Advertisement

ಡಿಸೆಂಬರ್ 9ರಿಂದ 12ರ ತನಕ: ಕಾರ್ಟೂನು ಹಬ್ಬ!

Advertisement

"ಕಾರ್ಟೂನು ಹಬ್ಬ ಬಳಗ- ಕುಂದಾಪುರ" ಇವರ ನೇತೃತ್ವದಲ್ಲಿ 10ನೆಯ ವರ್ಷದ "ಕಾರ್ಟೂನು ಹಬ್ಬ" ಈ ಬಾರಿ ಡಿಸೆಂಬರ್ 9 ರಿಂದ 12ರ ತನಕ ಕುಂದಾಪುರದ ಕಲಾಮಂದಿರದಲ್ಲಿ ನಡೆಯಲಿದ್ದು ಆ ಪ್ರಯುಕ್ತ ಡಿಸೆಂಬರ್ 9 ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ಸತತ ನಾಲ್ಕು ದಿನಗಳ ಕಾಲ ಕುಂದಾಪುರದ ವ್ಯಂಗ್ಯಚಿತ್ರಕಾರರುಗಳಾದ ಪಂಜು ಗಂಗೊಳ್ಳಿ, ಸತೀಶ್ ಆಚಾರ್ಯ, ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ, ಸಂತೋಷ್ ಸಸಿಹಿತ್ಲು, ಚಂದ್ರ ಗಂಗೊಳ್ಳಿ, ಜಯರಾಂ ಉಡುಪ, ಜಿ.ಬಿ ಕಲೈಕಾರ್, ರವಿರಾಜ ಹಾಲಂಬಿ ಮುಂತಾದವರ ಆಯ್ದ, ಪ್ರಕಟಿತ ವ್ಯಂಗ್ಯಚಿತ್ರಗಳ ಪ್ರದರ್ಶನ ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರರಿಂದ ಸ್ಥಳದಲ್ಲೇ ವ್ಯಂಗ್ಯಭಾವಚಿತ್ರ ರಚನೆ ನಡೆಯಲಿದೆ.

ಕಾರ್ಟೂನು ಹಬ್ಬ ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಾಹಿತಿ, ಕವಿ, ವ್ಯಂಗ್ಯಚಿತ್ರಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕುಂ. ವೀರಭದ್ರಪ್ಪ ನೆರವೇರಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಕರ್ನಾಟಕ ರಾಜ್ಯ ಹಿಂದುಳಿ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆಯವರು ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಹೋರಾಟಗಾರರು, ರಾಜ್ಯ ಡಿವೈಎಫ್‌ಐ ಘಟಕದ ಅಧ್ಯಕ್ಷರು ಆದ ಮುನೀರ್ ಕಾಟಿಪಳ್ಳ, ಜನಪರ ಲೇಖಕರು ಹಾಗೂ ಖ್ಯಾತ ಪತ್ರಕರ್ತರಾದ ನವೀನ್ ಸೂರಿಂಜೆ, ನ್ಯೂಸ್ ಮಿನಿಟ್‌ನ ಪತ್ರಕರ್ತರಾದ ಪ್ರಜ್ವಲ್ ಭಟ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಇತ್ತೀಚೆಗೆ ಮೃತರಾದ ಪತ್ರಕರ್ತ, ಸಾಹಿತಿ ಡಾ. ಶೇಖರ್ ಅಜೆಕಾರ್ ಇವರ ಸ್ಮರಣಾರ್ಥ 'ನುಡಿನಮನ' ಮತ್ತು ಮೃತರ ಮಕ್ಕಳ ವಿಧ್ಯಾಭ್ಯಾಸದ ನೆರವಿಗಾಗಿ ಹಣ ಸಂಗ್ರಹಣೆಯ ಭಾಗವಾಗಿ ದಾನಿಗಳ ಕ್ಯಾರಿಕೇಚರ್ ರಚಿಸುವ ಭಾಗವಾಗಿ 'ಚಿತ್ರನಿಧಿ' ಉದ್ಘಾಟನೆಗೊಳ್ಳಲಿದೆ. ಇದರ ಉದ್ಘಾಟನೆಯನ್ನು ಉದ್ಯಮಿ ಶಶಿಧರ ಚೌಟ ನೆರವೇರಿಸಲಿದ್ದಾರೆ. ನುಡಿನಮನ ಕಾರ್ಯಕ್ರಮದಲ್ಲಿ ಕುಂದಾಪುರದ ಹಿರಿಯ, ಖ್ಯಾತ ಪತ್ರಕರ್ತರಾದ ಯು.ಎಸ್ ಶೆಣೈ, ವಾರ್ತಾಭಾರತಿ ಪತ್ರಿಕೆಯ ಬಿ.ಎಂ ಬಶೀರ್, ಕ್ರೀಡಾ ಪತ್ರಕರ್ತ ಸೋಮಶೇಖರ ಪಡುಕೆರೆ, ಕುಂದಾಪ್ರ ಡಾಟ್ ಕಾಂ ನ ಸುನಿಲ್ ಬೈಂದೂರು ಭಾಗವಹಿಸಲಿದ್ದಾರೆ.

ಡಿಸೆಂಬರ್ 9ರಂದು ಮಧ್ಯಾಹ್ನ 2ಗಂಟೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ "ಕಾರ್ಟೂನು ರಚನಾ ಸ್ಪರ್ಧೆ"ಯು ನಡೆಯಲಿದೆ. 

ಡಿಸೆಂಬರ್ 10ರಂದು ಬೆಳಿಗ್ಗೆ 10.30ಕ್ಕೆ 'ಖ್ಯಾತ ವ್ಯಂಗ್ಯಚಿತ್ರಕಾರರಿಂದ ಲೈವ್ ಎಡಿಟೋರಿಯಲ್ ಕಾರ್ಟೂನು ರಚನೆ ಹಾಗೂ ಸಂವಾದ'ದ ಅಂಗವಾಗಿ ಮಾಸ್ಟರ್ ಸ್ಟ್ರೋಕ್ಸ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಸೌತ್ ಪಸ್ಟ್‌ನ ಕಾರ್ಯಕಾರಣಿ ಸಂಪಾದಕಿ ಅನುಷಾ ರವಿ ಸೂದ್ ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಬ್ಯುಸಿನೆಸ್ ಇಂಡಿಯಾದ ಹಿರಿಯ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಹಾಗೂ ವೃತ್ತಿಪರ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಉಪಸ್ಥಿತರಿರಲಿದ್ದಾರೆ. ಆ ಸಂಧರ್ಭದಲ್ಲಿ ಆನ್‌ಲೈನ್ ಮೂಲಕ ಟೈಮ್ಸ್ ಆಫ್ ಇಂಡಿಯಾದ ವ್ಯಂಗ್ಯಚಿತ್ರಕಾರ ಸಂದೀಪ್ ಅದ್ವರ್ಯು, ಡೆಕ್ಕನ್ ಹೆರಾಲ್ಡ್‌ನ ವ್ಯಂಗ್ಯಚಿತ್ರಕಾರ ಸಾಜಿತ್ ಕುಮಾರ್, ದೈನಿಕ್ ಭಾಸ್ಕರ್ ನ ವ್ಯಂಗ್ಯಚಿತ್ರಕಾರ ಇಸ್ಮಾಯಿಲ್ ಲಹರಿ ಜೊತೆಗೂಡಲಿದ್ದಾರೆ. ಹಿರಿಯ ವ್ಯಂಗ್ಯಚಿತ್ರಕಾರುಗಳಾದ ಗುಜ್ಜಾರಪ್ಪ, ನಂಜುಡಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಸಂಜೆ 5 ಗಂಟೆಗೆ ಕಾರ್ಟೂನು ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಆದರಣೀಯ ಅತಿಥಿಗಳಾಗಿ ಉಡುಪಿಯ ಖ್ಯಾತ ಮನೋವೈಧ್ಯರಾದ ಪಿ.ವಿ ಭಂಡಾರಿ, ಕುಂದಾಪುರ ತಾಲೂಕು ವೈಧ್ಯಾದಿಕಾರಿಗಳಾದ ಕೆ. ಪ್ರೇಮಾನಂದ, ಕುಂದಾಪುರ ಕಲಾಕ್ಷೇತ್ರದ ರೂವಾರಿ ಕಿಶೋರ್ ಕುಮಾರ್, ಕದಿಕೆ ಟ್ರಸ್ಟ್‌ನ ಸ್ಥಾಪಕರಾದ ಶ್ರೀಮತಿ ಮಮತಾ ರೈ ಭಾಗವಹಿಸಲಿದ್ದಾರೆ. ಈ ಸಂಧರ್ಭದಲ್ಲಿ ಶಿಕ್ಷಣ ತಜ್ಞ, ಚಿತ್ರ ಕಲಾವಿದ, ಹಿರಿಯ ಶಿಕ್ಷಕ ಉದಯ ಗಾಂವಕರ್, ಸಾಂಸ್ಕೃತಿಕ ಸಂಘಟನೆಯಾದ ಕಲಾಕ್ಷೇತ್ರ ಕುಂದಾಪುರ, ಹುಲಿವೇಶದ ಖ್ಯಾತ ಕಲಾವಿದ ಲಕ್ಷ್ಮಣ ಇವರುಗಳಿಗೆ ಸನ್ಮಾನ ನಡೆಯಲಿದೆ.

ಡಿಸೆಂಬರ್ 11 ಮತ್ತು 12ರಂದು ಕುಂದಾಪುರದ ಪರಿಸರದ ವಿವಿಧ ಶಾಲೆಗಳ ಆಯ್ದ ಕಾರ್ಟೂನಾಸಕ್ತ ವಿಧ್ಯಾರ್ಥಿಗಳಿಗೆ ಖ್ಯಾತ ವ್ಯಂಗ್ಯಚಿತ್ರಕಾರರಿಂದ ವ್ಯಂಗ್ಯಚಿತ್ರ ರಚನಾ ತರಬೇತಿ ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್ 9ರಂದು ಮಧ್ಯಾಹ್ನ 2ಗಂಟೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ನಡೆಯಲಿರುವ "ಕಾರ್ಟೂನು ರಚನಾ ಸ್ಪರ್ಧೆ"ಯು  4ರಿಂದ 7ನೇಯ ತರಗತಿ, 8ರಿಂದ 10ನೇಯ ತರಗತಿ ಮತ್ತು ಪಿಯುಸಿ ಹಾಗೂ ಮೇಲ್ಪಟ್ಟು ಹೀಗೆ, ಮೂರು ವಿಭಾಗಗಳಲ್ಲಿ ನಡೆಯಲಿದೆ. "ಕಾರ್ಟೂನು ಸ್ಪರ್ಧೆಯ ವಿಷಯ"ವನ್ನು ಸ್ಪರ್ಧೆ ನಡೆಯುವ ಸ್ಥಳದಲ್ಲೇ ನೀಡಲಾಗುವುದು.  

ಸ್ಪರ್ಧೆಯ ನಿಯಮಗಳು: ಸ್ಥಳದಲ್ಲಿ "ಸ್ಪರ್ಧೆಯ ವಿಷಯ" ನೀಡಿದಾಗ ವಿಧ್ಯಾರ್ಥಿಗಳು ಐಡಿಯಾ ಹೊಳೆಯದೆ ಗೊಂದಲಕ್ಕೊಳಗಾಗುವುದನ್ನು ತಪ್ಪಿಸಲು ವಿಧ್ಯಾರ್ಥಿಗಳು ತಮ್ಮ ತಮ್ಮ ಪೋಷಕರೊಂದಿಗೆ ವಿಷಯವನ್ನು ಚರ್ಚಿಸಲು ಸ್ಪರ್ಧೆಯ ಪೂರ್ವದಲ್ಲಿ 30ನಿಮಿಷಗಳ ಕಾಲಾವಕಾಶ ನೀಡಲಾಗುವುದು ಮತ್ತು ಆ ನಂತರ ಚಿತ್ರ ರಚಿಸಲು 2ಗಂಟೆಗಳ ಕಾಲಾವಕಾಶ ದೊರೆಯಲಿದೆ. ಸ್ಪರ್ಧೆಯ ಸಮಯದಲ್ಲಿ ಚಿತ್ರರಚನೆ ಮತ್ತಿತರ ಕಾರ್ಯಗಳನ್ನು ಕಡ್ಡಾಯವಾಗಿ ವಿಧ್ಯಾರ್ಥಿಗಳೇ ಮಾಡಬೇಕಾಗಿದೆ. ಸ್ವಂತವಾದ ಮತ್ತು ಕ್ರೀಯಾಶೀಲ ಐಡಿಯಾಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು.  ಚಿತ್ರ ರಚನೆಗೆ ಡ್ರಾಯಿಂಗ್ ಹಾಳೆಗಳನ್ನು "ಕಾರ್ಟೂನು ಹಬ್ಬ"ದ ಆಯೋಜಕರೆ ಪೂರೈಕೆ ಮಾಡಲಿದ್ದು, ಚಿತ್ರ ಬಿಡಿಸಲು ಬೇಕಾಗುವ ಇತರ ಪರಿಕರಗಳನ್ನು ವಿಧ್ಯಾರ್ಥಿಗಳೇ ತರಬೇಕಾಗಿದೆ. 

ಚಿತ್ರದ ಶೈಲಿ: ಕಪ್ಪುಬಿಳುಪಿನಲ್ಲಿ ಅಥವಾ ಇತರ ಬಣ್ಣಗಳನ್ನು ಬಳಸಿ ಅಥವಾ ಡೈಲಾಗ್ ರಹಿತವಾಗಿಯೂ ಚಿತ್ರಗಳನ್ನು ರಚಿಸಬಹುದಾಗಿದೆ. ಬಹುಮಾನಗಳ ಘೋಷಣೆ ಮತ್ತು ವಿತರಣೆ ಡಿಸೆಂಬರ್ 10ರಂದು ಸಂಜೆ 5 ಗಂಟೆಗೆ ನಡೆಯಲಿದೆ ಮತ್ತು ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. 

Advertisement
Advertisement
Recent Posts
Advertisement