ರೀತಿ, ಗೌರವ ಮತ್ತು ಹೆಮ್ಮೆಯ ಭಾವನೆಗಳಿಂದ ನೋಡುತ್ತಿದ್ದರಲ್ಲ, ಅಂಥ ಕರಾವಳಿಯನ್ನು ದಯಮಾಡಿ ನಿರ್ಮಾಣ ಮಾಡಿ. ದ್ವೇಷ ಹುಟ್ಟಿಸುವ, ಕೊಲೆಗೆ, ಹಿಂಸೆಗೆ ಪ್ರೇರೇಪಿಸುವ ಎಲ್ಲ ರಾಕ್ಷಸರನ್ನು ದೂರ ಮಾಡಿ ಇದರ ವಿರುದ್ಧ ಧೈರ್ಯವಾಗಿ ನಿಲ್ಲಿ, ಸೌಹಾರ್ದ ಸಭೆಗಳನ್ನು ಪ್ರಾರಂಭಿಸಿ, ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬದ ಸದಸ್ಯರುಗಳೆಲ್ಲರೂ ಧರ್ಮಾತೀತವಾಗಿ ಒಂದಾಗಿ ವೇದಿಕೆ ರಚಿಸಿಕೊಂಡು ಶಾಂತಿ ಸೌಹಾರ್ದದ ಕರಾವಳಿ ನಿರ್ಮಿಸಲು ಮುಂದಾಗಿ, ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಮುಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಈ ಸಭೆಗಳನ್ನು ಅಧಿಕೃತಗೊಳಿಸುತ್ತೇವೆ ಎಂದು ತಿಳಿಸಬಯಸುತ್ತೇನೆ. ಈಗ ನಾಡಿನಲ್ಲಿ ಅತ್ಯಂತ ತುರ್ತಾಗಿ ಶಾಂತಿಯುತವಾದ ವಾತಾವರಣ ನಿರ್ಮಾಣವಾಗಬೇಕಾಗಿದೆ ಅದನ್ನು ಸರ್ವರೂ ಸೇರಿ ಈಡೇರಿಸಬೇಕೆಂದು ತಮ್ಮನ್ನು ಕೈ ಮುಗಿದು ವಿನಂತಿಸುತ್ತೇನೆ.

- ಸಿದ್ದರಾಮಯ್ಯ
(ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಪಕ್ಷ ನಾಯಕರು.)

Advertisement
Advertisement
Recent Posts
Advertisement