Advertisement

'ಕಾಶ್ಮೀರ್ ಫೈಲ್ಸ್' ಸಿನೇಮಾ ಕುರಿತು ಮೊಸಳೆಗಣ್ಣೀರು ಸುರಿಸುತ್ತಿರುವ ಬಿಜೆಪಿ ಅಧಿಕಾರದಲ್ಲಿದ್ದೂ, ಅಂದೇ ಏಕೆ ಕಾಶ್ಮೀರ ಪಂಡಿತರ ರಕ್ಷಣೆಗೆ ಮುಂದಾಗಿರಲಿಲ್ಲ?

Advertisement
ಬಿಜೆಪಿ ಬೆಂಬಲಿತ ವಿ.ಪಿ ಸಿಂಗ್ ಸರ್ಕಾರದ ಅಧಿಕಾರಾವಧಿಯಲ್ಲಿ ಭಯೋತ್ಪಾದಕರಿಗೆ ಹೆದರಿ ತಮ್ಮ ಸ್ವಂತ ನೆಲದಿಂದ ನಿರಾಶ್ರಿತರಾಗಿ ಕ್ಯಾಂಪ್‍ಗಳಲ್ಲಿ ನೆಲೆಸಿದ್ದ ಕಾಶ್ಮೀರಿ ಪಂಡಿತರಿಗೆ ಆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರಗಳು ವಸತಿ ಸಮುಚ್ಚಯಗಳನ್ನು ಕಟ್ಟಿ, ಅವರಿಗೆ ಸ್ವಂತ ಫ್ಲ್ಯಾಟ್‍ಗಳನ್ನು ಒದಗಿಸಿ, ಉಚಿತ ಶಿಕ್ಷಣ ಕೊಟ್ಟು, ಸರ್ಕಾರಿ ನೌಕರಿಗಳನ್ನು ಕೊಟ್ಟಿವೆ. ಅದೇ ಪಂಡಿತರಿಗಾಗಿ ಬಿಜೆಪಿ 'ಕಾಶ್ಮೀರಿ ಫೈಲ್ಸ್' ಎನ್ನುವ ಸಿನೆಮಾ ಬಿಟ್ಟು ಇನ್ನೇನನ್ನು ಮಾಡಿದೆ?

ಕಾಶ್ಮೀರ ಪಂಡಿತರನ್ನು ಅವರ ನೆಲದಿಂದ ಓಡಿಸಿದಾಗ ಬಿಜೆಪಿ ಕೇಂದ್ರ ಸರಕಾರದ ಭಾಗವಾಗಿತ್ತು. ಕೇಂದ್ರದಲ್ಲಿದ್ದ ವಿ.ಪಿ ಸಿಂಗ್ ಸರಕಾರಕ್ಕೆ ಬಿಜೆಪಿ ಬಾಹ್ಯ ಬೆಂಬಲ ಕೊಟ್ಟ ಕಾಲವದು. ಕಾಶ್ಮೀರಿ ಪಂಡಿತರು ನಿರ್ಗಮಿಸುತ್ತಿದ್ದಾಗ, ಬಿಜೆಪಿ ಅಧಿಕಾರದಲ್ಲಿದ್ದೂ ಏನೂ ಮಾಡದೇ, ಸುಮ್ಮನಿದ್ದು, ಇವತ್ತು ಅದೇ ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಮತ ಭಿಕ್ಷೆ ಬೇಡುತ್ತಿರುವುದು ಚೋದ್ಯ.

ಕಾಶ್ಮೀರ ಪಂಡಿತರನ್ನು ಅವರದ್ದೇ ನೆಲದಿಂದ ಓಡಿಸಿದ್ದು, ಅವರ ಮಾರಣಹೋಮ, ಅವರ ಮೇಲಿನ ದೌರ್ಜನ್ಯ ಬರೀ ವಿಷಾದನೀಯ ಅಲ್ಲ ಅಪರಾಧ ಕೂಡಾ. ಅದಾದ ಸಂದರ್ಭದಲ್ಲಿ ಬಹುಷ: ಇಂದಿನಂತೆ ಇಂಟರ್ನೆಟ್, ಎಲೆಕ್ಟ್ರಾನಿಕ್ ಮಾಧ್ಯಮ, ನೂರಾರು ನ್ಯೂಸ್ ಚಾನೆಲ್‍ಗಳು, ವಾಟ್ಸಾಪ್, ಸೋಷಿಯಲ್ ಮೀಡಿಯಾ ಇದ್ದಿದ್ದರೆ, ಆವಾಗ ಕಾಶ್ಮೀರದ ಪಂಡಿತರ ಮೇಲಾದ ದೌರ್ಜನ್ಯಕ್ಕೆ ದೇಶದೆಲ್ಲೆಡೆ ಪ್ರತಿಕ್ರಿಯೆ ಹಾಗೂ ಪ್ರತಿಭಟನೆ ಇನ್ನೂ ಹೆಚ್ಚಿನ ರೂಪದಲ್ಲಿರುತ್ತಿತ್ತೆಂದು ನನ್ನ ಭಾವನೆ. ಆದರೆ ಅಂದು ಕಾಶ್ಮೀರದಲ್ಲಾಗುತ್ತಿದ್ದ ತಲ್ಲಣದ ಸುದ್ದಿ ಕೊಡಲು ಇದ್ದದ್ದು ಸರಕಾರಿ ಸ್ವಾಮ್ಯದ ಆಲ್ ಇಂಡಿಯಾ ರೇಡಿಯೋ ಹಾಗೂ ದೂರದರ್ಶನ ಮಾತ್ರ. ಹಾಗಾಗಿ ಸರಕಾರ (ಬಿಜೆಪಿ ಕೂಡಾ ಸರಕಾರದ ಭಾಗವಾಗಿತ್ತು) ತಮ್ಮ ಹೆಸರಿಗೆ ಚ್ಯುತಿ ಬರದಂತೆ, ಎಷ್ಟು ಹಾಗೂ ಏನ್ ಬೇಕೋ ಅಷ್ಟನ್ನೇ ದೇಶಕ್ಕೆ ತೋರಿಸಿತ್ತು. ಅಷ್ಟಾದರೂ ಸರಕಾರದ ಭಾಗವಾಗಿದ್ದ ಬಿಜೆಪಿ ಬಾಯಿ ತೆರೆದಿರಲಿಲ್ಲ. ಅದಕ್ಕೂ ಒಂದು ಕಾರಣವಿತ್ತು.

ಪಂಡಿತರ ಮೇಲಿನ ದಾಳಿ ಹಾಗೂ ದೌರ್ಜನ್ಯ 1989 ಸಪ್ಟೆಂಬರ್ ನಲ್ಲಿ ಆರಂಭಗೊಂಡಿದ್ದರೂ, ಫಾರೂಕ್ ಅಬ್ದುಲ್ಲಾ ನೇತ್ರತ್ವದ ಸರಕಾರ ತಕ್ಕಮಟ್ಟಿಗೆ ಅದನ್ನು ನಿಯಂತ್ರಿಸಿತ್ತು. ಅಷ್ಟರಲ್ಲಿ ಚುನಾವಣೆ ನಡೆದು ಫಾರೂಕ್ ಅಬ್ದುಲ್ಲಾನ ಕಟ್ಟಾ ವಿರೋಧಿ ಮುಫ್ತೀ ಮಹಮ್ಮದ್ ಸಯೀದ್ ಬಿಜೆಪಿ ಬೆಂಬಲಿತ ವಿ ಪಿ ಸಿಂಗ್ ಸರಕಾರದಲ್ಲಿ ಗೃಹಮಂತ್ರಿಯಾದರು. ಮಂತ್ರಿಯಾಗಿ ಕೆಲ ದಿನಗಳಲ್ಲೇ ಮುಫ್ತೀ ಮಹಮ್ಮದ್ ಸಯೀದ್ ಮಗಳಾದ ರುಬಯ್ಯಾ ಸಯೀದಳನ್ನು ಜೆಕೆ‍ಎಲ್‍ಎಫ್ ಉಗ್ರರು ಅಪಹರಿಸಿ, ಆಕೆಯನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಬೇಕಾದರೆ ಜೈಲಿನಲ್ಲಿದ್ದ ಹದಿಮೂರು ಉಗ್ರರನ್ನು ಬಿಡುಗಡೆಗೊಳಿಸಬೇಕೆಂದು ಬೇಡಿಕೆಯಿಟ್ಟರು. ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಫಾರೂಕ್ ಅಬ್ದುಲ್ಲಾ ತಮ್ಮ ಲಂಡನ್ ಪ್ರವಾಸವನ್ನು ಮೊಟಕುಗೊಳಿಸಿ ಶ್ರೀನಗರಕ್ಕೆ ಬಂದು, ಉಗ್ರವಾದಿಗಳನ್ನು ಬಿಡುಗಡೆಗೊಳಿಸಲು ಒಪ್ಪದೇ, ರುಬಯ್ಯಾಳನ್ನು ಸುರಕ್ಷಿತವಾಗಿ ಕರೆತರುವ ಇತರ ಮಾರ್ಗಗಳನ್ನು ಹುಡುಕಬೇಕೆಂದು ಕೇಂದ್ರವನ್ನು ಕೇಳಿದರು.

ಆದರೆ ಅಪಹರಣ ನಡೆದು ಐದನೇ ದಿನಕ್ಕೆ ಫಾರೂಕ್ ಅಬ್ದುಲ್ಲಾ ರುಬಯ್ಯಾಳನ್ನು ಬಿಡುಗಡೆಗೊಳಿಸುವಲ್ಲಿ ಅಡ್ಡಗಾಲು ಹಾಕುತ್ತಿದ್ದಾರೆಂದು ಭಾವಿಸಿದ ಕೇಂದ್ರ ಸರಕಾರ ಮಂತ್ರಿಗಳಾದ ಇಂದರ್ ಕುಮಾರ್ ಗುಜ್ರಾಲ್ ಹಾಗೂ ಆರೀಫ್ ಮೊಹಮ್ಮದ್ (ಸದ್ಯ ಬಿಜೆಪಿ ಸದಸ್ಯ ಹಾಗೂ ಕೇರಳದ ರಾಜ್ಯಪಾಲ) ಅವರನ್ನು ಫಾರೂಕ್ ಅಬ್ದುಲ್ಲಾರ ಬಳಿ ಮಾತುಕತೆಗೆ ಕಳುಹಿಸಿತು. ಇದಾಗಿ ಎರಡು ತಾಸುಗಳ ಬಳಿಕ ಸರಕಾರ ಐದು ಉಗ್ರವಾದಿಗಳನ್ನು ಬಿಡುಗಡೆಗೊಳಿಸಿದ್ದರಿಂದ, ಸಂಜೆ ಏಳಕ್ಕೆಲ್ಲಾ ರುಬಯ್ಯಾಳನ್ನು ಉಗ್ರವಾದಿಗಳು ಬಿಡುಗಡೆಗೊಳಿಸಿದರು. ಕೆಲ ವರುಷಗಳ ನಂತರ ಮಾಧ್ಯಮಗಳೊಂದಿಗೆ ಮಾತಾನಾಡಿದ ಫಾರೂಕ್ ಅಬ್ದುಲ್ಲಾ ಅಂದು ಉಗ್ರವಾದಿಗಳ ಬೇಡಿಕೆಗೆ ಸೈ ಅನ್ನದಿದ್ದರೆ ಕೇಂದ್ರ ಸರಕಾರ ಜಮ್ಮು-ಕಾಶ್ಮೀರದಲ್ಲಿ ಆಡಳಿತದಲ್ಲಿದ್ದ ತಮ್ಮ ಸರಕಾರವನ್ನು ವಜಾಗೊಳಿಸುವುದಾಗಿ ಬೆದರಿಕೆಯೊಡ್ಡಿತೆಂದು ಹೇಳಿ, ಇಂದರ್ ಕುಮಾರ್ ಗುಜ್ರಾಲ್ ಹಾಗೂ ಆರಿಫ್ ಮೊಹಮ್ಮದ್ ತಮ್ಮ ಭೇಟಿಯಾಗಿದ್ದ ಕಾರಣವನ್ನು ಹೇಳಿದ್ದರು. ರುಬಯ್ಯಾ ಸಯೀದ್ ಕಾಶ್ಮೀರದ ದೊಡ್ಡ ನಾಯಕನ ಮಗಳಾಗಿದ್ದರಿಂದ ಆಕೆಯನ್ನು ಅಪಹರಿಸಿದವರು ಸಾರ್ವಜನಿಕರ ಆಕ್ರೋಶಕ್ಕ ಹೆದರಿ ಆಕೆಯನ್ನು ಏನೂ ಮಾಡುತ್ತಿದ್ದಿಲ್ಲವೆಂದು ಫಾರೂಕ್ ಅಬ್ದುಲ್ಲಾರ ಗ್ರಹಿಕೆಯಾಗಿತ್ತು. ಆದುದರಿಂದಲೇ ಆಕೆಯ ಬಿಡುಗಡೆಗಾಗಿ ಉಗ್ರವಾದಿಗಳನ್ನು ಬಿಡುಗಡೆಗೊಳಿಸಬಾರದೆಂದು ಅವರು ಸಲಹೆ ಕೊಟ್ಟಿದ್ದರು. ಆದರೆ ಅಂದಿನ ಕೇಂದ್ರ ಸರಕಾರ ಉಗ್ರವಾದಿಗಳನ್ನು ಬಿಡುಗಡೆಗೊಳಿಸಿತ್ತು. ಇದೊಂದು ಕಾಶ್ಮೀರದ ಉಗ್ರ ಇತಿಹಾಸದಲ್ಲಿ ಪರ್ವಕಾಲವೆಂದೇ ಕರೆಯಲ್ಪಡುತ್ತಿದೆ. ಅಂದು ಕೇಂದ್ರ ಸರಕಾರ ಉಗ್ರವಾದಿಗಳೆದುರು ಮಂಡಿಯೂರದಿದ್ದರೆ ಇವತ್ತು ಕಾಶ್ಮೀರದ ಪರಿಸ್ಥಿತಿ ಹೀಗಾಗುತ್ತಿದ್ದಿಲ್ಲ.

ಕಾಕತಾಳೀಯವೆಂದರೆ ಕೇಂದ್ರ ಸರಕಾರ ಉಗ್ರರ ಬೇಡಿಕೆಯನ್ನು ಮನ್ನಿಸಿ ತಮ್ಮ ವಶದಲ್ಲಿದ್ದ ಭಯೋತ್ಪಾದಕರನ್ನು ಬಿಡುಗಡೆಗೊಳಿಸಿದ ಸಂಧರ್ಭಗಳಲೆಲ್ಲಾ ಬಿಜೆಪಿಯೇ ಅಧಿಕಾರದಲ್ಲಿದದ್ದು (ಕಂದಹಾರ ಪ್ರಕರಣ ನೆನಪಿರುವವರಿಗೆ).

1990 ಜನವರಿ ತಿಂಗಳ ನಂತರ ಕಾಶ್ಮೀರಿ ಪಂಡಿತರು ಕಾಶ್ಮೀರವನ್ನು ನಿರ್ಗಮಿಸುತ್ತಿದ್ದಾಗ, ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವಿದ್ದು, ಜನವರಿ ಮೊದಲ ವಾರದಲ್ಲಿ, ಆವಾಗ ಕೇಂದ್ರದಲ್ಲಿ ಮಂತ್ರಿಯಾಗಿದ್ದ ಮುಫ್ತೀ ಮಹಮ್ಮದ್ ಸಯೀದ್ ಶಿಫಾರಸ್ಸಿನಂತೆ ನೇಮಕಗೊಂಡಿದ್ದ ಜಗನ್ಮೋಹನ್ ರಾಜ್ಯಪಾಲರಾಗಿದ್ದರು. ಈ ಜಗನ್ಮೋಹನ್ ಓರ್ವ IAS ಆಫೀಸರ್ ಹಾಗೂ ಒಂದು ಕಾಲದಲ್ಲಿ ಸಂಜಯ್ ಗಾಂಧಿಯವರ ಆಪ್ತ. ದೆಹಲಿ ಅಭಿವೃದ್ಧಿ ಪ್ರಾಧೀಕಾರದ ಉಪ-ಆಯುಕ್ತರಾಗಿ ಅವರು ಮಾಡಿದ ಅವಾಂತರಗಳದ್ದು ಇನ್ನೊಂದೇ ಕಥೆಯಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ದೆಹಲಿಯಲ್ಲಿನ ಸ್ಲಂ ಗಳ ಧ್ವಂಸ, ಏಕಾಏಕೀಯಾಗಿ ಖಾಲಿ ಮಾಡಿ, ಸ್ಲಂಗಳಲ್ಲಿದ್ದ ಜನರಿಗೆ ಯಾವುದೇ ನೆಲೆ ಕಲ್ಪಿಸದೇ ಹೊರಗಟ್ಟಿದ ಧೂರ್ತ ಈತ. ಟರ್ಕ್‌ಮನ್ ಗೇಟ್ ಸ್ಲಂ ಖಾಲಿ ಮಾಡಲೊಪ್ಪದ ನಿವಾಸಿಗಳ ಮೇಲೆ ಗುಂಡಿನ ದಾಳಿ ನಡೆಸಿ, ಇನ್ನು ಕೆಲವರನ್ನು ಬುಲ್ಡೋಜರ್ ಅಡಿಯಲ್ಲಿ ಹಾಕಿ ಕೊಂದ ಕುಖ್ಯಾತಿ ಆತನದ್ದು. ತುರ್ತು ಪರಿಸ್ಥಿತಿ ಆಗಿದ್ದರಿಂದ ಅಂದಿನ ಘಟನೆಗಳನ್ನು ಯಾವುದೇ ಮಾಧ್ಯಮಗಳು ವರದಿ ಮಾಡಲಾಗಿಲ್ಲ. ಆದರೆ ಇದೇ ಜಗನ್ಮೋಹನ್ ಮುಂದೆ ಕಾಂಗ್ರೇಸ್‍ನೊಂದಿಗೆ ಮುನಿಸಿ ಬಿಜೆಪಿ ಸೇರಿ ವಾಜಪೇಯಿ ಸರಕಾರದಲ್ಲಿ ಮಂತ್ರಿಯೂ ಆಗಿದ್ದರು.

ಜಗನ್ಮೋಹನ್ ಅವರನ್ನು ರಾಜ್ಯಪಾಲರನ್ನಾಗಿ ಮಾಡಿದರೆ ತಾವು ರಾಜೀನಾಮೆ ಕೊಡುವುದಾಗಿ ಫಾರೂಕ್ ಅಬ್ದುಲ್ಲಾ ಮೊದಲೇ ಹೇಳಿದ್ದರು ಯಾಕೆಂದರೆ ಹಿಂದೊಮ್ಮೆ ಫಾರೂಕ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿದ್ದಾಗ ಇದೇ ಜಗನ್ಮೋಹನ್ ಕಾಶ್ಮೀರದ ರಾಜ್ಯಪಾಲರಾಗಿದ್ದು, ಫಾರೂಕ್ ಅಬ್ದುಲ್ಲಾರ ಸರಕಾರವನ್ನು ವಜಾಗೊಳಿಸಲು ರಾಜೀವ್ ಗಾಂಧಿ ನೇತೃತ್ವದ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಆದರೆ ಮುಫ್ತೀ ಮಹಮ್ಮದ್ ಸಯಿದ್ ಹಾಗೂ ಬಿಜೆಪಿಯ ಮಾತಿಗೆ ಮಣೆಹಾಕಿದ ವಿ ಪಿ ಸಿಂಗ್ ಸರ್ಕಾರ ಜನನ್ಮೋಹನ ಅವರನ್ನು ಕಾಶ್ಮೀರದ ರಾಜ್ಯಪಾಲರನ್ನಾಗಿ ಮಾಡಿತು. ಇದರಿಂದ ಕೆರಳಿದ ಫಾರೂಕ್ ಅಬ್ದುಲ್ಲಾ ರಾಜೀನಾಮೆ ಕೊಟ್ಟು, ಸರಕಾರದ ಪತನಕ್ಕೆ ಕಾರಣವಾದರು. ಇದರಿಂದಾಗಿ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲ್ಪಟ್ಟಿತ್ತು. ಜಗನ್ಮೋಹನ್ ರಾಜ್ಯಪಾಲರಾದ ಮರುದಿನವೇ ಗವ್‍ಕಡಾಲ ನರಮೇಧ ನಡೆಯಿತು. ಪ್ರತಿಭಟನಾಕಾರರ ಮೇಲೆ CRPF ಜವಾನರು ಯದ್ವಾತದ್ವಾ ಗೋಲಿಬಾರ್ ನಡೆಸಿ ನೂರೈವತ್ತಕ್ಕಿಂತ ಹೆಚ್ಚಿನ ಜನರ ಸಾವಾಯಿತು. ಇದರ ನಂತರ ನಡೆದದ್ದು ಕರಾಳ ಚರಿತ್ರೆ. ಪಂಡಿತರು ಟಾರ್ಗೇಟ್ ಆದರು, ಕಾಶ್ಮೀರಿ ಯುವಕರು ಪಾಕ್ ಆಕ್ರಮಿತ ಕಾಶ್ಮೀರದಿಂದ ಶಸ್ತ್ರಗಳನ್ನು ಪಡೆದು ಭಯೋತ್ಪಾದನೆಗೆ ಇಳಿದರು, ಪಾಕ್ ಎಂದಿನಂತೆ ತನ್ನ ನರಿಬುದ್ದಿ ಉಪಯೋಗಿಸಿ ಯುವಕರನ್ನು ಪ್ರಚೋದಿಸಲಾರಂಭಿಸಿತು.

ಇಷ್ಟೆಲ್ಲಾ ಅಗುವಾಗ ಇವತ್ತು ಕಾಶ್ಮೀರಿ ಪಂಡಿತರ ಬಗ್ಗೆ ಕಣ್ಣೀರು ಸುರಿಸುವ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವಿ.ಪಿ ಸಿಂಗ್ ನೇತ್ರತ್ವದ ಸಮ್ಮಿಶ್ರ ಸರಕಾರದ ಭಾಗವಾಗಿದ್ದು ತುಟಿಬಿಚ್ಚದೇ ಅಧಿಕಾರಕ್ಕೆ ಅಂಟಿಕೊಂಡಿತ್ತು ಎನ್ನುವುದನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗುತ್ತಿದೆ. ಕಾಶ್ಮೀರ ಪಂಡಿತರನ್ನು ಕಾಶ್ಮೀರದಿಂದ ಓಡಿಸುತ್ತಿದ್ದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ ಬಿಜೆಪಿ ಏನು ಮಾಡುತ್ತಿತ್ತು? ಕಾಶ್ಮೀರಿ ಪಂಡಿತರ ಮೇಲೆ ಕನಿಕರವಿದ್ದಿದ್ದರೆ ಕನಿಷ್ಟ ಪಕ್ಷ ವಿ.ಪಿ ಸಿಂಗ್ ಸರಕಾರಕ್ಕೆ ಕೊಟ್ಟ ಬೆಂಬಲವನ್ನಾದರೂ ವಾಪಾಸ್ ಪಡೆದಿತ್ತಾ? ಇಲ್ಲ!.. ಯಾಕೆ? ಅಧಿಕಾರಕ್ಕಾಗಿ ಅಂದು ಸುಮ್ಮನಿದ್ದು ಎಲ್ಲವನ್ನೂ ನೋಡುತ್ತಿತ್ತು ಬಿಜೆಪಿ.

ಅದಾದ ನಂತರ ಬಿಜೆಪಿ ಸುಮಾರು 15 ವರುಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ನಡೆಸಿದೆ, ಜಮ್ಮು-ಕಾಶ್ಮೀರದಲ್ಲಿಯೂ ಸರಕಾರವನ್ನು ನಡೆಸಿದೆ. ಈ ಅವಧಿಯಲ್ಲಿ ಎಷ್ಟು ಮಂದಿ ಕಾಶ್ಮೀರಿ ಪಂಡಿತರನ್ನು ಅವರ ನಾಡಿಗೆ ವಾಪಾಸು ಕರೆತಂದು ಸೆಟಲ್ ಮಾಡಿದೆ?

ಹಿಂದಿನ ಕಾಂಗ್ರೆಸ್ ಮತ್ತಿತರ ಸರಕಾರಗಳು ಕಾಶ್ಮೀರಿ ಪಂಡಿತರಿಗೆ ಸರಕಾರಿ ಉದ್ಯೋಗ, ದೆಹಲಿ, ಜಮ್ಮು-ಕಾಶ್ಮೀರದಲ್ಲಿ ವಸತಿ ಸಮುಚ್ಛಯಗಳನ್ನು ಕಟ್ಟಿಕೊಡುವುದರ ಜೊತೆಗೆ ಒಬ್ಬ ವ್ಯಕ್ತಿಗೆ ತಿಂಗಳ ರೇಷನಿಗೆಂದು ರೂಪಾಯಿ 1650/- ಅಥವಾ ಒಂದು ಕುಟುಂಬಕ್ಕೆ ಗರಿಷ್ಟ ರೂ. 6600/- ಪ್ರತೀ ತಿಂಗಳಿಗೆ ಕೊಡಲಾರಂಭಿಸಿದ್ದವು. ಅದರ ಜೊತೆಗೆ ಓರ್ವ ವ್ಯಕ್ತಿಗೆ ಒಂಬತ್ತು ಕೆಜಿ ಅಕ್ಕಿ, ಎರಡು ಕೆಜಿ ಗೋಧಿ ಹಾಗೂ ಒಂದು ಕುಟುಂಬಕ್ಕೆ ಒಂದು ಕೆಜಿ ಸಕ್ಕರೆಯಂತೆ ಉಚಿತವಾದ ರೇಷನನ್ನೂ ಕೊಡುವ ಕಾರ್ಯಕ್ರಮಗಳನ್ನು ಹಿಂದಿನ ಸರಕಾರಗಳೇ ರೂಪಿಸಿ, ನಡೆಸಿಕೊಂಡು ಬಂದಿವೆ. ಜಮ್ಮುವಿನ ಪುಖ್ರೂ, ಜಾಗ್ತೀ, ನಗ್ರೋಟಾ ಹಾಗೂ ಮುಥೀಯಲ್ಲಿ ಯುಪಿಎ- ಅವಧಿಯಲ್ಲಿ 5242 2-BHK ಫ್ಲ್ಯಾಟ್‍ಗಳನ್ನು ಕಾಶ್ಮೀರಿ ಪಂಡಿತರಿಗೆ ಕಟ್ಟಿಕೊಡಲಾಗಿದೆ. ಇನ್ನು ಬುಡ್ಗಾಂವ್ ಜಿಲ್ಲೆಯ ಶೇಖ್ಪೊರಾದಲ್ಲಿ ಜಮ್ಮು-ಕಾಶ್ಮೀರದ ಸರಕಾರಿ ಇಲಾಖೆಗಳಲ್ಲಿ ಕೆಲಸಕ್ಕೆ ಸೇರಿದ ಕಾಶ್ಮೀರಿ ಪಂಡಿತರಿಗೆಂದು 200 ಫ್ಲ್ಯಾಟ್‍ಗಳನ್ನೂ ಕಟ್ಟಿಕೊಡಲಾಗಿದೆ. ಇನ್ನು ಯುಪಿಎ 2008ರಲ್ಲಿ ಘೋಷಿಸಿದ ಪ್ಯಾಕೇಜ್‍ನಂತೆ ಮೂರು ಸಾವಿರ ಕಾಶ್ಮೀರಿ ಯುವಕರಿಗೆ ಸರಕಾರಿ ಉದ್ಯೋಗ ಕಲ್ಪಿಸುವ ಕಾರ್ಯಕ್ರಮವಿತ್ತು. ಅದರಲ್ಲಿ ಇದುವರೆಗೂ 1597 ಕಾಶ್ಮೀರಿ ಯುವಕರಿಗೆ ಸರಕಾರಿ ಕೆಲಸ ಕೊಡಲಾಗಿದ್ದು, ನಾಲ್ಕುನೂರ ಐವತ್ತಕ್ಕಿಂತ ಹೆಚ್ಚಿನ ಮನೆಗಳನ್ನು ಕಟ್ಟಿ ಈ ಯುವಕರಿಗೆ ಕೊಡಲಾಗಿದೆ.

ಇದೆಲ್ಲಾ ಆಗಿದ್ದು ಬಿಜೆಪಿ ಹಾಗೂ ಮೋದಿಯಿಂದಲ್ಲ ಬದಲಾಗಿ ಹಿಂದಿನ ಕಾಂಗ್ರೇಸ್ ಹಾಗೂ ಕಾಶ್ಮೀರದಲ್ಲಿದ್ದ ಇತರ ಸರಕಾರಗಳಿಂದ. ಈವಾಗ ಪುನ: ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಅಳಲಾರಂಭಿಸಿರುವ ಸರಕಾರ ತನ್ನ ಅಧಿಕಾರವಧಿಯಲ್ಲಿ ಪಂಡಿತರಿಗಾಗಿ ಏನು ಮಾಡಿದೆ? ಎಷ್ಟು ಮಂದಿ ಪಂಡಿತರಿಗೆ ಕೆಲಸ ಕೊಟ್ಟಿದೆ, ಎಷ್ಟು ಮಂದಿಯನ್ನು ವಾಪಾಸ್ ಕರೆತರಲಾಗಿದೆಯೆಂದು ಹೇಳಲಿ. ಮೋದಿ ಅಧಿಕಾರಕ್ಕೆ ಬಂದ ಪ್ರಥಮ ವರುಷದಲ್ಲಿ ಪಂಡಿತರಿಗೆಂದು ಐನೂರು ಕೋಟಿಯ ಪ್ಯಾಕೇಜೊಂದನ್ನು ಘೋಷಿಸಿದ್ದರು. ಎರಡನೇ ವರುಷದಲ್ಲಿ ಇನ್ನೊಮ್ಮೆ ಆರುನೂರು ಕೋಟಿಯ ಪ್ಯಾಕೇಜನ್ನು ಘೋಷಿಸಿದ್ದರು. ಇದರಲ್ಲಿ ಇದುವರೆಗೆ ಎಷ್ಟು ಹಣ ಬಿಡುಗಡೆಯಾಗಿದೆ, ವಿನಿಯೋಗಿಸ್ಪಟ್ಟಿದೆಯೆಂದು ಮೋದಿ ಸರಕಾರ ಶ್ವೇತಪತ್ರ ಹೊರಡಿಸಲಿ. ಆವಾಗ ತಿಳಿಯುತ್ತೆ ಕಾಶ್ಮೀರಿ ಪಂಡಿತರಿಗಾಗಿ, ಅವರ ಪುನರ್ವಸತಿಗಾಗಿ ಯಾವ ಸರಕಾರಗಳು ಎಷ್ಟು ಹಾಗೂ ಏನನ್ನು ಮಾಡಿದೆಯೆಂದು.

ಬಿಜೆಪಿ ಬೆಂಬಲಿತ ವಿ.ಪಿ ಸಿಂಗ್ ಸರ್ಕಾರದ ಅಧಿಕಾರಾವಧಿಯಲ್ಲಿ ಭಯೋತ್ಪಾದಕರಿಗೆ ಹೆದರಿ ತಮ್ಮ ಸ್ವಂತ ನೆಲದಿಂದ ನಿರಾಶ್ರಿತರಾಗಿ ಕ್ಯಾಂಪ್‍ಗಳಲ್ಲಿ ನೆಲೆಸಿದ್ದ ಕಾಶ್ಮೀರಿ ಪಂಡಿತರಿಗೆ ಆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರಕಾರಗಳು ವಸತಿ ಸಮುಚ್ಚಯಗಳನ್ನು ಕಟ್ಟಿ, ಅವರಿಗೆ ಸ್ವಂತ ಫ್ಲ್ಯಾಟ್‍ಗಳನ್ನು ಒದಗಿಸಿ, ಅವರಿಗೆ ಉಚಿತ ಶಿಕ್ಷಣ ಕೊಟ್ಟು, ಸರ್ಕಾರಿ ನೌಕರಿಗಳನ್ನು ಕೊಟ್ಟಿವೆ. ಅದೇ ಪಂಡಿತರಿಗಾಗಿ ಬಿಜೆಪಿ 'ಕಾಶ್ಮೀರಿ ಫೈಲ್ಸ್' ಎನ್ನುವ ಸಿನೆಮಾ ಬಿಟ್ಟು ಇನ್ನೇನನ್ನು ಮಾಡಿದೆ ಎಂದು ಹೇಳಲಿ.

ಬರಹ: ಅಲ್ಮೇಡಾ ಗ್ಲಾಡ್ಸನ್ (ಲೇಖಕರು ಜನಪರ ಚಿಂತಕರು)

Advertisement
Advertisement
Recent Posts
Advertisement