Advertisement

ಬ್ರಾಹ್ಮಣೀಯ ಶಂಕರಾಚಾರ್ಯರುಗಳು ಹಿಂದೂತ್ವದ ವಿರೋಧಿಗಳೇ? ಮಸೀದಿ ಕೆಡವಿದ ಜಾಗದಲ್ಲೇ ಮಂದಿರ ಕಟ್ಟಿಲ್ಲವೇ?

Advertisement

ಸಾಮಾನ್ಯ ಹಿಂದೂಗಳಲ್ಲಿ ಇರುವ ದೈವಭಕ್ತಿ ಮತ್ತು ಧರ್ಮ ಶ್ರದ್ದೆಯನ್ನು ದುರ್ಬಳಕೆ ಮಾಡಿಕೊಂಡು ಸಂಘಪರಿವಾರ ಕಟ್ಟುತ್ತಿರುವ ಮೋದಿಯ ರಾಮಮಂದಿರದ ಹವಾ ಭಾರತದಾದ್ಯಂತ ಆವರಿಸಿಕೊಳ್ಳುತ್ತಿದೆ. ಅಯೋಧ್ಯೆಯಲ್ಲಿ ಕಟ್ಟುತ್ತಿರುವುದು ಮತ್ತೊಂದು ರಾಮಮಂದಿರವಾದ್ದರಿಂದ ಅದೊಂದು ದೈವ ಕಾರ್ಯ ಎಂಬಂತೆ ಅಮಾಯಕ ಹಿಂದೂಗಳು ಮನೆಮನೆಗೆ ಮಂತ್ರಾಕ್ಷತೆ ಹಂಚುವ ಕಾಯಕದಲ್ಲಿ ಭಕ್ತಿಯಿಂದ ತೊಡಗಿಸಿಕೊಳ್ಳುತ್ತಿದ್ದಾರೆ.

ಆದರೆ ಅಲ್ಲಿದ್ದ ಬಾಬ್ರಿ ಮಸೀದಿಯನ್ನು ಕೆಡವಿ ರಾಮಮಂದಿರ ಕಟ್ಟಲಾಗುತ್ತಿದೆ ಎಂಬ ಸತ್ಯ ಮೆತ್ತಗೆ ಹಿಂದೆ ಸರಿಯುತ್ತಿದೆ.

ವಾಸ್ತವವಾಗಿ ಈ ವಿವಾದದಲ್ಲಿ ಸುಪ್ರೀಂ ಕೋರ್ಟು ಇಷ್ಟನ್ನಂತೂ ಸ್ಪಷ್ಟವಾಗಿ ಹೇಳಿತ್ತು:

-ಮಸೀದಿಯ ಕೆಳಗೆ ರಾಮಮಂದಿರ ಇರಲಿಲ್ಲ.

-ಮಸೀದಿಯ ಕೆಳಗೆ ದೊರಕಿದ ಕಟ್ಟಡದ ಅವಶೇಷಗಳು ಕತೌನಿ ಮಸೀದಿ ಅಥವಾ ಬೌದ್ಧ ಅಥವಾ ಜೈನ ಅಥವಾ ಶೈವ ಸ್ಥಾನವೂ ಆಗಿರಬಹುದೇ ಹೊರತು ರಾಮಮಂದಿರವಂತೂ ಅಲ್ಲವೇ ಅಲ್ಲ.

-ಎಲ್ಲಕಿಂತ ಮುಖ್ಯವಾಗಿ ಮಸೀದಿಯನ್ನು ಕಟ್ಟಲೆಂದೇ ಇದ್ದ ಕಟ್ಟಡವನ್ನು ಕೆಡವಲಾಯಿತು ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ.

- ಮಸೀದಿಯ ಕೆಳಗೆ ಸಿಕ್ಕ ಅವಶೇಷಗಳ ಕಾಲಮಾನ 12ನೇ ಶತಮಾನ. ಬಾಬ್ರಿ ಮಸೀದಿಯ ಕಾಲಮಾನ 16 ನೇ ಶತಮಾನ. ಹೀಗಾಗಿ ಈ ನಡುವಿನ 400 ವರ್ಷಗಳಲ್ಲಿ ಪ್ರಾಕೃತಿಕ ವಿದ್ಯಮಾನಗಳ ಭಾಗವಾಗಿಯೂ ಆ ಕಟ್ಟಡ ಕುಸಿದಿರಬಹುದು.

ಇವಿಷ್ಟು ಸುಪ್ರೀಂ ಕೋರ್ಟಿನ ಸರ್ವಸಮ್ಮತ ಅಭಿಪ್ರಾಯ.

ಆದರೂ ಯಾವುದೇ ತರ್ಕ ಅಥವಾ ನ್ಯಾಯದಂಡಗಳನ್ನು ಉಲ್ಲಂಘಿಸಿ ಅದೇ ಸುಪ್ರೀಂ ಕೋರ್ಟೇ ಮಸೀದಿಯಿದ್ದ ಜಾಗವನ್ನು ಮಂದಿರ ಕಟ್ಟಲು ಮಸೀದಿ ಕೆಡವಿದವರಿಗೆ ವಹಿಸಿಕೊಟ್ಟಿದ್ದು ಭಾರತದ ನ್ಯಾಯಾಂಗಕ್ಕೆ ನಡೆದಿರುವ ಕರಸೇವೆಯ ಪ್ರತಿಫಲವೇ ಆಗಿದೆ.

ಅದೇನೇ ಇರಲಿ, ಮಸೀದಿ ಕೆಡವಿ ಮಂದಿರ ಕಟ್ಟುತ್ತಿರುವ ಬಿಜೆಪಿಯ ಅಧರ್ಮವನ್ನು , ಸಂಘಿಗಳ ಕೋಮುವಾದವನ್ನು ಸಾಮಾನ್ಯ ಹಿಂದೂಗಳು ಒಪ್ಪಿಕೊಳ್ಳಲು ಪ್ರಧಾನ ಕಾರಣ ಮುಸ್ಲಿಮರು ಮಂದಿರವನ್ನು ಕೆಡವಿದ್ದರ ಪ್ರತೀಕಾರ ಎಂಬ ಸಮರ್ಥನೆಯಾಗಿದೆ. ಆದ್ದರಿಂದಲೇ ಸಂಘಿಗಳು ಸುಪ್ರೀಂ ತೀರ್ಪಿನ ಆ ಭಾಗವನ್ನು ಮಾತ್ರ ಮುಚ್ಚಿಟ್ಟು ತಮ್ಮ ಸುಳ್ಳಿನ ಪ್ರಚಾರ ಮುಂದುವರೆಸಿದ್ದಾರೆ.

2019 ರಲ್ಲಿ ಫುಲ್ವಾಮಾ- 2024 ರಲ್ಲಿ ಶ್ರೀರಾಮ

ಇದು ಬಿಜೆಪಿಯ ಚುನಾವಣಾ ಕುತಂತ್ರ. ಸಾಮಾನ್ಯ ಹಿಂದೂಗಳಿಗೆ ರಾಮಭಕ್ತಿಯ ನಶೆ. ಉಳಿದವರಿಗೆ ಧರ್ಮದ ನೆಪದಲ್ಲಿ ಪ್ರತೀಕಾರಿ ಕೋಮುವಾದದ ನಶೆ.

ಬಿಜೆಪಿಯ 2024 ರ ಚುನಾವಣಾ ತಂತ್ರದಲ್ಲಿ ಮತ್ತು ಆ ನಂತರದ ಹಿಂದೂತ್ವವಾದಿ ಕಾರ್ಯಾಚರಣೆಗೆ 2024 ರ ಜನವರಿ 22 ರಂದು ನಡೆಯುವ ರಾಮಮಂದಿರದ ಉದ್ಘಾಟನೆಗೆ ಬಹುಮುಖ್ಯ ಪಾತ್ರವಿದೆ.

ಹೀಗಾಗಿ ಸಂಘಿ ಬಿಜೆಪಿಯ ಕೋಮುವಾದಿ ಕುತಂತ್ರದಿಂದ ಹಿಂದೂಗಳನ್ನು ಹಾಗೂ ಒಟ್ಟಾರೆಯಾಗಿ ಭಾರತವನ್ನು ಬಚಾವು ಮಾಡಬೇಕೆಂದರೆ ರಾಮಮಂದಿರದ ಹಿಂದಿರುವ ಉಗ್ರ ಮುಸ್ಲೀಮ್ ದ್ವೇಷ, ಹಿಂದೂ ರಾಷ್ಟ್ರದ ಮುಸುಕಿನಲ್ಲಿರುವ ಹಿಂಸಾತ್ಮಕ ಜಾತಿವಾದಿ ಬ್ರಾಹ್ಮಣ್ಯ ಮತ್ತು ಜನವಿರೋಧಿ ಫ಼್ಯಾಸಿಸಂ ಅನ್ನು ಜನರೆದುರು ಬೆತ್ತಲು ಮಾಡುವ ಅಗತ್ಯವಿದೆ. ಆಗ ಮಾತ್ರ ಬಿಜೆಪಿಯನ್ನು ಮಾತ್ರವಲ್ಲ. ಅದರ ಆತ್ಮವಾದ ಬ್ರಾಹ್ಮಣೀಯ ಹಿಂದೂತ್ವವಾದವನ್ನು ಸೋಲಿಸಲು ಸಾಧ್ಯ.

ಮೋದಿ ಮಂದಿರಕ್ಕೆ ಸನಾತನ ಶಂಕರಚಾರ್ಯರ ವಿರೋಧ!?

ಆದರೆ ಜನವರಿ 22 ರಂದು ಮೋದಿ ಉದ್ಘಾಟಿಸುತ್ತಿರುವ ಬಿಜೆಪಿಯ ರಾಮಮಂದಿರವನ್ನು ಅತ್ಯಂತ ಸನಾತನವಾದಿ ಹಾಗೂ ಬ್ರಾಹ್ಮಣೀಯ ಮೌಲ್ಯಗಳ ಶಂಕರಾಚಾರ್ಯರುಗಳು ವಿರೋಧಿಸುತ್ತಿದ್ದಾರೆ. ಅವರ ವಿರೋಧದ ಮುಖ್ಯ ಸಾರ ಕೋಮುವಾದ ವಿರೋಧವಲ್ಲ. ಬದಲಿಗೆ ಸನಾತನ ಧರ್ಮದ ರೀತಿ ರಿವಾಜುಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬುದು.

ಪುರಿಯ ಶಂಕರಾಚಾರ್ಯರು ಮತ್ತು ಜೋಷಿ ಮಠದ ಶಂಕರಾಚಾರ್ಯರು ಬಹಿರಂಗವಾಗಿ ನೀಡುತ್ತಿರುವ ಹೇಳಿಕೆಗಳ ಪ್ರಕಾರ ಅವರ ವಿರೋಧಕ್ಕೆ ಕಾರಣಗಳಿವು:

- ದೇವಸ್ಥಾನ ಅಪೂರ್ಣಗೊಂಡಿದೆ. ದೇವಸ್ಥಾನವೆಂದರೆ ದೇವರ ದೇಹವಿದ್ದಂತೆ. ದೇವಸ್ಥಾನದ ಶಿಖರ ನಿರ್ಮಾಣವಾಗದೆ ಪ್ರಾಣಪ್ರತಿಷ್ಟಾಪನೆ ಮಾಡುವುದು ಸನಾತನ ಹಿಂದೂ ಪದ್ಧತಿಗೆ ವಿರುದ್ಧ.

- ರಾಮ ದೇವಸ್ಥಾನ ರಾಮನವಮಿಯಂದು ಉದ್ಘಾಟನೆಯಾಗುವುದು ಉಚಿತ. ಯಾವುದೇ ದೇವಸ್ಥಾನದ ಉದ್ಘಾಟನೆಗೆ ಕಾಲ, ವಸ್ತು ಮತ್ತು ಸಂದರ್ಭ ಮುಖ್ಯ. ಜನವರಿ 22 ರಂದು ಪಂಚಾಂಗದ ಪ್ರಕಾರ ಸರಿಯಾದ ಮಹೂರ್ತವಲ್ಲ.

'ಇದರಲ್ಲಿ ಮೋದಿಗೆ ಮತ್ತು ಬಿಜೆಪಿಗೆ ಇಕ್ಕಟ್ಟಗುವ ಒಂದು ಅಂಶವಿದೆ'

ರಾಮನವಮಿ ಮತ್ತು ಚುನಾವಣಾ ನೀತಿ ಸಂಹಿತೆ

ದೇವಸ್ಥಾನ ನಿರ್ಮಾಣ ಇನ್ನು ಶೇ. 40 ರಷ್ಟು ಕೂಡ ಪೂರ್ಣಗೊಂಡಿಲ್ಲ ಎನ್ನುವುದು ನಿಜ. ದೇವಸ್ಥಾನದ ನಿರ್ಮಾಣ ಸಂಪೂರ್ಣಗೊಳ್ಳಲು 2025 ರ ಡಿಸೆಂಬರ್ ತನಕ ಸಮಯ ಬೇಕು. ಕನಿಷ್ಟ ಪ್ರಾಣಪ್ರತಿಷ್ಟಾಪನೆಯನ್ನು ರಾಮನವಮಿ ಅರ್ಥಾತ್ ರಾಮ ಹುಟ್ಟಿದ ದಿನವೆಂದು ಹಿಂದೂಗಳು ನಂಬುವ ದಿನದವರೆಗೂ ಕಾಯದೆ ಇಷ್ಟು ತರಾತುರಿಯಲ್ಲಿ ಬಿಜೆಪಿ ಏಕೆ ಜನವರಿ 22 ರಂದೇ ಮಾಡುತ್ತಿದೆ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲೂ ಇತ್ತು. ಅದನ್ನು ಈ ಶಂಕರಾಚಾರ್ಯರುಗಳ ಅಸಮಾಧಾನವೂ ಗಟ್ಟಿಗೊಳಿಸಿದೆ.

ವಿಷಯವಿಷ್ಟೆ: ಈ ಬಾರಿ ರಾಮನವಮಿ ಏಪ್ರಿಲ್ 17 ಕ್ಕೆ ಬರಲಿದೆ. ಆ ವೇಳೆಗೆ ಲೋಕಸಭಾ ಚುನಾವಣಾ ವೇಳಾಪಟ್ಟಿ ಘೊಷಿತವಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಆಗ ರಾಮ ಮಂದಿರ ಉದ್ಘಾಟನೆಯನ್ನು ಮಾಡುವುದಾಗಲೀ, ಅದನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದಾಗಲೀ, ಈಗಿರುವ ಕಾನೂನುಗಳ ಪ್ರಕಾರ ಸಾಧ್ಯವಿಲ್ಲ.

ಆದ್ದರಿಂದಲೇ ಕೇವಲ ಬಿಜೆಪಿ ತನ್ನ ಚುನಾವಣಾ ಪ್ರಯೋಜನಕ್ಕಾಗಿ ಮಾತ್ರವೇ ಜನವರಿ 22 ರಂದು ಮಂದಿರ ಉದ್ಘಾಟನೆ ಮಾಡುತ್ತಿದೆ ಎಂದು ಶಂಕರಾಚಾರ್ಯರುಗಳೂ ಹೇಳುತ್ತಿರುವುದು ಬಿಜೆಪಿಯ ವಿಶ್ವಾಸದ್ರೋಹವನ್ನು ಬಯಲಿಗೆಳೆಯಲು ಸಹಾಯ ಮಾಡುತ್ತಿದೆ ಎನ್ನುವುದು ನಿಜ.

ಹಾಗೆಯೇ, ಜೊಷಿ ಮಠದ ಶಂಕರಾಚಾರ್ಯರು ಹೇಳುತ್ತಿರುವಂತೆ ರಾಮ ಮಂದಿರ ಟ್ರಸ್ಟಿನ ಪದಾಧಿಕಾರಿಗಳು ಜನವರಿಯಲ್ಲೆ ಮುಹೂರ್ತವನ್ನು ಹುಡುಕಿಕೊಡುವಂತೆ ಅಯೋಧ್ಯೆಯ ಪಂಡಿತರ ಮೇಲೆ ಒತ್ತಡವನ್ನು ಹಾಕಿದ್ದರಂತೆ. ಇದೂ ಕೂಡ ಬಿಜೆಪಿಯ ಧರ್ಮದ ಮುಸುಕಿನ ಕೀಳು ರಾಜಕಾರಣವನ್ನು ಬಯಲು ಮಾಡುತ್ತದೆ ಎನ್ನುವುದು ನಿಜ.

ರಾಮಮಂದಿರ ಎಲ್ಲಾ ಹಿಂದೂಗಳಿಗೆ ಸೇರಿದ್ದಲ್ಲ

ಇದಲ್ಲದೆ. ಶಂಕರಾಚಾರ್ಯರುಗಳು ಬಿಜೆಪಿಯ ಈ ಕಾರ್ಯಕ್ರಮಗಳಿಗೆ ಧಾರ್ಮಿಕ ಆಧಾರದ ಸನಾತನವಾದಿ ಆಕ್ಷೇಪಣೆಗಳನ್ನು ಪ್ರಕಟಗೊಳಿಸುತ್ತಿದ್ದಂತೆ ಟ್ರಸ್ಟಿನ ಕಾರ್ಯದರ್ಶಿ ಹಾಗೂ ಆರೆಸ್ಸೆಸ್ ನ ಹಿರಿಯ ನಾಯಕ ಚಂಪತ್ ರಾಯ್ ಅವರು:

"ಅಯೋಧ್ಯೆಯ ರಾಮಮಂದಿರವು ಹಿಂದೂಗಳಲ್ಲಿ ರಾಮಾನಂದ ಸಂಪ್ರದಾಯಕ್ಕೆ ಸೇರುತ್ತದೆ. ಇಲ್ಲಿ ಶೈವರಿಗೆ , ಶಾಕ್ತರಿಗೆ, ಸನ್ಯಾಸಿಗಳಿಗೆ ಯಾವ ಪಾತ್ರವೂ ಇಲ್ಲ" ಎಂದು ಘೋಷಿಸಿದರು.

ಸಂಕ್ರಾಂತಿಯ ದಿನದಂದು ಜನವರಿ 22 ರ ಕಾರ್ಯಕ್ರಮದ ವಿವರಗಳನ್ನು ಪತ್ರಿಕಾ ಗೋಷ್ಠಿಯಲ್ಲಿ ವಿವರಿಸುತ್ತಾ ಇದೇ ಚಂಪತ್ ರಾಯ್ ಅವರು "ಅಯೋಧ್ಯೆ ಯು ರಾಮಾನಂದ ಸಂಪ್ರದಾಯಕ್ಕೆ ಸೇರುತ್ತದೆಯೇ ವಿನಾ ರಾಮಾನುಜ ಸಂಪ್ರದಾಯದವರಿಗಲ್ಲ" ಎಂದು ಘೋಷಿಸಿದ್ದಾರೆ.

ಅಯೋಧ್ಯೆಯ ರಾಮಮಂದಿರ ಭಾರತದ 140 ಕೋಟಿ ಭಾರತೀಯರಿಗೆ ಸೇರಿದ್ದು ಎಂದು ಚುನಾವಣೆಯ ಉದ್ದೆಶದಿಂದ ಸುಳ್ಳು ಪ್ರಚಾರ ಮಾಡುವ ಬಿಜೆಪಿಯ ಅಸಲಿಯತ್ತಿದು. ಇದು 140 ಕೋಟಿಗೆ ಭಾರತೀಯರಿಗೆ ಮಾತ್ರವಲ್ಲ, ಬಹುಸಖ್ಯಾತ ಹಿಂದೂಗಳಿಗೂ ಸೇರಿದ್ದಲ್ಲ, ಬದಲಿಗೆ ಕೇವಲ ಅತ್ಯಂತ ಅಲ್ಪಸಂಖ್ಯಾತ ರಾಮಾನಂದ ಸಂಪ್ರಧಾಯಿಗಳಿಗೆ ಸೇರಿದ್ದು ಎಂದು ಹೇಳುವ ಮೂಲಕ ಹಿಂದೂ ಹಿಂದೂ- ಒಂದು ಬಂಧು ಎನ್ನುವ ಬಿಜೆಪಿ ಘೋಷಣೆ ಎಷ್ಟು ಸೋಗಲಾಡಿತನದ್ದು ಎಂದು ಕೂಡ ಶಂಕರಾಚಾರ್ಯರುಗಳ ಅಸಮಾಧಾನ ಬಯಲುಪಡಿಸಿದೆ.

ಇವೆಲ್ಲವೂ ಮೋದಿ ವಿರೋಧಿ ಹೌದು. ಇವುಗಳು ಸಂಘಪರಿವಾರದ ಬ್ರಾಹ್ಮಣ್ಯವನ್ನು ಬಯಲು ಮಾಡಲು ಒಳ್ಳೆಯ ಉದಾಹರಣೆಗಳೂ ಹೌದು.

ಆದರೆ ಶಂಕರರ ಈ ಘೋಷಣೆಯ ಹಿಂದೆ ಮೋದಿಯಷ್ಟೆ ಆರೆಸ್ಸೆಸ್ಸಿನಷ್ಟೆ ಅಥವಾ ಅದಕ್ಕಿಂತ ತೀವ್ರವಾದ ಹಿಂದೂತ್ವವಾದಿ, ಬ್ರಾಹ್ಮಣೀಯ ಸನಾತನ ತಾರತಮ್ಯವಾದಿ ನಿಲುವುಗಳಿಲ್ಲವೇ?

ಶಂಕರಾಚಾರ್ಯರುಗಳ ಪ್ರಚ್ಚನ್ನ ಉಗ್ರ ಸನಾತನ-ಹಿಂದೂತ್ವ

ಉದಾಹರಣೆಗೆ ಇದೇ ಸಮಯದಲ್ಲಿ ಇದೇ ಶಂಕರಾಚಾರ್ಯರುಗಳು ತಮ್ಮ ಸನಾತನವಾದಿ, ಬ್ರಾಹ್ಮಣೀಯ ಅಸಮಾಧಾನಕ್ಕೆ ಕೊಟ್ಟಿರುವ ಕಾರಣಗಳನ್ನು ಮತ್ತು ಅವು ಎಷ್ಟು ತೀವ್ರಗಾಮಿ ಹಿಂದೂತ್ವವಾದಿಯಾಗಿವೆಯೆಂದೊ ಗಮನಿಸಿ :

- ಮೊದಲನೆಯದಾಗಿ ಎಲ್ಲಾ ಶಂಕರಾಚಾರ್ಯರುಗಳು ಮಸೀದಿಯನ್ನು ಕೆಡವಿದ್ದನ್ನು ಸ್ವಾಗತಿಸುತ್ತಾರೆ. ಮತ್ತು ಹಿಂದುಗಳ ಮೇಲಿದ್ದ ಕಳಂಕ ನಿವಾರಣೆಯೆಂದೇ ಭಾವಿಸುತ್ತಾರೆ. ಸುಪ್ರೀಂ ಕೋರ್ಟಿನಲ್ಲಿ ಮಸೀದಿಯ ಕೆಳಗಡೆ ಮಂದಿರವಿತ್ತೆಂದು ಯಾವುದೇ ಪುರಾವೆಯಿಲ್ಲದೆ ವಾದಿಸಿದ ಮಹಾಶಯರುಗಳು ಇವರುಗಳೇ..

- ಎಲ್ಲಾ ಶಂಕರಾಚಾರ್ಯರುಗಳು ರಾಮಮಂದಿರ ನಿರ್ಮಾಣವು 500 ವರ್ಷಗಳ ಹಿಂದೂಗಳ ಹೋರಾಟದ ಫಲ ಎಂದೇ ಬಣ್ಣಿಸುತ್ತಾರೆ. ಎಂದರೆ ಮಸೀದಿಯ ಕೆಳಗೆ ಮಂದಿರವಿತ್ತು ಎಂಬ ಆರೆಸ್ಸೆಸ್ಸಿನ ಪರಮ ಸುಳ್ಳನ್ನು ಸಾಮಾನ್ಯ ಹಿಂದೂಗಳು "ಧರ್ಮವಂತರು" ಎಂದು ಭಾವಿಸುವ ಶಂಕರಾಚಾರ್ಯರುಗಳೂ ಎಗ್ಗಿಲ್ಲದೇ ಪ್ರಚಾರ ಮಾಡುತ್ತಾರೆ.

- ಹಿಂದೂಗಳ ಬದುಕನ್ನು ಶಾಸ್ತ್ರ, ಸ್ಮೃತಿ ಮತ್ತು ಶೃತಿಗಳು ಮಾರ್ಗದರ್ಶನ ಮಾಡುತ್ತವೆ. ಅದರಂತೆ ನಡೆದುಕೊಳ್ಳಬೇಕೆ ವಿನಾ ಸಂಕರಗೊಳ್ಳಬಾರದು ಹಾಗೆ ಸಂಕರಗೊಳ್ಳದಂತೆ ನೋಡಿಕೊಳ್ಳುವುದೇ ತಮ್ಮಂಥ ಶಂಕರಾಚಾರ್ಯರುಗಳ ಕರ್ತವ್ಯ ಎಂದು ಪ್ರತಿಪಾದಿಸುತ್ತಾರೆ. ಅರ್ಥಾತ್ ಮನುಸ್ಮೃತಿ ಆಧಾರಿತ ಜಾತಿ ತಾರತಮ್ಯ ಪೋಷಣೆ.

- ಜೋಷಿ ಮಠದ ಶಂಕರಾಚಾರ್ಯರು The Wire ಪತ್ರಿಕೆಯ ಕರಣ ಥಾಪರ್ ಅವರಿಗೆ ಕೊಟ್ಟ ಸಂದರ್ಶನವೊಂದರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದಂತೆ, ಕಾಶಿ ಮತ್ತು ಮಥುರಾದ ಮಸೀದಿಯನ್ನು ಮುಸ್ಲಿಮರೇ ಬಿಟ್ಟುಕೊಡಬೇಕೆಂದು ಯಾವುದೇ ಲಜ್ಜೆಯಿಲ್ಲದೆ ಆಗ್ರಹಿಸಿದ್ದಾರೆ.

- ಪುರಿಯ ಶಂಕರಾಚಾರ್ಯರು ಟಿವಿ ಚಾನೆಲ್ ಒಂದಕ್ಕೆ ಕೊಟ್ಟ ಸಂದರ್ಶನವೊಂದರಲ್ಲಿ ಜನವರಿ 22 ರಂದು ಮೋದಿ ಮೂರ್ತಿಯನ್ನು ಮುಟ್ಟುತ್ತಿರುವಾಗ ನಾನು ಹೊರಗೆ ನಿಂತುಕೊಂಡು ಚಪ್ಪಳೆ ತಟ್ಟಬೇಕೆ ಎಂದು ಕೇಳಿದ್ದಾರೆ.

ಅರ್ಥಾತ್ ಮೋದಿಯವರ ಜಾತಿ ಹಿನ್ನೆಲೆಯ ಕಾರಣಕ್ಕೆ ಅವರು ಮೂರ್ತಿಯನ್ನು ಮುಟ್ಟಬಾರದು ಎಂಬ 'ಮನುವಾದ'ವನ್ನು ಪ್ರತಿಪಾದಿಸಿದ್ದಾರೆ. ದೇವಸ್ಥಾನ ನಿರ್ಮಾಣ ಹಾಗೂ ಹಿಂದೂಗಳ ಧಾರ್ಮಿಕ ವಿಷಯಗಳು ಸನಾತನ ಶಾಸ್ತ್ರ , ಸ್ಮೃತಿ ಮತ್ತು ಶೃತಿಗಳನ್ನಾಧರಿಸಿ ನಡೆಯಬೇಕು. ಅದೇ ಹಿಂದೂತ್ವ ಎಂದು ಗದರಿದ್ದಾರೆ.

ಮೊನ್ನೆ ಪೇಜಾವರ ಮಠಾಧೀಶರು ಸಹ ಇದೇ ರೀತಿ 'ಯಾರ‌್ಯಾರು ಏನು ಕೆಲಸ ಮಾಡಬೇಕೋ ಅದನ್ನು ಮಾಡುವುದೇ ಶಾಸ್ತ್ರ. ಅದನ್ನು ಬಿಟ್ಟು ಎಲ್ಲರೂ ಎಲ್ಲವನ್ನು ಮಾಡಬಹುದು ಎಂಬ ಪ್ರಜಾತಂತ್ರವನ್ನು ಧರ್ಮಕ್ಕೆ ಅನ್ವಯ ಮಾಡಲಾಗದು. ಆಗ ಧರ್ಮ ಸಂಕರವಾಗುತ್ತದೆ' ಎಂದು ಎಚ್ಚರಿಸಿದ್ದಾರೆ.

ಆರೆಸ್ಸೆಸ್ ಮತ್ತು ಅದರ ವಿಶ್ವ ಹಿಂದೂ ಪರಿಷತ್ತಿನ ಮುಖ್ಯಸ್ಥರಾದ ಪೇಜಾವರ ಮಠಾಧೀಶರಿಗೂ ಮೋದಿಯ ಟೀಕಾಕಾರ ಎಂದು ಹೆಸರಾಂಕಿತರಾದ ಈ ಸಂಕರಾಚಾರ್ಯರು ಗಳಿಗೂ ಯಾವ ವ್ಯತ್ಯಾಸವಿದೆ?

- ಜೋಷಿ ಮಠದ ಶಂಕರಾಚಾರ್ಯರು 2014 ರಲ್ಲಿ ಮೋದಿ ಮುಸ್ಲಿಂ ಟೋಪಿ ಹಾಕಿಕೊಂಡಿದ್ದು, ಭೂಮಿ ಪೂಜೆಯ ದಿನ ಮುಸ್ಲಿಮರ ಕಡೆಯಿಂದ ಮಣ್ಣುಹಾಕಿಸಿದ್ದು ಕೂಡ ಸಂಕರ ಪಾಪದ ಕೆಲಸ ಎಂದು ಬಣ್ಣಿಸುತ್ತಾರೆ.

- ಎಲ್ಲಕ್ಕಿಂತ ಮುಖ್ಯವಾಗಿ ಈ ಶಂಕರಾಚಾರ್ಯರುಗಳಿಗೆ ಸನಾತನಾವಾದಿ ರೀತಿ ರಿವಾಜುಗಳು ಸರಿಯಾಗಿ ಪಾಲಿಸುತ್ತಿಲ್ಲ ಎಂಬುದು ಅಧರ್ಮವಾಗಿ ಕಾಣುತ್ತಿದೆಯೇ ವಿನಾ ಮಸೀದಿ ಕೆಡವಿ ಮತ್ತೊಬ್ಬರ ಧಾರ್ಮಿಕ ವಿಶ್ವಾಸದ ಕಾರಣಕ್ಕೆ ನರಮೇಧ ನಡೆಸಿ ಮಂದಿರ ಕಟ್ಟುವುದು ಅಧರ್ಮ ಎನಿಸುತ್ತಿಲ್ಲ.

ಹೀಗಾಗಿ ಸನಾತನಾವಾದವು ಅಥವಾ ಶಂಕರಾಚಾರ್ಯರುಗಳ ಸಂಕರ ವಿರೋಧಿ ತತ್ವಗಳು ಬ್ರಾಹ್ಮಣೀಯ ಹಿಂದೂತ್ವದ ಅಂತರ್ಗತ ಭಾಗವೇ ವಿನಾ ಅದರ ವಿರೋಧಿಯಲ್ಲ.

ಹೀಗಾಗಿ ಸನಾತನವಾದಿಗಳಿಗೂ ಮತ್ತು ರಾಜಕೀಯ ಹಿಂದೂತ್ವಕ್ಕೂ ಎದುರಾಗಿರುವ ವೈರುಧ್ಯ ಗುರಿ ಮತ್ತು ಕಾರ್ಯತಂತ್ರಗಳ ನಡುವೆ ಎದುರಾಗುವ ತಾತ್ಕಾಲಿಕ ವೈರುಧ್ಯ ಅಷ್ಟೆ. ಹೆಚ್ಚೆಂದರೆ ಒಂದಷ್ಟು ವ್ಯಕ್ತಿಗತವಾದದ್ದೂ ಆಗಿರ್ತ್ತದೆ.

ಸನಾತನವಾದಿಗಳ Ideological Hinduism ಸಂಘಪರಿವಾರದ Political Hindutva ದ ಅಂತರ್ಗತ ಭಾಗವೇ ಆಗಿದೆ. .

ಅವರ ನಡುವೆ ಆಗಾಗ ಏರ್ಪಡುವ ಇಂಥಾ ವೈರುಧ್ಯಗಳನ್ನು ಆಳವಾದ ವೈರುಧ್ಯಗಳೆಂದು ಬ್ರಾಹ್ಮಣ್ಯದ ಉಗ್ರ ಹಿಂದುತ್ವ ವನ್ನು ವಿರೋಧಿಸುವವರು ಸಂಭ್ರಮಿಸಬಾರದು. ಅದು ರಾಜಕೀಯ ಆತ್ಮಹತ್ಯೆಯಾಗುತ್ತದೆ.

ರಾಮಮಂದಿರವನ್ನು ಬಾಬ್ರಿ ಮಸೀದಿಯ ಜಾಗದಲ್ಲಿ ಕಟ್ಟುತ್ತಿಲ್ಲವೇ?

ಇದೇ ಬಗೆಯ ಮತ್ತೊಂದು ಆತ್ಮಹತ್ಯಾಕಾರಿ ಪ್ರತಿಪಾದನೆಯನ್ನು ರಾಮಮಂದಿರ ನಿರ್ಮಾಣ ವಿವಾದ ಸಂದರ್ಭದಲ್ಲಿ ಪ್ರಗತಿಪರರು ಮಾಡುತ್ತಿದ್ದಾರೆ.

ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮೂಲಗೊತ್ತಿಲ್ಲದ ಒಂದು ಸುದ್ದಿ ಹರಿದಾಡುತ್ತಿದೆ. ಅದರ ಪ್ರಕಾರ ರಾಮಮಂದಿರವು ನಿರ್ಮಾಣವಾಗುತ್ತಿರುವುದು ಬಾಬ್ರಿ ಮಸೀದಿ ಕೆದವಿದ ಜಾಗದಲ್ಲಲ್ಲ. ಬದಲಿಗೆ ಅಲ್ಲಿಂದ ಮೂರು ಕಿಮಿ ದೂರದಲ್ಲಿ ಎಂಬ ಒಕ್ಕಣೆಯಿರುವ ಈ ಸುದ್ದಿಯನ್ನು ಹೇಗೆ ಮೋದಿ ಹಿಂದೂಗಳನ್ನು ಮುಠಾಳರನ್ನಾಗಿಸುತ್ತಿದ್ದಾರೆ ಎಂದು ಹೇಳಲು ಹಲವು ಪ್ರಗತಿಪರರು ಬಳಸಿಕೊಳ್ಳುತ್ತಿದ್ದಾರೆ,

ಆದರೆ ಇದರಲ್ಲಿ ನಿಜವೆಷ್ಟು? ಇದು ಸಂಪೂರ್ಣ ಸುಳ್ಳು ಸುದ್ದಿ.

ಕೆಲವು ವಾಸ್ತವ ಸಂಗತಿಗಳನ್ನು ಗಮನಿಸೋಣ :

- ಬಾಬ್ರಿ ಮಸೀದಿಯನ್ನು ಸಂಘಿ ದುರುಳರು ಕೆಡವಿದ ನಂತರ ಪಿವಿ. ನರಸಿಂಹ ರಾವ್ ಸರ್ಕಾರ ಬಾಬ್ರಿ ಮಸೀದಿ ಇದ್ದ 2.7 ಎಕರೆ ಪ್ರದೇಶವನ್ನು ಒಳಗೊಂಡಂತೆ 70 ಎಕರೆ ಪ್ರದೇಶವನ್ನು ಕೇಂದ್ರ ಸರ್ಕಾರದ ಸುಫರ್ದಿಗೆ ತೆಗೆದುಕೊಳ್ಳುವ THE ACQUISITION OF CERTAIN AREA AT AYODHYA ACT, 1993 ಕಾಯಿದೆಯನ್ನು ಜಾರಿ ಮಾಡಿತು. ಅಲ್ಲಿಂದಾಚೆಗೆ ಬಾಬರಿ ಮಸೀದಿ ಇದ್ದ ಜಾಗವು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಸುಫರ್ದಿಯಲ್ಲೇ ಇತ್ತು .
2019 ರಲ್ಲಿ ಸುಪ್ರೀಂ ಕೋರ್ಟು ತೀರ್ಪು ಬರುವ ತನಕ.

(https://www.indiacode.nic.in/bitstream/123456789/1915/3/A1993-33.pdf )

- ಅಸಲು ವಿವಾದ ಇದ್ದದ್ದು ಬಾಬ್ರಿ ಮಸೀದಿ ಇದ್ದ ಜಾಗವಾದ 2.7 ಎಕರೆ ಜಮೀನಿನ ಒಡೆತನ ಯಾರದ್ದು ಎಂಬುದು. ಹೀಗಾಗಿ ಅದು ದಾಖಲೆಗಳು, ಭೂ ಒಡೆತನಗಳ ಬಗ್ಗೆ ಇರುವ ಕಾನೂನುಗಳು ಮತ್ತು ಸಾಕ್ಷ್ಯ ಪುರಾವೆಗಳ ಆಧಾರದಲ್ಲಿ ಬಗೆಹರಿಸಬೇಕಿದ್ದ ಭೂ ಒಡೆತನದ ವ್ಯಾಜ್ಯವಾಗಿತ್ತು.

ಆದರೆ ಸುಪ್ರೀಂ ಕೋರ್ಟು ಹಿಂದುತ್ವವಾದಿ ಶಕ್ತಿಗಳ ಒತ್ತಡಕೆ ಮಣಿದು ಅದನ್ನು ಜಾಗದ ಧಾರ್ಮಿಕ ಸ್ವರೂಪದ ಐತಿಹ್ಯದ ವಿವಾದವನ್ನಾಗಿ ಪರಿಗಣಿಸಿ, ಸಾಕ್ಷಿ ಪುರಾವೆಗಳಿಲ್ಲದಿದ್ದರೂ,
ಮಸೀದಿಯ ಕೆಳಗೆ ರಾಮಮಂದಿರವಿತ್ತು ಮತ್ತು ಅದನ್ನು ಕೆಡವಿಯೇ ಬಾಬ್ರಿ ಮಸೀದಿ ಕಟ್ಟಲಾಗಿದೆ ಎಂದು ಸಾಬೀತಾಗಿಲ್ಲವೆಂದು ಒಪ್ಪಿಕೊಂಡರೂ, ಆ ಜಾಗದ ಒಡತನ ಹಿಂದೂಗಳಿಗೆ ಸೇರಿದ್ದೆಂದು ಅನ್ಯಾಯದ ತೀರ್ಪು ನೀಡಿತು.

- 2019 ರ ನವಂಬರ್ ನಲ್ಲಿ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಕೊಟ್ಟ ಅನ್ಯಾಯಯುತ ತೀರ್ಪಿನ ಅಂತಿಮ ಭಾಗದಲ್ಲಿ ವಿವಾದಕ್ಕೆ ಕೊಟ್ಟಿರುವ ಪರಿಹಾರದ ಪ್ರಕಾರ (ಪ್ಯಾರಾ : 805 , ಪುಟ 925-927) :

ಆ) ಬಾಬ್ರಿ ಮಸೀದಿ ಧ್ವಂಸ ಮಾಡಿದ ಜಾಗದ ಒಡೆತನ (ಮಸೀದಿ ಇದ್ದ ಜಾಗದ ಒಳಾವರಣ ಮತ್ತು ಹೊರಾವರಣ ಗಳನ್ನೂ ಒಳಗೊಂಡು ) ರಾಮ ಲಲ್ಲಾ ನಿಗೆ ಸೇರುತ್ತದೆ. ಹೀಗಾಗಿ ಅಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಮೂರು ತಿಂಗಳೊಳಗೆ ಒಂದು ಟ್ರಸ್ಟ್ ಸ್ಥಾಪನೆ ಮಾಡಬೇಕು.

ಆ) 1993 ರ ಕಾಯಿದೆಯಡಿ ರಲ್ಲಿ ವಶಪಡಿಸಿಕೊಂಡ, ಬಾಬ್ರಿ ಮಸೀದಿ ಇದ್ದ , 2.7 ಎಕರೆ ಜಮೀನನ್ನು ಕೇಂದ್ರ ಸರ್ಕಾರ ಆ ಟ್ರಸ್ಟ್ ಗೆ ವರ್ಗಾಯಿಸಬೇಕು.

ಇ) ಆಯೋಧ್ಯಾ ಕಾಯಿದೆಯಡಿ ವಶಪಡಿಸಿಕೊಂಡ 70 ಎಕರೆ ಜಮೀನಿನಲ್ಲಿ ಐದು ಎಕರೆ ಜಮೀನನ್ನು ಕೇಂದ್ರ ಸರ್ಕಾರ ಮಸೀದಿ ನಿರ್ಮಿಸಲು ಕೊಡಬೇಕು ಅಥವಾ ಉತ್ತರ ಪ್ರದೇಶ ರಾಜ್ಯ ಸರ್ಕಾರ ಪ್ರಮುಖವಾದ ಪ್ರದೇಶದಲ್ಲಿ ಸೂಕ್ತವಾದ ಐದು ಎಕರೆ ಜಮೀನನ್ನು ಕೊಡಬೇಕು.

ಆಸಕ್ತರು ತೀರ್ಪನ್ನು ಈ ವೆಬ್ ವಿಳಾಸದಲ್ಲಿ ಗಮನಿಸಬಹುದು :
https://www.sci.gov.in/pdf/JUD_2.pdf

ರಿವ್ಯೂ ಪೆಟಿಷನ್ ರದ್ದಾಯಿತು- Curative Petition ಪರಿಗಣಿಸಿಲ್ಲ

- ಹೀಗಾಗಿ ಸುಪ್ರೀಂ ಕೋರ್ಟ್ ಸ್ವಯಂ ಬಾಬ್ರಿ ಮಸೀದಿ ಇದ್ದ ಜಾಗವನ್ನು ರಾಮಮಂದಿರ ಕಟ್ಟಲು ಸಂಘಪರಿವಾರಕ್ಕೆ ನೀಡಿದೆ.

- ಈ ತೀರ್ಪಿನ ವಿರುದ್ಧ 18 ಪುನರ್ ಪರಿಶೀಲನಾ ಅಹವಾಲುಗಳು ಸುಪ್ರೀಂ ಕೋರ್ಟಿನಲ್ಲಿ ಕೂಡಲೇ ದಾಖಲಾದವು.

ಆದರೆ ಅವೆಲ್ಲವನ್ನು ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಪರಿಶೀಲನಾ ಪೀಠ 2019 ರ ಡಿಸೇಂಬರ್ 12 ರಂದೇ ವಜಾ ಮಾಡಿತು.

ಆ ನಂತರ ಎಲ್ಲಾ ಮುಸ್ಲಿಂ ದಾವೆದಾರರು ಈ ತೀರ್ಪಿನ ವಿರುದ್ಧ ಹೋರಾಡಲು ಉಳಿದಿದ್ದ ಏಕಮಾತ್ರ ದಾರಿಯಾಗಿದ್ದ Curative Petition ದಾಖಲು ಮಾಡುವುದು ಬೇಡವೆಂದು ತೀರ್ಮಾನಿಸಿದರು.

(https://www.barandbench.com/news/breaking-supreme-court-dismisses-review-petitions-challenging-ayodhya-verdict-read-order)

- ಆದರೆ ಪೀಸ್ ಪಾರ್ಟಿ ಎಂಬ ಪಕ್ಷದ ಅಧ್ಯಕ್ಷ ಡಾ. ಮಹಮ್ಮದ್ ಅಯೂಬ್ ಎಂಬುವರು 2020 ರ ಜನವರಿ 21 ರಂದು ಅಯೋಧ್ಯಾ ತೀರ್ಪಿನ ವಿರುದ್ಧ curative petition ದಾಖಲಿಸಿದರು. ಅವರು ಈ ಹಿಂದೆ ದೂರುದಾರರಾಗಿರಲಿಲ್ಲ.

ಆದರೆ ಅದನ್ನು ಸುಪ್ರೀಂ ಕೋರ್ಟು ಇನ್ನು ವಿಚಾರಣೆಗೆ ಒಪ್ಪಿಕೊಂಡೂ ಇಲ್ಲ. ಅಥವಾ ತನ್ನ ಹಿಂದಿನ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆಯನ್ನು ಕೊಟ್ಟಿಲ್ಲ. ಸುಪ್ರೀಂ ಕೋರ್ಟಿನ ವೆಬ್ ಸೈಟಿನಲ್ಲಿ ಈ ಅಹವಾಲಿನ ವಿವರಗಳನ್ನು ನೋಡಿದರೆ ಅಹವಾಲುದಾರರೂ ಇದನ್ನು ಗಂಭೀರವಾಗಿ ಬೆಂಬತ್ತಿರುವಂತೆ ಕಾಣುತ್ತಿಲ್ಲ.

ಹೀಗಾಗಿ ಈ curative petition ಸರ್ಕಾರದ ಮುಂದಿನ ನಡೆಗಳಿಗೆ ಯಾವುದೇ ರೀತಿ ಅಡ್ಡಿಯಾಗಲಿಲ್ಲ. (ಮೇಲಾಗಿ ಸುಪ್ರೀಂ ಈ curative petition ಅನ್ನು ಪರಿಗಣಿಸುವುದೂ ಇಲ್ಲ ಎಂಬುದಕ್ಕೆ ವಿಶೇಷ ಪುರಾವೆಗಳ ಅಗತ್ಯವಿಲ್ಲ).

((https://www.barandbench.com/news/litigation/ayodhya-judgment-creates-rights-based-on-illegal-acts-incorrigible-in-light-of-settled-law-peace-party-of-india-moves-curative-petition)

ರಾಮಜನ್ಮಭೂಮಿಯಲ್ಲೇ ರಾಮಮಂದಿರ

- ಹೀಗಾಗಿ ಕ್ಯೂರಿಟಿವ್ ಪೆಟಿಶನ್ ದಾಖಲಾದ 15 ದಿನದಲ್ಲೆ ಅಂದರೆ 2020 ರ ಫೆಬ್ರವರಿ 5 ರಂದು ಮೋದಿ ಸರ್ಕಾರ ಬಾಬ್ರಿ ಮಸೀದಿ ನಾಶ ಮಾಡಿದ ಜಾಗದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಮಾಡಲು 15 ಜನ ಸದಸ್ಯರ "ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್" ಅನ್ನು ಸ್ಥಾಪಿಸಿತು.

ಈ 15 ಜನರಲ್ಲಿ 12 ಜನರನ್ನು ಮೋದಿ ಸರ್ಕಾರವೇ ನೇಮಕ ಮಾಡಿತು. ಅದರಲ್ಲಿ ಕರ್ನಾಟಕದ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮಿಯೂ ಒಬ್ಬರು. ಈ ಟ್ರಸ್ಟ್ ಕಾಮೇಶ್ವರ್ ಚೌಪಾಲ್ ಎಂಬ ವಿಶ್ವ ಹಿಂದೂ ಪರಿಷತ್ತಿನ ದಲಿತ ನಾಯಕರನ್ನು ನೆಪಮಾತ್ರಕ್ಕೆ ಸದಸ್ಯರನ್ನಾಗಿ ಸೇರಿಸಿಕೊಂಡಿದೆ.
ಟ್ರಸ್ಟಿನ ವೆಬ್ ಸೈಟ್ ಸ್ಪಷ್ಟಪಡಿಸುವಂತೆ ಟ್ರಸ್ಟಿನ ಉದ್ದೇಶ :

ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡಲೆಂದೇ ಭಾರತ ಸರ್ಕಾರ ಟ್ರಸ್ಟನ್ನು ಸ್ಥಾಪಿಸಿದೆ.

ಹೆಚ್ಚಿನ ವಿವರಗಳಿಗೆ ಆಸಕ್ತರು ಟ್ರಸ್ಟಿನ ವೆಬ್ ಸೈಟನ್ನು ಈ ವಿಳಾಸದಲ್ಲಿ ಗಮನಿಸಬಹುದು :

https://srjbtkshetra.org/

- 2020 ರ ಆಗಸ್ಟ್ 5 ರಂದು ಪ್ರಧಾನಿ ಮೋದಿ ಬಾಬ್ರಿ ಮಸೀದಿ ಕೆಡವಿದ ಜಾಗದಲ್ಲೇ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಮಾಡಿದರು.

(https://www.ndtv.com/india-news/ayodhya-ram-mandir-bhoomi-pujan-pm-narendra-modi-likely-to-spend-around-3-hours-in-ayodhya-tomorrow-2273752)

ಭೂಮಿ ಪೂಜೆ ಮಾಡಿದ ಜಾಗದಲ್ಲೇ ಅಂದರೆ ಬಾಬ್ರಿ ಮಸೀದಿ ಧ್ವಂಸ ಮಾಡಿದ ಜಾಗದಲ್ಲೇ ರಾಮಮಂದಿರವೂ ನಿರ್ಮಾಣವಾಗುತ್ತಿದೆ.

(https://www.reuters.com/world/india/indian-temple-built-site-razed-mosque-open-in-january-2023-09-14)

ಹೀಗಾಗಿ ಮಸೀದಿ ಇದ್ದ ಜಾಗದಿಂದ ಮೂರು ಕಿಮೀ ದೂರದಲ್ಲಿ ನಿರ್ಮಾಣವಾಗುತ್ತಿದೆ ಎಂಬ ವದಂತಿಯೆಲ್ಲಾ ಸುಳ್ಳು ಎಂಬುದನ್ನು ಮೇಲಿನ ಮಾಹಿತಿಗಳು ಸ್ಪಷ್ಟಪಡಿಸುತ್ತವೆ.

ಈ ಮಧ್ಯೆ ಮಸೀದಿ ನಿರ್ಮಾಣ ಮಾಡಲು ಉತ್ತರ ಪ್ರದೇಶ ಸರ್ಕಾರವೂ ಅಯೋಧ್ಯೆಯಿಂದ 25 ಕಿಮೀ ದೂರವಿರುವ ಧುನ್ಪುರದಲ್ಲಿ ಐದು ಎಕರೆ ಜಮೀನನ್ನು ನೀಡಿದೆ .

ಆದ್ದರಿಂದ ಕೇಂದ್ರ ಸರ್ಕಾರ ವಶಪಡಿಸಿಕೊಂಡಿದ್ದ 70 ಎಕರೆಗಳಲ್ಲೂ ರಾಮಮಂದಿರ ಸಂಸ್ಥಾನವನ್ನೇ ಮೋದಿ ಸರ್ಕಾರ ನಿರ್ಮಿಸುತ್ತಿದೆ.

ಇದು ಬೃಹತ್ ಅನ್ಯಾಯ. ಮಹಾ ಅಧರ್ಮ. ಇಂಥಾ ಅನ್ಯಾಯವನ್ನು ಮಾನ್ಯ ಮಾಡಿದ್ದು ಭಾರತದ ಸುಪ್ರೀಂ ಕೋರ್ಟ್ .

ಇವೆಲ್ಲಾ ಗೊತ್ತಿರುವ ವಿಷಯವೇ . ಈ ಅನ್ಯಾಯದ ವಿರುದ್ಧ ಮತ್ತು ಅಧರ್ಮದ ವಿರುದ್ಧ ನ್ಯಾಯವಂತರು ಧ್ವನಿ ಎತ್ತಬೇಕಿರುವ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಬಾಬ್ರಿ ಮಸೀದಿ ಇಂದ ಮೂರು ಕಿಮಿ ದೂರದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂಬ ಹುಸಿ ಸಮಾಧಾನ ಕೊಡುವ ಹುಸಿ ಸುದ್ದಿ ಚಾಲ್ತಿಗೆ ಬಂದಿದೆ.

ಹುಸಿ ವದಂತಿಗಳಲ್ಲ- ಗಟ್ಟಿ ಹೋರಾಟಗಳು ಬೇಕು

ಇದಕ್ಕೆ ಯಾವ ತರ್ಕವೂ ಇಲ್ಲ. ಮೇಲಿನ ವಿವರಗಳು ಅದನ್ನು ಸ್ಪಷ್ಟ ಪಡಿಸುತ್ತವೆ.
ಈವರೆಗೆ ಯಾವ ವಿರೋಧ ಪಕ್ಷಗಳೂ ಅಥವಾ ಈಗ ಇದನ್ನು ತಮ್ಮದೇ ಕಾರಣಗಳಿಗೆ ವಿರೋಧಿಸುತ್ತಿರುವ ಶಂಕರಾಚಾರ್ಯರೂ ಸಹ ಈ ವದಂತಿಯನ್ನು ಪರೋಕ್ಷವಾಗಿ ಸಮರ್ಥಿಸುವ ವಿಷಯವನ್ನೂ ಹೇಳುತ್ತಿಲ್ಲ.

ಉತ್ತರ ಪ್ರದೇಶದಲ್ಲಿ ಬೇರುಗಳನ್ನು ಹೊಂದಿರುವ ಯಾವ ಜನಪರ , ಪ್ರಗತಿಪರ ಪರ್ಯಾಯ ಮಾಧ್ಯಮಗಳೂ ಸಹ ರಾಮಮಂದಿರವು ಬಾಬ್ರಿ ಮಸೀದಿ ನಾಶವಾದ ಜಾಗದಿಂದ ಮೂರು ಕಿಮಿ ದೂರದಲ್ಲಿ ನಿರ್ಮಾಣವಾಗುತ್ತಿದೆ ಎಂದು ವರದಿ ಮಾಡಿಲ್ಲ. ಏಕೆಂದರೆ ಅದು ವಾಸ್ತವವಲ್ಲ.

ಹಿಂದೂತ್ವ ಫ಼್ಯಾಸಿಸ್ಟರ ವಿರುದ್ಧ ಹೋರಾಟ ಸುದೀರ್ಘವಾದುದು.
ಹಾಗೂ ಸ್ಪಷ್ತತೆಯನ್ನು ಬಯಸುವಂತದ್ದು .
ಶತ್ರುಗಳನ್ನು ಮಿತ್ರರೆಂದು ಭಾವಿಸುವುದಾಗಲೀ, ತಾತ್ಕಾಲಿಕ ಪ್ರಯೋಜನಗಳ ದುಡುಕುಗಳಾಗಲೀ ಈ ಯುದ್ಧದಲ್ಲಿ ಆತ್ಮಹತ್ಯಾಕಾರಿಯಾಗುತ್ತದೆ.

ಅಲ್ಲವೇ?

ಬರಹ: ಶಿವಸುಂದರ್ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಲೇಖನ ಕೃಪೆ: ವಾರ್ತಾಭಾರತಿ

Advertisement
Advertisement
Recent Posts
Advertisement