Advertisement

ಜೀವನ್ಮರಣ ಸ್ಥಿತಿಯಲ್ಲಿರುವಾಗ ಇವರುಗಳು ರಕ್ತದಾನಿಯ ಧರ್ಮ ಕೇಳ್ತಾರಾ? ಇದು ಉಲ್ಬಣಿಸುತ್ತಿರುವ ಮಾನಸಿಕ ಕಾಯಿಲೆ: ಈ ಸಮೂಹ ಸನ್ನಿ ದೇಶವನ್ನೇ ನಾಶ ಮಾಡೀತು,  ಹುಷಾರಾಗಿರಿ!

Advertisement

ಬರಹ : ಸನತ್‌ಕುಮಾರ್ ಬೆಳಗಲಿ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು)

ಮುಸಲ್ಮಾನರು ಮಾಡಿದ್ದು ಹಾಡಿದ್ದು ಬೇಡವೆಂದಾದರೆ ಮುಹಮ್ಮದ್ ರಫಿ ಹಾಡುಗಳಿಗೆ ಕಿವಿ ಮುಚ್ಚುವಿರಾ? ಬಿಸ್ಮಿಲ್ಲಾ ಖಾನರ ಶಹಾನಾಯಿ ನಿಮಗೆ ಬೇಡವೇ? ಕೊನೆಯುಸಿರೆಳೆಯುವ ಕ್ಷಣದಲ್ಲಿ ಬದುಕಿಸಲು ಬಂದ ಡಾಕ್ಟರ್‌ನ ಜಾತಿ, ಮತ ನೋಡಿ ಚಿಕಿತ್ಸೆ ಪಡೆಯುವಿರಾ? ಗೊಟಕ್ಕೆನ್ನುವಾಗ ನಿಮ್ಮ ರಕ್ತಕ್ಕೆ ಹೊಂದಾಣಿಕೆ ಯಾಗಬಲ್ಲ ಮುಸಲ್ಮಾನನೊಬ್ಬ ರಕ್ತ ಕೊಡಲು ಬಂದರೆ ಹಿಂದೂ ರಕ್ತ ಬೇಕೆಂದು ಹಠ ಹಿಡಿದು ನೆಗೆದು ಬೀಳುವಿರಾ? ಏನಾಗಿದೆ ನಿಮ್ಮ ಬುದ್ಧಿಗೆ? ಈ ಸಮೂಹ ಸನ್ನಿ ನಿಮ್ಮನ್ನು ಮಾತ್ರವಲ್ಲ ಕೊನೆಗೆ ದೇಶವನ್ನೇ ನಾಶ ಮಾಡೀತು ಹುಷಾರಾಗಿರಿ.

ಒಬ್ಬ ಮನುಷ್ಯ ತನ್ನ ಸಹಜೀವಿಯನ್ನು ಸುಮ್ಮ ಸುಮ್ಮನೆ ದ್ವೇಷಿಸುವುದು, ಒಂದೇ ರಸ್ತೆಯಲ್ಲಿ ನಡೆದಾಡುವಾಗಲೂ ಕ್ಯಾಕರಿಸಿ ಕೆಮ್ಮುವದು, ಮೈ ಮೇಲೆ ಹೋಗಿ ಪರಚಿ ಹೊಡೆಯುವುದು ಮಾನಸಿಕ ಕಾಯಿಲೆಯಲ್ಲದೇ ಬೇರೇನೂ ಅಲ್ಲ. ಭಾರತದ ಉಳಿದ ರಾಜ್ಯಗಳ ವಿವರ ಗೊತ್ತಿಲ್ಲ. ಕರ್ನಾಟಕದಲ್ಲಂತೂ ಕಳೆದ ಕೆಲ ತಿಂಗಳಿಂದ ಮನುಷ್ಯ ದ್ವೇಷದ ಈ ಕಾಯಿಲೆ ಉಲ್ಬಣಿಸುತ್ತಿದೆ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾದವರೂ ಕಾಯಿಲೆ ಪೀಡಿತರಾಗಿರುವುದು ಆತಂಕದ ಸಂಗತಿ.

ರಾಜ್ಯದಲ್ಲಿ ಯಡಿಯೂರಪ್ಪನವರು ಹೋಗಿ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ಅನಂತರ ಏನೇನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ.ಸಭ್ಯತೆ, ಸಜ್ಜನಿಕೆ, ಸರಳತೆಗೆ ಹೆಸರಾದ ಕರ್ನಾಟಕ ಈಗ ಕಳೆದು ಹೋಗುತ್ತಿದೆ.

ಈಗ ನಾವು ನೋಡುತ್ತಿರುವುದು ಸಕಲ ಜೀವಾತ್ಮರಲಿ ಲೇಸನ್ನು ಕಂಡ ಬಸವಣ್ಣನವರ ಕರ್ನಾಟಕವಲ್ಲ. ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವೆಂದು ವರ್ಣಿಸಿದ ಕುವೆಂಪು ಅವರ ಕರ್ನಾಟಕವಲ್ಲ. ಇದು ‘ಕುಲ ಕುಲವೆಂದು ಹೊಡೆದಾಡದಿರಿ’ ಎಂದ ಕನಕದಾಸರ ಕರ್ನಾಟಕವೂ ಅಲ್ಲ. ಹೋಗಲಿ ಶಿಶುನಾಳ ಶರೀಫರಿಗೆ ದೀಕ್ಷೆ ನೀಡಿದ ಗುರು ಗೋವಿಂದಭಟ್ಟರ ಕರ್ನಾಟಕ ವಾಗಿಯಾದರೂ ಉಳಿದಿದೆಯಾ ಅದೂ ಇಲ್ಲ. ಮನುಷ್ಯ ಜೊತೆಗಿರುವ ಇನ್ನೊಬ್ಬ ಮನುಷ್ಯನನ್ನು ವಿನಾಕಾರಣ ದ್ವೇಷಿಸುವುದು ಅತಿರೇಕಕ್ಕೆ ಹೋಗಿ ಮಾನಸಿಕ ರೋಗದ ರೂಪ ತಾಳಿದಾಗ ಸರಿಯಾದ ಚಿಕಿತ್ಸೆ ಅಗತ್ಯವಾಗುತ್ತದೆ. ಮಾನಸಿಕ ಆಸ್ಪತ್ರೆಗಳ ಸಂಖ್ಯೆಯೂ ಹೆಚ್ಚಾಗಬೇಕು. ಯಾಕೆಂದರೆ ಈ ಕಾಯಿಲೆ ವಿಧಾನಸೌಧ, ಮಾಧ್ಯಮ ವಲಯ ಹೀಗೆ ಎಲ್ಲೆಡೆ ಹರಡುತ್ತಿದೆ.ಕರ್ನಾಟಕ ಮಾತ್ರವಲ್ಲ ಇಡೀ ಭಾರತ ಹುಚ್ಚಾಸ್ಪತ್ರೆಯಾಗುವ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ.

ಮಾನಸಿಕ ಅಸ್ವಸ್ಥತೆಗೆ ಸಂಬಂಧಪಟ್ಟಂತೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ. ಜನಸಾಮಾನ್ಯರಿಗೆ ಇದರ ಅರಿವಿಲ್ಲ. ಮನುಷ್ಯ ದ್ವೇಷವೂ ಕೂಡ ಒಮ್ಮೊಮ್ಮೆ ಮಾನಸಿಕ ಕಾಯಿಲೆಗೆ ಕಾರಣವಾಗುತ್ತದೆ. ಜಾತಿ ದ್ವೇಷ, ಕೋಮು ದ್ವೇಷ ಹೀಗೆ ಹಲವಾರು ದ್ವೇಷಗಳು ಕೊನೆಗೆ ಒಬ್ಬ ಮನುಷ್ಯನನ್ನು ಹುಚ್ಚನನ್ನಾಗಿ ಮಾಡುತ್ತವೆ. ಇದಕ್ಕೆ ಉದಾಹರಣೆ ನಮ್ಮ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇತ್ತೀಚೆಗೆ ಬೆಂಗಳೂರಿನ ಜೆಜೆ ನಗರದ ಚಂದ್ರಶೇಖರ ಹತ್ಯೆಗೆ ಸಂಬಂಧಿಸಿದಂತೆ ತರಾತುರಿಯಲ್ಲಿ ‘‘ಉರ್ದು ಮಾತಾಡಲು ಬರುವುದಿಲ್ಲ ಎಂಬ ಕಾರಣಕ್ಕಾಗಿ ಚಂದ್ರಶೇಖರ ಕೊಲೆಯಾಯಿತು’’ ಎಂದು ಪತ್ರಕರ್ತರ ಎದುರು ಹೇಳಿಬಿಟ್ಟರು.ಇವರಿಗಿಂತ ಮುಂದೆ ಹೋದ ಬಿಜೆಪಿ ಶಾಸಕ ಸಿ.ಟಿ.ರವಿ ‘‘ಕನ್ನಡ ಮಾತಾಡಿದ್ದಕ್ಕಾಗಿ ಚಂದ್ರಶೇಖರ ಹತ್ಯೆಯಾಯಿತು’’ ಎಂದು ಬಹಿರಂಗವಾಗಿ ಹೇಳಿಬಿಟ್ಟರು. ಆದರೆ ಇವರಿಬ್ಬರ ಹೇಳಿಕೆಗಳನ್ನು ತಿರಸ್ಕರಿಸಿದ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಬೈಕ್ ಢಿಕ್ಕಿಯಿಂದಾದ ಗಲಾಟೆಯಿಂದ ಚಂದ್ರಶೇಖರ ಎಂಬ ಯುವಕನ ಕೊಲೆ ನಡೆದಿದೆ ಎಂದು ಸ್ಪಷ್ಟೀಕರಣ ನೀಡಿದರು. ಗೃಹ ಮಂತ್ರಿಯಂಥ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ವ್ಯಕ್ತಿ ಪೊಲೀಸರು ವರದಿ ನೀಡುವ ಮುನ್ನವೇ ಸಮಾಜದಲ್ಲಿ ಕೋಮು ಕಲಹಕ್ಕೆ ಕಾರಣವಾಗಬಲ್ಲ ಪ್ರಚೋದನಕಾರಿ ಹೇಳಿಕೆ ನೀಡುತ್ತಾರೆಂದರೆ ಇದರ ಅರ್ಥವೇನು? ಸಚಿವರೂ ಮನುಷ್ಯ ದ್ವೇಷದ ಕಾಯಿಲೆಗೆ ಬಲಿಯಾಗಿದ್ದಾರಾ?

ಇದೊಂದೇ ಘಟನೆಯಲ್ಲ. ಹಿಜಾಬ್‌ನಿಂದ ಆರಂಭವಾಗಿ ಜಾತ್ರೆ ಉತ್ಸವಗಳಲ್ಲಿ ಮುಸ್ಲಿಮ್ ವ್ಯಾಪಾರಸ್ಥರಿಗೆ ಬಹಿಷ್ಕಾರ ಹಾಕುವವರೆಗೆ ಬಂದು ಮಸೀದಿಗಳಲ್ಲಿ ಅಝಾನ್ ಕೂಗುವಲ್ಲಿಗೆ ತಲುಪಿ, ಹಲಾಲ್ ಜಟ್ಕಾ ಮಾಂಸದ ಧೂಳು ಎಬ್ಬಿಸಿದ ಘಟನಾವಳಿಗಳನ್ನು ನೋಡಿದರೆ ಮುಂದಿನ ಭಯಾನಕ ದಿನಗಳ ಬಗ್ಗೆ ಆತಂಕ ಉಂಟಾಗುತ್ತದೆ.

ದರಿದ್ರರಲ್ಲಿ, ರೋಗಿಗಳಲ್ಲಿ ದೇವರನ್ನು ಕಂಡ ಸ್ವಾಮಿ ವಿವೇಕಾನಂದರು ಬದುಕಿದ್ದಾಗ ಕೇರಳಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಜಾತೀಯತೆ, ಸ್ತ್ರೀ ಶೋಷಣೆ, ಮೂಢ ನಂಬಿಕೆಗಳನ್ನು ಕಣ್ಣಾರೆ ಕಂಡು ಕೇರಳವನ್ನು ಹುಚ್ಚಾಸ್ಪತ್ರೆ ಎಂದು ಕರೆದಿದ್ದರು. ನಂತರ ಬಂದ ನಾರಾಯಣಗುರುಗಳು ತಳ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿದರು. ಮನುಷ್ಯರೆಲ್ಲ ಒಂದೇ ಎಂಬ ಸಂದೇಶವನ್ನು ಸಾರಿದರು. ನಾರಾಯಣಗುರುಗಳ ನಂತರ ಅವರ ಪರಂಪರೆಯ ನೈಜ ವಾರಸುದಾರರಾದ ಕಮ್ಯುನಿಸ್ಟರು ಕೇರಳದ ಸಾರಥ್ಯ ವಹಿಸಿದರು. ಇಂದು ಕೇರಳ ಸಾಕ್ಷರತೆ, ಆರೋಗ್ಯ, ಸೌಕರ್ಯ, ಶಿಕ್ಷಣ, ಅಭಿವೃದ್ಧಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿ ಇದೆ. ಕೇರಳದ ಜನತೆ ಪ್ರಜ್ಞಾವಂತರು. ಕಮ್ಯುನಿಸ್ಟರ ನೇತೃತ್ವದ ಎಡಪಂಥೀಯ ರಂಗ ಇಲ್ಲವೇ ಕಾಂಗ್ರೆಸ್ ನೇತೃತ್ವದ ಸಂಯುಕ್ತ ರಂಗಗಳನ್ನು ಆಗಾಗ ಚುನಾಯಿಸುತ್ತ ಬಂದಿದ್ದಾರೆ. ಈ ಬಾರಿ ಕಾಮ್ರೇಡ್ ಪಿಣರಾಯಿ ವಿಜಯನ್ ಎರಡನೇ ಸಲ ಮುಖ್ಯಮಂತ್ರಿಯಾಗಿದ್ದಾರೆ.ಜನರನ್ನು ಕೋಮು ದ್ವೇಷ ತುಂಬಿ ಹುಚ್ಚರನ್ನಾಗಿ ಮಾಡುವವರಿಗೆ ಒಂದೇ ಒಂದು ಸ್ಥಾನವನ್ನು ನೀಡಿಲ್ಲ. ಆದರೆ ವಿವೇಕಾನಂದರಿಂದ ಹುಚ್ಚಾಸ್ಪತ್ರೆ ಎಂದು ಕರೆಸಿಕೊಂಡಿದ್ದ ಕೇರಳ ಬದಲಾಗಿದೆ. ಹಿಂದೆ ವೈಭವದಿಂದ ಮೆರೆದ ರಾಷ್ಟ್ರಕೂಟರ, ಚಾಲುಕ್ಯರ, ಬಸವಣ್ಣನವರ, ಟಿಪ್ಪು ಸುಲ್ತಾನರ, ದೇವರಾಜ ಅರಸರ, ನಿಜಲಿಂಗಪ್ಪನವರ, ಕೆಂಗಲ್ ಹನುಮಂತಯ್ಯನವರ ಕರ್ನಾಟಕ ಕೋಮುವಾದಿಗಳ ಕೈಗೆ ಸಿಲುಕಿ ಜನಾಂಗ ದ್ವೇಷಿಗಳ ಹುಚ್ಚಾಸ್ಪತ್ರೆಯಾಗುವ ಅಪಾಯದಲ್ಲಿದೆ. ಈ ಅಪಾಯದಿಂದ ನಾಡನ್ನು ಪಾರು ಮಾಡಬೇಕಾಗಿದೆ.

ಈ ಹುಚ್ಚು ಎಲ್ಲಿಗೆ ತಲುಪಿದೆ ಅಂದರೆ ಮುಸಲ್ಮಾನರಿಗೆ ಹಣ್ಣು ತರಕಾರಿ ಮಾರಾಟ ಮಾಡಬಾರದು, ಅವರಿಂದ ಖರೀದಿಸಬಾರದು ಎಂದು ಪ್ರಚಾರಾಂದೋಲನ ಆರಂಭವಾಗಿದೆ. ಮುಸಲ್ಮಾನ ಶಿಲ್ಪಿಗಳು ತಯಾರಿಸಿದ ದೇವರ ಮೂರ್ತಿಗಳನ್ನು ಹಿಂದೂ ದೇಗುಲಗಳಲ್ಲಿ ಪ್ರತಿಷ್ಠಾಪಿಸಬಾರದು ಎಂದು ಕೂಡ ಬಹಿರಂಗ ಹೇಳಿಕೆಗಳು ಬರುತ್ತವೆ. ಆದರೆ ಪ್ರಚಾರ ನಡೆಸಿರುವ ಯಾರೂ ರೈತ ಹೇಳಿದ ಬೆಲೆಗೆ ಆತನ ಉತ್ಪನ್ನಗಳನ್ನು ಖರೀದಿಸುವುದಿಲ್ಲ.

ಈಗಾಗಲೇ ರಾಜ್ಯದ ಮತ್ತು ದೇಶದ ಅನೇಕ ದೇವಾಲಯಗಳಲ್ಲಿ ಮುಸಲ್ಮಾನ ಕಲಾವಿದರು ಕೆತ್ತಿದ ದೇವರ ಮೂರ್ತಿಗಳು ಪೂಜೆಗೊಳ್ಳುತ್ತಿವೆ. ಈಗ ಹಾವಿನಪುರದ ಚುನಾವಣಾ ತಂತ್ರದ ಭಾಗವಾಗಿ ಬಿಜೆಪಿಗೆ ಅನುಕೂಲ ಮಾಡಲು ಆ ಮೂರ್ತಿಗಳನ್ನೆಲ್ಲ ಕಿತ್ತು ಬಿಸಾಡುವಿರಾ? ಮುಸಲ್ಮಾನರು ಮಾಡಿದ್ದು ಹಾಡಿದ್ದು ಬೇಡವೆಂದಾದರೆ ಮುಹಮ್ಮದ್ ರಫಿ ಹಾಡುಗಳಿಗೆ ಕಿವಿ ಮುಚ್ಚುವಿರಾ? ಬಿಸ್ಮಿಲ್ಲಾ ಖಾನರ ಶಹಾನಾಯಿ ನಿಮಗೆ ಬೇಡವೇ? ಕೊನೆಯುಸಿರೆಳೆಯುವ ಕ್ಷಣದಲ್ಲಿ ಬದುಕಿಸಲು ಬಂದ ಡಾಕ್ಟರ್‌ನ ಜಾತಿ, ಮತ ನೋಡಿ ಚಿಕಿತ್ಸೆ ಪಡೆಯುವಿರಾ? ಗೊಟಕ್ಕೆನ್ನುವಾಗ ನಿಮ್ಮ ರಕ್ತಕ್ಕೆ ಹೊಂದಾಣಿಕೆ ಯಾಗಬಲ್ಲ ಮುಸಲ್ಮಾನನೊಬ್ಬ ರಕ್ತ ಕೊಡಲು ಬಂದರೆ ಹಿಂದೂ ರಕ್ತ ಬೇಕೆಂದು ಹಠ ಹಿಡಿದು ನೆಗೆದು ಬೀಳುವಿರಾ? ಏನಾಗಿದೆ ನಿಮ್ಮ ಬುದ್ಧಿಗೆ ಈ ಸಮೂಹ ಸನ್ನಿ ನಿಮ್ಮನ್ನು ಮಾತ್ರವಲ್ಲ ಕೊನೆಗೆ ದೇಶವನ್ನೇ ನಾಶ ಮಾಡೀತು ಹುಷಾರಾಗಿರಿ.

ಈ ಮನೋವ್ಯಾಧಿಯಲ್ಲಿ ಹಲವಾರು ರೀತಿಗಳಿವೆ. ಅನೇಕ ಹುಡುಗರು ತಮ್ಮ ಹೆಸರಿನ ಮುಂದೆ ತಮ್ಮ ಮನೆಯ ಹೆಸರಿನ ಬದಲಾಗಿ ಹಿಂದೂ ಎಂದು ಇನ್ನೂ ಕೆಲವರು ಮೋದಿ ಎಂದು ಬರೆದುಕೊಂಡಿರುತ್ತಾರೆ. ಇನ್ನು ಕೆಲವರು ಚೌಕಿದಾರ ಎಂದು ಕರೆದುಕೊಂಡಿರುತ್ತಾರೆ. ಕೆಲವರು ತಂದೆಯ ಹೆಸರಿನ ಜಾಗದಲ್ಲಿ ಮೋದಿಯವರ ಹೆಸರು ಹಾಕಿಕೊಂಡಿರುತ್ತಾರೆ. ಇಂಥವರ ಪ್ರೊಫೈಲ್‌ಗಳಲ್ಲಿ ಮೋದಿ, ಗೋಡ್ಸೆ, ಸಿಂಹ, ಹುಲಿ ಮತ್ತು ಉದ್ರಿಕ್ತ ಹನುಮಂತನ ಚಿತ್ರಗಳಿರುತ್ತವೆ. ತಮ್ಮ ಐಡಂಟಿಟಿಯನ್ನೇ ಅಳಿಸಿ ನಾಯಕನ ಹೆಸರು ಬರೆದುಕೊಳ್ಳುವ ಇವರು ಅಸಾಮಾನ್ಯ ಭಕ್ತರು.

ಈ ಕೋಮು ಮನೋರೋಗ ಈಗ ಎಲ್ಲಿಗೆ ಬಂದು ತಲುಪಿದೆಯೆಂದರೆ ಧಾರವಾಡದಲ್ಲಿ ಮುಸಲ್ಮಾನರಿಗೆ ಸೇರಿದ ನಾಲ್ಕು ಅಂಗಡಿಗಳನ್ನು ಶ್ರೀ ರಾಮಸೇನೆಯ ಕಾರ್ಯಕರ್ತರು ಎಪ್ರಿಲ್ ೯ರಂದು ಧ್ವಂಸ ಮಾಡಿದ್ದಾರೆ. ಈ ಮುಸ್ಲಿಮರೇನು ಭಾರೀ ಶ್ರೀಮಂತರಲ್ಲ. ಸ್ಥಳೀಯ ನುಗ್ಗೀಕೇರಿ ಹನುಮಂತನ ದೇವಾಲಯದ ಸಮೀಪದಲ್ಲಿ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಮಾರಾಟ ಮಾಡುವವರು. ಇವರ ಅಂಗಡಿಗೆ ನುಗ್ಗಿದ ಗೂಂಡಾಗಳು ಹಣ್ಣು, ಕಾಯಿ, ಅಗರಬತ್ತಿ, ಕುಂಕುಮ, ಕಲ್ಲಂಗಡಿ ಹಣ್ಣುಗಳನ್ನು ಹೊರೆಗೆಳೆದು ಬೀದಿಗೆ ಚೆಲ್ಲಿದ್ದಾರೆ. ಈ ಬಗ್ಗೆ ಸಂಕಟದಿಂದ ಮಾತಾಡಿದ ನಬಿಸಾಬ್ ಎಂಬ ವ್ಯಾಪಾರಿ ‘‘ನೋಡ ನೋಡುತ್ತಿದ್ದಂತೆ ಎಲ್ಲವನ್ನೂ ಒಡೆದು ಹಾಕುತ್ತ ರಸ್ತೆಗೆ ಚೆಲ್ಲುತ್ತಾ ಬಂದರು. ೬ ಕ್ವಿಂಟಲ್ ಕಲ್ಲಂಗಡಿ ಹಣ್ಣು ಖರೀದಿಸಿದ್ದೆ. ಅದರಲ್ಲಿ ಒಂದು ಕ್ವಿಂಟಾಲ್ ಮಾತ್ರ ಮಾರಾಟವಾಗಿತ್ತು. ಉಳಿದದ್ದನ್ನು ನಾಶ ಮಾಡಿದರು’’ ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೇವಾಲಯದ ಪ್ರತಿನಿಧಿ ನರಸಿಂಹ ಸ್ವಾಮಿ ದೇಸಾಯಿ ಅವರು, ಇಲ್ಲಿ ಬಡ ಕುಟುಂಬಗಳಿಗೆ ಮಾರಾಟ ಮಾಡಲು ಅನುಮತಿ ನೀಡಿದ್ದೇವೆ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡದಲ್ಲಿ ಶ್ರೀ ರಾಮಸೇನೆಯ ಪುಂಡಾಟಿಕೆ ಹೊಸದಲ್ಲ. ಬಿಜೆಪಿ ಮತ್ತು ಸಂಘ ಪರಿವಾರ ಎಷ್ಟೇ ಅಂತರ ಕಾಪಾಡಿಕೊಂಡರೂ ಶ್ರೀ ರಾಮಸೇನೆ ಅವರೇ ಹುಟ್ಟು ಹಾಕಿದ ಸಂಘಟನೆ. ವಿಧ್ವಂಸಕ ಕಾರ್ಯಗಳಿಗೆ ಹೊರ ಗುತ್ತಿಗೆ ನೌಕರರಂತೆ ಇವರನ್ನು ಬಳಸಿಕೊಳ್ಳಲಾಗುತ್ತಿದೆ. ಕಲ್ಲಂಗಡಿ ವ್ಯಾಪಾರ ಮಾಡುವ ಬಡ ನಬಿಸಾಬನಿಗೂ ಅವನ ಅಂಗಡಿ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿರುವ ಶ್ರೀ ರಾಮಸೇನೆ ಕಾರ್ಯಕರ್ತರಿಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಜಗಳವಿಲ್ಲ. ಪರಿಚಯವೇ ಇಲ್ಲದ ವ್ಯಕ್ತಿಯ ಅಂಗಡಿಯ ಮೇಲೆ ಆತ ಮುಸ್ಲಿಮ್ ಎಂಬ ಒಂದೇ ಒಂದು ಕಾರಣಕ್ಕಾಗಿ ದಾಳಿ ಮಾಡುವುದು ಕೂಡ ಕೋಮು ಮನೋರೋಗ. ಇದರಿಂದ ಲಾಭ ಪಡೆದವರು ವಿಧಾನಸಭೆ, ಲೋಕಸಭೆಗಳಿಗೆ ಹೋಗಿ ಮಂತ್ರಿ, ಶಾಸಕರಾಗಿ ತಮ್ಮ ಮಕ್ಕಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಬೆಳೆಸುತ್ತಾರೆ. ಹಿಂದುತ್ವದ ನಶೆಯೇರಿಸಿಕೊಂಡ ಬಡವರ ಮಕ್ಕಳು ಈ ರೀತಿ ಗೂಂಡಾಗಿರಿ ಮಾಡಿ ಜೈಲು ಪಾಲಾಗುತ್ತಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಉಲ್ಬಣಿಸಿದಾಗ ನಾನು ಅಲ್ಲೇ ಇದ್ದೆ. ತಿಂಗಳಾನುಗಟ್ಟಲೆ ಕರ್ಫ್ಯೂ ಜಾರಿಯಾಗಿ ಶಾಲೆ ಕಾಲೇಜುಗಳು ಮುಚ್ಚಿದ್ದವು. ಉಮಾ ಭಾರತಿ ಅವರು ಮಧ್ಯಪ್ರದೇಶದಿಂದ ಬಂದು ಬೆಂಕಿ ಉಗುಳುವ ಭಾಷಣ ಮಾಡಿ ಹೋದರು. ಆಗ ದೇಶಪಾಂಡೆ ನಗರದಲ್ಲಿ ನಡೆದ ಗೋಲಿಬಾರಲ್ಲಿ ಐದು ಮಂದಿ ಯುವಕರು ಬೀದಿ ಹೆಣವಾದರು. ಅವರ ಕುಟುಂಬಗಳು ಇಂದಿಗೂ ಅತಂತ್ರ ಸ್ಥಿತಿಯಲ್ಲಿ ಇವೆ. ಈದ್ಗಾ ವಿವಾದದ ಲಾಭ ಪಡೆದ ಪ್ರಹ್ಲಾದ ಜೋಶಿ ಲೋಕಸಭೆಗೆ ಚುನಾಯಿತರಾದರು. ನಂತರ ಮಂತ್ರಿಯಾದರು. ನಮ್ಮ ಬಾಗಲಕೋಟೆ ಮೂಲದ ಜೋಶಿಯವರು ರೈಲ್ವೆ ನೌಕರನ ಮಗ. ಅವರ ಅದೃಷ್ಟ ಖುಲಾಯಿಸಿತು. ಇದೇ ಈದ್ಗಾ ಗಲಭೆಯಲ್ಲಿ ಹೀರೊ ಆಗಿ ಮಿಂಚಿದ ಶಿರಸಿಯ ಅನಂತ ಕುಮಾರ್ ಹೆಗಡೆ ಲೋಕಸಭೆಗೆ ಅರಿಸಿ ಬಂದು ಮಂತ್ರಿಯಾದರು. ಈ ರೀತಿ ಹಲವಾರು ಹುಚ್ಚು ಕೆಲವರಿಗೆ ಅಧಿಕಾರವನ್ನು ತಂದು ಕೊಟ್ಟ ಉದಾಹರಣೆಗಳು ಸಾಕಷ್ಟಿವೆ. ಧಾರವಾಡ ಅಂದರೆ ಬೇಂದ್ರೆ ಮಾಸ್ತರ, ಶಂಬಾ ಜೋಶಿ, ಕಣವಿ, ಕಟ್ಟೀಮನಿ, ಕಲಬುರ್ಗಿ, ಚಂಪಾ, ಮಲ್ಲಿಕಾರ್ಜುನ ಮನ್ಸೂರ, ರಾಜಗುರು, ಭೀಮಸೇನ ಜೋಶಿ, ಪಾಪು, ಕಾರ್ನಾಡ, ಬಾಲೇಖಾನ್ ಹೀಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಆ ದಿನಗಳು ಹೋದವು. ಈಗಿನ ಧಾರವಾಡ ಬಡವರ ಕಲ್ಲಂಗಡಿ ನಾಶ ಮಾಡುವ ಧಾರವಾಡವಾಗುತ್ತಿದೆ. ಸತತವಾಗಿ ಕೋಮುವಾದಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ನಮ್ಮ ಅಸಲಿ ಧಾರವಾಡವನ್ನು ಕಳೆದುಕೊಂಡೆವು.

ಕೊರೋನ ಅನಂತರದ ಈ ಎಲ್ಲ ಅತಿರೇಕದ ಘಟನೆಗಳನ್ನು ನೋಡಿದಾಗ ಸಾಂಕ್ರಾಮಿಕ ಅಪ್ಪಳಿಸಿದ ಆ ದಿನಗಳು ನೆನಪಿಗೆ ಬರುತ್ತವೆ. ಕೋವಿಡ್‌ನಿಂದ ಸಾವಿಗೀಡಾದವರಲ್ಲಿ ಎಲ್ಲ ಜಾತಿ, ಧರ್ಮದವರು ಇದ್ದರು. ಬ್ರಾಹ್ಮಣನೊಬ್ಬ ಅಸುನೀಗಿದಾಗ ಕಳೇಬರ ಮುಟ್ಟಿ ಅಂತ್ಯಸಂಸ್ಕಾರ ನೆರವೇರಿಸಲು ಅವರ ಮನೆಯವರೂ ಹತ್ತಿರ ಬರಲಿಲ್ಲ. ಆಗ ಮುಸ್ಲಿಮ್ ಯುವಕರು ಧೈರ್ಯದಿಂದ ನುಗ್ಗಿ ವೈದಿಕ ಪದ್ಧತಿಯಂತೆ ಅಂತ್ಯಕ್ರಿಯೆ ನೆರವೇರಿಸಿದರು.ಈಗ ಹಿಂದೂ ಧರ್ಮಕ್ಕಾಗಿ ಕಲ್ಲಂಗಡಿ ಅಂಗಡಿ ಮೇಲೆ ದಾಳಿ ಮಾಡಿ ವೀರಾವೇಶ ಪ್ರದರ್ಶನ ಮಾಡುವ ಸಂಘಟನೆಗಳ ವೀರಾಧಿ ವೀರರು ಆಗ ಎಲ್ಲಿದ್ದರು? ಹುಡುಕಿದರೂ ಸಿಗಲಿಲ್ಲ. ಇಂಥ ನೂರಾರು ಅಂತ್ಯಕ್ರಿಯೆಗಳನ್ನು ಯಾರು ನೆರವೇರಿಸಿದರೆಂದು ಎಲ್ಲರಿಗೂ ಗೊತ್ತಿದೆ. ಆಗ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಅಂತ್ಯಕ್ರಿಯೆ ಕೂಡ ದೂರದ ದಿಲ್ಲಿಯಲ್ಲಿ ಹೇಗೆ ನಡೆಯಿತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅದೇನೇ ಇರಲಿ ಈ ನೆಲದಲ್ಲಿ ನಾವೆಲ್ಲ ಒಟ್ಟಾಗಿ ಬದುಕಬೇಕಾಗಿದೆ ಎಂಬುದನ್ನು ನೆನಪಿಸಲು ಈ ಮಾತು ಹೇಳಬೇಕಾಯಿತು.

ಜನಾಂಗೀಯ ದ್ವೇಷ ಮಾನಸಿಕ ಕಾಯಿಲೆಯಾಗಿ ಉಲ್ಬಣಿಸುತ್ತಿರುವ ಈ ದಿನಗಳಲ್ಲಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಬಸವಣ್ಣ, ವಿವೇಕಾನಂದರಂಥ ಮಹಾಚೇತನಗಳು ಬೇಕು. ಮಾರಾಟವಾಗುತ್ತಿರುವ ಇಂದಿನ ಮಠಾಧೀಶರು, ತಮ್ಮ ನೈತಿಕತೆ ಉಳಿಸಿಕೊಂಡಿಲ್ಲ. ಕಾರಣ ನಾವು ಮತ್ತೆ ಬಾಬಾಸಾಹೇಬರ ಸಂವಿಧಾನದ ಮೊರೆ ಹೋಗಬೇಕಾಗಿದೆ. ಮಠ ಮಂದಿರಗಳ ಬದಲಾಗಿ ಮಾನಸಿಕ ಆಸ್ಪತ್ರೆಗಳು ಎಲ್ಲ ಕಡೆ ಆರಂಭವಾಗಲಿ. ಶಾಂತಿ ಮತ್ತು ಸಮಾಧಾನಕ್ಕಾಗಿ ಜನಸಾಮಾನ್ಯರು ಮೊದಲು ದೇವರ ಗುಡಿ, ಮಂದಿರ, ದರ್ಗಾಗಳಿಗೆ ಹೋಗುತ್ತಿದ್ದರು. ಈಗ ಅವು ನೆಮ್ಮದಿಯ ತಾಣಗಳಾಗಿ ಉಳಿದಿಲ್ಲ. ಕೋಮು ರಾಜಕೀಯದ ಕೇಂದ್ರಗಳಾಗುತ್ತಿವೆ. ಕಾರಣ ನಮ್ಮ ಹೊಸ ಪೀಳಿಗೆಯ ಯುವಕರ ಮಾನಸಿಕ ಸ್ಥಿತಿ ಸುಧಾರಣೆ ಬಗ್ಗೆ ತುರ್ತಾಗಿ ಚಿಂತಿಸಬೇಕಾಗಿದೆ. ಮನುಷ್ಯರು ಪರಸ್ಪರ ಪ್ರೀತಿಸುವ ಆ ದಿನಗಳನ್ನು ಮತ್ತೆ ತರಬೇಕು.

ಕೃಪೆ: ಪ್ರಚಲಿತ ಅಂಕಣ/ ವಾರ್ತಾಭಾರತಿ/ ೧೧.೫.೨೦೨೨

Advertisement
Advertisement
Recent Posts
Advertisement