Advertisement

ಕಾಟೇರ ಸಿನೇಮಾ: ನೆಹರೂ, ಇಂದಿರಾ ಮತ್ತು ಕಾಂಗ್ರೆಸ್ ಕುರಿತಾದ ಅಸಹನೆಗೆ ಉತ್ತರವೇ?

Advertisement

ಬರಹ: ಸುರೇಶ ಎನ್. ಶಿಕಾರಿಪುರ

ಈ ನಟ್ಟ ನಡು ರಾತ್ರಿ ಈ ಲೇಖನ ಬರೆಯುತ್ತಿದ್ದೇನೆ. ಈ ಲೇಖನ ಬರೆಯದೇ ಮಲಗಲು ಮನಸ್ಸೇ ಬರುತ್ತಿಲ್ಲ. ಮನಸ್ಸೇಕೆ ನಿದ್ದೆಯೇ ಬರುತ್ತಿಲ್ಲ. ಬರೆಯದೇ ಹಾಗೆ ಮಲಗಿದರೆ ಅದು ಆತ್ಮವಂಚನೆಯಾದೀತು ಅನಿಸುತ್ತಿದೆ. ನೋಡಿದ ಕ್ಷಣದಿಂದ ಕಾಟೇರ ಸಿನೇಮಾ ಮನಸನ್ನು ಕಲಕಿ ಕಾಡತೊಡಗಿದೆ.‌‌ ಈಗ ನೇರವಾಗಿ ವಿಷಯಕ್ಕೆ ಬರುತ್ತೇನೆ.‌.. ಬಹಳ ವರ್ಷಗಳ ಬಳಿಕ ನಮ್ಮೂರಿನ ಟಾಕೀಸಿಗೆ ಹೋಗಿದ್ದೆ. ಕಾಟೇರ ಸಿನಿಮಾ ನೋಡಿ ಬಂದೆ‌. ಬಿಟ್ಟಕಣ್ಣು ಬಿಟ್ಟುಕೊಂಡು, ನೆಟ್ಟ ಮನಸ್ಸು ನೆಟ್ಟುಕೊಂಡು ಸಿನಿಮಾ ನೋಡಿ ಬಂದೆ. ಏನೆಲ್ಲಾ ಚಿತ್ರಗಳು ಕಣ್ಣಮುಂದೆ ಸುಳಿದು ಹೋದವು ನನಗೆ. ಚರಿತ್ರೆಯ ಒಂದೊಂದೇ ಘಟನೆಗಳು ಕಥನಗಳು ಪರದೆಯ ಮೇಲೆ ಮೂಡಿ ಹೋದಂತೆ ಕಾಡ ತೊಡಗಿವೆ.

ತೆಲುಗು, ಮಲೆಯಾಳಿ ಚಿತ್ರರಂಗದ ಗಾಳಿ ಕನ್ನಡದಲ್ಲಿ ಬೀಸಲು ಆರಂಭಿಸಿದ್ದು ಇದೇ ಮೊದಲಲ್ಲವಾದರೂ ಕನ್ನಡಕ್ಕೆ ಕಾಲಕ್ಕೆ ಬೇಕಾದ ಹೊಸ ಮಾದರಿಯ ಕ್ರಾಂತಿಕಾರಿ ಹೆಜ್ಜೆಯನ್ನು 'ಕಾಟೇರ' ಸ್ವಷ್ಟವಾಗಿ ಇಟ್ಟು ನಿರೂಪಿಸಿದೆ. ಈ ಸಿನಿಮಾದ ನಿರ್ದೇಶಕರಿಗೂ, ಚಿತ್ರಕತೆ ಬರೆದ ಸೂಕ್ಷ್ಮ ಮನಸಿಗೂ, ಮಾಗುತ್ತಿರುವ ನಟ ಕಾಟೇರ (ದರ್ಶನ್) ಹೊಸ ಪ್ರತಿಭೆ ಜ್ಯೂನಿಯರ್ ಮಾಲಾಶ್ರೀ ಅವರಿಗೆ ಸಿನಿಮಾದ ಪ್ರತಿಯೊಬ್ಬ ನಟರಿಗೂ ನನ್ನ ನಮನಗಳು.

ಕನ್ನಡದಲ್ಲಿ ಈ ಹಿಂದೆ ಜಮೀನ್ದಾರಿ ಪದ್ಧತಿಯ ಕ್ರೌರ್ಯ ಬಂಡವಾಳಶಾಹಿಯ ಕುತಂತ್ರ ಮತ್ತು ಅಮಾನುಷತೆಯನ್ನು ಅನಾವರಣಗೊಳಿಸುವ ಹಲವು ಚಿತ್ರಗಳು ತೆರೆ ಕಂಡು ಯಶಸ್ವಿಯಾಗಿವೆ. ಭೂಮಾಲಕನ ಸಿರಿಗೆ ಸವಾಲೆಸೆಯುವ ಡಾ. ರಾಜ್‍ಕುಮಾರ್ ಅವರ 'ಸಂಪತ್ತಿಗೆ ಸವಾಲ್', ರೈತರು ಕಾರ್ಮಿಕರ ಮೇಲಾಗುವ ಅನ್ಯಾಯದ ವಿರುದ್ಧ ಹೋರಾಡುವ ಅವರದೇ ಅಭಿ‌ನಯದ 'ಧ್ರುವತಾರೆ', ಪುಟ್ಟಣ್ಣ ಕಣಗಾಲರ 'ಪಡುವಾರಳ್ಳಿ ಪಾಂಡವರು', ಪಾಳೆಗಾರಿಕೆಯ ದುರುಳತೆಯ ಅನಾವರಣ ಗೊಳಿಸುವ ಶಂಕರ ನಾಗ್ ನಿರ್ದೇಶಿಸಿ ನಟಿಸಿರುವ ಅವರ ಮೊದಲ ಚಿತ್ರ 'ಒಂದಾನೊಂದು ಕಾಲದಲ್ಲಿ', ಜಮೀನ್ದಾರಿ ಕ್ರೌರ್ಯದ ರಕ್ತಸಿಕ್ತ ಚರಿತ್ರೆ ಹೇಳುವ ಶಿವರಾಜ್‌ಕುಮಾರ್ ಅಭಿ‌ನಯದ, ಕುಂ. ವೀರಭದ್ರಪ್ಪ ಅವರ ಬೇಲಿಯ ಹೂಗಳು ಕಾದಂ‌ಬರಿ ಆಧಾರಿತ 'ದೊರೆ', ಅವರದೇ ಬರಗೂರು ರಾಮಚಂದ್ರಪ್ಪ ನಿರ್ದೇಶ‌ನದ 'ಹಗಲುವೇಷ', ದೇವರಾಜ್ ಅಭಿನಯದ ಉತ್ತರ ಕರ್ನಾಟಕದ ಭೂಮಾಲಕ ವರ್ಗದ ಬೆಚ್ಚಿ ಬೀಳಿಸುವ ರೈತರು ಕೂಲಿಗಳ ಮೇಲಿನ ದೌರ್ಜನ್ಯದ 'ಹುಲಿಯಾ' ರಾಜಕೀಯ ರಾಕ್ಷಸೀಯತೆಯ ಚಿತ್ರಣದ ಅಂಬರೀಶ್ ಅಭಿನಯದ 'ಚಕ್ರವ್ಯೂಹ', ಇಬ್ಬರು ಫ್ಯೂಡಲ್ ಗಳ ನಡುವಿನ ತಿಕ್ಕಾಟದಲ್ಲಿ ಕೆಳ ಜಾತಿಯ ದಾಸಯ್ಯನೊಬ್ಬ ಚುನಾವಣೆಯಲ್ಲಿ ಗೆದ್ದಾಗ್ಯೂ ಅನುಭವಿಸುವ ಉಭಯ ಸಂಕಟದ 'ಶಂಕನಾದ' ಮೊದಲಾದ ಸಿನಿಮಾಗಳ ತೆರೆಕಂಡು ಬಹು ದೊಡ್ಡ ಯಶಸ್ಸು ಪಡೆದಿವೆ. ಸಮಾಜದ ಮೇಲೆ ಪರಿಣಾಮವನ್ನೂ ಬೀರಿವೆ..

ಟಾಕೀಸಿನ ತೆರೆಯ ಮೇಲೆ ಕಾಟೇರದ ಒಂದೊಂದು ದೃಶ್ಯಗಳು ಮೂಡುವಾಗಲೂ ನನಗೆ ಆಂಧ್ರದ ರಾಯಲಸೀಮಾ, ಕರ್ನಾಟಕದ ದಕ್ಷಿಣ, ಉತ್ತರ ಮತ್ತು ಮಲೆನಾಡಿನ ಭೂಮಾಲಕ ವರ್ಗದ ಕ್ರೌರ್ಯ, ಬಿಹಾರ ಉತ್ತರ ಪ್ರದೇಶದ ಚಂಬಲ್ ಕಣಿವೆಯ ದಂಗೆಕೋರರು ಅಲ್ಲಿ ನೆಲದ ದೊರೆಗಳ ಅಟ್ಟಹಾಸ, ಬೆಲ್ಚಿಯ ಘಟನೆ, ಬದನವಾಳು, ಊನಾ, ಕಂಬಾಲಪಲ್ಲಿ, ಕೈರ್ಲಾಂಜಿಗಳ ಮರೆಯಲಾಗದ ಮೇಲ್ಜಾತಿಗಳ ಕ್ರೌರ್ಯ, ನರಗುಂದದ ರೈತ ಬಂಡಾಯ, ಕಾಗೋಡು ಚಳುವಳಿ, ಸಂಡೂರಿನ ಭೂ ಹೋರಾಟ, ಎಲ್ಲವೂ ಹಾದು ಹೋದವು. ಎದೆ ಇರಿದವು‌ ಹೃದಯ ಕುದಿಸಿದವು, ಕಣ್ಣುಗಳ ಬೆಚ್ಚಗೆ ನೆನೆಸಿದವು. ಇದೆಲ್ಲಾ ಅರ್ಥವಾಗಲಿಕ್ಕೆ ಪ್ರತಿಯೊಬ್ಬರೂ ನಮ್ಮ 'ಕಾಟೇರ' ಸಿನಿಮಾ ನೋಡಲೇಬೇಕು.

ಕಾಟೇರ ನೋಡುತ್ತಾ ನನಗೆ ಹೈದರಾಲಿ ಟಿಪ್ಪೂ ಸುಲ್ತಾನ್ ಕಣ್ಣಮುಂದೆ ಬಂದರು. ರೈತರ, ಗೇಣಿದಾರರ, ಕೂಲಿಗಳ, ಕೈದಿಗಳ, ಗುಲಾಮರ ಪಾಲಿನ ರಾಹು -ಕೇತುಗಳಾಗಿದ್ದ ಸಾವಿರಾರು ಜನ ಜಮೀನ್ದಾರರು, ದೇಸಾಯಿಗಳು, ನೂರಾರು ಜನ ಪಾಳೆಗಾರರ‌ನ್ನು ಅವರು ಸರ್ವನಾಶ ಮಾಡಿ ಹೆಡೆಮುರಿ ಕಟ್ಟಿದ್ದರು. ಇದು ಚಿಕ್ಕದೇವರಾಜ ಒಡೆಯ‌ನಿಂದ ಆರಂಭವಾಗಿದ್ದರೂ ಯಾವ ಮುಲಾಜೂ ಇಲ್ಲದೇ ರಕ್ತ ಪಿಪಾಸುಗಳಾಗಿದ್ದ ಅವರ ಗರ್ವವನ್ನು ಸೆದೆಬಡಿದು ಅವರ ಅಧಿಕಾರ ಮುರಿದು, ಅವರಿಂದ ಲಕ್ಷಾಂತರ ಎಕರೆ ಭೂಮಿಯನ್ನು ಕಿತ್ತುಕೊಂಡು ರೈತರನ್ನು ಗೇಣಿದಾರರನ್ನು ನೆಲವೇ ಇಲ್ಲದವರನ್ನು ನೆಲದೊಡೆಯರ‌ನ್ನಾಗಿಸಿದ್ದ ಆ ಇಬ್ಬರು ಸುಧಾರಕರನ್ನು ಈ ಸಿನಿಮಾ ಕಣ್ಮುಂದೆ ತಂದಿತು. ಕಾಟೇರಕ್ಕೂ ಹೈದರಾಲಿ ಟಿಪ್ಪುವಿಗೂ ಏನು ಸಂಬಂಧ ಎಂದು ಯಾರಿಗಾದರೂ ಅನಿಸಬಹುದು. ಆದರೆ ಕಾಟೇರ ಸಿನಿಮಾ ತೋರಿಸುತ್ತಿರುವುದು ಪರೋಕ್ಷವಾಗಿ ಚರಿತ್ರೆಯಲ್ಲಿ ಸೊಕ್ಕಿ ಮೆರೆದಿದ್ದ ಈ ಭೂಮಾಲಕ ವರ್ಗದ ಕಲ್ಪನಾತೀತವಾದ ಭಯಾನಕ ಚಿತ್ರಗಳನ್ನೇ. ಆಳುವ ವರ್ಗ ಊಳುವ ವರ್ಗದ ಪರ ನಿಂತರೆ ದೇಶದ ಬಹುದೊಡ್ಡ ಆರ್ಥಿಕ ಸಾಮಾಜಿಕ ಕ್ರಾಂತಿಯಾಗಿ ದೇಶ ಮುನ್ನಡೆ ಸಾಧಿಸಬಲ್ಲದು ಎಂಬುದಕ್ಕೆ ಹೈದರ್ ಟಿಪ್ಪು ಮಾತ್ರವಲ್ಲ ನೆಹರೂ, ಇಂದಿರಾಗಾಂಧಿ, ದೇವರಾಜ ಅರಸು ಅಂತವರು ತೋರಿಸಿಕೊಟ್ಟಿದ್ದಾರೆ‌.

ಆಳುವ ಸರ್ಕಾರಗಳೇ ಬಂಡವಾಳ ಶಾಹಿ ಜೊತೆ, ಭೂಮಾಲಕ ವರ್ಗದ ಜೊತೆ ಶಾಮೀಲಾದರೆ ದುಡಿಯುವ ರೈತರು ಮತ್ತು ಕಾರ್ಮಿಕ ವರ್ಗ ಹೇಗೆ ಬಲಿಪಶುವಾಗಿ ತಲೆ ಕೊಡಬೇಕಾಗುತ್ತದೆ ಎಂಬುದನ್ನು ಈಗಿನ ಪ್ರಸ್ತುತ ಭಾರತದ ಸ್ಥಿತಿ ಪ್ರತ್ಯಕ್ಷವಾಗಿ ತೋರಿಸುತ್ತಿದೆ. ಜಾತಿ ಶಕ್ತಿಗಳು, ಧಾರ್ಮಿಕ ಶಕ್ತಿಗಳು, ಭೂಮಾಲಕರು, ದೈತ್ಯ ಬಂಡವಾಳಶಾಹಿಗಳು ಈ ನಮ್ಮ ದುಡಿಯುವ ವರ್ಗವನ್ನು ಮತ್ತೆ ಮಧ್ಯಯುಗದ ಪಾಳೆಗಾರಿ ಸಂಕೋಲೆಗೆ ತಳ್ಳ ತೊಡಗಿದೆ. ಈಗಿನ ತಲೆಮಾರಿಗೆ ತಮ್ಮ ಅಜ್ಜ ಅಜ್ಜಿಯರು ಏನಾಗಿದ್ದರು? ಎಂಥಾ ಬಟ್ಟೆ ಉಡುತ್ತಿದ್ದರು? ಹೊಲದ ತುಂಬಾ ಬೆಳೆ ಬೆಳೆದರೂ ಹೊಟ್ಟೆಗೆ ಗಂಜಿ ಇಲ್ಲದ ಸ್ಥಿತಿ ಅವರಿಗೆ ಯಾರು ಕರುಣಿಸಿದ್ದರು? ಅವರಿಗೆ ಭೂಮಿ ಕೊಟ್ಟವರು ಯಾರು? ಅವರು ಭೂಮಿಯ ಹಕ್ಕುದಾರರಾದದ್ದು ಹೇಗೆ? ಯಾರಿಂದ ಭೂಮಿ ದಕ್ಕಿತು? ಎಂಬ ಯಾವ ವಿಚಾರಗಳೂ ಗೊತ್ತಿಲ್ಲ.‌ ಕಾಟೇರ ಅದನ್ನು ಗೊತ್ತು ಮಾಡಿಸುತ್ತದೆ.
1951 ಪೂರ್ವದಲ್ಲಿ ಈ ದೇಶದ ಸುಮಾರು 80% ಭೂಮಿಯ ಮಾಲೀಕರು ಕೇವಲ ಹತ್ತೊ ಹದಿನೈದೊ ಪರ್ಸೆಂಟ್ ಇರುವ ಮೇಲ್ಜಾತಿ ಮೇಲ್ ವರ್ಗದವರ ಸ್ವತ್ತಾಗಿತ್ತು. ಇನ್ನು 80% ಜನಕ್ಕೆ ಅವರುಳುವ ಭೂಮಿಯ ಹಕ್ಕೇ ಅವರಿಗಿರಲಿಲ್ಲ‌. ರಕ್ತ ಪಿಪಾಸುಗಳಾಗಿದ್ದ ಈ ಭೂಮಾಲಕ ವರ್ಗದಿಂದ ಭೂಮಿಯನ್ನು ಕಸಿದು ಉಳುವ ಗೇಣಿದಾರರಿಗೆ ಹಂಚುವ ಅಂದಿನ ನೆಹರೂ ಸರ್ಕಾರದ ನಿರ್ಧಾರ ಈ ದೇಶದ ಬಹು ದೊಡ್ಡ ಕ್ರಾಂತಿಕಾರಿ ನಿರ್ಣಯ.

(ಇಂದಿರಾ ಗಾಂಧಿ)

ದೇಶದಾದ್ಯಂತ ಈ ಜಮೀನ್ದಾರಿಗಳ ವಿರುದ್ಧ ಕಮ್ಯುನಿಷ್ಟ್ ಪಕ್ಷಗಳು ಸಂಘಟನೆಗಳು ಬೌದ್ಧಿಕ ಮತ್ತು ಶಸಸ್ತ್ರ ಬಂಡಾಯವನ್ನು ಹೂಡಿ ನಡೆಸಿರುವ ಹೋರಾಟಗಳು ಅತ್ಯಂತ ಕೆಂಪು ಕೆಂಪಾಗಿವೆ. ರಕ್ತ ಹರಿಸದೇ ಅಥವಾ ರಕ್ತ ಹರಿಯದೇ ಬಲಿತ ವರ್ಗ ಬಗ್ಗಿಲ್ಲ. ಕಾಟೇರ ಚಿತ್ರಿಸಿರುವುದು ಇದನ್ನೇ. ಭಾರತದ ಭೂ ಸುಧಾರಣಾ ಕಾಯ್ದೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಂದದ್ದು ಶ್ರೀಮತಿ ಇಂದಿರಾಗಾಂಧಿಯವರ ಎದೆಗಾರಿಕೆಯ ನಿರ್ಧಾರದಿಂದ‌. ಅದು ಭಾರತದ ಉಳಿದೆಲ್ಲ ರಾಜ್ಯಗಳಿಗಿಂತ ಪರಿಣಾಮಕಾರಿಯಾಗಿ ಜಾರಿಯಾದದ್ದು ಕರ್ನಾಟಕದಲ್ಲಿ ಅಂದಿನ ಮುಖ್ಯಮಂತ್ರಿಯವರಾಗಿದ್ದ ಡಿ. ದೇವರಾಜ ಅರಸರಿಂದ. ಹಿಂದೆ ರಾಜರು, ಬ್ರಿಟಿಷರಗಳ ಕೃಪಾಶೀರ್ವಾದದಿಂದ ಸಾವಿರಾರು ಎಕರೆ ಭೂಮಿಯ ಒಡೆಯರಾಗಿ, ಇಡೀ ವ್ಯವಸ್ಥೆಯನ್ನು ತಮ್ಮ ಮುಷ್ಠಿಯಲ್ಲಿ ಇಟ್ಟುಕೊಂಡು ನಡೆಸಬಾರದ ಮಾನವ ಕ್ರೌರ್ಯ ನಡೆಸುತ್ತಿದ್ದ ಧಣಿಗಳೆಲ್ಲಾ ಭೂಮಿಯನ್ನು ಗೇಣಿದಾರರಿಗೆ ಬಿಟ್ಟುಕೊಡುವ ಸಂದರ್ಭ ಬಂದಾಗ ನಡೆಸಿರುವ ದೌರ್ಜ‌ನ್ಯಗಳು ಅದರ ರೀತಿಗಳು ಅಂತಿಂಥವಲ್ಲ. ಈಗಲೂ ಸಾವಿರಾರು ಎಕರೆ ಭೂಮಿಯ ಒಡೆಯರು ಪ್ರತಿ ತಾಲ್ಲೂಕಿಗೂ ಹತ್ತಾರು ಜನ ಸಿಕ್ಕಾರು.

(ದೇವರಾಜ್ ಅರಸ್)

ನನ್ನ ಪರಿಚಯದ ಭೂಮಾಲಕನೊಬ್ಬನ ಜೊತೆ ಚುನಾವಣೆಯೊಂದರಲ್ಲಿ ನಮ್ಮ ತಾಲ್ಲೂಕಿನ ಅವರ ಭಾಗವನ್ನು ಸುತ್ತಾಡುವಾಗ ದಲಿತರ ಕೇರಿಗಳು ಹಳ್ಳಿಗಳಿಗೆ ಓಡಾಡುವಾಗ ನಮ್ಮನ್ನು ಅವನನ್ನು ಕಂಡು ಮಾತಾಡಿಸಲು ಬರುವ ಹಳ್ಳಿಗರಲ್ಲಿ ಅನೇಕ ಹೆಣ್ಣುಮಕ್ಕಳು ಆತನಿಗೆ 'ಗೌಡ್ರೇ' ಎಂದು ತಲೆ ಬಾಗಿಸಿ ವಿನಯ ತೋರಿಸೋರ. ಇವನು ನನಗೆ, 'ನೋಡ್ರಿ ಸುರೇಶ್ ಅವ್ರೇ... ಅವಳೈದಾಳಲ್ರಿ ಅವಳನ್ನ ನಮ್ಮಜ್ಜ ಇಟ್ಕೊಂಡಿದ್ದರಿ'. 'ಇವಳ ಅವ್ವನ್ನ ಇಟ್ಕೊಂಡದ್ದರಿ.' 'ಇಕಿ ಐದಾಳಲ್ರೀ ಇಕಿ.. ಇಕಿ ನಮ್ಮಜ್ಜಗೆ ಹುಟ್ದಾಕಿರಿ' ಎಂದು ಭೂಮಾಲಕ‌ನಾಗಿದ್ದ ತನ್ನಜ್ಜ‌ನ ಕಾಮ ಕ್ರೌರ್ಯದ ಸಂಗತಿಗಳನ್ನು ಲಜ್ಜೆಗೆಟ್ಟು ಹೇಳುತ್ತಿದ್ದ. ಮತ್ತೆ ದೇವರಾಜ ಅರಸರನ್ನು ಉಳುವವನೇ ಹೊಲದೊಡೆಯ ಕಾನೂನು ಜಾರಿಗೆ ತಂದದ್ದಕ್ಕಾಗಿ ವಿರೋಧಿಸಿ ಅವನ ಅಜ್ಜ ಬರೆದಿದ್ದ ಒಂದು ದ್ವೇಷಪೂರಿತ ಪತ್ರವನ್ನೂ ತೋರಿಸಿದ್ದ‌. ಇವನೂ ಆ ಫ್ಯೂಡಲ್ ಗುಣಗಳಿಂದ ಹೊರತೇನೂ ಆದವನಲ್ಲ. ಆ ಎಲ್ಲ ಲಜ್ಜೆಗೆಟ್ಟ ಅಮಾನುಷ ಗುಣಗಳನ್ನು ಈಗಲೂ ಆ ವರ್ಗ ಉಸಿರಾಡುತ್ತಿದೆ. ಇದೆಲ್ಲದರ ಚಿತ್ರಗಳನ್ನು ಕಾಟೇರ ಕಟ್ಟಿಕೊಟ್ಟಿದೆ. ನಿಜವಾಗಲೂ ಕಾಟೇರ ಧರ್ಮ ದೇವರು ದೇಶಭಕ್ತಿ ಎಂದು ಹುಚ್ಚಾಟ ಆಡುವ ಇಂದಿನ ಯುವ ತಲೆಮಾರುಗಳನ್ನು ಎಚ್ಚರಿಸಲಿಕ್ಕೆ ಸಮರ್ಥವಾದ ಚಿತ್ರಲಿಪಿ ಎನ್ನಲು ನನಗಾವ ಅಡೆತಡೆಗಳೂ ಇಲ್ಲ.

ಒಂದು ಸಿನಿಮಾವಾಗಿ ಹೊಡೆದಾಟ ಬಡಿದಾಟದ ದೃಶ್ಯಗಳು ಹೀರೋನ ವೈಭವಿಕರಣ, ಅತಿರೇಕದ ಸ್ಟಂಟ್ ಈಗಿನ ಟ್ರಂಡ್ ಎಂದು ಬಿಟ್ಟರೆ ಅದರಾಚೆ ಕಥೆ ಗೆದ್ದಿರುವುದೇ ತಾನೆತ್ತಿಕೊಂಡ ವಿಚಾರದಿಂದ. ಒಂದೊಂದು ಮಾತೂ ಸ್ಫೋಟಕವಾಗಿವೆ. ಜಾತಿ ಅಸ್ಪೃಷ್ಯತೆಯ ಕರಾಳ ಮುಖ, ಭೂಮಾಲಕ ವರ್ಗದ ರಾಕ್ಷಸ ಗುಣ, ದುಡಿಯುವ ಗೇಣಿದಾರರ ದೀನಾಯ ಸ್ಥಿತಿ. ಅವರ ನಡುವೆ ಹುಟ್ಟುವ ಕಾಟೇರನೆಂಬ ಕ್ರಾಂತಿಯ ಕಿಡಿ ನಿಜವಾಗಲೂ ನನಗೀಗಲೂ ಕಾಡುತ್ತಿದೆ. ಸಿನಿಮಾ ಚಿತ್ರಕತೆಯ ಹ್ಯಾಂಗೋವರ್ ನಲ್ಲಿ ಇದ್ದೇನೆ.

(ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಪೋಸ್ಟರ್)

ಇನ್ನು ದರ್ಶನ್ ಬಗ್ಗೆ ಎರಡು ಮಾತು. ಈ ಸಿನಿಮಾದಲ್ಲಿ ದರ್ಶನ್ ಮಾಗಿದ್ದಾರೆ‌. ತುಂಬ ಹಿಡಿಸಿಬಿಟ್ಟರು. ನೀವು ಸ್ವಲ್ಪ ಯೋಚಿಸಿ, ಕಾಟೇರವೇ ದರ್ಶನ್ ಅಭಿನಯದ ಈ ರೀತಿಯ ಮೊದಲ ಚಿತ್ರವಲ್ಲ. ಅವರ 'ಯಜಮಾನ' ಅಂತ ಒಂದು ಸಿನಿಮಾ ಇದೆ. ಆಯಿಲ್ ಮಾಫಿಯಾ ಹೇಗೆ ನಮ್ಮ ಗ್ರಾಮೀಣ ಎಣ್ಣೆ ಗಾಣಗಳನ್ನು ಕಬಳಿಸಿತು, ರೈತರು ಗಾಣಿಗರು ಗಾಣಗಳು ಹೇಗೆ ಆಯಿಲ್ ದಂಧೆಯ ಕಬಂಧ ಬಾಹುಗಳಿಗೆ ಬಲಿಯಾಗಿ ಕಾಳದಂಧೆಯು ಮೆರೆಯುತ್ತದೆ ಎಂಬುದನ್ನು ಆ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ‌. ಈ ಮಾಫಿಯಾದ ವಿರುದ್ಧ ಬಂಡೆದ್ದು ತನ್ನ ಜನರನ್ನು ಉಳಿಸಲು ಹೋಗಿ ವಿಫಲನಾಗುವ ನಾಯಕ ತಾನೇ 'ನಂದಿ ಬ್ರಾಂಡ್' ಎಂಬ ಕಲಬೆರಕೆ ಇಲ್ಲದ ಎಣ್ಣೆ ಉದ್ಯಮ ಆರಂಭಿಸಿ, ಸಿಟಿ ಸೇರಿ ಸವಾಲುಗಳ ಮೀರಿ ಗೆಲ್ಲುವ ಛಲಗಾರನಾಗಿ ಗೆಲ್ಲುತ್ತಾನೆ. ಆ ಸಿನಿಮಾದಲ್ಲಿ ನಮ್ಮ ಹಳ್ಳಿಗಳ ಗಾಣಗಳು ರೈತರ ಸ್ವಾವಲಂಬನೆ ಸ್ವಾಭಿಮಾನವನ್ನು ಎತ್ತಿ ಹಿಡಿಯಲಾಗಿದೆ. ದರ್ಶನ್ ಅವರ ಇತ್ತೀಚಿನ 'ಕ್ರಾಂತಿ' ಚಿತ್ರ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಣ ವ್ಯಾಪಾರದ ಕರಾಳ ಮುಖಗಳನ್ನ ಕುರಿತು ಚಿತ್ರಿಸಲಾಗಿದೆಯಂತೆ‌. ನಾವು ಇದನ್ನೆಲ್ಲಾ ಗುರುತಿಸಬೇಕು. ಪ್ರೋತ್ಸಾಹಿಸಬೇಕು. ದರ್ಶನ್ ಅವರಲ್ಲಿರುವ ಈ ಮನಸನ್ನು ಆಲದ ಮರವಾಗಿಸುವ ಕೆಲಸ ನಾವೆಲ್ಲ ಮಾಡಬೇಕು. "ಜಾತಿ ಪದ್ಧತಿಯ ಬಗ್ಗೆ ಬೆಳಕು ಚೆಲ್ಲದ ಭಾರತೀಯ ಇತಿಹಾಸದ ಬರವಣಿಗೆಯು ನಮ್ಮ ನಾಡಿನ ವಾಸ್ತವಿಕತೆಯ ಬಗ್ಗೆ ಏನೂ ಹೇಳಿದಂತಾಗುವುದಿಲ್ಲ" ಎಂದು ಇತಿಹಾಸಕಾರ ಇರ್ಫಾನ್ ಹಬೀಬ್ ಹೇಳುತ್ತಾರೆ. ಈ ಜಾತಿ ಎಂಬ ಪದದಲ್ಲಿ ಈ ಎಲ್ಲವೂ ಸೇರಿಕೊಂಡಿದೆ. ನಮ್ಮ ಶ್ರಮಿಕ ವರ್ಗವನ್ನು ಹದ್ದಿನ ಕಣ್ಣು ಕೊಕ್ಕು ಪಂಜಗಳ ಸೆರೆಯಲ್ಲಿ ಕತ್ತು ಹಿಚುಕಿ ಪುರೋಹಿತ ವರ್ಗ ಭೂಮಾಲಕ ವರ್ಗ ಹಿಂಸಿಸಿದೆ.

ಈಗ ನಮ್ಮ ದೇಶದಲ್ಲಿ ಮಂದಿರ ನಿರ್ಮಾಣ, ಅದರ ಉದ್ಘಾಟನೆ, ಆರಾಧನೆ, ವ್ಯಕ್ತಿ ಆರಾಧನೆ ಧರ್ಮದ ಬಿರುಗಾಳಿ ಬೀಸುತ್ತಿದೆ. ಬಿರುಗಾಳಿ ಅಸಾಧ್ಯ ಧೂಳನ್ನು ಹೊತ್ತು ತಂದು ಕಣ್ಣುಗಳಿಗೆ ಎರಚಿದೆ‌. ಈ ಮಬ್ಬಿನಿಂದ ನಮ್ಮ ಯುವಕರನ್ನು ಹೊರ ತರಲು ಕಾಟೇರ ಸಮಯೋಚಿತವಾಗಿ ತೆರೆ ಕಂಡು ಭರ್ಜರಿ ಸದ್ದು ಮಾಡುತ್ತಿದೆ. ಸಾವಿರಾರು ವರ್ಷಗಳಿಂದ ಬ್ರಹ್ಮಾದಾಯದ, ದೇವಾದಾಯದ ಸುಖವುಂಡ, ರಾಜ ಮಹಾರಾಜರ ಚಾಕರಿ ಮಾಡಿಕೊಂಡು ಊರ ಜನರ ಭೂಮಿ ಕಬಳಿಸಿ ತುಂಡು ಪಾಳೆಗಾರಿಕೆ ಮೆರೆಯುತ್ತಿದ್ದ ಭೂಮಾಲಕ ವರ್ಗ ಕಾಟೇರವನ್ನು ಸಹಿಸುತ್ತಿಲ್ಲ. ಅಲ್ಲಲ್ಲಿ ಕರುಬಿ ಬರೆಯುವವರು ಬರೆಯುತ್ತಿದ್ದಾರೆ.

ಏನೇ ಆಗಲಿ ಕಾಟೇರದ ಜೊತೆಗಿರೋಣ. ಕಾಟೇರವನ್ನು ಎಲ್ಲರೂ ನೋಡಿ. ಇಂತಹ ಚಿತ್ರಗಳು ಕನ್ನಡದಲ್ಲಿ ಲೆಕ್ಕವಿಲ್ಲದಷ್ಟು ಬರಲಿ.

Advertisement
Advertisement
Recent Posts
Advertisement