Advertisement

ಇತಿಹಾಸದ ಕುರಿತು ನೆಹರೂರವರ ದೃಷ್ಟಿಕೋನ ಹಾಗೂ ಸನಾತನಿ ವೈದಿಕಶಾಹಿಗಳ ತಿರುಚಿದ ಇತಿಹಾಸ!

Advertisement

ಬರಹ: ಡಾ| ಜೆ.ಎಸ್ ಪಾಟೀಲ (ಲೇಖಕರು ಖ್ಯಾತ ಅಂಕಣಕಾರರು ಹಾಗೂ ಜನಪರ ಚಿಂತಕರು) ಸನಾತನಿ ವೈದಿಕಶಾಹಿಗಳ ಜಡ ವಿಕೃತಿಗಳ ವಿರುದ್ಧ ರಣಕಹಳೆಯೂದಿ ಅದಕ್ಕೆ ಪರ್ಯಾಯವಾಗಿ ಹೊಸದೊಂದು ವ್ಯವಸ್ಥೆಯನ್ನು ಕಟ್ಟಿದ ಗೌತಮ ಬುದ್ಧನನ್ನು ವೈದಿಕರ ದಶವತಾರದ ಕಾಲ್ಪನಿಕ ಕಥಾ ಹಂದರದ ಭಾಗವಾಗಿಸಿದ ಬಲಪಂಥಿಯರು ಇತಿಹಾಸ ತಿರುಚುವಲ್ಲಿ ಸಿದ್ಧಹಸ್ತರು. ಮೊದಮೊದಲು ನಾವೆಲ್ಲ ಭಾರತೀಯ ಮೂಲದವರಲ್ಲ, ಮಧ್ಯ ಏಷಿಯಾದ ವಿದೇಶಿ ಆರ್ಯರು ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದರು ಪ್ರಸಿದ್ಧ ಚಿತ್ಪಾವನ ವೈದಿಕರು. ಯಾವಾಗ ವಂಶವಾಹಿನಿ ಸಂಶೋಧನೆಗಳು ಇದನ್ನು ದೃಢಪಡಿಸಲಾರಂಭಿಸಿದವೋ ಆಗ ಗಾಬರಿಗೆ ಬಿದ್ದು ಆರ್ಯರು ತಾವೂ ಕೂಡ ಭಾರತದ ಮೂಲನಿವಾಸಿಗಳೇ ಎಂದು ಹಲುಬಲಾರಂಭಿಸಿದರು. ಭಾರತಿಯ ಜೀವನ ವ್ಯವಸ್ಥೆಯನ್ನು ಕುಲಗೆಡಿಸಿದ ಆರ್ಯರು ಭಾರತಕ್ಕೆ ಎಂದಿಗೂ ವಿಧೇಯರಾಗದೆ ಸದಾ ಅಭದ್ರತೆಯಲ್ಲಿ ಬದುಕುತ್ತಿದ್ದಾರೆ. ಹೀಗೆ ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆ ಹೊಂದಿರುವ ಆರ್ಯರು ಇತಿಹಾಸ ತಿರುಚುವುದನ್ನು ಒಂದು ಕುಲಕಸುಬಾಗಿಸಿಕೊಂಡಿದ್ದಾರೆ. ಪುರಾಣ ಕಾಲದಷ್ಟೇ ಅಲ್ಲದೆ ಇತ್ತೀಚಿನ ಸ್ವತಂತ್ರಪೂರ್ವ ಹಾಗು ಸ್ವಾತಂತ್ರ ನಂತರದ ಇತಿಹಾಸಕ್ಕೂ ಕೂಡ ಕರಸೇವೆ ಮಾಡಿರುವ ಆರ್ಯರ ಸುಳ್ಳುತನಕ್ಕೆ ಹೊರತಾದ ದೃಷ್ಟಿಕೋನವನ್ನು ಭಾರತದ ಪ್ರಥಮ ಪ್ರಧಾನಿ ನೆಹರುರವರು ಇತಿಹಾಸದ ಕುರಿತು ಹೊಂದಿದ್ದರು. ಇದೇ ಡಿಸೆಂಬರ್ 14 ರ "ದಿ ಪ್ರಿಂಟ್" ವೆಬ್ ಜರ್ನಲ್ ನಲ್ಲಿ ಖ್ಯಾತ ಅಂಕಣಕಾರ, ಇತಿಹಾಸಜ್ಞ ಮತ್ತು ಮಾನವಶಾಸ್ತ್ರಜ್ಞ ವಿಭವ್ ಮರಿವಾಲಾ ಅವರು ಬರೆದ ಲೇಖನವು ಭೂತ ಮತ್ತು ವರ್ತಮಾನ ಕಾಲಗಳ ಕುರಿತು ನೆಹರುರವರಿಗಿದ್ದ ಕರಾರುವಕ್ಕು ನಿಲುವುಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಭೂತಕಾಲವನ್ನು ರೋಮಾಂಚನಗೊಳಿಸುವ ಮೂಲಕ ವರ್ತಮಾನದ ಸಮಸ್ಯೆಗಳನ್ನು ಪರಿಹರಿಸಲು ಆಗುವುದಿಲ್ಲ ಎನ್ನುವ ನೆಹರು ಅವರ ನಿಲುವಿನ ಹಲವು ಮಗ್ಗಲುಗಳನ್ನು ಈ ಲೇಖನವು ತೆರೆದಿಡುತ್ತದೆ. ಭಾರತನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾದರೆ ನಾವು ನೆಹರುರನ್ನು ಮತ್ತೆ ಓದಬೇಕು ಎನ್ನುತ್ತಾರೆ ಮರಿವಾಲಾ ಅವರು. ಇತಿಹಾಸವನ್ನು ವಿರೂಪಗೊಳಿಸುವ ಕೃತ್ಯಗಳನ್ನು ತಡೆಯಲು ಹಾಗು ಅದನ್ನು ಸರಿಯಾಗಿ ಮೌಲ್ಯಮಾಪನ ಮಾಡಿ ರಾಜಕೀಯ ಅಥವಾ ಕೋಮು ಸಾಮರಸ್ಯದ ಉದ್ದೇಶಗಳನ್ನು ಸಾಧಿಸಲು ನೆಹರು ಅವರ ಇತಿಹಾಸ ಚರಿತ್ರೆಯಲ್ಲಿನ ಮೂರು ಸಾಧನಗಳನ್ನು ಇಂದು ಭಾರತವು ಬಳಸಿಕೊಳ್ಳಬೇಕಾಗಿದೆ ಎಂಬುದು ಮರಿವಾಲಾರವರ ಅಭಿಮತವಾಗಿದೆ. 2021 ರ ಉದ್ದಕ್ಕೂ ಭಾರತದ ಪ್ರಾಚೀನ ಇತಿಹಾಸ ತಿರುಚಲು ಸಮಿತಿ ರಚನೆಯ ಘಟನೆˌ ದೇಶ ವಿಭಜನೆಯ ಘಟನೆ, ಶಾಲಾ ಪಠ್ಯಪುಸ್ತಕಗಳನ್ನು ಮರುಪರಿಶೀಲಿಸುವ ಶಿಫಾರಸ್ಸು, ಅಥವಾ ಸ್ವಾತಂತ್ರೋತ್ಸವ ಅಮೃತ ಮಹೋತ್ಸದ ಸಂಭ್ರಮಾಚರಣೆಗಳನ್ನು ವಿವಾದಿತಗೊಳಿಸಿˌ ಐತಿಹಾಸಿಕ ಸಂಗತಿಗಳನ್ನು ಮರು ರೂಪಿಸಿ ಅದನ್ನು ಚರ್ಚೆಯಾಗಿಸಿದ ಘಟನೆಗಳು ದೇಶದಲ್ಲಿ ನಡೆದಿವೆ. ಇತಿಹಾಸವನ್ನು ತಿರುಚುವ ಉದ್ದೇಶ ಹೊಂದಿರುವ ಜನರು ನೆಹರು ಇತಿಹಾಸ ತಿರುಚಿದ್ದಾರೆ ಎಂದು ಮಿತ್ಯಾರೋಪ ಮಾಡುತ್ತಿದ್ದಾರೆ. ಜವಾಹರಲಾಲ್ ನೆಹರು ಅವರು ಭಾರತೀಯ ಇತಿಹಾಸಶಾಸ್ತ್ರದಿಂದ ದಾರಿ ತಪ್ಪಿದ್ದಾರೆಂದು ನಂಬುವವರಲ್ಲಿ ನೆಹರು ಅವರ ಬಗೆಗೆ ಪೂರ್ವಾಗ್ರಹ ಪೀಡಿತ ದ್ವೇಷ ಭಾವವಿದೆ ಎನ್ನುವುದು ಸ್ಪಷ್ಟ. ನೆಹರು ಅವರ ಇತಿಹಾಸದ ಬಗೆಗಿನ ನಿಲುವುಗಳನ್ನು ಭಾರತ ದೇಶ ಮತ್ತು ಅದರ ವೈವಿಧ್ಯತೆಗಳ ಸುತ್ತ ಕೇಂದ್ರಿತಗೊಳಿಸಿ ಗ್ರಹಿಸಿದರೆ ಅವರನ್ನು ಸರಿಯಾಗಿ ಅರ್ಥೈಸಿಕೊಳ್ಳಬಹುದು ಎನ್ನುತ್ತಾರೆ ಮರಿವಾಲಾ ಅವರು. ನೆಹರು ಅವರು ಇತಿಹಾಸವನ್ನು ಓದಲು ಮೂರು ವಿಧಾನಗಳು ಬಳಸುತ್ತಾರೆಂದು ಲೇಖಕರು ಈ ಲೇಖನದಲ್ಲಿ ಪ್ರತಿಪಾದಿಸಿದ್ದಾರೆ. ಮೊದಲನೆಯದು: ವೈಜ್ಞಾನಿಕ ಉಪಕರಣಗಳು ಮತ್ತು ತರ್ಕಬದ್ಧತೆಯನ್ನು ಅನ್ವಯಿಸುವ ಮೂಲಕ ಭೂತಕಾಲದ ಘಟನೆಗಳನ್ನು ಭಾವಪ್ರಧಾನಗೊಳಿಸುವ ಹುಚ್ಚಾಟವನ್ನು ತಪ್ಪಿಸುವುದು. ಸಾಮಾನ್ಯವಾಗಿ ಬಲಪಂಥಿಯ ತೀವ್ರವಾದಿಗಳು ಈ ರೀತಿಯ ಹುಚ್ಚು ಸಾಹಸಗಳನ್ನು ಮಾಡುತ್ತಿರುತ್ತಾರೆ. ನೆಹರುರವರು ತಮ್ಮ "ದಿ ಡಿಸ್ಕವರಿ ಆಫ್ ಇಂಡಿಯಾ" ಕೃತಿಯಲ್ಲಿ ವೇದಕಾಲ ಮತ್ತು ಅಂದಿನ ಸಾಧನೆಗಳನ್ನು ಅಲ್ಲಗಳೆಯುವುದಿಲ್ಲ. ನೆಹರು ವೇದಕಾಲದ ಬಗ್ಗೆ ಹೆಮ್ಮೆಪಡುತ್ತಾರೆ. ಆದರೆ ಮೂರ್ಖತನದ ತರ್ಕಗಳನ್ನು ವಿರೋಧಿಸುತ್ತಾರೆ. ಎರಡನೆಯದು: ದೇಶದ ಮುಂದಿನ ಭವಿಷ್ಯವನ್ನು ಊಹಿಸಲು ಹಾಗು ಅತ್ಯುತ್ತಮವಾಗಿ ರೂಪಿಸಲು ಹಿಂದೆ ಮಾಡಿದ ತಪ್ಪುಗಳಿಂದ ಪಾಠ ಕಲಿಯಬೇಕು ಎಂದು ವಾದಿಸುತ್ತಾರೆ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ಮೂರನೆಯದು: ರಾಜಕೀಯ ಉದ್ದೇಶಗಳ ಈಡೇರಿಕೆಗಾಗಿ ವಿಕೃತ ದೃಷ್ಟಿಕೋನವನ್ನು ಹೊಂದಿ ಕಾಲ್ಪನಿಕ ಪುರಾಣಗಳ ದುರ್ಬಳಕೆ ಮತ್ತು ವೈಭವೀಕರಣವನ್ನು ತಪ್ಪಿಸುವ ಉದ್ದೇಶ ನೆಹರು ಹೊಂದಿರುತ್ತಾರೆ ಎನ್ನುವುದು ಮರಿವಾಲಾರವರ ಖಚಿತ ಅಭಿಪ್ರಾಯವಾಗಿದೆ. ನೆಹರು ಅವರ ಈ ಮೂರು ಬಗೆಯ ಅನ್ವಯಗಳನ್ನು ಬಳಸುವ ಮೂಲಕ ಇತಿಹಾಸವನ್ನು ಮರುಮೌಲ್ಯಮಾಪನಗೊಳಿಸಬಹುದು ಮತ್ತು ನೈಜ ಇತಿಹಾಸವನ್ನು ತಿರುಚಿ ಅದರಿಂದ ರಾಜಕೀಯ ಅಥವಾ ಸಾಂಪ್ರದಾಯಿಕ ಗುರಿಗಳನ್ನು ಸಾಧಿಸುವ ಕೋಮುವಾದಿಗಳ ಕೃತ್ಯಗಳನ್ನು ತಡೆಯಬಹುದು ಎನ್ನುವುದು ಲೇಖಕರ ವಾದ. ಇತಿಹಾಸವನ್ನು ನಿರ್ಲಕ್ಷಿಸುವುದರಿಂದ "ದೃಷ್ಟಿಕೋನದ ಅಸ್ಪಷ್ಟತೆ, ನಂಬಿಗಸ್ಥಿಕೆಯ ಜೀವನದಿಂದ ವಿಚ್ಛೇದನ, ವಾಸ್ತವಕ್ಕೆ ಸಂಬಂಧಿಸಿರುವ ಮನಸ್ಸಿನ ಹುಳುಕು" ಗಳು ಹೆಚ್ಚುತ್ತವೆ ಎಂದು ನೆಹರೂರವರು ತಮ್ಮ "ದಿ ಡಿಸ್ಕವರಿ ಆಫ್ ಇಂಡಿಯಾ" ಕೃತಿ ಯ 102ನೇ ಪುಟದಲ್ಲಿ ಬರೆದಿದ್ದಾರೆ. ಹೀಗೆ ಇತಿಹಾಸವನ್ನು ನಿರ್ಲಕ್ಷಿಸುವ ಕಾರ್ಯ ಮುಂದುವರೆದರೆ ಅದು ಮುಂದೆ ಸುಗಮ ಸಮಾಜಿಕ ಕಾರ್ಯನಿರ್ವಹಣೆಗೆ ಬೆದರಿಕೆಯಾಗಿ ಪರಿಣಮಿಸುತ್ತದೆ ಎಂಬ ನೆಹರೂವರ ವಾದವನ್ನು ಮರಿವಾಲಾ ಅವರು ಪುಷ್ಟಿಕರಿಸುತ್ತಾರೆ. ನೆಹರೂ ಅವರ ಪ್ರಕಾರ ಇತಿಹಾಸದ ಅಧ್ಯಯನವು ಹಿಂದಿನದನ್ನು ರೋಮಾಂಚನಕಾರಿಗೊಳಿಸದೆ ಒಬ್ಬ ವ್ಯಕ್ತಿ ಇಂದು ಎಲ್ಲಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಆತ ಮುಂದೆ ಏನು ಮಾಡಬೇಕು ಎಂದು ಯೋಚಿಸಲು ಅದನ್ನು ಬಳಸುವ ಆಳವಾದ ವೈಯಕ್ತಿಕ ಮತ್ತು ಪ್ರತಿಫಲಿತ ಪ್ರಯಾಣವಾಗಿದೆ. ಈ ದಿಶೆಯಲ್ಲಿ ಪ್ರಾಚೀನ ಭಾರತದ ಪರಂಪರೆಯ ಬಗ್ಗೆ ನೆಹರುರವರ ತಿಳುವಳಿಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎನ್ನುತ್ತಾರೆ ಲೇಖಕರು. ಇಂದಿನ ರಾಜಕಾರಣಿಗಳು ಅದರಲ್ಲೂ ವಿಶೇಷವಾಗಿ ಬಲಪಂಥಿಯರು ಮತ್ತು ಫ್ಯಾಸಿಷ್ಟ್ ಮನಸ್ಥಿತಿಯುಳ್ಳ ಪತ್ರಕರ್ತರು ದೇಶದ ಇತಿಹಾಸವನ್ನು ವಿಶೇಷವಾಗಿ ಇಸ್ಲಾಮಿಕ್ ಪೂರ್ವದ ಯುಗವನ್ನು ಆದರ್ಶ ಯುಗವೆಂದು ರೋಮಾಂಚನಕಾರಿಗೊಳಿಸುತ್ತಿರುವುದು ಸಾಮಾನ್ಯವಾಗಿದೆ. ಇವರಿಗೆ ಇತಿಹಾಸವನ್ನು ವಿಮರ್ಶಿಸುವ ಅರ್ಹತೆಯಾಗಲಿˌ ಗ್ರಹಿಸುವ ಕ್ಷಮತೆಯಾಗಲಿ ಇಲ್ಲದಾಗಿದೆ. ನೆಹರು ಅವರು ಅಧುನಿಕ ನಾಗರಿಕತೆಯ ಹಿರಿಮೆಯನ್ನು ಒಪ್ಪಿಕೊಳ್ಳುತ್ತ ಅದರ ಇತಿ ಮಿತಿಗಳನ್ನು ಎತ್ತಿ ತೋರಿಸುವ ಮೂಲಕ ಬಲಪಂಥಿಯರ ಈ ಅಲ್ಪಮತಿ ದೃಷ್ಟಿಕೋನವನ್ನು ತಳ್ಳಿಹಾಕುವ ಮಾತನಾಡಿದ್ದಾರೆ. "ರಷ್ಯಾದ ಮೋಹ (1927)" ಎಂಬ ಶೀರ್ಷಿಕೆಯ ಪ್ರಬಂಧದಲ್ಲಿ ನೆಹರು ಅವರು ಭಾರತೀಯರು "ತಮ್ಮ ಅದ್ಭುತ ಭೂತಕಾಲ ಮತ್ತು ಅಮರ ನಾಗರಿಕತೆಯ ಅಸ್ಪಷ್ಟ ಕಲ್ಪನೆಗಳಲ್ಲಿ ಪ್ರಸ್ತುತ ದುಃಖ ಮತ್ತು ಅವನತಿಯನ್ನು ಯಾವಾಗಲೂ ಮರೆಯಲು ಪ್ರಯತ್ನಿಸುತ್ತಿದ್ದಾರೆ" ಎಂದು ಬರೆದಿದ್ದಾರೆ. ಮುಂದುವರೆದು ನೆಹರೂರವರು ಭೂತಕಾಲವನ್ನು ರೋಮಾಂಚನಗೊಳಿಸುವ ಕ್ರಿಯೆಯು ದೇಶವನ್ನು ಕಾಡುತ್ತಿರುವ ತೀವ್ರ ಬಡತನ, ಜನರ ಮನಸ್ಸುಗಳನ್ನು ಒಡೆಯುತ್ತಿರುವ ಕೋಮುವಾದ ಮತ್ತು ಆಹಾರದ ಕೊರತೆ ಸೇರಿದಂತೆ ಇಂದಿನ ಬಹುತೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುವುದಿಲ್ಲ ಎಂದು ಅವರು ವಾದಿಸುತ್ತಾರೆ. ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ನೆಹರೂರವರು ನಮ್ಮ ದೇಶದ ಭೂತಕಾಲದ ಬಗ್ಗೆ ಹೆಮ್ಮೆಯನ್ನು ಪ್ರಕಟಿಸುತ್ತ ಆ ಹೆಮ್ಮೆಯು ನಮ್ಮ ಅನೇಕ ಪ್ರಸ್ತುತ ದೌರ್ಬಲ್ಯಗಳನ್ನು ಮತ್ತು ವೈಫಲ್ಯಗಳನ್ನು ಮರೆಯಲು ಅಥವಾ ಅವುಗಳನ್ನು ತೊಡೆದುಹಾಕುವ ನಮ್ಮ ಹಂಬಲವನ್ನು ಮೊಂಡಾಗಿಸಬಾರದು ಎಂದು ತಮ್ಮ "ದಿ ಡಿಸ್ಕವರಿ ಆಫ್ ಇಂಡಿಯಾ" ಕೃತಿಯ ಪುಟ 97 ರಲ್ಲಿ ವಾದಿಸಿದ್ದಾರೆ. ನೆಹರು ಅವರು ತಮ್ಮ ಸಮಗ್ರ ಅಧ್ಯಯನಪೂರಕ ಬರಹಗಳ ಮೂಲಕ ಇತಿಹಾಸವು ನಮ್ಮ ಗುರುತಿನ ಅನ್ವೇಷಣೆಯ ಪ್ರಯಾಣ, ನಮ್ಮ ಕಾರ್ಯಗಳು ಪ್ರತಿಬಿಂಬಿಸುವ ಹಾಗು ನಾವು ಮುಂದೆ ಸಾಗುವುದನ್ನು ಕಲಿಯುವ ಪ್ರಕ್ರಿಯೆ ಎಂಬ ಪ್ರತಿಪಾದನೆಯು ಮರಿವಾಲಾರವರು ಸ್ಮರಿಸುತ್ತಾರೆ. ನಮ್ಮ ಭೂತಕಾಲವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ತರ್ಕಬದ್ಧತೆ ಮತ್ತು ವಸ್ತುನಿಷ್ಠ ವಿಮರ್ಶೆಯ ಸಾಧನಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ನೆಹರುರವರು ಪ್ರತಿಪಾದಿಸಿದ ಕುರಿತು ಲೇಖಕರು ಅನೇಕ ಉದಾಹರಣೆಗಳ ಸಮೇತ ವಿವರಿಸಿದ್ದಾರೆ. 'ಆನ್ ಅಂಡರ್‌ಸ್ಟ್ಯಾಂಡಿಂಗ್ ಹಿಸ್ಟರಿ (1948)' ಎಂಬ ಶೀರ್ಷಿಕೆಯ ಭಾಷಣದಲ್ಲಿ ನೆಹರು ಅವರು ಸಮಗ್ರ ರೀತಿಯಲ್ಲಿ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕಾದರೆ ನಾವು ನಮ್ಮ ಭೂತಕಾಲವನ್ನು ನಿಖರವಾಗಿ ಅರ್ಥಮಾಡಿಕೊಂಡುˌ ಅಂದಿನ ಸಾಮಾಜಿಕ, ಆರ್ಥಿಕ ಮತ್ತು ಇತರ ಅಂಶಗಳನ್ನು ವಿಶ್ಲೇಷಿಸಬೇಕು. ಉದಾಹರಣೆಗೆ ಮೊಘಲ್ ಸಾಮ್ರಾಜ್ಯದ ಬಗ್ಗೆ ಮತ್ತು ಆ ಸಾಮ್ರಾಜ್ಯದ ವಸ್ತುನಿಷ್ಟ ವಿಶ್ಲೇಷಣೆ ಮಾಡಬೇಕಿದೆ ಎಂದು ವಾದಿಸುತ್ತಾರೆ. ಭಾರತದಲ್ಲಿ ಇಸ್ಲಾಮಿನ ಆಗಮನದ ಘಟ್ಟವನ್ನು ನಮ್ಮ ಕೆಲವು ಇತಿಹಾಸಕಾರರು ಅದೊಂದು ಸಾಂಸ್ಕೃತಿಕ ಸಮ್ಮಿಲನ ಮತ್ತು ಬದಲಾವಣೆಯ ಅವಧಿ ಎನ್ನುವುದನ್ನು ಮರೆತು ಆ ಘಟನೆಯು ದೇಶದ ಇತಿಹಾಸದ ಕೇವಲ ಒಂದು ವಿಶಿಷ್ಟ ಭಾಗವಾಗಿ ಮಾತ್ರ ನೋಡುತ್ತಾರೆ. ದೇಶಕ್ಕೆ ಇಸ್ಲಾಮಿನ ಆಗಮನವು ಹಿಂದೂ ರಾಷ್ಟ್ರೀಯವಾದಿಗಳ ನಂಬಿಕೆಯ ಪ್ರಕಾರ ಅದೊಂದು ಮುಸ್ಲಿಮರ ಆಕ್ರಮಣ. ಆದರೆ ಇಸ್ಲಾಮಿನ ಅರಸರು ದೇಶದ ಮೇಲೆ ಆಕ್ರಮಣ ಮಾಡುವುದಾಗಲಿ ಅಥವಾ ಸ್ಥಳಿಯರನ್ನು ಶೋಷಸಿವುದಾಗಲಿ ಮಾಡಲಿಲ್ಲ. ಆದರೆ ಅವರು ಭಾರತಕ್ಕೆ ಆಗಮಿಸಿ ಇಲ್ಲಿ ಸುಧೀರ್ಘ ಕಾಲ ನೆಲೆಸಿದರು. ಹಾಗೆ ಅವರು ಇಲ್ಲಿ ಸಮೃದ್ಧವಾಗಿ ನೆಲೆಸಲು ಇಂದಿನ ಹಿಂದೂ ರಾಷ್ಟ್ರೀಯವಾದಿಗಳ ಪೂರ್ವಜರ ಸಹಕಾರವು ಪೂರಕವಾಗಿತ್ತು ಎನ್ನುವುದು ನಾವು ಮರೆಯಬಾರದು. ಹೀಗೆ ದೇಶಕ್ಕೆ ಬಂದ ಮುಸ್ಲಿಮ್ ಆಳರಸರ ಕಾಲವು ನಮ್ಮ ಸಂಸ್ಕೃತಿಯ ಅತ್ಯಗತ್ಯ ಭಾಗವಾಗಿದೆ ಎಂದು ನೆಹರೂ ವಾದಿಸುತ್ತಾರೆ. ಮೊಘಲ್ ಸಾಮ್ರಾಜ್ಯದ ರಾಜವಂಶಗಳು ಭಾರತದಲ್ಲಿ ತಮ್ಮ ಬೇರುಗಳನ್ನೂರಿ ಕ್ರಮೇಣ ಸಂಪೂರ್ಣವಾಗಿ ಭಾರತೀಕರಣಗೊಂಡವು. ರಾಜಕೀಯ ಸಂಘರ್ಷದ ಹೊರತಾಗಿಯೂ, ಅವರನ್ನು ನಮ್ಮ ಜನರು ನಮ್ಮವರೆಂದು ಸ್ವೀಕರಿಸಿದರು ಮತ್ತು ಅನೇಕ ರಜಪೂತ ರಾಜಕುಮಾರರು ಸಹ ಅವರನ್ನು ತಮ್ಮ ಅಧಿಪತಿಗಳೆಂದು ಒಪ್ಪಿಕೊಂಡು ರಕ್ತ ಸಂಬಂಧಗಳನ್ನು ಬೆಳೆಸಿದರು. ನೆಹರು ಅವರು ಮೊಘಲ್ ಆಳ್ವಿಕೆಯ ವಿವಿಧ ಅಂಶಗಳನ್ನು ಧಾರ್ಮಿಕ ಸಾಮರಸ್ಯದ ಸಂಕೇತಗಳಾಗಿ ನೋಡಿದ್ದಾರೆ. ಮೊಘಲರ ವಾಸ್ತುಶಿಲ್ಪ, ಆಹಾರ, ಬಟ್ಟೆ, ಸಂಗೀತ ಅಥವಾ ಭಾಷೆಗಳು ಭಾರತೀಯರೊಳಗೆ ಅಚಲವಾಗಿ ಬೆರೆತುಹೋಗಿದ್ದವೆಂದು ನೆಹರು ಅಭಿಪ್ರಾಯ ಪಡುತ್ತಾರೆ. ಪ್ರಸ್ತುತ ಕಾಲದ ಚರ್ಚೆಗೆ ವ್ಯತಿರಿಕ್ತವಾಗಿ ಮೊಘಲ್ ಅವಧಿಯು ಸಾಂಸ್ಕೃತಿಕ ಸಮ್ಮಿಲನದ ಅವಧಿಯಾಗಿತ್ತು ಮತ್ತು ಹೊಸ ಆಲೋಚನೆಗಳ ಬೆಳವಣಿಗೆಗೆ ಕಾರಣವಾಯಿತು ಎನ್ನುವುದು ನೆಹರೂ ಅಭಿಪ್ರಾಯ. ವಿಶೇಷವಾಗಿ ನೆಹರೂರವರು ಅಕ್ಬರನ ಆಳ್ವಿಕೆಯ ಕಾಲವು ಹಿಂದೂ, ಇಸ್ಲಾಂ ಮತ್ತು ಸಿಖ್ ಧರ್ಮಗಳ ಮಿಶ್ರಣದ ಅವಧಿಯಾಗಿ ಗಮನಿಸುತ್ತಾರೆ. ಸೌಹಾರ್ದತೆಯ ಈ ಸಂಶ್ಲೇಷಣೆಯ ಚೈತನ್ಯವು ವಿದೇಶ ಮೂಲದ್ದು. ಅಕ್ಬರ್, ತನ್ನ ಸೂಕ್ಷ್ಮವಾದ ಮತ್ತು ಗ್ರಹಿಕೆಯ ಮನಸ್ಸಿನಿಂದ ಅದನ್ನು ಹೀರಿಕೊಂಡು ಪ್ರತಿಕ್ರಿಯಿಸಿದ ಎನ್ನುತ್ತಾರೆ ನೆಹರು. ಅದಷ್ಟೇ ಅಲ್ಲದೆ ನೆಹರು ಅವರು ಅಕ್ಬರ್ ಒಬ್ಬ ಸರ್ವಾಧಿಕಾರಿ ಎಂದು ಟೀಕಿಸುತ್ತಾರೆ. ಆತ ಭಾರತದ ವೈವಿಧ್ಯತೆಯನ್ನು ಸ್ವೀಕರಿಸುತ್ತಲೇ ತನ್ನ ಬಿಗಿ ನಿಯಂತ್ರಣವನ್ನು ಭದ್ರಪಡಿಸಿಕೊಳ್ಳಲು ನಿರ್ಧರಿಸಿದ ಎಂದು ಅವರು ಅಭಿಪ್ರಾಯ ಪಡುತ್ತಾರೆ. ನೆಹರೂರವರ ಇತಿಹಾಸ ಕುರಿತ ಇಂತಹ ವಸ್ತುನಿಷ್ಟ ವಿಶ್ಲೇಷಣೆಯು ಭೂತಕಾಲವನ್ನು ಮೌಲ್ಯಮಾಪನ ಮಾಡಿ ಕ್ಷಿಪ್ರ ತೀರ್ಪುಗಳು ನೀಡುವುದು ಅಷ್ಟು ಸುಲಭವಾದ ಕೆಲಸವಲ್ಲ ಎಂಬುದು ಎತ್ತಿ ತೋರಿಸುತ್ತದೆ. ಈ ವಿಶ್ಲೇಷಣೆಯು ಇತಿಹಾಸ ಕುರಿತು ಅನಗತ್ಯ ತೀರ್ಪುಗಳು ನೀಡುವುದನ್ನು ತಪ್ಪಿಸುವ ನೆಹರೂ ಅವರ ನಿರ್ಣಯವನ್ನು ಪ್ರತಿಬಿಂಬಿಸುವುದಷ್ಟೇ ಅಲ್ಲದೆ ಇತಿಹಾಸದ ವಿವಿಧ ಮೂಲಗಳು ಮತ್ತು ಅದರ ಕುರಿತು ಅನೇಕ ದೃಷ್ಟಿಕೋನಗಳೊಂದಿಗೆ ತೊಡಗಿಸಿಕೊಳ್ಳುವ ಪ್ರಯತ್ನವಾಗಿ ಗೋಚರಿಸುತ್ತದೆ ಎನ್ನುತ್ತಾರೆ ಮರಿವಾಲಾ ಅವರು. ನೆಹರು ಅವರ ಇತಿಹಾಸದ ಕುರಿತ ಚಿಂತನೆ ಮತ್ತು ವಿಶ್ಲೇಷಣೆಯು ಭೂತಕಾಲವನ್ನು ಚೆನ್ನಾಗಿ ಅರ್ಥಮಾಡಿಕೊಂಡು ನಮ್ಮ ಭವಿಷ್ಯವನ್ನು ಸುಧಾರಿಸಿಕೊಳ್ಳಲು ನೆರವಾಗುತ್ತದೆ. ನೆಹರೂ ಅವರು ದೇಶ ವಿಭಜನೆಯ ಭೀಕರತೆಯ ಕಹಿ ನೆನಪುಗಳನ್ನು ಹೋಗಲಾಡಿಸಲು ಮತ್ತು ಸ್ವಾತಂತ್ರ್ಯದ ನಂತರ ಏಕೀಕೃತ ಭಾರತವನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವಾಗ ಇತಿಹಾಸದ ಕುರಿತ ವಸ್ತುನಿಷ್ಟ ವಿಮರ್ಶೆ ಮತ್ತು ಅವರ ಉದಾತ್ ದೃಷ್ಟಿಕೋನಗಳು ಅತ್ಯುತ್ತಮವಾಗಿ ಪ್ರದರ್ಶಿಸಲ್ಪಟ್ಟವು. ನೆಹರು ಪ್ರಕಾರ ಭಾರತೀಯ ಸ್ವಾತಂತ್ರ್ಯ ಹೋರಾಟವು ಕೇವಲ ಸ್ವಾತಂತ್ರ್ಯದ ಹೋರಾಟವಾಗಿರಲಿಲ್ಲ. ಆ ಹೋರಾಟವು ರಾಷ್ಟ್ರೀಯತೆಯ ವಿವಿಧ ಎಳೆಗಳನ್ನು ಹೊಂದಿತ್ತು. ಅದರ ಜೊತೆಗೆ ಅಧಿಕಾರವನ್ನು ಕ್ರೋಢೀಕರಿಸಲು ಸಾಂಪ್ರದಾಯವಾದಿಗಳು ಕೋಮು ಉದ್ವಿಗ್ನತೆ ಪ್ರಚೋದಿಸುವ ಪ್ರಯತ್ನದ ಕುರಿತು ನೆಹರುರ ವಾದವನ್ನು ಲೇಖಕರು ದಾಖಲಿಸಿದ್ದಾರೆ. "ದಿ ಡಿಸ್ಕವರಿ ಆಫ್ ಇಂಡಿಯಾದಲ್ಲಿ" ಕೃತಿಯಲ್ಲಿ ನೆಹರು ಹೇಳುವಂತೆ ಧರ್ಮವು ಮಾನವ ಸಮಾಜದಲ್ಲಿ ಅಂತರ್ಗತವಾಗಿರುವ ಬದಲಾವಣೆ ಮತ್ತು ಪ್ರಗತಿಯ ಪ್ರವೃತ್ತಿಯನ್ನು ಪರಿಶೀಲಿಸುತ್ತದೆ ಎನ್ನುವ ಮಾತು ಸತ್ಯವಾಗಿದೆ. ಧರ್ಮವು ಇಂದು ಹೆಚ್ಚು ಆತ್ಮೋದ್ಧಾರಕ್ಕೆ ಸಂಬಂಧಿಸಿದ ವಿಷಯವಾಗದೆ ಅದು ಪಟ್ಟಭದ್ರ ಹಿತಾಸಕ್ತಿಗಳ ಅಧಿಕಾರದ ದಾಳವಾಗುತ್ತಿದೆ ಮತ್ತು ವಿಜ್ಞಾನಕ್ಕೆ ವಿರುದ್ಧವಾಗಿ ದುರ್ಬಳಕೆಗೊಳ್ಳುತ್ತಿದೆ. ಧರ್ಮವು ಪಟ್ಟಭದ್ರರ ಕೈಸೇರಿ ಸಂಕುಚಿತತೆ ಮತ್ತು ಅಸಹಿಷ್ಣುತೆಯನ್ನು ಉಂಟುಮಾಡುತ್ತಿದೆ. ವೈಯಕ್ತಿಕ ಮಟ್ಟದಲ್ಲಿ ಈ ಅಸಹಿಷ್ಣುತೆಯನ್ನು ಹೋಗಲಾಡಿಸುವ ಮಾರ್ಗವೆಂದರೆ ರಾಷ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕ ಚಿಂತನೆಯನ್ನು ಉತ್ತೇಜಿಸುವ ಜಾತ್ಯತೀತ ಶಿಕ್ಷಣ ಮತ್ತು ರಾಜ್ಯಗಳ ಮಟ್ಟದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳು ನೀಡುವ ಕೋಮುವಾದಿ ಹೊರತಾದ ಜನತಾಂತ್ರಿಕ ವ್ಯವಸ್ಥೆ ನೆಲೆಗೊಳ್ಳಬೇಕು ಎಂಬ ನೆಹರುರವರ ಅನಿಸಿಕೆ ಮರಿವಾಲಾ ಪುನರುಚ್ಛರಿಸಿದ್ದಾರೆ. ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ ಬ್ರಿಟಿಷ್ ಆಳ್ವಿಕೆಯ ಆರಂಭಿಕ ದಿನಗಳಲ್ಲಿ ಮತ್ತು ಅಧಿಕಾರದ ವರ್ಗಾವಣೆಯ ಸಮಯದಲ್ಲಿ ಕೋಮುವಾದದ ದುಷ್ಪರಿಣಾಮಗಳ ಬಗ್ಗೆ ಅವರ ಆಳವಾದ ತಿಳುವಳಿಕೆಯ ಪರಿಣಾಮವು ಮುಂದೆ ಅವರ ಆಳ್ವಿಕೆಯಲ್ಲಿ ರಾಷ್ಟ್ರೀಯ ಏಕತೆಯನ್ನು ನಿರ್ಮಿಸುವ ವಿಶಾಲ ಕಲ್ಪನೆಯೊಂದಿಗೆ ವೈಯಕ್ತಿಕ ಹಕ್ಕುಗಳ ಸ್ಥಾನವನ್ನು ಸಮನ್ವಯಗೊಳಿಸುವ ನೆಹರು ಅವರ ವಿಧಾನವು ಪ್ರಭಾವಿತಗೊಂಡು ಪರಿಪಕ್ವಗೊಂಡಿತ್ತು ಎನ್ನುತ್ತಾರೆ ಲೇಖಕರು. ಇದು ಭೂತಕಾಲದ ಘಟನೆಗಳಿಂದ ಕಲಿಯುವ ನೆಹರೂರವರ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಸತ್ಯ ಮತ್ತು ವೈಚಾರಿಕತೆಯ ಪರವಾಗಿ ಕಾಲ್ಪನಿಕ ಪುರಾಣಗಳನ್ನು ಮೀರಿಸುವುದು ನೆಹರೂವಾದದ ಬಳಕೆಯ ಮತ್ತೊಂದು ಹಿಡುವಳಿಯಾಗಿದೆ. ನೆಹರು ಪ್ರಕಾರ ಪುರಾಣಗಳು ಅಸತ್ಯ ಮತ್ತು ಕಾಲ್ಪನಿಕತೆಗಳ ಸಂಯೋಗವಾಗಿದ್ದು ಅದರ ಫಲಿತಾಂಶವು ಮಾನವ ದೃಷ್ಟಿಕೋನದ ಅಸ್ಪಷ್ಟತೆ, ಹಾಗು ಸಹಜ ಜೀವನ ವಿಚ್ಛೇದನದಿಂದ ನಿರೂಪಿಸಲ್ಪಟ್ಟು ಕೊನೆಗೆ ಅನೇಕ "ದುಷ್ಟ ಪರಿಣಾಮಗಳಿಗೆ" ಕಾರಣವಾಗುತ್ತದೆ ಎನ್ನುವ ನೆಹರುವಾದವನ್ನು ಮರಿವಾಲಾರು ದಾಖಲಿಸಿದ್ದಾರೆ. ಕಾಲ್ಪನಿಕ ಪುರಾಣಗಳನ್ನು ಜ್ಞಾನಕ್ಕೆ ಮೂಲವೆಂದು ಬಿಂಬಿಸುವ ಕ್ರಿಯೆಗಳು ಪ್ರಗತಿ ವಿರೋಧಿ ಹಾಗೂ ವಿಜ್ಞಾನ ವಿರೋಧಿಯಾಗಿರುತ್ತವೆ. ನೆಹರು 1959 ರಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಇದನ್ನು ಸ್ಪಷ್ಟವಾಗಿ, "ನಮ್ಮಲ್ಲಿ ನ್ಯೂಕ್ಲೀಯರ್ ಮತ್ತು ಪರಮಾಣು ಶಕ್ತಿಯ ಬೆಳವಣಿಗೆಯೂ ಆಗಿದೆ, ಮತ್ತು ನಮಗೆ ಗೋವಿನ ಸೆಗಣಿಯೇ ಸರ್ವ ಸಾಧನೆಯೆಂದು ನಂಬಿದ್ದ ಭೂತ ಕಾಲವೂ ಇದೆ." ಇದು ನಮ್ಮ ದೇಶದ ಜನರು ಜಗತ್ತನ್ನು ವಿವಿಧ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ" ಎಂದಿದ್ದರು. ಪೂರ್ವಾಗ್ರಹ ಮತ್ತು ಮಿಥ್ಯೆಯನ್ನು ಹೋಗಲಾಡಿಸಲು ವೈಜ್ಞಾನಿಕ ದತ್ತಾಂಶವನ್ನು ಪಡೆಯುವಲ್ಲಿ ನೆಹರೂರವರ ಗಮನವು ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳಲ್ಲಿ ಸ್ಪಷ್ಟವಾಗಿದೆ. ಉದಾಹರಣೆಗೆ, ದೇಶದಲ್ಲಿ ಆಹಾರ ಪೂರೈಕೆ ಅಸಮರ್ಪಕವಾಗಿದೆ ಎನ್ನುವ ಅವರ ಕಳವಳವು ಅವರು ಅಧಿಕಾರದಲ್ಲಿದ್ದಾಗ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳಲ್ಲಿ ಬಿಂಬಿತವಾಗಿದೆಯಂತೆ. ಗ್ರಾಮ ಮತ್ತು ಜಿಲ್ಲಾ ದಾಖಲೆಗಳಲ್ಲಿ ಬಳಕೆಯಾಗದೆ ಇರುವ ಎಲ್ಲಾ ಅಂಕಿಅಂಶಗಳ ಡೇಟಾವನ್ನು ಸಜ್ಜುಗೊಳಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಮತ್ತು ಲಭ್ಯವಿಲ್ಲದಿರುವಂತಹ ಡೇಟಾವನ್ನು ಸಂಗ್ರಹಿಸಲು ವಿಶೇಷ ವಿಚಾರಣೆಗಳನ್ನು ಕೈಗೊಳ್ಳಲು ಅವರು ರಾಜ್ಯಗಳನ್ನು ಒತ್ತಾಯಿಸಿದ ಘಟನೆಗಳು ಮಾಧವ್ ಖೋಸ್ಲಾ, ಸಂಪಾದಿಸಿದ "ಲೆಟರ್ಸ್ ಫಾರ್ ಎ ನೇಷನ್: ಜವಾಹರಲಾಲ್ ನೆಹರೂ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳು" ಕೃತಿಯಲ್ಲಿ (1947-1963; ಗುರ್ಗಾಂವ್: ಪೆಂಗ್ವಿನ್ ಬುಕ್ಸ್ ಇಂಡಿಯಾ, 2015; ಪುಟಗಳು 146-147) ದಾಖಲಾಗಿವೆ ಎನ್ನುತ್ತಾರೆ ಮರಿವಾಲಾ ಅವರು. ನೆಹರುರವರ ಈ ಕಾರ್ಯವಿಧಾನವು ದೇಶದಲ್ಲಿ ಹಸಿವಿನ ಸ್ಥಿತಿಯ ಬಗ್ಗೆ ವ್ಯಾಪಕವಾದ ತಪ್ಪು ಮಾಹಿತಿಗೆ ಸೂಕ್ತವಾದ ಪ್ರತಿಕ್ರಿಯೆಯಾಗಿತ್ತು. ಹಾಗೆ ಮಾಡುವ ಮೂಲಕ ಆಡಳಿತದಲ್ಲಿ ಒಂದು ಸ್ಪಷ್ಟವಾದ ನೀತಿ ಸಮಸ್ಯೆಯನ್ನು ಪರಿಹರಿಸಲು ವಿಶ್ವಾಸಾರ್ಹ ಡೇಟಾವನ್ನು ಬಳಸಲು ಅವರು ಆಶಿಸಿದ್ದರು ಎನ್ನುತ್ತಾರೆ ಲೇಖಕರು. ಭಾರತದಂತಹ ವೈವಿಧ್ಯಮಯ ಮತ್ತು ದೊಡ್ಡ ದೇಶದಲ್ಲಿ, ವಿವಿಧ ಸಂಸ್ಕೃತಿಗಳಲ್ಲಿನ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಶ್ಲಾಘಿಸುವುದು ರಾಷ್ಟ್ರೀಯ ಏಕತೆಗೆ ಅತ್ಯಗತ್ಯ ಎನ್ನುವುದು ನೆಹರೂರವರ ಸ್ಟಷ್ಟವಾದ ಅಭಿಪ್ರಾಯವಾಗಿತ್ತಂತೆ. ನೆಹರೂ ಅವರ ಇತಿಹಾಸವನ್ನು ಗ್ರಹಿಸುವ ವಿಧಾನವು ಭಾರತಿಯ ಸಮಾಜದ ಭವಿಷ್ಯವನ್ನು ಸುಧಾರಿಸಲು, ಸಮಾಜವನ್ನು ಅರ್ಥಮಾಡಿಕೊಳ್ಳಲು ಮತ್ತು ರಾಜಕೀಯ ಲಾಭಗಳಿಗಾಗಿ ಪುರಾಣಗಳು ಮತ್ತು ಸುಳ್ಳು ಸುದ್ದಿಗಳ ಶೋಷಣೆಯನ್ನು ತಪ್ಪಿಸಲು ಸಹಕಾರಿಯಾಗಿದೆ. ನೆಹರೂರವರು ದೇಶದ ಆಡಳಿತಾತ್ಮಕ ಅಧಿಕಾರವನ್ನು ಪಡೆಯುವ ಮುಂಚೆಯೇ ಇದನ್ನು ಅರಿತುಕೊಂಡಿದ್ದರು ಎನ್ನುವುದನ್ನು ಅವರು ಬರೆದ ಬರಹಗಳು ಮತ್ತು ಆನಂತರ ಪ್ರಧಾನಿಯಾಗಿ ಅವರು ಕೈಕೊಂಡ ಕಾರ್ಯಗಳಲ್ಲಿ ನೋಡಬಹುದಾಗಿದೆ. ದೇಶ ಇಂದು ಸಂಕಷ್ಟಗಳ ಸರಮಾಲೆಗಳಿಂದ ಭಾರವಾಗಿದೆ. ದೇಶ ಆಳುವವರ ದೂರದೃಷ್ಟಿಯ ಕೊರತೆˌ ಇತಿಹಾಸದ ಕುರಿತ ಪೂರ್ವಾಗ್ರಹ ಪೀಡಿತ ಹಾಗು ಸಂಕುಚಿತ ಭಾವ ದೇಶವನ್ನು ಇಂದು ಕವಲು ಹಾದಿಯಲ್ಲಿ ತಂದು ನಿಲ್ಲಿಸಿದೆ. ಇಂದು ದೇಶದ ಗಡಿಯಲ್ಲಿ ತಲೆದೋರಿರುವ ಸಂಕಟ, ಆಂತರಿಕವಾಗಿ ವ್ಯಾಪಿಸಿರುವ ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಸಮಸ್ಯೆಗಳು, ಹವಾಮಾನ ಬದಲಾವಣೆಯಂತಹ ಬಿಕ್ಕಟ್ಟುಗಳು ಮತ್ತು ಆರ್ಥಿಕ ಹಿಂಜರಿತದ ಸವಾಲುಗಳನ್ನು ಎದುರಿಸಲು ದೇಶಕ್ಕೆ ಇಂದು ನೆಹರುರವರ ಈ ವಸ್ತುನಿಷ್ಟ ಹಾಗು ದೂರಾಲೋಚನೆಯ ವಿಧಾನವು ಹೆಚ್ಚು ಅಗತ್ಯವಾಗಿದೆ ಎನ್ನುತ್ತಾರೆ ವಿಭವ್ ಮರಿವಾಲಾ ಅವರು. ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ:

Advertisement
Advertisement
Recent Posts
Advertisement