Advertisement

ಮಾಜಿ ಶಾಸಕ ಎ.ಜಿ ಕೊಡ್ಗಿಯವರ ಜನಸೇವೆಯ ಕೆಚ್ಚು, ಅವರ ಸರಳ ವ್ಯಕ್ತಿತ್ವ,  ನೇರ, ನಿಷ್ಟೂರ‌ ನಿಲುವು ಮುಂತಾದವುಗಳು ಇಂದಿನ ಯುವಕರಿಗೆ ಆದರ್ಶವಾಗಬೇಕು: ಪ್ರತಾಪ್‌ಚಂದ್ರ ಶೆಟ್ಟಿ

Advertisement
"ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ಮೃತರಾದ ಹಿರಿಯ ರಾಜಕಾರಣಿ, ಮಾಜಿ ಶಾಸಕ ಎ. ಜಿ. ಕೊಡ್ಗಿಯವರು ಜಿಲ್ಲೆಯಾದ್ಯಂತ ಓರ್ವ ಜನಪ್ರಿಯ, ಚಿರಪರಿಚಿತ ವ್ಯಕ್ತಿಯಾಗಿದ್ದಾರೆ. ಪಕ್ಷ ಸಂಘಟನೆ ಮತ್ತು ಚುನಾವಣಾ ತಂತ್ರಗಾರಿಗೆಯಲ್ಲಿ ಅವರು ಊಹನಾತೀತ ಜಾಣ್ಮೆಯನ್ನು ಹೊಂದಿದವರು. ಅವರು ಮತದಾರರಿಗೆ ಹಣ ನೀಡದೆ ಚುನಾವಣೆ ನಡೆಸಿದರೆ ಮಾತ್ರವೇ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಸಾಧ್ಯ ಎನ್ನುವ ನಿಲುವು ಹೊಂದಿದರಾಗಿದ್ದರು ಮತ್ತು ಅವರು ಸ್ಪರ್ದಿಸಿದ್ದ ಎಲ್ಲಾ ಚುನಾವಣೆಗಳಲ್ಲಿ ಅದನ್ನು ಅಕ್ಷರಸಃ ಪಾಲನೆ ಮಾಡಿದ್ದರು. ರಾಜಕೀಯ ಜೀವನದಲ್ಲಿ ಅವರೆಂದೂ ಶಾಶ್ವತ ಜಿದ್ದು ಇಟ್ಟುಕೊಳ್ಳದ ಮುತ್ಸದ್ದಿ ರಾಜಕಾರಣಿ ಆಗಿದ್ದರು. ಸಹಕಾರಿ, ರಾಜಕೀಯ ಮತ್ತು ಕೃಷಿ ಕ್ಷೇತ್ರದಲ್ಲಿ ಅವರ ಸಾಧನೆ ಅಭೂತಪೂರ್ವವಾದುದು" ಎಂದು ಕರ್ನಾಟಕ ಸರ್ಕಾರದ ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿಯವರು ಹೇಳಿದ್ದಾರೆ.

ಅವರು ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಂದಾಪುರದ ಹೋಟೆಲ್ ಶರೋನ್‌ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ "ಸಾರ್ವಜನಿಕ ಶ್ರದ್ಧಾಂಜಲಿ ಸಭೆ"ಯನ್ನು ಉದ್ದೇಶಿಸಿ ಮಾತನಾಡಿದರು.

"ರೈತಸಂಘ ಕಟ್ಟಿ ಜನಪರ ಕೆಲಸ ಮಾಡುವ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂಧಿಸಿದವರು ಎ‌.ಜಿ ಕೊಡ್ಗಿಯವರು. ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸುವ ಮೂಲಕ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ. ತಮ್ಮ ಟ್ರಸ್ಟ್ ನ ಅಡಿಯಲ್ಲಿ ಇಡೀ ಗ್ರಾಮದಲ್ಲಿ ಸೋಲಾರ್ ಅಳವಡಿಸುವ ಕೆಲಸ ಮಾಡುವ ಮೂಲಕ ಅವರು ಮಾದರಿಯಾಗಿದ್ದಾರೆ. ಆ ಮೂಲಕ ಅವರು ಜನಸೇವೆ ಮಾಡಲು ಯಾವುದೇ ರಾಜಕೀಯ ವೇದಿಕೆ ಅಗತ್ಯ ಇಲ್ಲ ಎಂಬುವುದನ್ನು ಸಾಭೀತು ಪಡಿಸಿದವರು. ಕೊಡ್ಗಿಯವರು ಓರ್ವ ಪರಿಪೂರ್ಣ ವ್ಯಕ್ತಿ. ಅವರ ಕುರಿತು ಎಷ್ಟು ವಿಶ್ಲೇಷಿಸಿದರೂ ಕಡಿಮೆ. ಬಿಜೆಪಿಗೆ ಹೋಗುವ ಮೊದಲು ಅವರು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಕೊಡುಗೆಗಳನ್ನು ಸ್ಮರಿಸದಿದ್ದರೆ ತಪ್ಪಾಗುತ್ತದೆ. ಅವರ ಕೆಲಸಗಾರಿಕೆಯ ಕೆಚ್ಚು, ಸರಳ, ನೇರ, ನಿಷ್ಟೂರ‌ ನಿಲುವು ಶ್ಲಾಘನೀಯ ವಾದುದು ಮತ್ತು ಅದನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕು" ಎಂದವರು ಕರೆ ನೀಡಿದ್ದಾರೆ.

ಈ ಸಂಧರ್ಭ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಎ.ಜಿ ಕೊಡ್ಗಿಯವರ ಒಡನಾಡಿ, ಹಿರಿಯ ರಾಜಕಾರಣಿ ಮಾಣಿಗೋಪಾಲ್ ಅವರು " ಕೊಡ್ಗಿಯವರು ಬೈಂದೂರು ಕ್ಷೇತ್ರದ ಶಾಸಕರಾಗಿ, ಬೈಂದೂರಿನ ಸರ್ವಾಂಗೀಣ ಅಭಿವೃದ್ದಿಗೆ ಕಾರಣಿಕರ್ತರಾಗಿದ್ದಾರೆ. ಕುಂದಾಪುರ ತಾಲೂಕಿನಲ್ಲಿ ಮುಖ್ಯಮಂತ್ರಿ ದೇವರಾಜ ಅರಸುರವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಭೂಸುಧಾರಣಾ ಮಸೂದೆಯ ಅನುಷ್ಠಾನಕ್ಕೆ ಕೊಡ್ಗಿಯವರ ಕೊಡುಗೆ ಅನನ್ಯವಾದುದು. ಸ್ವತಃ ಭೂಮಾಲಿಕರಾಗಿದ್ದ ಅವರು ತಮ್ಮ ಕುಟುಂಬದ ಭೂಮಿಯನ್ನು ಗೇಣಿದಾರರಿಗೆ ಕೊಡಿಸಿದ್ದರು. ಅವರೊಬ್ಬ ಬ್ರಾಹ್ಮಣ ಮನೆತನದವರಾಗಿಯೂ ಜಾತಿ, ಮತ, ಭೇದ ಮಾಡದೆ, ಇತರರಿಗೆ ತಮ್ಮ ಮನೆಯಲ್ಲಿ ತಮ್ಮ ಜೊತೆಯಲ್ಲೆ ಕೂರಿಸಿ ಊಟ ಹಾಕುತ್ತಿದ್ದವರು. ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಮೂಲಕ ನನಗೆ 1978ರಲ್ಲಿ ಸ್ಪರ್ದೆಗೆ ಅವಕಾಶ ಮಾಡಿಕೊಟ್ಟವರು ಕೊಡ್ಗಿಯವರು. ಅವರು ಶಾಸಕರಾಗಿ ನಂತರ ಜಿಲ್ಲಾ ಪರಿಷತ್ ಸದಸ್ಯರಾಗಿ ಅತ್ಯುತ್ತಮ ಕಾರ್ಯವೆಸಗಿದ್ದಾರೆ. ಅವರು ಸಹಕಾರಿ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು" ಎಂದು ಹೇಳಿದ್ದಾರೆ.

ಈ ಸಂಧರ್ಭದಲ್ಲಿ ಹಿರಿಯ ನಾಯಕ, 2013ರ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಯಾಡಿ ಶಿವರಾಮ ಶೆಟ್ಟಿಯವರು ಮಾತನಾಡಿ "ಕೊಡ್ಗಿಯವರು ಅಧಿಕಾರದಲ್ಲಿದ್ದಾಗ ಮತ್ತು ನಂತರವೂ ಕೂಡಾ ಸಾರ್ವಜನಿಕರಿಗೆ ಸಿಗಬೇಕಾದ ಯಾವುದೇ ಸೌಲಭ್ಯಗಳು ನ್ಯಾಯವಾಗಿ ಸಿಗುವಂತೆ ಪ್ರಯತ್ನ ಪಟ್ಟವರು ಮತ್ತು ಅವರು ಕುಂದಾಪುರ ತಾಲೂಕಿನಲ್ಲಿ ರಾಜಕೀಯ ದ್ವೇಷಕ್ಕೆ ಅವಕಾಶ ನೀಡದೆ ರಾಜಕಾರಣ ಮಾಡಿದವರಾಗಿದ್ದರು" ಎಂದು ಹೇಳಿದ್ದಾರೆ.

"ಕೊಡ್ಗಿಯವರು ರಾತ್ರಿ ಕನಸಿನಲ್ಲಿ ಕಂಡದ್ದನ್ನೂ ಕೂಡ ನನಸಾಗಿಸುವ ವ್ಯಕ್ತಿಯಾಗಿದ್ದಾರೆ. ಅವರು ಕೃಷಿ ಕ್ಷೇತ್ರದಲ್ಲಿ ಪವಾಡ ಮಾಡಿದ ವ್ಯಕ್ತಿ. ಅವರು ಅಮಾವಾಸೆಬೈಲು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಿಗೆ ಅಡಿಕೆ, ತೆಂಗು, ಕಬ್ಬು ಬೆಳೆಯಲ್ಲಿನ ಒಳಿತನ್ನು ಪರಿಚಯಿಸಿದವರು. ಹೈನುಗಾರಿಕೆಯಲ್ಲಿ ಅವರು ಇಡೀ ತಾಲೂಕಿಗೆ ಮಾದರಿಯಾಗಿದ್ದಾರೆ" ಎಂದು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿಯವರು ಹೇಳಿದರು.

ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೆದೂರು ಸದಾನಂದ ಶೆಟ್ಟಿಯವರು ಮಾತನಾಡಿ "ಎ.ಜಿ ಕೊಡ್ಗಿಯವರು ಕೇವಲ ಓರ್ವ ವ್ಯಕ್ತಿಯಲ್ಲ ಅವರೊಂದು ಶಕ್ತಿ. ಅವರನ್ನು ಕಂಡರೆ ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟುತ್ತಿತ್ತು. ಅವರೊಬ್ಬ ಮುಖ್ಯಮಂತ್ರಿ ಆಗುವ ಎಲ್ಲಾ ಯೋಗ್ಯತೆ ಹೊಂದಿದವರಾಗಿದ್ದರು. ಅವರ ಯೋಗ್ಯತೆಗೆ ಸರಿಯಾಗಿ ಅವರಿಗೆ ಯಾವುದೇ ಹುದ್ದೆ ದೊರಕದಿರುವುದು ಬೇಸರದ ವಿಚಾರ" ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ "ಕೊಡ್ಗಿಯವರು ನೇರ, ನಿಷ್ಠೂರ ವ್ಯಕ್ತಿತ್ವ ಹೊಂದಿದ್ದರು. ರಾಜಕೀಯ, ಸಹಕಾರ ಕ್ಷೇತ್ರ, ಕೃಷಿ ಮತ್ತು ಹೈನುಗಾರಿಕೆಯಲ್ಲಿ ಅವರ ಸಾಧನೆ, ಅವರ ಸಮಯ ಪಾಲನೆ ನಿಜಕ್ಕೂ ಮಾದರಿಯಾದುದು" ಎಂದು ಹೇಳಿದರು.

ಉಡುಪಿಯ ನ್ಯಾಯವಾದಿ ರವಿರಾಜ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ವಿನೋದ್ ಕ್ರಾಸ್ಟೋ ಮುಂತಾದವರು ನುಡಿನಮನ ಸಲ್ಲಿಸಿದರು.

ವಿನೋದ್ ಕ್ರಾಸ್ಟೋ ಸ್ವಾಗತಿಸಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಸೂರ್ಯಪ್ರಕಾಶ್ ದಾಮ್ಲೆ ನಿರೂಪಿಸಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಕುಂದಾಪುರ ಬ್ಲಾಕ್ ಅಧ್ಯಕ್ಷ ಕೃಷ್ಣ ಪೂಜಾರಿ ಧನ್ಯವಾದ ಸಮರ್ಪಿಸಿದರು.
Advertisement
Advertisement
Recent Posts
Advertisement