Advertisement

ವಿಧ್ಯಾರ್ಥಿನಿ ಸಾವು: ಸೈಕೋ ಮಂಜಪ್ಪ ಮತ್ತು ಆರೆಸ್ಸೆಸ್ ಪಾತ್ರ?

Advertisement

ವಿದ್ಯಾರ್ಥಿನಿ ಸಾವು: ಸೈಕೋ ಮಂಜಪ್ಪ ಮತ್ತು ಆರೆಸ್ಸೆಸ್ ಪಾತ್ರ?

ಬರಹ: ನವೀನ್ ಸೂರಿಂಜೆ (ಲೇಖಕರು ಖ್ಯಾತ ಪತ್ರಕರ್ತರು, ಪ್ರಗತಿಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)

ಶಿವಮೊಗ್ಗದ ಸೈಕೋ ಮಂಜಪ್ಪ ನಡೆಸುವ ವನಶ್ರೀ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯ ಸಾವು, ವಿದ್ಯಾರ್ಥಿನಿಯರಿಗೆ ನೀಡುವ ಲೈಂಗಿಕ ಕಿರುಕುಳದಲ್ಲಿ ಆರ್ ಎಸ್ ಎಸ್ ನ ನೇರ ಪಾತ್ರವಿದೆ. ಇದೊಂದು ಕೇವಲ ಒಂದು ಹೆಣ್ಣು ಮಗುವಿನ ಸಾವು ಪ್ರಕರಣ ಅಥವಾ ಒಂದೆರಡು ಹೆಣ್ಣು ಮಕ್ಕಳ ಮೇಲೆ ನಡೆದ ಲೈಂಗಿಕ ಹಗರಣ ಮಾತ್ರವಲ್ಲ. ಇದು ರಾಷ್ಟ್ರ ಮಟ್ಟದಲ್ಲಿ ಆರ್ ಎಸ್ ಎಸ್ ನಡೆಸುವ ಮಕ್ಕಳ ಕಳ್ಳ ಸಾಗಾಣೆ ಪ್ರಕರಣದ ಒಂದಂಶವಷ್ಟೆ.

ಸೈಕೋ ಮಂಜಪ್ಪ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ಇಬ್ಬರು ವಿದ್ಯಾರ್ಥಿನಿಯರು ಪೊಲೀಸರೆದುರು ಚಪ್ಪಲಿಯಲ್ಲಿ ಹೊಡೆದಿದ್ದರು. ಶಾಲೆಯ ಸ್ಥಾಪಕನಾಗಿರುವ ಸೈಕೋ ಮಂಜಪ್ಪಗೆ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಎಸಗುವ ದೈರ್ಯ ಬಂದಿದ್ದು ಎಲ್ಲಿಂದ ? ವಿದ್ಯಾರ್ಥಿನಿಯರು ಇಷ್ಟು ವರ್ಷ ಯಾಕೆ ಸುಮ್ಮನಿದ್ದರು ? ಎಂಬ ಪ್ರಶ್ನೆಗೆ ಉತ್ತರ "ಆರ್ ಎಸ್ ಎಸ್ ನ ವನವಾಸಿ ಕಲ್ಯಾಣ ಯೋಜನೆ ಮತ್ತು ಮಕ್ಕಳ ಕಳ್ಳ ಸಾಗಾಣೆಯ ಯೋಜನೆ...!"


ಚಿತ್ರ: ಸೈಕೋ ಮಂಜಪ್ಪ

ಸೈಕೋ ಮಂಜಪ್ಪನ ಶಾಲೆಗೆ ಅಸ್ಸಾಂ, ನಾಗಾಲ್ಯಾಂಡ್ ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯರು ಹೇಗೆ ಬಂದು ಸೇರಿಕೊಂಡರು ? ಅವರ ಪೋಷಕರೇ ಬಂದು ಸೇರಿಸಿದರೇ ? ವಾಸ್ತವವಾಗಿ ಈ ವಿದ್ಯಾರ್ಥಿನಿಯರ ಪೋಷಕರಿಗೆ ತಮ್ಮ ಮಕ್ಕಳು ಸೈಕೋ ಮಂಜಪ್ಪನ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂಬುದು ಇನ್ನೂ ಗೊತ್ತಿಲ್ಲ. ಅಸ್ಸಾಂ, ನಾಗಾಲ್ಯಾಂಡಿನ ಈ ಬಡ ಬುಡಕಟ್ಟು ವಿದ್ಯಾರ್ಥಿನಿಯರು ಕರೆದು ತಂದು ಬಿಟ್ಟಿದ್ದು ಆರ್ ಎಸ್ ಎಸ್..!

ನಾನು ಮಂಗಳೂರು ಜಿಲ್ಲಾ ವರದಿಗಾರನಾಗಿದ್ದ ಸಂದರ್ಭದಲ್ಲಿ ಚೈಲ್ಡ್ ಲೈನ್ ಜೊತೆಗೂಡಿ ಆರ್ ಎಸ್ ಎಸ್ ನ ಈ ಮಕ್ಕಳ ಕಳ್ಳಸಾಗಾಣಿಕೆಯನ್ನು ಬಯಲು ಮಾಡಲು ಪ್ರಯತ್ನ ಪಟ್ಟಿದ್ದೆ. ಮಂಗಳೂರಿನಲ್ಲೂ ಹಲವು ಹಿಂದುತ್ವವಾದಿಗಳ ದೊಡ್ಡ ಕಂಪೌಂಡಿನ ನಿಗೂಢ ಶಾಲೆಗಳಲ್ಲಿ ಅಸ್ಸಾಂ, ನಾಗಾಲ್ಯಾಂಡಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದಾರೆ.‌ ಅಲ್ಲಿ ಅವರಿಗೆ ಹಿಂದೂ ಸಂಪ್ರದಾಯ, ಸಂಸ್ಕಾರಗಳನ್ನು ಕಲಿಸುವ ನೆಪದಲ್ಲಿ ಬಂಧನದಲ್ಲಿ ಇಡಲಾಗಿದೆ. ಅದರದ್ದೇ ಒಂದು ಭಾಗ ಸೈಕೋ ಮಂಜಪ್ಪ.

ಈ ರೀತಿ ಹಿಂದುತ್ವವಾದಿಗಳ ಕಳ್ಳ ಸಾಗಾಣೆಗೆ ಒಳಗಾಗಿರುವ ಬಾಲಕಿಯರು ಹೆಚ್ಚಾಗಿರುವ ಅಸ್ಸಾಂನ ಐದು ಗಡಿ ಜಿಲ್ಲೆಗಳಾದ ಕೊಕ್ರಜಾರ್, ಗೋಲ್ಪಾರಾ, ಧುಬ್ರಿ, ಚಿರಾಂಗ್ ಮತ್ತು ಬೊಂಗೈಗಾಂವ್‌ಗೆ ಸೇರಿದವರು. ಇದರಲ್ಲಿ ಹೆಚ್ಚಿನ ಹುಡುಗಿಯರು ಬೋಡೋ ಮತ್ತು ಸಂತಾಲ್ ಸಮುದಾಯಕ್ಕೆ ಸೇರಿದವರು. ಮತ್ತು 2-3 ವರ್ಷಗಳ ಉಚಿತ ವಿದ್ಯಾಬ್ಯಾಸದ ನಂತರ ಹುಡುಗಿಯರು ಮನೆಗೆ ಹಿಂತಿರುಗುತ್ತಾರೆ ಎಂದು ಕುಟುಂಬಗಳಿಗೆ ಭರವಸೆ ನೀಡಲಾಗುತ್ತದೆ.

ಆರ್ ಎಸ್ ಎಸ್ ನ ವನವಾಸಿ ಕಲ್ಯಾಣ ಯೋಜನೆಯ ಮೂಲಕ ಈ ಕಾರ್ಯಾಚರಣೆ ಮಾಡಲಾಗುತ್ತದೆ. ಮೊದಲು ಬುಡಕಟ್ಟು ಗ್ರಾಮವನ್ನು ಗುರಿಯಾಗಿರಿಸಿ ಆರ್ ಎಸ್ ಎಸ್ ಪ್ರಚಾರಕರು ಕೆಲಸ ಮಾಡುತ್ತಾರೆ. ನಂತರ ಇಡೀ ಊರಿನ ವಿಶ್ವಾಸಗಳಿಸಿಕೊಂಡು ಅಲ್ಲಿಂದ ಯುವತಿಯರನ್ನು ಕರ್ನಾಟಕ ಸೇರಿದಂತೆ ದಕ್ಷಿಣಭಾರತಕ್ಕೆ ರವಾನೆ ಮಾಡುತ್ತಾರೆ. ಈ ಸಾಗಾಣೆಯ ಜವಾಬ್ದಾರಿಯನ್ನು ರಾಷ್ಟ್ರ ಸೇವಿಕಾ ಸಮಿತಿ ನಿರ್ವಹಿಸುತ್ತದೆ. ಹಾಗೆ ಸಾಗಣೆಯಾದ ಮಕ್ಕಳು ಎಲ್ಲಿರುತ್ತಾರೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ.

ಹಾಗಾದರೆ ಬುಡಕಟ್ಟು ನಿವಾಸಿಗಳಿಗೆ ಉಚಿತ ಶಿಕ್ಷಣ ನೀಡುವ ಆರ್ ಎಸ್ ಎಸ್ ಯೋಜ‌ನೆಯೇ ತಪ್ಪೇ ? ಮಕ್ಕಳ ಹಕ್ಕುಗಳು ಮತ್ತು ರಕ್ಷಣೆಗಾಗಿ ಇರುವ ಕಾನೂನನ್ನು ಉಲ್ಲಂಘಿಸುವ ಎಲ್ಲಾ ಕೃತ್ಯಗಳು ಯಾವ ಉದ್ದೇಶ ಹೊಂದಿದ್ದರೂ ಅಪರಾಧವಾಗುತ್ತದೆ. ಈ ರೀತಿ ಮಕ್ಕಳು ತಂಗಿರುವ ಹಾಸ್ಟೆಲ್ ಅಥವಾ ಸಂಸ್ಥೆಯು ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾಗಬೇಕು. ಅಂತಹ ನೋಂದಣಿಯಾಗದ ಸಂಸ್ಥೆಯಲ್ಲಿ ಮಕ್ಕಳನ್ನು ಇರಿಸುವುದು ಕಾನೂನುಬಾಹಿರವಾಗಿದೆ.

ಈ ಕಾರಣಕ್ಕಾಗಿಯೇ ಆರ್ ಎಸ್ ಎಸ್ ನ ಈ ಕೃತ್ಯದ ಬಗ್ಗೆ 16 ಜೂನ್ 2015 ರಂದು, ಅಸ್ಸಾಂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ASCPCR) ಅಸ್ಸಾಂ ಪೊಲೀಸರಿಗೆ ಪತ್ರ ಬರೆದು, ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಆಯೋಗವು ಈ ಘಟನೆಯನ್ನು 'ಬಾಲಾಪರಾಧ ನ್ಯಾಯ ಕಾಯಿದೆ 2000 ರ ನಿಬಂಧನೆಗೆ ವಿರುದ್ದ' ಎಂದು ಕರೆದು, ಇದು "ಮಕ್ಕಳ ಕಳ್ಳಸಾಗಣೆ" ಎಂದು ತೀರ್ಮಾನಿಸಿದೆ. ಅದಾಗಲೇ ಈ ವಿಷಯ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ತಲುಪಿದ್ದಾರೂ ರಾಜಕೀಯ ಹಿತಾಸಕ್ತಿಯ ಕಾರಣಕ್ಕಾಗಿ ಆಯೋಗ ತನ್ನ ಕರ್ತವ್ಯ ನಿರ್ವಹಿಸಲಿಲ್ಲ.

ಸೈಕೋ ಮಂಜಪ್ಪನ ವನಶ್ರೀ ಶಾಲೆ ಮಾತ್ರವಲ್ಲ, ಕರ್ನಾಟಕ ಹಲವಾರು ಬಲಪಂಥೀಯ ಶಿಕ್ಷಣ ಸಂಸ್ಥೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದ ಈ ರೀತಿಯ ನೂರಾರು ಈಶಾನ್ಯ ರಾಜ್ಯದ ವಿದ್ಯಾರ್ಥಿನಿಯರಿದ್ದಾರೆ. ಈ ಹೆಣ್ಣು ಮಕ್ಕಳ ವಾಸ್ತವ್ಯವನ್ನು ಅಧಿಕೃತ ಗೊಳಿಸಲು, ಅವರನ್ನು ಗುರುತು ಪತ್ತೆ ಹಚ್ಚಿ ಕಾನೂನಿನ ವ್ಯಾಪ್ತಿಯಲ್ಲಿ ತರಲು ಹಿಂದೊಮ್ಮೆ ಚೈಲ್ಡ್ ಲೈನ್ ಪ್ರಯತ್ನ ಪಟ್ಟಿತ್ತು. ನಾನೂ ಅದಕ್ಕಾಗಿ ಸಣ್ಣಮಟ್ಟಿಗಿನ ಕೆಲಸ ಮಾಡಿದ್ದೆ. ಈಗ ಮತ್ತೊಮ್ಮೆ ಚೈಲ್ಡ್ ಲೈನ್, ಮಕ್ಕಳ ಕಲ್ಯಾಣ ಸಮಿತಿಗಳು, ರಾಜ್ಯ ಮಕ್ಕಳ ಹಕ್ಕು ಆಯೋಗ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರ್ ಎಸ್ ಎಸ್ ನಿಂದ ಕಳ್ಳಸಾಗಾಣೆಗೆ ಒಳಗಾಗಿರುವ ವಿದ್ಯಾರ್ಥಿನಿಯರ ಗಣತಿ ಮತ್ತು ನಿಯಮಬದ್ಧ ದಾಖಲೆಗಳನ್ನು ತಯಾರಿಸಬೇಕಿದೆ. ಇಲ್ಲವಾದರೆ ಹೇಳುವವರು ಕೇಳುವವರು ಇಲ್ಲದ ಈ ಬಡ ಮುಗ್ದ ಮಕ್ಕಳನ್ನು ಆರ್ ಎಸ್ ಎಸ್ ನ ಸೈಕೋ ಮಂಜಪ್ಪನಂತವರು ಹುರಿದು ಮುಕ್ಕುತ್ತಾರೆ.

ತೇಜಸ್ವಿನಿ ಸಾವು- ಮನುಷ್ಯನಲ್ಲ ಈ ಮಂಜಪ್ಪನೆಂಬ ಸಂಘಿ!

ಈ ಕುರಿತು ಮತ್ತೊಬ್ಬ ಲೇಖಕರು, ಹಿರಿಯ ಪತ್ರಕರ್ತರು, ಸಾಮಾಜಿಕ ಚಿಂತಕರು ಹಾಗೂ ಜನಪರ ಬರಹಗಾರರಾದ ದಿನೇಶ್ ಕುಮಾರ್ ಎಸ್.ಸಿ ಯವರ ಕುತೂಹಲಕಾರಿ ಲೇಖನ :

ಈ ಮಂಜಪ್ಪ ಅರೆಸ್ಟ್ ಆಗಿರೋದು ತೇಜಸ್ವಿನಿ ಸಾವಿನ ಪ್ರಕರಣದಲ್ಲಲ್ಲ. ಅವನ ಮೇಲೆ ಇನ್ನಿಬ್ಬರು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಕೇಸು (ಪೋಕ್ಸೋ) ದಾಖಲಿಸಿದ್ದಾರೆ. ಆ ಹುಡುಗಿಯರಿಗೆ ಇವನ ಮೇಲೆ ಎಷ್ಟು ಸಿಟ್ಟಿತ್ತೆಂದರೆ ಪೊಲೀಸರ ಎದುರೇ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಈ ಹುಡುಗಿಯರ ಧೈರ್ಯ ಮೆಚ್ಚಬೇಕು.

90ರ ದಶಕದಿಂದಲೂ ಈ ಸೈಕೋ ಮಂಜಪ್ಪ ಶಾಲೆ ನಡೆಸುತ್ತಿದ್ದಾನೆ. ಬಹುತೇಕ ವಿದ್ಯಾರ್ಥಿಗಳನ್ನು ನಾಗಾಲ್ಯಾಂಡ್, ಮೇಘಾಲಯ ಮತ್ತಿತರ ಈಶಾನ್ಯ ರಾಜ್ಯಗಳಿಂದ ಕರೆ ತರುತ್ತಾನೆ. ಎಲ್ಲ ಬುಡಕಟ್ಟು ಸಮುದಾಯಗಳ ಬಡಮಕ್ಕಳು. ಮಕ್ಕಳನ್ನು ಸಾಕಲಾಗದೆ ಪೋಷಕರು ಇಂಥ ಸಂಸ್ಥೆಗಳಿಗೆ ಸೇರಿಸಿಬಿಡುತ್ತಾರೆ. ಈ ಇಪ್ಪತ್ತು ವರ್ಷಗಳಲ್ಲಿ ಮಂಜಪ್ಪನ ಕ್ರೌರ್ಯಕ್ಕೆ ಎಷ್ಟು ಮಕ್ಕಳು ನಲುಗಿಹೋಗಿದ್ದಾವೋ ಯಾರು ಬಲ್ಲರು?

ಮಂಜಪ್ಪ ಕೆಲ ವಿದ್ಯಾರ್ಥಿಗಳಿಗೆ ಹಿಂದೆಲ್ಲ ಪೊಲೀಸರು ಕೊಡುತ್ತಿದ್ದ ಥರ್ಡ್ ಡಿಗ್ರೀ ಶಿಕ್ಷೆಗಳನ್ನು ಕೊಡುತ್ತಿದ್ದನಂತೆ. ಕೇಳುವವರು ಯಾರು ಹೇಳಿ? ಎಲ್ಲ ಬಡಪಾಯಿ ಮಕ್ಕಳು. ಅವುಗಳಿಗೂ ಧ್ವನಿ ಇಲ್ಲ, ಅವುಗಳ ಪೋಷಕರಿಗೂ ಧ್ವನಿ ಇಲ್ಲ.

ಮಂಜಪ್ಪ ತಾನೊಬ್ಬ ದೊಡ್ಡ ಯೋಗಪಟು ಎಂದು ಹೇಳಿಕೊಳ್ಳುತ್ತಿದ್ದ, ಅದನ್ನೇ ಬಂಡವಾಳ ಮಾಡಿಕೊಂಡಿದ್ದ. ಇವನ ಶಾಲೆಗೆ ಬಾಬಾ ರಾಮದೇವ್, ರವಿಶಂಕರ ಕೂಡ ಬಂದಿದ್ದರಂತೆ. ಮಕ್ಕಳಿಗೆ ಯೋಗದ ಹೆಸರಲ್ಲಿ ಈತ ಥರೇವಾರಿ ಟಾರ್ಚರ್ ಕೊಡುತ್ತಿದ್ದ. ಖಾಯಿಲೆ ಬಿದ್ದ ಮಕ್ಕಳಿಗೆ ತನ್ನದೇ ಕ್ರೂಡ್ ಮೆಥೆಡ್ ಗಳಲ್ಲಿ ಚಿಕಿತ್ಸೆ ನೀಡುತ್ತಿದ್ದ.

ಯೋಗ, ವ್ಯಾಯಾಮಗಳನ್ನು ಆರಂಭಿಸುವ ಮುನ್ನ ಎಚ್ಚರಿಕೆ ವಹಿಸಬೇಕಾಗುತ್ತದೆ. ಎಲ್ಲ ಆಸನ, ವ್ಯಾಯಾಮಗಳನ್ನು ಒಂದೇ ಬಾರಿ, ಆರಂಭದಲ್ಲೇ ಮಾಡಲು ಆಗುವುದಿಲ್ಲ. ಬಡಪಾಯಿ ತೇಜಸ್ವಿನಿ ಶಾಲೆ ಸೇರಿದ ಕೂಡಲೇ ಇವನ ಟಾರ್ಚರ್ ಶುರುವಾಗಿದೆ. ಎಲ್ಲಿ ಏಟಾಯಿತೋ ಏನೋ? ನೋವಿಗೆ ಒದ್ದಾಡಿದೆ ಜೀವ. ತಕ್ಷಣ ಪ್ರಾಥಮಿಕ ಚಿಕಿತ್ಸೆ ಸಿಕ್ಕಿದ್ದರೆ ಸಾಕಿತ್ತು. ಆದರೆ ಮಂಜಪ್ಪನೇ ಚಿಕಿತ್ಸೆಗೆ ನಿಂತಿದ್ದಾನೆ. ಮತ್ತದೇ ಕ್ರೂಡ್ ವಿಧಾನಗಳು. ಗಾಯಕ್ಕೆ ತಾನೇ ಯಾವುದೋ ಔಷಧ ಹಚ್ಚಿದ್ದಾನೆ. ಇದರ ಜೊತೆಗೆ ಬಕೆಟ್ ಗಟ್ಟಲೆ ನೀರು ಕುಡಿಸುವ ಭೀಕರ ಕ್ರೌರ್ಯ. ಹಿಂಸೆ ತಾಳಲಾಗದೆ ನೀಗಿಕೊಂಡಿದೆ ಜೀವ. ಈ ನಡುವೆ ಆ ಹುಡುಗಿಯನ್ನು ಇನ್ಯಾವುದಾದರೂ ರೀತಿಯಲ್ಲಿ ಬಳಸಿಕೊಳ್ಳಲು ಮಂಜಪ್ಪ ಪ್ರಯತ್ನಿಸಿದ್ದನಾ? ಪೊಲೀಸ್ ತನಿಖೆ ಮತ್ತು ಮರಣೋತ್ತರ ವರದಿಯಿಂದ ಗೊತ್ತಾಗಬೇಕಿದೆ.

ಮೊನ್ನೆ ಈ ವಿಷಯ ನಮ್ಮ "ಪೀಪಲ್ ತಂಡ"ಕ್ಕೆ ತಿಳಿಯುತ್ತಿದ್ದಂತೆ ನಾವೆಲ್ಲ ಅಕ್ಷರಶಃ ನಡುಗಿಹೋದೆವು. ಪೊಲೀಸರು ಮೊದಲು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಆಮೇಲೆ ಪ್ರಕರಣದ ತನಿಖೆ ಎಲ್ಲ ಆಯಾಮಗಳಲ್ಲಿ ಆರಂಭವಾಯಿತು.

ಮಂಜಪ್ಪ ಹೇಳಿ ಕೇಳಿ ಆರ್ ಎಸ್ ಎಸ್ ಮನುಷ್ಯ. ಪ್ರಭಾವಿ ಕೂಡ ಹೌದು. ಪ್ರಕರಣವನ್ನು ಮುಚ್ಚಿಹಾಕಿಬಿಡಬಹುದಾದ, ಸಾಕ್ಷ್ಯ ನಾಶ ಮಾಡಬಹುದಾದ, ಬಾಲಕಿಯರನ್ನು ಬೆದರಿಸಿ ತನಗೆ ಬೇಕಾದಂತೆ ಹೇಳಿಸಬಹುದಾದ ಸಾಧ್ಯತೆ ಇತ್ತು. ಆದರೆ ಸಾಮಾಜಿಕ ಕಾರ್ಯಕರ್ತರ ಪ್ರವೇಶ, ಪೀಪಲ್ ಮೀಡಿಯಾ/ Peepal Tv ಸರಣಿ ತನಿಖಾವರದಿಗಳು, ಬಾಲಕಿಯರ ಧೈರ್ಯದ ಹೇಳಿಕೆಗಳಿಂದ ಈಗ ಪರಿಸ್ಥಿತಿ ಬದಲಾಗಿದೆ. ನೀಚ ಮಂಜಪ್ಪ ಜೈಲು ಪಾಲಾಗಿದ್ದಾನೆ.

ಸರ್ಕಾರ, ಜಿಲ್ಲಾಡಳಿತ ಈಗ ವನಶ್ರೀ ಶಾಲೆಯ ಮಕ್ಕಳಿಗೆ ರಕ್ಷಣೆ ನೀಡಬೇಕು. ಆ ಶಾಲೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಅಥವಾ ಸರ್ಕಾರದ ವಸತಿ ಶಾಲೆಗಳಿಗೆ ಸೇರಿಸಿ ಅವರ ಭವಿಷ್ಯದ ರಕ್ಷಣೆ ಮಾಡಬೇಕು. ಪೋಷಕರು ಇಂಥ ಶಾಲೆಗಳಿಗೆ ಸೇರಿಸುವ ಮುನ್ನ ನೂರು ಬಾರಿ ಯೋಚನೆ ಮಾಡಬೇಕು.

ಈ ಪ್ರಕರಣವನ್ನು ಬಯಲಿಗೆಳೆಯುತ್ತಿದ್ದಂತೆ, ನೀವೆಲ್ಲ ವಿದ್ಯಾರ್ಥಿನಿಗೆ ನ್ಯಾಯ ದೊರೆಯಬೇಕೆಂದು ಆಗ್ರಹವನ್ನು ವ್ಯಕ್ತಪಡಿಸಿದಿರಿ. ನಿಜ, ದೊಡ್ಡದೊಡ್ಡವರು ಮಾತಾಡಲಿಲ್ಲ, ದೊಡ್ಡ ಮೀಡಿಯಾಗಳೂ ಮಾತಾಡಲಿಲ್ಲ. ಆದರೆ ನಿಮ್ಮೆಲ್ಲರ ಒತ್ತಡದಿಂದಲೇ ಪ್ರಕರಣ ಮುಚ್ಚಿಹೋಗುವುದು ತಪ್ಪಿದಂತಾಗಿದೆ. ಎಲ್ಲರಿಗೂ ಪ್ರೀತಿಯ ಕೃತಜ್ಞತೆಗಳು.

Advertisement
Advertisement
Recent Posts
Advertisement