Advertisement

ಪರೇಶ್ ಮೇಸ್ತ ಪ್ರಕರಣ: ಸುಳ್ಳು ವದಂತಿ ಹರಡಿದವರ ವಿರುದ್ದ ಕ್ರಮ ಜರುಗಿಸಿ; ಕಾಂಗ್ರೆಸ್ ಆಗ್ರಹ

Advertisement

"ಪರೇಶ್ ಮೇಸ್ತನ ಸಾವು ಕೊಲೆಯಲ್ಲ ಅದು ಆಕಸ್ಮಿಕ" ಎಂದು ಆ ಪ್ರಕರಣದ ತನಿಖೆಯ ಹೊಣೆ ಹೊತ್ತಿದ್ದ ಸಿಬಿಐ, ನ್ಯಾಯಾಲಯಕ್ಕೆ "ಬಿ ರೀಪೋರ್ಟ್" ಸಲ್ಲಿಸಿದ ಹಿನ್ನಲೆಯಲ್ಲಿ ಇದೀಗ "ಬಿಜೆಪಿ ಅಂದು ಹರಡಿದ್ದ ವದಂತಿಗಳಿಂದಾದ ಅಪಾರ ಸಾರ್ವಜನಿಕ ಆಸ್ತಿಯ ನಷ್ಟಕ್ಕೆ ಯಾರು ಹೊಣೆ" ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಬವವಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ಸೇರಿದಂತೆ ಹಲವು ಜನಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಈ ನಿಟ್ಟಿನಲ್ಲಿ ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಪ್ರತಿಕ್ರಿಯಿಸಿದ್ದು "ಪರೇಶ್ ಮೇಸ್ತ ಎಂಬ ಯುವಕನ ಮೃತ ಶರೀರವನ್ನು ಮುಂದಿಟ್ಟುಕೊಂಡು ರಾಜಕೀಯ ಕಾರಣಕ್ಕಾಗಿ ವದಂತಿಗಳನ್ನು ಹರಡಿ, ಆ ಮೂಲಕ ಕೊಟ್ಯಾಂತರ ರೂಪಾಯಿ ಬೆಲೆಬಾಳುವ ಸಾರ್ವಜನಿಕ ಆಸ್ತಿಪಾಸ್ತಿಗಳ ನಷ್ಟಕ್ಕೆ ಕಾರಣವಾದ ಬಿಜೆಪಿ ನಾಯಕರ ವಿರುದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಅವರಿಗೆ ನಿಜವಾದ ದಮ್ಮಿದ್ದರೆ ಪ್ರಕರಣ ದಾಖಲಿಸಿ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲಿ" ಎಂದು ಆಗ್ರಹಿಸಿದ್ದಾರೆ.

"2017 ರ ಡಿಸೆಂಬರ್ 6 ರಂದು ಹೊನ್ನಾವರದಲ್ಲಿ ನಡೆದಿದ್ದ ಪರೇಶ್ ಮೇಸ್ತಾನ ಸಾವಿಗೆ ಬಿಜೆಪಿಯವರು ರಾಜಕೀಯದ ಬಣ್ಣ ಹಚ್ಚಿದ್ದರು. ಕಾಂಗ್ರೆಸ್ ನವರು ಮಾಡಿಸಿದ್ದು ಎಂದು ಅಪಪ್ರಚಾರ ಮಾಡಿದ್ದರು. ಇದರಿಂದಾಗಿ ಪರಿಸ್ಥಿತಿ ಬಿಗಡಾಯಿಸಿದ್ದಲ್ಲದೆ ಇಡೀ ಹೊನ್ನಾವರ, ಕಾರವಾರ ಹೊತ್ತಿ ಉರಿಯಲು ಬಿಜೆಪಿಗರು ಕಾರಣರಾಗಿದ್ದರು. ಬಿಜೆಪಿಗರು ಹೆಣದ ಮೇಲೆ ರಾಜಕೀಯ ಮಾಡಲು ಹೋಗಿದ್ದರಿಂದ ಈ ಪರಿಸ್ಥಿತಿ ಉಂಟಾಯಿತು. ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಹಿಂಸಾತ್ಮಕ ಘಟನೆಗಳಿಗೆ ಕಾರಣೀಭೂತರಾದ ಬಿಜೆಪಿ ನಾಯಕರುಗಳನ್ನು ಆರೋಪಿಗಳನ್ನಾಗಿ ಮಾಡಿ ಕೇಸು ದಾಖಲಿಸಬೇಕು. ಈ ಮೂಲಕ ಮೃತ ಪರೇಶ್ ಮೇಸ್ತನ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು" ಎಂದವರು ಒತ್ತಾಯಿಸಿದ್ದಾರೆ.

"ಈ ಸಾವಿಗೆ ಬಿಜೆಪಿ ನಾಯಕರು ಹಿಂದುತ್ವದ ಬಣ್ಣ ಕಟ್ಟಿ‌ ಕರಾವಳಿ ಭಾಗದಲ್ಲಿ ಕೋಮು ಸಂಘರ್ಷ, ಗಲಭೆ ಸೃಷ್ಟಿಸಿದ್ದರು. ಅಂದಿನ ಗಲಭೆಯಲ್ಲಿ ಐಜಿಪಿ ಕಾರಿಗೆ ಕಲ್ಲು ತೂರಿ, ಬೆಂಕಿ ಹಚ್ಚಿದ ಕಾರಣಕ್ಕಾಗಿ ಲಾಟಿಚಾರ್ಜ್ ಕೂಡ ನಡೆದಿತ್ತು. ಅಂದಿನ ದೊಂಬಿ ಮತ್ತು ಗಲಾಟೆಗೆ ಯಾರು ಹೊಣೆ? ಪರೇಶ್ ಮೇಸ್ತಾ ಸಾವನ್ನು ಧಾರ್ಮಿಕ ಹತ್ಯೆ ಎಂದು ಬಿಂಬಿಸಿದ್ದ ಬಿಜೆಪಿ ಯವರು ಇಡೀ ಕರಾವಳಿಯನ್ನೇ ಕೋಮುದಳ್ಳುರಿಗೆ ತಳ್ಳಿದ್ದರು. ಅಂದಿನ ಕಾಂಗ್ರೆಸ್ ಸರ್ಕಾರ ಯಾವ ಹಿಂಜರಿಕೆಯೂ ಇಲ್ಲದೇ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈಗ ಸಿಬಿಐ ಮೇಸ್ತಾ ಸಾವು ಸ್ವಾಭಾವಿಕ ಎಂದು ನ್ಯಾಯಾಲಯಕ್ಕೆ ವರದಿ ನೀಡಿದೆ. ಪರೇಶ್ ಮೇಸ್ತಾ ಪ್ರಕರಣ ಕೇವಲ ಹೊನ್ನಾವರಕ್ಕೆ ಸೀಮಿತಗೊಳಿಸದ ಬಿಜೆಪಿಗರು ಉಡುಪಿ ಜಿಲ್ಲೆಗೂ ಚುನಾವಣಾ ವಿಚಾರವನ್ನಾಗಿಸಿ ಲಾಭ ಪಡೆಯಲು ಯತ್ನಿಸಿದ್ದರು. ತಮ್ಮ ಮಗನ ಸಾವಿನ ನೋವಿನಲ್ಲಿದ್ದರೂ ಕೂಡ ಬಿಜೆಪಿಗರು ಆತನ ಹೆತ್ತವರನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡು ಕೀಳು ರಾಜಕೀಯ ಮಾಡಿದ್ದು ಜಿಲ್ಲೆಯ ಜನ ಮರೆತಿಲ್ಲ. ಅಂದು ಚೀರಾಡುತ್ತಿದ್ದ ಸೋ ಕಾಲ್ಡ್ ಬಿಜೆಪಿ ನಾಯಕರು ಈಗ ಯಾಕೆ ಮೌನಕ್ಕೆ ಶರಣಾಗಿದ್ದಾರೆ? ಪರೇಶ್ ಮೇಸ್ತಾ ಸಾವು ಸ್ವಾಭಾವಿಕ ಎಂದು ಸಿಬಿಐ ತನಿಖೆಯಿಂದ ಗೊತ್ತಾಗಿದೆ. ಆದರೆ, ಈ ಸಾವನ್ನು ರಾಜಕೀಯಗೊಳಿಸಿ ದೊಂಬಿ ಎಬ್ಬಿಸಿದ್ದ ಬಿಜೆಪಿಯವರು ನಿಜವಾದ ಸಮಾಜ ಘಾತಕರಲ್ಲವೇ? ಸುಳ್ಳು ಅಪಾದನೆ ಮಾಡಿ ಶಾಂತಿ ಭಂಗ ಮಾಡಿದ್ದು ಅಪರಾಧವಲ್ಲವೇ? ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ. ಡಿ.ಕೆ ರವಿ ಪ್ರಕರಣ - ವೈಯುಕ್ತಿಕ ಕಾರಣಗಳಿಗೆ ಆತ್ಮಹತ್ಯೆ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ - ಸರ್ಕಾರಕ್ಕೆ ಸಂಬಂಧವಿಲ್ಲ ಎಂದು ಮತ್ತು ಪರೇಶ್ ಮೇಸ್ತಾ ಪ್ರಕರಣ – ಸಹಜ ಸಾವು ಹೊರತೂ ಕೊಲೆಯಲ್ಲ ಎಂಬುದು ದಾಭೀತಾಗಿದೆ. ಈ ಹಿಂದೆ ಇದೆಲ್ಲವನ್ನೂ ಕೊಲೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ ಬಿಜೆಪಿಯವರಿಗೆ ಆತ್ಮಸಾಕ್ಷಿಯಿದ್ದರೆ ಬಹಿರಂಗ ಕ್ಷಮೆ ಕೇಳಲಿ. ಅಲ್ಲದೆ ಚುನಾವಣಾ ರಾಜಕೀಯಕ್ಕಾಗಿ ಸುಳ್ಳು ವದಂತಿಗಳನ್ನು ಹಬ್ಬಿಸಿ ಸಾರ್ವಜನಿಕ ಆಸ್ತಿ ಮತ್ತು ನೆಮ್ಮದಿಯನ್ನು ಹಾಳು ಮಾಡಿದವರ ವಿರುದ್ದ ರಾಜ್ಯ ಸರ್ಕಾ ಕ್ರಮ ಕೈಗೊಳ್ಳಲಿ" ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Recent Posts
Advertisement