Advertisement

ಪರೇಶ್ ಮೇಸ್ತನದ್ದು ಕೊಲೆಯಲ್ಲ, ಆಕಸ್ಮಿಕ ಸಾವು: ನ್ಯಾಯಾಲಯಕ್ಕೆ ಬಿ- ರಿಪೋರ್ಟ್ ಸಲ್ಲಿಸಿದ ಸಿಬಿಐ

Advertisement

2017ರ ಡಿಸೆಂಬರ್ 6ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದ್ದ ಗಲಭೆಯ ವೇಳೆ ನಾಪತ್ತೆಯಾಗಿ ಎರಡು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದ ಮೀನುಗಾರ ಕುಟುಂಬದ ಯುವಕ ಪರೇಶ್ ಮೇಸ್ತನದ್ದು ಕೊಲೆ ನಡೆದಿಲ್ಲ ಅದೊಂದು ಆಕಸ್ಮಿಕ ಸಾವು ಎಂದು ಆ ಸಾವಿನ ಹಿಂದಿನ ತನಿಖೆಯ ಹೊಣೆ ಹೊತ್ತಿದ್ದ ಸಿಬಿಐ ತನ್ನ ವರದಿಯಲ್ಲಿ ಹೇಳಿದೆ.

ಈ ಕುರಿತು ಆ ಪ್ರಕರಣದ ಕುರಿತು ಕೂಲಂಕುಷ ತನಿಖೆ ನಡೆಸಿ, ಹೊನ್ನಾವರದ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿರುವ ಸಿಬಿಐನ ಉನ್ನತ ಅಧಿಕಾರಿಗಳ ತನಿಖಾ ತಂಡ ಈ ಮೇಲಿನಂತೆ ವರದಿಯಲ್ಲಿ ಉಲ್ಲೇಖಿಸಿದೆ.

ಸಿಬಿಐ ಸಲ್ಲಿಸಿರುವ ಈ ಕುರಿತಾದ ವರದಿಯನ್ನು ಹೊನ್ನಾವರದ ನ್ಯಾಯಾಲಯ ಪರಿಶೀಲಿಸಿದ್ದು ಮೇಸ್ತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ನವೆಂಬರ್ 16ಕ್ಕೆ ತೀರ್ಪು ನೀಡುವುದಾಗಿ ನ್ಯಾಯಾಲಯ ಪ್ರಕಟಿಸಿರುವ ಕುರಿತು ವರದಿಯಾಗಿದೆ.

2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ರಾಜಕೀಯ ಪ್ರೇರಿತ ಗಲಭೆ ನಡೆದಿತ್ತು ಮತ್ತು ಆ ಬಳಿಕ ಅದು ಮತೀಯ ಸಂಘರ್ಷದ ರೂಪ ಪಡೆದಿತ್ತು. ಈ ನಡುವೆ ಇದ್ಯಾವುದಕ್ಕೂ ಸಂಬಂಧವೇ ಇಲ್ಲದ ಮೀನುಗಾರ ಯುವಕ ಪರೇಶ್ ಮೇಸ್ತ ಕಾಣೆಯಾಗಿದ್ದ ಕುರಿತು ಹುಡುಕಾಟ ನಡೆಸಿದ್ದ ಆತನ ಕುಟುಂಬಸ್ಥರು ಪೋಲೀಸರಿಗೆ ದೂರು ನೀಡಿದ್ದರು. ಇದಾದ ಬಳಿಕ ಮರುದಿನ, ಡಿಸೆಂಬರ್ 8ರಂದು ಹೊನ್ನಾವರ ನಗರದ ಬಸ್ ನಿಲ್ದಾಣದ ಮುಂದಿನ ಶನಿ ದೇವಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ನೀರು ಕುಡಿದು, ಗುರುತಿಸಲಾಗದಷ್ಟು ಉಬ್ಬಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿತ್ತು. ಆ ಬಳಿಕ ಅದು ಪರೇಶ್ ನ ಶವ ಎಂಬುದು ಆತನ ಸಂಬಂಧಿಕರು ಮತ್ತು ಊರಿನವರಿಂದ ಗುರುತಿಸಲ್ಪಡಲಾಗಿತ್ತು.

ಈ ನಡುವೆ ಪರೇಶ್ ಮೇಸ್ತನದ್ದು ಕೊಲೆ ನಡೆದಿದೆ ಎಂದು ಆರೋಪಿಸಿ, ಸಿದ್ದರಾಮಯ್ಯನವರ ನೇತೃತ್ವದ ಅಂದಿನ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಹಾಗೂ ಕೆಲವು ಸ್ವಯಂಘೋಷಿತ ಹಿಂದೂಪರ ಸಂಘಟನೆಗಳು ಮತ್ತದರ ನಾಯಕರುಗಳಾದ ಶೋಭಾ ಕರಂದ್ಲಾಜೆ, ಸಂಸದ ಅನಂತ ಕುಮಾರ್ ಹೆಗ್ಡೆ ಸೇರಿದಂತೆ ಹಲವರು ಆರೋಪಿಸಿದ್ದರು ಹಾಗೂ ಪರೇಶ್ ಮೇಸ್ತನನ್ನು ಮುಸ್ಲಿಮರು ಹತ್ಯೆ ಮಾಡಿದ್ದಾರೆಂದು ಪತ್ರಿಕಾ ಹೇಳಿಕೆಯ ಮೂಲಕ ಗುಲ್ಲೆಬ್ಬಿಸಿದ್ದರು.

ಬಿಜೆಪಿ ಮತ್ತದರ ಬೆಂಬಲಿತ ಸಂಘಟನೆಗಳು ನಾಯಕರುಗಳು ಯಾವುದೇ ಸಂಘಟನೆಯಲ್ಲಿ ಸಕ್ರೀಯ ಸದಸ್ಯನಾಗಿಲ್ಲದ ಮೇಸ್ತಾನನ್ನು ಹಿಂದೂ ಕಾರ್ಯಕರ್ತ ಎಂದು ವ್ಯಾಪಕವಾಗಿ ಬಿಂಬಿಸಿ, ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರಿಂದಾಗಿ ಈ ಘಟನೆ ರಾಜ್ಯಾದ್ಯಂತ ಅದರಲ್ಲೂ ಮುಖ್ಯವಾಗಿ ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ನಡುವೆ ಡಿಸೆಂಬರ್‌ 11ರಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಕುಮಟಾ, ಹೊನ್ನಾವರ ಮತ್ತು ಕಾರವಾರದಲ್ಲಿ ಬಿಜೆಪಿ ಪರ ಸಂಘಟನೆಗಳು ಬಲವಂತವಾಗಿ ಬಂದ್‌ಗೆ ಕರೆ ನೀಡಿದವು. ಕುಮಟಾದಲ್ಲಿ ಈ ಬಿಜೆಪಿಪರ ಸಂಘಟನೆಗಳ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿತ್ತು. ಸಮಗ್ರ ತನಿಖೆ ನಡೆಸಲು ಮತ್ತು ಶಾಂತಿಯನ್ನು ಕಾಪಾಡಲು ಜಿಲ್ಲೆಗೆ ತೆರಳಿದ್ದ ಐಜಿಪಿಯವರ ಕಾರಿಗೆ ಬೆಂಕಿಯನ್ನು ಹಚ್ಚಲಾಯಿತು. ಕರ್ತವ್ಯಪಾಲನೆಯಲ್ಲಿ ತೊಡಗಿದ್ದ ಪೊಲೀಸರ ಮೇಲೆ ಕೂಡ ಕಲ್ಲು ತೂರಲಾಯಿತು. ಘಟನೆಯಲ್ಲಿ ಹಲವಾರು ಪೊಲೀಸರು ಗಾಯಗೊಂಡರು, ವಾಹನಗಳು ಜಖಂ ಅಗಿದ್ದವು.

ರಾಜ್ಯದ ಪೋಲಿಸರು ನಡೆಸುವ ತನಿಖೆಯ ಮೇಲೆ ನಮಗೆ ವಿಶ್ವಾಸವಿಲ್ಲ ಈ ಪ್ರಕರಣದ ತನಿಖೆಯನ್ನು ಎನ್‌ಐಎ ಅಥವಾ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ಪರ ಸಂಘಟನೆಗಳು ಆಗ್ರಹಿಸಿದ ಹಿನ್ನಲೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆ ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಿತ್ತು ಮತ್ತು ಆ ನಂತರ ಈ ಪ್ರಕರಣದಲ್ಲಿ ಐವರನ್ನು ಬಂಧಿಸಿ ವಿಸ್ತೃತ ತನಿಖೆಯನ್ನು ಕೂಡ ನಡೆಸಲಾಗಿತ್ತು. ಅದರ ಪರಿಣಾಮವಾಗಿ ಇದೀಗ ನಾಲ್ಕೂವರೆ ವರ್ಷದ ನಂತರ ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ಮೇಲಿನ ವರದಿ ಸಲ್ಲಿಸಿದೆ.

ಪೋಲಿಸರೇ ಇತ್ಯರ್ಥ ಪಡಿಸಬಹುದಾಗಿದ್ದ ಎರಡು ಗುಂಪುಗಳ ನಡುವೆ ನಡೆದಿದ್ದ ಸಣ್ಣ ಘರ್ಷಣೆಯ ಪ್ರಕರಣಕ್ಕೆ ಕೋಮು ಬಣ್ಣ ಬಳಿದಿದ್ದ  ಬಿಜೆಪಿ ನಾಯಕರು ಹಾಗೂ ಸಂಘಪರಿವಾರ ಕಾರ್ಯಕರ್ತರು ಆ ನಂತರ ಕಾಕತಾಳೀಯ ಎಂಬಂತೆ ಮೃತನಾದ ಮೇಸ್ತಾನನ್ನು ಕೋಮು ದ್ವೇಷದಿಂದಲೇ ಹತ್ಯೆ ಮಾಡಲಾಗಿದೆ ಎಂದು ಗುಲ್ಲೆಬ್ಬಿಸಿ ಹೇಳಿಕೆಗಳನ್ನು ನೀಡಿ, ಬೀದಿಗಿಳಿದು ಹಿಂಸಾತ್ಮಕ ಹೋರಾಟ ನಡೆಸಿದ ಪರಿಣಾಮವಾಗಿ ದೊಡ್ಡ ಮಟ್ಟದ ಗಲಭೆ ನಡೆದು ಹಲವು ನಾಗರಿಕರು, ರಕ್ಷಣೆಯ ಹೊಣೆ ಹೊತ್ತಿದ್ದ ಪೋಲಿಸರು ತೀವ್ರವಾದ ಗಾಯಗೊಳ್ಳಲು ಕಾರಣವಾಗಿತ್ತು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 23 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ಪರೇಶ್ ಮೇಸ್ತಾ ಹೆಸರನ್ನು ಪಟ್ಟಿಯಲ್ಲಿ ಇಂದಿಗೂ ಸೇರಿಸುತ್ತಲೇ ಇದೆ ಮತ್ತು ಇಂದಿಗೂ ಜೀವಂತವಿರುವ ಮತ್ತು ಕೆಲವು ಖಾಸಗಿ ಕಾರಣಕ್ಕಾಗಿ ಮೃತರಾದ ವ್ಯಕ್ತಿಗಳ ಹೆಸರನ್ನು ಕೂಡ ಆ ಪಟ್ಟಿಯಲ್ಲಿ ಸೇರಿಸಿ ಏನೂ ಅರಿಯದ ಯುವಕರಲ್ಲಿ ಕೋಮು ಧ್ವೇಷದ ಕಿಡಿಯನ್ನು ಸದಾ ಹೊತ್ತಿಸುತ್ತಲೇ ಬಂದಿದೆ. 

ಆದರೆ ಈ ಪ್ರಜಾಪ್ರಭುತ್ವ ವಿರೋಧಿ, ಬಿಜೆಪಿ ನಾಯಕರುಗಳು ಕೇವಲ ಅಧಿಕಾರಕ್ಕಾಗಿ ಬಾಳಿ ಬದುಕಬೇಕಿದ್ದ ಹಿಂದೂ ಮುಸ್ಲಿಂ ಯುವಕರ ನಡುವೆ ಗಲಭೆ ಮಾಡಿಸುತ್ತಿರುವ ಕುರಿತು ಈ ಯುವಕರಿಗೆ ಅರಿವು ಮೂಡುವುದಾದರೂ ಯಾವಾಗ ಎನ್ನುವುದು ಈ ಹೊತ್ತಿನ ಪ್ರಶ್ನೆಯಾಗಿದೆ.

Advertisement
Advertisement
Recent Posts
Advertisement