Advertisement

ತಲ್ಲೂರು ನುಡಿಮಾಲೆ 2023: 'M ಡಾಕ್ಯುಮೆಂಟ್' ಪುಸ್ತಕ ಬಿಡುಗಡೆ‌!

Advertisement

ಭಾನುವಾರ (ಸೆಪ್ಟೆಂಬರ್ 24) ಉಡುಪಿಯ ಟೌನ್‌ಹಾಲ್ ನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನೇತೃತ್ವದ 'ತಲ್ಲೂರು ನುಡಿಮಾಲೆ- 2023 ಕರಾವಳಿ ಕಟ್ಟು' ಕಾರ್ಯಕ್ರಮದಲ್ಲಿ ದೇಶದ ಖ್ಯಾತ ಆರ್ಥಿಕ ಚಿಂತಕ ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಅವರ Back stage ಪುಸ್ತಕದ ಕನ್ನಡ ಅನುವಾದ 'M ಡಾಕ್ಯುಮೆಂಟ್' ಲೋಕಾರ್ಪಣೆಗೊಂಡಿತು.

ಕೃತಿಯನ್ನು ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಪ್ರಮುಖ, ಜನಪರ ಚಿಂತಕ, ಹಿರಿಯ ಪತ್ರಕರ್ತ, ಖ್ಯಾತ ಲೇಖಕ ರಾಜಾರಾಂ ತಲ್ಲೂರು ಅವರು ಕನ್ನಡಕ್ಕೆ ಅನುವಾದಿಸಿದ್ದು ಶಿವಮೊಗ್ಗದ 'ಅಹರ್ನಿಶಿ ಪ್ರಕಾಶನ ಸಂಸ್ಥೆ' ಈ ಪುಸ್ತಕವನ್ನು ಮುದ್ರಿಸಿ ಪ್ರಕಟಿಸಿದೆ.

ಈ ಸಂಧರ್ಭದಲ್ಲಿ ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ರವರು 'ಮುಂದಿನ 25ವರ್ಷಗಳಲ್ಲಿ ಅಭಿವೃದ್ಧಿಗೆ ವಿಶೇಷ ಸವಾಲುಗಳು' ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು‌.

ನಾಡಿನ ಮತ್ತೊಬ್ಬ ಹಿರಿಯ ಅರ್ಥಶಾಸ್ತ್ರಜ್ಞರು ಹಾಗೂ ಬೆಂಗಳೂರಿನ ಐಐಎಂಬಿಯ ಪ್ರೊಫೆಸರ್ ಎಂ.ಎಸ್ ಶ್ರೀರಾಂ ಅವರು ಮೊದಲಿಗೆ ಪುಸ್ತಕವನ್ನು ಪರಿಚಯಿಸಿದರು ಮತ್ತು ಅಹ್ಲುವಾಲಿಯಾ ಅವರ ಉಪನ್ಯಾಸದ ಬಳಿಕ ಅಹ್ಲುವಾಲಿಯಾ ಅವರೊಂದಿಗೆ ಸುದೀರ್ಘ ಸಂವಾದ ನಡೆಸಿದರು.

ಈ ಸಂಧರ್ಭದಲ್ಲಿ ಅನುವಾದಕರಾದ ರಾಜಾರಾಂ ತಲ್ಲೂರು ಅವರು ಅಹ್ಲುವಾಲಿಯಾ ಅವರ ಬ್ಯಾಕ್ ಸ್ಟೇಜ್ ಪುಸ್ತಕದ ಕುರಿತಾದ ತನ್ನ ಅಭಿಪ್ರಾಯ ಮತ್ತು ಅನುವಾದದ ಕಾಲದ ಅನುಭವಗಳನ್ನು ಹಂಚಿಕೊಂಡರು.

ಅಹರ್ನಿಶಿ ಪ್ರಕಾಶನ ಸಂಸ್ಥೆಯ ಮುಖ್ಯಸ್ಥರಾದ ಅಕ್ಷತಾ ಹುಂಚದಕಟ್ಟೆ ಇಂತಹ ಒಂದು ಅಪೂರ್ವ ಪುಸ್ತಕವನ್ನು ಪ್ರಕಟಿಸಿದ್ದು ನಮ್ಮ ಸಂಸ್ಥೆಗೆ ಹೆಮ್ಮೆಯನ್ನು ತಂದುಕೊಟ್ಟಿದೆ ಎಂದರು.

ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಪ್ರಮುಖರಾದ ಸುರೇಶ್ ತಲ್ಲೂರು ಉಪಸ್ಥಿತರಿದ್ದರು.

ಕರಾವಳಿ ಕಟ್ಟು ತಂಡದ ಸದಸ್ಯರಲ್ಲಿ ಓರ್ವರಾದ ಎಂಐಟಿಯ ಪ್ರಾಧ್ಯಾಪಕ ಡಾ.ದಶರಥ ರಾಜ್ ಶೆಟ್ಟಿ ಯವರು ಸ್ವಾಗತಿಸಿದರು. ಬಳ್ಳಾರಿಯ ಪ್ರಾಧ್ಯಾಪಕ ಪ್ರೊ. ರಾಬರ್ಟ್ ಜೋಶ್ ಪ್ರಾಸ್ತಾವಿಕ ಮಾತಗಳನ್ನಾಡಿದರು. ಅಂತರ್ರಾಷ್ಟ್ರೀಯ ಕಲಾವಿದ ಎಲ್.ಎನ್ ತಲ್ಲೂರು ಮತ್ತಿತರರು ಅತಿಥಿಗಳನ್ನು ಗೌರವಿಸಿದರು. ಹಿರಿಯ ಜನಪ್ರಿಯ ಮನೋ ವೈಧ್ಯ ಡಾ. ಪಿ.ವಿ ಭಂಡಾರಿಯವರು ವಂದಿಸಿದರು.

ಸುಮಾಜೋಶ್ ಮತ್ತು ಐಶ್ವರ್ಯ ಪ್ರಕಾಶ್ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರೂಪಿಸಿದರು.

ಈ ಕುರಿತಾಗಿ ಖ್ಯಾತ ಪತ್ರಕರ್ತ ಕೇಸರಿ ಹರಾವೋ ಅವರ ಲೇಖನ:

ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ Backstage ಪುಸ್ತಕವನ್ನು ರಾಜಾರಾಂ ತಲ್ಲೂರ್ ಅನುವಾದ ಮಾಡಿ, ಅಹರ್ನಿಶಿ ಪ್ರಕಾಶನ 'M ಡಾಕ್ಯುಮೆಂಟ್' ಎನ್ನುವ ಶೀರ್ಷಿಕೆಯಲ್ಲಿ ಹೊರತಂದು ಈ ದಿನ ಉಡುಪಿಯಲ್ಲಿ ಬಿಡುಗಡೆ ಮಾಡಿದ್ದಾರೆ.
ಮಾಂಟೆಕ್ ಸಿಂಗ್ ಅವರೇ ಉಡುಪಿಗೆ ಆಗಮಿಸಿ ಪುಸ್ತಕ ಬಿಡುಗಡೆ ಮಾಡಿ ಮುಂದಿನ 25 ವರ್ಷಗಳಲ್ಲಿ ಭಾರತದ ಬೆಳವಣಿಗೆಯ ಸವಾಲುಗಳು ಎನ್ನುವ ವಿಷಯದ ಮೇಲೆ ಮಾತಾಡಿದ್ದು ವಿಶೇಷವಾಗಿತ್ತು.

ನಾನು ಈ ಪುಸ್ತಕವನ್ನು ಮೂಲ ಇಂಗ್ಲಿಷಿನಲ್ಲೇ ಓದಿದ್ದೇನೆ. ಮಾಂಟೆಕ್ ಎಷ್ಟು ಮೇಧಾವಿ ಆರ್ಥಿಕ ತಜ್ಞರೋ, ಎಷ್ಟು ಒಳ್ಳೆಯ ಮಾತುಗಾರರೋ, ಅಷ್ಟೇ ಒಳ್ಳೆಯ ಬರಹಗಾರರೂ ಕೂಡ. ಓದುಗನನ್ನು ಬಹಳ ಆಪ್ತವಾಗಿ ಕೂರಿಸಿಕೊಂಡು ಕತೆ ಹೇಳುವಂತೆ ಸಂಕೀರ್ಣ ಆರ್ಥಿಕ ವಿಷಯಗಳನ್ನು ಮನಕ್ಕೆ ಮುಟ್ಟುವಂತೆ ಸರಳವಾಗಿ, ತೆಳುಹಾಸ್ಯದಲ್ಲಿ ಉತ್ಸಾಹದಿಂದ ಹೇಳಿದ್ದಾರೆ. ರಾಜಾರಾಂ ಅವರ ಅನುವಾದವೂ ಆ ಗುಣವನ್ನು ಕನ್ನಡದಲ್ಲಿ ತಂದಿದೆ ಎಂದು ಆ ಸಭೆಯಲ್ಲೇ ಕೇಳಲ್ಪಟ್ಟೆ.

1991 ರಿಂದ ಆರಂಭಗೊಂಡ ಭಾರತದ ಏರುಗತಿಯ ಆರ್ಥಿಕ ಪರ್ವದ ಹಿಂದಿನ ಕತೆ ಪುಸ್ತಕದ ವಸ್ತು. ಆ ಪರ್ವದಲ್ಲಿ ಬಹುಮುಖ್ಯ ಪಾತ್ರಗಳಲ್ಲಿ ಒಂದನ್ನು ಮನಮೋಹನ್ ಸಿಂಗ್ ವಹಿಸಿದ್ದರೆ, ಮತ್ತೊಂದು ಪಾತ್ರ ನಿಸ್ಸಂದೇಹವಾಗಿ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರುದು. ವರ್ಲ್ಡ್ ಬ್ಯಾಂಕ್ ಮತ್ತು ಐಎಂಎಫ್ ಸಾಲದ ಹೊರೆಯಿಂದ ತತ್ತರಿಸಿಹೋಗಿ, ಆರ್ಥಿಕತೆಯೂ ನೆಲಕಚ್ಚಿದ್ದ ಮೇಲೇಳುವುದೇ ಕಡುಕಷ್ಟ ಎನ್ನುವ ಪರಿಸ್ಥಿತಿಯನ್ನು ನಿಭಾಯಿಸಿ, ಭಾರತವನ್ನು ಏರುಗತಿಯ ಆರ್ಥಿಕತೆಯ ಟ್ರ್ಯಾಕಿಗೆ ತಂದು ಚಲನಶೀಲವಾಗಿಸಿದ್ದು ಈ ಉದಾರೀಕರಣ ಪರ್ವವೇ ಎನ್ನುವುದಕ್ಕೆ ಎರಡು ಮಾತಿಲ್ಲ. ಜಗತ್ತಿನ ಎಲ್ಲ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಕ್ಯಾಪಿಟಲಿಸ್ಟ್ ಎಕನಾಮಿಕ್ ಮಾಡೆಲ್ ಅನ್ನೇ ಭಾರತ ಅಪ್ಪಿಕೊಂಡು ತನ್ನ ಸಂಕಷ್ಟದಿಂದ ಹೊರಬಂತು ಎನ್ನುವುದು ಸತ್ಯವೇ. ಆದರೆ ಒಂದನ್ನು ಪಡೆಯಲು ಮತ್ತೊಂದನ್ನು ತ್ಯಾಗ ಮಾಡಬೇಕಾಗುತ್ತದೆ. ನಾವು ಏನೆಲ್ಲಾ ತ್ಯಾಗ ಮಾಡಿದ್ದೇವೆ ಎನ್ನುವುದನ್ನು ನಮ್ಮಲ್ಲಿನ ಜಾಗತೀಕರಣ, ಖಾಸಗೀಕರಣ ಮತ್ತು ಔದಾರೀಕರಣದ ಪ್ರಕ್ರಿಯೆಗಳ ಮೂಲಕ ನಾವು ನೋಡಿದ್ದೇವೆ.

ಈ ನಿಟ್ಟಿನಲ್ಲಿ ನೋಡಿದಾಗ ನಮಗೆ ಕ್ಯಾಪಿಟಲಿಸ್ಟ್ ಮಾಡೆಲ್ ಬಿಟ್ಟರೆ ಬೇರೇ ದಾರಿಯೇ ಇರಲಿಲ್ಲವೇ? ಇತ್ತು ಎಂದರೆ ಆ ಮಾಡೆಲ್ ಯಾವುದು? ನೆಹರೂ ಹಿಡಿದ ಮಿಶ್ರ ಆರ್ಥಿಕತೆ ಸಂಪೂರ್ಣ ಸೋತಿತೇ? ಆ ಮಾಡೆಲ್ಲೇ ತಪ್ಪೇ? ಅಥವಾ, ಅದರ ಸಮರ್ಥ ಅನುಷ್ಠಾನದಲ್ಲಿ ನೆಹರೂ ನಂತರದ ಭಾರತ ಎಡವಿತೇ? ನಾವು ಎದುರಿಸಿದ ಯುದ್ದಗಳು, ನಮ್ಮಲ್ಲಿನ ಆಂತರಿಕ ರಾಜಕೀಯ, ಸಾಮಾಜಿಕ ಸಮಸ್ಯೆಗಳು ಸೋಲಿಸಿದವೇ? ಅಥವಾ, ಜಾಗತಿಕ ಬಂಡವಾಹೀ ಶಕ್ತಿಗಳು ಸಾಲಕೊಟ್ಟು ಆರ್ಥಿಕ ಒತ್ತಡ ಹೇರಿ ಆ ಮಾಡೆಲ್ಲನ್ನು ಸೋಲಿಸಿದವೇ? ಸೋವಿಯತ್ ಒಕ್ಕೂಟದ ಪತನ ಕಣ್ಣಮುಂದೆಯೇ ಇದೆ. ಚೀನಾ ಕೂಡ ಕ್ಯಾಪಿಟಲಿಸ್ಟ್ ಎಕನಾಮಿಕ್ ಮಾಡೆಲ್ ಅನ್ನೇ ಹಿಡಿಯಿತು. ಹಾಗಿದ್ದರೆ ಬಂಡವಾಳಶಾಹೀ ಆರ್ಥಿಕತೆಯೇ ಆಧುನಿಕ ಜಗತ್ತಿನ ಅಭಿವೃದ್ಧಿಯ ಮಾಡೆಲ್ಲೇ? ಇನ್ನೂ ಮುಂದಕ್ಕೆ ಹೋಗಿ, ಭೂಮಿಯನ್ನೂ ನಿಸ್ತೇಜಗೊಳಿಸುವ, ಅದರ ಆಯಸ್ಸನ್ನು ಕಡಿಮೆ ಮಾಡುವ ಇಂಥಾ ಮಾಡೆಲ್ಲಿನಲ್ಲಿ ಮಾನವನನ್ನು ಭೂಮಿಯೇ ಸಿಲುಕಿಸುವುದು ಭೂಮಿಯ "ಡೆಸ್ಟಿನಿ"ಯೇ? ಎನ್ನುವ ಅಸಂಬದ್ಧ ಪ್ರಶ್ನೆಯೂ ಏಳದಿರಲಾರದು.

ಈ ಮಿಲಿಯನ್ ಡಾಲರ್ ಪ್ರಶ್ನೆಗಳು ನನಗೆ ಪುಸ್ತಕದಲ್ಲಿಯೂ, ಇಂದಿನ ಮಾಂಟೆಕ್ ಅವರ ಮಾತುಗಳಲ್ಲಿಯೂ ಪ್ರಶ್ನೆಗಳಾಗಿಯೇ ಉಳಿದವು. ಎಂ ಎಸ್ ಶ್ರೀರಾಮ್ ಅವರ ಇಂದಿನ ಕೆಲವು ಪ್ರಶ್ನೆಗಳು ನನ್ನ ಈ ಪ್ರಶ್ನೆಗಳನ್ನು ಇನ್ನಷ್ಟು ಬಲಗೊಳಿಸಿದವು. ಶ್ರೀರಾಮ್ ತಮ್ಮ ಮಾತಲ್ಲಿ ಎರಡು ಮೂರು ಬಾರಿ ''ನೋ ಜಾಬ್ಸ್ ಗ್ರೋತ್?'' ಎಂದು ಕೆಣಕಿದರು. ಹಾಗೆಯೇ, ಬಹುಶಃ ಅಂದಿನ ಯುಪಿಎ ಸರ್ಕಾರ ಗ್ರೋತ್ ಕಡೆಗೆ ಓಡುತ್ತಿದ್ದರೆ, ಅದನ್ನು ಸಹ್ಯವಾಗಿಸಿ ಜನರಿಗೆ ಒಂದಷ್ಟು ಉದ್ಯೋಗಗಳನ್ನೂ ಹುಟ್ಟಿಹಾಕುತ್ತಿದ್ದುದು, ಬದುಕುವ ಹಕ್ಕನ್ನು ನೀಡುತ್ತಿದ್ದುದು ಸೋನಿಯಾರ ಗುಂಪಿನ ಆರ್ಥಿಕ, ಸಾಮಾಜಿಕ ನ್ಯಾಯದ ವಿಸ್ತರಣೆಯ ಕಾರ್ಯಕ್ರಮಗಳು ಎಂದರು. ಹಾಗೆಯೇ, ಭಾರತದ ಜನಸಂಖ್ಯೆಯ ಏರಿಕೆ ಕಡಿಮೆಯಾಗುತ್ತಾ ಸಮಸ್ಥಿತಿ ತಲುಪಿದ ಮೇಲೂ ನಮ್ಮಲ್ಲಿ 7% ಗ್ರೋತ್ ಅವಶ್ಯಕವೇ? ಎನ್ನುವ ಬಹಳ ಪ್ರಾಜ್ಞ ಪ್ರಶ್ನೆಯನ್ನೂ ಮಾಂಟೆಕ್ ಮುಂದಿಟ್ಟರು.

ಅವೆಲ್ಲಕ್ಕೂ ಮಾಂಟೆಕ್ ತಮ್ಮ ಎಕನಾಮಿಸ್ಟ್ ಲೆನ್ಸ್ ಮೂಲಕವೇ ಉತ್ತರ ಕೊಟ್ಟರೇ ಹೊರತು, ಪರ್ಯಾಯಗಳ ಬಗ್ಗೆ ಮಾತಾಡಲಿಲ್ಲ. ಆದರೆ, ಅವರ ಪುಸ್ತಕದಲ್ಲಿ, ಇಂದಿನ ಮಾತಲ್ಲಿ ತುಸು ಹೆಚ್ಚೇ ಎನ್ನುವಂತೆ ಉದ್ಗರಿಸಿದ್ದು ಜಾಗತಿಕ ತಾಪಮಾನ ಹೆಚ್ಚಳ ಆಗುತ್ತಿರುವ ಬಗ್ಗೆ. ಅದನ್ನು ಕೂಡ ಅವರು ಎಕನಾಮಿಸ್ಟ್ ಲೆನ್ಸ್ ಮೂಲಕವೇ ನೋಡಿದರು ಎಂದೇ ಎನಿಸಿತು. ಪುಸ್ತಕದಲ್ಲಿ ತಮ್ಮ ಆರ್ಥಿಕ ಕಾರ್ಯಕ್ರಮಗಳ ಕಥಾನಕದಲ್ಲಿ ಒಂದು ಬಾರಿಯೂ ಅದರ ಪ್ರಸ್ತಾಪ ಆಗದೇ, epilogue ನಲ್ಲಿ ಅಷ್ಟೇ ಆಗುತ್ತದೆ. ಅದೂ ಕೂಡ ಬಹಳ ಸಂಕ್ಷಿಪ್ತವಾಗಿ. ದೆಹಲಿಯಲ್ಲಿ ನೆಲೆಸಿರುವ ಅವರು ತೆಗೆದುಕೊಳ್ಳುವ ನಿದರ್ಶನ ಕೂಡ ದೆಹಲಿಯ ಹೊಗೆ ದಟ್ಟಣೆಯನ್ನು ಅಷ್ಟೇ. ಅವರು ಪ್ಲಾನಿಂಗ್ ಕಮಿಷನ್ ಡೆಪ್ಯೂಟಿ ಚೇರ್ಮನ್ ಆಗಿದ್ದಾಗಲೇ ಕೋಪನ್ ಹೇಗನ್ನಿನಲ್ಲಿ (2009) COP Summit ನಡೆಯಿತು. ಇನ್ನು ಹತ್ತು ವರ್ಷದಲ್ಲಿ ತಾಪಮಾನ ಹೆಚ್ಚಳವನ್ನು 1.5 ಡಿಗ್ರೀಯಷ್ಟು ಇಳಿಸಬೇಕು, ಅದಕ್ಕಾಗಿ ಎಲ್ಲ ರಾಷ್ಟ್ರಗಳೂ carbon emissions ಅನ್ನು 350ppm ಗೆ ಇಳಿಸಬೇಕು ಎಂದಾಗ ಆಗಿನ ಭಾರತ ಸರ್ಕಾರ ಒಪ್ಪಲಿಲ್ಲ. ನೆರೆಯ ಮಾಲ್ಡೀವ್ಸ್ ನಲ್ಲಿ ಚಿಕ್ಕಚಿಕ್ಕ ದ್ವೀಪಗಳು ಮುಳುಗಿಹೋಗುತ್ತಿದ್ದವು. ಆ 2500 ದ್ವೀಪಗಳ ದೇಶದ ಅಧ್ಯಕ್ಷ ಮಹಮ್ಮದ್ ನಶೀದ್ ನಾವು ಇನ್ನು ಮೂವತ್ತು ವರ್ಷಗ್ಳಲ್ಲಿ ಸಂಪೂರ್ಣ ಮುಳುಗಿತ್ತೇವೆ, ಒಪ್ಪಿಕೊಳ್ಳಿ ಭಾರತ, ಚೀನಾವನ್ನು ಎಷ್ಟು ಅಂಗಲಾಚಿದರೂ ಒಪ್ಪಲಿಲ್ಲ.
ಇಂದಿನ ಮಾತಲ್ಲಿ ಮಾಂಟೆಕ್ ನಾಲ್ಕೈದು ಬಾರಿ ಜಾಗತಿಕ ತಾಪಮಾನ ಹೆಚ್ಚಳ ಎನ್ನುವುದನ್ನು ಬಳಸಿದರು. ಮುಂದಿನ 25 ವರ್ಷಗಳಲ್ಲಿ ಭಾರತ ಫಾಸಿಲ್ ಫ್ಯೂಯೆಲ್ಸ್ ಬಳಕೆಯನ್ನು ಸಂಪೂರ್ಣ ಕೈಬಿಟ್ಟು, ಸೌರ ಮತ್ತು ಗಾಳಿ ವಿದ್ಯುತ್ತನ್ನು ಬಳಸುವಂತಾಗಬೇಕು ಎಂದರು. ತಾಪಮಾನ ಹೆಚ್ಚಳದ ಸನ್ನಿವೇಶದಲ್ಲೇ ಆರ್ಥಿಕತೆಯನ್ನು ಬೆಳವಣಿಗೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಪರ್ಯಾಯ ಶಕ್ತಿಗಳ ಬಳಕೆ ಆಗಬೇಕು ಎಂದರೇ ಹೊರತು ಅಲ್ಲಿ ಪರಿಸರ, ಜೀವಜಗತ್ತಿನ ಕಾಳಜಿ ಬರಿಯ ಲಿಪ್ ಸರ್ವಿಸ್ ಆಯಿತೇ ಎಂದು ನನಗೆ ಪ್ರಾಮಾಣಿಕವಾಗಿ ಅನಿಸಿತು. ಹಾಗೆಯೇ, ಒಬ್ಬ ಆರ್ಥಿಕ ತಜ್ಞನಾಗಿ ತಾನು ಹೇಳಬೇಕಾದ್ದನ್ನೇ ಹೇಳಿದ್ದಾರೆ ಎಂದೂ ಅನಿಸಿತು.

ನಾನು ಇಷ್ಟೆಲ್ಲ ಬರೆದರೂ ಮಾಂಟೆಕ್ ಅವರ ವಿದ್ವತ್ತು, ಜಾಣ್ಮೆ, ಕೌಶಲಗಳ ಕುರಿತಂತೆ ನನಗೆ ಅಪಾರ ಗೌರವವಿದೆ. ಆತ ದೇಶದ ದೊಡ್ಡ ಮತ್ತು ಹೆಮ್ಮೆಯ ಆಸ್ತಿ. ತನ್ನ ದೇಶಕ್ಕಾಗಿ ತಾನು ಪರಿಣಿತಿ ಹೊಂದಿದ ಕ್ಷೇತ್ರದ ಪ್ರಕಾರ ಅತ್ಯಂತ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಅದರ ನಡುವೆಯೇ ಅಂತಹ ಪ್ರತಿಬಾನ್ವಿತರು ಬಂಡವಾಳಶಾಹಿ ಮಾಡೆಲ್ಲಿಗೆ ಸಮರ್ಥ ಪರ್ಯಾಯವಿದೆಯೇ ಎನ್ನುವುದನ್ನೂ ಯೋಚಿಸಿದ್ದರೆ ಒಳ್ಳೆಯದಿತ್ತು, ದೇಶದ ಆರ್ಥಿಕತೆ, ಸಾಮಾಜಿಕತೆ ಮತ್ತು ಭೂಮಿ ಹೊಸ ದಿಕ್ಕಿಗೆ ಹೆಜ್ಜೆ ಹಾಕಲು ಆರಂಭಿಸಬಹುದಿತ್ತು ಅನಿಸುತ್ತದೆ. ನಾನು M Document2 ಬರಯಬೇಕೇ ಅನಿಸುತ್ತಿದೆ ಎಂದು ಒಮ್ಮೆ ಪ್ರಸ್ತಾಪಿಸಿದರು. ಅವರು ಬರೆದರೆ ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆಯಲಿ ಎಂದು ಆಶಿಸುತ್ತೇನೆ.

Advertisement
Advertisement
Recent Posts
Advertisement