Advertisement

ಗುರುರಾಜ ಕರ್ಜಗಿಯವರಿಗೊಂದು ಬಹಿರಂಗ ಪತ್ರ.

Advertisement

ಬರಹ: ಜಗದೀಶ್ ಕೊಪ್ಪ (ಲೇಖಕರು ಜನಪರ ಚಿಂತಕರು)

ಆತ್ಮೀಯರೂ ಅಲ್ಲದ, ನನಗೆ ವೈಯಕ್ತಿಕ ಪರಿಚಯವಿಲ್ಲದ ಗುರುರಾಜ ಕರ್ಜಗಿಯವರೇ, ನಿಮ್ಮ ಜೊತೆ ಹತ್ತು ವರ್ಷಗಳ ಹಿಂದೆ ಧಾರವಾಡದಲ್ಲಿ ಹಾಗೂ ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ವೇದಿಕೆ ಹಂಚಿಕೊಂಡಿದ್ದೆ. ಈ ಸಂಧರ್ಭದಲ್ಲಿ ನಿಮ್ಮ ಮಾತುಗಳನ್ನು ಕೇಳಿದ್ದು ಹೊರತು ಪಡಿಸಿದರೆ, ನಿಮ್ಮ ಪ್ರವಚನಗಳು ಮತ್ತು ಉಪದೇಶಾಮೃತಗಳನ್ನು ನಾನು ಓದಿದವನಲ್ಲ ಮತ್ತು ಕೇಳಿದವನಲ್ಲ.

ನೀವು ಶಿಕ್ಷಣ ತಜ್ಞರು ಎಂದು ಈ ನಾಡಿನಲ್ಲಿ ಗುರುತಿಸಿಕೊಂಡಿದ್ದೀರಿ ಎಂದು ಕೇಳಿದ್ದೀನಿ. ಈ ಕಾರಣದಿಂದಾಗಿ ನೀವು ಮೊನ್ನೆ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಶಾಲಾ ಪಠ್ಯ ಪುಸ್ತಕಗಳ ಬಗ್ಗೆ ತಮಗಿರುವ ಅಸಮಾಧಾನವನ್ನು ಹೊರಹಾಕಿದ್ದೀರಿ. ಇಂದಿನ ದಿನಮಾನಗಳಲ್ಲಿ ಪ್ರವಚನಗಳು ಎಂದರೆ, ಧರ್ಮದ ಹೆಸರಿನಲ್ಲಿ ನಿಧಾನ ವಿಷ ಉಣಿಸುವ ಪ್ರಕ್ರಿಯೆ ಎಂಬುದನ್ನು ನಿಮಗೆ ನಾನು ವಿವರಿಸುವ ಅಗತ್ಯವಿಲ್ಲ. ಭಾರತದ ದಾರ್ಶನೀಕರ ಬಗ್ಗೆ, ಅವರ ಚಿಂತನೆಗಳ ಬಗ್ಗೆ ಬುದ್ಧ, ಬಸವ, ಕಬೀರ, ಅಲ್ಲಮ, ತತ್ವಪದಕಾರರ ಕುರಿತಾಗಿ ಗಂಭೀರವಾಗಿ ಓದಿಕೊಂಡ ನನ್ನ ತಲೆಮಾರಿನ ಬಹುತೇಕ ಗೆಳೆಯರು (ನಾನೂ ಸೇರಿದಂತೆ) ಓಶೋ ಹೆಸರಿನ ರಜನೀಶ್, ಜಗ್ಗಿ ವಾಸುದೇವ, ರವಿಶಂಕರ ಗುರೂಜಿ ಇಂತಹ ಅನೇಕ ಹುಸಿ ಸಂತರನ್ನು ಸಾರಾ ಸಗಟಾಗಿ ತಿರಸ್ಕರಿಸಿದ್ದೇವೆ. ಇವರಿಗೂ ಹಾಗೂ ಬಾಲ್ಯದಲ್ಲಿ ಹಳ್ಳಿಯ ನಮ್ಮ ಮನೆಗೆ ಭಿಕ್ಷೆಗೆ ಬರುತ್ತಿದ್ದ ಬುಡು ಬುಡಿಕೆ ದಾಸರಿಗೂ ಅಂತಹ ವೆತ್ಯಾಸವೇನೂ ಕಾಣುವುದಿಲ್ಲ ನಮ್ಮ ಅವ್ವಂದಿರು ಬೊಗಸೆ ತುಂಬಾ ಹಾಕುತ್ತಿದ್ದ ರಾಗಿ ಅಥವಾ ಅಕ್ಕಿಗಾಗಿ ನಮ್ಮ ಕುಟುಂಬದ ರಕ್ಷಣೆಗಾಗಿ ಅವರು ಉಪದೇಶ ಹೇಳಿ ಹೋಗುತ್ತಿದ್ದರು.

ನೀವು ನೂತನ ಕರ್ನಾಟಕ ಸರ್ಕಾರ ಶಾಲಾ ಪಠ್ಯಗಳಲ್ಲಿ ಅಡಕವಾಗಿರುವ ಕೆಲವು ಪಠ್ಯಗಳನ್ನು ತೆಗೆಯಲು ತೆಗೆದುಕೊಂಡ ನಿರ್ಧಾರ ಕುರಿತು ಸರ್ಕಾರದ ಆಸ್ಥಾನದಲ್ಲಿರುವ ವಿದ್ವಾಂಸರ ಕೃತ್ಯ ಇದಾಗಿದೆ ಎಂದು ಆಪಾದಿಸಿದ್ದೀರಿ. ಗುರುರಾಜ ಕರ್ಜಗಿಯವರೇ, ರಸಾಯನಶಾಸ್ತ್ರ ಓದಿಕೊಂಡಿರುವ ನೀವಾಗಲಿ ಅಥವಾ ಅರ್ಥಶಾಸ್ತ್ರ ಓದಿಕೊಂಡಿರುವ ನಾನಾಗಲಿ ಶಿಕ್ಷಣ ತಜ್ಞರಲ್ಲ, ಮೇಲಾಗಿ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸುವ ಕನಿಷ್ಟ ಯೋಗ್ಯತೆ ಮತ್ತು ಅರ್ಹತೆ ನಮ್ಮಿಬ್ಬರಿಗೂ ಇಲ್ಲ. ನೀವು ಎತ್ತಿರುವ ಈಪ್ರಶ್ನೆಯನ್ನು ಎರಡು ವರ್ಷದ ಹಿಂದೆ ಬಿ.ಜೆ.ಪಿ. ಸರ್ಕಾರವು ಬಿ.ಎಸ್.ಸಿ. ಪದವೀಧರನಾದ ವಕ್ರತೀರ್ಥನೆಂಬ ಅಯೋಗ್ಯನ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಲು ಹೊರಟಾಗ ಎತ್ತಿದ್ದರೆ, ನಿಮ್ಮ ಪ್ರಶ್ನೆಗೆ ನೈತಿಕತೆ ಇರುತ್ತಿತ್ತು. ಪ್ರೈಮರಿ ಶಾಲಾ ಶಿಕ್ಷಕನಿಗೆ ಕನಿಷ್ಠ ಎರಡು ವರ್ಷ ತರಬೇತಿ ಪಡೆದು ಮಕ್ಕಳಿಗೆ ಯಾವ ರೀತಿ ಪಾಠ ಬೋಧಿಸಬೇಕೆಂಬ ನಿಯಮವಿದೆ. ಅದೇ ರೀತಿಯಲ್ಲಿ ಮಾಧ್ಯಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಈಗ ೆರಡು ವರ್ಷ ಬಿ.ಎಡ್. ತರಬೇತಿ ಪಡೆದಿರುತ್ತಾರೆ. ಇಂತಹ ಕನಿಷ್ಠ ಯೋಗ್ಯತೆಯೂ ಇಲ್ಲದ ಆ ಅಯೋಗ್ಯನಿಗೆ ಈ ಜವಾಬ್ದಾರಿಯನ್ನು ವಹಿಸಿದಾಗ ಶಿಕ್ಷಣ ತಜ್ಞರೆಂಬ ನಿಮ್ಮ ಅರ್ಹತೆ ಯಾವ ಪಂಜರದಲ್ಲಿ ಅಡಗಿ ಕುಳಿತಿತ್ತು?.

ಕರ್ನಾಟಕದ ಇತಿಹಾಸದಲ್ಲಿ ನಿಜಲಿಂಗಪ್ಪ, ದೇವರಾಜ ಅರಸು,ರಾಮಕೃಷ್ಣ ಹೆಗ್ಗಡೆ, ಜೆಹೆಚ್. ಪಟೇಲ್, ಎಸ್.ಎಂ.ಕೃಷ್ಣ ಇವರಿಂದ ಹಿಡಿದು ಕಳೆದ ಭಾರಿ ಸಿದ್ಧರಾಮಯ್ಯನವರು ಆಡಳಿತ ನಡೆಸಿದ ಅವಧಿಯವರೆಗೂ ಶಾಲಾ ಪಠ್ಯ ಪುಸ್ತಕಗಳು ಎಂದಿಗೂ ವಿವಾದಕ್ಕೆ ಈಡಾಗಿರಲಿಲ್ಲ. ಏಕೆಂದರೆ, ಎಲ್ಲಾ ಮಹನೀಯರು ತಮ್ಮ ಪಕ್ಷಗಳ ತತ್ವ ಸಿದ್ವಾಂತಗಳನ್ನು ಮೀರಿ ನಮ್ಮ ಮಕ್ಕಳಿಗೆ ಪಠ್ಯಗಳಲ್ಲಿ ವಿಷ ಮತ್ತು ದ್ವೇಷ ತುಂಬಬಾರದು ಎಂಬ ಮನೋಭಾವ ಹೊಂದಿದ್ದರು. ಈ ಕಾರಣದಿಂದಾಗಿ ರಾಷ್ಟ್ರದ ಮತ್ತು ರಾಜ್ಯದ ಎಲ್ಲಾ ಮಹನೀಯರ ಜೀವನ ಮತ್ತು ಅವರ ಚಿಂತನೆಗಳು ನಮ್ಮ ಮಕ್ಕಳಿಗೆ ಪಠ್ಯದಲ್ಲಿ ಬೋಧಿಸಲ್ಪಡುತ್ತಿದ್ದವು.

ಪಠ್ಯ ಪುಸ್ತಕಗಳಲ್ಲಿ ಯಾವುದಾದರೂ ಬದಲಾವಣೆ ಆಗಬೇಕಾದರೆ ಅದು ಶಿಕ್ಷಣ ತಜ್ಞರ ಸಮಿತಿಯಿಂದ ಅನುಮೋದಿಸಲ್ಪಟ್ಟು ನಂತರ ಅದಕ್ಕೆ ವಿಷಯ ತಜ್ಞರು ಹಾಗೂ ಶಾಲೆಯ ನಿವೃತ್ತ ಮಾಸ್ತರು ಹೀಗೆ ಅನೇಕ ರಂಗದ ನಲವತ್ತು, ಐವತ್ತು ಮಂದಿಯ ವಿದ್ವಾಂಸರಿಂದ ಅನುಮತಿಯ ಒಪ್ಪಿಗೆ ಪಡೆಯಬೇಕಿತ್ತು. ಇದು ಕನಿಷ್ಠ ಮೂರರಿಂದ ಐದು ತಿಂಗಳ ಅವಧಿಯ ಪ್ರಕ್ರಿಯೆಯಾಗಿತ್ತು. ಈ ಕುರಿತು ನಿಮಗೆ ಮಾಹಿತಿ ಬೇಕಿದ್ದರೆ, ಕಳೆದ ಬಾರಿ ಪ್ರೊ.ಬರಗೂರು ನೇತೃತ್ವದಲ್ಲಿ ನಡೆದ ಪ್ರಕ್ರಿಯೆಯ ಮಾಹಿತಿಯನ್ನು ನೋಡಬಹುದಾಗಿದೆ. ಇಂತಹ ಕನಿಷ್ಠ ಯಾವ ಯೋಗ್ಯತೆ ಅರ್ಹತೆ ಇಲ್ಲದ, ಬೆಂಗಳೂರಿನ ಕೇಶವ ಕೃಪಾದ ವಾರನ್ನದ ಗಿರಾಕಿಗೆ ಬಿ.ಜೆ.ಪಿ. ಸರ್ಕಾರ ಜವಾಬ್ದಾರಿ ವಹಿಸುವುದರ ಜೊತೆಗೆ ಅವನು ಐ.ಐ.ಟಿ, ಪ್ರೊಫೆಸರ್ ಎಂದು ಸುಳ್ಳು ಹೇಳುವಾಗ ನೀವು ಸೇರಿದಂತೆ ನಾಡಿನ ಎಷ್ಟು ಮಂದಿ ಸಾಂಸ್ಕೃತಿಕ ಚಿಂತಕರು ಧ್ವನಿ ಎತ್ತಿದಿರಿ? ಒಮ್ಮೆ ನಿಮ್ಮಗಳ ಎದೆಯ ಮೇಲೆ ಕೈಯಿಟ್ಟುಕೊಂಡು ಆತ್ಮ ಸಾಕ್ಷಿಯನ್ನು ಪರೀಕ್ಷಿಸಿಕೊಳ್ಳಿ.

2014 ರ ವರೆಗೆ ರಾಷ್ಟ್ರಮಟ್ಟದಲ್ಲಿ ಹಾಗೂ ನಾಲ್ಕು ವರ್ಷದ ಹಿಂದೆ ಕರ್ನಾಟಕದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬರುವವರೆಗೂ ಶಾಲಾ ಪಠ್ಯಗಳನ್ನು ಮತ್ತು ಇತಿಹಾಸವನ್ನು ತಿರುಚುವ ಕ್ರಿಯೆಗಳು ಅಸ್ತಿತ್ವದಲ್ಲಿ ಇರಲಿಲ್ಲ. ಇಹಾಸದ ದಾಖಲೆಗೆ ನಮಗೆ ಬ್ರಿಟೀಷರು ಮಾದರಿಯಾಗಿದ್ದರೂ ಸಹ, ದಕ್ಷಿಣ ಭಾರತದ ಇತಿಹಾಸ ರೂಪಿಸುವಲ್ಲಿ ಕೆ.ಎ. ನೀಲಕಂಠ ಶಾಸ್ತ್ರಿಯವರು, ಭಾರತದ ಇತಿಹಾಸ ದಾಖಲಿಸುವಲ್ಲಿ ಪ್ರೊ.ರೋಮಿಲಾ ಥಾಪೂರ್ ಹಾಗೂ ಮಧ್ಯಕಾಲೀನ ಭಾರತದ ಇತಿಹಾಸ ದಾಖಲಿಸಿದ ಪ್ರೊ. ಇರ್ಪಾನ್ ಹಬೀಬ್ ಇಂದಿಗೂ ನಮಗೆ ಮಾದರಿಯಾಗಿದ್ದಾರೆ. ರಾಗ ದ್ವೇಷವಿಲ್ಲದೆ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ. ಇದಕ್ಕೆ ಶ್ರೇಷ್ಠ ಉದಾಹರಣೆಯೆಂದರೆ, ಸಾವರ್ಕರ್ ಕುರಿತು ಬರೆಯುವಾಗ ಆ ವ್ಯಕ್ತಿಯು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ದಲಿತರಿಗೆ ದೇಗುಲ ಪ್ರವೇಶಕ್ಕೆ ಹೋರಾಡಿದ್ದು, 1857 ರ ಸಿಪಾಯಿ ದಂಗೆ ಕುರಿತು ಕೃತಿ ಬರೆಯುವಾಗ ಕಾನ್ಪುರದ ಮುಸ್ಲಿಂ ಮಹಿಳಾ ನೃತ್ಯಗಾತಿಯರ ಕುರಿತು ಬರೆದಿರುವುದನ್ನು ಯಾವುದೇ ಮುಚ್ಚು ಮರೆಯಿಲ್ಲದೆ ದಾಖಲಿಸಿದ್ದಾರೆ. ಇಂದಿನ ನಕಲಿ ಇತಿಹಾಸಕಾರರಂತೆ ಟಿಪ್ಪು ಸುಲ್ತಾನ್ ಬಗ್ಗೆ ದ್ವೇಷ ಕಾರುವ ವ್ಯಕ್ತಿತ್ವ ಅವರ ಇತಿಹಾಸದ ಪಠ್ಯಗಳಲ್ಲಿ ಇಲ್ಲ.

ಚೆನ್ನೈ ನಗರದ ಮದ್ರಾಸ್ ಯೂನಿರ್ವಸಿಯಲ್ಲಿ ದಕ್ಷಿಣ ಭಾರತದ ಇತಿಹಾಸ ಎಂಬ ಪ್ರತ್ಯೇಕ ಅಧ್ಯಯನ ವಿಭಾಗವಿದೆ. ಇತ್ತೀಚಿನ ವರ್ಷಗಳಲ್ಲಿ ನನ್ನ ಅಧ್ಯಯನ ಕೃತಿಯೊಂದಕ್ಕಾಗಿ ಅಲ್ಲಿನ ಗ್ರಂತಾಲಯದಲ್ಲಿ ಹಲವು ದಿನಗಳ ಕಾಲ ಕುಳಿತು ಇತಿಹಾಸದ ಪಠ್ಯಗಳನ್ನು ಅವಲೋಕಿಸುವಾಗ ನಮ್ಮ ಶಾಲಾ ಪಠ್ಯ ಪುಸ್ತಕಗಳಿಗೆ ಇಂತಹ ಇತಿಹಾಸಕಾರರು ಮಾದರಿಯಾಗಿದ್ದಾರೆ ಎಂದು ನನಗೆ ದೃಢವಾಯಿತು. 2014 ರಲ್ಲಿ ದಕ್ಷಿಣ ಏಷ್ಯಾ ಇತಿಹಾಸದ ತಜ್ಷರಾದ ಜಪಾನಿನ ಟೋಕಿಯೋ ವಿಶ್ವ ವಿದ್ಯಾನಿಲಯದ ಪ್ರೊ.ನೊಬೊರು ಕರಸಿಮ ಎಂಬುವರ ಸಂಪಾದಕತ್ವದಲ್ಲಿ A Concise History Of South India ಎಂಬ ಕೃತಿಯನ್ನು ಆಕ್ಸ್ ಪರ್ಡ್ ಯೂನಿರ್ವಸಿಟಿ ಪ್ರೆಸ್ ಹೊರತಂದಿದೆ. 477 ಪುಟಗಳ ಈ ಕೃತಿಯಲ್ಲಿ ಆಂಧ್ರ ಮತ್ತು ತಮಿಳುನಾಡು ವಿ.ವಿ.ಗಳ ವಿದ್ವಾಂಸರು ಸೇರಿದಂತೆ, ದ ಹಿಂದೂ ದಿನಪತ್ರಿಕೆಯ ಬೆಂಗಳೂರು ಸ್ಥಾನಿಕ ಸಂಪಾದಕರಾಗಿದ್ದ ಪಾರ್ವತಿ ಮೆನನ್ ಅವರು ಸೇರಿದಂತೆ ಹಲವರು ಸ್ವಾತಂತ್ರ್ಯೋತ್ತರದ ದಕ್ಷಿಣ ಭಾರತದ ಇತಿಹಾಸವನ್ನು ನಿಷ್ಪಕ್ಷಪಾತವಾಗಿ ದಾಖಲಿಸಿದ್ದಾರೆ.
ಇಂತಹ ನಿಷ್ಪಕ್ಷಪಾತ ಧೋರಣೆಯು ಪಠ್ಯ ಪುಸ್ತಕಗಳಲ್ಲಿ ಇರಬೇಕು ತಾನೆ? ಸರ್ಕಾರದ ಅಧಿಕೃತ ಅನುಮೋದನೆ ಇಲ್ಲದೆ, ಪಿ.ಯು.ಸಿ. ಪಠ್ಯ ಪುಸ್ತಕ ಬದಲಾವಣೆಗೆ ವಕ್ರತೀರ್ಥ ಕೈ ಹಾಕಿದ್ದ ಸಂಗತಿ ನನಗಿಂತ ನಿಮಗೆ ಗೊತ್ತಿರಲೇಬೇಕು ಅಲ್ಲವೆ?

ಗುರುರಾಜ್ ಅವರೇ, ನಾವು ಆಡುವ ಮಾತು ಮತ್ತು ಬರೆಯುವ ಅಕ್ಷರ ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿರಬೇಕು. ಯಾರೋ ಅಧಿಕಾರಸ್ಥರನ್ನು ನಂಬಿಸುವ ಹುನ್ನಾರ ಅದರಲ್ಲಿ ಅಡಗಿರಬಾರದು.

Advertisement
Advertisement
Recent Posts
Advertisement