Advertisement

"ಸ್ವಾತಂತ್ರ್ಯದ ಅಮೃತ ಮಹೋತ್ಸವ- 75" ಜಾಹಿರಾತಿನಲ್ಲಿ ಕರ್ನಾಟಕ ಸರಕಾರ ನೆಹರೂ ಭಾವ ಚಿತ್ರ ಕೈಬಿಟ್ಟ ನಡೆಯನ್ನು ಖಂಡಿಸಿ ಬಹಿರಂಗ ಪತ್ರ.

Advertisement

ವಾರ್ತಾ ಇಲಾಖೆಯ ಮೂಲಕ ವಿವಿಧ ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ " ಸ್ವಾತಂತ್ರ್ಯದ ಅಮೃತ ಮಹೋತ್ಸವ - ೭೫ " ಜಾಹಿರಾತಿನಲ್ಲಿ ಚಾಚಾ ನೆಹರೂರವರ ಭಾವ ಚಿತ್ರವನ್ನು ಕೈಬಿಟ್ಟ ಮತ್ತಿತರ ಕರ್ನಾಟಕ ಸರಕಾರದ ದುರುದ್ದೇಶ ಪೂರಿತ ನಡೆಗಳನ್ನು ಖಂಡಿಸಿ, ನಾಡಿನ ಖ್ಯಾತನಾಮರಾದ ಡಾ.ಕೆ.ಮರುಳಸಿದ್ದಪ್ಪ,
ಪ್ರೊ. ಎಸ್.ಜಿ.ಸಿದ್ದರಾಮಯ್ಯ, ಡಾ.ರಾಜೇಂದ್ರ ಚೆನ್ನಿ, ಡಾ.ವಿಜಯಾ, ಡಾ.ಜಿ‌.ರಾಮಕೃಷ್ಣ, ಡಾ.ಬಂಜಗೆರೆ ಜಯಪ್ರಕಾಶ್ ಮುಂತಾದ ಮಹನೀಯರು ಬಹಿರಂಗ ಪತ್ರ ಬರೆದಿದ್ದಾರೆ.

ಪತ್ರದಲ್ಲಿನ ವಿವರಗಳು ಇಂತಿದೆ: ತಾರೀಕು 14 ಅಗಸ್ಟ್ 2022

ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ,

ಇಂದಿನ ಪತ್ರಿಕೆಗಳಲ್ಲಿ ''75ವರ್ಷಗಳ ಸ್ವಾತಂತ್ರ್ಯ ದಿನಾಚರಣೆ''ಯ ಪ್ರಯುಕ್ತ ಕರ್ನಾಟಕ ವಾರ್ತೆಯ ಮೂಲಕ ಜಾಹಿರಾತು ಪ್ರಕಟವಾಗಿದೆ. ಅದರಲ್ಲಿ ದುರುದ್ದೇಶಪೂರ್ವಕವಾಗಿ ದೇಶದ ಪ್ರಥಮ ಪ್ರಧಾನಮಂತ್ರಿಗಳು, ಸ್ವಾತಂತ್ರ್ಯ ಹೋರಾಟಗಾರ ಪಂಡಿತ್‌ ಜವಾಹರ್ ಲಾಲ್‌ ನೆಹರೂರವರ ಹೆಸರನ್ನು ಪ್ರಮುಖ ಪಟ್ಟಿಯಿಂದ ಕೈ ಬಿಟ್ಟಿರುವುದು ಆಘಾತಕಾರಿ ಸಂಗತಿಯಾಗಿದೆ.

ಇತಿಹಾಸವನ್ನು ವರ್ತಮಾನದಲ್ಲಿ ರಚಿಸಬಾರದು ಎನ್ನುವ ಪ್ರಾಥಮಿಕ ಪಾಠವನ್ನು ಸಹ ಕಲಿಯದ ಭಾರತೀಯ ಜನತಾ ಪಕ್ಷದ ಕರ್ನಾಟಕ ಸರ್ಕಾರವು ಸಂಸದೀಯವಲ್ಲದ, ನೋಂದಣಿಯೂ ಆಗಿರದ ಆರ್.ಎಸ್‌,ಎಸ್.‌ ಸಿದ್ದಾಂತಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿರುವುದು ಅಸಂವಿಧಾನಿಕವಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಮರು ಪರಿಷ್ಕರಣೆಯ ಹೆಸರಲ್ಲಿ ಪಠ್ಯಪುಸ್ತಕಗಳನ್ನು ಮತೀಯವಾದೀಕರಣಗೊಳಿಸಿ, ಮಾಡಿದ ಇತಿಹಾಸ ತಿರುಚುವ ದುಷ್ಕೃತ್ಯದ ಮುಂದುವರೆದ ಭಾಗ ಇದಾಗಿದೆ. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಪಂಡಿತ್ ಜವಹರ್‌ ಲಾಲ್‌ ನೆಹರೂರವರನ್ನು ಇತಿಹಾಸದ ಪುಟಗಳಿಂದ ಅಳಿಸುವಂತಹ ಕೀಳು ಮಟ್ಟದ ರಾಜಕಾರಣಕ್ಕೆ ಕರ್ನಾಟಕ ಸರಕಾರ ಮುಂದಾಗಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ.

ನವ ಭಾರತ ನಿರ್ಮಾಣದ ಕುರಿತು ಸ್ಪಷ್ಟ ನಿಲುವು ಹೊಂದಿದ್ದ ನೆಹರೂರವರು ʼಸಾರ್ವಜನಿಕ ಉದ್ದಿಮೆಗಳು ಆಧುನಿಕ ಭಾರತದ ದೇವಾಲಯಗಳುʼ ಎಂದು ಘೋಷಿಸಿದ್ದವರು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಹತ್ತಾರು ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿ ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಲಾಗಿತ್ತು. ರಾಜ್ಯದ ಅಭಿವೃದ್ದಿಗೆ ಇವು ಕೊಟ್ಟ ಕೊಡುಗೆಗಳನ್ನು ಮರೆಯಲು ಸಾಧ್ಯವೇ?
ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ೯ ವರ್ಷ ಜೈಲು ವಾಸ ಅನುಭವಿಸಿದ ನೆಹರೂರವರು ʼ೧೯೧೬ ರ ಸ್ವದೇಶೀ ಚಳುವಳಿ,೧೯೨೦ ರ ಅಸಹಕಾರ ಚಳುವಳಿ,೧೯೩೦ ರ ಉಪ್ಪಿನ ಸತ್ಯಾಗ್ರಹ, ೧೯೪೦ ರ ನಾಗರಿಕ ಅವಿಧೇಯತೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಮತ್ತು ಹೋರಾಟದ ಮುಂಚೂಣಿ ನಾಯಕತ್ವದಲ್ಲಿದ್ದವರು. ಇವು ದೇಶದ ನೈಜ ಚರಿತ್ರೆಯ ಪುಟಗಳು. ಇವನ್ನು ಮರೆಮಾಚುವುದು ಇತಿಹಾಸಕ್ಕೆ ಎಸಗುವ ಅಪಚಾರ.

ನೆಹರೂರವರನ್ನು ಸ್ಮರಿಸಲು ಯಾವುದೇ ಸೈದ್ದಾಂತಿಕ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು ಎಂಬ ಪ್ರಾಥಮಿಕ ತಿಳುವಳಿಕೆ ಸಹ ಒಂದು ರಾಜ್ಯದ ಮುಖ್ಯಮಂತ್ರಿಗಳಾಗಿ ತಮಗೆ ಇಲ್ಲದಿರುವುದು ವಿಷಾದನೀಯ.

ಅಂಬೇಡ್ಕರ್‌ ರವರು ʼಸತ್ಯವು ಇತಿಹಾಸದ ತಾಯಿʼ ಎನ್ನುತ್ತಾರೆ. ಆದರೆ ನಿಮ್ಮ ಬಿ.ಜೆ.ಪಿ.ಸರಕಾರವು ಸುಳ್ಳನ್ನು ಇತಿಹಾಸ ಎಂದು ನಂಬಿಸಲು ಹೆಣಗುತ್ತಿರುವುದಕ್ಕೆ ನೆಹರೂ ರವರಿಗೆ ಮಾಡಿದ ಅವಮಾನವೇ ಸಾಕ್ಷಿಯಾಗಿದೆ.

ಮತ್ತೊಂದೆಡೆ ವಿಮೋಚಕ,ಸಂವಿಧಾನ ಶಿಲ್ಪಿ ಬಾಬಾ ಸಾಹೆಬ್‌ ಅಂಬೇಂಡ್ಕರ್‌ ಅವರ ಪಟವನ್ನು ಕೆಳಗಿನ ಕೊನೆಯ ಸಾಲಿಗೆ ಸೇರಿಸಿ ನಿಮ್ಮೊಳಗಿರುವ ವೈದಿಕಶಾಹಿತನವನ್ನು ಮೆರೆದಿದ್ದೀರಿ. ಸತತವಾಗಿ ಮೂರು ವರ್ಷಗಳ ಕಾಲ ಸಂವಿಧಾನ ರಚನೆಯಲ್ಲಿ ತೊಡಗಿಕೊಂಡು ವಿಶ್ವವೇ ಮೆಚ್ಚಿದ ಸಂವಿಧಾನ ನೀಡಿದ ಬಾಬಾ ಸಾಹೇಬರಿಗೆ ನೀವು ಮಾಡಿದ ಅಪಚಾರವಿದು.ಅದನ್ನು ನಾವು ಖಂಡಿಸುತ್ತೇವೆ.

ಬ್ರಿಟಿಷರಿಗೆ ಮೂರು ಬಾರಿ ಕ್ಷಮಾಪಣೆ ಪತ್ರ ಬರೆದುಕೊಟ್ಟ, 'ಜೈಲಿನಿಂದ ಬಿಡುಗಡೆಯಾದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದಿಲ್ಲ ' ಎಂದು ಮುಚ್ಚಳಿಕೆ ಬರೆದುಕೊಟ್ಟ ವಿ ಡಿ ಸಾವರ್ಕರ್‌ ಅವರನ್ನು ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಸೇರಿಸಿದ್ದೂ ಅಲ್ಲದೇ ಅದಕ್ಕೆ ಅಗ್ರ ಸ್ಥಾನ ಕಲ್ಪಿಸಿರುವುದು ದುರುದ್ದೇಶ ಪೂರಿತವಾಗಿದೆ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಬಾರದೆಂದು ಹಿಂದೂ ಮಹಾಸಭಾದ ಕಾರ್ಯಕರ್ತರಿಗೆ ಆದೇಶಿಸಿದ ಸಾವರ್ಕರ್‌, ಗಾಂಧಿ ಹತ್ಯೆಯ ಆರೋಪಿಗಳಲ್ಲಿ ಒಬ್ಬರಾಗಿದ್ದೂ, ಸಾಕ್ಷಿ ಪುರಾವೆಗಳಿಲ್ಲವೆಂದು ಖುಲಾಸೆಯಾದವರು . ಯಾವ ಮಾನದಂಡಗಳಿಂದಲೂ ಸ್ವಾತಂತ್ರ ಹೋರಾಟಗಾರರಲ್ಲ.

ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ಕರ್ನಾಟಕದ ಮಹನೀಯರ ಪಟ್ಟಿಯಲ್ಲಿ ಟಿಪ್ಪು ಸುಲ್ತಾನ್‌ ಹೆಸರು ಕಣ್ಮರೆಯಾಗಿರುವುದು ಬಿ.ಜೆ.ಪಿ ಯ ಪೂರ್ವಗ್ರಹ ಪೀಡಿತ ದೃಷ್ಟಿಕೋನವೆಂದೇ ಕರೆಯಬೇಕಾಗುತ್ತದೆ. ಕರ್ನಾಟಕದ ನೆಲವು ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿಯನ್ನು ಹೊಂದಿದ್ದು, ತಮ್ಮ ಸರಕಾರದ ಈ ತೆರನಾದ ನಡೆಗಳು ಅದಕ್ಕೆ ಮಸಿ ಬಳಿಯುತ್ತಿವೆ ಎಂದು ಹೇಳಲು ಬಯಸುತ್ತೇವೆ.

ರಾಜ್ಯದ ಜನರ ತೆರಿಗೆ ಹಣವನ್ನು ಆರ.ಎಸ್. ಎಸ್.‌ ಸಿದ್ದಾಂತದ ಪ್ರಚಾರಕ್ಕೆ ಮತ್ತು ತನ್ನ ಸ್ವಹಿತಾಸಕ್ತಿಗೆ ಬಿ.ಜೆ.ಪಿ. ಸರಕಾರ ದುರ್ಬಳಕೆ ಮಾಡಿಕೊಂಡಿದೆ. ರಾಜ್ಯದ ವಾರ್ತಾ ಇಲಾಖೆ ಇಲ್ಲಿ ಗುರುತರ ಅಪರಾಧವನ್ನು ಎಸಗಿದ್ದು ಇಲಾಖೆಯ ಮುಖ್ಯಸ್ಥರೂ ಇದಕ್ಕೆ ಹೊಣೆಗಾರರೆಂದು ಹೇಳಬಯಸುತ್ತೇವೆ.
ಈ ಕೂಡಲೇ ಕರ್ನಾಟಕದ ಜನತೆಯ ಮುಂದೆ ನೀವು ಈ ತಪ್ಪು ನಡೆಗಾಗಿ ಸಾರ್ವಜನಿಕರ ಕ್ಷಮೆ ಯಾಚಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಣಕಿಸುವ, ನೆಹರೂ, ಅಂಬೇಡ್ಕರ್‌ ಅವರಿಗೆ ಅವಮಾನ ಮಾಡುವ ಈ ಸ್ವಾತಂತ್ರ್ಯ ಆಚರಣೆಯ ಜಾಹಿರಾತನ್ನು ಹಿಂಪಡೆಯಬೇಕೆಂದು ಮತ್ತು ಈ ಜಾಹಿರಾತಿಗೆ ಸರಕಾರ ವೆಚ್ಚ ಮಾಡಿದ ಹಣವೆಷ್ಟು ಎಂದು ಸಾರ್ವಜನಿಕರಿಗೆ ತಿಳಿಸಬೇಕು. ಈ ಪ್ರಮಾದ ಎಸಗಿದವರು ಈ ರೀತಿ ಅಪವ್ಯಯವಾಗಿರುವ ಸಾರ್ವಜನಿಕರ ಹಣವನ್ನು ಮರಳಿ ಖಜಾನೆಗೆ ಭರ್ತಿಮಾಡಬೇಕು ಎಂದು ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯ ಮೂಲಕ ಒತ್ತಾಯಿಸುತ್ತೇವೆ.

ಡಾ.ಕೆ.ಮರುಳಸಿದ್ದಪ್ಪ,
ಪ್ರೊ. ಎಸ್.ಜಿ.ಸಿದ್ದರಾಮಯ್ಯ, ಡಾ.ರಾಜೇಂದ್ರ ಚೆನ್ನಿ,ಡಾ.ವಿಜಯಾ, ಡಾ.ಜಿ‌.ರಾಮಕೃಷ್ಣ, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಹಿ.ಶಿ.ರಾಮಚಂದ್ರೆ ಗೌಡ, ಡಾ.ಕಾಳೆಗೌಡ ನಾಗವಾರ, ಕೆ.ಎಸ್.ವಿಮಲಾ, ಡಾ.ವಸುಂಧರಾ ಭೂಪತಿ, ಬಿ.ಶ್ರೀಪಾದ ಭಟ್, ಡಾ.ಎನ್.ಗಾಯತ್ರಿ, ಡಾ.ಆರ್.ಪೂರ್ಣಿಮಾ, ಡಾ.ಮೀನಾಕ್ಷಿ ಬಾಳಿ, ಕೆ.ನೀಲಾ, ಡಾ.ಪ್ರಭು ಖಾನಾಪುರೆ, ಮಾವಳ್ಳಿ ಶಂಕರ್, ಲಕ್ಷ್ಮಿ ನಾರಾಯಣ ನಾಗವಾರ, ಗೋಪಾಲಕೃಷ್ಣ ಹರಳಹಳ್ಳಿ, ಎನ್.ಆರ್‌.ವಿಶುಕುಮಾರ್
ಇಂದೂಧರ ಹೊನ್ನಾಪುರ, ವಾಸುದೇವ ಉಚ್ಚಿಲ, ಗುರುಪ್ರಸಾದ್ ಕೆರೆಗೋಡು, ರುದ್ರಪ್ಪ ಹುನಗವಾಡಿ, ಬಿ.ಟಿ.ಲಲಿತಾ ನಾಯಕ್ , ಡಾ‌.ಕೆ.ಷರೀಫಾ, ಟಿ.ಸುರೇಂದ್ರ ರಾವ್, , ದೇವೇಂದ್ರ ಗೌಡ, ಅಚ್ಯುತ, ಶಶಿಧರ‌ ಜೆ.ಸಿ.ಅಕ್ಷತಾ ಹುಂಚದಕಟ್ಟೆ, ಸಿ.ಕೆ.ಗುಂಡಣ್ಣ, ಬಿ.ಐ.ಇಳಿಗೆರ್, ಮುನೀರ್ ಕಾಟಿಪಳ್ಳ, ವಾಸುದೇವ ಉಚ್ಚಿಲ್, ಯಮುನಾ ಗಾಂವ್ಕಾರ್ ಇನ್ನೂ ಹಲವರು.

Advertisement
Advertisement
Recent Posts
Advertisement