Advertisement

ಸಿದ್ದರಾಯನವರ ಕಾರಿಗೆ ಮೊಟ್ಟೆ ಎಸೆದ "ಸ್ವಯಂಘೋಷಿತ ಹಿಂದೂಪರ ಸಂಘಟನೆ"ಯ ಸದಸ್ಯನ ಅಸಲಿಯತ್ತು

Advertisement

ಮೊಟ್ಟೆ ಎಸೆತ, ಕೋಳಿಯೂಟ ಮತ್ತು ಸಿದ್ದರಾಮಯ್ಯ..!

ಬರಹ: ಡಾ. ಸುಬ್ರಹ್ಮಣ್ಯ ಭಟ್, ಬೈಂದೂರು. (ಲೇಖಕರು ಪ್ರಗತಿಪರ ಚಿಂತಕರು)

ಇತ್ತೀಚೆಗೆ ಪ್ರವಾಹ ಸಂತ್ರಸ್ತರನ್ನು ಭೇಟಿಯಾಗಲೆಂದು ಮಡಿಕೇರಿಗೆ ಭೇಟಿ ನೀಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದು ಸ್ವಯಂಘೋಷಿತ ಹಿಂದೂಪರ ಸಂಘಟನೆಯವರು ಪ್ರತಿಭಟಿಸಿದ್ದರು. ಅದೀಗ ಮಾಧ್ಯಮದವರಿಗೆ ಹಾಗೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರಿಗೆ ಚರ್ಚೆಗೆ ಸಿಕ್ಕಿರುವ ಹೊಸ ವಿಷಯ...!

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಹಾಗಂತ ಪ್ರತಿಭಟನೆಗೂ ಅದರದೇ ಆದ ಚೌಕಟ್ಟು, ನೀತಿ ನಿಯಮಗಳಿವೆ. ಸೈದ್ಧಾಂತಿಕವಾಗಿ ವಿರೋಧಗಳಿರುವಾಗ ಸಹಜವಾಗಿ ಪ್ರತಿರೋಧಗಳು ಮತ್ತೊಂದು ಕಡೆಯಿಂದ ಬರುತ್ತವೆ. ಆದರೆ ಅದನ್ನು ಸಂವಿಧಾನಬದ್ಧವಾಗಿ ಮಾಡಬೇಕು. ಆಗ ಅದನ್ನು ಎಲ್ಲರೂ ಮೆಚ್ಚಲು ಸಾಧ್ಯ. ಮೊನ್ನೆ ನಡೆದ ಮೊಟ್ಟೆ ಎಸೆತದ ಪ್ರಕ್ರಿಯೆ ಸರಿಯಾದ ಪ್ರತಿಭಟನೆಯ ವಿಧಾನವಲ್ಲ. ಹೀಗೆ ಮೊಟ್ಟೆ, ಕಲ್ಲು ಮುಂತಾದುವನ್ನು ಎಸೆಯುವುದು ಉಗ್ರವಾದದ ಲಕ್ಷಣ, ಹಾಗಾಗಿ ಇದನ್ನು ಯಡಿಯೂರಪ್ಪ, ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಜವಬ್ದಾರಿಯುತ ಸ್ಥಾನದಲ್ಲಿರುವ ನಾಯಕರೇ ಖಂಡಿಸಿದ್ದಾರೆ.

ಮೊಟ್ಟೆ ಎಸೆದಾತ ಈಗ ಯಾವ ಪಕ್ಷಕ್ಕೆ ಸೇರಿದವ ಎನ್ನುವ ವಿಚಾರ ಗೊಂದಲವನ್ನುಂಟು ಮಾಡಿದೆ. ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಮೊಟ್ಟೆ ಎಸೆದ ವ್ಯಕ್ತಿ ಸಂಪತ್ ನ ಪೊಟೋ ಒಂದರಲ್ಲಿ ಶಾಸಕ ಅಪ್ಪಚ್ಚು ರಂಜನ್ ಜೊತೆ ಕೇಸರಿ ಶಾಲು ಹಾಕಿಕೊಂಡಿದ್ದಾನೆ. ಈ ಕೆಳಗಿನ ಫೋಟೋ ನೋಡಿ..

ಇನ್ನೊಂದು ಪೊಟೊದಲ್ಲಿ ಆರ್ ಎಸ್ ಎಸ್ ನ ಗಣವೇಷಧಾರಿಯಾಗಿ ಸಂಪತ್ ಕಾಣಿಸಿಕೊಂಡಿದ್ದಾನೆ. ಈ ಕೆಳಗಿನ ಫೋಟೋ ನೋಡಿ..

ಮಗದೊಂದು ಪೊಟೊದಲ್ಲಿ ಕಾಂಗ್ರೆಸ್ ಶಾಲು ಹಾಕಿಕೊಂಡು ಒಬ್ಬನೇ ನಿಂತಿರುವ ದೃಶ್ಯವಿದೆ. ಈ ಕೆಳಗಿನ ಫೋಟೋ ನೋಡಿ..

ಇದೆಲ್ಲದಕ್ಕೆ ಸ್ಪಷ್ಟಿಕರಣವನ್ನು ಆತನೇ ನೀಡುತ್ತಾ ತಾನು ಕಾಂಗ್ರೆಸ್ ಕಾರ್ಯಕರ್ತ, ಹಿಂದೂ ವಿರೋಧಿ ಹೇಳಿಕೆ ನೀಡಿರುವ ಸಿದ್ಧರಾಮಯ್ಯನವರ ವಿರುದ್ದ ನಾನು ಪ್ರತಿಭಟನಾರ್ಥವಾಗಿ ಮೊಟ್ಟೆ ಎಸೆದೆ, ರಾಮನವಮಿ ಕಾರ್ಯಕ್ರಮದಲ್ಲಿ ಶಾಸಕರೊಂದಿಗೆ ಪೊಟೊ ತೆಗೆಸಿಕೊಂಡಿದ್ದೆ. ಆರ್ ಎಸ್ ಎಸ್ ನ ಗಣವೇಷಧಾರಿಯಾದ ಪೊಟೊ ತಾನು 17-18 ವರ್ಷದವನಿದ್ದಾಗಿನದ್ದು, ತನಗೀಗ 35 ವರ್ಷ ಎಂದೆಲ್ಲಾ ವಿವರಿಸಿದ್ದಾನೆ ಸಂಪತ್. ಆದರೆ ಆತನ ಹೇಳಿಕೆಯಲ್ಲಿ ಬಹಳಷ್ಟು ಗೊಂದಲವಿದೆ, ಅಲ್ಲಿನ ಕಾಂಗ್ರೆಸ್ ಮುಖಂಡರ ಜೊತೆಗಿರುವ ಪೊಟೊಗಳು ಆತನ ಬಳಿಯಿಲ್ಲ, ಇದ್ದಿದ್ದರೆ ಮಾಧ್ಯಮದೆದುರು ಆತ ಪ್ರದರ್ಶಿಸಿ ತನ್ನ ಹೇಳಿಕೆಯನ್ನು ಸಮರ್ಥಿಸಿ ಕೊಳ್ಳಬಹುದಿತ್ತು. ಜೊತೆಗೆ ಆತ ಆರ್ ಎಸ್ ಎಸ್ ಗಣವೇಷಧಾರಿಯಾಗಿರುವ ಪೊಟೊ ಆತನ ಪ್ರಕಾರ ಸುಮಾರು 18 ವರ್ಷ ಹಳೆಯದು (ಆತನಿಗೆ ಈಗ 35 ವರ್ಷವೆಂದಾದರೆ ಸುಮಾರು 17-18 ವರ್ಷದವನಿದ್ದಾಗಿನದ್ದಂತೆ ಹಾಗಾಗಿ ಅದು ಆತನ ಹೇಳಿಕೆಯಂತೆ 18 ವರ್ಷ ಹಳೆಯದು.) ಆದರೆ ಆ ಪೊಟೊದಲ್ಲಿ ಆತ ಬಿಳಿ ಅಂಗಿ ಮತ್ತು ಕಾಕಿ ಪ್ಯಾಂಟ್ ಧರಿಸಿದ್ದಾನೆ. ಈ ಕಾಕಿ ಪ್ಯಾಂಟ್ ಬಂದದ್ದು 2016 ರಿಂದ, ಅದಕ್ಕೂ ಮೊದಲು ಕಾಕಿ ಚಡ್ಡಿ ಧರಿಸುತ್ತಿದ್ದರು. ಹಾಗಾಗಿ ಈ ಗಣವೇಷ ಹಾಕಿರುವ ಪೊಟೊ 2016 ರಿಂದ ಈಚೆಯದು ಅಂದರೆ ಹೆಚ್ಚೆಂದರೆ 6 ವರ್ಷ ಹಳೆಯದು ಅಷ್ಟೇ....! ಇದರಲ್ಲೇ ತಿಳಿಯುತ್ತದೆ ಈ ಸಂಪತ್ ಹೇಳಿಕೆಯಲ್ಲಿ ಗೊಂದಲ ಹಾಗೂ ಸುಳ್ಳಿದೆ ಅಂತ. ಇದಕ್ಕೆ ಪೂರಕವೆಂಬಂತೆ ಈತನನ್ನು ಪೊಲೀಸರಿಂದ ಅರ್ಧರಾತ್ರಿಯಲ್ಲಿ ಬಿಡಿಸಿಕೊಂಡು ಬಂದದ್ದು ಈತನ ಜೊತೆಗೆ ಪೊಟೊದಲ್ಲಿ ಇದಿದ್ದ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್....! ಹಾಗಾದರೆ ಈತ ಅದು ಹೇಗೆ ಕಾಂಗ್ರೆಸ್ ಕಾರ್ಯಕರ್ತ...? ಅವನ ಹೇಳಿಕೆಗೆ ಮಹತ್ವ ಕೊಡುವುದರಲ್ಲಿ ಯಾವ ಅರ್ಥವೂ ಇಲ್ಲ. ಇದರ ಜೊತೆಗೆ ಇವನು ಹೇಳಿಕೊಂಡಂತೆ ಕಾಂಗ್ರೆಸ್ ಮುಖಂಡ ಜೀವಿಜಯರ ಜೊತೆ ತಾನು ಕೆಲಸ ಮಾಡಿದ್ದೇನೆಂಬ ವಿಚಾರವೂ ಸತ್ಯಕ್ಕೆ ದೂರವಾದುದೆಂದು ಸ್ವತಃ ಜೀವಿಜಯ ಅವರೇ ಸ್ಪಷ್ಟನೆ ನೀಡಿದ್ದಾರೆ. ಇಷ್ಟಲ್ಲದೇ 2004 ರಲ್ಲಿ ಈತನ ತಂದೆ ಪುರಸಭೆಯ ಬಿಜೆಪಿ ಸದಸ್ಯರಾಗಿ ಕೆಲಸ ಮಾಡಿದ್ದರಂತೆ. ಇದೆಲ್ಲವನ್ನು ಗಮನಿಸಿದಾಗ ಈತನ ಹೇಳಿಕೆಯಲ್ಲಿ ಸತ್ಯಕ್ಕಿಂತ ಸುಳ್ಳೇ ಹೆಚ್ಚಿರುವಂತೆ ಕಾಣುತ್ತದೆ.

 

ಕೊಡಗಿನಲ್ಲಿ ಸಿದ್ಧರಾಮಯ್ಯ ಕೋಳಿ ಮಾಂಸ ತಿಂದು ಬಸವಣ್ಣನ ಗುಡಿಗೆ ಹೋಗಿದ್ದಾರೆ ಎನ್ನುವುದು ಮತ್ತೊಂದು ಚರ್ಚೆಗೆ ಗ್ರಾಸವಾಗಿರುವ ವಿಚಾರ. ಮಾಂಸಹಾರ, ಸಸ್ಯಹಾರ ಏಲ್ಲವೂ ವ್ಯಕ್ತಿಯ ಆಯ್ಕೆ. ಹಸಿವೆಯನ್ನು ತಣಿಸಲು ಯಾವುದನ್ನು ಬೇಕಾದರೂ ತಿನ್ನಬಹುದು. ದೇವಸ್ಥಾನಕ್ಕೆ ಮಾಂಸ ತಿಂದು ಬರಬಾರದೆನ್ನುವ ನಿಯಮ ಎಲ್ಲೂ ಇಲ್ಲ. ಅದು ಅವರವರ ಭಕ್ತಿ, ನಂಬಿಕೆಗೆ ಬಿಟ್ಟ ಸಂಗತಿ. ಈ ಹಿಂದೆಯೂ ಧರ್ಮಸ್ಥಳಕ್ಕೆ ಮೀನು ತಿಂದು ಹೋಗಿದ್ದಾರೆ ಎಂದು ಇದೇ ಸಿದ್ಧರಾಮಯ್ಯನವರ ಮೇಲೆ ಆರೋಪ ಬಂದಿತ್ತು. ಅದಕ್ಕೆ ದೇವಸ್ಥಾನಕ್ಕೆ ಸಂಬಂಧಪಟ್ಟವರು ದೇವಸ್ಥಾನಕ್ಕೆ ಬರುವಾಗ ಯಾವ ಆಹಾರ ತಿನ್ನಬೇಕು, ತಿನ್ನಬಾರದು ಎಂದು ದೇವಸ್ಥಾನದಲ್ಲಿ ಯಾವುದೇ ನಿಯಮ ವಿಧಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸಿ.ಎಂ.ಸದಾನಂದ ಗೌಡರು ಸಹ ಆಹಾರ ವೈಯಕ್ತಿಕ ಆಯ್ಕೆ, ಅದನ್ನು ಸಾರ್ವತ್ರಿಕವಾಗಿ ಚರ್ಚಿಸಿ, ವ್ಯಕ್ತಿ ಸ್ವಾತಂತ್ರ್ಯ ಕಸಿಯಬಾರದೆನ್ನುವ ಮಾತನ್ನು ಹೇಳಿದ್ದಾರೆ. ಬೇಡರ ಕಣ್ಣಪ್ಪ ಶಿವನಿಗೆ ಮೊಲದ ಮಾಂಸವನ್ನು ನೀಡಿದ್ದು, ಅದೆಷ್ಟೋ ದೈವಗಳಿಗೆ ಕೋಳಿ, ಕುರಿ, ಕೋಣಗಳ ಬಲಿ ನೀಡುವುದು ಮತ್ತು ಅದನ್ನೇ ಪ್ರಸಾದವಾಗಿ ಸೇವಿಸುವುದು ಧರ್ಮವಿರೋಧಿ ನೀತಿಯೇ ಹಾಗಾದರೆ...? ಒಟ್ಟಾರೆಯಾಗಿ ಸಿದ್ದರಾಮಯ್ಯರೆನ್ನುವ ಬೆಟ್ಟವನ್ನು ಹೇಗಾದರೂ ಮಾಡಿ ನೆಲಸಮ ಮಾಡಬೇಕೆಂದು ಕೆಲವರು ಹೊರಟಂತಿದೆ. ಅದಕ್ಕಾಗಿಯೇ ಭಾವನಾತ್ಮಕ ವಿಚಾರಗಳನ್ನು ಎತ್ತಿಕೊಂಡು ಜನಸಾಮಾನ್ಯರಲ್ಲಿ ಸಿದ್ದು ವಿರುದ್ಧವಾದ ಅಭಿಪ್ರಾಯ ಮೂಡಲಿ ಎನ್ನುವ ಆಶಯ ಕೆಲವರದ್ದು.

ಇಷ್ಟೆಲ್ಲ ಸಂಘಟನೆ, ಬಿಜೆಪಿಯ ರಾಜಕೀಯ ನಾಯಕರು ತನ್ನ ವಿರುದ್ಧ ತಿರುಗಿ ಬಿದ್ದಿದ್ದರೂ ಸಿದ್ದರಾಮಯ್ಯ ಮಾತ್ರ ಕಿಂಚಿತ್ ವಿಚಲಿತರಾದಂತೆ ಕಾಣಿಸುತ್ತಿಲ್ಲ. ಅವರ ವಿಚಾರಧಾರೆ ಹಾಗೂ ನಂಬಿಕೆ ಮತ್ತು ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ತಾವು ಅನುಸರಿಸಿಕೊಂಡು ಬಂದಿರುವ ನೀತಿ ನಿಯಮಕ್ಕೆ ಅವರು ಬದ್ಧರಾಗಿಯೇ ಇದ್ದಾರೆ ಎನ್ನುವುದು ಅವರ ಮಾತುಗಳಿಂದ ಅರ್ಥವಾಗುತ್ತದೆ. "ಮಾಂಸ ತಿನ್ನುವುದು ಬಿಡುವುದು ಅವರವರ ಆಯ್ಕೆ" ಎಂದಿರುವ ಸಿದ್ದರಾಮಯ್ಯ ಎಂದಿನಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮರುಪ್ರಶ್ನೆ ಹಾಕಿ ಪೇಚಿಗೆ ಸಿಲುಕಿಸಿದ್ದಾರೆ. ಹಿಂದುಳಿದ, ದಲಿತ ಯುವಕರನ್ನು ಸಿದ್ದರಾಮಯ್ಯರ ಮೇಲೆ ಛೂ ಬಿಟ್ಟು ಅವರವರೇ ಹೊಡೆದಾಡಿಕೊಂಡು ಸಾಯಲಿ ಎನ್ನುವ ರಾಜಕೀಯ ನಾಯಕರ ಲಾಭನಷ್ಟದ ಲೆಕ್ಕಾಚಾರದ ನಾಟಕವನ್ನು ಯುವಕರು ಅರ್ಥ ಮಾಡಿಕೊಳ್ಳಬೇಕಿದೆ. ಮಾಂಸಹಾರವನ್ನು ಮುಂಚಿನ ದಿನ ಸೇವಿಸಿದ್ದರೆ ಅದು ಹೊಟ್ಟೆಯಲ್ಲೇ ಇರುತ್ತದೆ, ಹಾಗಾದರೆ ಮರುದಿನ ದೇವಸ್ಥಾನಕ್ಕೆ ಹೋಗುವುದು ಅಪರಾಧವೇ..? ತಿಂದ ಮಾಂಸ ಜೀರ್ಣವಾಗಿ ದೇಹದಲ್ಲಿ ರಕ್ತವಾಗಿ, ಮಾಂಸವಾಗಿ, ಕೊಬ್ಬಾಗಿ ಇರುವಾಗ ದೇವಸ್ಥಾನಕ್ಕೆ ಹೋಗುವುದು ಸರಿಯೋ ತಪ್ಪೋ...? ವೈಚಾರಿಕತೆ ಬೆಳೆಸಿಕೊಳ್ಳದೇ ಅಜ್ಜ ನೆಟ್ಟ ಆಲದಮರ ಎಂಬಂತೆ ಯಾರೋ ಹೇಳಿದ ಕಟ್ಟುಕತೆಗಳನ್ನೇ ಮತ್ತೆ ಮತ್ತೆ ಹೇಳುತ್ತಾ, ದೇವರ ವಕ್ತಾರರೆಂಬಂತೆ ನುಡಿಯುತ್ತಾ ತಮ್ಮ ಲಾಭ ಮಾಡಿಕೊಳ್ಳುವವರು ಸಿದ್ದರಾಮಯ್ಯರಿಂದ ತಮಗೆ ಅಪಾಯ ಎಂದರಿತು ಹೀಗೆ ಅಪಪ್ರಚಾರ, ಪ್ರತಿಭಟನೆ ಮೊದಲಾದುವನ್ನು ಮಾಡುತ್ತಿದ್ದಾರೆ ಅಷ್ಟೇ... ಆದರೆ ಸಿದ್ದರಾಮಯ್ಯ ಅದಕ್ಕೆಲ್ಲ ಜಗ್ಗುವ, ಬಗ್ಗುವ ವ್ಯಕ್ತಿ ಅಲ್ಲ ಎನ್ನುವುದು ಅವರ ನಡೆನುಡಿ ನೋಡಿದವರಿಗೆ ತಿಳಿಯುತ್ತದೆ.

ನಾ ದೇವನಲ್ಲದೆ ನೀ ದೇವನೆ
ನೀ ದೇವನಾದರೆ ಎನ್ನನೇಕೆ ಸಲಹೆ
ಆರೈದು ಒಂದು ಕುಡಿತೆ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರ.

ಈ ಅಲ್ಲಮಪ್ರಭು ವಚನ ಇಂದಿನ ಜನರ ಕಣ್ತೆರೆಸುವಂತಿದೆ.

Advertisement
Advertisement
Recent Posts
Advertisement