Advertisement

Fact check: ನೀಟ್ ಟಾಪರ್‌ಗೆ ವೈದ್ಯಕೀಯ ಸೀಟು ಸಿಗಲಿಲ್ಲವೆಂದು ಸುಳ್ಳು ಸುದ್ದಿ ಹರಡಿದ ‘ವಿಶ್ವವಾಣಿ’ ಪತ್ರಿಕೆ!

Advertisement

Fact check: ನೀಟ್ ಟಾಪರ್‌ಗೆ ವೈದ್ಯಕೀಯ ಸೀಟು ಸಿಗಲಿಲ್ಲವೆಂದು ಸುಳ್ಳು ಸುದ್ದಿ ಹರಡಿದ ‘ವಿಶ್ವವಾಣಿ’ ಪತ್ರಿಕೆ! ಫ್ಯಾಕ್ಟ್‌ಚೆಕ್‌: ನೀಟ್ ಟಾಪರ್‌ಗೆ ಸೀಟ್ ಸಿಗಲಿಲ್ಲವೆಂದು ಸುಳ್ಳು ಸುದ್ದಿ ಹರಡಿದ ‘ವಿಶ್ವವಾಣಿ’! ಆ ಕುರಿತು ಈ ಮೇಲಿನ ವಿಚಾರವನ್ನು ಕನ್ನಡ ಖ್ಯಾತ ಆನ್‌ಲೈನ್ ನ್ಯೂಸ್ ಪೋರ್ಟಲ್ 'ನಾನು ಗೌರಿ ಡಾಟ್ ಕಾಂ' ಫ್ಯಾಕ್ಟ್‌ಚೆಕ್ ಗೊಳಪಡಿಸಿದ್ದು ನಿಜಾಂಶವನ್ನು ಬಯಲುಗೊಳಿಸಿ ವರದಿ ಮಾಡಿದೆ. ಆ ವರದಿಯನ್ನು ಇಲ್ಲಿ ಯಥಾವತ್ ಪ್ರಕಟಿಸಲಾಗಿದೆ. ಮೀಸಲಾತಿಯಿಂದಾಗಿ ಬ್ರಾಹ್ಮಣರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಪಾದಿಸಿರುವ ಪತ್ರಿಕೆಯು ಓದುಗರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದೆ ‘‘ನೀಟ್‌‌ ಪಿಜಿ ಪರೀಕ್ಷೆಯಲ್ಲಿ ಭಾರತಕ್ಕೆ ಮೊದಲ ರ್‍ಯಾಂಕ್ ಪಡೆದ ಬ್ರಾಹ್ಮಣ ವಿದ್ಯಾರ್ಥಿಗೆ ಮೀಸಲಾತಿಯ ಕಾರಣಕ್ಕೆ ಗದಗ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ” ಎಂದು ಪ್ರತಿಪಾದಿಸಿ ಕನ್ನಡ ದಿನಪತ್ರಿಕೆ ‘ವಿಶ್ವವಾಣಿ’ ಜನವರಿ 29ರ ಶನಿವಾರದಂದು ಸುದ್ದಿಯೊಂದು ಪ್ರಸಾರ ಮಾಡಿದೆ. ಪತ್ರಿಕೆಯು ತನ್ನ ಹೆಡ್‌ಲೈನ್‌ನಲ್ಲಿ, “ಪಡೆದದ್ದು ಮೊದಲ ರ‌್ಯಾಂಕ್; ಆದರೂ ಸೀಟು ಸಿಗಲಿಲ್ಲ” ಎಂದು ಬರೆದಿದೆ. ಉಪಶೀರ್ಷಿಕೆಯಲ್ಲಿ, “ಗದಗಿನ ವೈದ್ಯಕೀಯ ಕಾಲೇಜಿನಲ್ಲಿ ಮೂರು ಸೀಟಿಗೂ ಮೀಸಲಾತಿ; ಬ್ರಾಹ್ಮಣರಾದವರಿಗೆ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಗಬಾರದೆ?” ಎಂದು ಪ್ರಶ್ನಿಸಿದೆ. ಸುದ್ದಿಯಲ್ಲಿ, “ಗಗನ್‌ ಕುಬೇರ ಎಂಬ ಬ್ರಾಹ್ಮಣ ವಿದ್ಯಾರ್ಥಿಯು 2021 ನೇ ಸಾಲಿನ ಆಲ್‌ ಇಂಡಿಯಾ ನೀಟ್- ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದರು. ಆದರೆ ಮೀಸಲಾತಿ ಕಾರಣಕ್ಕೆ ಗದಗಿನ ವೈದ್ಯಕೀಯ ಕಾಲೇಜಿನಲ್ಲಿ ಅವರಿಗೆ ಸೀಟು ಸಿಕ್ಕಿಲ್ಲ. ಮೀಸಲಾತಿ ಕಾರಣಕ್ಕೆ ಸೀಟು ಸಿಗುತ್ತಿಲ್ಲ” ಎಂದು ಮೀಸಲಾತಿ ಬಗ್ಗೆ ಓದುಗರಲ್ಲಿ ತಪ್ಪು ಅಭಿಪ್ರಾಯ ಬರುವ ರೀತಿಯಲ್ಲಿ ವರದಿ ಪ್ರಕಟಿಸಿದೆ. ಮೀಸಲಾತಿ ಬಗ್ಗೆ ಓದುಗರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವಂತೆ ಮಾಡಿರುವ ವಿಶ್ವವಾಣಿ ಪತ್ರಿಕೆಯ ವರದಿಯ ಸ್ಕ್ರೀನ್‌ಶಾರ್ಟ್‌ (ಆರ್ಕೈವ್‌ ಲಿಂಕ್ ಇಲ್ಲಿ ಕ್ಲಿಕ್‌ ಮಾಡಿ) ಈ ಸುದ್ದಿಯ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ವಿಶ್ವವಾಣಿ ಪತ್ರಕರ್ತ ವಿಶ್ವೇಶ್ವರ ಭಟ್‌‌ ಅವರು, “ಇದು ಕರ್ನಾಟಕದ ಅರ್ಹತೆಯ ಅಣಕ. ಮೊದಲ ರ್‍ಯಾಂಕ್‌ ಪಡೆದರೂ ಮೀಸಲಾತಿ ಕಾರಣಕ್ಕೆ ಎಂಡಿ ಸೀಟು ನಿರಾಕರಿಸಲಾಗಿದೆ” ಎಂದು ಬರೆದು, ತಮ್ಮ ಪತ್ರಿಕೆಯ ವರದಿಯ ಚಿತ್ರವನ್ನು ಉಲ್ಲೇಖಿಸಿ ಮತ್ತೇ ಓದುಗರ ದಾರಿ ತಪ್ಪಿಸಿದ್ದಾರೆ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ವಿಶ್ವೇಶ್ವರ ಭಟ್‌ ಟ್ವೀಟ್ (ಆರ್ಕೈವ್ ಲಿಂಕ್‌ ಇಲ್ಲಿ ಕ್ಲಿಕ್ ಮಾಡಿ) ವಾಸ್ತವವೇನು? ಗಗನ್‌ ಕುಬೇರ ಎಂಬವರು NEET PG-2021 ಮೊದಲ ರ್‍ಯಾಂಕ್‌ ಪಡೆದಿದ್ದು ನಿಜವೇ? ಸಂವಿಧಾನವು ಸಾಮಾಜಿಕ ಕಾರಣಕ್ಕೆ ನೀಡಿರುವ ಮೀಸಲಾತಿಯ ಬಗ್ಗೆ ಜನರಿಗೆ ತಪ್ಪು ಅಭಿಪ್ರಾಯ ಮೂಡಲು ಅಥವಾ ಮೂಡಿಸಲು ಈ ವರದಿಯನ್ನು ಬರೆಯಲಾಗಿದೆ ಎಂಬುವುದು ವಿಶ್ವವಾಣಿಯ ಇಡೀ ವರದಿಯಲ್ಲಿ ಎದ್ದು ಕಾಣುತ್ತದೆ. ಅಲ್ಲದೆ, ವಿಶ್ವವಾಣಿಯು ಸುದ್ದಿಯ ಶೀರ್ಷಿಕೆಯಲ್ಲೇ ಸುಳ್ಳನ್ನು ಬರೆದಿದೆ. ವಾಸ್ತವದಲ್ಲಿ ಗಗನ್‌ ಕುಬೇರ್‌ ಅವರು, ‘2021 ರ ನೀಟ್‌ ಪಿಜಿ ಪರೀಕ್ಷೆ’ಯಲ್ಲಿ ಮೊದಲ ರ್‍ಯಾಂಕ್‌ ಪಡೆದಿಲ್ಲ!. 2021 ರ ನೀಟ್‌ ಪಿಜಿ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್‌ ಪಡೆದವರು ಹೆಸರು ಅಮಥ್ಯ ಸೇನ್‌ಗುಪ್ತಾ ಎಂದಾಗಿದ್ದು, ಅವರು ಪಶ್ಚಿಮ ಬಂಗಾಳದವರಾಗಿದ್ದಾರೆ. 2021 ರ ನೀಟ್ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಇವರ ಹೆಸರೇ ಇಲ್ಲ. ಇದನ್ನು ನೀವು ಇಲ್ಲಿ ನೋಡಬಹುದಾಗಿದೆ. 2021 ರ ನೀಟ್ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿ ನಾನುಗೌರಿ.ಕಾಂ ಈ ಸುದ್ದಿಯ ಸತ್ಯಾಸತ್ಯತೆಯನ್ನು ತಪಾಸಣೆಗೆ ಒಳಪಡಿಸಿದಾಗ, ನಮಗೆ ಗಗನ್‌ ಕುಬೇರ್‌ ಅವರ ಟ್ವಿಟರ್‌, ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ ಚಾನೆಲ್‌ ಸಿಕ್ಕಿದೆ. ಅವರು ನಿಜವಾಗಿಯು ಡಾಕ್ಟರ್‌ ಹೌದೇ ಎಂಬ ಬಗ್ಗೆ ನಾನುಗೌರಿ.ಕಾಂ ತಪಾಸಣೆ ಮಾಡುತ್ತಿದ್ದು, ಅದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ(ಮಾಹಿತಿ ಸಿಕ್ಕಕೂಡಲೇ ಇಲ್ಲಿ ಅಪ್‌ಡೇಟ್‌ ಮಾಡುತ್ತೇವೆ) ಅವರ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಮೀಸಲಾತಿ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದು ಕಾಣುತ್ತದೆ. ಗಗನ್ ಕುಬೇರ್‌ ವಿಡಿಯೊ ವಿಶ್ವವಾಣಿ ಪತ್ರಿಕೆಯು ತನ್ನ ವರದಿಯಲ್ಲಿ ಉಲ್ಲೇಖಿಸಿರುವ ಅವರ ವಿಡಿಯೊ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ಇದು 5:28 ಸೆಕೆಂಡುಗಳಷ್ಟು ಇದೆ. ಈ ವಿಡಿಯೊದಲ್ಲಿ ತಿಳಿದು ಬರುವುದೇನೆಂದರೆ, ಅವರಿಗೆ ನೀಟ್‌ ಪರೀಕ್ಷೆಯಲ್ಲಿ ಸರ್ಕಾರಿ ಸೀಟುಗಳ ಹಂಚಿಕೆಯ ಬಗ್ಗೆ ಮತ್ತು ಅದರಲ್ಲಿನ ಮೀಸಲಾತಿ ಹಂಚಿಕೆಯ ಬಗ್ಗೆ ತುಂಬಾ ತಪ್ಪು ಅಭಿಪ್ರಾಯವಿದೆ. ವಿಡಿಯೊದಲ್ಲಿ, ವ್ಯಕ್ತಿಯು ತನ್ನನ್ನು ತಾನು ಗಗನ್ ಕುಬೇರ್‌ ಎಂದು ಪರಿಚಯಿಸಿದ್ದಾರೆ. “ತಾನು ನೀಟ್‌ ಯುಜಿ 2021 ಪರೀಕ್ಷೆ ಬರೆದಿದ್ದು, ಗದಗಿನ ವೈದ್ಯಕೀಯ ಕಾಲೇಜಿನಲ್ಲಿ ಅನಸ್ತೇಶಿಯ ಅಧ್ಯಯನ ಮಾಡಬೇಕು ಎಂದು ಬಯಸಿದ್ದೆ. ಆದರೆ, ನಾನು ಭಾರತ ಮಟ್ಟದಲ್ಲಿ ಒಂದನೇ ರ್‍ಯಾಂಕ್ ಪಡೆದರೂ, ನನಗೆ ಸೀಟು ಸಿಗುವುದಿಲ್ಲ. ಯಾಕೆಂದರೆ ಅಲ್ಲಿನ ಒಟ್ಟು ಮೂರು ಸರ್ಕಾರಿ ಸೀಟಿನಲ್ಲಿ ಎಲ್ಲವೂ ಮೀಸಲಾತಿಗೆ ಹೋಗಿದೆ” ಎಂದು ಹೇಳಿದ್ದಾರೆ. ಉಳಿದಂತೆ ವಿಡಿಯೊದಲ್ಲಿ ಅವರು ಸಾಮಾನ್ಯವಾಗಿ ಮೀಸಲಾತಿ ವಿರೋಧಿಗಳು ಹೇಳುವ ಮಾತನ್ನೇ ಹೇಳಿದ್ದಾರೆ. ಆದರೆ ವಿಶ್ವವಾಣಿ ಪತ್ರಿಕೆಯು, ಈ ವಿಡಿಯೊದ ಎರಡು ನಿಮಿಷದ ತುಣುಕೊಂದರ ಆಧಾರದಲ್ಲಿ ಇಡೀ ವರದಿಯನ್ನು ಪ್ರಕಟಿಸಿದೆ. ಈ ವಿಡಿಯೊದ ಸತ್ಯಾಸತ್ಯತೆಯನ್ನು ತಪಾಸಣೆ ಮಾಡುವ ಗೋಜಿಗೆ ಕೂಡಾ ಹೋಗಿಲ್ಲ. ಅಲ್ಲದೆ, ವಿಡಿಯೊದಲ್ಲಿ ಇರುವ ವ್ಯಕ್ತಿ ಹೇಳುತ್ತಿರುವ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದೆ. ಗಗನ್‌ ಅವರು ಕೇವಲ ಉದಾಹರಣೆಗೆ ಹೇಳಿದ್ದ, “ನಾನು ಭಾರತ ಮಟ್ಟದಲ್ಲಿ ಒಂದನೇ ರ್‍ಯಾಂಕ್ ಪಡೆದರೂ, ನನಗೆ ಸೀಟು ಸಿಗುವುದಿಲ್ಲ” ಎಂಬುವುದನ್ನು, ವಿಶ್ವವಾಣಿ ಪತ್ರಿಕೆಯು ಅವರು, “ದೇಶಕ್ಕೆ ಮೊದಲ ರ್‍ಯಾಂಕ್” ಎಂದು ಪ್ರತಿಪಾದಿಸಿ ವರದಿ ಪ್ರಕಟಿಸಿದೆ. ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ಗಗನ್‌ ಅವರ ವಿಡಿಯೊ ವ್ಯಾಪಕವಾಗಿ ಹರಿದಾಡಿದಾಗ ಅವರು ತನ್ನ ಯೂಟ್ಯೂಬ್‌‌ನ ವಿಡಿಯೊ ಡಿಸ್‌ಕ್ರಿಪ್ಷನ್‌ ಅಲ್ಲಿ ರ್‍ಯಾಂಕ್‌ ಬಗ್ಗೆ ಸ್ಪಷ್ಟೀಕರಣ ಕೂಡಾ ನೀಡಿದ್ದಾರೆ. ಅದರಲ್ಲಿ ಅವರು, “ನಾನು 1 ನೇ ರ್‍ಯಾಂಕ್ ಅಲ್ಲ. ಬದಲಾಗಿ ಅಖಿಲ ಭಾರತ ಮಟ್ಟದಲ್ಲಿ 12,406 ಪಡೆದಿದ್ದೇನೆ. ಅದು ಹಿಂದಿನ ಕಟ್-ಆಫ್ ಅಥವಾ ಮೀಸಲಾತಿ ಪ್ರಕಾರ ಕರ್ನಾಟಕದ ಸರ್ಕಾರಿ ಕಾಲೇಜಿನಲ್ಲಿ ಕ್ಲಿನಿಕಲ್ ಸೀಟ್ ಪಡೆಯಲು ಯೋಗ್ಯವಾಗಿದೆ” ಎಂದು ಬರೆದಿದ್ದಾರೆ. ಗಗನ್ ಸ್ಪಷ್ಟೀಕರಣ; ಈ ಮೂಲಕ ತಿಳಿಯುವುದೇನೆಂದರೆ, ವಿಶ್ವವಾಣಿ ಪತ್ರಿಕೆಯ ವರದಿಯು ಸಂಪೂರ್ಣ ಸುಳ್ಳಾಗಿದ್ದು, ಅದರ ಪತ್ರಕರ್ತರಾಗಿರುವ ವಿಶ್ವೇಶ್ವರ ಭಟ್‌ ಅವರ ಪ್ರತಿಪಾದನೆಯೂ ತಪ್ಪಾಗಿದೆ. ಇಡೀ ವರದಿ ಮೀಸಲಾತಿಯನ್ನು ವಿರೋಧಿಸಲೇ ಬೇಕು ಎಂಬ ಸಿದ್ದ ಮಾದರಿಯೊಂದಿಗೆ ಬರೆಯಲಾಗಿದೆ. ಹಾಗಾದರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟು ಸಿಗುವುದಿಲ್ಲ ಎಂಬುವುದು ನಿಜವೇ? ಗಗನ್‌ ಅವರು ತನ್ನ ವಿಡಿಯೊದಲ್ಲಿ, “ತಾನು ಗದಗಿನ ಕಾಲೇಜಿನಲ್ಲಿ ಅಸನಸ್ತೇಶಿಯ ಓದಬೇಕು ಎಂದು ಭಾವಿಸಿದ್ದೆ. ಒಂದು ವೇಳೆ ತಾನು ಫಸ್ಟ್‌ ರ್‍ಯಾಂಕ್ ಬಂದರೂ ಅಲ್ಲಿ ನನಗೆ ಸೀಟು ಸಿಗುತ್ತಿರಲಿಲ್ಲ. ಅಲ್ಲಿ ಎಲ್ಲವೂ ಮೀಸಲಾತಿಗೆ ಹೋಗಿದೆ. ಬ್ರಾಹ್ಮಣರಿಗೆ ಅನ್ಯಾಯವಾಗಿದೆ. ಪರೀಕ್ಷಾ ಮಂಡಳಿ ಈ ರೀತಿ ಮಾಡುವುದಕ್ಕಿಂತ ಸಾಮಾನ್ಯ ವರ್ಗದ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಬರೆಸುವುದನ್ನೇ ನಿಲ್ಲಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಅವರಿಗೆ ನೀಟ್‌ ಪರೀಕ್ಷೆಯಲ್ಲಿ ಸರ್ಕಾರಿ ಸೀಟುಗಳ ಹಂಚಿಕೆಯ ಬಗ್ಗೆ ಮತ್ತು ಅದರಲ್ಲಿನ ಮೀಸಲಾತಿ ಹಂಚಿಕೆಯ ಬಗ್ಗೆ ತುಂಬಾ ತಪ್ಪು ಅಭಿಪ್ರಾಯವಿದೆ. ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಕ್ಯಾರಿಯರ್‌ ಗೈಡನ್ಸ್‌ ಎಕ್ಸ್‌ಪರ್ಟ್ ಉಮ್ಮರ್‌ ಯುಎಚ್‌, “ಅವರು ಹೇಳಿದಂತೆ ಗದಗ ವೈದ್ಯಕೀಯ ಕಾಲೇಜಿನಲ್ಲಿ ಅನಸ್ತೇಶಿಯಾ ಅಧ್ಯಯನಕ್ಕೆ ಮೂರು ಸರ್ಕಾರಿ ಸೀಟುಗಳು ಇರುವುದು ನಿಜವೇ ಆಗಿದೆ. ಈ ಮೂರು ಸೀಟುಗಳಲ್ಲಿ ಒಂದು ಸೀಟು ಹಿಂದುಳಿದ ವರ್ಗದ ವಿದ್ಯಾರ್ಥಿಗೆ, ಇನ್ನೊಂದು ಸೀಟು ಎಸ್‌ಟಿ ಸಮುದಾಯದ ವಿದ್ಯಾರ್ಥಿಗೆ, ಮತ್ತೊಂದು ಸೀಟು ಸರ್ಕಾರಿ ಕಾಲೇಜಿನಲ್ಲಿ ಸೇವೆ ಮಾಡುತ್ತಿರುವ ಸಾಮಾನ್ಯ ವರ್ಗದ ಅಭ್ಯರ್ಥಿಗೆ ಮೀಸಲಿಡಲಾಗಿದೆ (ಈ ಸೀಟಿಗೆ ಕಾಲೇಜಿನ ಯಾವುದೆ ವರ್ಗದ ವಿದ್ಯಾರ್ಥಿಯು ಸ್ಪರ್ಧಿಸಬಹುದಾಗಿದೆ). ಆದರೆ ವಿಡಿಯೊದಲ್ಲಿ ಇರುವ ವ್ಯಕ್ತಿಯು ಸರ್ಕಾರಿ ಸೇವೆಯಲ್ಲಿ ಇಲ್ಲವಾಗಿರಬಹುದು. ಆದ್ದರಿಂದ ಅವರಿಗೆ ಅಲ್ಲಿ ಸೀಟು ಸಿಕ್ಕಿಲ್ಲ. ಈ ಒಂದು ಸೀಟು ವಿಡಿಯೊದಲ್ಲಿ ಇರುವ ವ್ಯಕ್ತಿ ಮೊದಲ ರ್‍ಯಾಂಕ್‌ ಇದ್ದರೂ ಸಿಗುವುದಿಲ್ಲ” ಎಂದು ಹೇಳಿದ್ದಾರೆ. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? “ಈ ರೀತಿಯ ಮೀಸಲು ಕ್ಯಾಟೆಗೆರಿಗಳು ಯಾವಾಗಲೂ ಅದೇ ರೀತಿ ಇರುವುದಿಲ್ಲ. ವರ್ಷ ವರ್ಷವೂ ಬೇರೆ ಬೇರೆ ಕಾಲೇಜಿಗೆ ಬದಲಾಗುತ್ತಲೇ ಇರುತ್ತದೆ. ಈ ವರ್ಷ ಗದಗ ಕಾಲೇಜಿಗೆ ಒಬಿಸಿ, ಎಸ್‌ಟಿ ಮತ್ತು ಸರ್ಕಾರಿ ಸೇವೆಯ ಸಾಮಾನ್ಯ ವರ್ಗಕ್ಕೆ ಇದ್ದರೆ, ಮುಂದಿನ ವರ್ಷ ಈ ಕಾಂಬಿನೇಷನ್‌ ಬದಲಾಗಿರುತ್ತದೆ. ಒಂದು ವೇಳೆ ಹಾಗೆ ಇದ್ದರೆ, ಒಂದು ಕಾಲೇಜಿಗೆ ಒಂದು ವರ್ಗದ ವಿದ್ಯಾರ್ಥಿಗಳ ಪ್ರವೇಶ ನಿರಾಕರಿಸದಂತಾಗುತ್ತದೆ. ಹಾಗಾಗಿ ಇದು ಬದಲಾಗುತ್ತಲೇ ಇರುತ್ತದೆ” ಎಂದು ಅವರು ತಿಳಿಸಿದ್ದಾರೆ. “ಅನಸ್ತೇಶಿಯಾಗೆ ಸರ್ಕಾರಿ ಕೋಟಾದ ಅಡಿಯಲ್ಲಿ ಒಟ್ಟು 38 ಸೀಟುಗಳಿವೆ. ಅದರಲ್ಲಿ ಸಾಮಾನ್ಯ ವರ್ಗಕ್ಕೆ 15 ಸೀಟು ಮೀಸಲಿವೆ, ಉಳಿದ ಸೀಟುಗಳು ಉಳಿದ ವರ್ಗಗಳಿಗೆ ಮೀಸಲಿರಿಸಲಾಗಿದೆ. ಸರ್ಕಾರಿ ಸೀಟುಗಳನ್ನು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನೀಡಲಾಗುತ್ತದೆ. ವಿಡಿಯೋದಲ್ಲಿ ಗಗನ್ ಅವರು ಸಾಮಾನ್ಯ ವರ್ಗದ ವ್ಯಕ್ತಿಯೊಬ್ಬ ಗದಗಿನಲ್ಲಿ ಕಲಿಯಬಾರದೇ, ಅವರು ದೂರದ ಬೆಂಗಳೂರಿನಲ್ಲೇ ಯಾಕೆ ಕಲಿಯಬೇಕು ಎಂದಿದ್ದಾರೆ. ವಾಸ್ತವದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿ ಮಾತ್ರವಲ್ಲದೆ ಬೇರೆ ವರ್ಗದ ವಿದ್ಯಾರ್ಥಿಗಳು ಕೂಡಾ ಅವರಿಗೆ ಬೇಕಾದ ಕಡೆ ಸರ್ಕಾರಿ ಸೀಟು ಸಿಗುವುದಿಲ್ಲ. ಮೀಸಲಾತಿ ಹೇಗೆ ಹಂಚಿಕೆಯಾಗಿ ಇರುತ್ತೆದೆಯೋ, ಈ ಆಧಾರದಲ್ಲಿ ವಿದ್ಯಾರ್ಥಿಗಳು ಅಲ್ಲಿ ಪ್ರವೇಶ ಪಡೆಯುತ್ತಾರೆ. ಹೇಗೆ ಗದಗಿನಲ್ಲಿ ಇರುವ ಎರಡು ಸೀಟುಗಳಲ್ಲಿ ಎಸ್‌ಟಿ ಮತ್ತು ಒಬಿಸಿ ಇರುತ್ತೇರೆಯೋ ಹಾಗೆ ಕೆಲವು ಕಡೆ ಸಾಮಾನ್ಯ ವರ್ಗಗಳಿಗೆ ಮಾತ್ರ ಹಂಚಿಕೆಯಾಗಿರುತ್ತದೆ. ಈ ಹಂಚಿಕೆ ಮುಂದಿನ ವರ್ಷ ಮತ್ತೇ ಬದಲಾಗುತ್ತದೆ” ಎಂದು ಉಮ್ಮರ್‌ ಅವರು ಹೇಳಿದ್ದಾರೆ. ಕೃಪೆ: ನಾನು ಗೌರಿ ಡಾಟ್ ಕಾಮ್ ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ:

Advertisement
Advertisement
Recent Posts
Advertisement