Advertisement

ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಏಕಾಂಗಿಯಾಗಿ "ಪಿಎಸ್‌ಐ ನೇಮಕಾತಿ ಅಕ್ರಮ" ನಡೆಸಲು ಸಾಧ್ಯವೇ? ಹಾಗಾದರೆ ಆಕೆಯ ಹಿಂದಿರುವ ನಾಯಕರುಗಳ ಬಂಧನ ಬೇಡವೇ?

Advertisement
ರಾಜ್ಯ ಸರ್ಕಾರದ ಗೃಹ ಇಲಾಖೆಯ ಸುಪರ್ದಿಯಲ್ಲಿ ನಡೆವ ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಏಕಾಂಗಿಯಾಗಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಹಿಡಿತ ಸಾಧಿಸಿ 'ಅಕ್ರಮ' ವೆಸಗಿರುವುದು ಅಸಾಧ್ಯವಾದ ಮಾತು. (ಹಾಗೆ ಯಾರಿಗೂ ತಿಳಿಯದಿರಲು ಅದು ನಡುರಾತ್ರಿ ಬೀಗ ಹಾಕಿದ ಮನೆಗೆ ನುಗ್ಗಿ ಮಾಡಿದ ಕಳ್ಳತನವಲ್ಲ) ಇದು ಹಲವು ಸ್ಥರಗಳ ಪ್ರಕ್ರಿಯೆಗಳ ನಂತರ ಆಗುವ ನೇಮಕಾತಿ. ಇದರ ಹಿಂದೆ ಖಂಡಿತವಾಗಿಯೂ ಆಪರೇಷನ್ ಕಮಲ ಸರ್ಕಾರದ ಹಲವಾರು ದೊಡ್ಡ ದೊಡ್ಡ ಸಚಿವರುಗಳ ಹಾಗೂ ಅಧಿಕಾರಿಗಳ ಕೈವಾಡ ಇದೆ ಎಂಬುದು ಸಾಮಾನ್ಯ ಜ್ಞಾನ ಇರುವವರಿಗೆ ಅರ್ಥವಾಗುವ ಸಂಗತಿ.
ಹಾಗೆಯೇ, ಈ ಅಕ್ರಮದ ಹಿಂದೆ ಯಾವ್ಯಾವ ಸಚಿವರುಗಳು ಮತ್ತು ಅಧಿಕಾರಿಗಳು ಇದ್ದಾರೆ ಎಂದು ತಿಳಿಯಲು ದಿವ್ಯಾ ಹಾಗರಗಿಯ ರಾಜಕೀಯ ಹಿನ್ನಲೆಯನ್ನು ಕೆದಕಿದರೆ ಅರಿವಿಗೆ ಬರುತ್ತದೆ. ರಾಜ್ಯವನ್ನು ಆಳುತ್ತಿರುವ ಬೊಮ್ಮಾಯಿ ಸರ್ಕಾರಕ್ಕೆ ಕಿಂಚಿತ್ ಆದರೂ ಪ್ರಾಮಾಣಿಕ ಕಾಳಜಿ ಇದ್ದರೆ ಆಕೆಯೊಬ್ಬಳನ್ನೆ ತನಿಖೆ ನಡೆಸುವ ಕಪಟ ನಾಟಕವಾಡದೆ ಈ ಪ್ರಕರಣದಲ್ಲಿ ಆಕೆಗೆ ಸಾಥ್ ಕೊಟ್ಟ ಸಚಿವರುಗಳ, ಅಧಿಕಾರಿಗಳ ಹಾಗೂ ಧ್ವೇಷಭಕ್ತ ಪಕ್ಷದ ಅಷ್ಟೂ ನಾಯಕರುಗಳ ತನಿಖೆ ನಡೆಸ ಬೇಕಿದೆ. ಆ ಮೂಲಕ ತಪ್ಪಿತಸ್ಥ ರಾಜಕಾರಣಿಗಳು, ಅಧಿಕಾರಿಗಳು ಮತ್ತು ತಪ್ಪಿತಸ್ಥ ಅಭ್ಯರ್ಥಿಗಳಿಗೆ ಶಿಕ್ಷೆ ನೀಡಬೇಕಿದೆ.
ಆದರಿಲ್ಲಿ, ಈ ಕೆಲವು ದಿನಗಳಿಂದ ಸರ್ಕಾರದ ಸಚಿವರುಗಳಿಂದ ಮತ್ತು ಎಂಜಲು ಕಾಸಿಗೆ ಪತ್ರಿಕೋದ್ಯಮದ ಸಿದ್ಧಾಂತಗಳನ್ನು ಮಾರಿಕೊಂಡಿರುವ ಮಾಧ್ಯಮಗಳಿಂದ ಆಕೆ ಏಕಾಂಗಿಯಾಗಿ ಅಕ್ರಮ ನಡೆಸಿದ್ದಾಳೇನೋ ಎಂಬಂತೆ ಬಿಂಬಿಸಲಾಗುತ್ತಿದೆ. ಹಾಗೆ ಬಿಂಬಿಸುವುದರ ಹಿಂದೆ ಆಕೆಯ ಹಿಂದಿರುವ ಆಡಳಿತ ಪಕ್ಷದ ತಪ್ಪತಸ್ಥ ನಾಯಕರುಗಳನ್ನು ಉಳಿಸುವ ಗುಪ್ತ ಕಾರ್ಯಸೂಚಿ ಅಡಗಿದೆ. ಹಾಗೆ ಅವರನ್ನು ಉಳಿಸದೆ ಪ್ರಾಮಾಣಿಕ ತನಿಖೆ ನಡೆಸಿದರೆ ಇಡೀ ಅಪರೇಷನ್ ಕಮಲ ಸರ್ಕಾರದ ತಲೆದಂಡವಾಗುತ್ತದೆ ಎಂಬುದು ಕೂಡಾ ಸತ್ಯ.
ಆದರೆ, ಈ ನಡುವೆ ಈ ಹಗರಣದಲ್ಲಿ ಅಕ್ರಮ ನಡೆದಿದೆ ಎಂದು ಸಾಭೀತುಪಡಿಸುವ ಆಡಿಯೋ ಬಿಡುಗಡೆ ಮಾಡಿದ ಕಾರಣಕ್ಕಾಗಿ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಯವರಿಗೆ ರಾಜ್ಯ ಗೃಹ ಇಲಾಖೆ ತನಿಖೆಗೆ ಹಾಜರಾಗುವಂತೆ ನೋಟಿಸು ಜಾರಿ ಮಾಡಿರುವುದು ಅದು ಹಗರಣದ ವಿರುದ್ಧ ಮಾತನಾಡುವವರಿಗೆ ಕಿರುಕುಳ ನೀಡುವ, ಆ ಮೂಲಕ ಧ್ವನಿಯಡಗಿಸುವ ಪ್ರಯತ್ನದ ಭಾಗ ಕೂಡ ಹೌದು.
ಅಷ್ಟಾಗಿಯೂ, ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡ ಅಷ್ಟೂ ಅಭ್ಯರ್ಥಿಗಳು ಅಕ್ರಮವಾಗಿ ನೇಮಕಗೊಂಡವರು ಎನ್ನಲಾಗದು. ಅದರಲ್ಲಿ ಒಂದು ವೇಳೆ ಪ್ರಾಮಾಣಿಕ ತನಿಖೆ ನಡೆದರೆ ಶೇಕಡಾ 90ರಷ್ಟು ಮಂದಿ ಅಕ್ರಮವಾಗಿ ನೇಮಕಗೊಂಡವರು ಇದ್ದಾರೆ ಎಂದು ಸಾಭೀತಾದರೂ ಕೂಡ ಉಳಿದ ಶೇಕಡಾ10ರಷ್ಟು ಮಂದಿ ತಮ್ಮ ಸ್ವಸಾಮರ್ಥ್ಯದಿಂದಲೇ ಆಯ್ಕೆಗೊಂಡವರಾಗಿರುತ್ತಾರೆ.

ಆದರೆ ರಾಜ್ಯ ಸರ್ಕಾರ ಇದೀಗ ಪಿಎಸ್‌ಐ ಹುದ್ದೆಗಳಿಗೆ ಮರು ಪರೀಕ್ಷೆ ಘೋಷಿಸಿದೆ. ಇದು ಅರ್ಥಹೀನ ಮತ್ತು ಅತಾರ್ಕಿಕ! ಏಕೆಂದರೆ, ಮರು ಪರೀಕ್ಷೆಯಿಂದ ಮೇಲೆ ವಿವರಿಸಿದ ಅಂತಹ ಪ್ರಾಮಾಣಿಕ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಉನ್ನತ ಮಟ್ಟದ ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ಮೇಲೆ ಕ್ರಮಕೈಗೊಳ್ಳಬೇಕಿದೆ. ತಪ್ಪಿತಸ್ಥರಲ್ಲದ ಅಭ್ಯರ್ಥಿಗಳ ನೇಮಕಾತಿಯನ್ನು ಮರು ಪರೀಕ್ಷೆಗೆ ಗುರಿಪಡಿಸದೆ ಅಂತಿಮಗೊಳಿಸಿ ಆದೇಶಿಸಬೇಕಿದೆ.
ಅದಕ್ಕೆ ಬದಲಾಗಿ ತಪ್ಪಿತಸ್ಥ ರಾಜಕಾರಣಿಗಳನ್ನು ಉಳಿಸಲು ನಿರಪರಾಧಿ ಅಭ್ಯರ್ಥಿಗಳನ್ನು ಬಲಿಕೊಡುವುದು ಅಕ್ಷಮ್ಯ. ಹಾಗೆ ತನಿಖೆ ನಡೆಸುವಂತೆ ಪ್ರಜ್ಞಾವಂತರು ಒತ್ತಾಯಿಸಬೇಕಾಗಿದೆ. ಅದಲ್ಲವಾದರೆ ಈ ತನಿಖಾ ನಾಟಕ ಹಳ್ಳಹಿಡಿಯುವ ಎಲ್ಲಾ ಸಾಧ್ಯತೆಗಳಿವೆ ಮತ್ತು ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳು ಕೂಡ ಸಕ್ರಮ ಎನ್ನಿಸಿಕೊಳ್ಳುವ ಅಪಾಯಗಳು ಇವೆ.
Advertisement
Advertisement
Recent Posts
Advertisement