Advertisement

"ಸ್ವಾತಂತ್ರ್ಯದ ಆ ಕ್ಷಣಗಳು" : ಡಾ. ಉಮೇಶ್ ಪುತ್ರನ್ ರವರ ಲೇಖನ ಸರಣಿ: ಭಾಗ 1 ರಿಂದ 3.

Advertisement

ಡಾ. ಉಮೇಶ್ ಪುತ್ರನ್ ಎಂ.ಡಿ.
ಚಿನ್ಮಯಿ ಆಸ್ಪತ್ರೆ, ಕುಂದಾಪುರ. ಉಡುಪಿ ಜಿಲ್ಲೆ.
(“ಸ್ವಾತಂತ್ರ್ಯದ ಆ ಕ್ಷಣಗಳು” ಪುಸ್ತಕದಿಂದ)

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕುಕೇಂದ್ರದ ಹೃದಯಭಾಗದಲ್ಲಿರುವ ಚಿನ್ಮಯಿ ಆಸ್ಪತ್ರೆಯ ವೈಧ್ಯಕೀಯ ನಿರ್ದೇಶಕರಾದ ಲೇಖಕರು (ಡಾ. ಉಮೇಶ್ ಪುತ್ರನ್) ಇವರು ಪದವಿ ಪೂರ್ವ ವಿಧ್ಯಾಭ್ಯಾಸವನ್ನು ಗಂಗೊಳ್ಳಿಯ ಎಸ್.ವಿ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿ ವೈದ್ಯಕೀಯ ಶಿಕ್ಷಣವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಪೂರೈಸಿರುತ್ತಾರೆ. ಸಾಹಿತ್ಯಾಸಕ್ತರಾದ ಇವರು ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 1

ನೌಕಾಯಾನ ಸಾಹಸಿಗರು ಯುರೋಪಿಯನ್ನರು.

ಯುರೋಪ್ ದೇಶಗಳು ಮೊದಲಿನಿಂದಲೂ ನೌಕಾಯಾನ ಸಾಹಸಕ್ಕೆ ಹೆಸರುವಾಸಿಯಾಗಿದ್ದವು. ಇದರಲ್ಲಿ ಪ್ರಮುಖವಾಗಿ ಕೇಳಿ ಬರುವ ದೇಶಗಳು ಸ್ಪೇನ್ ಹಾಗೂ ಪೋರ್ಚುಗಲ್. ಸ್ಪೇನ್ ದೇಶವು ದಕ್ಷಿಣ ಅಮೆರಿಕವನ್ನು 1492 ರಲ್ಲಿ ಆಕ್ರಮಣ ಮಾಡಿ ಅಲ್ಲಿಯ ಅಜ್ಟೆಕ್ ಮತ್ತು ಇಂಕಾ ಸಾಮ್ರಾಜ್ಯಗಳ ಸಂಪತ್ತುಗಳನ್ನು ಸತತ 350 ವರ್ಷಗಳವರೆಗೆ ಕೊಳ್ಳೆ ಹೊಡೆಯಿತು. ದಕ್ಷಿಣ ಅಮೆರಿಕಾದಿಂದ ಸ್ಪೇನ್ ಕಡೆ ಬರುವ ಸಾವಿರಾರು ಹಡಗುಗಳನ್ನು ಸಮುದ್ರಗಳ್ಳರು ಕೊಳ್ಳೆ ಹೊಡೆಯುವ ದಂದೆ ಪ್ರಾರಂಭವಾಯಿತು. ಇದಕ್ಕೆ ಕೆರೆಬಿಯನ್ ಪೈರೇಟ್ಸ್ ಎನ್ನುವ ಹೆಸರು ಬಂತು.

ಈ ಸಂಪತ್ತುಗಳ ಮೇಲೆ ಇಂಗ್ಲೆಂಡ್ ದೇಶದ ಕಣ್ಣು ಕೂಡ ಬಿತ್ತು. ಇಂಗ್ಲೆಂಡಿನ ಮೊಟ್ಟಮೊದಲ ನಾವಿಕ ಫ್ರಾನ್ಸಿಸ್ ಡ್ರೇಕ್ ದಕ್ಷಿಣ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿ, ಚಿನ್ನ ಮತ್ತು ಬೆಳ್ಳಿ ಸಂಪತ್ತನ್ನು ಕೊಳ್ಳೆ ಹೊಡೆದ. ಅಲ್ಲಿಂದ ಪೆಸಿಫಿಕ್ ಸಾಗರವನ್ನು ದಾಟಿ ಇಂಡೋನೇಷಿಯಾವನ್ನು ತಲುಪಿದ. ಚಿನ್ನ ಮತ್ತು ಬೆಳ್ಳಿಗಳನ್ನು ನೀಡಿ ಅಲ್ಲಿಂದ ಹೇರಳವಾಗಿ ಲವಂಗ, ಜಾಯಿಕಾಯಿ, ಕಾಳುಮೆಣಸು ಮುಂತಾದುವುಗಳನ್ನು ಹಡಗಿನಲ್ಲಿ ಇಂಗ್ಲೆಂಡಿಗೆ ತಂದ. ಇಂಗ್ಲೆಂಡಿನಲ್ಲಿ ಜನರಿಗೆ ಇದೇನೆಂದು ಆಗ ತಿಳಿದಿರಲಿಲ್ಲ.

1588 ರಲ್ಲಿ ಸ್ಪೆಯಿನ್ ದೇಶವು ತನ್ನ 130 ಹಡಗುಗಳಿಂದ ಇಂಗ್ಲೆಂಡ್ ಮೇಲೆ ನೌಕಾ ಯುದ್ಧವನ್ನು ಕೈಗೊಂಡಿತು. ಇದರಲ್ಲಿ ಸ್ಪೇನ್ ಗೆ ಸೋಲಾಯಿತು. ಆಗ ಸೆರೆಹಿಡಿದ ಈ ಹಡಗುಗಳು ಇಂಗ್ಲೆಂಡ್ ದೇಶದ ಚರಿತ್ರೆಯನ್ನೇ ಬದಲಾಯಿಸಿದವು. ಕೆಲವು ಇಂಗ್ಲೆಂಡ್ ದೇಶದ ವರ್ತಕರು, ಒಂದನೇ ಕ್ವೀನ್ ಎಲಿಜಬೆತ್ ಗೆ ದೂರದ ಪೌರಾತ್ಯ ದೇಶಗಳೊಂದಿಗೆ ವ್ಯಾಪಾರವನ್ನು ಕೈಗೊಳ್ಳಲು ಅನುಮತಿ ನೀಡಬೇಕೆಂದು ಕೇಳಿಕೊಂಡರು.

1591ರ ಏಪ್ರಿಲ್ 10ರಂದು ಅನುಮತಿ ಸಿಕ್ಕ ನಂತರ ಇಂಗ್ಲೆಂಡಿನಿಂದ ಪೂರ್ವ ದೇಶಗಳಿಗೆ ಹೊರಟ ಮೊದಲ ನೌಕಾ ಸಾಹಸಿಗ ಜೇಮ್ಸ್ ಲ್ಯಾಂಕಾಸ್ಟರ್. ಈತ ತನ್ನ ಪ್ರಯಾಣವನ್ನು ಬೆಳೆಸುತ್ತಾ ಗುಡ್ ಹೋಪ್ ಭೂಶಿರ, ಕನ್ಯಾಕುಮಾರಿ ಮೂಲಕ ಮಲಯಾ ಪರ್ಯಾಯ ದ್ವೀಪವನ್ನು ತಲುಪಿದ. ಅಲ್ಲಿ ಈಗಾಗಲೇ ಬಂದಿದ್ದ ಸ್ಪೇನ್ ಹಾಗೂ ಪೋರ್ಚುಗಲ್ ನೌಕೆಗಳನ್ನು ಕೊಳ್ಳೆ ಹೊಡೆದ.

ಇಂಗ್ಲಿಷರಿಗೆ ಸಿಕ್ಕಿದ ಅತ್ಯಂತ ದೊಡ್ಡ ಯಶಸ್ಸು ಸರ್ ವಾಲ್ಟರ್ ರಾಲೈ ದಕ್ಷಿಣ ಪೋರ್ಚುಗಲ್ ತೀರದಲ್ಲಿ ಹೊಡೆದುರುಳಿಸಿದ "ಮಾಡ್ರೆ ಡಿ ಡಿಯಸ್" ಎನ್ನುವ ಬೃಹತ್ ನೌಕೆ. ಈ ಹಡಗು ಇಂಡೋನೇಷ್ಯಾ ಕಡೆಯಿಂದ ಹೇರಳವಾದ ಚಿನ್ನಾಭರಣಗಳು, ಮುತ್ತು, ಬೆಳ್ಳಿ ನಾಣ್ಯ, ಕಾಳುಮೆಣಸು, ಲವಂಗ, ದಾಲ್ಚಿನ್ನಿ, ಜಾಯಿಕಾಯಿ, ದುಬಾರಿಯಾದ ಬಟ್ಟೆ, ಕಲಾಕೃತಿಗಳನ್ನು ಹೊತ್ತು ತಂದಿತ್ತು. ಈ ನೌಕೆಯನ್ನು ಸರ್ ವಾಲ್ಟರ್ ಇಂಗ್ಲೆಂಡಿಗೆ ತಂದಾಗ ಇಷ್ಟೊಂದು ದೊಡ್ಡ ನೌಕೆಯನ್ನು ಇಂಗ್ಲೆಂಡಿನವರು ನೋಡಿಯೇ ಇರಲಿಲ್ಲ. ಅಷ್ಟು ಮಾತ್ರವಲ್ಲ, ಭಾರತ, ಚೀನಾ, ಜಪಾನ್ ಮುಂತಾದ ದೇಶಗಳನ್ನು ತಲುಪಲು ನೌಕಾ ಮಾರ್ಗದ ಮಾಹಿತಿಗಳ ಪುಸ್ತಕವೂ ಕೂಡ ಇದರಲ್ಲಿ ಬ್ರಿಟಿಷರಿಗೆ ಸಿಕ್ಕಿತು.

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 2

ಈಸ್ಟ್ ಇಂಡಿಯಾ ಕಂಪೆನಿಯ ಹುಟ್ಟು

ಸರ್ ಜೇಮ್ಸ್ ಲ್ಯಾನ್ ಕ್ಯಾಸ್ಟರ್ ತನ್ನ "ರೆಡ್ ಡ್ರ್ಯಾಗನ್" ಎನ್ನುವ ಹಡಗಿನಲ್ಲಿ ಪೂರ್ವಕ್ಕೆ ಪ್ರಯಾಣ ಬೆಳೆಸಿದ ಪ್ರಪ್ರಥಮ ಬ್ರಿಟಿಷ್ ನಾವಿಕ. ಈತನ ಪ್ರಯಾಣ ಎಪ್ರಿಲ್ 10, 1591ರಂದು ಇಂಗ್ಲೆಂಡಿನ ಡೆವನ್ ನಿಂದ ಪ್ರಾರಂಭವಾಯಿತು. ಗುಡ್ ಹೋಪ್ ಭೂಶಿರ ಹಾಗೂ ಭಾರತದ ಕನ್ಯಾಕುಮಾರಿಯನ್ನು ಸುತ್ತುವರಿದು, ಮಲಯಾ ಪರ್ಯಾಯ ದ್ವೀಪದ ಮೂಲಕ ಈಗಿನ ಮಲೇಶಿಯಾದ ಪಿನಾಂಗ್ ನಗರಕ್ಕೆ 1592 ರ ಜೂನ್ ತಿಂಗಳಲ್ಲಿ ಬಂದು ತಲುಪಿದ. ಆ ವರ್ಷದ ಜೂನ್ ತಿಂಗಳಿನವರೆಗೆ ತನಗೆ ಸಿಕ್ಕಿದ ಎಲ್ಲಾ ಸ್ಪೇನ್ ಮತ್ತು ಪೋರ್ಚುಗಲ್ ಹಡಗುಗಳನ್ನು ಕೊಳ್ಳೆಹೊಡೆದ. ಸ್ಕರ್ವಿ ರೋಗದಿಂದಾಗಿ ತುಂಬಾ ನಾವಿಕರು ಸತ್ತರು. ಲಿಂಬು ಶರಬತ್ತನ್ನು ದಿನಾಲು ಕುಡಿದರೆ ಸ್ಕರ್ವಿ ರೋಗವನ್ನು ತಡೆಗಟ್ಟಬಹುದು ಎಂದು ಲ್ಯಾನ್ ಕ್ಯಾಸ್ಟರ್ ಕಂಡುಕೊಂಡ. ಈತ ಮೇ 1594 ರಲ್ಲಿ ಇಂಗ್ಲೆಂಡಿಗೆ ತಲುಪಿದ.

ಅಂದು1599 ರ ಸೆಪ್ಟೆಂಬರ್ 24. ಲಂಡನ್ನಿನ ಪ್ರಸಿದ್ಧ ವ್ಯಾಪಾರಿಗಳು ಲೆಡೆನ್ ಹಿಲ್ ರಸ್ತೆಯ ಒಂದು ಕಟ್ಟಡದಲ್ಲಿ ಸಭೆ ಸೇರುತ್ತಾರೆ. ಆ ದಿನದ ಚರ್ಚೆಯ ವಿಷಯ ಏನೆಂದರೆ ಡಚ್ ವ್ಯಾಪಾರಿಗಳು ಭಾರತದಿಂದ ಆಮದು ಮಾಡಿಕೊಂಡ ಕಾಳುಮೆಣಸನ್ನು ಹೆಚ್ಚಿನ ಬೆಲೆಗೆ ಇಂಗ್ಲೆಂಡ್ ನಲ್ಲಿ ಮಾರಾಟ ಮಾಡುವುದರ ವಿರುದ್ಧ ಆಗಿತ್ತು. ಡಚ್ ವ್ಯಾಪಾರಿಗಳು ಒಂದು ಪೌಂಡ್ ಕಾಳುಮೆಣಸಿನ ಬೆಲೆಯನ್ನು ಕೆಲವು ಶಿಲ್ಲಿಂಗ್ ನಷ್ಟು ಏರಿಸಿದ್ದರು. ಇದರಿಂದ ರೋಸಿ ಹೋದ ಇಂಗ್ಲಿಷ್ ವ್ಯಾಪಾರಿಗಳು ಪೌರಾತ್ಯ ದೇಶದೊಂದಿಗೆ ಸಾಂಬಾರು ಪದಾರ್ಥಗಳ ವ್ಯಾಪಾರವನ್ನು ನೇರವಾಗಿ ತಾವೇ ಮಾಡುವ ಸವಾಲನ್ನು ಹಾಕುತ್ತಾರೆ.

ಸಭೆಯಲ್ಲಿದ್ದ 101 ಜನರ ಪಾಲುದಾರಿಕೆಯಲ್ಲಿ 30,133 ಪೌಂಡ್, 6 ಶಿಲ್ಲಿಂಗ್ ಹಾಗೂ 8 ಪೆನ್ಸ್ ಗಳ ಆರಂಭಿಕ ಮೊತ್ತದೊಂದಿಗೆ "ಈಸ್ಟ್ ಇಂಡಿಯಾ ಕಂಪೆನಿ" ಎನ್ನುವ ವಾಣಿಜ್ಯ ಸಂಘಟನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಲಾಗುತ್ತದೆ. ಇದರಲ್ಲಿ ಆಗಿನ ಲಂಡನ್ ಮೇಯರ್ ಸ್ಟೀಫನ್ ಸೋಮ್ ಅವರ 200 ಪೌಂಡ್ ಗಳು ಕೂಡ ಸೇರಿತ್ತು. ಭಾರತದ ಭವಿಷ್ಯದ ದಿಕ್ಕನ್ನೇ ಬದಲಾಯಿಸುವ ಪುಟ್ಟ ಸಭೆ ಇದಾಗಿತ್ತು ಎಂದು ಯಾರಿಗೂ ಅಂದು ತಿಳಿದಿರಲಿಲ್ಲ.

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 3.

ಭಾರತದ ಮಣ್ಣನ್ನು ಮೆಟ್ಟಿದ ಇಂಗ್ಲೀಷರು.

ಈಸ್ಟ್ ಇಂಡಿಯಾ ಕಂಪೆನಿಯ ರೆಡ್ ಡ್ರ್ಯಾಗನ್ ಹಡಗು ಎರಡನೇ ಬಾರಿ ಮಾರ್ಚ್ 1604 ರಂದು ಸರ್ ಹೆನ್ರಿ ಮಿಡ್ಲ್ ಟನ್ ನೇತೃತ್ವದಲ್ಲಿ ಪೂರ್ವಕ್ಕೆ ಪ್ರಯಾಣ ಬೆಳೆಸಿತು. ಈ ಬಾರಿ ಇದರ ಜೊತೆ ಅಸೆನ್ಶನ್, ಹೆಕ್ಟಾರ್ ಮತ್ತು ಸುಸಾನ್ ಎನ್ನುವ ಹಡಗುಗಳು ಇದ್ದವು. ಇವು ಮಲಕ್ಕಾ ಮತ್ತಿತರ ಪೌರಾತ್ಯ ಪ್ರದೇಶಗಳಿಂದ ಸಾಕಷ್ಟು ಸಂಪತ್ತನ್ನು ಹೊತ್ತು ತಂದವು.

ಈಸ್ಟ್ ಇಂಡಿಯಾ ಕಂಪನಿಯ ಮೂರನೇಯ ಪ್ರಯಾಣವು ಇಂಗ್ಲೆಂಡ್ ದೇಶದ ಅದೃಷ್ಟವನ್ನು ಹಾಗೂ ಚರಿತ್ರೆಯನ್ನೇ ಬದಲಾಯಿಸಿತು. ಮಾರ್ಚ್ 12, 1607 ರಂದು ಮೂರು ಹಡಗುಗಳು ಜಾವ, ಭಾರತ ಮತ್ತು ಯೆಮೆನ್ ನ ಬಂದರು ನಗರ ಅಡೆನ್ ಕಡೆಗೆ ಹೊರಟವು. ರೆಡ್ ಡ್ರ್ಯಾಗನ್ ಹಡಗನ್ನು ವಿಲಿಯಂ ಕೀಲಿಂಗ್, ಹೆಕ್ಟಾರ್ ಹಡಗನ್ನು ವಿಲಿಯಂ ಹಾಕಿನ್ಸ್ ಹಾಗೂ ಕನ್ಸೆಂಟ್ ಎನ್ನುವ ಹಡಗನ್ನು ಡೇವಿಡ್ ಮಿಡಲ್ಟನ್ ಇವರು ಮುನ್ನಡೆಸಿದರು.

ಹೆಕ್ಟಾರ್ ಹಡಗು ಆಗಸ್ಟ್ 24, 1608 ರಂದು ಗುಜರಾತಿನ ಸೂರತ್ ಬಂದರು ನಗರದ ತಟವನ್ನು ಸ್ಪರ್ಶಿಸಿತು. ಪ್ರಥಮ ಬ್ರಿಟಿಷ್ ಪ್ರಜೆ ವಿಲಿಯಂ ಹಾಕಿನ್ಸ್ ಭಾರತದ ಮಣ್ಣನ್ನು ಮೆಟ್ಟಿದ. ಆದರೆ ಆಗ ಅಲ್ಲಿದ್ದ ಪೋರ್ಚುಗೀಸರು ವಿಲಿಯಂ ಹಾಕಿನ್ಸ್ ನನ್ನು ಸೆರೆಹಿಡಿದರು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಆತ ಅಂದಿನ ಮೊಘಲರ ರಾಜಧಾನಿಯಾದ ಆಗ್ರಾಕ್ಕೆ ಪ್ರಯಾಣ ಬೆಳೆಸಿದ.

ವಿಲಿಯಂ ಹಾಕಿನ್ಸ್ ಸೂರತ್ ಗೆ ಬಂದೊಡನೆ ಭಾರತದಲ್ಲಿದ್ದ ಅಗಾಧ ಸಂಪತ್ತನ್ನು ಕಂಡು ಬೆಚ್ಚಿ ಬೀಳುತ್ತಾನೆ. ಎಲ್ಲೆಲ್ಲೂ ಬೆಳೆದುನಿಂತ ಮೆಣಸು, ಶುಂಠಿ, ದಾಲ್ಚಿನ್ನಿ ಗಿಡಗಳಿಂದ ಹಿಡಿದು ಪಾರಿವಾಳದ ಮೊಟ್ಟೆಯಷ್ಟು ಗಾತ್ರದ ಬೆಲೆಬಾಳುವ ರೂಬಿ ಹರಳಿನವರೆಗೆ ನಮ್ಮ ನೈಸರ್ಗಿಕ ಸಂಪತ್ತು ಹರಡಿತ್ತು. ಆತನ ವ್ಯಾಪಾರಿ ಆಸೆ ಚಿಗುರುತ್ತದೆ.

ಸೂರತ್ ನಿಂದ ವಿಲಿಯಂ ಹಾಕಿನ್ಸ್ ದೀರ್ಘ ಪ್ರಯಾಣ ಬೆಳೆಸಿ ಆಗ್ರಾ ತಲುಪಿದ. ಅಲ್ಲಿ ಪ್ರಪಂಚದ ಅತ್ಯಂತ ಶ್ರೀಮಂತ ಹಾಗೂ ಮೊಘಲ್ ಸಾಮ್ರಾಜ್ಯದ ನಾಲ್ಕನೇ ದೊರೆ ಜಹಾಂಗೀರ್ ನನ್ನು ಭೇಟಿಯಾಗುತ್ತಾನೆ. ತನ್ನ ಆಸ್ಥಾನಕ್ಕೆ ಭೇಟಿ ನೀಡಿದ ಪ್ರಥಮ ಇಂಗ್ಲೀಷ್ ಪ್ರಜೆಯಾದ ಹಾಕಿನ್ಸ್ ನ್ನನ್ನು ಆದರದಿಂದ ಬರಮಾಡಿಕೊಳ್ಳುತ್ತಾನೆ. ಇಂಗ್ಲೆಂಡಿನಲ್ಲಿ ಅಕ್ಬರನ ಹೆಸರು ಪ್ರಚಲಿತವಿತ್ತು. ಆದರೆ ಜಹಾಂಗೀರ್ ನ ಹೆಸರು ಕೇಳಿದವರಿಲ್ಲ.

ಬ್ರಿಟಿಷ್ ಸರಕಾರದ ಪತ್ರವನ್ನು ಪೋರ್ಚುಗಲ್ ಪಾದ್ರಿಯೊಬ್ಬರ ಸಹಾಯದಿಂದ ಹಾಕಿನ್ಸ್ ಜಹಾಂಗೀರನ ಆಸ್ಥಾನದಲ್ಲಿ ಓದಿ ಹೇಳುತ್ತಾನೆ. ಹಾಕಿನ್ಸ್ ಟರ್ಕಿ ಭಾಷೆಯನ್ನು ಬಲ್ಲವನಾದುದರಿಂದ ಜಹಾಂಗೀರನ ಜೊತೆ ಸ್ನೇಹ ಬೆಳೆಯಿತು. ಹಾಕಿನ್ಸ್ ನ ವ್ಯಾಪಾರ ಯೋಜನೆಯಿಂದ ಸಂತುಷ್ಟನಾದ ಜಹಾಂಗೀರ್ ಆತನಿಗೆ ಉತ್ತರ ಮುಂಬೈಯಲ್ಲಿ ಗೋದಾಮು ತೆರೆಯಲು ಅನುಮತಿ ನೀಡುತ್ತಾನೆ. ಆದರೆ ಪೋರ್ಚುಗಲ್ ವೈಸರಾಯ್ ಒತ್ತಡದಿಂದಾಗಿ ಕೊಟ್ಟ ಅನುಮತಿಯನ್ನು ಜಹಾಂಗೀರ್ ವಾಪಾಸು ತೆಗೆದುಕೊಳ್ಳುತ್ತಾನೆ.

ನಂತರ ಮೂರು ವರ್ಷಗಳ ಕಾಲ ಹಾಕಿನ್ಸ್ ಜಹಾಂಗೀರನ ಆಸ್ಥಾನದಲ್ಲಿ ಉಳಿದುಕೊಳ್ಳುತ್ತಾನೆ. ಇಬ್ಬರು ಮಿತ್ರರಾಗುತ್ತಾರೆ. ಜಹಾಂಗೀರ್ ಹಾಕಿನ್ಸ್ ಗೆ ಯಾವಾಗಲೂ "ಇಂಗ್ಲೀಷ್ ಖಾನ್" ಎಂದೇ ಸಂಬೋಧಿಸುತ್ತಿದ್ದ. ಆತನ ಆಹಾರಕ್ಕೆ ಆಸ್ಥಾನದ ಮೊಘಲ್ ಸಿಬ್ಬಂದಿಗಳು ವಿಷ ಹಾಕಬಹುದು ಎಂದು ಆತನಿಗೆ ಅರ್ಮೇನಿಯಾದ ಒಂದು ಕ್ರಿಶ್ಚಿಯನ್ ಹುಡುಗಿಯನ್ನು ಮದುವೆ ಮಾಡಿಸಿ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಿಸಿಕೊಟ್ಟ. ಆಕೆಯ ಹೆಸರು ಮರಿಯಮ್ ಖಾನ್.

ಲೇಖನ ಸರಣಿ ಮುಂದುವರಿಯುವುದು...

Advertisement
Advertisement
Recent Posts
Advertisement