Advertisement

ಕೋಮುವಾದವನ್ನು ಕಿತ್ತೆಸೆಯಲು ಜನಚಳವಳಿಯೊಂದೇ ಪರಿಹಾರ!

Advertisement

ಬಿಜೆಪಿಯ ಮೂರು ಹಂತ-ಕುತಂತ್ರಗಳು ಮತ್ತು ಪ್ರಗತಿಪರತೆಯ ಕುರುಡುಗಳು

ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಸೀಟುಗಳ ಲೆಕ್ಕದಲ್ಲಿ ಹೀನಾಯವಾಗಿ ಸೋತಿದೆ. ಆದರೆ ಅದರ ಓಟು ಬೆಂಬಲ ಹಾಗೆ ಉಳಿದುಕೊಂಡಿದೆ. ಮಾತ್ರವಲ್ಲ. ಸಂಖ್ಯಾತ್ಮಕವಾಗಿ ನೋಡಿದರೆ 2018 ರಲ್ಲಿ 1.32 ಕೋಟಿ ಓಟುಗಳನ್ನು ಪಡೆದುಕೊಂಡಿದ್ದ ಬಿಜೆಪಿ ತನ್ನ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆ ಬೀಸುತ್ತಿದ್ದಾಗಲೂ 8 ಲಕ್ಷ ಹೆಚ್ಚು ಓಟುಗಳನ್ನು ಪಡೆದುಕೊಂಡು 1.40 ಕೋಟಿ ಮತದಾರರ ಬೆಂಬಲವನ್ನು ದಾಖಲಿಸಿದೆ.
ಈ ಬಾರಿ ಬಿಜೆಪಿ ಎದುರಿಸಿದಂಥ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀಸಿದ್ದರೆ ಕಾಂಗ್ರೆಸ್ 1994 ರ ಚುನಾವಣೆಯ ರೀತಿಯಲ್ಲಿ ಕುಸಿದುಹೋಗುತ್ತಿತ್ತು.

ಹಾಗಿದ್ದಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಗಿಂತ ಭಿನ್ನವಾಗಿಸುವುದು ಯಾವುದು?

ಚುನಾವಣೆಯ ಫ಼ಲಿತಾಂಶದಲ್ಲಿ ಏನೇ ಏರಿಳಿಕೆಯಾದರೂ ಸಂಘಪರಿವಾರ ರಾಜಕೀಯ-ಸಂಸ್ಕೃತಿಕ- ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕೋಮು ಧ್ರುವೀಕರಣ ಮಾಡುತ್ತಾ ಹಿಂದೂತ್ವದ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಚುನಾವಣೆಯ ಫ಼ಲಿತಾಂಶ ಏನೇ ಆದರೂ 365 ದಿನಗಳು ಮತ್ತು 24x7 ಗಂಟೆಗಳು, ತನ್ನ ಹಿಂದೂತ್ವವಾದಿ ಪ್ರಚಾರ ಮತ್ತು ಸಂಘಟನೆಗಳನ್ನು ಗಟ್ಟಿಗೊಳಿಸಿಕೊಳ್ಳುವುದನ್ನು ಮುಂದುವರೆಸಿಕೊಂಡು ಹೋಗುತ್ತದೆ.

ಇದು ಮುಂದಿನ ಚುನಾವಣೆಗಳಲ್ಲಿ ಹೆಚ್ಚಿನ ಓಟುಗಳಾಗಿಯೂ ಪರಿವರ್ತನೆಯಾಗಿ ಅದರ ರಾಜಕೀಯ ಅಂಗವಾದ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತದೆ. ಅದರಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿ ಬಿಟ್ಟರೆ ಅದು ಅಧಿಕಾರಕ್ಕೆ ಬರುವುದು ಇನ್ನೂ ಸಲೀಸು.

ಹೀಗಾಗಿ ಈ ಬಾರಿಯ ಬಿಜೆಪಿಯ ಸೀಟು ಸೋಲು ಅದರ ಓಟು ಸೋಲೇ ಅಥವಾ ಅದರ ಹಿಂದೂತ್ವದ ನೆಲೆ ಕುಸಿದಿಲ್ಲವಾದರೂ ಅಲುಗಾಡಿದೆಯೇ ಎಂದು ಮೊದಲು ಅರ್ಥಮಾಡಿಕೊಳ್ಳಬೇಕು.

ಗ್ರಾಮ್ಸ್ಕಿ ಹೇಳುವಂತೆ ಮೊದಲು ವಾಸ್ತವ ಸತ್ಯಗಳು ಹೇಗಿದೆಯೋ ಹಾಗೆ, ಅಂದರೆ ವಾಸ್ತವಕ್ಕೆ ನಮ್ಮ ನಿರೀಕ್ಷೆಗಳ ಮತ್ತು ಆಶಯಗಳ ಬಣ್ಣ ಬಳಿಯದೆ, ಹೇಗಿದೆಯೋ ಹಾಗೆ ಅರ್ಥ ಮಾಡಿಕೊಳ್ಳಬೇಕು. ಮತ್ತು ಆ ವಾಸ್ತವವು ನಮ್ಮ ಆಶಯಗಳು ಮತ್ತು ನಿರೀಕ್ಷೆಗಿಂತ ಎಷ್ಟೆ ಭಿನ್ನವಾಗಿದ್ದರೂ ಅದನ್ನು ಬದಲಿಸುವ ಧೃಢವಾದ ರಾಜಕೀಯ ಇಚ್ಚಾಶಕ್ತಿಯನ್ನು ಪಡೆದುಕೊಳ್ಳಬೇಕು.

2013 ರಲ್ಲಿ ಬಿಜೆಪಿ ಇಂದಿಗಿಂತ ಹೀನಾಯವಾಗಿ ಸೋತಿತ್ತಾದರೂ..
ಉದಾಹರಣೆಗೆ ಬಿಜೆಪಿ ತನ್ನ ಅಂತರಿಕ ಕಚ್ಚಾಟ ಮತ್ತು ಭ್ರಷ್ಟಾಚಾರಗಳ ಕಾರಣಗಳಿಂದ 2013 ರ ಚುನಾವಣೆಯಲ್ಲಿ 2023 ರ ಚುನಾವಣೆಗಿಂತ ಹೀನಾಯವಾದ ಸೋಲನ್ನಪ್ಪಿತ್ತು. ಆಗ Economic And Political Weekly ಪತ್ರಿಕೆಗೆ ಇದೇ ಅಂಕಣಕಾರರು ಕಾಂಗ್ರೆಸ್ಸಿನ ವಿಜಯ ಹಾಗೂ ಬಿಜೆಪಿಯ ಪರಾಜಯವನ್ನು ಪರಿಪರಿಯಾಗಿ ಬಣ್ಣಿಸುತ್ತಾ ಒಂದು ವಿಶ್ಲೇಷಣೆಯನ್ನು ಬರೆದಿದ್ದರು. (https://www.epw.in/system/files/pdf/2013_48/22/The_Defeat_of_Saffron_in_Karnataka.pdf)

ಜಾತಿ ಸಮೀಕರಣಗಳು ಮತ್ತು ಭ್ರಷ್ಟಚಾರ ವಿರೋಧಿ ಮತದಾರರ ನಿಲುವುಗಳು ಬಿಜೆಪಿಗೆ ಸದ್ಯಕ್ಕೆ ಚೇತರಿಸಿಕೊಳ್ಳಲಾಗದಂಥ ಮಾರಾಣಾಂತಿಕ ಹೊಡೆತ ಕೊಟ್ಟಿದೆ ಎಂಬುದು ಆಗ ನನ್ನ ವಿಶ್ಲೇಷಣೆಯಾಗಿತ್ತು. ಆದರೆ ಅದು ಸರಿಯಾದ ವಿಶ್ಲೇಷಣೆಯಾಗಿರಲಿಲ್ಲ.

ಈಗ ಮತ್ತೊಮ್ಮೆ ಬಿಜೆಪಿಯ ಸೋಲು ಅದೇ ಬಗೆಯ ಅತ್ಯುತ್ಸಾಹವನ್ನು ಹುಟ್ಟಿಸಿದೆ. ಆದರೆ 2013 ರ ಚುನಾವಣಾ ಫ಼ಲಿತಾಂಶದ ನಂತರ ನಡೆದ ಬೆಳವಣಿಗೆಗಳು ಇಂದು ಮತ್ತೆ ಅದೇ ತಪ್ಪು ಮಾಡದಂತೆ ನನ್ನನ್ನು ಮತ್ತು ನನ್ನಂಥವರನ್ನು ಎಚ್ಚರಿಸಬೇಕು.

ಉದಾಹರಣೆಗೆ, 2023 ರ ಚುನಾವಣೆಯಲ್ಲಿ ಬಿಜೆಪಿ 9 ಜಿಲ್ಲೆಗಳಲ್ಲಿ ಒಂದು ಕ್ಷೇತ್ರಗಳಲ್ಲೂ ಗೆದ್ದಿಲ್ಲ.
ಆದರೆ 2013 ರಲ್ಲಿ 11 ಜಿಲ್ಲೆಗಳಲ್ಲಿ ಒಂದು ಕ್ಷೇತ್ರದಲ್ಲೂ ಗೆದ್ದಿರಲಿಲ್ಲ.

2023 ರಲ್ಲಿ ಬಿಜೆಪಿ 8 ಜಿಲ್ಲೆಗಳಲ್ಲಿ ತಲಾ ಒಂದು ಕ್ಷೇತ್ರವನ್ನು ಮಾತ್ರ ಉಳಿಸಿಕೊಂಡಿದ್ದರೆ 2013 ರಲ್ಲಿ ತನ್ನ ಬಲವಾದ ಬೆಂಬಲವಿರುವ ಕರಾವಳಿ ಕರ್ನಾಟಕ ಮತ್ತು ಮುಂಬೈ ಕರ್ನಾಟಕವನ್ನು ಒಳಗೊಂಡಂತೆ 14 ಜಿಲ್ಲೆಗಳಲ್ಲಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಮಾತ್ರ ಜಯವನ್ನು ಗಳಿಸಿತ್ತು.

ಹೀಗಾಗಿ 2013 ರ ಬಿಜೆಪಿ ಸೋಲು 2023 ರ ಬಿಜೆಪಿಯ ಪರಾಜಯಕ್ಕಿಂತ ಇನ್ನಷ್ಟು ಹೀನಾಯವಾಗಿತ್ತು. ಆಗ ಮೋದಿ ಭೇಟಿ ಕೊಟ್ಟಿದ್ದ ಮಂಗಳೊರು ಮತ್ತು ಬೆಂಗಳೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ಹೆಚ್ಚಿನ ಲಾಭವಾಗಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಬಿಜೆಪಿಗೆ ಮತ್ತು ಕೋಮುವಾದಕ್ಕೆ ಬಲವಾದ ಪೆಟ್ಟು ಬಿದ್ದಿದೆ ಎಂಬುದು ಆಗ ನನ್ನನ್ನೂ ಒಳಗೊಂಡಂತೆ ಹಲವಾರು ವಿಶ್ಲೇಷಕರ ಅಭಿಪ್ರಾಯವಾಗಿತ್ತು.

ಆದರೆ ಅದಾದ ಒಂದೇ ವರ್ಷದ ನಂತರ 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 43.37 ರಷ್ಟು ಓಟುಗಳನ್ನು ಪಡೆದು ರಾಜ್ಯದ 28 ಕ್ಷೇತ್ರಗಳಲ್ಲಿ 17 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ 9 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿತು. ಹಾಗೆ ನೋಡಿದರೆ ರಾಜ್ಯದ ಶಾಸನ ಸಭಾ ಚುನಾವಣಾ ಫ಼ಲಿತಾಂಶಗಳು ಹೇಗೆ ಬಂದಿದ್ದರೂ 2004 ರಿಂದ ಎಲ್ಲಾ ಲೋಕ ಸಭಾ ಚುನಾವಣೆಗಳಲ್ಲೂ ಬಿಜೆಪಿ ಕಾಂಗ್ರೆಸ್ಸಿಗಿಂತ ಎರಡು ಪಟ್ಟು ಹೆಚ್ಚಿನ ಸ್ಥಾನ ಮತ್ತು ಶೇ.3-5 ರಷ್ಟು ಹೆಚ್ಚಿನ ಓಟುಗಳನ್ನು ಪಡೆಯುತ್ತಾ ಬಂದಿದೆ .

ಹೀಗಾಗಿ ಬಿಜೆಪಿಯನ್ನು ಅದರ ಇಂದಿನ ಸ್ಥಿತಿಯಲ್ಲಿ ಮಾತ್ರವಲ್ಲದೆ ಅದರ ಬೆಳವಣಿಗೆಯ ಐತಿಹಾಸಿಕ ಗತಿಯನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಕೋಮುವಾದಿ ಹಿಂದೂತ್ವವು ಕರ್ನಾಟಕ ಸಮಾಜದ ಮೇಲೆ ಆಳಕ್ಕೆ ಇಳಿದಿರುವ ರೀತಿ ಮತ್ತು ಅದು ಚುನಾವಣೆಗಳಲ್ಲಿ ಪ್ರಭಾವ ಬೀರುತ್ತಿರುವ ರೀತಿಗಳ ಬಗ್ಗೆ ವಸ್ತುನಿಷ್ಟ ವಿಶ್ಲೇಷಣೆ ಸಾಧ್ಯವಾಗುವುದಿಲ್ಲ.

ಬಿಜೆಪಿಯ ಬೆಳವಣಿಗೆಯ ಗತಿ

ಕರ್ನಾಟಕದಲ್ಲಿ ಬಿಜೆಪಿಯ ಮೂಲ ರೂಪವಾದ ಭಾರತೀಯ ಜನಸಂಘ 1952 ರ ಮೊದಲ ಚುನಾವಣೆಯಿಂದಲೂ ಕರ್ನಾಟಕದಲ್ಲಿ ಸ್ಪರ್ಧಿಸುತ್ತಾ ಬಂದಿದೆ. ಮೊದಲೆರಡು ದಶಕಗಳಲ್ಲಿ ಹುಬ್ಬಳ್ಳಿ, ಬೀದರ, ಬೆಂಗಳೂರು, ಕೋಲಾರ ಮತ್ತು ಕರಾವಳಿ ವಲಯಗಳ ಹತ್ತಾರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾ ಬಂದ ಜನಸಂಘ ಸರಾಸರಿ ಶೇ.2-5 ರಷ್ಟು ಓಟುಗಳನ್ನು ಪಡೆದುಕೊಳ್ಳುತ್ತಾ , ಕೆಲವು ಕ್ಷೇತ್ರಗಳಲ್ಲಿ ದೂರದ ಎರಡನೆಯ ಅಥವಾ ಮೂರನೆಯ ಸ್ಥಾನವನ್ನು ಪಡೆದುಕೊಂಡಿದೆ. 1967 ರ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಶಾಸನ ಸಭೆಯಲ್ಲಿ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿತು.

ಇಲ್ಲೇ ಹೋಲಿಕೆಗೆ ಹೇಳಬೇಕೆಂದರೆ 1957ರ ಚುನಾವಣೆಯೊಂದನ್ನು ಬಿಟ್ಟರೆ ( ಆ ಚುನಾವಣೆಯಲ್ಲಿ ಜನಸಂಘಕ್ಕೆ ಶೇ. 1.34 ರಷ್ಟು ಓಟುಗಳು ಬಂದರೆ, ಸಿಪಿಐ ಪಕ್ಷಕ್ಕೆ 1.92 % ಓಟುಗಳು ಬಂದಿತ್ತು) ಈವರೆಗೆ ನಡೆದ ಯಾವ ಚುನಾವಣೆಗಳಲ್ಲೂ ಕರ್ನಾಟಕದ ಎಡಪಕ್ಷಗಳು ರಾಜ್ಯದಲ್ಲಿ ಬಿಜೆಪಿ ಗಿಂತ ಹೆಚ್ಚಿನ ಓಟುಗಳನ್ನು ಪಡೆದುಕೊಳ್ಳಲೇ ಇಲ್ಲ.

ಅದೇನೇ ಇರಲಿ, 1980 ರಲ್ಲಿ ತುರ್ತುಸ್ಥಿತಿಯ ನಂತರ ಜನತಾ ಪರ್ವದ ಅವಸಾನದ ನಂತರ ಭಾರತೀಯ ಜನತಾ ಪಕ್ಷವಾಗಿ ಅವತಾರವೆತ್ತಿದ ಬಿಜೆಪಿ ಕರ್ನಾಟಕದಲ್ಲಿ 1983 ರಲ್ಲಿ ಶೇ. 7.83 ರಷ್ಟು ಓಟುಗಳನ್ನು ಪಡೆದು 18 ಸೀಟುಗಳನ್ನು ಪಡೆಯಿತು. ನಂತರ 1985 ರ ಚುನಾವಣೆಯಲ್ಲಿ ಮತ್ತೆ ಕುಸಿಯಿತು. ಆದರೆ 1989 ರ ಚುನಾವಣೆಯಲ್ಲಿ ಶೇ. 4 ರಷ್ಟು ಓಟುಗಳನ್ನು ಪಡೆದು 4 ಸೀಟುಗಳನ್ನು ಪಡೆದ ಬಿಜೆಪಿ ನಂತರದ ದಶಕಗಳಲ್ಲಿ ರಾಜ್ಯಾದ್ಯಂತ ಮತ್ತು ದೇಶದಾದ್ಯಂತ ಅನುಸರಿಸಿದ ಹಲವು ಹಂತಗಳ ಹಿಂದೂತ್ವ ವಿಸ್ತರಣಾ ಯೋಜನೆಗಳ ಭಾಗವಾಗಿ ತನ್ನ ಮತಬೆಂಬಲವನ್ನು ವಿಸ್ತರಿಸಿಕೊಳ್ಳುತ್ತಾ ಹೋಯಿತು.

1994 ರಲ್ಲಿ ಶೇ. 17 ರಷ್ಟು ಓಟು ಮತ್ತು 40 ಸೀಟುಗಳು, 1999 ರಲ್ಲಿ ಶೇ. 20.69 ರಷು ಓಟು ಮತ್ತು 44 ಸೀಟುಗಳು, 2004 ರಲ್ಲಿ ಶೇ.28.33 ರಷ್ಟು ಓಟುಗಳು ಮತ್ತು 79 ಸೀಟುಗಳನ್ನು ಪಡೆದು ಏಕೈಕ ದೊಡ್ದ ಪಕ್ಷವಾಗಿ ಹೊರಹೊಮ್ಮಿತು. 2008 ರಲ್ಲಿ ಶೇ. 33.86 ರಷ್ಟು ಓಟು ಮತ್ತು 110 ಸೀಟುಗಳನ್ನು ಪಡೆಯಿತು. 2013 ರಲ್ಲಿ ಮೂರಾಗಿ ಛಿದ್ರಗೊಂಡರೂ ಬಿಜೆಪಿಯ ಒಟ್ಟಾರೆ ಮತಪ್ರಮಾಣ ಮಾತ್ರ ಅಷ್ಟೆ ಇತ್ತು. 2018 ರಲ್ಲಿ ಶೇ.36.2 ರಷ್ಟು ಓಟು ಮತ್ತು 104 ಸೀಟುಗಳು ಮತ್ತು 2023 ರಲ್ಲಿ ಶೇ. 36 ರಷ್ಟು ಓಟುಗಳು ಹಾಗೆ ಇದ್ದರೂ ಸೀಟುಗಳು ಮಾತ್ರ 66 ಕ್ಕೆ ಕುಸಿಯಿತು.

ಹೀಗೆ ಬಿಜೆಪಿಯ ಚುನಾವಣಾ ಸಾಧನೆಯ ಗತಿಯನ್ನು ನೋಡಿದರೆ ವಿಶೇಷವಾಗಿ 1989 ರ ನಂತರ ಅದರ ಸೀಟು ಪ್ರಮಾಣ ಮತ್ತು ಓಟು ಪ್ರಮಾಣ ಏಕಪ್ರಕಾರವಾಗಿ ಹೆಚ್ಚುತ್ತಾ ಹೋಗಿದೆ. ಅರ್ಧಕ್ಕಿಂತ ಹೆಚ್ಚು ಮತಗಳನ್ನು ಪಡೆಯುವುದಕ್ಕಿಂತ ಸ್ಪರ್ಧಿಸಿದವರಲ್ಲಿ ಹೆಚ್ಚು ಓಟು ಪಡೆದವರು ಗೆಲ್ಲುವ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ, ಓಟುಗಳು ಸೀಟುಗಳಾಗಿ ಪರಿವರ್ತನೆಯಾಗುವಲ್ಲಿ ಆಯಾ ಕಾಲ ಸಂದರ್ಭದ ಸ್ಥಿತಿಗತಿಗಳು, ಇತರ ಪಕ್ಷಗಳ ಸಾಧನೆ ಮತ್ತು ವೈಫ಼ಲ್ಯಗಳು ಪ್ರಭಾವ ಬೀಳುತ್ತವೆ.

ಆದ್ದರಿಂದ ಒಂದು ಪಕ್ಷದ ಸಾಮಾಜಿಕ ಬೆಂಬಲದ ಗತಿಯನ್ನು ಅರ್ಥಮಾಡಿಕೊಳ್ಳಲು ಅದು ಪಡೆದ ಸೀಟುಗಳಿಗಿಂತ ಪಡೆದ ಓಟು ಶೇರಿನ ವಿಶ್ಲೇಷಣೆಯೇ ಸೂಕ್ತ. ಈ ನಿಟ್ಟಿನಲ್ಲಿ ನೋಡಿದರೆ ಬಿಜೆಪಿಯ ಮತಗಳ ನೆಲೆ ಹೆಚ್ಚುತ್ತಲೇ ಸಾಗಿದೆ. ಇದೇ ದೇಶಾದ್ಯಂತ 1989 ರಿಂದ ನಡೆಯುತ್ತಿದೆ.

ಸ್ಥೂಲವಾಗಿ ಹೇಳಬಹುದಾದರೆ 1989 ರ ನಂತರ ಸಂಘಪರಿವಾರ ಮತ್ತು ಬಿಜೆಪಿ ಕರ್ನಾಟಕದಲ್ಲೂ ಮತ್ತು ದೇಶದಲ್ಲೂ ಮೂರು ಹಂತದಲ್ಲಿ ಬೆಳೆಯುತ್ತಾ ಹೋಗುತ್ತಿದೆ.

ಮೊದಲ ಹಂತ- ಗುಪ್ತ ಸೂಚಿಗಳು, ದೊಡ್ಡ ನಾಟಕಗಳು

ಮೊದಲ ಹಂತದಲ್ಲಿ ಅದು ತಾನು ಹೊಸದಾಗಿ ಪ್ರವೇಶಿಸುವ ಪ್ರದೇಶದಲ್ಲಿ ತನ್ನ ವರ್ಚಸ್ಸು ಮತ್ತು ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ತಾನು ಸಂಸ್ಕಾರಿ, ಪ್ರಾಮಾಣಿಕ ದೈವಭೀರು, ಭ್ರಷ್ಟಾಚಾರ ವಿರೋಧಿ, ದೆಶಭಕ್ತ ಪಕ್ಷವೆಂದು ಬಿಂಬಿಸಿಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಇತರ ಪಕ್ಷಗಳ ಗಣ್ಯರನ್ನು ಮತ್ತು ಸಮಾಜದ ಗಣ್ಯ ಮಾನ್ಯರನ್ನು, ಚಿತ್ರನಟರನ್ನು, ನಿವೃತ್ತ ಸೇನಾಧಿಕಾರಿ-ಅಧಿಕಾರಶಾಹಿಯನ್ನು ಸೇರಿಸಿಕೊಂಡು ತನ್ನ ಇಮೇಜನ್ನ ಗಟ್ಟಿಗೊಳಿಸಿಕೊಳ್ಳುತ್ತದೆ. ಹಾಗೂ ಪ್ರಧಾನ ಧಾರೆ ಪಕ್ಷ ಅರ್ಥಾತ್ ಕಾಂಗ್ರೆಸ್ಸಿನಿಂದ ನಿರ್ಲಕ್ಷ್ಯಕ್ಕೊಳಗಾದ ಜಾತಿ, ಸಮುದಾಯಗಳನ್ನು ಸ್ಥಾನಮಾನ ಮತ್ತು ಆಮಿಷಗಳನ್ನು ಒಡ್ಡಿ ಆಕರ್ಷಿಸುತ್ತದೆ.

1989 ರಲ್ಲಿ ಲಿಂಗಾಯತ ನಾಯಕ ವೀರೆಂದ್ರ ಪಾಟೀಲರನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬಂಗಾರಪ್ಪನವರನ್ನು ಮುಖ್ಯಮಂತ್ರಿ ಮಾಡಿದ ಮೇಲೆ ಲಿಂಗಾಯತರಿಗೆ ಕಾಂಗ್ರೆಸ್ಸಿನ ಬಗ್ಗೆ ಇದ್ದ ಅಸಮಾಧಾನ ತಾರಕಕ್ಕೆ ಹೋಗಿರುವುದನ್ನು ಅರ್ಥಮಾಡಿಕೊಂಡ ಬಿಜೆಪಿ ಕೂಡಲೇ ಯಡಿಯುರಪ್ಪನವರನು ಬಿಜೆಪಿಯ ಅಧ್ಯಕ್ಷರನ್ನಾಗಿ ಮಾಡಿ ಲಿಂಗಾಯತ ಮಠಗಳ ಒಲವನ್ನು ಕ್ರೂಢೀಕರಿಸಿತು. ಅದೇ ಕಾಲಘಟ್ಟದಲ್ಲಿ ಸಾಮಾಜಿಕ ನ್ಯಾಯದ ಹರಿಕಾರರೆಂದೇ ರಾಜ್ಯದಲ್ಲಿ ಹೆಸರಾಗಿದ್ದ ಎಲ್.ಜಿ. ಹಾವನೂರು, ಅರ್ಥಶಾಸ್ತ್ರಜ್ಞ ವೆಂಕಟಗಿರಿಗೌಡ ಇನ್ನಿತರ ಗಣ್ಯಮಾನ್ಯರನ್ನು ಬಿಜೆಪಿಗೆ ಸೇರಿಸಿಕೊಂಡಿತು. ಆ ಕಾಲಘಟ್ಟದಲ್ಲಿ ತಾನು ಕೇವಲ ಜನಪರ, ರೈತಪರ ಎಂಬ ಇಮೇಜನ್ನು ಮಾತ್ರ ಮುಂದಿಡುತ್ತಾ ತನ್ನ ಹಿಂದೂತ್ವವಾದಿ ಪ್ರಚಾರವನ್ನು ಸಂಘಪರಿವಾರದ ಇತರ ಅಂಗಗಳ ಮೂಲಕ ಗುಪ್ತವಾಗಿ ಮಾಡಿಸುತ್ತಾ ಹೋಯಿತು.

ಇದು ಮೊದಲ ಹಂತ.

ಈ ಮೊದಲ ಹಂತದಲ್ಲಿ ಅದರ ಕೊಮುವಾದಿ ಅಜೆಂಡಗಳು ಆ ಪ್ರದೇಶದಲ್ಲಿ ಜನರ ಅರಿವಿಗೆ ಬಾರದಂತೆ ನಡೆದುಕೊಳ್ಳುತ್ತದೆ. ಬಿಜೆಪಿಗೆ ಸೇರುವವರು ಕೂಡ ಕೇವಲ ಜಾತಿ-ವ್ಯಕ್ತಿ ಪ್ರತಿಷ್ಟೆ ಇತ್ಯಾದಿಗಳಿಗೆ ಮೊದಲು ಸೇರಿಕೊಳ್ಳುತ್ತಾರೆ. ಆದರೆ ಸೇರಿಕೊಂಡವರಿಗೆ ಸ್ಥಾನಮಾನ ಕೊಟ್ಟು ಉಳಿಸಿಕೊಳ್ಳುವುದು ಎಲ್ಲಾ ಪಕ್ಷಗಳು ಮಾಡುತ್ತದಾದರೂ ಬಿಜೆಪಿ ಭಿನ್ನವಾಗುವುದು ಅದರ ಆರೆಸ್ಸೆಸ್ ವ್ಯವಸ್ಥೆಯ ಕಾರಣಕ್ಕಾಗಿ.

ಎರಡನೇ ಹಂತ- ಸಮ್ಮತದ ಹಿಂದೂತ್ವೀಕರಣ

ಉದಾಹರಣೆಗೆ ಒಮ್ಮೆ ಲಿಂಗಾಯತರು ಕಾಂಗ್ರೆಸ್ ವಿರೋಧದ ಕಾರಣಗಳಿಂದ ಬಿಜೆಪಿಯ ತೆಕ್ಕೆಗೆ ದೊಡ್ಡ ಮಟ್ಟದಲ್ಲಿ ಹೋದ ನಂತರ ಸಂಘಪರಿವಾರದ ಅಂಗ ಸಂಸ್ಥೆಗಳು ಲಿಂಗಾಯತ ಮಠಗಳು ಮತ್ತು ಅದರ ಮೇಲ್ವರ್ಗ ದ ಸಮಾಜದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಹಲವು ವಿಷಯಗಳನ್ನು ಆಧರಿಸಿ ಸಂಘಟಿಸುತ್ತದೆ. ಉದಾಹರಣೆಗೆ ವಿಶ್ವ ಹಿಂದು ಪರಿಷತ್ ಎಲ್ಲಾ ಲಿಂಗಾಯತ-ವೀರಶೈವ ಮಠಾಧೀಶರನ್ನು ಹಿಂದೂಗಳೆಂದು ಏಕರೂಪೀಕರಿಸಿ ಹಿಂದು ರಕ್ಷಣೆಗೆ ಒಂದೇ ವೇದಿಕೆಯ ಮೇಲೆ ತರುತ್ತದೆ. ನಿಧಾನವಾಗಿ ಲಿಂಗಾಯತರಲ್ಲಿ ಇದ್ದ ಬ್ರಾಹ್ಮಣ್ಯ ವಿರೋಧವನ್ನು ಮಣಿಸುತ್ತಾ ಹಿಂದೂಗಳನ್ನಾಗಿಸುತ್ತದೆ. ಸಮುದಾಯದ ಉದ್ಯಮಿಗಳು ಮತ್ತು ಮೇಲ್‌ವರ್ಗಗಳು ಶೈಕ್ಷಣಿಕ ಹಾಗೂ ಇತರ ಸೇವಾ ಕ್ಷೇತ್ರಗಳ ಸಾಮ್ರಾಜ್ಯಗಳನ್ನೇ ಕಟ್ಟಿಕೊಂಡು ಪ್ರಭುತ್ವದ ಬೆಂಬಲ ಮತ್ತು ಸಹಕಾರವನ್ನು ಅಶ್ರಯಿಸಿರುವುದೂ ಕೂಡ ಸಮುದಾಯದೊಳಗಿನ ಈ ವರ್ಗಗಳು ಕಾಯಕ-ದಾಸೋಹಗಳನ್ನು ಮರೆತು ಸ್ವಾರ್ಥ ಮತ್ತು ಆಸ್ತಿಗಳ ಪಟ್ಟಭದ್ರ ಹಿತಾಸಕ್ತಿಗಳನ್ನು ರೂಢಿಸಿಕೊಂಡು ಬ್ರಾಹ್ಮಣೀಕರಣಗೊಂಡಿವೆ.

ಈ ಎಲ್ಲದರ ಪರಿಣಾಮವಾಗಿಯೇ ಅವರು ಹಿಂದೂತ್ವದ ಅಜೆಂಡಗಳ ಸಮ್ಮತ ವಕ್ತಾರರಾಗುತ್ತಾರೆ.
2017 ರಲಿ ಹಲವು ಲಿಂಗಾಯತ ಪ್ರಗತಿಪರ ಮಠಗಳು ಮತ್ತು ಲಿಂಗಾಯತ ಸಮುದಾಯದೊಳಗಿನ ಪ್ರಗತಿಪರ ಶಕ್ತಿಗಳು ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡಬೇಕೆಂದು ಚಳವಳಿ ಕಟ್ಟುತ್ತಿದ್ದಾಗ ಪೆಜಾವರ ಸ್ವಾಮಿಯ ನೇತೃತ್ವದಲ್ಲಿ ವೀರಶೈವ-ಲಿಂಗಾಯತ ಮಠಾಧೀಶರ ಮತ್ತು ಇತರ ಹಿಂದೂ ಸ್ವಾಮಿಗಳನ್ನು ಅಣಿನೆರಸಿದ ಸಂಘಪರಿವಾರ, ವೀರಶೈವ-ಲಿಂಗಾಯತ ರು ಹಿಂದೂಗಳೇ ಎಂಬ ಠರಾವನ್ನು ಪಾಸು ಮಾಡಿಸಿದರು. ಆ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವೀರಶೈವ-ಲಿಂಗಾಯತ ವಿರೋಧಿ ಎಂದು ಬಣ್ಣಿಸಿ ಸೋಲಿಸುವಲ್ಲಿ ಇದೇ ಶಕ್ತಿಗಳೆ ಪ್ರಧಾನ ಪಾತ್ರ ವಹಿಸಿದವು. ಈಗ ಮತ್ತೆ ಲಿಂಗಾಯತ ಸಮುದಾಯದೊಳಗಿನ ಪ್ರಗತಿಪರ ಶಕ್ತಿಗಳು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಧ್ವನಿಯನ್ನು ಎತ್ತುತ್ತಿದ್ದರೂ ವೀರಶೈವ ಮತ್ತು ಲಿಂಗಾಯತ ಸಮುದಾಯದ ಪ್ರಬಲ ಸ್ಥರಗಳ ಹಿಂದುತ್ವೀಕರಣ ಅದಕ್ಕಿಂತ ಪ್ರಬಲವಾಗಿರುವುದು ಎದ್ದುಕಾಣುತ್ತದೆ.

ಇದು ಎರಡನೆ ಹಂತ.

ಹೀಗಾಗಿ ಬಿಜೆಪಿ ಪಕ್ಷದ ಬಗ್ಗೆ ಮತ್ತು ಅದರ ನಾಯಕರ ಬಗ್ಗೆ ಲಿಂಗಾಯತ ಸಮುದಾಯದಲ್ಲಿ ಅಸಮಾಧಾನಗಳು ಇದ್ದರೂ ಅದೂ ದೊಡ್ಡಮಟ್ಟದಲ್ಲಿ ಹಿಂದೂತ್ವ ವಿರೋಧಿಯೋ ಅಥವಾ ಚುನಾವಣೆಗಳಲ್ಲಿ ಬಿಜೆಪಿ ವಿರೋಧಿಯೋ ಆಗದಿರುವುದಕ್ಕೆ ಇದೇ ಕಾರಣ.

ಒಂದು ಉದಾಹರಣೆ ಈ ವಿದ್ಯಮಾನವನ್ನು ಮತ್ತಷ್ಟು ಸ್ಪಷ್ಟಪಡಿಸಬಹುದು.

1989 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 43.76% ಓಟುಗಳನ್ನು ಪಡೆದುಕೊಂಡು 178 ಸೀಟುಗಳನ್ನು ಪಡೆದುಕೊಂಡಿತ್ತು. ಆದರೆ ವೀರೆಂದ್ರ ಪಾಟೀಲ್ ಪ್ರಕರಣವಾದ ಮೇಲೆ ನಡೆದ 1994 ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಓಟು ಪ್ರಮಾಣ ಶೇ. 17 ರಷ್ಟು ಕುಸಿಯಿತು, ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದ ಸೀಟುಗಳು ಕೇವಲ 34. ಇದರಲ್ಲಿ ಲಿಂಗಾಯತರು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ಸಿನಿಂದ ದೂರ ಸರಿದು ಜನತಾ ದಳ ಮತ್ತು ಬಿಜೆಪಿಗೆ ವಲಸೆ ಹೋದದ್ದು ಒಂದು ಪ್ರಮುಖ ಕಾರಣ.

2023 ರ ಚುನಾವಣೆಯ ಮುನ್ನ ಲಿಂಗಾಯತ ಮುಖಂಡರಾದ ಶೆಟ್ಟರ್, ಸವದಿ ಮತ್ತು ಯಡಿಯುರಪ್ಪನವರನ್ನು ಕೂಡ ಬಿಜೆಪಿ ಕೆಟ್ಟದಾಗಿ ನಡೆಸಿಕೊಂಡಿತು. ಶೆಟ್ಟರ್ ಮತ್ತು ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಬಿಜೆಪಿಯ ಹಲವಾರು ರಾಷ್ಟ್ರೀಯ ಮುಖಂಡರು ಲಿಂಗಾಯತರು ಬಿಜೆಪಿಗೆ ಅನಿವಾರ್ಯವೇನಲ್ಲ ಎಂಬಂತೆ ಬಹಿರಂಗ ಹೇಳಿಕೆಯನ್ನೊ ಕೊಟ್ಟಿದ್ದರು.

ಇವೆಲ್ಲವೂ 1989 ರಲ್ಲಿ ಕಾಂಗ್ರೆಸ್ ಲಿಂಗಾಯತರಿಗೆ ಮಾಡಿದ ಅಪಮಾನಕ್ಕಿಂತಲೂ ಹೆಚ್ಚೇ. ಆದರೂ ಲಿಂಗಾಯತರ ಪ್ರಾಬಲ್ಯವಿರುವ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಯ ಓಟು ಶೇರು ಕೇವಲ 2.4 ರಷ್ಟು ಕಡಿಮೆಯಾದರೆ ಕಲ್ಯಾಣ ಕರ್ನಾಟಕದಲ್ಲಿ ಕೇವಲ 1.8 ರಷ್ಟು ಕಡಿಮೆಯಾಗಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಬಂಜಾರರು ಮತ್ತು ದಲಿತರೂ ಕೂಡ ಈ ಬಾರಿ ಹೆಚ್ಚಿನ ಮಟ್ಟದಲ್ಲಿ ಬಿಜೆಪಿ ವಿರೋಧವಾಗಿ ಮತ ಚಲಾಯಿಸಿರುವುದರಿಂದ ಈ ಇಳಿಕೆಯೂ ಕೇವಲ ಲಿಂಗಾಯತರು ಓಟುಹಾಕದೇ ಇದ್ದದ್ದರಿಂದ ಆಗಿರುವುದೆಂದು ಹೇಳಲಾಗದು.

ಹೀಗಾಗಿ ಕಾಂಗ್ರೆಸ್ ವಿರೋಧದಿಂದ ಬಿಜೆಪಿ ತೆಕ್ಕೆಗೆ ಬಂದ ಲಿಂಗಾಯತ ನಾಯಕತ್ವವನ್ನು ಸಂಘಪರಿವಾರವು ಕಳೆದ ಎರಡು ದಶಕಗಳಿಂದ ಹಿಂದುತ್ವೀಕರಿಸಿದ ರಾಜಕಾರಣದಿಂದಾಗಿ ಲಿಂಗಾಯತ ನಾಯಕರಿಗೆ ಅಪಮಾನವಾದರೂ ಸಮುದಾಯವು ದೊಡ್ಡ ಮಟ್ಟದಲ್ಲಿ ಬಿಜೆಪಿಯನ್ನು ತೊರೆಯುತ್ತಿಲ್ಲ.

ಇದು ಎರಡನೇ ಹಂತದ ಪ್ರಭಾವ.

ಇದೇ ರೀತಿಯ ವಿದ್ಯಮಾನಗಳು ಒಕ್ಕಲಿಗ ಮತ್ತು ಮಾದಿಗ ಸಮುದಾಯಗಳಲ್ಲೂ ಹಾಗೂ ಇತರ ಒಬಿಸಿ ಸಮುದಾಯಗಳಲ್ಲೂ ಸಂಘಪರಿವಾರ ದೊಡ್ದ ರೀತಿಯಲ್ಲಿ ಮಾಡುತ್ತಿದೆ.

ಒಕ್ಕಲಿಗರು ಆರಾಧಿಸುವ ಆದಿ ಚುಂಚನಗಿರಿ ಮಠದ ಹಿರಿಯ ಸ್ವಾಮೀಜಿ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷರಾಗಿದ್ದದು ಇದೇ ಪ್ರಕ್ರಿಯೆಯ ಭಾಗ. ಅವರ ಮಠಗಳು ಸಂಸ್ಕೃತೀಕರಣ ಮತ್ತು ಬ್ರಾಹ್ಮಣೀಕರಣವಾಗಿರುವುದು ಮಾತ್ರವಲ್ಲದೆ ರಾಜಕೀಯವಾಗಿ ಬಹಿರಂಗವಾದ ನಿಲುವು ತೆಗೆದುಕೊಳ್ಳದೇ ಇದ್ದರೂ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದೂತ್ವಕ್ಕೆ ಪೂರಕವಾಗಿಯೇ ಕೆಲಸ ಮಾಡುತ್ತಿವೆ.

ಉರಿಗೌಡ-ನಂಜೇಗೌಡ ವಿಷಯದಲ್ಲಿ ಪ್ರಭಾವಿ ಕಾಂಗ್ರೆಸ್ ಮತ್ತು ಜೆಡಿಎಸ್ ಹಿರಿಯ ಒಕ್ಕಲಿಗ ನಾಯಕರು ಸ್ಪಷ್ಟ ನಿಲುವು ತೆಗೆದುಕೊಂಡಿದ್ದರಿಂದ ಆದಿ ಚುಂಚನಗಿರಿ ಮಠವೂ ಇದರ ಬಗ್ಗೆ ನಿಲುವು ತೆಗೆದುಕೊಂಡಿತಾದರೂ, ಮೋದಿಯ ಬಗ್ಗೆ ಹಿಂದೂತ್ವದ ಬಗ್ಗೆ ಮಠದ್ದು ಮತ್ತು ಒಕ್ಕಲಿಗ ಸಮುದಾಯದ ಪ್ರತಿಷ್ಟಿತರದ್ದು ಈಗಲೂ ಬಹಿರಂಗವಾದ ಮೃದು ನಿಲುವು. ಪಠ್ಯಪರಿಷ್ಕರಣೆ ಸಂದರ್ಭದಲ್ಲಿ ಲಿಂಗಾಯತ ಮಠಗಳು ಬಸವಣ್ಣನ ಬಗ್ಗೆ , ಒಕ್ಕಲಿಗ ಮಠಗಳು ಕುವೆಂಪು ಬಗ್ಗೆ ಮಾತಾಡಿದವು ಮತ್ತು ಅದನ್ನು ಪರಿಷ್ಕರಿಸಿದ ನಂತರ ಸುಮ್ಮನಾದವು. ಆದರೆ ಟಿಪ್ಪುವಿನ ಪಠ್ಯ, ಹಾಗೂ ಟಿಪ್ಪು ನೆನಪುಗಳ ಮೇಲೆ ನಿರಂತರವಾಗಿ ಬಿಜೆಪಿ ಮಾಡುತ್ತಿದ್ದ ದಾಳಿಗಳನ್ನು ಇವರು ಯಾರೂ ಖಂಡಿಸಲಿಲ್ಲ.

ಇದು ಹಿಂದೂತ್ವೀಕರಣ ಎರಡನೇ ಹಂತದ ಮತ್ತೊಂದು ಉದಾಹರಣೆ.

ಇದರ ಪರಿಣಾಮವಾಗಿಯೇ ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರು ಈ ಬಾರಿ ಮೊದಲಿಗಿಂತ ಹೆಚ್ಚಿನ ಓಟುಗಳನ್ನು ಬಿಜೆಪಿ ಹಾಕಿರುವುದು ಕಾಕತಾಳೀಯವಲ್ಲ. ಜೆಡಿಎಸ್ ಗೆ ಬೀಳಬೇಕಿದ್ದ ಜಾತ್ಯತೀತ ಓಟುಗಳು ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್ಸಿಗೆ ಹೋಗದೆ ಕೋಮುವಾದಿ ಬಿಜೆಪಿಗೆ ಅತ್ಯುತ್ಸಾಹದಲ್ಲಿ ಬೀಳುತ್ತಿರುವುದು ಒಕ್ಕಲಿಗ ಸಮುದಾಯದ ಗಮನಾರ್ಹ ಭಾಗ ಬಿಜೆಪಿಯನ್ನು ರಾಜಕೀಯವಾಗಿಯೂ ಆಯ್ಕೆ ಮಾಡಿಕೊಳ್ಳುತ್ತಿರುವುದರ ಸೂಚನೆ.

ಅಷ್ಟು ಮಾತ್ರವಲ್ಲದೆ. ಈ ಬಾರಿ ಮುಸ್ಲಿಮರು ಜೆಡಿಎಸ್ ತೊರೆದಿರುವುದರಿಂದ ಪ್ರತಿಷ್ಟಿತ ಒಕ್ಕಲಿಗರ ಪ್ರಭಾವಿ ಗಣ ಹಿಂದೂತ್ವವನ್ನು ಅಪ್ಪಿಕೊಂಡು ಬಿಜೆಪಿಯ ಜೊತೆ ಸೇರಬೇಕೆಂಬ ಒತ್ತಡವನ್ನು ಸೃಷ್ಟಿಸುತ್ತಿವೆ. ಕಳೆದ ಚುನಾವಣೆಯಲ್ಲೂ ಒಕ್ಕಲಿಗರ ಮೇಲ್ ವರ್ಗದ ವಾಟ್ಸಾಪ್ ಗುಂಪುಗಳು ರಾಜ್ಯಕ್ಕೆ ಕುಮಾರಸ್ವಾಮಿ, ದೆಶಕ್ಕೆ ಮೋದಿ ಎಂದು ಬಹಿರಂಗವಾಗಿ ಪ್ರಚಾರ ಮಾಡಿದ್ದವು.

ಇವೆಲ್ಲವೂ ಬಿಜೆಪಿಗೆ ವರ್ಗಾವಣೆಯಾಗುತ್ತಿರುವ ಜೆಡಿಎಸ್ ಮತಗಳ ಬಗ್ಗೆ ಆತಂಕ ತರಬೇಕಲ್ಲವೇ?

ಅದೇರೀತಿ ಅಂತರಿಕ ಮೀಸಲಾತಿ ಯ ನ್ಯಾಯಯುತ ಬೇಡಿಕೆಗೆ ಇತರ ಸರ್ಕಾರಗಳು ಮಾಡುತ್ತಿದ್ದ ಉಪೇಕ್ಷೆಯಿಂದ ತನ್ನ ತೆಕ್ಕೆಗೆ ಬಂದಿರುವ ಮಾದಿಗ ಸಮುದಾಯದ ನಡುವೆ ಸಂಘಪರಿವಾರ ಕಳೆದ ಒಂದು ದಶಕದಿಂದ ಹಿಂದೂತ್ವೀಕರಣದ ಕೆಲಸ ಮಾಡುತ್ತಿದೆ. ಕಳೆದ ಐದು ವರ್ಷಗಳಿಂದ ಅದು ಹೆಚ್ಚಾಗಿದೆ. ಆರೆಸ್ಸೆಸ್ ಸರಸಂಘ ಚಾಲಕ ಭಾಗವತ್ ಸಮುದಾಯದ ಮಠಕ್ಕೆ ಭೇಟಿ ಕೊಟ್ಟಿದ್ದೂ, ಸಮುದಾಯದ ಸ್ವಾಮಿಗೆ ಮಹತ್ವ ಕೊಟ್ಟು ಅವರ ಮೂಲಕ ಸಮುದಾಯದ ಯುವಕರ ನಡುವೆ ಸಂಘಪರಿವಾರದ ಪ್ರಭಾವವನ್ನು ವಿಸ್ತರಿಸುತ್ತಿರುವುದು ಸ್ಪಷ್ಟವಾಗಿದೆ.

ಆದರೆ ಈ ಬಾರಿ ಬೊಮ್ಮಾಯಿ ಸರ್ಕಾರ ಒಳಮೀಸಲಾತಿಯ ಬಗ್ಗೆ ಮಾಡಿದ ಎಡವಟ್ಟುಗಳ ಕಾರಣದಿಂದ ಈ ಬಾರಿ ಮಾದಿಗ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ವಿರುದ್ಧ ಓಟು ಹಾಕಿದೆ. ಕಾಂಗ್ರೆಸ್ ಈ ಪ್ರಶ್ನೆಯನ್ನು ಹೇಗೆ ನಿಭಾಯಿಸುತ್ತದೆ ಎಂಬುದರ ಮೇಲೆ ಈ ಬೆಂಬಲ ನಿಲ್ಲುತ್ತದೆಯೇ ಎಂಬುದು ನಿರ್ಧಾರವಾಗುತ್ತದೆ.

ಹಾಗೆಯೇ ಬಂಜಾರ ಸಮುದಾಯದ ಒಳಗೂ ಆರೆಸ್ಸೆಸ್ ತುಂಬ ವರ್ಷಗಳಿಂದ ಕೆಲಸ ಮಾಡುತ್ತಿದೆ. ಆದರೆ ಒಳಮೀಸಲಾತಿ ವಿಷಯದಲ್ಲಿ ತದ್ವಿರುದ್ಧ ಕಾರಣಕ್ಕೆ ಲಂಬಾಣಿ ಸಮುದಾಯವು ಈ ಬಾರಿ ಬಿಜೆಪಿ ವಿರುದ್ಧ ಓಟು ಹಾಕಿದೆ. ಅ ಸಮುದಾಯದಲ್ಲಿರುವ ಪ್ರಗತಿಪರ ಬಳಗವು ಈ ಅಸಮಾಧಾನವನ್ನು ಬಳಸಿಕೊಂಡು ಹಿಂದೂತ್ವದ ಪ್ರಭಾವದಿಂದ ಸಮುದಾಯವನ್ನು ಹೊರತರಲು ಪ್ರಯತ್ನಿಸುತ್ತಿದೆಯಾದರೂ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಪ್ರಶ್ನೆಯನ್ನು ಹೇಗೆ ನಿಭಾಯಿಸುತ್ತದೆ ಎಂಬುದರ ಮೇಲೆ ಈ ಬೆಂಬಲ ನಿಂತಿರುತ್ತದೆ. ಆದರೆ ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಆರೆಸ್ಸೆಸ್ ಲಂಬಾಣಿ ಸಾಂಸ್ಕೃತಿಕ ಅಸ್ಮಿತೆಯನ್ನು ಹಿಂದುತ್ವೀಕರಿಸುತ್ತಿರುವುದಕ್ಕೆ ಯಾರ ಬಳಿಯು ಪರ್ಯಾಯ ಕಾರ್ಯಕ್ರಮಗಳಿಲ್ಲದೆ ಇರುವುದು ಕೂಡ ಹಿಂದುತ್ವೀಕರಣದ ಎರಡನೇ ಹಂತದ ಪರಿಣಾಮ.

ಮೂರನೇ ಹಂತ- ಉಗ್ರಗಾಮಿ ಹಿಂದೂತ್ವ

ಇನ್ನು ಮೂರನೇ ಹಂತ ಕರಾವಳಿಯಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ನಾವು ನೋಡುತ್ತಿರುವ ವಿದ್ಯಮಾನ. ಎಂಥದ್ದೇ ಭ್ರಷ್ಟಾಚಾರ, ಅನ್ಯಾಯಗಳು, ಬದುಕಿನ ಸಮಸ್ಯೆಗಳು, ಮಾನವತೆಯನ್ನು ಬೆಚ್ಚಿಬೀಳಿಸುವ ಕ್ರೌರ್ಯಗಳು ಹಿಂದೂತ್ವದ ದ್ವೇಷ ರಾಜಕಾರಣಕ್ಕೆ ಬಲಿಬಿದ್ದವರನ್ನು ಎಚ್ಚರಿಸಲಾರದಷ್ಟು ಜನರನ್ನು ಕುರುಡಾಗಿಸುತ್ತವೆ. ಕರಾವಳಿಯಲ್ಲಿ ಬಿಜೆಪಿಗೆ ಈ ಬಾರಿ ಬೀಳದ ಓಟುಗಳು ತಾವು ಬಯಸುವಷ್ಟು ಬಿಜೆಪಿ ಉಗ್ರ ಹಿಂದೂತ್ವವಾದಿ ಆಗಿಲ್ಲ ಎಂಬ ಅಸಮಾಧನದ ದ್ಯೋತಕವೇ ವಿನಾ ಕರಾವಳಿ ಸೆಕ್ಯುಲರ್ ಆದ ದ್ಯೋತಕವಲ್ಲ.

ಹೀಗೆ ಬಿಜೆಪಿಯ ಒಂದನೇ ಹಂತದಿಂದ, ಎರಡನೇ ಹಂತಕ್ಕೆ, ಎರಡನೇ ಹಂತದಿಂದ ಮೂರನೇ ಹಂತಕ್ಕೆ ಸರಾಗವಾಗಿ ಬೆಳೆಯುತ್ತಿರುವುದರಿಂದಲೇ ಅದರ ಓಟು ಶೇರು ಕೂಡ ಸ್ಥಿರವಾಗಿ ಬೆಳೆಯುತ್ತಿದೆ.

ಆದ್ದರಿಂದ ಬಿಜೆಪಿ ಉಳಿಸಿಕೊಂಡಿರುವ ಶೇ. 36 ರಷ್ಟು ಓಟು ಶೇರು ಕೋಮುವಾದಕ್ಕೆ ಈ ಚುನಾವಣೆ ದೊಡ್ಡ ಪೆಟ್ಟು ಕೊಟ್ಟಿಲ್ಲವೆಬುದನ್ನೇ ಸೂಚಿಸುತ್ತದೆ.

ಅದನ್ನು ನಿರೀಕ್ಷಿಸುವುದೂ ಕೂಡ ತಪ್ಪು. ಏಕೆಂದರೆ ಚುನಾವಣೆಯ ಕೇವಲ ಆರೆಂಟು ತಿಂಗಳ ವರೆಗೂ ಕೋಮುವಾದದ ವಿರುದ್ಧ ಕರ್ನಾಟಕದಲ್ಲಿ ಅಲ್ಲಲ್ಲಿ ಪ್ರಜಾತಂತ್ರವಾದಿಗಳು ಎಂದಿನಂತೆ ನಡೆಸಿದ ಪ್ರತಿಭಟನೆಗಳನ್ನು ಹಾಗೂ ದಲಿತರು ಮತ್ತು ಮುಸ್ಲಿಮರು ತೋರಿದ ಪ್ರತಿರೋಧಗಳನ್ನು ಹೊರತುಪಡಿಸಿ ಎದ್ದು ಕಾಣುವಂಥ ವಿಶೇಷವಾದ ವಿರೋಧವೇನೂ ವ್ಯಕ್ತವಾಗಿರಲಿಲ್ಲ.

ಕರ್ನಾಟಕದಲ್ಲಿ ಬೆಂಗಳೂರು, ಕಲ್ಯಾಣ, ಮತ್ತು ದಕ್ಷಿಣ ಕರ್ನಾಟಕಗಳಲ್ಲಿ ಬಿಜೆಪಿ ಪರಿವಾರ ಮೊದಲ ಹಂತದಿಂದ ಎರಡನೇ ಹಂತಕ್ಕೆ ಸಾಗುತ್ತಿದೆ. ಕಿತ್ತೂರು ಹಾಗೂ ಮಧ್ಯ ಕರ್ನಾಟಕದಲ್ಲಿ ಎರಡನೇ ಹಂತವನ್ನು ತಲುಪಿ ಮೂರನೇ ಹಂತದ ಕಡೆ ಧಾವಿಸುತ್ತಿದೆ. ಕರಾವಳಿ ಮೂರನೇ ಹಂತದಲ್ಲಿದೆ.

ಮೊದಲನೇ ಹಂತದಲ್ಲಿ ಅದು ಜಾತಿ, ಪ್ರತಿಷ್ಠೆ, ಪಕ್ಷಾಂತರ ಎಲ್ಲವನ್ನು ಬಳಸಿಕೊಂಡು ಮೊದಲು ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತದೆ. ಕೂಡಲೇ ಎರಡನೇ ಹಂತದ ಹಿಂದುತ್ವೀಕರಣವನ್ನು ಪ್ರಾರಂಭಿಸುತ್ತದೆ.

ಹೀಗಾಗಿ ಮೇಲ್ನೋಟಕ್ಕೆ ಕರಾವಳಿಯಷ್ಟು ಕೋಮು ಧ್ರುವೀಕರಣವು ದಕ್ಷಿಣ ಕರ್ನಾಟಕದಲ್ಲಿ ಕಾಣದಿದ್ದರೂ ಅದು ಅದೇ ಪ್ರಕ್ರಿಯೆಯ ಮೊದಲ ಹಂತ ಎಂಬುದನ್ನು ಮರೆಯಬಾರದು.

ಹೀಗಾಗಿ ದಕ್ಷಿಣ ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲೂ, ಬಿಜೆಪಿ ಠೇವಣಿ ಕಳೆದುಕೊಂಡಿರುವ ಕಡೆಗಳಲ್ಲೂ ಬಿಜೆಪಿಯ ಓಟು ಶೇರು ಹೆಚ್ಚಾಗಿರುವುದು ಮತ್ತು ಅಲ್ಲೆಲ್ಲಾ ಹಿಂದೂತ್ವೀಕರಣದ ಎರಡನೆ ಹಂತದ ಛಾಯೆಗಳು ಕಾಣುತ್ತಿರುವುದು, ಪ್ರಜಾತಂತ್ರವಾದಿಗಳಲ್ಲಿ ಆತಂಕ ಹುಟ್ಟಿಸಬೇಕೆ ವಿನಾ ಸಮಾಧಾನವನ್ನಲ್ಲ.

ಹಾಗೆ ನೋಡಿದರೆ 1980-90 ರ ದಶಕದಲ್ಲಿ ಕರಾವಳಿಯಲ್ಲೂ ಬಿಜೆಪಿ ನೆಲೆ ಹೆಚ್ಚಿಸಿಕೊಂಡಿದ್ದು ಕೂಡ ಇಂದು ಅದು ದಕ್ಷಿಣ ಕರ್ನಾಟಕದಲ್ಲಿ ನಡೆಸುತ್ತಿರುವ ಜಾತಿ ಸಮೀಕರಣ ಇನ್ನಿತ್ಯಾದಿ ಪ್ರಯೋಗಗಳ ಮೂಲಕವೇ.

ಸಂಘೀ ಫ಼್ಯಾಸಿಸಂ ಅಜೇಯವಲ್ಲ- ಆದರೆ ಜನಸಂಘಟನೆಗೆ ಪರ್ಯಾಯವಿಲ್ಲ

ಅದರ ಅರ್ಥ ಬಿಜೆಪಿ ಅಜೇಯವೆಂದಲ್ಲ. ಬಲವಾದ, ದಮನಿತ ಜನರಲ್ಲಿ ಬೇರುಬಿಟ್ಟ ಪ್ರಜಾತಾಂತ್ರಿಕ ಚಳವಳಿಯ ಮೂಲಕ ದಮನಿತ ಜನರ ಮನ-ಮೆದುಳಿಂದ ಈ ಮೋದಿತ್ವದ ಭೂತವನ್ನು ಓಡಿಸಬಹುದು. ಆದರೆ ದುರಾದೃಷ್ಟವಶಾತ್ ಇಂಥಾ ಚಳವಳಿಯನ್ನು ಮಾಡುತ್ತಾ ಬಂದಿದ್ದ ಎಡಪಕ್ಷಗಳು ಈಗ ಏದುಸಿರು ಬಿಡುತ್ತಿವೆ. ಅವುಗಳ ಗಟ್ಟಿ ನೆಲೆಯಿದ್ದ ಪ್ರದೇಶದಲ್ಲಿ ಇಂದು ಎಡಪಕ್ಷಗಳಿಗಿಂತ ಹತ್ತಾರು ಪಟ್ಟು ಹೆಚ್ಚು ಓಟುಗಳನ್ನು ಬಿಜೆಪಿ ಪಡೆಯುತ್ತಿದೆ.

ಮತ್ತೊಂದು ಕಡೆ ಕರ್ನಾಟಕದ ಯಾವ ಜನಚಳವಳಿಗಳಿಗೂ ಲಕ್ಷಾಂತರ ಜನರನ್ನು ಸಂಘಟಿಸಿ ಸರ್ಕಾರಕ್ಕೆ ಮತ್ತು ಸಂಘೀ ಫ಼್ಯಾಸಿಸಂಗೆ ಸವಾಲು ಹಾಕುವ ಸಾಮರ್ಥ್ಯ ಈಗ ಉಳಿದಿಲ್ಲ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾತ್ರವಲ್ಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಸಹ ಫ಼್ರೀಡಂ ಪಾರ್ಕ್ ನಿರ್ಬಂಧವನ್ನು ಮುರಿದು ಗಟ್ಟಿ ಹೋರಾಟವನ್ನು ಮಾಡಿ ಸರ್ಕಾರವನ್ನು ಮಣಿಸುವಷ್ಟು ಪ್ರತಿರೋಧ ಶಕ್ತಿ ತೋರಿದ ಹೋರಾಟಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ.

ಇದು ಯಾರ ವಿಮರ್ಶೆಯೂ ಅಲ್ಲ. ಸಾಮೂಹಿಕ ಆತ್ಮ ವಿಮರ್ಶೆ.

ಎಲ್ಲಿಯ ತನಕ ಒಂದು ಬಲವಾದ ಜನಚಳವಳಿ ಕಟ್ಟುತ್ತಾ ಜನರಲ್ಲಿ ತಲೆಯಲ್ಲಿರುವ ಹಿಂದೂತ್ವವನ್ನು ತೆಗೆದು ಒಂದು ನೈಜ ಪ್ರಜಾತಾಂತ್ರಿಕ ಆಶಯಗಳುಳ್ಳ "ನಾವು ಈ ದೇಶದ ಜನತೆ" ಯನ್ನು ಕಟ್ಟಲಾಗುವುದಿಲ್ಲವೋ,..

.. ಅಲ್ಲಿಯವರೆಗೆ ಹಿಂದೂತ್ವಕ್ಕಿರಲಿ ಬಿಜೆಪಿಗೂ ಚುನಾವಣ ಸೋಲಿರುವುದಿಲ್ಲ. ಅದೇ ಸಮಕಾಲೀನ ಸತ್ಯ.

ಹೀಗಾಗಿ ಈ ಚುನಾವಣಾ ಫ಼ಲಿತಾಂಶ ಜನಚಳವಳಿಗಳ ಗಂಭೀರ ಹಾಗೂ ಪ್ರಾಮಾಣಿಕ ಆತ್ಮವಿಮರ್ಶೆಗೆ ದಾರಿ ಮಾಡಿಕೊಡಬೇಕೆ ವಿನಾ ಸಂಭ್ರಮಕ್ಕೂ ಅಲ್ಲ. ಸ್ವಲೋಲುಪ ವ್ಯಾಖ್ಯಾನಗಳಿಗೂ ಅಲ್ಲ.

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)
ಲೇಖನ ಕೃಪೆ: ವಾರ್ತಾಭಾರತಿ ಕನ್ನಡ ದೈನಿಕ

Advertisement
Advertisement
Recent Posts
Advertisement