Advertisement

ಯುಟಿ ಖಾದರ್ ತಪ್ಪು ನಡೆಯ ಕುರಿತು ಬುದ್ದಿಜೀವಿಗಳ ವಲಯದಲ್ಲಿ ಆಕ್ರೋಶ!

Advertisement

ಇದೀಗ ಅಸ್ತಿತ್ವಕ್ಕೆ ಬಂದಿರುವ 16ನೇ ವಿಧಾನಸಭೆಗೆ ಪ್ರಪ್ರಥಮ ಬಾರಿಗೆ ಆಯ್ಕೆಯಾಗಿರುವ ಸುಮಾರು 70ಕ್ಕೂ ಹೆಚ್ಚು ಮಂದಿ ಶಾಸಕರಿಗೆ ಮೂರು ದಿನಗಳ ಕಾಲ ತರಬೇತಿ ಶಿಬಿರ ಏರ್ಪಡಿಸಲಾಗಿದ್ದು ಇದರಲ್ಲಿ ಆರ್ಟ್ ಆಪ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕ ರವಿಶಂಕರ್ ಗುರೂಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಜಮಾತ್ ಎ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞ, ಡಾ. ಗುರುರಾಜ ಕರ್ಜಗಿ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅವರು ಪ್ರಕಟಿಸಿರುವ ಕುರಿತು ಅದರಲ್ಲಿ ಹೆಸರಿಸಲ್ಪಟ್ಟಿರುವ 'ಕೆಲವು ವ್ಯಕ್ತಿಗಳ' ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಯು.ಟಿ.ಖಾದರ್ ಅವರು ಅನುಸರಿಸುತ್ತಿರುವ
ತಪ್ಪುದಾರಿ: ವಸಂತ ಬನ್ನಾಡಿ

ಇದೀಗ ಕಾಂಗ್ರೆಸ್ ಸರಕಾರ ಬಂದಿದೆ. ಕೆಲವು ಒಳ್ಳೆಯ ನಿರ್ಧಾರಗಳನ್ನೂ ಈ ಸರಕಾರ ತೆಗೆದುಕೊಂಡಿದೆ. ಅಂದ ಕೂಡಲೇ ಎಲ್ಲವೂ ಸರಿ ಹೋಯಿತು ಎಂದರ್ಥವಲ್ಲ. ಈ ಸರಕಾರ ಮಾಡುವ ತಪ್ಪುಗಳನ್ನು ಅಲ್ಲಲ್ಲೇ ಖಂಡಿಸುತ್ತಲೂ ಇರಬೇಕಾಗುತ್ತದೆ.

ಅಂತಹ ಒಂದು ಅನರ್ಥವನ್ನು ಕಾಂಗ್ರೆಸ್ಸಿನ ಯು.ಟಿ. ಖಾದರ್ ಅವರು ಮಾಡಿರುವುದು ಕಣ್ಣಿಗೆ ಹೊಡೆಯುವಂತಿದೆ. ಕಾಂಗ್ರೆಸ್ಸಿನ ಹೊಸ ಶಾಸಕರಿಗೆ ವಿಧಾನಸಭೆಯಲ್ಲಿ ತಮ್ಮ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಮೂರು ದಿನಗಳ ಕಾರ್ಯಾಗಾರವನ್ನು ಅವರು ಹಮ್ಮಿಕೊಂಡಿದ್ದಾರೆ. ಇದರಲ್ಲಿ ಯಾವ ತಪ್ಪೂ ಇಲ್ಲ.

ಆದರೆ ಕಾರ್ಯಕ್ರಮದ ನಡುವೆ ನೀತಿ ಬೋಧನೆ ಮಾಡಲು ಯು.ಟಿ ಖಾದರ್ ಅವರು ಕರೆಸಿರುವ ವ್ಯಕ್ತಿಗಳನ್ನು ನೋಡಿದರೆ ಆಶ್ಚರ್ಯವೆನಿಸುತ್ತದೆ.ಈ ಪಟ್ಟಿಯಲ್ಲಿ ರವಿಶಂಕರ್, ಕರ್ಜಗಿ, ವೀರೇಂದ್ರ ಹೆಗಡೆ ಮುಂತಾದವರು ಇದ್ದಾರೆ. ಇಂತಹ ಒತ್ತಡ ಕಾಂಗ್ರೆಸ್ ಗೆ ಏಕೆ ಬಂತು? ಇದರಿಂದ ಅವರು ಸಾಧಿಸುವುದಾದರೂ ಏನು? ಇಲ್ಲಿನ ಸಾಂಸ್ಕೃತಿಕ ವಾತಾವರಣದ ಬಗ್ಗೆ ಮತ್ತು ಹಿಂದುತ್ವದ ಅಪಾಯಗಳ ಬಗ್ಗೆ ಯು.ಟಿ ಖಾದರ್ ಅಂಥವರಿಗೆ ಕನಿಷ್ಠ ತಿಳುವಳಿಕೆಯೂ ಇಲ್ಲವೇ?

ಇಂತಹ ವಿಚಾರಗಳಲ್ಲಿ ಕಾಂಗ್ರೆಸ್ ನೇತಾರರು ಸ್ಪಷ್ಟತೆ ಹೊಂದದೇ ಹೋದರೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಮತ್ತೆ ಅಪಾಯಗಳನ್ನು ಎದುರಿಸಬೇಕಾಗಿ ಬರುತ್ತದೆ.ಬಿಜೆಪಿ ಸರಕಾರ ಇದ್ದಾಗ ಮೇಲೆ ಸೂಚಿಸಿದವರು ಹೇಗೆ ನಡೆದುಕೊಂಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಇದನ್ನು ನೋಡಬೇಕು. ಇಂಥ ವಿಷಯದಲ್ಲಿ ಕಾಂಗ್ರೆಸ್ ನ ಕೆಲವರು ನಡೆದುಕೊಳ್ಳುತ್ತಿರುವ ರೀತಿ ನಿಜಕ್ಕೂ ವಿಚಿತ್ರವಾಗಿದೆ.

ಕಾರ್ಯಾಗಾರ ನಡೆಯುವುದು ಒಳ್ಳೆಯದು.ಆದರೆ ಧಾರ್ಮಿಕ ಹಿನ್ನೆಲೆಯ ಮತ್ತು ಸಂಘಿ ಮನಸ್ಥಿತಿಯ ಯಾವುದೇ ವ್ಯಕ್ತಿಗಳಿಂದ ದಾರಿ ತಪ್ಪಿಸುವಂತಹ ನೀತಿ ಪಾಠಗಳನ್ನು ಮಾಡಿಸುವ ಅಗತ್ಯವೇ ಇರುವುದಿಲ್ಲ. ಈ ತಪ್ಪನ್ನು ಸಂಬಂಧ ಪಟ್ಟವರು ಕೂಡಲೇ ತಿದ್ದಿಕೊಳ್ಳಲಿ ಎಂದು ಒತ್ತಾಯಿಸುತ್ತಿದ್ದೇನೆ ಎಂದು ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಕವಿ, ಹಿರಿಯ ರಂಗ ನಿರ್ದೇಶಕ ವಸಂತ ಬನ್ನಾಡಿ ಹೇಳಿದ್ದಾರೆ.

ಎಲ್ಲರಿಂದಲೂ ಒಳ್ಳೆಯವರೆನ್ನಿಸಿಕೊಳ್ಳುವ ಕನಸು ಏಕೆ: ಸನತ್ ಕುಮಾರ ಬೆಳಗಲಿ.

ಹೊಸದಾಗಿ ಚುನಾಯಿತರಾಗಿ ಬಂದ ಶಾಸಕರಿಗೆ ಪಾಠ ಮಾಡಲು ,ನ್ಯಾಯಮೂರ್ತಿ ನಾಗಮೋಹನ ದಾಸ, ಗೋಪಾಲಗೌಡ, ರವಿವರ್ಮಕುಮಾರ, ಸಿ.ಎಸ್ ದ್ವಾರಕಾನಾಥ, ರಮೇಶ ಕುಮಾರ. ಮುಂತಾದ ನುರಿತ ಸಂವಿಧಾನ ತಜ್ಞರು, ಕಾನೂನು ಪರಿಣಿತರು, ಹಿರಿಯ ಹಾಲಿ ಮತ್ತು ಮಾಜಿ, ಸ್ಪೀಕರ್ ಗಳು, ಶಾಸಕರು ,ಅನುಭವಿ ಪತ್ರಕರ್ತರನ್ನು ಆಹ್ವಾನಿಸಿ ಉಪನ್ಯಾಸ ನೀಡಿಸಬೇಕು. ಆದರೆ ಸ್ಪೀಕರ್ ಖಾದರ್ ಸಾಹೇಬರು ಅದನ್ನು ಬಿಟ್ಟು ಆಧ್ಯಾತ್ಮವನ್ನು ದುಡ್ಡು ಮಾಡಿಕೊಳ್ಳುವ ದಂಧೆಯನ್ನಾಗಿ ಮಾಡಿಕೊಂಡವರ , ಕೋಮುವಾದಿ ಸಂಘಟನೆಗಳ ಜೊತೆ ಗುರುತಿಸಿಕೊಂಡವರಿಂದ ನೂತನ ಶಾಸಕರಿಗೆ ಪ್ರವಚನ ಮಾಡಿಸಲು ಹೊರಟಿದ್ದಾರೆ‌.ಇದರ ಅಗತ್ಯವಿಲ್ಲ‌‌. ಸ್ಪೀಕರ್ ಖಾದರ್ ಸಾಹೇಬರು ಮೈ ಮರೆಯದಿರಲಿ. ಎಲ್ಲರಿಗೂ ಒಳ್ಳೆಯವರಾಗಲು ಹೋಗಿ ನಿಮ್ಮ ಕಾಲ ಮೇಲೆ ನೀವೇ ಕಲ್ಲು ಹಾಕಿಕೊಳ್ಳಬೇಡಿ.. ಯಾರದೋ ಮಾತನ್ನು ಕೇಳಿ ಜನ ಆಡಿಕೊಳ್ಳುವಂತೆ ಮಾಡಬೇಡಿ.ಶಾಸಕರಿಗೆ ಧಾರ್ಮಿಕ ಗುರುಗಳ ಪಾಠ ಸಂವಿಧಾನಕ್ಕೆ ಅಪಚಾರ ಎಂದು ಹಿರಿಯ ಪತ್ರಕರ್ತ, ಜನಪರ ಚಿಂತಕ ಸನತ್ ಕುಮಾರ್ ಬೆಳಗಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಮುವಾದಿ ಸರ್ಕಾರದ ವಿರುದ್ದ ಸೆಣೆಸಿದ್ದ ಮಹನೀಯರು ಹಿಮಾಲಯಕ್ಕೆ ತೆರಳುವುದು ಲೇಸು: ಮುನೀರ್ ಕಾಟಿಪಳ್ಳ

ಸ್ಪೀಕರ್ ಯು ಟಿ ಖಾದರ್ ನೂತನ ಶಾಸಕರಿಗೆ ಏರ್ಪಡಿಸಿರುವ ಶಿಬಿರದಲ್ಲಿ ಪ್ರೇರಣಾ ಉಪನ್ಯಾಸ ನೀಡಲು ವಿಶ್ವ ಹಿಂದೂಪರಿಷತ್ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಧರ್ಮಸ್ಥಳದ ಡಾ. ವಿರೇಂದ್ರ ಹೆಗ್ಡೆ, ಕಾರ್ಪೊರೇಟ್ ಆಧ್ಯಾತ್ಮದ ವ್ಯಾಪಾರಿ ರವಿಶಂಕರ್ ಗುರೂಜಿ, ಜಮಾತೆ ಇಸ್ಲಾಮಿ ಹಿಂದ್ ನ ಮುಹಮ್ಮದ್ ಕುಂಞ, ಬಲಪಂಥೀಯ ಬರಹಗಾರ ಗುರುರಾಜ ಕರ್ಜಗಿಯವರನ್ನು ಆಯ್ಕೆ ಮಾಡಿದ್ದಾರೆ.

ಕೋಮುವಾದಿ ಸರಕಾರವನ್ನು ಸೋಲಿಸಲು ನಿಸ್ವಾರ್ಥವಾಗಿ ನಿರಂತರ ಶ್ರಮಿಸಿದ ನಾಡಿನ ಖ್ಯಾತನಾಮ ಸಾಹಿತಿಗಳೂ, ಉಪನ್ಯಾಸಕರೂ, ಬರಹಗಾರರೂ ಆದಂತಹ ದೇವನೂರ ಮಹಾದೇವ, ರಹಮತ್ ತರೀಕೆರೆ, ಜಸ್ಟೀಸ್ ನಾಗಮೋಹನ ದಾಸ್, ಪುರುಷೋತ್ತಮ ಬಿಳಿಮಲೆ, ಡಾ. ವಿಜಯಮ್ಮ, ಬರಗೂರು ರಮಾಚಂದ್ರಪ್ಪ, ಬಂಜಗೆರೆ ಜಯಪ್ರಕಾಶ ಮತ್ತಿತರರು ಇನ್ನು ಹಿಮಾಲಯಕ್ಕೆ ಹೊರಡುವುದು ಲೇಸು. ಅವರ ಮಾತುಗಳು "ಸೆಕ್ಯುಲರ್" ಸರಕಾರದ ಸಂದರ್ಭದಲ್ಲೂ ಪ್ರೇರಣೆ ಪಡೆಯುವಂತದ್ದಲ್ಲ, ಅದರ ಅಗತ್ಯ ಕರ್ನಾಟಕದ ಶಾಸಕರುಗಳಿಗೆ ಇಲ್ಲ ಎಂದು ಗೌರವಾನ್ವಿತ ಸ್ಪೀಕರ್ ರೂಲಿಂಗ್ ನೀಡಿದಂತಾಗಿದೆ ಎಂದು ಸಾಮಾಜಿಕ ಹೋರಾಟಗಾರ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಇಂತಹ ಐಡಿಯಾ ಕೊಟ್ಟ ಅಯೋಗ್ಯರು ಯಾರು: ಹರ್ಷಕುಮಾರ್ ಖುಗ್ವೆ

ಇಂತಹ ಒಂದು ಐಡಿಯಾ ಕೊಟ್ಟ ಅಯೋಗ್ಯರು ಯಾರು? ಬರೀ ನೆಗೆಟಿವ್ ಎನರ್ಜಿ ತುಂಬಿಕೊಂಡಿರುವ ಮತ್ತು ಪಕ್ಕಾ ಕಾರ್ಪೊರೇಟ್ ಸಂಗಿ ಮನಸ್ತಿತಿಯ ಜನಗಳಿಂದ ಎಂತ ಪ್ರೇರಣೆ? ಒಬ್ಬ ಸೌಜನ್ಯಗೆ ನ್ಯಾಯ ಕೊಡಿಸಲಾಗದ ಅತ್ಯಂತ ದುರ್ಬಲ ಮನಸಿನ ವೀರೇಂದ್ರ ಹೆಗ್ಗಡೆ, ಸನಾತನಿ ರಿಯಲ್ ಎಸ್ಟೇಟ್ ಉಧ್ಯಮಿ ರವಿಶಂಕರ್, ಇತ್ತೀಚೆಗಷ್ಟೇ ಕಾಂಗ್ರೆಸ್ ಗ್ಯಾರಂಟಿಗಳನ್ನು ಅಪಹಾಸ್ಯ ಮಾಡಿರುವ ಗುರುರಾಜ ಕರ್ಜಗಿ ಇವರಿಂದ ಜನಪ್ರತಿನಿದಿಗಳು ಪಡೆದುಕೊಳ್ಳುವ ತರಬೇತಿ ಪ್ರೇರಣೆಯಾದರೂ ಏನು?
ಇದನ್ನು ಕೂಡಲೇ ಬದಲಿಸಬೇಕು... ಇಲ್ಲವಾದರೆ ಒಂದು ಕೆಟ್ಟ precedence ಗೆ ಕಾಂಗ್ರೆಸ್ ಸರ್ಕಾರವೇ ನಾಂದಿ ಹಾಡಿದಂತಾಗುತ್ತದೆ. ದಯವಿಟ್ಟು ಇಂತಹ ಅಸಹ್ಯ ಮಾಡಬೇಡಿ ಎಂದು ಪತ್ರಕರ್ತ ಹಾಗೂ ಜನಪರ ಬರಹಗಾರ ಹರ್ಷಕುಮಾರ ಖುಗ್ವೆಯವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Advertisement
Advertisement
Recent Posts
Advertisement