Advertisement

ಸಾವರ್ಕರ್ ರನ್ನು "ವೀರ್" ಎಂದು ಕರೆದುಕೊಂಡದ್ದು ಸ್ವತಃ ಸಾವರ್ಕರ್ ರವರೇ ವಿನಃ ಈ ದೇಶದ  ಚರಿತ್ರೆಯಲ್ಲ!

Advertisement
"ಸಂಘಿ  ಶೂರರೇ, ಸಾವರ್ಕರ್ ಗೆ ವೀರ ಎಂಬ ಬಿರುದು ದಯಪಾಲಿಸಿದ್ದು ಯಾರು ಎಂದು ಹೇಳುವಿರಾ ?"

ಬರಹ: ಶಿವಸುಂದರ್ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)


ಮೊನ್ನೆ ಮೊನ್ನೆ ಸಂಸದ ಪ್ರತಾಪ್ ಸಿಂಹ ಟಿಪ್ಪುವಿಗೆ ಸುಲ್ತಾನ ಎಂದು ಬಿರುದು ಕೊಟ್ಟವರು ಯಾರು ಎಂಬ ಘನವಾದ ಐತಿಹಾಸಿಕ ಪ್ರಶ್ನೆ ಕೇಳಿದ್ದರು.
ಇದು  ನರೇಂದ್ರ ಮೋದಿಗೆ  ೨೦೧೪ ರಿಂದ ಪ್ರಧಾನ ಮಂತ್ರಿ ಮೋದಿ ಎಂದು ಬಿರುದು ಕೊಟ್ಟವರು ಯಾರು ಎಂದು ಕೇಳುವಷ್ಟೇ ಅಸಂಬದ್ಧ ಹಾಗೂ ಕುಟಿಲತೆ ಇಂದು ಕೂಡಿದ್ದ  ಪ್ರಶ್ನೆ.

ಟಿಪ್ಪುವನ್ನು ಒಪ್ಪುತ್ತೀರೋ ಬಿಡುತ್ತೀರೋ 1782 ರಿಂದ 1799ರ ವರೆಗೆ ಟಿಪ್ಪು  ಮೈಸೂರು ಸಂಸ್ಥಾನವನ್ನು ಜನಾನುರಾಗಿಯಾಗಿ ಆಳಿದ್ದ . ಆದ್ದರಿಂದಲೇ ಅವನು ಮೈಸೂರಿನ ಸುಲ್ತಾನನಾಗಿದ್ದ . ಆದರೂ ತನ್ನನ್ನು ತಾನು ಸಿಟಿಜನ್ ಟಿಪ್ಪು ಎಂದೇ ಕರೆದುಕೊಂಡ.
ಅವನ ಜನಾನುರಾಗಿತನದಿಂದ ಹುತಾತ್ಮನಾದ ನಂತರವೂ   ಮೀರ್ ಸಾಧಿಕ್- ಪೂರ್ಣಯ್ಯ ನಂಥವರ ಮಸಲತ್ತಿಗೆ ಬಲಿಯಾದ  ದುರಂತ ಸುಲ್ತಾನ ನಾಗಿ ಜನರ ಲಾವಣಿಗಳಲ್ಲಿ ಜೀವಂತವಾಗುಳಿದ.
(ಲಾವಣಿಗಳೆಂದರೆ ಬೇರೆ ಯಾರೋ ಬಾಡಿಗೆಗೆ,  ಆಮಿಷಕ್ಕೆ,ಭಯಕ್ಕೆ ಬರೆದುಕೊಡುವ ಪುಸ್ತಕಗಳಲ್ಲ. ಅಥವಾ ತಾವೇ ತಮ್ಮ ಬಗ್ಗೆ ತಾವೇ ಕಳ್ಳ ಹೆಸರಿನಲ್ಲಿ ಬರೆದುಕೊಳ್ಳುವ ಜೀವನ ಚರಿತ್ರೆಗಳೂ ಅಲ್ಲ.  ಲಾವಣಿಗಳನ್ನು  ಜನರು ತಮ್ಮ ಹೃದಯದ ಭಾವನೆಗಳಿಂದ ಕಟ್ಟುತ್ತಾರೆ. ಅದ್ರಲ್ಲಿ ಸತ್ಯವಿದ್ದಾಗ ಅದು ಬಾಯಿಂದಬಾಯಿಗೆ ಹೃದಯದಿಂದ ಹೃದಯಕ್ಕೆ ಹರಡಿ ಶಾಶ್ವತವಾಗುಳಿಯುತ್ತದೆ.)
ಆದರೆ ಇದನ್ನೇ ಸಾವರ್ಕರ್ ಬಗ್ಗೆ ಹೇಳಬಹುದೇ?

ಸ್ವಾತಂತ್ರ್ಯ ಹೋರಾಟಕ್ಕೆ ೭೫ ವರ್ಷ ತುಂಬುತ್ತಿರುವ ಈ ವರ್ಷ ಮೋದಿ ಸರ್ಕಾರ ಆಜಾದಿ ಕಾ ಅಮೃತ ಮಹೋತ್ಸವವನ್ನು ಇದೆ ಮೇ ೨೮ರ ಸಾವರ್ಕರ್ ಜನ್ಮ ದಿನದಿಂದ ಪ್ರಾರಂಭಿಸುತ್ತಿದೆ. ಅದಕ್ಕೆ ಕಾರಣ "ವೀರ ಸಾವರ್ಕರ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ " ಎಂಬುದು . ಆದರೆ ಸಾವರ್ಕರ್ 1911ರ ನಂತರ ಬ್ರಿಟಿಷರ ಊಳಿಗ ಮಾಡಿರುವುದು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾದ ಸಂಗತಿ.
ಆದರೂ   ಈ ಸಂಘಿ ವಾದಿಗಳ ಪಿತಾಮಹ ಸಾವರ್ಕರ್ ಗೆ "ವೀರ" ಎಂದು ಬಿರುದು ಕೊಟ್ಟವರು ಯಾರು?

ಇದು ಅತ್ಯಂತ ಕುತೂಹಲಕಾರಿ ಪ್ರಶ್ನೆ ..
ಐತಿಹಾಸಿಕ ದಾಖಲೆಗಳ ಪ್ರಕಾರ ಸಾವರ್ಕರ್ ಅವರನ್ನು ಮೊದಲು ವೀರ ಎಂದು ಸಂಬೋಧಿಸಿ ಬರೆದದ್ದು 1926ರಲ್ಲಿ ಚಿತ್ರಗುಪ್ತ ಎಂಬ ನಿಗೂಢ ಲೇಖಕ ಬರೆದ "The Life Of Barrister Savarkar " ಎಂಬ ಜೀವನ ಚರಿತ್ರೆಯಲ್ಲಿ.

ಆಗಿನ್ನೂ ಸಾವರ್ಕರ್ ಅವರಿಗೆ 43 ವಯಸ್ಸು. ಮತ್ತು ಆಗಿನ್ನೂ ಅವರು ಬ್ರಿಟಿಷರಿಗೆ ದಯಾಭಿಕ್ಷೆ ಕೋರಿ 6 ಪತ್ರಗಳನ್ನು ಬರೆದು ಷರತ್ತಿನ ಮೇಲೆ ಅಂಡಮಾನಿನಿಂದ ರತ್ನಗಿರಿಯಲ್ಲಿನ ಅವರ ಮನೆಗೆ  ವರ್ಗಾವಣೆ ಗೊಂಡು ಗೃಹಬಂಧನದಲ್ಲಿದ್ದರು.
ಅಂದರೆ 1911 ರಿಂದ 1926ರ ವರೆಗಿನ 15 ವರ್ಷಗಳಲ್ಲಿ ಅವರು ಯಾವ ವೀರಶೂರ ಕೆಲಸಗಳನ್ನು ಮಾಡಿರಲಿಲ್ಲ. ಆದರೂ 1896-1909 ರ ನಡುವಿನ ಅವರ ಪೂರ್ವಾಶ್ರಮದ ವಿಷಯಗಳನ್ನು ವೈಭವೀಕರಿಸಿ ಭಯಾಗ್ರಫಿಯನ್ನು ಬರೆಯಲಾಗಿತ್ತು.
ಹೇಗೆ ರಾನಡೆ, ತಿಲಕ್, ಗೋಖಲೆಯವರ ರೀತಿ ಸಾವರ್ಕರ ಅವರ ಕುಟುಂಬವೂ ಮಹಾರಾಷ್ಟ್ರದ  ಹೆಮ್ಮೆಯ ಚಿತ್ಪಾವನ ಬ್ರಾಹ್ಮಣ ಮನೆತನಕ್ಕೆ ಸೇರಿದ್ದೂ ಕೂಡ ಸಾವರ್ಕರ್ ಅವರ ಶೌರ್ಯಕ್ಕೆ ಕಾರಣವಾಯಿತು ಎಂದು ಆ ಭಯಾಗ್ರಫಿ ಶುರುವಾಗುತ್ತದೆ.

ಆದರೆ ಈ ಚಿತ್ರಗುಪ್ತ ಯಾರು? ಯಾಕೆ ಅವರು ನಿಗೂಢ ಹೆಸರಲ್ಲಿ ಸಾವರ್ಕರ್ ಅವರ ಜೀವನಚರಿತ್ರೆ ಬರೆದರು?  ಸ್ವಾತಂತ್ರ್ಯ ಬಂದ ನಂತರವೂ ಕೂಡ ಯಾಕೆ ಸಾವರ್ಕರ್ ಆಗಲೀ, ಅಥವಾ ಅವರ ಬಳಗವಾಗಲೀ ಈ ಚಿತ್ರಗುಪ್ತ ಯಾರು ಎಂದು ಬಯಲು ಮಾಡಲಿಲ್ಲ?

ಈ ಪ್ರಶ್ನೆಗಳಿಗೆ 1987ರವರೆಗೂ ಉತ್ತರ ಸಿಗುವುದಿಲ್ಲ. 1987ರಲ್ಲಿ ಸಾವರ್ಕರ ಅವರ ಸಹೋದರ ಅವರು ವೀರ ಸಾವರ್ಕರ ಪ್ರಕಾಶನದಿಂದ " ದಿ ಲೈಫ್  ಬ್ಯಾರಿಸ್ಟರ್ ಸಾವರ್ಕರ್ " ಪುಸ್ತಕದ ಎರಡನೇ ಮುದ್ರಣವನ್ನು ಪ್ರಕಟಿಸುತ್ತಾರೆ. ಅದರ ಮುನ್ನುಡಿಯಲ್ಲಿ ;

".. Who is this Chitragupta, the author of Life Of Barrister VD Savarkar?. The pen picture of Paris appears that it is none other than Veer Savarkar " ಎಂದು ಸ್ಪಷ್ಟಪಡಿಸುತ್ತಾರೆ .

ಅಂದರೆ ಸಾವರ್ಕರ್ ಅವರನ್ನು ಮೊಟ್ಟಮೊದಲು ವೀರ ಸಾವರ್ಕರ್ ಎಂದು ಸಂಬೋಧಿಸಿದ್ದು, ಅವರ ಜೀವನ ಗಾಥೆಯನ್ನು ಶೌರ್ಯಗಳ ಸರಮಾಲೆ ಎಂದು ಬಣ್ಣಿಸಿದ್ದು ಬೇರೆ ಯಾರೂ ಅಲ್ಲ.. ಸ್ವತಃ ಸಾವರ್ಕರ್ ಅವರೇ !!!

ಆಸಕ್ತರು ಆ ಪುಸ್ತಕ ಹಾಗೂ ಮುನ್ನುಡಿಯನ್ನು ಈ ವೆಬ್ ವಿಳಾಸದಲ್ಲಿ ಓದಬಹುದು :
►►https://savarkar.org/en/pdfs/life_of_barrister_savarkar_by_chitragupta.pdf

ಪ್ರಾಯಶಃ ಜಗತ್ತಿನ ಇತಿಹಾಸದಲ್ಲಿ ತಮ್ಮನ್ನು ತಾವೇ ''ವೀರ'' ನೆಂದು ಸಂಬೋಧಿಸಿಕೊಳ್ಳುವ, ಸುಳ್ಳು ಹೆಸರಿನಲ್ಲಿ ತಮ್ಮ ಜೀವನ ಚರಿತ್ರೆಯನ್ನು ತಾವೇ ಬರೆದುಕೊಳ್ಳುವ ವೀರರು ಸಿಗಲಾರರು! 

ತೀರಾ ಇತ್ತೀಚಿನವರೆಗೂ ಚಿತ್ರಗುಪ್ತನೇ ಸಾವರ್ಕರ್ ಎಂಬ ಈ ವಿಷಯವನ್ನು ಸಂಘಪರಿವಾರದವರೂ ನಿರಾಕರಿಸರಲಿಲ್ಲ. ಆದರೆ ಇದೀಗ ಭಾರತವನ್ನು ಹಿಂದುತ್ವದ ಹೆಸರಲ್ಲಿ ಬ್ರಾಹ್ಮಣ ರಾಷ್ಟ್ರ ಮಾಡಲು ಹೊರಟಿರುವ ಮೋದಿ ಸರ್ಕಾರ ಭಾರತಕ್ಕೆ ಸಾವರ್ಕರ್ ಅವರನ್ನು ಪಿತಾಮಹ ರನ್ನಾಗಿ  ಮಾಡಲು ಹೊರಟಿದೆ. ಅದರ ಭಾಗವಾಗಿ ಸಾವರ್ಕರ ಅವರ ಇತಿಹಾಸಕ್ಕೆ ವೈಟ್ ವಾಷ್  ಕಾರ್ಯಕ್ರಮವನ್ನು ಭರದಿಂದ ನಡೆಸಿದೆ.

ಅದರ ಭಾಗವಾಗಿ ಇತ್ತೀಚಿಗೆ ವಿಕ್ರಮ್ ಸಂಪತ್ ಎಂಬವರಿಂದ ಸಾವರ್ಕರ್ ಬಗ್ಗೆ ಎರಡು ಸಂಪುಟದ ಗ್ರಂಥ ಬರೆಸಿದೆ. ಅದರಲ್ಲಿ ಅವರು ಈ ಚಿತ್ರಗುಪ್ತ ಯಾರು ಎಂಬುದಕ್ಕೆ ಸಾವರ್ಕರ್ ಅಲ್ಲದೆ ಬೇರೆಯವರು ಇರಬಹುದು ಎಂದು ವಾದಿಸಲು ಪ್ರಯತ್ನಿಸಿದ್ದಾರೆ. ಆದರೆ ಸಾವರ್ಕರ್ ಅಣ್ಣನೇ ಪ್ರಕಟಿಸುವ ಎರಡನೇ ಮುದ್ರಣದಲ್ಲಿ ಚಿತ್ರಗುಪ್ತನೇ ಸಾವರ್ಕರ್ ಎಂದು ಏಕೆ ಬರೆದಿದ್ದಾರೆ ಎಂಬುದಕ್ಕಾಗಲೀ, ಅಥವಾ ಈವರೆಗೆ ಅದನ್ನು ಸಂಘಪರಿವಾರದವರೂ ಏಕೆ ನಿರಾಕರಿಸಲಿಲ್ಲ ಎಂಬ ಪ್ರಶ್ನೆಗಾಗಲೀ ಉತ್ತರಿಸುವುದಿಲ್ಲ. 

ಹೀಗಾಗಿ ಸಾವರ್ಕರ ಅನ್ನು ವೀರ ಎಂದು ಕರೆದದ್ದು ಸ್ವತಃ ಸಾವರ್ಕರ್ ಅವರೇ ವಿನಾ ಈ ದೇಶದ  ಚರಿತ್ರೆಯಲ್ಲ. ಅಲ್ಲವೇ?

ಶಿವಸುಂದರ್

ಕೃಪೆ: ವಾರ್ತಾಭಾರತಿ

Advertisement
Advertisement
Recent Posts
Advertisement