Advertisement

ಗಾಂಧಿ- ಅಂಬೇಡ್ಕರ್ ಶತ್ರುಗಳಲ್ಲ ಕೋಮುವಾದಿಗಳು ಮಿತ್ರರಲ್ಲ

Advertisement

ಜನಸಾಮಾನ್ಯರ ನಿತ್ಯದ ಬದುಕನ್ನು ಸುಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ಮರೆ ಮಾಚಲು ಕಾರ್ಪೊರೇಟ್-ಕೋಮುವಾದಿ ಮೈತ್ರಿಕೂಟ ನಮ್ಮನ್ನು ದಾರಿ ತಪ್ಪಿ ಸುತ್ತಲೇ ಇರುತ್ತದೆ. ಪ್ರಸಕ್ತ ವಿದ್ಯಮಾನಗಳು ಚರ್ಚೆಗೆ ಬಾರದಂತೆ ಪುರಾಣದ, ಇತಿಹಾಸದ ಯಾವುದೋ ವಿಷಯಗಳ ಸುತ್ತ ನಾವು ಗಿರಕಿ ಹೊಡೆಯುವಂತೆ ಮಾಡಲಾಗುತ್ತದೆ. ಅಯೋಧ್ಯೆಯ ರಾಮ ಮಂದಿರ, ಮಥುರಾದ ಕೃಷ್ಣ ದೇವಾಲಯ, ಕಾಶಿಯ ಶಿವದೇವಾಲಯಗಳ ವಿವಾದಗಳನ್ನು ಕೆರಳಿಸಿ ಅದರ ಸುತ್ತ ನಾವು ಗಾಣದ ಎತ್ತಿನಂತೆ ಸುತ್ತುವಂತೆ ಮಾಡಲಾಗುತ್ತದೆ. ಬಿಜೆಪಿ ಸತತವಾಗಿ ಗೆಲ್ಲುತ್ತಿರುವುದು ಇಂಥ ದಗಾಕೋರ ಆಟಗಳಿಂದ.

ಡಾ. ಅಂಬೇಡ್ಕರ್ ಮತ್ತು ಗಾಂಧಿ ಇವರಿಬ್ಬರೂ ಈಗಿಲ್ಲ. ಅವರು ಮಾಡಿಕೊಂಡ ಪುಣೆ ಒಪ್ಪಂದಕ್ಕೂ ಏಳು ದಶಕಗಳು ಗತಿಸಿದವು.ಅವರ ಆಗಿನ ಭಿನ್ನಾಭಿಪ್ರಾಯ ಮತ್ತು ವೈಮನಸ್ಸು ಆಗಿನ ಕಾಲಕ್ಕೇ ಮುಗಿಯಿತು. ಅಂದಿಗೂ ಇಂದಿಗೂ ಭಾರತದ ಮತ್ತು ಜಗತ್ತಿನ ಸ್ಥಿತಿಗತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಸವಾಲುಗಳು ನಮ್ಮ ಕಣ್ಣೆದುರು ಬಂದು ನಿಂತಿವೆ. ಗಾಂಧೀಜಿಯ ಸರ್ವೋದಯ ಸಿದ್ಧಾಂತ ಜಾಗತೀಕರಣದ ಲಾಭಕೋರತನದ ಸುಡು ಬೆಂಕಿಯಲ್ಲಿ ಬೆಂದು ಹೋಗುತ್ತಿದೆ. ಬಾಬಾಸಾಹೇಬರ ಮೀಸಲು ವ್ಯವಸ್ಥೆಯನ್ನೇ ಅಪ್ರಸ್ತುತ ಗೊಳಿಸುವ, ಸಂವಿಧಾನವನ್ನೇ ಬುಡಮೇಲು ಮಾಡಿ ಪಂಚಾಂಗವನ್ನು ದೇಶದ ಮೇಲೆ ಹೇರುವ ಮಸಲತ್ತು ಅವ್ಯಾಹತವಾಗಿ ನಡೆದಿದೆ. ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಗಾಂಧೀಜಿ ಮತ್ತು ಬಾಬಾಸಾಹೇಬರ ನಡುವೆ ಬೀದಿ ಕಾಳಗ ನಡೆದಿದೆಯೇನೋ ಎಂಬ ರೀತಿ ವಾಗ್ವಾದಗಳು ನಡೆಯುತ್ತಿವೆ.

ಸ್ವಾತಂತ್ರ್ಯ ಹೋರಾಟದ ಆ ದಿನಗಳಲ್ಲಿ ಗಾಂಧಿ ಮತ್ತು ಅಂಬೇಡ್ಕರ್‌ ನಡುವಿನ ಭಿನ್ನಾಭಿಪ್ರಾಯ ತಾತ್ವಿಕವಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಎಂಬುದಕ್ಕೆ ಗಾಂಧೀಜಿ ಮೊದಲ ಆದ್ಯತೆ ಆಗಿದ್ದರೆ, ಈ ಸ್ವಾತಂತ್ರ್ಯ ಬಂದರೂ ನನ್ನ ಸಮುದಾಯಗಳಿಗೆ ನೈಜ ಸ್ವಾತಂತ್ರ್ಯ ಸಿಗುವುದಿಲ್ಲ ಎಂಬುದು ಅಂಬೇಡ್ಕರ್ ಅವರ ನಿಲುವಾಗಿತ್ತು. ಸ್ವಾತಂತ್ರ್ಯದ ಗುರಿ ಸಾಧನೆಗಾಗಿ ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದಕ್ಕೆ ಬಾಪೂಜಿ ಅವರ ಮೊದಲ ಪ್ರಾಶಸ್ತ್ಯವಾಗಿತ್ತು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೆ ಅದೊಂದರಿಂದ ಮಾತ್ರ ದುಡಿಯುವ ದಲಿತ ಸಮುದಾಯಗಳಿಗೆ ಬಿಡುಗಡೆ ಸಿಗುವುದಿಲ್ಲ. ಸ್ವತಂತ್ರ ಭಾರತದಲ್ಲೂ ಅವರು ಶ್ರೇಣೀಕೃತ ಜಾತಿ ವ್ಯವಸ್ಥೆಯ ಗುಲಾಮಗಿರಿಯಲ್ಲೇ ನರಳಬೇಕಾಗುತ್ತದೆ. ಅದಕ್ಕಾಗಿ 'ಸ್ವತಂತ್ರ ಭಾರತದಲ್ಲಿ ನನ್ನ ಜನರಿಗೇನು' ಎಂಬ ಪ್ರಶ್ನೆಯನ್ನು ಬಾಬಾ ಸಾಹೇಬರು ಎತ್ತಿದರು. ಇದು ಸೂಕ್ತವೂ ಆಗಿತ್ತು. ಬ್ರಿಟಿಷರು ಮತ್ತು ಮೊಗಲರು ಬರುವ ಮೊದಲಿನಿಂದಲೂ ಯಾತನೆ ಪಡುತ್ತಿದ್ದ ಕರ್ಮ ಸಿದ್ಧಾಂತದಲ್ಲಿ ಅಗೋಚರ ಬೇಡಿಗಳಿಂದ ಬಂಧಿತರಾಗಿದ್ದ ನನ್ನ ಜನರಿಗೆ ಸ್ವಾತಂತ್ರ್ಯ ಯಾವಾಗ ಎಂದು ಪ್ರಶ್ನಿಸಿದ ಅವರು ಪಟ್ಟು ಹಿಡಿದರು. ಪುಣೆ ಒಪ್ಪಂದದ ಸಂದರ್ಭದಲ್ಲಿ ಉಪವಾಸ ಕುಳಿತಿದ್ದ ಗಾಂಧೀಜಿಯವರನ್ನು ಬದುಕಿಸಲು ಒಂದಿಷ್ಟು ರಾಜಿ ಮಾಡಿಕೊಂಡು ಅಂಬೇಡ್ಕರ್‌ ತಮ್ಮ ಗುರಿ ಸಾಧಿಸಿದರು. ಇವರಿಬ್ಬರ ನಡುವೆ ವೈಯಕ್ತಿಕ ಹಗೆತನ ಇರಲಿಲ್ಲ. ಶತಮಾನಗಳ ನೋವಿನಿಂದ ಅಂಬೇಡ್ಕರ್‌ ಗಾಂಧೀಜಿಯನ್ನು ಒರಟಾದ ಭಾಷೆಯಲ್ಲಿ ಬೈದರೂ ಅದರಲ್ಲಿ ನಂಜಿರಲಿಲ್ಲ. ಇದು ಗಾಂಧೀಜಿಗೂ ಗೊತ್ತಿತ್ತು. ಅಂತಲೇ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷತೆ ಪ್ರಶ್ನೆ ಎದುರಾದಾಗ ಗಾಂಧೀಜಿ ಬಾಬಾಸಾಹೇಬರ ಹೆಸರನ್ನು ಸೂಚಿಸಿದರು.

ಹಿಂದಿನದೇನೇ ಇರಲಿ ನಮ್ಮ ಇಂದಿನ ಸವಾಲುಗಳು ಮತ್ತು ಆದ್ಯತೆಗಳು ಯಾವುವು ಎಂಬುದನ್ನು ಮೊದಲು ಗುರುತಿಸಬೇಕು. ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಬಹುತ್ವದ ಬದುಕು ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ಆರ್ಥಿಕ, ಸಾಮಾಜಿಕ ಬಿಕ್ಕಟ್ಟು ಉಲ್ಬಣ ಗೊಂಡಿದೆ. ಇವುಗಳನ್ನು ಎದುರಿಸುವುದು ಆರೋಗ್ಯಕರ ಬದುಕಿಗಾಗಿ ಸ್ಪಂದಿಸುವ ಸಮಾನ ಮನಸ್ಕರ ಮೊದಲ ಆದ್ಯತೆ ಆಗಬೇಕು. ಪ್ರಸಕ್ತ ವರ್ತಮಾನದ ಬದುಕಿಗೆ ಸಂಬಂಧಪಡದ ವಿಷಯಗಳ ಸುತ್ತ ಗಾಳಿ ಗುದ್ದಾಟದಲ್ಲಿ ಪ್ರಯೋಜನವಿಲ್ಲ.

ಭಾರತ ಬ್ರಿಟಿಷ್ ವಸಾಹತುಶಾಹಿಯ ದಾಸ್ಯಕ್ಕೆ ಸಿಲುಕಿದ ಆ ದಿನಗಳಲ್ಲಿ ವಿದೇಶಿ ಆಳ್ವಿಕೆಯಿಂದ ಮೊದಲು ವಿಮೋಚನೆ ಎಂಬ ಗಾಂಧಿ ಮಾರ್ಗ ಅವರ ದೃಷ್ಟಿಯಿಂದ ಸರಿಯಾಗಿತ್ತು. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರುವ ಮುನ್ನವೇ ಇಲ್ಲಿ ಸ್ವಾತಂತ್ರ್ಯ ಹೋರಾಟದ ಸಂಚಲನ ಆರಂಭವಾಗಿತ್ತು. ಮಹಾರಾಷ್ಟ್ರದ ಬಾಲ ಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ಮೊದಲಾದವರು ಪ್ರತಿರೋಧದ ಧ್ವನಿ ಎತ್ತಿದ್ದರು. ಆದರೆ, ಅದು ಎಲ್ಲರನ್ನೂ ಒಳಗೊಂಡಿರಲಿಲ್ಲ. ವ್ಯಾಪಕ ಸ್ವರೂಪ ಪಡೆದಿರಲಿಲ್ಲ.ಗಣೇಶೋತ್ಸವದಂಥ ಕಾರ್ಯಕ್ರಮಗಳನ್ನು ಸಂಘಟಿಸಿದರೂ ಅದು ಎಲ್ಲ ಭಾರತೀಯ ಸಮುದಾಯಗಳನ್ನು ಒಳಗೊಂಡಿರಲಿಲ್ಲ.
ಯಾವುದೋ ಒಂದು ಧರ್ಮದವರನ್ನು ಕಟ್ಟಿಕೊಂಡು ಮಾಡುವ ಹೋರಾಟಗಳು ಯಶಸ್ವಿಯಾಗುವುದಿಲ್ಲ. ಯಾವುದೇ ಒಂದು ಸಮುದಾಯದ ಜನರು ದನಿಯೆತ್ತಿದರೆ ಬ್ರಿಟಿಷರು ಈ ದೇಶ ಬಿಟ್ಟು ಹೋಗುತ್ತಾರೆ ಎಂಬುದು ಸುಳ್ಳಾಯಿತು.ಅಂತಲೇ ಮಹಾತ್ಮಾ ಗಾಂಧಿಯವರು ಭಾರತಕ್ಕೆ ಬಂದ ಅನಂತರ ಮೊದಲು ದೇಶ ಪರ್ಯಟನೆ ಮಾಡಿದರು. ಭಾರತ ಎಂಬುದು ಆಗ ಇನ್ನೂ ಒಂದು ರಾಷ್ಟ್ರದ ಸ್ವರೂಪವನ್ನು ಪಡೆದಿರಲಿಲ್ಲ. ಊರಿಗೊಬ್ಬ ಪಟೇಲರು, ಗೌಡರು, ನಿರ್ದಿಷ್ಟ ಪ್ರದೇಶಕ್ಕೆ ಒಬ್ಬ ಪಾಳೆಯಗಾರ, ಅವನ ಮೇಲೊಬ್ಬ ರಾಜ. ಇದು ಅಂದಿನ ಭಾರತ, ಈ ನೆಲದಲ್ಲಿ ಒಂದೇ ಭಾಷೆಯನ್ನಾಡುವ, ಇಲ್ಲವೇ ಒಂದೇ ಆಹಾರ ಪದ್ಧತಿಯನ್ನು ಹೊಂದಿದ, ಒಂದೇ ಧರ್ಮದ, ಒಂದೇ ಜಾತಿಯ ಜನರಿಲ್ಲ. ಇಲ್ಲಿ ವಿಭಿನ್ನ ಭಾಷೆಗಳನ್ನಾಡುವ, ವಿಭಿನ್ನ ನಂಬಿಕೆಗಳ, ವಿಭಿನ್ನ ಧರ್ಮಗಳ, ಭಿನ್ನ ಆಹಾರ ಪದ್ಧತಿ ಹೊಂದಿದ ಜನರಿದ್ದಾರೆ ಎಂಬುದನ್ನು ಭಾರತ ಪರ್ಯಟನೆ ಮೂಲಕ ಅರಿತುಕೊಂಡ ಗಾಂಧೀಜಿ ಈ ನೆಲದ ಎಲ್ಲರನ್ನೂ ಬೆಸೆದು ಒಂದುಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಭಾರತ ಎಂಬುದು ಇಲ್ಲಿ ನೆಲೆಸಿರುವ ಎಲ್ಲಾ ಸಮುದಾಯಗಳಿಗೆ ಸೇರಿದ್ದು ಎಂದು ಪ್ರತಿಪಾದಿಸಿದರು.

ಸ್ವಾತಂತ್ರ್ಯ ಹೋರಾಟಕ್ಕೆ ಬಲ ತಂದು ಕೊಡಲು ಹಿಂದೂ-ಮುಸ್ಲಿಮ್ ಏಕತೆ ಅಗತ್ಯವಾಗಿದೆ ಎಂದು ಮನಗಂಡು ಆ ನಿಟ್ಟಿನಲ್ಲಿ ಸಾಕಷ್ಟು ಪರಿಶ್ರಮ ಪಟ್ಟರು. ಆದರೆ, ಭಾರತದಲ್ಲಿ ಶತಮಾನಗಳಿಂದ ನಾಯಿ ನರಿಗಳಿಗಿಂತ ಕಡೆಯಾಗಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದ ಅಸ್ಪೃಶ್ಯ ದಲಿತ ಸಮುದಾಯದ ನೋವು ಆರಂಭದಲ್ಲಿ ಗಾಂಧೀಜಿ ಗಮನಕ್ಕೆ ಬರಲಿಲ್ಲ. ಇದನ್ನು ಅವರ ಗಮನಕ್ಕೆ ಬರುವಂತೆ ಮಾಡಿದವರು ಮೇಧಾವಿ ಡಾ.ಬಾಬಾಸಾಹೇಬ ಅಂಬೇಡ್ಕರ್, ಲಂಡನ್‌ನಲ್ಲಿ ದುಂಡು ಮೇಜಿನ ಸಭೆಗೆ ಗಾಂಧೀಜಿ ಮತ್ತು ಜಿನ್ನಾ ಅವರಂತೆ ಡಾ. ಅಂಬೇಡ್ಕರ್ ಅವರೂ ಹೋಗಿದ್ದರು. ಭಾರತದ ವಂಚಿತ ದಲಿತ ಸಮುದಾಯದ ಪರವಾಗಿ ಅಲ್ಲಿ ಮಾತನಾಡಿದ ಅಂಬೇಡ್ಕರ್, 'ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಮೊದಲು ನನ್ನ ಜನರ ಬದುಕಿನ ಪ್ರಶ್ನೆ ಇತ್ಯರ್ಥವಾಗಬೇಕು' ಎಂದು ಪಟ್ಟು ಹಿಡಿದರು. ಉಳಿದವರು ಬ್ರಿಟಿಷರು ಬಂದ ಅನಂತರ ಸ್ವಾತಂತ್ರ್ಯವನ್ನು ಕಳೆದುಕೊಂಡರೆ ನನ್ನ ಜನ ಬ್ರಿಟಿಷರು ಬರುವುದಕ್ಕಿಂತ ಮೊದಲಿನಿಂದಲೂ ಅಂದರೆ ಸಾವಿರಾರು ವರ್ಷಗಳಿಂದಲೂ ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ. ಭಾರತದಿಂದ ಬ್ರಿಟಿಷರು ಹೋದ ಅನಂತರವೂ ನಮಗೆ ಸ್ವಾತಂತ್ರ್ಯ ಸಿಗುವುದಿಲ್ಲ. ಜಾತಿ ಪದ್ಧತಿಯ ಯಮ ಪಾಠದಲ್ಲಿ ನಲುಗಿದ ದಲಿತರ ವಿಮೋಚನೆ ಆಗುವುದಿಲ್ಲ. ಕಾರಣ ಸ್ವಾತಂತ್ರ್ಯಾನಂತರ ನನ್ನ ಜನರ ಸುರಕ್ಷತೆ, ಸಮಾನತೆಯ ಪ್ರಶ್ನೆ ಮೊದಲು ಇತ್ಯರ್ಥ ಆಗಬೇಕೆಂದು ಬಲವಾಗಿ ಪ್ರತಿಪಾದಿಸಿದರು. ಗಾಂಧೀಜಿಗೆ ಅಸ್ಪೃಶ್ಯತೆಯ ಅನುಭವವಿರಲಿಲ್ಲ. ಅಂತಲೇ ಬಾಬಾಸಾಹೇಬರ ಪ್ರತಿಪಾದನೆ ಸೂಕ್ತವಾಗಿತ್ತು.

ಇವರಿಬ್ಬರ ಮಾರ್ಗ ಸ್ಪಷ್ಟವಾಗಿತ್ತು. ತಮ್ಮ ಗುರಿ ಸಾಧನೆಗಾಗಿ ಹೊಂದಾಣಿಕೆ ಮಾಡಿಕೊಳ್ಳುವ, ಇನ್ನೊಬ್ಬರ ಅಭಿಪ್ರಾಯವನ್ನು ಗೌರವಿಸುವ ಮನೋಭಾವ ಮತ್ತು ಅನಿವಾರ್ಯತೆ ಮಹಾತ್ಮಾ ಗಾಂಧೀಜಿಯವರಿಗಿತ್ತು. ಅಂತಲೇ ಅಂಬೇಡ್ಕರ್ ಅವರು ಎತ್ತಿದ ಪ್ರಶ್ನೆಗಳಿಗೆ ಸ್ಪಂದಿಸಿದರು. ಮೀಸಲು ವ್ಯವಸ್ಥೆಗೆ ಸಂಬಂಧಿಸಿದಂತೆ ಪುಣೆಯಲ್ಲಿ ಹಲವಾರು ಸುತ್ತಿನ ಮಾತುಕತೆ ನಡೆದು ಕೊನೆಗೆ ಒಪ್ಪಂದಕ್ಕೆ ಸಮ್ಮತಿ ನೀಡಿದರು.

ಈ ಒಪ್ಪಂದದ ಬಗ್ಗೆ ಭಿನ್ನಾಭಿಪ್ರಾಯ ಇದ್ದರೂ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದ ಬಾಪೂಜಿ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಒಪ್ಪಂದಕ್ಕೆ ಒಪ್ಪಿಗೆ ನೀಡುವ ದೊಡ್ಡತನ ತೋರಿಸಿದರು. ಇದು ಯಾರೊಬ್ಬರ ಸೋಲು ಗೆಲುವಿನ ಪ್ರಶ್ನೆಯಲ್ಲ.ದೇಶದ ಹಿತದೃಷ್ಟಿಯಿಂದ ಇಬ್ಬರೂ ಕೈಗೊಂಡ ದಿಟ್ಟ ನಿರ್ಧಾರ.ನಮ್ಮ ಹಿಂದಿನ ರಾಷ್ಟ್ರ ನಾಯಕರಿಗೆ ಇಂಥ ಒಂದು ಪರಸ್ಪರ ತಿಳುವಳಿಕೆ ಇತ್ತು. ಆದರೆ, ಇದೇ ಹೊಂದಾಣಿಕೆ ಸಾವರ್ಕರ್ ಜೊತೆ ಮೇಲ್ಕಂಡ ಇಬ್ಬರಿಗೂ ಇರಲಿಲ್ಲ. ಸಾವರ್ಕರರ ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ವಿರೋಧಿಸಿದರು.

ಗಾಂಧಿ ಮತ್ತು ಅಂಬೇಡ್ಕರ್‌ ನಡುವಿನ ಭಿನ್ನಾಭಿಪ್ರಾಯಗಳನ್ನು ಅವರು ಬದುಕಿದ ಕಾಲ ಘಟ್ಟದಲ್ಲಿ ಇಟ್ಟು ಅಧ್ಯಯನ ಮಾಡಬೇಕು. ಅಂದಿನ ಅವರ ನಡುವಿನ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡು ಗಾಂಧೀಜಿ ಬಗ್ಗೆ ನಾವು ಈಗ ಇಂದಿನ ಬದಲಾದ ಸನ್ನಿವೇಶದಲ್ಲಿ ತಪ್ಪು ಕಲ್ಪನೆ ಹೊಂದುವುದು ಎಷ್ಟು ಸಮರ್ಪಕ? ಈಗ ನಮ್ಮ ಮುಂದಿರುವ ಸವಾಲು ಯಾವುದು? ಈಗ ನಮ್ಮ ನಡುವೆ ಬದುಕಿಲ್ಲದ ಮತ್ತು ಮೆದುಳಿಗೆ ವಿಷ ತುಂಬಿದ ಹೊಸ ಪೀಳಿಗೆಯ ದಾರಿ ತಪ್ಪಿದ ವಾಟ್ಸ್‌ಆ್ಯಪ್ ಪ್ರಚಾರದ ಇಂದಿನ ದಿನಗಳಲ್ಲಿ ಗಾಂಧೀಜಿ ಮತ್ತು ಬಾಬಾಸಾಹೇಬರ ನೈಜ ಅನುಯಾಯಿಗಳು ತಮ್ಮ ನಿಜವಾದ ಸೈದ್ಧಾಂತಿಕ ಶತ್ರು ಯಾರೆಂದು ಗುರುತಿಸಿಕೊಳ್ಳಬೇಕಾಗಿದೆ.

ಗಾಂಧಿಯವರಿಗಂತೂ ಈಗ ಅನುಯಾಯಿಗಳೇ ಇಲ್ಲ.ಆದರೂ ನಮ್ಮ ಪ್ರಧಾನಿ ಮತ್ತು ಇತರ ಅತಿ ಗಣ್ಯರು ವಿದೇಶಕ್ಕೆ ಹೋದರೆ ಗಾಂಧಿ ದೇಶದಿಂದ ಬಂದಿದ್ದೇವೆ ಎಂದು ಹೇಳುತ್ತಾರೆಯೇ ವಿನಃ ಗೋಡ್ಸೆ ದೇಶದಿಂದ ಬಂದಿದ್ದೇವೆ ಎಂದು ಹೇಳುವುದಿಲ್ಲ.ಅವರಿಗೆ ವಿದೇಶದಲ್ಲಿ ಗಾಂಧೀಜಿ ಬೇಕು, ಸ್ವದೇಶದಲ್ಲಿ ಬೇಡ.

ಆದರೆ, ಇದೇ ಪರಿಸ್ಥಿತಿ ಎಷ್ಟು ದಿನ ಇರುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕ ಗಾಂಧೀಜಿಯವರಾದರೆ ಸ್ವತಂತ್ರ ಭಾರತಕ್ಕೆ ಒಂದು ಸಂವಿಧಾನವನ್ನು ನೀಡಿದವರು ಅಂಬೇಡ್ಕರ್. ಈಗ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವೇ ಅಪಾಯದಲ್ಲಿದೆ. ಇಂಥ ಸಂಕಷ್ಟದ ಸನ್ನಿವೇಶದಲ್ಲಿ ಸಂವಿಧಾನವನ್ನು ಮತ್ತು ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳನ್ನು ಒಪ್ಪಿ ಕೊಳ್ಳುವವರು ಒಂದಾಗಬೇಕಾಗಿದೆ. ಒಂದಾಗದಿದ್ದರೂ ಕಿತ್ತಾಡುವುದನ್ನು ನಿಲ್ಲಿಸಬೇಕು.

ಗಾಂಧಿ ಚರಿತ್ರೆಯನ್ನು ನೋಡಿದರೆ ಅವರು ಬದಲಾಗುತ್ತ ಬಂದರು.ಮೊದಲು ಅಂತರ್ಜಾತಿ ಮತ್ತು ಅಂತರ್ಧಮೀಯ ಮದುವೆಗಳನ್ನು ವಿರೋಧಿಸುತ್ತಿದ್ದ ಗಾಂಧೀಜಿ ಕ್ರಮೇಣ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡರು.

ತಮ್ಮ ಆಶ್ರಮದಲ್ಲೇ ಜಾತಿ ರಹಿತ ಮದುವೆಗಳನ್ನು ಮಾಡಿಸಿದರು.ನಮ್ಮ ಹಾವೇರಿ ಜಿಲ್ಲೆಯ ಸಂಗೂರಿನ ಸ್ವಾತಂತ್ರ್ಯ ಹೋರಾಟಗಾರ ಕರಿಯಪ್ಪ ಯರೆಸೀಮಿ ಅವರು ಗಾಂಧಿ ಆಶ್ರಮದಲ್ಲೇ ಆ ಕಾಲದಲ್ಲಿ ದಲಿತ ಯುವತಿಯೊಂದಿಗೆ ವಿವಾಹವಾದರು. ಕೊನೆಗೆ ಗಾಂಧೀಜಿ ಎಲ್ಲಿಯವರೆಗೆ ಹೋದರೆಂದರೆ ಸ್ವಜಾತಿಯ ಮದುವೆಗಳಿಗೆ ಅವರು ಹೋಗುತ್ತಿರಲಿಲ್ಲ.

ಬಾಬಾಸಾಹೇಬರಂತೂ ತುಂಬಾ ಎತ್ತರದ ಶ್ರೇಷ್ಠ ಮಾನವ. ಅವಮಾನಗಳನ್ನು ನುಂಗಿಕೊಂಡೇ ಬೆಳೆದ ಅವರು ಸಾವಿರಾರು ಅಡ್ಡಿ ಆತಂಕಗಳನ್ನು ದಾಟಿ ವಿದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡಿಬಂದರು. ವಕೀಲಿ ವೃತ್ತಿಗೆ ಅಂಟಿಕೊಂಡಿದ್ದರೆ ಕೋಟ್ಯಂತರ ರೂ. ಗಳಿಸಬಹುದಾಗಿದ್ದ ಅವರು ದೇಶಕ್ಕಾಗಿ ,ಜನರಿಗಾಗಿ ತಮ್ಮನ್ನು ತಾವು ದೀಪದಂತೆ ಸುಟ್ಟುಕೊಂಡು ಬೆಳಕು ನೀಡಿದರು. ಸಾಲದಲ್ಲೇ ಕೊನೆಯುಸಿರೆಳೆದರು. ಇದು ಗೊತ್ತಿದ್ದ ಗಾಂಧೀಜಿ ಅಂಬೇಡ್ಕರ್ ಅವರನ್ನು ತುಂಬಾ ಗೌರವಿಸುತ್ತಿದ್ದರು. ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿ ಭಾರತದ ಎಲ್ಲಾ ಸಮುದಾಯಗಳ ಉನ್ನತಿಗೆ ಅಗತ್ಯವಾದ ಅಂಶಗಳಿವೆ. ತನ್ನನ್ನು, ತನ್ನ ಸಮುದಾಯವನ್ನು ಶತಮಾನಗಳಿಂದ ತುಳಿದ ಜಾತಿ, ಸಮುದಾಯಗಳ ಬಗೆಗೂ ಅವರಿಗೆ ದ್ವೇಷವಿರಲಿಲ್ಲ. ಆದರೆ, ಈ ಸಮುದಾಯಗಳ ಜಾತಿವಾದಿ ಮನೋಭಾವ ಇಂದಿಗೂ ಬದಲಾಗಿಲ್ಲ.

ಗಾಂಧೀಜಿ ಧಾರ್ಮಿಕ ವ್ಯಕ್ತಿಯಾಗಿದ್ದು ನಿಜ. ಆರಂಭದಲ್ಲಿ ವರ್ಣಾಶ್ರಮ ಪದ್ದತಿಯಲ್ಲಿ ಅವರಿಗೆ ನಂಬಿಕೆಯಿತ್ತು. ಆದರೆ ಅವರು ಕೋಮುವಾದಿ ಆಗಿರಲಿಲ್ಲ. ಕೋಮುವಾದಿ ಆಗಿರಲಿಲ್ಲವೆಂದೇ ಅವರು ಗೋಡ್ಸೆಯ ಗುಂಡಿಗೆ ಬಲಿಯಾದರು. ಗಾಂಧೀಜಿ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ಈ ಅಂಶಗಳನ್ನೆಲ್ಲ ನಾವು ಗಮನಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಬಗ್ಗೆ ಸಮಚಿತ್ತದ ಅಧ್ಯಯನ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ಕೇಶವ ಮಳಗಿ ಅವರು ಬರೆದ 'ದಾರಿ ಬೇರೆ ಗುರಿ ಒಂದೇ' ಎಂಬ ಪುಸ್ತಕ ಮತ್ತು ಡಿ.ಎಸ್.ನಾಗಭೂಷಣ ಅವರ 'ಗಾಂಧಿ' ಪುಸ್ತಕಗಳು ಹೊಸಬೆಳಕನ್ನು ಚೆಲ್ಲುತ್ತವೆ. ಈ ನಿಟ್ಟಿನಲ್ಲಿ ಬಹುತ್ವಭಾರತದ ಉಳಿವಿಗೆ ಗಾಂಧಿ ಮತ್ತು ಅಂಬೇಡ್ಕರ್‌ ಅವರನ್ನು ಮುಂದಿಟ್ಟುಕೊಂಡು ಹೊಸ ದಾರಿಯನ್ನು ಕಂಡುಕೊಂಡು ಸಮತೆಯ ಗುರಿಯನ್ನು ಸಾಧಿಸಬೇಕಾಗಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ, ಮತ್ತೆ ಅವರು ಅಧಿಕಾರಕ್ಕೆ ಬರುವ ಸೂಚನೆಗಳು ಗೋಚರಿಸುತ್ತಿವೆ. ಅವರು ಮತ್ತೆ ಬಂದರೆ ಅಪಾಯ ತಪ್ಪಿದ್ದಲ್ಲ. 2025 ವರ್ಷ, ಆರೆಸ್ಸೆಸ್ ಸ್ಥಾಪನೆಯಾಗಿ ನೂರು ವರ್ಷ ತುಂಬುತ್ತದೆ. ಈ ನೂರನೇ ವರ್ಷದ ಸಂಭ್ರಮಾಚರಣೆಯ ಭಾಗವಾಗಿ ಭಾರತವನ್ನು 'ಹಿಂದೂರಾಷ್ಟ್ರ ಎಂದು ಘೋಷಣೆ ಮಾಡುವ, ಸಂವಿಧಾನ ವನ್ನು ನಿಷ್ಠಿಯಗೊಳಿಸುವ ಗಂಡಾಂತರ ಕಣ್ಣೆದುರಿಗೆ ಇದೆ. ಇಂಥ ಸನ್ನಿವೇಶದಲ್ಲಿ ಬಹುತ್ವ ಭಾರತದ ಪರವಾಗಿರುವ ಎಲ್ಲ ವ್ಯಕ್ತಿ, ಶಕ್ತಿಗಳು ಒಂದಾಗಬೇಕಾಗಿದೆ.

(ಬರಹ: ಸನತ್ ಕುಮಾರ ಬೆಳಗಲಿ. ಕೃಪೆ: ಪ್ರಚಲಿತ ಅಂಕಣ/ ವಾರ್ತಾಭಾರತಿ ೧೮.೧೨.೨೦೨೩)

Advertisement
Advertisement
Recent Posts
Advertisement