Advertisement

"ಬಿಟ್ಟಿಭಾಗ್ಯ" ಎಂಬ ಹೀಯಾಳಿಕೆ ಏಕೆ? ಶ್ರಮಿಕ ವರ್ಗಕ್ಕೂ "ಪೆನ್ಶನ್" ಕೊಡಿ!

Advertisement

ಸರಕಾರಿ ಶಾಲೆಗಳಲ್ಲಿ ಬಿಟ್ಟಿಯಾಗಿ ಓದಿ, ಉನ್ನತ ಉದ್ಯೋಗ ಪಡೆದು, ಎಸಿ ರೂಮಿನಲ್ಲಿ ಕುಳಿತು ಲಕ್ಷಗಟ್ಟಲೆ ಸಂಬಳ ಡ್ರಾ ಮಾಡಿಕೊಂಡೂ ಬಡವರಿಂದ ಲಂಚವನ್ನು ಪೀಕಿ, ತದನಂತರದಲ್ಲಿ ಉದ್ಯೋಗದಿಂದ ನಿವೃತ್ತಿಯಾದ ನಂತರವೂ ಪೆನ್ಶನ್ ಹೆಸರಲ್ಲಿ ಅದೇ ಸರಕಾರದ ಖಜಾನೆಯ ಹಣವನ್ನು ತಿಂದು ತೇಗುತ್ತಿರುವ ಸೋಮಾರಿ ಮಂದಿ ಮತ್ತವರ ಸಂತಾನಿಗಳು ಬಡ ಶ್ರಮಿಕ ವರ್ಗಕ್ಕೆ ನೀಡಲಾಗುವ ಸಿದ್ದರಾಮಯ್ಯ ಸರಕಾರದ ಜನಪರವಾದ ಗ್ಯಾರಂಟಿ ಯೋಜನೆಗಳನ್ನು "ಬಿಟ್ಟಿಭಾಗ್ಯ" ಎಂದು ಅದೇಕೆ ಹೀಯಾಳಿಸುತ್ತಿದ್ದಾರೆ?

ಶ್ರಮಿಕರಿಗೆ ನೀಡುವ ಸವಲತ್ತುಗಳು ಬಿಟ್ಟಿಭಾಗ್ಯಗಳಾದರೆ ಅದೇ ಆ "ಬಿಳಿಯಾನೆ"ಗಳಿಗೆ ನೀಡುವ ಪೆನ್ಶನ್ ಅದೇಕೆ ಬಿಟ್ಟಿಭಾಗ್ಯ ಅಲ್ಲ? ಈ ದೇಶಕ್ಕೆ ಆ ಬಿಳಿಯಾನೆಗಳ ಕೊಡುಗೆ ಏನು? ಶ್ರಮಿಕ ವರ್ಗದ ಜನರ ಜೀವಮಾನದ ಸಾಧನೆ ಈ ಸರಕಾರಿ ಅಧಿಕಾರಿಗಳ, ರಾಜಕಾರಣಿಗಳ ಜೀವಮಾನದ ಸಾಧನೆಗೆ ಏನು ಕಡಿಮೆ ಇದೆ? ಒಂದು ಆಯಾಮದಲ್ಲಿ ನೋಡುವುದಾದರೆ ಶ್ರಮಿಕ ವರ್ಗ ಒಂದು ವರ್ಷದಲ್ಲಿ ಸುರಿಸುವ ಬೆವರನ್ನು ಈ ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು ಇಡೀ ಜೀವಮಾನದಲ್ಲಿಯೂ ಕೂಡ ಸುರಿಸಲಾರರು ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.

ಇಷ್ಟಾಗಿಯೂ ಸಕಲ ಸವಲತ್ತುಗಳನ್ನು ಹೊಡೆದುಣ್ಣುವ ಸೋಮಾರಿಗಳ ವರ್ಗಕ್ಕೆ ಈ ಶ್ರಮಿಕ ವರ್ಗದ ಮೇಲೆ ಹೊಟ್ಟೆಕಿಚ್ಚು ಯಾಕೆ?

ನಮ್ಮ ಸರಕಾರಗಳು ನಿವೃತ್ತ ಅಧಿಕಾರಿ ವರ್ಗಕ್ಕೆ, ನಿವೃತ್ತ ರಾಜಕಾರಣಿಗಳಿಗೆ ನೀಡಿದಂತೆ ಶ್ರಮಿಕ ವರ್ಗದ ಜನರಿಗೂ ಅದೇಕೆ ಪೆನ್ಶನ್ ಯೋಜನೆಯನ್ನು ವಿಸ್ತರಿಸಬಾರದು? ಶ್ರಮಿಕ ವರ್ಗವೇನು ಗುಲಾಮಗಿರಿಯ ಬದುಕನ್ನೇ ಬದುಕಬೇಕೇ? ಜೀವಮಾನವಿಡೀ ಆಯಾಮ ದಿನದ ಹೊಟ್ಟೆಪಾಡಿಗಾಗಿ ಬೆವರು ಸುರಿಸಿ ದುಡಿದು ತಿನ್ನುವ ಶ್ರಮಿಕ ವರ್ಗ ವೃದ್ಧಾಪ್ಯದಲ್ಲಿ ಒಂದೊತ್ತಿನ ಊಟಕ್ಕಾಗಿ ಭಿಕ್ಷೆ ಬೇಡಿ ಬದುಕಬೇಕೇ? ಅದೇ ಶ್ರಮಿಕ ವರ್ಗವನ್ನು ಶೋಷಿಸಿ, ಅವರ ಬೆವರ ಸಂಪಾದನೆಯಲ್ಲಿ ತನ್ನ ನಾಲ್ಕು ತಲೆಮಾರಿಗಾಗುವಷ್ಟು ಸಂಪಾದಿಸುವ ಅದೇ ಮೈಗಳ್ಳ ಶ್ರೀಮಂತರ ಮನೆಯ ಮುಂದೆ ತಟ್ಟೆ ಹಿಡಿದು ನಿಲ್ಲಬೇಕೇ? ಇದ್ಯಾವ ಸಾಮಾಜಿಕ ನ್ಯಾಯ?

ಈ ಪ್ರಪಂಚದಲ್ಲಿ ನವ ನಾಗರಿಕತೆ ಆರಂಭಗೊಳ್ಳುವ ಮೊದಲು ಶತಶತಮಾನಗಳ ಕಾಲ ಈ ಯಾವ ಸರಕಾರಗಳೂ ಇಲ್ಲದೇ, ನಾನು ಮೇಲೆ ಉಲ್ಲೇಖಿಸಿದ ಅಧಿಕಾರಿ ವರ್ಗವೂ ಇಲ್ಲದೇ ಪ್ರಪಂಚ ನಡೆದಿರಲಿಲ್ಲವೇ? ಹಾಗೆಯೇ, ಆಗಲೂ ಈ ಪ್ರಪಂಚ ನಡೆದದ್ದು ಮತ್ತು ಈಗಲೂ ನಡೆಯುತ್ತಿರುವುದು ಈ ಶ್ರಮಿಕ ವರ್ಗದಿಂದ ಎಂಬುದನ್ನು ಅಲ್ಲಗೆಳೆಯಲು ಸಾಧ್ಯವಿದೆಯೇ? ಮುಂದುವರಿದು ಚರ್ಚಿಸುವುದಾದರೆ ಈ ದೇಶದ ಶ್ರೀಮಂತ ವರ್ಗದ ಬಳಿ ಇರುವ ಹಣ, ಆಸ್ತಿ, ಐಶ್ವರ್ಯ ತಲೆತಲಾಂತರದಿಂದ ಇದೇ ಶ್ರಮಿಕರನ್ನು ದಿನವಿಡೀ ದುಡಿಸಿ ಮೂರು ಕಾಸಿನ ಸಂಬಳ ಕೊಟ್ಟು ಶೋಷಿಸಿದ ಫಲವಲ್ಲವೇ?

ದೇಶದ ನೀತಿ ನಿರೂಪಕರ ಸ್ಥಾನದಲ್ಲಿ ಮುಂತಾದ ಆಯಕಟ್ಟಿನ ಸ್ಥಾನಗಳಲ್ಲಿ ಗೂಟ ಹೊಡೆದು ಕುಳಿತಿರುವ ಈ "ಕೂತುಣ್ಣುವ ಮಂದಿ" ಯ ಋಣ ಇರುವುದು ಶ್ರಮಿಕ ವರ್ಗದ ಮೇಲೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಶ್ರಮಿಕ ವರ್ಗದ ಜನರ ವೃದ್ಧಾಪ್ಯದ ಭದ್ರತೆಯನ್ನು ಒದಗಿಸಬೇಕಿರುವುದು ಆಳುವ ಸರಕಾರದ ಹೊಣೆಯಾಗಿದೆ. ಆ ಕಾರಣಕ್ಕಾಗಿ ಪೆನ್ಶನ್ (ನಿವೃತ್ತಿ ವೇತನ)ಯೋಜನೆಯನ್ನು ಶ್ರಮಿಕ ವರ್ಗಕ್ಕೂ ವಿಸ್ತರಿಸಬೇಕು. ಆ ಕುರಿತು ಚರ್ಚೆ ಮತ್ತು ಹೋರಾಟಗಳು ಆರಂಭಗೊಳ್ಳಬೇಕು. ಅದರಿಂದಷ್ಟೆ ಬುದ್ದ, ಬಸವಣ್ಣ, ಅಂಬೇಡ್ಕರ್, ಗಾಂಧಿ, ಪೆರಿಯಾರ್, ನಾರಾಯಣ ಗುರು ಮುಂತಾದ ದಾರ್ಶನಿಕರ ಸಾಮಾಜಿಕ ನ್ಯಾಯದ ಪರಿಕಲ್ಪನೆ ಈಡೇರಲು ಸಾಧ್ಯವಿದೆ.

Advertisement
Advertisement
Recent Posts
Advertisement