Advertisement

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ- ಸಚಿವ ಈಶ್ವರಪ್ಪ ಬಂಧನ ಯಾವಾಗ: ಬಿ.ಕೆ ಹರಿಪ್ರಸಾದ್ ಪ್ರಶ್ನೆ

Advertisement
ಕಾಂಟ್ರಾಕ್ಟರ್ ಸಂತೋಷ ಪಾಟೀಲ್ ಆತ್ಮಹತ್ಯೆಗೆ ಕಾರಣವಾಗಿರುವ ಸಚಿವ ಈಶ್ವರಪ್ಪನವರನ್ನ ಈ ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ, ಬಂಧಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ.

ಹಿಂದೂ ವಾಹಿನಿ ರಾಷ್ಟ್ರೀಯ ಕಾರ್ಯದರ್ಶಿ, ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಇಂದು ಉಡುಪಿಯ ಖಾಸಗೀ ಹೊಟೇಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಆತ್ಮಹತ್ಯೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ನೇರ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕೂಡಲೇ ಮೀನಾಮೇಷ ಮಾಡದೆ ಕೆ ಎಸ್ ಈಶ್ವರಪ್ಪನವರನ್ನ ಸಚಿವ ಸಂಪುಟದಿಂದ ವಜಾಗೊಳಿಸಿ, ಐಪಿಎಸ್ ಸೆಕ್ಸನ್ 302, 306 ಹಾಗೂ ಭ್ರಷ್ಟಾಚಾರದಡಿಯಲ್ಲಿ ಕೇಸ್ ದಾಖಲಿಸಿ ಬಂಧಿಸಬೇಕು ಎಂದವರು ಹೇಳಿದ್ದಾರೆ.

ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಕೆಲವು ಮಾಧ್ಯಮ ಮಿತ್ರರಿಗೆ ಕಳುಹಿಸಿದ್ದಾರೆ ಎನ್ನಲಾದ ವಾಟ್ಸ್ಯಾಪ್ ಸ್ಕ್ರೀನ್ ಶಾಟ್.

ಈಗಾಗಲೇ ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರೇ ನನ್ನ ಸೋದರನ ಸಾವಿಗೆ ನೇರ ಕಾರಣ. ನನ್ನ ಸಹೋದರ 4 ಕೋಟಿ ರೂ. ಕೆಲಸ ಮಾಡಿದ್ದ. ಸಾಲ ಸೋಲ ಮಾಡಿ ನನ್ನ ತಮ್ಮ ಕಾಮಗಾರಿ ಮಾಡಿದ್ದ. ಅವನ ಬಳಿ 40% ಕಮಿಷನ್ ಕೇಳಿದ್ದ ಬಗ್ಗೆ ಸಾಕ್ಷಿ ಇದೆ. ನನ್ನ ತಮ್ಮನಿಗೆ ನ್ಯಾಯ ಕೊಡಿಸಿ ಎಂದು ಪ್ರಶಾಂತ್ ಕಣ್ಣೀರು ಹಾಕಿದ್ಧಾರೆ.

ಕಾಮಗಾರಿಗಳಲ್ಲಿ ಸಚಿವರು ಕಮಿಷನ್ ಪಡೆಯುತ್ತಿದ್ದಾರೆ, ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ಈ ಹಿಂದೆ ಸಂತೋಷ ಪಾಟೀಲ್ ಅವರು ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ದೆಹಲಿಗೂ ಹೋಗಿ ಕೆಲ ಬಿಜೆಪಿ ನಾಯಕರಿಗೂ ಭೇಟಿಯಾಗಿ ಭ್ರಷ್ಟಾಚಾರದ ಕುರಿತು ಚರ್ಚೆ ಕೂಡ ನಡೆಸಿದ್ದರು. ಆದ್ರೆ ಯಾವುದೇ ಭರವಸೆ ಪಾಟೀಲ್ ಅವರಿಗೆ ಸಿಕ್ಕಿರಲಿಲ್ಲ ಎಂದವರು ವಿವರಿಸಿದ್ದಾರೆ.

ಸಚಿವ ಈಶ್ವರಪ್ಪ ಸೇರಿದಂತೆ ಇಡೀ ಸರ್ಕಾರವೇ 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷರೇ ಗಂಭೀರವಾಗಿ ಆರೋಪ ಮಾಡಿದ್ದಾರೆ. ಪ್ರಧಾನಿಗೂ ಪತ್ರ ಬರೆದಿದ್ದಾರೆ. ಆದ್ರೆ ಇಲ್ಲಿವರೆಗೆ ಪ್ರಧಾನಿಯಾಗಲಿ, ಸಿಎಂ ಆಗಲಿ ಅದರ ಆರೋಪದ ಬಗ್ಗೆ ಚರ್ಚೆ ಮಾಡಲು ತಯಾರಿಲ್ಲ. ಸಂತೋಷ್ ಪಾಟೀಲ್ ಬರೆದ ಪತ್ರವನ್ನ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಿದ್ದರೆ ಅಮಾಯಕ ಗುತ್ತಿಗೆದಾರನ ಪ್ರಾಣ ಉಳಿಯುತ್ತಿತ್ತು. ಸರ್ಕಾರ ಬೇಜವಾಬ್ದಾರಿತನದಿಂದ ಬಾಳಿ ಬದುಕ ಬೇಕಿದ್ದ ಪಾಟೀಲ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಸರ್ಕಾರ ವೈಫಲ್ಯದಿಂದಾದ ಕೊಲೆಯಲ್ಲವೇ ಎಂದವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಗೃಹ ಸಚಿವ ಕೆಜೆ ಜಾರ್ಜ್ ಮೇಲೆ ಆರೋಪ ಕೇಳಿ ಬಂದಾಗ ರಾಜೀನಾಮೆ ನೀಡಿ ತನಿಖೆ ಎದುರಿಸಿದ್ದರು. ಕೂಡಲೇ ಸಚಿವ ಈಶ್ವರಪ್ಪ ರಾಜೀನಾಮೆ ನೀಡಬೇಕು, ಅಥವಾ ಮುಖ್ಯಮಂತ್ರಿಗಳು ವಜಾ ಮಾಡಬೇಕು. ಸಂತೋಷ್ ಪಾಟೀಲ್ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿ, ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸುತ್ತೇನೆ ಎಂದವರು ಹೇಳಿದ್ದಾರೆ.
Advertisement
Advertisement
Recent Posts
Advertisement