Advertisement

ಅಭ್ಯರ್ಥಿಗಳ ಪಟ್ಟಿ ಪ್ರಕಟ: ಉಡುಪಿ ಜಿಲ್ಲೆಯ ಅವಕಾಶ ವಂಚಿತ ಬಿಜೆಪಿ ನಾಯಕರ ವಲಯದಲ್ಲಿ ವ್ಯಾಪಕ ಆಕ್ರೋಶ!

Advertisement

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ಕೊನೆಗೂ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದೆ. ಈ ಕುರಿತು ಕಾರ್ಕಳ ಹೊರತುಪಡಿಸಿ ಉಡುಪಿ ಜಿಲ್ಲೆಯ ಇತರ ಬಿಜೆಪಿ ಹಾಲಿ ಶಾಸಕರ ಅಭಿಮಾನಿಗಳ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಕುರಿತು ವರದಿಯಾಗಿದೆ.

ಉಡುಪಿಯಲ್ಲಿ ರಘುಪತಿ ಭಟ್ಟರು, ಕಾಪುವಿನಲ್ಲಿ ಲಾಲಾಜಿ ಮೆಂಡನ್ ರವರು ಪಟ್ಟಿ ಪ್ರಕಟಗೊಂಡ ಮಂಗಳವಾರ ಬೆಳಿಗ್ಗೆಯ ತನಕವೂ ಸ್ವಕ್ಷೇತ್ರದಲ್ಲಿ ಟಿಕೇಟು ಸಿಗುವ ಕುರಿತು ನಿರೀಕ್ಷೆಯಲ್ಲಿಯೇ ಇದ್ದಿದ್ದರಾದರೂ ಕೊನೆಯ ಕ್ಷಣದಲ್ಲಿ ಉಡುಪಿಯಲ್ಲಿ ಯಶ್ಪಾಲ್ ಸುವರ್ಣರವರಿಗೆ ಮತ್ತು ಕಾಪುವಿನಲ್ಲಿ ಗುರ್ಮೆ ಸುರೇಶ್ ಶೆಟ್ಟರಿಗೆ ಟಿಕೇಟು ಘೋಷಣೆಯಾಗಿರುವ ಹಿನ್ನಲೆಯಲ್ಲಿ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್ ರವರ ಅಭಿಮಾನಿಗಳ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರು ಸದ್ರಿ ಪಟ್ಟಿಯಲ್ಲಿ ಪ್ರಕಟವಾಗದ ಹಿನ್ನಲೆಯಲ್ಲಿ ಬಿಜೆಪಿಯ ಹಾಲಿ ಶಾಸಕ ಸುಕುಮಾರ ಶೆಟ್ಟಿಯವರ ಅಭಿಮಾನಿಗಳು ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿರುವ ಕುರಿತು ಕೂಡಾ ವರದಿಯಾಗಿದೆ.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐದು ಅವಧಿಯಲ್ಲಿ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಕೆಲವು ದಿನಗಳ ಹಿಂದೆ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿರುವುದರ ಹಿನ್ನಲೆಯಲ್ಲಿ ಕೂಡ "ಪಕ್ಷದಿಂದ ಅವರಿಗೆ ಟಿಕೇಟು ನಿರಾಕರಿಸುವ ಸೂಚನೆ ಇತ್ತು" ಎನ್ನುವುದರ ಕುರಿತು ಅವರ ಅಭಿಮಾನಿಗಳ ವಲಯದಲ್ಲಿ ಇದೀಗಲೂ ಬೇಸರ ಇದೆ. ಹಾಲಾಡಿಯವರ ರಾಜಕೀಯ ನಿವೃತ್ತಿ ಗೌರವಯುತವಾಗಿ ಆಗಿರಬೇಕಿತ್ತು ಎಂದು ಅವರ ಬೆಂಬಲಿಗರ ಅಭಿಪ್ರಾಯವಾಗಿದೆ. ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅವಕಾಶ ಸಿಕ್ಕರೆ ಸ್ಪರ್ದಿಸುವ ಕುರಿತು ಇಂಗಿತ ವ್ಯಕ್ತಪಡಿಸಿದ್ದ ಹಾಲಾಡಿಯವರು ಸಭೆಯ ನಂತರ ಪಕ್ಷ ಟಿಕೇಟು ನೀಡದಿರುವ ಕುರಿತು ಸೂಚನೆ ಸಿಕ್ಕ ಹಿನ್ನಲೆಯಲ್ಲಿ ಸ್ಪರ್ದೆಯಿಂದ ಹಿಂದಕ್ಕೆ ಸರಿಯುವ ನಿರ್ಧಾರವನ್ನು ಹೊರಹಾಕಿದ್ದರು ಎನ್ನುವುದು ಅವರ ಅಭಿಮಾನಿಗಳ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಆಕ್ರೋಶ, ಅಸಮಾಧಾನ, ಸಿಟ್ಟು ಮುಂದಿನ ದಿನಗಳಲ್ಲಿ ಯಾವ ರೀತಿಯಾಗಿ ಸ್ಪೋಟಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಈ ಹಿಂದಿನ ಕಾಂಗ್ರೆಸ್ ಶಾಸಕರಾಗಿದ್ದ (1983-1999) ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರ ಮಾದರಿಯಲ್ಲೇ ಜಾತ್ಯಾತೀತವಾಗಿ ಹಾಗೂ ಜನಪರವಾಗಿ ನಿರಂತರ 24 ವರ್ಷಗಳ (1999-2023) ಕಾಲ ತನ್ನ ಇಡೀ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಕೋಮುಗಲಭೆಗಳಿಗೆ ಅವಕಾಶ ನೀಡದೇ ಶಾಸಕರಾಗಿ ಕಾರ್ಯವೆಸಗಿದ್ದ ಹಾಲಾಡಿಯವರು ಆ ಕಾರಣಕ್ಕಾಗಿಯೇ ಪಕ್ಷಾತೀತವಾಗಿ ಹಾಗೂ ಧರ್ಮಾತೀತವಾಗಿ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ ಎನ್ನುವುದು ಮಾತ್ರ ಸುಳ್ಳಲ್ಲ.

ಈ ಹಿಂದೆ ಹಾಲಾಡಿಯವರಿಗೆ ಮಂತ್ರಿಗಿರಿ ನೀಡುವ ಕುರಿತು ಭರವಸೆ ನೀಡಿ ಬೆಂಗಳೂರಿಗೆ ಕರೆಸಿ ನಂತರ ಅವಕಾಶ ನೀಡದೆ ಅವಮಾನವೆಸಗಿದ್ದ ಕಾರಣಕ್ಕಾಗಿ ಹಾಲಾಡಿಯವರ ಅಭಿಮಾನಿಗಳು ಮತ್ತು ಕುಂದಾಪುರ, ಬೈಂದೂರು, ಕಾರ್ಕಳ ಹಾಗೂ ಉಡುಪಿಯ ಬಿಜೆಪಿ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದನ್ನು ಮತ್ತು ಆ ಕುರಿತಾದ ಅಸಮಾಧಾನದ ಹಿನ್ನಲೆಯಲ್ಲಿ ಹಾಲಾಡಿಯವರು ಮತ್ತವರ ಸಾವಿರಾರು ಅಭಿಮಾನಿಗಳು ಬಿಜೆಪಿಗೆ ರಾಜೀನಾಮೆ ನೀಡಿದ್ದನ್ನು ಮತ್ತು ಆ ನಂತರ ಹಾಲಾಡಿಯವರು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದನ್ನು ಮತ್ತು ಅದೇ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಈ ನಡುವೆ ಸದಾ ಕುಟುಂಬ ರಾಜಕಾರಣದ ವಿರುದ್ಧವಾಗಿ ಬಾಷಣ ಬಿಗಿಯುವ ಬಿಜೆಪಿ ನಾಯಕತ್ವ ಇದೀಗ ಕುಂದಾಪುರದಲ್ಲಿ ಬಿಜೆಪಿಯ ಹಿರಿಯ ನಾಯಕ, ಹದಿನಾಲ್ಕನೆಯ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಎ.ಜಿ ಕೊಡ್ಗಿಯವರ ಪುತ್ರ ಕಿರಣ್ ಕುಮಾರ್ ಕೊಡ್ಗಿಯವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.

ಕಾಂಗ್ರೆಸ್ ಪಕ್ಷವು ಕುಂದಾಪುರದಲ್ಲಿ ಹಲವು ದಿನಗಳ ಹಿಂದೆಯೇ ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಯುವನಾಯಕ, ಪಿಡಬ್ಲ್ಯೂಡಿ ಗುತ್ತಿಗೆದಾರ ಮೊಳಹಳ್ಳಿ ದಿನೇಶ್ ಹೆಗ್ಡೆಯವರ ಹೆಸರನ್ನು ಅಖೈರುಗೊಳಿಸಿತ್ತು ಮತ್ತು ದಿನೇಶ್ ಹೆಗ್ಡೆಯವರು ಹಲವು ಸುತ್ತಿನ ಪ್ರಚಾರವನ್ನು ಈಗಾಗಲೇ ನಡೆಸಿ ಜನಮಾನಸದಲ್ಲಿ ಗೆಲ್ಲುವ ಕುದುರೆ ಎಂಬ ಅಭಿಪ್ರಾಯವನ್ನು ಮೂಡಿಸುವಲ್ಲಿ ಸಫಲತೆ ಕಂಡಿದ್ದಾರೆ. ಹಾಗೆಯೇ ಕಾಂಗ್ರಸ್ ಪಕ್ಷವು ಕ್ರಮವಾಗಿ ಬೈಂದೂರಿನಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿಯವರಿಗೆ, ಕಾಪುವಿನಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆಯವರಿಗೆ ಹಾಗೂ ಉಡುಪಿಯಲ್ಲಿ ಯುವನಾಯಕ ಪ್ರಸಾದ್ ರಾಜ್ ಕಾಂಚನ್ ರವರಿಗೆ ಟಿಕೇಟು ಘೋಷಿಸಿದ್ದು ಬಹುತೇಕ ಇವರುಗಳು ಬಹುಮತದಿಂದ ಗೆಲ್ಲುವ ಕುರಿತು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಯುವಕರು ತಂಡೋಪತಂಡವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಈ ಮೇಲಿನ ಅಭಿಪ್ರಾಯಕ್ಕೆ ಉತ್ತಮವಾದ ಉದಾಹರಣೆಯಾಗಿದೆ.

ಬೆಲೆ ಏರಿಕೆ, ನಿರುದ್ಯೋಗ, ಬಿಜೆಪಿ ಸರ್ಕಾರದ 40% ಲೂಟಿ, ಹಿಜಾಬ್, ಅಜಾನ್, ಹಲಾಲ್ ಮುಂತಾದ ಹೆಸರಿನಲ್ಲಿ ಬಿಜೆಪಿ ನಡೆಸುತ್ತಿರುವ ಕೋಮುಗಲಭೆಗಳು ಮುಂತಾದವುಗಳಿಂದ ಈಗಾಗಲೇ ಬೇಸತ್ತಿರುವ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆ, 200ಯೂನಿಟ್ ತನಕ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವೀಧರ ನಿರುದ್ಯೋಗಿಗಳಿಗೆ 3ಸಾವಿರ ಹಾಗೂ ಡಿಪ್ಲೊಮಾ ಪದವೀಧರರಿಗೆ ಒಂದೂವರೆ ಸಾವಿರ ರೂಪಾಯಿ ನೀಡುವ ಯುವನಿಧಿ ಯೋಜನೆ, ಹತ್ತು ಕೆಜಿ ಅಕ್ಕಿ ನೀಡುವ ಕುರಿತಾದ ಅನ್ನಭಾಗ್ಯ ಯೋಜನೆಗಳ ಕುರಿತಾಗಿ ರಾಜ್ಯಾದ್ಯಂತ ಒಲವು ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ.

Advertisement
Advertisement
Recent Posts
Advertisement