Advertisement

ಹರಿಪ್ರಸಾದ್ ರವರೇ, ಸಿದ್ದರಾಮಯ್ಯ ಬಗ್ಗೆ ಅಪಸ್ವರ ಎತ್ತದಿರಿ!

Advertisement

ಸಿದ್ದರಾಮಯ್ಯ ಬಗ್ಗೆ ಅಪಸ್ವರ ಬೇಡ!

ಬರಹ: ಸನತ್ ಕುಮಾರ ಬೆಳಗಲಿ (ಲೇಖಕರು ಹಿರಿಯ ಪತ್ರಕರ್ತರು ಹಾಗೂ ಜನಪರ ಚಿಂತಕರು)

ಮುಂದಿನ ವರ್ಷ ಚುನಾವಣೆಯನ್ನು ಎದುರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷದವರು ಎಷ್ಟು ಹತಾಶರಾಗಿದ್ದಾರೆಂದರೆ ತಮ್ಮ ಸರಕಾರದ ಸಾಧನೆಗಳ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲದ ಅವರು 'ಇಂಡಿಯಾ' ನಾಯಕರು ಆಡುವ ಮಾತುಗಳನ್ನು ಹಿಡಿದು ಅದಕ್ಕೆ ಜೋತು ಬಿದ್ದು, ತಮ್ಮ ಸ್ಥಾನದ ಘನತೆ ಮರೆತು ನಾಲಿಗೆ ಹರಿಯಬಿಡುತ್ತಿದ್ದಾರೆ. ಈಗ 'ಸನಾತನ' ಎಂಬ ಉದಯನಿಧಿ ಹೇಳಿಕೆ ಇವರ ಬಂಡವಾಳ. ಒಬ್ಬ ಪ್ರಧಾನಿ ಇಷ್ಟು ಅಪಹಾಸ್ಯಕರ ಹೇಳಿಕೆ ನೀಡಿ ಜೋಕರ್‌ ಗಳೆಂದು ಜನ ಕರೆಯುವಂತೆ ನಡೆದುಕೊಳ್ಳುತ್ತಿದ್ದಾರೆ.

ಭಾರತದ ಎಲ್ಲೆಡೆ ಈಗ ಬಿಜೆಪಿ ಮತ್ತು ಕೋಮುವಾದಿ ಕೂಟ ಜನರಿಂದ ತಿರಸ್ಕಾರಕ್ಕೆ ಗುರಿಯಾಗುತ್ತಿದೆ. 'ಮಂದಿರ, ಮಸೀದಿ, ಲವ್ ಜಿಹಾದ್, ಮತಾಂತರ' ಇಂತಹ ಬತ್ತಳಿಕೆಯ ಬಾಣಗಳು ಖಾಲಿಯಾಗಿವೆ. ಜನ ಇವರನ್ನು ನಂಬಿ ಕಳೆದ ಒಂಬತ್ತು ವರ್ಷಗಳಿಂದ ಅಧಿಕಾರ ಸ್ಥಾನದಲ್ಲಿ ಕೂರಿಸಿದ್ದಾರೆ. ಅಧಿಕಾರದಲ್ಲಿ ಕುಳಿತು ಇವರೇನು ಮಾಡಿದರೆಂದು ಜನಸಾಮಾನ್ಯರಿಗೆ ಗೊತ್ತಾಗುತ್ತಿದೆ. ಅನ್ನ, ಅರಿವೆ, ಆಸರೆ, ಅಕ್ಷರ ಇವುಗಳು ಭಾರತೀಯರ ನಿತ್ಯದ ಅಗತ್ಯಗಳು. ಇವುಗಳಿಗೆ ಸ್ಪಂದಿಸದೇ ಬರೀ ಸುಳ್ಳು ಹೇಳುತ್ತಾ ಹಳಿಯಿಲ್ಲದ ಮಾರ್ಗದಲ್ಲಿ ರೈಲು ಬಿಡುತ್ತಾ ಬಂದ ಅದಾನಿ, ಅಂಬಾನಿಗಳ ಆಪ್ತ ಸೇವಕರ ಬಣ್ಣ ಈಗ ಬಯಲಾಗುತ್ತಿದೆ. ಜನ ಹೊಸ ದಾರಿಯ ಹುಡುಕಾಟದಲ್ಲಿದ್ದಾರೆ.

ಭಾರತದ ಜನಸಾಮಾನ್ಯರು ಪ್ರತಿಪಕ್ಷಗಳತ್ತ ಆಸೆಗಣ್ಣುಗಳಿಂದ ನೋಡುತ್ತಿದ್ದಾರೆ. ಪ್ರತಿಪಕ್ಷಗಳು ಒಂದಾಗಿ ನಿರ್ದಿಷ್ಟ ಕಾರ್ಯಕ್ರಮ ಆಧರಿತ ಪರ್ಯಾಯ ನೀಡಿದರೆ ಗೆಲುವಿನ ಸಾಧ್ಯತೆ ಇದೆ. ಇದಕ್ಕೆ ಕರ್ನಾಟಕ ಒಂದು ಪ್ರತ್ಯಕ್ಷ ಉದಾಹರಣೆಯಾಗಿದೆ. ಒಗ್ಗಟ್ಟಿನ ಹೋರಾಟ ಮಾಡಿದರೆ, ಸಿದ್ದರಾಮಯ್ಯನವರಂತಹ ಶುದ್ಧ ಚಾರಿತ್ರ್ಯದ ಜನಪರ ಆಲೋಚನೆಯ ಮಾಸ್‌ ಲೀಡರ್‌ ಇದ್ದರೆ ಕೋಮುವಾದಿ ಶಕ್ತಿಗಳನ್ನು ಮೂಲೆಗುಂಪು ಮಾಡಬಹುದು. ಇಂತಹ ಪರ್ಯಾಯ ರೂಪಿಸುವಾಗ ಭಿನ್ನಾಭಿಪ್ರಾಯ ಸಹಜ. ಯಾವುದೇ ಭಿನ್ನಾಭಿಪ್ರಾಯ ಮನೆಯೊಳಗೆ ಇರಬೇಕು. ಎಂದೂ ಬೀದಿಗೆ ಬರಬಾರದು. ಆ ಮಟ್ಟಿಗೆ ಕರ್ನಾಟಕದ ಕಾಂಗ್ರೆಸ್ ನಾಯಕರು, ಶಾಸಕರು ಈವರೆಗೆ ಬೀದಿಗೆ ಬಂದಿಲ್ಲ. ಆದರೆ ಬಿ.ಕೆ.ಹರಿಪ್ರಸಾದ್ ಯಾಕೆ ತಾಳ್ಮೆ ಕಳೆದುಕೊಂಡರೋ ಅರ್ಥವಾಗುತ್ತಿಲ್ಲ. ಯಾರೋ ಹೊಸದಾಗಿ ಶಾಸಕರಾದವರು, ತತ್ವ, ಸಿದ್ಧಾಂತ ಗೊತ್ತಿಲ್ಲದವರು, ಅಧಿಕಾರಕ್ಕೆ ಹಪಹಪಿಸುವವರು ತಪ್ಪು ಮಾಡುವುದು ಸಹಜ. ಆದರೆ ಹರಿಪ್ರಸಾದ್ ಅವರಂತಹ ಹಿರಿಯ ರಾಜಕಾರಣಿ ಇಂತಹ ತಪ್ಪು ಮಾಡಬಾರದು.

ಬಿ.ಕೆ.ಹರಿಪ್ರಸಾದ್ ಕಾಂಗ್ರೆಸಿನ ಹಿರಿಯ ನಾಯಕರು, ರಾಜ್ಯಸಭೆಯ ಸದಸ್ಯರಾಗಿ ಉತ್ತಮ ಸಂಸದೀಯ ಪಟು ಎಂದು ಹೆಸರಾದವರು, ಕಾಂಗ್ರೆಸ್ ಪರಂಪರೆ, ಸಿದ್ಧಾಂತ, ಸ್ವಾತಂತ್ರ್ಯ ಚಳವಳಿ, ಕೋಮುವಾದದ ಇತಿಹಾಸ, ಇಂತಹ ಹಲವಾರು ವಿಷಯಗಳಲ್ಲಿ ಅಧ್ಯಯನ ಮಾಡಿ ಅಧಿಕಾರ ವಾಣಿಯಿಂದ ಮಾತಾಡಬಲ್ಲವರು. ಇದೆಲ್ಲ ನಿಜ. ಆದರೆ ಇತ್ತೀಚೆಗೆ ವಿನಾಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಯಾಕೆ ಹರಿ ಹಾಯುತ್ತಿದ್ದಾರೋ ಅರ್ಥವಾಗುತ್ತಿಲ್ಲ. ರಾಜ್ಯಮಟ್ಟದ ಕಾಂಗ್ರೆಸ್ ನಾಯಕರೆಂದು ಹೆಸರಾದ ಅವರ ಘನತೆಗೆ ಇದು ತಕ್ಕುದಲ್ಲ, ಅವರಿಗೆ ಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ ಎಂಬುದು ನಿಜ. ಅದಕ್ಕಾಗಿ ಬಹಿರಂಗವಾಗಿ ತಮ್ಮದೇ ಪಕ್ಷದ ನಾಯಕನನ್ನು ಟೀಕಿಸುವುದು ಸರಿಯಲ್ಲ. ದೇಶ ಅಪಾಯದ ಅಂಚಿನಲ್ಲಿರುವಾಗ ತಮ್ಮ ಅಸಮಾಧಾನ ಬದಿಗಿಟ್ಟು ಪಕ್ಷದ ಶಿಸ್ತಿಗೆ ಬದ್ಧವಾಗಿರಬೇಕೆಂದು ಅವರಿಗೆ ಯಾರೂ ಹೇಳಿಕೊಡಬೇಕಾಗಿಲ್ಲ.

ಎಪ್ಪತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ವಿದ್ಯಾರ್ಥಿ ನಾಯಕನಾಗಿದ್ದ ಹರಿಪ್ರಸಾದ್ ಹಿನ್ನೆಲೆಯನ್ನು ಗಮನಿಸಿದರೆ ಅವರ ಇಂದಿನ ಬೆಳವಣಿಗೆ ಸಾಮಾನ್ಯವಾದುದಲ್ಲ. ಚಿಕ್ಕ ವಯಸ್ಸಿನಲ್ಲಿ ಕಾಂಗ್ರೆಸ್ ಪಕ್ಷ ಇವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿತು. ಹೀಗೆ ಯುವ ಕಾಂಗ್ರೆಸಿನ ಅನೇಕರು ಸಂಸದರಾಗಿದ್ದಾರೆ. ಆದರೆ ಅಧ್ಯಯನಶೀಲತೆ ಬೆಳೆಸಿಕೊಂಡು ಸಂಸದೀಯ ಪಟುಗಳಾಗಲಿಲ್ಲ. ಆದರೆ ಹರಿಪ್ರಸಾದ್ ಸಂಸತ್ತಿನ ಗ್ರಂಥಾಲಯದಲ್ಲಿ ಕುಳಿತು ವಿವಿಧ ತತ್ವ ಪ್ರಣಾಲಿಯ ಬಗ್ಗೆ, ರಾಜಕೀಯ ಸಿದ್ಧಾಂತಗಳ ಬಗ್ಗೆ ಅಧ್ಯಯನ ಮಾಡಿ ಕಾಂಗ್ರೆಸ್ ವರಿಷ್ಠರ ಗಮನ ಸೆಳೆದರು. ಹರಿಪ್ರಸಾದ್‌ ಈ ಬೆಳವಣಿಗೆಯನ್ನು ಪಿ.ಲಂಕೇಶ್ ಕೂಡ ಶ್ಲಾಘಿಸಿದ್ದರು. ಆದರೆ ಇಂತಹ ಹರಿಪ್ರಸಾದ್ ಎಡವಿದರೇಕೆ?

ಹರಿಪ್ರಸಾದ್ ತಮ್ಮ ಮಿತಿಯನ್ನು ಅರಿತುಕೊಳ್ಳಬೇಕಿತ್ತು. ಕಾಂಗ್ರೆಸ್ ಹೈ ಕಮಾಂಡ್ ನಲ್ಲಿ ಅವರು ಎಷ್ಟೇ ಪ್ರಭಾವಿ ನಾಯಕನಾಗಿದ್ದರೂ ಸಿದ್ದರಾಮಯ್ಯನವರಂತೆ ಜನ ನಾಯಕನಲ್ಲ. ಚುನಾವಣಾ ರಾಜಕಾರಣದಲ್ಲಿ ಜನರ ನಡುವೆ ಪ್ರಭಾವ ಹೊಂದಿದ ನಾಯಕ, ಜನರ ಮನಸ್ಸು ಮತ್ತು ಮತಗಳನ್ನು ಒಲಿಸಿಕೊಳ್ಳಬಲ್ಲ ನಾಯಕನಿಗೆ ಬೆಲೆ ಇರುತ್ತದೆ. ಈ ಕೆಟ್ಟ ಕಾಲದಲ್ಲಿ, ಕೋಮುವಾದ ಧರ್ಮದ ಆಧಾರದಲ್ಲಿ ಜನಸಾಮಾನ್ಯರನ್ನು ವಿಭಜಿಸಿದ ಕಾಲದಲ್ಲಿ ನಮ್ಮ ನಡುವೆ ಇರುವ ಏಕೈಕ ಅಪರೂಪದ ಜನ ನಾಯಕ ಸಿದ್ದರಾಮಯ್ಯನವರು ಅಂದರೆ ಅತಿಶಯೋಕ್ತಿಯಲ್ಲ.

ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗೆ ಸ್ವಯಂ ವಿಜೃಂಭಣೆಯ ವ್ಯಾಮೋಹ ಇರಬಾರದು. 'ನಾನು ಯಾರನ್ನು ಬೇಕಾದರೂ ಮುಖ್ಯಮಂತ್ರಿ ಮಾಡಬಲ್ಲೆ' ಎಂಬ ಹರಿಪ್ರಸಾದ್ ಮಾತು ದುರಹಂಕಾರಕ್ಕೆ ಹತ್ತಿರವಾದ ಮಾತು. ಇಂತಹ ಮಾತು ಸಿದ್ದರಾಮಯ್ಯನವರಿಂದ ಎಂದೂ ಬಂದಿಲ್ಲ. ಕಾಂಗ್ರೆಸನ್ನು ಅಧಿಕಾರಕ್ಕೆ ತಂದ ಬಹುಪಾಲು ಶ್ರೇಯಸ್ಸು ಅವರಿಗೆ ಸಲ್ಲುವುದಾದರೂ ಅದನ್ನೆಂದೂ ಸಿದ್ದರಾಮಯ್ಯನವರು ಕೊಚ್ಚಿಕೊಳ್ಳುವುದಿಲ್ಲ. ರಾಜಕಾರಣಿಗಳಿಗೆ ಆ ಪ್ರಬುದ್ಧತೆ ಇರಬೇಕಾಗುತ್ತದೆ.

ಭಾರತೀಯ ಸಮಾಜ ಜಾತಿ ಮತಗಳಿಂದ ಕೂಡಿದ ಸಮಾಜ, ಆದ್ದರಿಂದ ಬಾಬಾಸಾಹೇಬ ಅಂಬೇಡ್ಕರ್‌ ಅವರು 'ಸಮಾಜ ಜನತಾಂತ್ರಿಕವಾಗದೇ ಬರೀ ರಾಜಕೀಯ ವ್ಯವಸ್ಥೆ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡರೆ ಸಾಲದು' ಎಂದು ಹೇಳುತ್ತಿದ್ದರು. ಚುನಾವಣಾ ರಾಜಕಾರಣದಲ್ಲೂ ಜಾತಿಯೇ ಪ್ರಧಾನ ಪಾತ್ರ ವಹಿಸುತ್ತ ಬಂದಿದೆ. ದೇವರಾಜ ಅರಸು ಅನಂತರ ರಾಜ್ಯದಲ್ಲಿ ಕಾಂಗ್ರೆಸ್ ಎರಡು ಬಾರಿ, ಭಾರೀ ಬಹುಮತದೊಂದಿಗೆ ಜಯಶಾಲಿಯಾಗಿದ್ದು ಒಮ್ಮೆ ವೀರೇಂದ್ರ ಪಾಟೀಲರ ನಾಯಕತ್ವದಲ್ಲಿ, ಇನ್ನೊಮ್ಮೆ ಎಸ್.ಎಂ.ಕೃಷ್ಣ ಅವರ ಸಾರಥ್ಯದಲ್ಲಿ, ಅಂದರೆ ಬಲಿಷ್ಠ ಜಾತಿಗಳಾದ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗರ ಪ್ರಾಬಲ್ಯದಿಂದ ಅದನ್ನು ಬಿಟ್ಟರೆ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳನ್ನು ಒಂದುಗೂಡಿಸಿ ಕಾಂಗ್ರೆಸ್ ಮತ್ತೆ ೧೩೫ ಸ್ಥಾನಗಳನ್ನು ಗೆಲ್ಲುವಂತೆ ಮಾಡಿದವರು ಸಿದ್ದರಾಮಯ್ಯನವರು. ಡಿ.ಕೆ.ಶಿವಕುಮಾರ್‌ ಅದ್ಭುತ ಸಂಘಟನಾ ಸಾಮರ್ಥ್ಯ ಹೊಂದಿದ್ದರೂ ಜಾತಿ ಮತಗಳಾಚೆ ಜನ ಸಮೂಹವನ್ನು ಸೆಳೆಯಬಲ್ಲ ಚರಿಷ್ಠಾ ಇರುವುದು ಸಿದ್ದರಾಮಯ್ಯನವರಿಗೆ.

ಕಾಂಗ್ರೆಸ್ ಪಕ್ಷದಲ್ಲಿ 'ಕೋಮುವಾದ ಮತ್ತು ಮನುವಾದ'ದ ಬಗ್ಗೆ ನೇರವಾಗಿ ಮಾತಾಡುವ ಕೆಲವೇ ನಾಯಕರಲ್ಲಿ ಸಿದ್ದರಾಮಯ್ಯ ಒಬ್ಬರು. ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಪೂರ್ಣಚಂದ್ರ ತೇಜಸ್ವಿಯವರ ಗರಡಿಯಲ್ಲಿ ತಯಾರಾದ ಸಿದ್ದರಾಮಯ್ಯನವರು ಆ ಸಮಾಜವಾದಿ ಬದ್ಧತೆಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಆದ್ದರಿಂದ ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್‌ನಂತಹ ಆಲೋಚನೆಗಳು ಅವರಿಗೆ ಹೊಳೆಯುತ್ತವೆ.

ಇಂತಹ ಸಿದ್ದರಾಮಯ್ಯನವರ ಬಗ್ಗೆ ಹರಿಪ್ರಸಾದ್ ಹಗುರಾದ ಮಾತುಗಳನ್ನು ಆಡಬಾರದಿತ್ತು. ನಿಜ ಅವರು ಮಂತ್ರಿಯಾಗಬೇಕಾಗಿತ್ತು. ಆ ಎಲ್ಲ ಅರ್ಹತೆಗಳು ಅವರಿಗಿವೆ. ಆದರೆ ಸಂಪುಟ ರಚನೆಯಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಈ ವೈಯಕ್ತಿಕ ಅಸಮಾಧಾನವನ್ನು ಸಾರ್ವತ್ರಿಕಗೊಳಿಸುವ ಸಣ್ಣತನವನ್ನು ಹರಿಪ್ರಸಾದ್ ತೋರಿಸಬಾರದಿತ್ತು. ಬಹಿರಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸುವ ಬದಲಾಗಿ ಪಕ್ಷದ ಸಭೆಯಲ್ಲಿ ನೇರವಾಗಿ ಪ್ರಶ್ನೆ ಮಾಡಬಹುದಾಗಿತ್ತು. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿವರೆಗೆ ನೇರ ಒಡನಾಟ ಇರುವ ಹರಿಪ್ರಸಾದ್ ಅವರ ಬಳಿ ದೂರು ನೀಡಬಹುದಾಗಿತ್ತು. ಆದರೆ ಅದನ್ನು ಬಿಟ್ಟು 'ಬಿಜೆಪಿ ನಾಯಕರೂ ಪಾಲ್ಗೊಂಡ ಈಡಿಗರ ಸಮಾವೇಶ'ದಲ್ಲಿ ಸಿದ್ದರಾಮಯ್ಯನವರು ಅಡ್ವಾಣಿ ಮನೆಗೆ ಹೋಗಿದ್ದರೆಂದು ತೀರ ಚಿಲ್ಲರೆ ಮಾತನಾಡಬಾರದಿತ್ತು. ಹರಿಪ್ರಸಾದ್‌ ಅಸಮಾಧಾನವನ್ನು ದುರ್ಬಳಕೆ ಮಾಡಿಕೊಂಡ ಸಂಘಪರಿವಾರ ಪರೋಕ್ಷವಾಗಿ ಜಾತಿ ಸಮ್ಮೇಳನಕ್ಕೆ ಕುಮಕ್ಕು ನೀಡಿ ಕೇರಳ ಮೂಲದ ಕನ್ನಡ ಮಾತಾಡಲು ಬಾರದ ಸಂಘ ಸ್ವಾಮಿ ಪ್ರಣವಾನಂದನನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯನವರ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಿತು.

ಪ್ರಮೋದ್ ಮುತಾಲಿಕ್ ಜೊತೆ ಓಡಾಡುತ್ತಿದ್ದ ಈ ಪ್ರಣವಾನಂದ ಸ್ವಾಮಿಯನ್ನು ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯಾದಾಗ ಪೊಲೀಸರು ಪ್ರಶ್ನಿಸಿ ವಿಚಾರಣೆ ನಡೆಸಿದ್ದರು. ಆಗ ಬಣ್ಣ ಬದಲಿಸಿದ ಈತ ಸೆಕ್ಯುಲರ್ ಸೋಗು ಹಾಕಿ ಕೆಲ ಪ್ರಗತಿಪರರನ್ನು ಯಾಮಾರಿಸಿದ. ಈಗ ಈತ ಸಿದ್ದರಾಮಯ್ಯ ಯಾಕೆ ಸಿಎಂ ಆಗಬೇಕು ಎಂದು ಪ್ರಶ್ನೆ ಮಾಡುತ್ತಾನೆ. ಇಂತಹವರ ಜೊತೆ ಹರಿಪ್ರಸಾದ್ ಸೇರಿದ್ದಾರೆ. ಹರಿಪ್ರಸಾದ್ ಬಗ್ಗೆ ಎಲ್ಲ ಗೌರವವನ್ನು ಇಟ್ಟುಕೊಂಡೇ ಅವರ ಈ ನಡೆಯನ್ನು ಟೀಕಿಸಲೇಬೇಕಾಗಿದೆ.

ಭಾರತ ಈಗ ನಿರ್ಣಾಯಕ ಕಾಲ ಘಟ್ಟದಲ್ಲಿದೆ. ಮಹಾತ್ಮಾ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್, ಜವಾಹರಲಾಲ್ ನೆಹರೂ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಕನಸಿನ, ಬಯಸಿದ ಜಾತ್ಯತೀತ, ಸಮಾನತೆಯ, ಜನತಾಂತ್ರಿಕ ಭಾರತವನ್ನು ಮನುವಾದಿ, ಕೋಮುವಾದಿ, ಫ್ಯಾಶಿಸ್ಟ್ ಭಾರತವನ್ನಾಗಿ ಮಾಡಲು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಯತ್ನಿಸುತ್ತಲೇ ಇದೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ತನ್ನ ಗುರಿ ಸಾಧನೆಯ ದಿಕ್ಕಿನಲ್ಲಿ ಹೊರಟಿದೆ. ಅದನ್ನು ತಡೆಯಲು ಎಲ್ಲ ಸಮಾನ ಮನಸ್ಕ, ಜಾತ್ಯತೀತ ಶಕ್ತಿಗಳು 'ಇಂಡಿಯಾ' ವೇದಿಕೆಯಲ್ಲಿ ಒಂದಾಗಿದೆ. ಉದಯನಿಧಿ ಸ್ಟಾಲಿನ್ ಸನಾತನ ಶಕ್ತಿಗಳ ಬಗ್ಗೆ ಮಾತಾಡಿದ ಅನಂತರ ರಾಜಕೀಯ ಸಂಘರ್ಷ ಸೈದ್ಧಾಂತಿಕ ರೂಪವನ್ನು ತಾಳಿದೆ. ಇಂತಹ ಸನ್ನಿವೇಶದಲ್ಲಿ ಸಿದ್ದರಾಮಯ್ಯನವರಂತಹ ಜನ ನಾಯಕರ ಪ್ರಾಮುಖ್ಯಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕಾಗಿದೆ. ಹರಿಪ್ರಸಾದ್ ಅವರಂತಹ ಮುತ್ಸದ್ದಿ ರಾಜಕಾರಣಿಗಳು ಈ ನಿಟ್ಟಿನಿಂದಲೂ ಯೋಚಿಸುವುದು ಸೂಕ್ತ.

ಕೇಂದ್ರದ ಇಲ್ಲವೇ ರಾಜ್ಯದ ಬಿಜೆಪಿ ನಾಯಕರ ಬಂಡವಾಳ ಬಯಲಾಗಿದೆ. ಹೇಳಿಕೊಳ್ಳುವ ಯಾವ ಸಾಧನೆಯನ್ನು ಮಾಡದ ಅವರು ಈಗ ಸನಾತನ ಶಬ್ದ ಹಿಡಿದು ಗುದ್ದಾಡುತ್ತಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಇಂತಹ ಬೆಂಕಿ ಹಚ್ಚಿ ಮೈ ಕಾಯಿಸಿಕೊಳ್ಳುವ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈಗ, ಈ ಕೆಟ್ಟ ಕಾಲದಲ್ಲಿ ಸಿದ್ದರಾಮಯ್ಯನವರ ಕಾಲೆಳೆಯುವ ದುಸ್ಸಾಹಸಕ್ಕೆ ಹರಿಪ್ರಸಾದ್ ಕೈ ಹಾಕುವುದು ಅವರ ಘನತೆಗೆ ತಕ್ಕುದಲ್ಲ.

ಪ್ರಜಾಪ್ರಭುತ್ವದಲ್ಲಿ ನಾಯಕತ್ವವನ್ನು ಪಕ್ಷ ಒಪ್ಪಿಕೊಂಡರೆ ಸಾಕಾಗುವುದಿಲ್ಲ. ಜನಸಾಮಾನ್ಯರು ಒಪ್ಪಿಕೊಳ್ಳಬೇಕು. ಸಿದ್ದರಾಮಯ್ಯನವರ ನಾಯಕತ್ವವನ್ನು ಕರ್ನಾಟಕದ ಜನತೆ ಒಪ್ಪಿಕೊಂಡಿದ್ದಾರೆ. ನಾಲ್ಕು ದಶಕಗಳ ಅನುಭವವಿರುವ ಒಬ್ಬ ಪತ್ರಕರ್ತನಾಗಿ ನಾನು ಗಮನಿಸಿದ ವಾಸ್ತವ ಸಂಗತಿ ಇದು. ಜನರು ತಮ್ಮ ನಾಯಕನೆಂದು ಒಪ್ಪಿಕೊಂಡವರನ್ನು ಪಕ್ಷವೂ ಒಪ್ಪಿಕೊಳ್ಳಬೇಕಾಗುತ್ತದೆ. ರಾಜಕಾರಣಿಗಳು ಆಡುವ ಮಾತುಗಳನ್ನು ಜನಸಾಮಾನ್ಯರು ಗಮನಿಸುತ್ತಿರುತ್ತಾರೆ. ಈ ಎಚ್ಚರ ರಾಜಕಾರಣಿಗಳಿಗೆ ಇರಬೇಕು.

ನಾವೀಗ ಭಾರತದ ಕೋಟಿ, ಕೋಟಿ ಜನ ಮನುವಾದಿ ಫ್ಯಾಶಿಸ್ಟ್ ವಿರೋಧಿ ಹೋರಾಟದಲ್ಲಿದ್ದೇವೆ. ಈ ಸಂಘರ್ಷದಲ್ಲಿ ಸಿದ್ದರಾಮಯ್ಯನವರು ಮುಂಚೂಣಿಯಲ್ಲಿ ಇದ್ದಾರೆ. ಇಂತಹ ರಣರಂಗದ ಸನ್ನಿವೇಶದಲ್ಲಿ ಕೇವಲ ಜುಜುಬಿ ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಹರಿಪ್ರಸಾದ್ ಅವರಂತಹ ಜವಾಬ್ದಾರಿಯತ ನಾಯಕರು ಸಿದ್ದರಾಮಯ್ಯನವರ ಕಾಲೆಳೆಯಲು ಹೊರಟರೆ ಅದಕ್ಕಿಂತ ದೊಡ್ಡ ದ್ರೋಹ ಇನ್ನೊಂದಿಲ್ಲ. ಹರಿಪ್ರಸಾದ್ ನೀವು ಅಖಿಲ ಭಾರತ ಕಾಂಗ್ರೆಸ್ ನಾಯಕರಾಗಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರಾದವರು. ಇಂತಹ ಸಣ್ಣಪುಟ್ಟ ಮಂತ್ರಿ ಸ್ಥಾನದ ವ್ಯಾಮೋಹ ನಿಮ್ಮಂತಹವರಿಗಲ್ಲ. ದಯವಿಟ್ಟು ಸಣ್ಣವರಾಗಲು ಹೋಗಬೇಡಿ.

ಇದು ಒಬ್ಬ ಪತ್ರಕರ್ತನಾಗಿ ನನ್ನ ಅನಿಸಿಕೆ ಮತ್ತು ವಿನಂತಿ ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಲ್ಲ. ಮುಖ್ಯಮಂತ್ರಿಗಳ ಆಪ್ತ ವಲಯಕ್ಕೆ ಸೇರಿದವನೂ ಅಲ್ಲ. ಆದರೆ ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಉಳಿಯಬೇಕು, ದಮನಿತ ಸಮುದಾಯದ ಉಸಿರು ನಿಲ್ಲಬಾರದು ಎಂಬುದಷ್ಟೇ ನನ್ನ ಕಾಳಜಿ. ನಾನು ಕಂಡಂತೆ ಸಿದ್ದರಾಮಯ್ಯ ನಿಜವಾದ ಜನ ನಾಯಕ, ಹಿಂದುಳಿದ ಸಮುದಾಯದಿಂದ ಬಂದ ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಅವರನ್ನು ಪಿತೂರಿ ಮಾಡಿ ತೆಗೆದಂತೆ ಸಿದ್ದರಾಮಯ್ಯನವರಿಗೆ ಆಗಬಾರದು. ಮೇಲ್ದಾತಿ, ಮೇಲ್ವರ್ಗಗಳ ಮುಖ್ಯಮಂತ್ರಿಗಳಿದ್ದಾಗ ಉದ್ಭವವಾಗದ ದಲಿತ, ಈಡಿಗ ಮುಖ್ಯಮಂತ್ರಿ ಪ್ರಶ್ನೆ ಕೋಮುವಾದದ ಕಡು ವಿರೋಧಿಯಾದ ದಕ್ಷ ಸ್ವಚ್ಛ ಆಡಳಿತಗಾರನಾದ ಹಿಂದುಳಿದ ಕುರುಬ ಸಮುದಾಯದ ವ್ಯಕ್ತಿ ಮುಖ್ಯ ಮಂತ್ರಿಯಾಗಿದ್ದಾಗ ಅಡ್ಡ ಗಾಲಾಗಿ ಬರಬಾರದು. ಈ ಅರಿವು ಹರಿಪ್ರಸಾದ್ ಮಾತ್ರವಲ್ಲ ಇತರ ಕಾಂಗ್ರೆಸ್ ನಾಯಕರಿಗೂ ಬರಲಿ.

ಕೃಪೆ:ಪ್ರಚಲಿತ ಅಂಕಣ- ವಾರ್ತಾಭಾರತಿ ೧೮.೯.೨೦೨೩

Advertisement
Advertisement
Recent Posts
Advertisement