Advertisement

ಅಫ಼್ಘನ್ ದುರಂತ; ಅತ್ತ ಅಮೆರಿಕಾ, ಚೀನಾಗಳು- ಇತ್ತ ತಾಲೀಬಾನಿಗಳು!

Advertisement

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಪ್ರಗತಿಪರ ಚಿಂತಕರು ಹಾಗೂ ಜನಪರ ಹೋರಾಟಗಾರರು) ಅಫ಼್ಘಾನಿಸ್ತಾನ- ಭಾರತದಷ್ಟೆ ಸುಂದರವಾದ ದೇಶ. ಸ್ವಾಭಿಮಾನಿಗಳ ದೇಶ. ಭಾರತದಂತೆ ಹಲವಾರು ಧರ್ಮ, ಭಾಷೆ ಹಾಗೂ ಜನಾಂಗಳುಳ್ಳ ದೇಶ. ನಮ್ಮಂತೆಯೇ ಇತಿಹಾಸದಲ್ಲಿ ಹಲವಾರು ಸಾಮ್ರಾಜ್ಯಗಳ ದಾಳಿಗಳೊಗಾದ ಹಾಗೂ ಅದರ ವಿರುದ್ಧ ಹೋರಾಡಿ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದ ದೇಶ. ಅಫ಼್ಘಾನಿಸ್ತಾನದ ಇತಿಹಾಸವನ್ನು ಆ ದೇಶದ ಜನರೇ ಬರೆಯಲು ಬಿಟ್ಟಿದ್ದರೆ ಅಫ಼್ಗಾನಿಸ್ತಾನ ಒಂದು ಏಶಿಯಾದ ಸುಂದರ ಗುಲಿಸ್ತಾನವಾಗಿ ಅರಳುತಿತ್ತು. ಅತ್ತ ದರಿ-ಇತ್ತ ಪುಲಿ ಆದರೆ 20 ನೇ ಶತಮಾನದ ಪ್ರಾರಂಭದಿಂದಲೂ ಆ ದೇಶದಲ್ಲಿ ಮೊದಲು ಬ್ರಿಟಿಷ್ ವಸಾಹತುಶಾಹಿಗಳು, ಆ ನಂತರ ರಷ್ಯಾ ವಿಸ್ತರಣವಾದ, ಅ ನಂತರದಲ್ಲಿ ಅಮೆರಿಕ ಸಾಮ್ರಾಜ್ಯವಾದ ಹಾಗು ಈಗ ಚೀನಾಗಳು ಅಫ಼್ಘಾನಿಸ್ತಾನದ ಅಸಹಾಯಕತೆಯನ್ನು ತಮ್ಮ ಸ್ವಾರ್ಥಕ್ಕೆ ಹಾಗೂ ಸಾಮ್ರಾಜ್ಯ ವಿಸ್ತರಣೆಗೆ ಬಳಸಿಕೊಳ್ಳುತ್ತಾ ಸುಂದರ ಅಫ಼್ಘಾನಿಸ್ತಾನವನ್ನು ಜಗತ್ತಿನ ಅತ್ಯಂತ ಬಡ, ಹಿಂದುಳಿದ ಹಾಗೂ ಮುಗಿಯದ ಹಿಂಸಾಚಾರಗಳಿಗೆ ಬಲಿಯಾಗಿರುವ ಬರ್ಬರತೆಗೆ ದೂಡಿಬಿಟ್ಟವು. ಹೀಗಾಗಿ ಇಂದು ಅಫ಼್ಘನ್ ಜನತೆ ಎದುರಿಸುತ್ತಿರುವಷ್ಟು ದಮನ, ಯಾತನೆ, ದ್ರೋಹ ಹಾಗೂ ಹಿಂಸಾಚಾರಗಳನ್ನು ಬೇರೆ ಯಾವುದೇ ದೇಶವೂ ಅನುಭವಿಸಿರಲಾರದು. ಬ್ರಿಟನ್ ಮತ್ತು ಅಮೆರಿಕಾ ಮಾಡಿದ ದ್ರೋಹ-ದಮನಗಳಿಗೆ ಉಗ್ರವಾದದ ದಮನ ಅಥವಾ ಪ್ರಜಾತಂತ್ರದ ಸ್ಥಾಪನೆಯ ನೆಪವಿದ್ದರೆ, ತಾಲಿಬಾನಿಗಳು ಮಾಡುತ್ತಿರುವ ಬರ್ಬರ ಕ್ರೌರ್ಯಗಳಿಗೆ ಧರ್ಮದ ಹುಸಿಲೇಪನವಿದೆ ಅಷ್ಟೆ. ಹಾಗೆ ನೋಡಿದರೆ ಈ ತಾಲಿಬಾನಿಗಳೂ ಮತ್ತು ಅವರ ಹಿಂದಿನ ಮುಜಾಹಿದ್ದೀನ್‌ಗಳೂ ಅಫ಼್ಘಾನಿಸ್ತಾನದ ಸಮಾಜದೊಳಗಿನ ಪ್ರತಿಗಾಮಿ ಶಕ್ತಿಗಳೇ ಆಗಿದ್ದರೂ ಅವರಿಗೆ ಸೈನಿಕ ಬೆಂಬಲ, ತರಬೇತಿ ಕೊಟ್ಟು ಅಫ಼್ಘಾನ ರಾಜಕಾರಣದ ವಿಧಿಬರಹ ಬರೆಯುವಂತೆ ಮಡಿದವರು ಅಮೆರಿಕ ನೇತೃತ್ವದ ತಥಾಕಥಿತ ಪಾಶ್ಚಿಮಾತ್ಯ ಪ್ರಜಾತಂತ್ರಿಕ ಶಕ್ತಿಗಳೆ..! ಹೀಗಾಗಿ ಅಫ಼್ಘಾನಿಸ್ತಾನದ ಇಂದಿನ ವಿದ್ಯಮಾನವನ್ನು ಈ ಇತಿಹಾಸಿಕ ಭಿತ್ತಿಯಲ್ಲಿಟ್ಟು ಗ್ರಹಿಸದಿದ್ದರೆ ತಾಲಿಬಾನಿಗಳು ಮತ್ತು ಅಮೆರಿಕಗಳು ಪರಸ್ಪರ ಶತ್ರುಗಳೆಂಬ ಚಾರಿತ್ರಿಕ ಅಪಕಲ್ಪನೆ ಹುಟ್ಟಿಕೊಳ್ಳುತ್ತದೆ. ಅಂಥಾ ಅಪಕಲ್ಪನೆಗಳಿಂದಾಗಿಯೇ ತಾಲಿಬಾನಿಗಳು ಅಮೆರಿಕವನ್ನು ಹಿಮ್ಮೆಟ್ಟಿಸಿದ ರಾಷ್ಟ್ರೀಯವಾದಿ ಸಮರಯೋಧರಂತೆ ಕಂಡುಬಿಡುತ್ತಾರೆ. ಅಥವಾ ಅಮೆರಿಕದ ಟ್ಯಾಂಕರುಗಳು ಮತ್ತು ಅವರ ಯುದ್ಧ ವಿಮಾನಗಳು ತಾಲಿಬಾನಿಗಳೆಂಬ ಮೂಲಭೂತವಾದಿಗಳನ್ನು ದಮನ ಮಾಡಿ ಅಫ಼್ಘಾನಿಸ್ತಾನದಲ್ಲಿ ಪ್ರಜಾಸತ್ತೆಯನ್ನು ಸ್ಥಾಪಿಸಲು ಬಂದಿದ್ದ ಪ್ರಜಾತಾಂತ್ರಿಕ ಸಾಧನಗಳೆಂಬಂತೆ ಕಾಣತೊಡಗುತ್ತದೆ. ಆಗ ತಾಲಿಬಾನಿಗಳ ವಿಜಯವನ್ನು ಸಂಭ್ರಮಿಸುವ ಅಥವಾ ಅಮೆರಿಕದವರು ಅಫ಼್ಗಾನಿಸ್ತಾನದಿಂದ ಹಿಂತೆಗೆಯದೆ ಅಲ್ಲಿಯೇ ಬಲವಾಗಿ ನೆಲೆಯೂರಬೇಕಿತ್ತೆಂಬ ತಪ್ಪು ನಿಲುವುಗಳನ್ನು ತೆಗೆದುಕೊಳ್ಳುವಂತಾಗುತ್ತದೆ. ವಾಸ್ತವದಲ್ಲಿ ತಾಲಿಬಾನಿಗಳ ಗೆಲುವು ಕೂಡಾ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಮ್ರಾಜ್ಯವಾದಿಗಳ ಗೆಲುವೇ ಆಗಿದೆ. ಅಮೆರಿಕ ಅಥವಾ ಮುಂದೆ ಸಂಭಾವ್ಯ ಚೀನಾ ನಿಯಂತ್ರಣಗಳು ತಾಲಿಬಾನಿಗಳಿಗೆ ಮತ್ತವರ ಬರ್ಬರ ಮೂಲಭೂತವಾದಕ್ಕೆ ದೊರಕುವ ಆಶ್ರಯತಾಣಗಳೇ ಅಗಿವೆ. ಒಬ್ಬರು ಹಿಂದೆ ಸರಿದು ಮತ್ತೊಬ್ಬರು ಮುಂದೆ ಕಾಣಿಸಿಕೊಳ್ಳುವ ಈ ಪಾತ್ರ ಬದಲಾವಣೆಯಲ್ಲಿ ಸೋಲುತ್ತಿರುವವರು ಅಫ಼್ಘನ್ ಪ್ರಜೆಗಳೇ ಅಗಿದ್ದಾರೆ. ಆದರೆ ಗೆದ್ದವರೇ ಇತಿಹಾಸ ಬರೆಯುವುದರಿಂದ ಅಫ಼್ಘನ್ ಜನರೆಂದರೆ ಇತಿಹಾಸವೇ ಇಲ್ಲದ ಅತ್ಯಂತ ಬರ್ಬರ ಜನರೆಂಬ ಅಭಿಪ್ರಾಯವನ್ನು ಬಿಳಿ ಹಿರಿಮೆಯ ವಸಹತುಶಾಹಿಗಳು ನಮ್ಮ ದೇಶದ ಕಂದು ಕೇಸರಿ ಕೋಮುವಾದಿಗಳು ಪ್ರಚಾರ ಮಾಡುತಾ ಬಂದಿದ್ದಾರೆ. ಅಫ಼್ಘಾನಿಸ್ತಾನ- ಆಧುನಿಕತೆಯ ಗುಲಿಸ್ತಾನ ಹಾಗೆ ನೋಡಿದರೆ, ಇತಿಹಾಸಕಾರರ ಪ್ರಕಾರ ಏಷಿಯಾ ಭೂಖಂಡದಲ್ಲಿ ಬ್ರಾಹ್ಮಣವಾದವು ತನ್ನ ವಿಸ್ತರಣೆಗೆ ಬಲು ದೊಡ್ಡ ಸೈನಿಕ ಸೋಲನ್ನು ಅನುಭವಿಸಿದ್ದು ಅಫ಼್ಘಾನಿಸ್ತಾನದಲ್ಲಿ! ಆ ನಂತರದಲ್ಲಿ ಬೌದ್ಧ ಧರ್ಮಕ್ಕೆ ಬಹುದೊಡ್ಡ ಆಸರೆಯಾಗಿದ್ದ ಅಫ಼್ಘಾನಿಸ್ತಾನ ನಿಧಾನಕ್ಕೆ ಪ್ರೀತಿಯಾಧಾರಿತ ಸೂಫಿ ಇಸ್ಲಾಮಿನ ಬಹುದೊಡ್ಡ ನೆಲೆಯಾಯಿತು. ಅದೇ ಸಮಯದಲ್ಲಿ ಆ ದೇಶವನ್ನು ಹಾದುಹೋದ ಎಲ್ಲಾ ಧರ್ಮಗಳು ಅಲ್ಲಿನ ಜನರ ಮೇಲೆ ಪ್ರಭಾವ ಬೀರಿ ಶಾಂತಿಯುತ ಸಹಜೀವನವನ್ನೇ ನಡೆಸುತ್ತಿದ್ದವು. ಆಧುನಿಕ ಕಾಲದಲ್ಲಿ ಭಾರತದಂತೆ ಅಫ಼್ಘಾನಿಸ್ತಾನದಲ್ಲೂ ಅತಿ ಸಣ್ಣ ಮೇಲ್ ಮಧ್ಯಮ ವರ್ಗ ಹಾಗೂ ರಾಜಕುಟುಂಬದ ಕೆಲವರು ಉದಾರಾವಾದಿ ವೈಚಾರಿಕತೆಗೆ ಒಡ್ಡುಕೊಂಡು ಅಫ಼್ಘಾನಿಸ್ತಾನದ ಸಮಾಜದಲ್ಲಿ ಹಲವು ಸುಧಾರಣೆಗಳನ್ನು ತರಲು ಮೇಲಿನಿಂದ ಪ್ರಯತ್ನಗಳನ್ನು ಪ್ರಾರಂಭಿಸಿದ್ದರು. ಭಾರತೀಯರಂತೆ ಅಫ಼್ಘನ್ನಿನ ಧರ್ಮಿಷ್ಟರು ಮತ್ತು ಒಂದು ವರ್ಗದ ಆಧುನಿಕರಿಬ್ಬರೂ ಬ್ರಿಟಿಷ ವಸಾಹತುಶಾಹಿಯ ವಿರುದ್ಧ ನಿರಂತರ ಹೋರಾಟ ಮಾಡಿದರು. 1911ರಲ್ಲೇ ಅಲ್ಲಿನ ರಾಜ ಅಫ಼್ಘಾನಿಸ್ತಾನದ ಸಮಾಜದಲ್ಲಿ ದೊಡ್ಡ ಮಟ್ಟದ ಸುಧಾರಣೆ ತರಲು ಪ್ರಾರಂಭಿಸಿದ್ದ. ಆ ನಂತರದಲ್ಲಿ ರಾಜ ಅಮಾನುಲ್ಲ ಮತ್ತವನ ಹೆಂಡತಿ ಸುರಯ್ಯಾ ಮಹಿಳಾ ಶಿಕ್ಷಣ, ಅಕ್ಷರತೆ ಇವುಗಳ ಬಗ್ಗೆ ಕ್ರಮಗಳನ್ನು ಕೈಗೊಂಡಿದ್ದರು. ಇವು ಮುಲ್ಲಗಳ ಹಾಗೂ ಪಾಳೆಗಾರರ ಕಣ್ಣುಕೆಂಪಾಗಿಸಿತು. 1925ರಲ್ಲಿ ಈ ರಾಜ-ರಾಣಿಯರು ಯೂರೋಪ್ ಪ್ರವಾಸದಲ್ಲಿದಾಗ ಬುರ್ಖಾ ಹಾಕಿಕೊಳ್ಳದೆ ರಾಣಿ ಸುರಯ್ಯಾ (ಪರ)ಪುರುಷ ರಾಜತಾಂತ್ರಿಕರ ಕೈಕುಲುಕುತ್ತಿರುವ ಫೋಟೋಗಳನ್ನು ಬ್ರಿಟಿಷರೇ ಅಫ಼್ಘಾನಿಸ್ತಾನದ ಮುಲ್ಲಾಗಳಿಗೆ ರವಾನಿಸಿ ಈ ಆಧುನಿಕ ರಾಜರು ಅಧಿಕಾರ ಕಳೆದುಕೊಳ್ಳುವಂತೆ ಮಾಡಿದರು. ಆದರೆ ಇವೆಲ್ಲವೂ ಗ್ರಾಮೀಣ ಮಟ್ಟದಲ್ಲಿ ವಿಸ್ತರಿಸಿದ ಸುಧಾರಣೆಗಳೇನೂ ಆಗಿರಲಿಲ್ಲ. ಹೀಗಾಗಿ ಗ್ರಾಮಿಣ ಅಫ಼್ಘಾನಿಸ್ತಾನ ಅಂದಿನ ಗ್ರಾಮೀಣ ಭಾರತದಂತೆ ಭೂಮಾಲೀಕರ ಹಿಡಿತದಲ್ಲೇ ಉಳಿದುಕೊಂಡಿತ್ತು. ಸಾಂವಿಧಾನಿಕ ರಾಜಸತ್ತೆಯಿಂದ ಅಫ಼್ಘನ್ ಸಮಾಜವಾದದೆಡೆಗೆ 1923ರಲ್ಲಿ ರಾಜ ಅಮಾನುಲ್ಲಾ ಒಂದು ಸುಧಾರಣವಾದಿ ಸಂವಿಧಾನವನ್ನು ಜಾರಿಗೊಳಿಸಿ ಅಫ಼್ಘಾನಿಸ್ತಾನವನ್ನು ಒಂದು ಸಾಂವಿಧಾನಿಕ ರಾಜಸತ್ತೆಯನಾಗಿಸಿದರೆ, 1963ರಲ್ಲಿ ರಾಜ ಜಹೀರ ಖಾನ್ ಚುನಾಯಿತ ಸಂಸತ್ತನ್ನು ಹೊಂದುವ ಹೊಸ ಸಂವಿಧಾನವನ್ನು ಜಾರಿಗೊಳಿಸಿದ. ಅದರ ಭಾಗವಾಗಿ ಅಫ಼್ಘಾನಿಸ್ತಾನದಲ್ಲಿ ಯಾವ ವಿದೇಶೀ ನೆರವಿನ ಅಗತ್ಯವೂ ಇಲ್ಲದೆ ಹೊಸ ಪ್ರಜಾತಂತ್ರದ ಗಾಳಿ ಸ್ವತಂತ್ರವಾಗಿ ಹರಿದಾಡಲು ಪ್ರಾರಂಭಿಸಿತು. ಆದರೆ ಇದೂ ಕೂಡ ದೊಡ್ಡ ಮಟ್ಟದಲ್ಲಿ ಗ್ರಾಮೀಣ ಪ್ರದೇಶವನ್ನು ತಲುಪಲಿಲ್ಲ ಅನ್ನುವುದು ಮತ್ತೊಂದು ವಿಷಯ. 1960ರ ದಶಕದಲ್ಲಿ ಅಫ಼್ಘಾನಿಸ್ತಾನದಲ್ಲಿ ವಿಶ್ವವಿದ್ಯಾಲಯದಲ್ಲಿ ಅಧುನಿಕ ವಿದ್ಯೆ ಪಡೆದ ಸಣ್ಣ ಉನ್ನತ ವಿದ್ಯಾವಂತರ ವರ್ಗವೊಂದು ಹುಟ್ಟಿಕೊಂಡಿತು. ಭಾರತದಲ್ಲಾದಂತೆ ಇದರಲ್ಲಿ ಒಂದು ವರ್ಗ ಸಮಾಜವಾದಿ ಚಿಂತನೆಗೆ ಆಕರ್ಷಿತರಾದರೆ ಒಂದು ವರ್ಗ ಇಸ್ಲಾಮಿನ ಮೂಲಭೂತವಾದಿ ವ್ಯಾಖ್ಯಾನದ ಕಡೆ ಹೊರಳಿಕೊಂಡಿತು. ಸಮಾಜವಾದಿ ಚಿಂತನೆಯುಳ್ಳ ಒಂದು ವರ್ಗ ಅಫ಼್ಘಾನಿಸ್ತಾನದಲ್ಲಿ ಪ್ರಧಾನವಾಗಿ ನಗರಗಳಲ್ಲಿ ನೆಲೆ ಹೊಂದಿದ್ದ ಕಮ್ಯುನಿಸ್ಟ್ ಪಕ್ಷದ ಹುಟ್ಟಿಗೆ ಕಾರಣರಾದರೆ ಕಾಬೂಲಿನ ವಿಶ್ವವಿದ್ಯಾಲಯದ ಅಧ್ಯಾಪಕ ರಬ್ಬಾನಿ ನೇತೃತ್ವದ ಒಂದು ವರ್ಗ ಅದನ್ನು ವಿರೋಧಿಸಿ ತಮ್ಮದೇ ಅದ ಮೂಲಭೂತವಾದಿ ಇಸ್ಲಾಮ್ ವ್ಯಾಖ್ಯಾನದ ಉಗ್ರ ಸಂಘಟನೆಗಳನ್ನು ಕಟ್ಟಿಕೊಂಡರು. ಇವರುಗಳಿಗೆ ಮುಲ್ಲಾಗಳ, ಗ್ರಾಮೀಣ ಭೂಮಲೀಕರ ಬೆಂಬಲವೂ ಇತ್ತು. 1965ರ ವೇಳೆಗೆ ಅನಹಿತ ರತೆಬ್ಜಾದ್ ಎಂಬ ಪ್ರಖ್ಯಾತ ಮಹಿಳಾ ಕಮ್ಯುನಿಸ್ಟ್ ನಾಯಕಿ ಅಫ಼್ಘನ್ ಸಂಸತ್ತಿಗೆ ಆಯ್ಕೆಯಾಗಿ ಮಹಿಳ ಸ್ವಾತಂತ್ರ್ಯ, ಸಮಾನ ಹಕ್ಕುಗಳು, ಸಾರ್ವತ್ರಿಕ ಶಿಕ್ಷಣ ಮತ್ತು ಭೂ ಹಂಚಿಕೆಯ ಬಗ್ಗೆ ಕಾನೂನು ತರಲು ಪ್ರಯತ್ನಿಸುತ್ತಿದ್ದರೆ ರಬ್ಬಾನಿಯ ಶಿಷ್ಯರಾದ ಮಸೂದ್, ಹೆಕ್ಮತಿಯಾರ್ ಇನ್ನಿತರ ಭಾವೀ ಮುಜಾಹಿದ್ದೀನ್-ತಾಲಿಬಾನ್ ನಾಯಕರುಗಳು ಮಹಿಳೆಯರಿಗೆ ಶಿಕ್ಷಣ ಸಲ್ಲದು ಎಂದು ವಿದ್ಯಾರ್ಥಿನಿಯರ ಮೇಲೆ ಆಸಿಡ್ ಎರಚಲು ಪ್ರಾರಂಭಿಸಿದ್ದರು. ಈ ಹೆಕ್ಮತಿಯಾರ್ ಈಗ ಹೊಸದಾಗಿ ರಚಿತವಾಗಲಿರುವ ತಾಲಿಬಾನ್ ಸರ್ಕಾರದಲ್ಲು ಪ್ರಧಾನ ಪಾತ್ರ ವಹಿಸಲಿದ್ದಾನೆ. 1973ರಲ್ಲಿ ದಾವುದ್ ನೇತೃತ್ವದ ಕ್ಷಿಪ್ರ ಕ್ರಾಂತಿಯಲ್ಲಿ ರಾಜಸತ್ತೆ ಕೊನೆಗೊಂಡು ಅಫ಼್ಘಾನಿಸ್ತಾನ ಒಂದು ಪ್ರಜಾತಾಂತ್ರಿಕ ಗಣರಾಜ್ಯವಾಗಿ ಘೋಷಿಸಲ್ಪಟ್ಟಿತು. ಇದು ಹಲವಾರು ಜನಪರ ಸುಧಾರಣೆಗಳನ್ನು ಜಾರಿ ಮಾಡಿತು. ಈ ಸುಧಾರಣೆಗಳು ಎರಡು ಶಕ್ತಿಗಳನ್ನು ಗಟ್ಟಿಗೊಳಿಸಿತು. ಮೊದಲನೆಯದು ಈ ಸುಧಾರಣೆಗಳು ಇಸ್ಲಾಮ್ ಗೆ ವಿರುದ್ಧವೆನ್ನುವ ಇಸ್ಲಾಮ್ ಹೆಸರಿನ ಉಗ್ರ ಮೂಲಭೂತವಾದಿ ಶಕ್ತಿಗಳನ್ನು. ಎರಡನೆಯದು ಸುಧಾರಣೆಗಳನ್ನು ಇನ್ನಷ್ಟು ಆಳ ಮತ್ತು ವಿಸ್ತಾರಗೊಳಿಸುವ ಆಶಯವನ್ನು ಹೊತ್ತಿದ್ದ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಆಫ಼್ಘಾನಿಸ್ತಾನದಡಿ ಸಂಘಟಿತಗೊಂಡ ಕಮ್ಯುನಿಸ್ಟ್ ರಾಜಕಾರಣವನ್ನು. ಭೂಮಾಲಿಕರಿಗೆ, ಅಮೆರಿಕನ್ ಪಿತೂರಿಗೆ ಬಲಿಯಾದ ಅಫ಼್ಘನ್ ಕಮ್ಯುನಿಸ್ಟರು! ಅದೇ ವೇಳೆಯಲ್ಲಿ ಪಕ್ಕದ ಪಾಕಿಸ್ತಾನದಲ್ಲಿ ಪ್ರಜಾತಾಂತ್ರಿಕ ರಾಜಕಾರಣದ ಯುಗವಳಿದು ಅಮೆರಿಕ ಬೆಂಬಲಿತ ಜಿಯಾ ಉಲ್ ಹಕ್ ನೇತೃತ್ವದ ಸರ್ವಾಧಿಕಾರವು ಪ್ರಾರಂಭವಾಗಿತ್ತು. ಜಿಯಾ ಸರ್ಕಾರ ಅಫ಼್ಘಾನಿಸ್ತಾನದ ಇಸ್ಲಾಮಿಕ ಮೂಭೂತವಾದಿಗಳಿಗೆ ನೇರ ಬೆಂಬಲ ಮತು ಆಶ್ರಯ ಕೊಡಲು ಪ್ರಾರಂಭಿಸಿತು. ಅದು ಈವರೆಗೂ ಮುಂದುವರೆದಿದೆ. 1978ರಲ್ಲಿ ಕಮ್ಯುನಿಸ್ಟ್ ಕ್ಷಿಪ್ರಕ್ರಾಂತಿ ನಡೆದು ಕಮ್ಯುನಿಸ್ಟ್ ನಾಯಕ ಹಫ಼ೀಜುಲ ಅಮೀನ್ ನೇತೃತ್ವದ ಕಮ್ಯುನಿಸ್ಟ್ ಸರ್ಕಾರ ಅಧಿಕಾರಕ್ಕೆ ಬಂತು. ಅದು ವಿಸ್ತೃತವಾದ ಭೂ ಸುಧಾರಣೆ, ಭೂ ಹಂಚಿಕೆ, ಬಡ್ಡಿ ದರ ಕಡಿತ, ಸಾರ್ವತ್ರಿಕ ಶಿಕ್ಷಣ, ಮಹಿಳಾ ಸಮಾನತೆ ಇನ್ನಿತರ ಕ್ರಮಗಳನ್ನು ಜಾರಿಗೊಳಿಸಲು ಪ್ರಾರಂಭಿಸಿತು. 18000 ಕ್ಕೂ ಹೆಚ್ಚು ಕಮ್ಯುನಿಸ್ಟ್ ಕಾರ್ಯಕರ್ತರನ್ನು ಹಳ್ಳಿಗಳಿಗೆ ಕಳಿಸಿ ಸಾಕ್ಷರ ಕಾರ್ಯಕ್ರಮವನ್ನು ಕೈಗೊಂಡಿತು. ಇವೆಲ್ಲವೂ ಹಳ್ಳಿಯ ಭೂ ಮಾಲೀಕರ, ಪಾಳೆಗಾರರ ಹಾಗೂ ಮುಲ್ಲಗಳ ಕಣ್ಣನ್ನು ಕೆಂಪಾಗಿಸಿತು. ಹಳ್ಳಿಗಳಲ್ಲಿ ಈ ಅಕ್ಷರ ಕಾರ್ಯಕರ್ತರನ್ನು ಭೂಮಾಲೀಕರು ಮತ್ತು ಮುಲ್ಲಗಳು ವಿರೋಧಿಸಿದರು ಮತ್ತು ಹಲವಾರು ಪ್ರಮುಖ ಕಮ್ಯುನಿಸ್ಟ್ ನಾಯಕರ ಕೊಲೆಗಳನ್ನು ಮಾಡಿದರು. ಅದೇ ಸಮಯದಲ್ಲಿ ಕಮ್ಯುನಿಸ್ಟ್ ಪಕ್ಷದೊಳಗೆ ಇದ್ದ ಕಲಕ್ ಹಾಗೂ ಪರ್ಚಮ್ ಬಣಗಳ ನಡುವೆಯೂ ತೀವ್ರ ದಾಯಾದಿ ಕಲಹವೂ ಪ್ರಾರಂಭವಾಗಿತು. ಆ ಸಮಯದಲ್ಲಿ ಅಫ಼್ಘನ್ ಕಮ್ಯುನಿಸ್ಟರು ಈ ಬಿಕ್ಕಟ್ಟಿನಿಂದ ಪಾರಾಗಲು ಸೋವಿಯತ್ ರಷ್ಯಾದ ಸಹಾಯವನ್ನು ಕೇಳುತ್ತಾರೆ. ಅಲ್ಲಿಂದಾಚೆಗೆ ಅಫ಼್ಘಾನಿಸ್ತಾನದ ರಾಜಕಾರಣವನ್ನು ಮತ್ತು ಜನರ ಭವಿಷ್ಯ ವನ್ನು ಅಫ಼್ಘನ್ ಜನತೆಗಿಂತ ವಿದೇಶೀ ಬಲಿಷ್ಟ ಹಾಗೊ ಸಾಮ್ರಾಜ್ಯವಾದಿ ಶಕ್ತಿಗಳೇ ನಿರ್ಧರಿಸಲು ಪ್ರಾರಂಭವಾಗುತ್ತದೆ. ಅಮೆರಿಕ-ರಷ್ಯಾ ಶೀತಲ ಯುದ್ಧಕ್ಕೆ ರಣರಂಗವಾದ ಅಫ಼್ಘಾನಿಸ್ತಾನ 1950-91ರ ಅವಧಿ ಅಮೆರಿಕ ಹಾಗೂ ಸೋವಿಯತ್ ಒಕ್ಕೂಟಗಳ ನಡುವೆ ಶೀತಲ ಯುದ್ಧ ನಡೆಯುತ್ತಿದ್ದ ಕಾಲ. ಅಮೆರಿಕದ ಪ್ರಭಾವಲಯದಲ್ಲಿ ಸೋವಿಯತ್ ಹಸ್ತಕ್ಷೇಪ ಹಾಗೂ ಸೋವಿಯತ್ ಪ್ರಭಾವಲಯದಲ್ಲಿ ಅಮೆರಿಕ ಹಸ್ತಕ್ಷೇಪ ನಡೆಯುತ್ತಾ ಭಾರತ, ಅಫ಼್ಘಾನಿಸ್ತಾನ, ಲ್ಯಾಟಿನ್ ಅಮೆರಿಕ, ಆಫ್ರಿಕಾದ ಬಡದೇಶಗಳು ಈ ಎರಡೂ ಶಕ್ತ ರಷ್ಟ್ರಗಳ ನಡುವಿನ ಪ್ರಾಕ್ಸಿ ಯುದ್ಧ ನಡೆಯುವ ರಣರಂಗಗಳಾಗಿ ಬದಲಾದವು. ಅಫ಼್ಘನ್ ಕಮ್ಯುನಿಸ್ತ್ ಪಕ್ಷದ ಕೋರಿಕೆಯಂತೆ ಸೋವಿಯತ್ ಒಕ್ಕೂಟವು ಅಫ಼್ಘಾನಿಸ್ತಾನವನ್ನು ಪ್ರವೇಶಿಸುತ್ತಿದ್ದಂತೆ ಅಮೆರಿಕವು ಅದರ ವಿರುದ್ಧ ಪ್ರಾಕ್ಸಿ ಯುದ್ಧವನ್ನು ಪ್ರಾರಂಭಿಸಿತು. ಅಮೆರಿಕ ಸರ್ಕಾರವು ಆಡಳಿತ ರೂಢ ಕಮ್ಯುನಿಸ್ಟ್ ಪಕ್ಷದ ವಿರುದ್ಧವಿದ್ದ ಮುಲ್ಲಗಳು, ಭೂಮಾಲೀಕರು, ಹಾಗೂ ಪಾಳೆಗಾರರು ಕಟ್ಟಿಕೊಂಡಿದ್ದ ಮುಜಾಹಿದ್ದೀನ್ ಸಂಘಟನೆಗೆ ತನ್ನ ಕೃಪಾಕಟಾಕ್ಷದಲ್ಲಿದ್ದ ಪಾಕಿಸ್ತಾನದಲ್ಲಿ ಆಶ್ರಯ ನೀಡಿ ತರಬೇತಿ, ಹಣಕಾಸು ಸಹಾಯ ಮಾಡಿತು. ಆಗಿನ್ನೂ ಜೈಲಿನಲ್ಲಿದ್ದ ನೆಲ್ಸನ್ ಮಂಡೇಲಾರನ್ನು ಭಯೋತ್ಪಾದಕ ಎಂದಿದ್ದ ಆಗಿನ ಅಮೆರಿಕದ ಅಧ್ಯಕ್ಷ ರೇಗನ್, ಈ ಕೊಲೆಗಡುಕ ಮುಜಾಹಿದ್ದೀನ್‌ಗಳನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಕರೆದಿದ್ದ. ಹಾಗೂ ಅಮೆರಿಕದ ಭಯೋತ್ಪಾದಕರ ಪಟ್ಟಿಯಲ್ಲಿ ನೆಲ್ಸನ್ ಮಂದೇಲಾ ಹೆಸರು 2008ರವರೆಗೂ ಇರಿಸಿಕೊಳ್ಳಲಾಗಿತ್ತು! ಸೋವಿಯತ್ ಸೈನ್ಯ ಒಂದು ವಿದೇಶೀ ಸೈನ್ಯವಾಗಿದ್ದು ಯಾವ ಕ್ರಾಂತಿಯನ್ನು ರಫ್ತು ಮಾಡಲು ಆಗುವುದಿಲ್ಲ. ಬದಲಿಗೆ ಅದು ವ್ಯತಿರಿಕ್ತ ಪರಿಣಾಮವನ್ನೇ ಬೀರುತ್ತದೆ. ಒಂದು ಕಡೆ ಕಮ್ಯುನಿಸ್ಟ್ ಪಕ್ಷದ ಸುಧಾರಣೆಗಳು ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಜಾರಿಯೂ ಆಗಿರಲಿಲ್ಲ. ಯಾರು ಫಲಾನುಭವಿ ಬಡವರೋ ಅವರಿಗೆ ಇದರ ಬಗ್ಗೆ ಗೊತ್ತೂ ಇರಲಿಲ್ಲ. ಮತ್ತೊಂದು ಕಡೆ ಈ ಸುಧಾರಣೆಗಳ ವಿರುದ್ಧ ಬಂಡೆದ್ದಿದ್ದ ಭೂಮಾಲೀಕ, ಪಾಳೆಗಾರೀ, ಮುಲ್ಲಾಗಳ ಕೂಟಕ್ಕೆ ಈ ವಿದೇಶಿ ಸೋವಿಯತ್ ಸೈನ್ಯವು ಸುಧಾರಣೆಗಳ ವಿರುದ್ಧ ಹಾಗೂ ಕಮ್ಯುನಿಸ್ಟರ ವಿರುದ್ಧ ಇಸ್ಲಾಮ್ ಹೆಸರಿನ ಕಟ್ಟರ್ ಮೂಲಭೂತವಾದದಡಿ ಸಂಘಟಿಸಲು ಹೊಸ ಅವಕಾಶ ಒದಗಿಸಿತು. ಸೋವಿಯತ್ ಸೈನ್ಯ ವಿದೇಶಿ ಆಕ್ರಮಣಕಾರಿ ಸೈನ್ಯ. ಮತ್ತದು ದೈವದ್ರೋಹಿ ಕಮ್ಯುನಿಸ್ಟ್ ಸೈನ್ಯ. ಇವೆರಡು ನೆಲೆಯಲ್ಲಿ ಭೂಮಾಲೀಕ-ಪಾಳೆಗಾರಿ-ಮುಲ್ಲಗಳ ನೇತೃತ್ವದ ಮುಜಾಹಿದೀನ್ ಗಳಿಗೆ ದೊಡ್ಡ ಬೆಂಬಲ ದೊರಕುತ್ತಾ ಹೋಯಿತು. ಅದೇ ಸಮಯದಲ್ಲಿ ಕಮ್ಯುನಿಸ್ಟ್ ಹಾಗೂ ಸೋವಿಯತ್ ವಿರೋಧಿ ಮುಜಹಿದ್ದೀನ್‌ಗಳಿಗೆ ಅಮೆರಿಕವು ತನ್ನ ಶೀತಲ ಯುದ್ಧ ನೀತಿಯ ಭಾಗವಾಗಿ ದೊಡ್ಡ ಶಸ್ತ್ರಾಸ್ತ್ರ ಹಾಗೂ ಹಣಕಾಸು ಬೆಂಬಲವನ್ನು ಪ್ರಚಾರವನ್ನು ನೀಡಿ ಗಟ್ಟಿಗೊಳಿಸಿತು. ಈ ಬಾಡಿಗೆ ಅಮೆರಿಕನ್ ಪೋಷಿತ ಪಡೆಗಳು ಅಫ಼್ಘನ್ ಸರ್ಕಾರ ಹಾಗೂ ಸೋವಿಯತ್ ಪಡೆಗಳ ಮೇಲೆ ದಾಳಿಯನ್ನು ಪ್ರಾರಂಭಿಸಿದವು. ಅಫ಼್ಘನ್ ದೇಶ ರಕ್ತಸಿಕ್ತವಾಯಿತು. ಮುಜಾಹಿದ್ದೀನ್ ದಿರಿಸಿನಲ್ಲಿ ಅಮೆರಿಕದ ಆಕ್ರಮಣ ಇದೆಲ್ಲದರ ಪರಿಣಾಮವಾಗಿ ಹಾಗೂ ಅಮೆರಿಕ ಮತ್ತು ರಷ್ಯಾ ಶೀತಲ ಯುದ್ಧವನ್ನು ನಿಲ್ಲಿಸಲು ಮಾಡಿಕೊಂಡ ಜಾಗತಿಕ ಒಪ್ಪಂದದ ಭಾಗವಾಗಿ ಸೋವಿಯತ್ ಸೈನ್ಯ ಅಫ಼್ಘಾನಿಸ್ತಾನದಿಂದ ಹಿಂತಿರುಗಿತು. ಆದರೆ ಅಮೆರಿಕ ಮುಜಾಹಿದ್ದೀನ್ ಬಂಡುಕೋರರಿಗೆ ನೀಡುತಿದ್ದ ಬೆಂಬಲವನ್ನು ಮುಂದುವರೆಸಿತು. ಅಮೆರಿಕ ಹಾಗೂ ಪಾಕಿಸ್ತಾನದ ಬೆಂಬಲದೊಂದಿಗೆ ಈ ಮುಜಾಹಿದೀನ್ ಪಡೆಗಳು ಇಡೀ ಅಫ಼್ಘಾನಿಸ್ತಾನವನ್ನು ಆಕ್ರಮಿಸಿಬಿಟ್ಟರು. ಇದರಿಂದಾಗಿ ಆಗ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ನಜಿಬುಲ್ಲಾ ಸರ್ಕಾರ ಇಸ್ಲಾಮ್ವಾದಿಗಳಿಗೆ ಒಪ್ಪಿಗೆಯಾಗುವಂತೆ 1980ರಲ್ಲಿ ರಚಿಸಿದ ಹೊಸ ಸಂವಿಧಾನದಲ್ಲಿ ಸಮಾಜವಾದದ ಬಗ್ಗೆ ಇದ್ದ ಎಲ್ಲಾ ಉಲ್ಲೇಖಗಳನ್ನು ತೆಗೆದುಹಾಕಿದರೂ ಉಪಯೋಗವಾಗದೆ 1992ರಲ್ಲಿ ಆತ ರಾಜೀನಾಮೆ ಕೊಡಬೇಕಾಗುತ್ತದೆ. 1992ರಿಂದ 1995ರವರೆಗೆ ಮುಜಾಹಿದ್ದೀನ್ ಗಳ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಅಮೆರಿಕ ಅದಕ್ಕೆ ಸಂಪೂರ್ಣ ಬೆಂಬಲ ಕೊಡುವುದು ಮತ್ರವಲ್ಲದೆ ಪರೋಕ್ಷ ನಿಯಂತ್ರಣವನ್ನೂ ಇಟ್ಟುಕೊಳ್ಳುತ್ತದೆ. ಅದರೆ ಅದು ದೇಶದ ವಿವಿಧ ಭಾಗಗಳ ಪಾಳೆಗಾರರ ಹಾಗೂ ಭೋಮಾಲೀಕರ ಸಡಿಲ ಕೂಟವಾಗಿದ್ದರಿಂದ ಅಧಿಕಾರ ಹಾಗೂ ಸಂಪತ್ತಿಗಾಗಿ ಒಳಘರ್ಷಣೆ ಪ್ರಾರಂಭವಾಗುತ್ತದೆ. ಅಪಾರವಾದ ಹಿಂಸಾಚಾರ ಹಾಗೂ ಭ್ರಷ್ಟಾಚಾರಗಳು ಅಫ಼್ಘಾನಿಸ್ತಾನವನ್ನು ಮತ್ತೊಮ್ಮೆ ಅಸ್ಥಿರತೆಗೆ ದೂಡುತ್ತದೆ. ತಾಲಿಬಾನ್- ಬಾಣಲೆಯಿಂದ ಬೆಂಕಿಗೆ ಅಫ಼್ಘನ್ ಈ ಸಮಯದಲ್ಲಿ ಚಾಲ್ತಿಗೆ ಬಂದವರೆ ತಾಲಿಬಾನಿಗಳು. ಅಫ಼್ಘಾನಿಸ್ತಾನದಲ್ಲಿ ಪ್ರಧಾನವಾಗಿರುವ ಪಸ್ಟೂನ್ ಜನಾಂಗಕ್ಕೆ ಸೇರಿದ ಸುನ್ನಿ ಮುಸ್ಲಿಮರಾದ ಈ ತಾಲಿಬಾನಿಗಳು ಸೌದಿ ಮೂಲದ ಅತ್ಯಂತ ಪ್ರತಿಗಾಮಿ ವಹಾಬಿ ಇಸ್ಲಾಮಿನಲ್ಲಿ ವಿಶ್ವಾಸವಿಡುತ್ತಾರೆ. ಹೀಗಾಗಿ ಸೌದಿ ಮೂಲದ ಅಲ್ಖೈದಾ ಸಂಸ್ಥಾಪಕ ಒಸಾಮ್ ಬಿನ್ ಲಾಡೆನ್ ಕೂಡ ಇವರಿಗೆ ಗುರುವೇ. ಭಾರತದ ಕಟ್ಟರ್ ಮನುವಾದಿಗಳಂತೆ ಇಸ್ಲಾಮಿನ ಬಗ್ಗೆ ವಹಾಬಿ ವ್ಯಾಖ್ಯಾನವೂ ಕೂಡಾ ಮಹಿಳೆಯರು ಶಿಕ್ಷಣ-ನೌಕರಿ ಮಾಡದೆ ಗಂಡಸಿನ ಸೇವೆ ಮಾಡಬೇಕೆಂದು ತಾಕೀತು ಮಾಡುತ್ತದೆ. ಇಸ್ಲಾಮ್ ಎಲ್ಲರೂ ಸಮಾನರು ಎಂದು ಹೇಳಿದರೂ ತಾಲಿಬಾನ್ ಮಾತ್ರ ಭೂ ಹಂಚಿಕೆ ಹಾಗೂ ಸಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ವಿರೋಧಿಸುತ್ತದೆ. ಕಮ್ಯುನಿಸ್ಟರನ್ನು ದೈವದ್ರೋಹಿ ಕಾಫಿರರೆಂದು ಕೊಲ್ಲುವ ಈ ಪಂಥ ಅಮೆರಿಕನ್ ಸಮ್ರಾಜ್ಯವಾದಕ್ಕೆ ಮಾತ್ರ ಹತ್ತಿರದ ಸ್ನೇಹಿತರು. ಅವರ ಸಹಕಾರದ ಫಲಾನುಭವಿಗಳು ಮತ್ತು ಅಮೆರಿಕ-ರಷ್ಯಾಗಳ ನಡುವಿನ ಯುದ್ಧದಲ್ಲಿ ಅಮೆರಿಕದ ಏಜೆಂಟರಾಗಿ ಕೆಲಸ ಮಾಡಿದವರು. ಮುಜಾಹಿದ್ದೀನ್ ಗಳಿಗಿಂತ ಸಂಘಟಿತ ಕಟ್ಟರ್ ಶಿಸ್ತಿನ ಪಡೆಯೂ ಆದ ತಾಲಿಬಾನಿಗಳಿಗೆ ಪಾಕಿಸ್ತಾನವೇ ಸಂಪೂರ್ಣ ಶಿಕ್ಷಣ ಹಾಗೂ ತರಬೇತಿಯನ್ನು ಕೊಟ್ಟಿದೆ ಹಾಗೂ ಅಮೆರಿಕವೂ ಶಸ್ತ್ರಾಸ್ತ್ರ ಸರಬರಾಜನ್ನು ಮಾಡಿದೆ. 1992ರಲ್ಲಿ ಮುಜಹಿದೀನಗಳ ಅಂತಃ ಕಲಹ ಮತ್ತೊಮ್ಮೆ ಅಫ಼್ಘಾನಿಸ್ತಾನದಲ್ಲಿ ಅಸ್ಥಿರತೆಯನ್ನು ಹುಟ್ಟುಹಾಕುತ್ತಿದ್ದಾಗ ತಾಲಿಬಾನಿಗಳು ತಮ್ಮ ಉನ್ಮತ್ತ ಶಿಸ್ತು ಹಾಗೂ ಸಮರಶೀಲತೆಯಿಂದ ಹಾಗೂ ಪಾಕಿಸ್ತಾನದ ಸೈನಿಕ ಬೆಂಬಲದೊಂದಿಗೆ ಇಡೀ ಅಫ಼್ಹಾನಿಸ್ತಾನವನ್ನು ಗೆದ್ದುಕೊಳ್ಳುತ್ತದೆ. 1995ರಲ್ಲಿ ಕಾಬೂಲನ್ನು ವಶಪಡಿಸಿಕೊಂಡು ಇಡೀ ಅಫ಼್ಘಾನಿಸ್ತ್ನಾವನ್ನು ಆಕ್ರಮಿಸಿಕೊಳ್ಳುತ್ತದೆ. ವಿಶ್ವಸಂಸ್ಥೆಯ ಕಚೇರಿಯಲ್ಲಿದ್ದ ಈ ಹಿಂದಿನ ಅಧ್ಯಕ್ಷ ನಜೀಬುಲ್ಲಾರನ್ನು ಹೊರಗೆ ಎಳೆತಂದು ಚಿತ್ರಹಿಂಸೆ ಮಾಡಿ ಕೊಂದು ಆತನ ಹೆಣವನ್ನು ತನ್ನ ವಿಜಯದ ಬಾವುಟದಂತೆ ಕಂಬಕ್ಕೆ ನೇತುಹಾಕುತ್ತದೆ. ಇಲ್ಲಿಂದ ಅಫ಼್ಘನ್ನರ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ. 1995-2001ರ ತನಕ ತಾಲಿಬಾನ್ ಗಳು ಇಸ್ಲಾಮಿನ ಹೆಸರಿನಲ್ಲಿ, ಶರಿಯತ್ತಿನ ಹೆಸರಿನಲ್ಲಿ ತನ್ನದೇ ಆದ ಅತ್ಯಂತ ಕ್ರೂರ ಹಾಗೂ ಬರ್ಬರ ಆಡಳಿತವನ್ನು ನಡೆಸಿದ್ದು ನಾವೆಲ್ಲರೂ ನೋಡೇ ಇದ್ದೇವೆ. ಮಹಿಳೆಯರ ಎಲ್ಲಾ ಅಧಿಕಾರವನ್ನು ಅಮಾನತ್ತಿನಲಿಟ್ಟ ತಾಲಿಬಾನಿಗಳು ಎಲ್ಲರ ಮಾನವ ಹಕ್ಕುಗಳನ್ನು ಬರ್ಖಾಸ್ತು ಮಾಡುತ್ತದೆ. ಗ್ರಾಮೀಣ ಅಫ಼್ಘಾನಿಸ್ತಾನದಲ್ಲಿ ಮತ್ತೊಮ್ಮೆ ಪಾಳೆಗಾರರ-ಮುಲ್ಲಗಳ ಹಕ್ಕು ಗಟ್ಟಿಗೊಳ್ಳುತ್ತದೆ. ರೈತಾಪಿ ಹಾಗೂ ಬಡವರ ಬದುಕು ಅತ್ಯಂತ ದಾರುಣವಾಗುತ್ತದೆ. ಆದರೆ ಇವೆಲ್ಲವನ್ನೂ ನೋಡಿಯು ಅಮೆರಿಕ ನೇತೃತ್ವದ ಪಾಶಿಮಾತ್ಯ ಪ್ರಜಾತಂತ್ರಗಳು ತಾಲಿಬಾನಿನ ಆಡಳಿತಕ್ಕೆ ಸಹಾಯವನ್ನು, ಅವರ ಬರ್ಬರ ಕ್ರೌರ್ಯಕ್ಕೆ ಮೌನ ಬೆಂಬಲವನ್ನೇ ಮುಂದುವರೆಸುತ್ತವೆ. ಅದು ತನ್ನ ಬುಡಕ್ಕೆ ಬರುವವರೆಗೆ ಮಾತ್ರ.. ಸೆಪ್ಟೆಂಬರ್ 11 ಮತ್ತು ತಾಲಿಬಾನಿಗಳ ವಿರುದ್ಧ ಅಮೆರಿಕದ ಸೋಗಲಾಡಿ ಯುದ್ಧ 2001ರ ಸೆಪ್ಟೆಂಬರ್ 11 ರಂದು ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಭಯೋತ್ಪಾದಕ ದಾಳಿ ನಡೆಯುತ್ತದೆ. ಅಮೆರಿಕದ ಪ್ರಕಾರ ಅದನ್ನು ನಡೆಸಿದ್ದು ಅಲ್ ಖೈದಾ. ಅದರ ನಾಯಕ ತಾನು ಸಾಕಿದ ಕೂಸಾದ ಒಸಾಮ ಬಿನ್ ಲಾಡೆನ್ ಅಫ಼್ಘಾನಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆಂದು ಆರೋಪಿಸುತ್ತದೆ. ಹಾಗೂ ಆತನನ್ನು ಕೂಡಲೇ ತನ್ನ ಅವಶಕ್ಕೆ ಒಪ್ಪಿಸಬೇಕೆಂದು ತಾಲಿಬಾನಿಗೆ ತಾಕೀತು ಮಾಡುತ್ತದೆ. ಪುರಾವೆ ಒದಗಿಸಿದರೆ ವಶಕ್ಕೆ ಒಪ್ಪಿಸುವುದಾಗಿ ತಾಲಿಬಾನ್ ಗೋಗೆರೆದರೂ ಕೇಳದ ಅಮೆರಿಕ ವಿಶ್ವಮಟ್ಟದಲ್ಲಿ ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಬೇಕಾದ ತುರ್ತಿನಿಂದ ಅಫ಼್ಘಾನಿಸ್ತಾನದ ಮೇಲೆ ಸೈನಿಕ ದಾಳಿ ಮಾಡುತ್ತದೆ. ಅಪಾರ ವಾಯುಬಲ ಹಾಗೂ ಶಸ್ತ್ರಾಸ್ತ್ರ ಬಲ ಹೊಂದಿದ್ದ ಅಮೆರಿಕದ ದಾಳಿಯನ್ನು ತಡೆದುಕೊಳ್ಳಲಾಗದ ತಾಲಿಬಾನ್ ಸರ್ಕಾರ ಒಂದೇ ವಾರದಲ್ಲಿ ಕುಸಿಯುತ್ತದೆ. ತಾಲಿಬಾನಿಗಳು ಗ್ರಾಮೀಣ ಗಿರಿಕಂದರಗಳಿಗೆ ಹಿಂದೆ ಸರಿಯುತ್ತಾರೆ. ಅಫ಼್ಘಾನಿಸ್ತಾನದ ಉತ್ತರ ಭಾಗದಲ್ಲಿ ತಾಲಿಬಾನಿನಿಂದ ಸೋತು ತಲೆಮರೆಸಿಕೊಂಡಿದ್ದ ತನ್ನ ಕೈಗೊಂಬೆ ಮಾಜಿ ಮುಜಹಿದ್ದೀನ್ ಗಳಿಗೆ ಅಮೆರಿಕ ಹೊಸಬಟ್ಟೆ ಹಾಕಿಸಿ ಹೊಸ ಹೆಸರುಕೊಟ್ಟು ಕಾಬೂಲಿನಲ್ಲಿ ಸ್ಥಾಪಿಸುತ್ತದೆ. 2004ರಲ್ಲಿ ಹೊಸ ಸಂವಿಧಾನದ ನಾಟಕವೂ ನಡೆಯುತ್ತದೆ. ಮೊದಲು ಅಹ್ಮದ್ ಕರ್ಜೈ ಆ ನಂತರ ಮೊನ್ನೆ ಆಗಸ್ಟ್ 15 ರ ವರೆಗೆ ಅಹ್ಮದ್ ಘನಿ ಅಧ್ಯಕ್ಷರಾಗುತ್ತಾರೆ. ಕರ್ಜೈ ಅಮೆರಿಕದ ಸಿಐಎ ಇಂದ ಹಣಪಡೆಯುತ್ತಿದ್ದ ಏಜೆಂಟಾದರೆ ಘನಿ ವರ್ಲ್ಡ್ ಬ್ಯಾಂಕ್ ಉದ್ಯೋಗಿ. ಮೊನ್ನೆಯವರೆಗೆ ಉಪಾಧ್ಯಕ್ಷನಾಗಿದ್ದ ಅಹ್ಮದ್ ಸಾಲೆಹ್ ಕೂಡಾ ಸಿಐಎ ಏಜೆಂಟ್. ಇದು ಕೇವಲ ಕೆಲವು ಉದಾಹರಣೆಗಳಷ್ಟೆ. ಅಮೆರಿಕದ 20 ವರ್ಷ- ಛಿದ್ರಗೊಂಡ, ಭಗ್ನಗೊಂಡ ಅಫ಼್ಘಾನಿಸ್ತಾನ 2001-21ರ ವರೆಗೆ ಅಘಾನಿಸ್ತಾನದಲ್ಲಿದ್ದದ್ದು ಅಮೆರಿಕದ ಕೈಗೊಂಬೆ ಸರ್ಕಾರವೇ. ಒಸಾಮ ಬಿನ್ ಲಾಡೆನ್ ಅನ್ನು ಕೊಂದು ಹಾಕುವ ಹಾಗೂ ಆತನಿಗೆ ಆಶ್ರಯ ಕೊಟ್ಟಿದ್ದ ತಾಲಿಬಾನಿಗಳನ್ನು ಮಣಿಸುವ ಘೋಷಿತ ಉದ್ದೇಶದಿಂದ ಅಫ಼್ಘಾನಿಸ್ತಾನಕ್ಕೆ ಬಂದ ಅಮೆರಿಕಕ್ಕೆ ಲಾಡೆನ್ ಅಲ್ಲಿಲ್ಲ ಎಂಬುದು ಬಹಳಬೇಗನೇ ಅರಿವಿಗೆ ಬರುತ್ತದೆ. 2011ರಲ್ಲಿ ಲಾಡೆನ್ ಪಾಕಿಸ್ತಾನದ ಅಬೊಟಾಬಾದ್ ನಲ್ಲಿ ಅಮೆರಿಕ ಪಡೆಗಳಿಂದ ಹತ್ಯೆಯಾಗುತ್ತಾನೆ. ಆ ವೇಳೆಗಾಗಲೇ ತಾಲಿಬಾನ್ ಗಳೂ ಗ್ರಾಮೀಣ ಪ್ರಾಂತ್ಯದಲ್ಲಿ ತಲೆಮರಿಸಿಕೊಂಡು ನಿತ್ರಾಣರಾಗಿರುತ್ತಾರೆ. ಹೀಗೆ ಘೋಷಿತ ಉದ್ದೆಶಗಳು ಈಡೇರಿದ ಮೇಲೂ ಅಮೆರಿಕ ಸುಮಾರು ಒಂದು ಲಕ್ಷ ಸೈನ್ಯದೊಡನೆ ಅಫ಼್ಘಾನಿಸ್ತಾನದಲ್ಲೇ ಶಾಶ್ವತ ಠಿಕಾಣಿ ಹೂಡುತ್ತದೆ. ಹೇಳಿದ ಕಾರಣ ಅಫ಼್ಘಾನಿಸ್ತಾನದಲ್ಲಿ ಸ್ಥಿರತೆಯ ಮತ್ತು ಪ್ರಜಾತಂತ್ರದ ಮರುಸ್ಥಾಪನೆಯಾದರೂ ಅದರ ದೂರಗಾಮಿ ಉದ್ದೇಶ ನಿಧಾನವಾಗಿ ಬಲಾಢ್ಯವಾಗುತ್ತಿದ್ದ ಚೀನಾ-ರಷ್ಯಾಗಳ ಪ್ರಭಾವವು ಆ ಭೂಭಾಗದಲ್ಲಿ ವಿಸ್ತರಣೆಯಾಗದಂತೆ ತಡೆಯೊಡ್ಡುವುದು ಮತ್ತು ಅಫ಼್ಘಾನಿಸ್ತಾನದ ಪೆಟ್ರೋಲ್, ನೈಸರ್ಗಿಕ ಅನಿಲ ಹಾಗೂ ಖನಿಜ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸ್ಥಾಪಿಸಿಕೊಳ್ಳುವುದೇ ಆಗಿತ್ತು. ಈ ಸಾಮ್ರಾಜ್ಯವಾದಿ ಆರ್ಥಿಕ ಉದ್ದೇಶದಿಂದ ಅಫ಼್ಘಾನಿಸ್ತಾನವನ್ನು ಅಮೆರಿಕ ಕಳೆದ ಇಪ್ಪತು ವರ್ಷಗಳಿಂದ ಅಂತರಿಕ ವಸಾಹತುವಾಗಿ ಬಳಸಿಕೊಂಡಿದೆ. ಅಮೆರಿಕದ ವ್ಯಾಟ್ಸನ್ ಯುದ್ಧ ವೆಚ್ಚ ಸಂಸ್ಥೆಯ ಪ್ರಕಾರ ಕಳೆದ ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೆರಿಕವು ಅಫ಼್ಘಾನಿಸ್ತಾನದಲ್ಲಿ ಮಾಡಿರುವ ವೆಚ್ಚ 2.5-6.4 ಟ್ರಿಲಿಯನ್ ಡಾಲರುಗಳು. ಅಂದರೆ 150 ಲಕ್ಷ ಕೋಟಿಯಿಂದ- 470 ಲಕ್ಷ ಕೋಟಿ ರೂಪಾಯಿಗಳು! ಹಾಗೆ ನೋಡಿದರೆ ಈಗಲೂ ಅಫ಼್ಘಾನಿಸ್ತಾನದ ಜಿಡಿಪಿ ಕೇವಲ 20ಬಿಲಿಯನ್ ಡಾಲರ್ ಅಂದರೆ 1.5 ಲಕ್ಷ ಕೋಟಿ ರೂಪಯಿಗಳು. ಅಂದರೆ ಅಫ಼್ಘಾನಿಸ್ತಾನದ ಜಿಡಿಪಿಗಿಂತ ಆಮೆರಿಕವು 2000ಪಟ್ಟು ಹೆಚ್ಚು ವೆಚ್ಚ ಮಾಡಿದೆ. ಆದರೆ 2008ರಲ್ಲಿ ಶೇ. 60 ಭಾಗದಷ್ಟು ಅಫ಼್ಘನ್ ಜನರು ಬಡತನ ರೇಖೆಗಿಂತ ಕೆಳಗಿದ್ದರೆ ಅಮೆರಿಕ ಅಧಿಪತ್ಯ ಮತ್ತು ಇಷ್ಟೆಲ್ಲಾ ವೆಚ್ಚಗಳ ನಂತರ 2018ರಲ್ಲಿ ಬಡತನ ರೇಖೆಯ ಕೆಳಗಿರುವವರ ಸಂಖ್ಹ್ಯೆ ಶೇ. 30 ರಷ್ಟು ಏರಿಕೆಯಾಗಿ ಶೇ. 90ಕ್ಕೆ ತಲುಪಿದೆ. ದೇಶದ ಅರ್ಧ ಭಾಗದಷ್ಟು ಪ್ರದೇಶಗಳಲ್ಲಿ ಕುಡಿಯುವ ನೀರಿಲ್ಲ. ದೇಶದ ಮುಕ್ಕಾಲು ಭಾಗದಲ್ಲಿ ವಿದ್ಯುತ್ತಿಲ್ಲ. ಶೇ. 90 ಭಾಗ ಜನ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಹಾಗಿದ್ದಲ್ಲಿ ೪೫೦ ಲಕ್ಷ ಕೋಟಿ ಎಲ್ಲಿ ಹೋಯಿತು? ಇದರಲ್ಲಿ ಪ್ರಧಾನ ಭಾಗವನ್ನು ಅಮೆರಿಕ ಖರ್ಚು ಮಾಡಿದ್ದು ಅಫ಼್ಘನ್ ಸೈನಿಕರ ತರಬೇತಿ ಮತ್ತು ಶಸ್ತ್ರಾಸ್ತ್ರ ಸರಬರಾಜಿಗೆ. ಅಫ಼್ಘನ್ ಜನರ ತಲಾವಾರು ಆದಾಯ ಈ ಅವಧಿಯಲ್ಲಿ 2 ಡಾಲರ್ ಆಗಿದ್ದರೆ ಇದೇ ಆವಧಿಯಲ್ಲಿ ಆದ ತಲಾವಾರು ಸೈನಿಕ ವೆಚ್ಚ 22 ಡಾಲರ್! ಅಮೆರಿಕ ವೆಚ್ಚ ಮಾಡಿದ ಬಹುಪಾಲು ಹಣ ಸೇರಿದ್ದು ಅಮೆರಿಕ ನೊಂದಾಯಿಸಿಕೊಂಡಿದ್ದ ಭ್ರಷ್ಟ ಸೇನಾಧಿಕಾರಿಗಳ ಜೋಬಿಗೆ, ಸೈನ್ಯಕ್ಕೆ ಸರಬರಾಜು ಮಾಡುತ್ತಿದ್ದ 16000 ಗುತ್ತಿಗೆದಾರರಿಗೆ, ಇದೆಲ್ಲದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಮೆರಿಕದ ಸೇನಾಧಿಕಾರಿಗಳಿಗೆ ಹಾಗೂ ಅಮೆರಿಕದ ಶಸ್ತ್ರಾಸ್ತ್ರ ಕಂಪನಿಗಳಿಗೆ. ಅಮೆರಿಕದ ಈ ಭ್ರಷ್ಟ ಸಾಮ್ರಾಜ್ಯದಲ್ಲಿ ಅಫ಼್ಘನ್ ಜನರಿಗೆ ಯಾವುದೇ ಲಾಭವಾಗುವುದಿರಲಿ ಅಮೆರಿಕ ನಿಗಾದಲ್ಲಿ ಕಟ್ಟಲಾದ 3 ಲಕ್ಷ ಸಾಮರ್ಥ್ಯದ ಅಫ಼್ಘನ್ ಸೈನ್ಯ ಅತ್ಯಂತ ಕಡುಭ್ರಷ್ಟ ಸೇನೆಯಾಯಿತು. ಸಾಮಾನ್ಯ ಸೈನಿಕರ ಯಾವುದೇ ವಿಶ್ವಾಸಕ್ಕೆ ಅರ್ಹವಲ್ಲದ ಪರಾವಲಂಬಿಯಾಯಿತು. ಅಮೆರಿಕದ ಈ ಭ್ರಷ್ಟಾಚಾರ ಯಾವ ಮಟ್ಟದಲ್ಲಿತ್ತೆಂದರೆ ಅಮೆರಿಕದ ಸೆನೆಟ್ ಗೆ ನೀಡಿದ ವರದಿಯೊಂದು ಸ್ಪಷ್ಟಪಡಿಸುವಂತೆ ಸುಮಾರು 43000 ದಷ್ಟು ಸೈನಿಕರು ಇಲ್ಲದಿದ್ದರೂ ಅವರ ಹೆಸರಲ್ಲಿ ಸಂಬಳ ಪಾವತಿಯಾಗುತ್ತಿತ್ತು. ಹೀಗಾಗಿಯೇ ಅಮೆರಿಕದ ಸೇನೆ ಹಿಂತೆಗೆದುಕೊಳ್ಳುತ್ತಿದ್ದಂತೆ ಯಾವುದೇ ಯುದ್ಧ ಮಾಡದೇ ಸೈನಿಕರು ತಾಲಿಬಾನಿಗಳ ಜೊತೆ ಸೇರಿಕೊಂಡರು. CIA ಕಟ್ಟಿದ ಕೊಲೆಗಡುಕ ಖಾಸಗಿ ಅಫೀಮು ಪಡೆ! ಅಷ್ಟು ಮಾತ್ರವಲ್ಲದೆ, ಇದೇ ಅವಧಿಯಲ್ಲಿ ಅಮೆರಿಕದ ಸಿಐಎ ತನ್ನ ನೇರ ಉಸ್ತುವಾರಿಯಲ್ಲಿ 3500 ಕ್ಕೂ ಹೆಚ್ಚು ಕೊಲೆಗಡುಕ ಪಡೆಯೊಂದನ್ನು ಸಾಕಿಕೊಂಡಿತ್ತು. ಇದು ಯಾವುದೇ ಕಾನೂನುಕಟ್ಟಳೆಗಳ ನಿರ್ಬಂಧವಿಲ್ಲದೆ ಅಫ಼್ಘಾನಿಸ್ತಾನದಲ್ಲಿ ಪರ್ಯಾಯ ಸರ್ಕಾರದಂತೆ ಕಾರ್ಯಾಚರಣೆ ಮಾಡುತ್ತಿತ್ತು. ಇವರ ಸಂಬಳ ಸಾರಿಗೆ ನೋಡಿಕೊಳ್ಳುವುದಕ್ಕಾಗಿ ಸಿಐಎಯ ನೇರ ನಿಗರಾನಿಯಲ್ಲಿ ಅಫೀಮನ್ನು ಬೆಳಯಲಾಗುತ್ತಿತ್ತು. 1988ರ ವೇಳೆಗೆ ಅಫ಼್ಘಾನಿಸ್ತಾನದಲ್ಲಿ ಹೆಚ್ಚೆಂದರೆ 150 ಟನ್ ಅಫೀಮು ಉತ್ಪಾದನೆಯಾಗುತ್ತಿದ್ದರೆ 2019ರ ವೇಳೆಗೆ 6900 ಟನ್ ಅಫೀಮು ಉತ್ಪಾದನೆಯಾಗುತ್ತಿತ್ತು. ಅಮೆರಿಕಾದ ಉಸ್ತುವಾರಿಯಲ್ಲಿ ಈಗ ಅಘಾನಿಸ್ತಾನ ಜಗತ್ತಿನಲ್ಲೇ ದೊಡ್ಡ ಅಫೀಮು ಉತ್ಪಾದಕನಾಗಿದೆ. ಅಫ಼್ಘಾನಿಸ್ತಾನದ 35 ಲಕ್ಷಕ್ಕೂ ಹೆಚ್ಚು ಯುವಜನ ಅಫೀಮು ಹಾಗೂ ಇನ್ನಿತರ ಡ್ರಗ್ ಗಳ ದಾಸರಾಗಿದ್ದಾರೆ. ಇದು ಅಫ಼್ಘಾನಿಸ್ತಾನಕ್ಕೆ ಅಮೆರಿಕ ಸಾಮ್ರಾಜ್ಯವಾದ ಕೊಡುಗೆ. ತಾಲಿಬಾನಿಗಳೂ ಸಹ ಅಫೀಮು ವ್ಯಾಪಾರದ ಫಲಾನುಭವಿಗಳೇ ಆಗಿದ್ದಾರೆ. ಒಟ್ಟಾರೆ ಅಮೆರಿಕ ಪ್ರಾಯೋಜಿತ ಈ ಅರಾಜಕತೆಯಲ್ಲಿ ಲಕ್ಷಾಂತರ ಅಫ಼್ಘನ್ ನಾಗರಿಕರು ಮೃತರಾಗಿರುವುದಲ್ಲದೆ ಸಾಮಾಜಿಕ ಹಂದರವೇ ಛಿದ್ರಗೊಂಡಿದೆ. ಹೀಗಾಗಿ ಅಮೆರಿಕ ಸೈನ್ಯ ಅಫ಼್ಹಾನಿಸ್ತಾನಕ್ಕೆ ಸಹಾಯ ಮಾಡಿದೆ ಎನ್ನುವುದಾಗಲೀ, ಅಮೆರಿಕನ್ನರು ಉಳಿದುಕೊಂಡಿದ್ದರೆ ಅಫ಼್ಘನ್ನರ ವಿಮೋಚನೆಯಾಗುತ್ತಿತ್ತು ಎಂಬುದಾಗಲೀ ತಪ್ಪು ತಿಳವಳಿಕೆ ಅಷ್ಟೆ. ಅಮೆರಿಕ ಹಿಂದೆ ಸರಿದಿದ್ದೇಕೆ? ಚೀನಾ ಮುಂದೆ ಬಂದಿದ್ದೇಕೆ? 2001ರಲ್ಲಿ ಅಮೆರಿಕ ಅಫ಼್ಘಾನಿಸ್ತಾನವನ್ನು ವಶಪಡಿಸಿಕೊಂದ ನಂತರ ಜಾಗತಿಕ ಸಮೀಕರಣಗಳು ಬದಲಾಗುತ್ತಿವೆ. ಈಗ ಈ ಇಡೀ ವಲಯದಲ್ಲಿ ಚೀನಾ ತನ್ನ ಆರ್ಥಿಕ ಹಾಗೂ ಸೈನಿಕ ಬಲದೊಂದಿಗೆ ಅಮೆರಿಕಕ್ಕೆ ಸಡ್ಡು ಹೊಡೆಯುತ್ತಿದೆ. ಅಫ಼್ಘಾನಿಸ್ತಾನದೊಂದಿಗೆ ಚೀನಾ ಗಡಿಯನ್ನು ಹೊಂದಿದ್ದು ಕಳೆದ ಕೆಲವು ವರ್ಷಗಳಿಂದ ತಾಲಿಬಾನಿಗಳಿಗೆ ಬೆಂಬಲ ನೀಡಲು ಪ್ರಾರಂಭಿಸಿದೆ. ಈ ಬೆಂಬಲದೊಂದಿಗೆ ಮತ್ತೆ ಚಿಗುರಿಕೊಂಡ ಅಫ಼್ಘಾನಿಸ್ತಾನ ನಿಧಾನವಾಗಿ ಗ್ರಾಮೀಣ ಅಫ಼್ಘಾನಿಸ್ತಾನದಲ್ಲಿ ಮತ್ತೆ ಪ್ರಾಬಲ್ಯಗಳಿಸಿಕೊಳ್ಳಲು ಪ್ರಾರಂಭಿಸಿತು. ಚೀನಾ ಮತ್ತು ಪಾಕಿಸ್ತಾನಗಳ ಮೈತ್ರಿ ಗಟ್ಟಿಗೊಳ್ಳುತ್ತಿದ್ದು ಈ ವಲಯದಲ್ಲಿ ಚೀನಾ ಪ್ರಾಬಲ್ಯವು ಹೆಚ್ಚಾಗುತ್ತಿದೆ. ಪೂರ್ವ ಚೀನಾದಿಂದ ಪಶ್ಚಿಮ ಯೂರೋಪಿನವರೆಗೆ ಚೀನ ನಿರ್ಮಿಸುತ್ತಿರುವ ಮಹತ್ವಾಕಂಕ್ಷೆಯ ಬೃಹತ್ ರೋಡ್ ಬೆಲ್ಟ್ ಯೋಜನೆಯು ಅಫ಼್ಘಾನಿಸ್ತಾನದಿಂದ ಹಾದುಹೋಗಲು ಅವಕಾಶ ಸಿಕ್ಕರೆ ಚೀನಾಗೆ ಆರ್ಥಿಕ ಲಾಭ ಹೆಚ್ಚು. ಹಾಗೆಯೇ ಅಫ಼್ಘಾನಿಸ್ತಾನದಲ್ಲಿರುವ ಒಂದು ಟ್ರಿಲಿಯನ್ ಡಾಲರಿಗೂ (70 ಲಕ್ಷ ಕೋಟಿ ರೂ) ಹೆಚ್ಚಿನ ಮೌಲ್ಯದ ಚಿನ್ನ, ಕೋಬಲ್ಟ್, ನಿಕ್ಕಲ್, ಲಿಥಿಯಮ್, ಕಬ್ಬಿಣದ್ಂತಹ ಖನಿಜಗಳ ನಿಯಂತ್ರಣವು ಚೀನಾದ ಆರ್ಥಿಕತೆಗೆ ಮತ್ತಷ್ಟು ಪುಷ್ಟಿ ಕೊಡುತ್ತದೆ. ಇವೆಲ್ಲವೂ ಆಗಬೇಕೆಂದರೆ ಅಫ಼್ಘಾನಿಸ್ಥಾನದಲ್ಲಿ ತನ್ನ ಪ್ರತಿಸ್ಪರ್ಧಿ ಅಮೆರಿಕಗಿಂತ ತನಗೆ ಪೂರಕವಾಗಿರುವ ತಾಲಿಬಾನಿನ ಸರ್ಕಾರ ಸ್ಥಿರಗೊಳ್ಳುವುದು ಚೀನಾದ ಹಿತಾಸಕ್ತಿಗೆ ಪೂರಕವಾಗಿದೆ. ಹೀಗಾಗಿ ಚೀನಾ ಕಳೆದ ಹಲವಾರು ವರ್ಷಗಳಿಂದ ತಾಲಿಬಾನ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದೆ. ಭೌಗೋಳಿಕವಾಗಿಯೂ ಅಫ಼್ಘಾನಿಸ್ತಾನಕ್ಕೆ ಹತ್ತಿರವಿರುವ ಚೀನ ಅಮೆರಿಕಕ್ಕಿಂತ ಸುಲಭವಾಗಿ ಸೈನಿಕ ಸ್ಪರ್ಧೆಯೊಡ್ದಬಹುದು. ಹಾಗೆಯೇ ರಷ್ಯ ಮತ್ತು ಇರಾನ್‌ಗಳಿಗೂ ಈ ಭೂಭಾಗದಲ್ಲಿ ಅಮೆರಿಕದ ಅಸ್ಥಿತ್ವ ಹಾಗೂ ನಿಯಂತ್ರಣವನ್ನು ಕಿತ್ತೊಗೆಯಬೇಕೆಂದು ತಾಲಿಬನಿಗೆ ಬೆಂಬಲ ನೀಡಲು ಪ್ರಾರಂಭಿಸಿವೆ. ಅಲ್ಲದೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೆರಿಕ 3000 ಸೈನಿಕರನ್ನು ಕಳೆದುಕೊಂಡಿದೆ. ಅಮೆರಿಕದ ತೆರಿಗೆದಾರರ 6.4 ಟ್ರಿಲಿಯನ್ ಡಾಲರ್ ವ್ಯರ್ಥವೆಚ್ಚವನ್ನು ಮಾಡಿದೆ. ಇನ್ನು ಚೀನಾ ಜೊತೆಗೆ ಪರೋಕ್ಷ ಯುದ್ಧದಲ್ಲಿ ತೊಡಗಿಕೊಂಡರೆ ಇನ್ನು ಹೆಚ್ಚು ನಷ್ಟವನ್ನು ಅನುಭವಿಸುವ ಸಾಧ್ಯತೆಯೇ ಹೆಚ್ಚೆಂದು ಮನಗಂಡಿದೆ. ಅಲ್ಲದೆ ಸಿರಿಯಾ, ಲಿಬ್ಯಾ, ಇರಾಕ್ ಇನ್ನಿತರ ಕಡೆಗಳಲ್ಲಿ ಅಮೆರಿಕದ ಸೈನಿಕ ಮಧ್ಯಪ್ರವೇಶ ಅಲ್ಲಿಯ ಮಿಲಿಟರಿ-ಇಂಡಸ್ತ್ರಿಯಲ್ ಕಾಂಪ್ಲೆಕ್ಸಿನ ಕಾರ್ಪೊರೇಟ್ ಉದ್ಯಮಿಗಳಿಗೆ ಲಾಭದ ದೊರಕಿಸಿದೆಯಾದರೂ ವಿಶ್ವದ ಬೆಂಬಲವನ್ನೂ ಕಳೆದುಕೊಳ್ಳುತ್ತಿದೆ. ನಾಟೋ ಸ್ನೇಹಿತರ ನಡುವೆಯೂ ಅಪ್ರಿಯಗೊಳ್ಳುತ್ತಿದೆ. ಈ ಎಲ್ಲಾ ಕಾರಣದಿಂದ ಇಪ್ಪತ್ತು ವರ್ಷಗಳ ನಂತರ ಅಫ಼್ಘಾನಿಸ್ತಾನದಲ್ಲಿ ಮುಂದುವರೆಯುವುದಕ್ಕಿಂತ ತನ್ನ ಆಸಕ್ತಿಗಳನ್ನು ಖಾತರಿಪಡಿಸಿಕೊಂಡು ಹಿಂತೆಗೆಯುವುದೇ ಲೇಸೆಂಬ ನಿರ್ಧಾರಕ್ಕೆ ಅಮೆರಿಕ ಬಂದಿತು. ಅದರ ಭಾಗವಾಗಿಯೇ ಈ ಹಿಂದಿನ ಟ್ರಂಪ್ ಸರ್ಕಾರ 2018ರಿಂದಲೇ ತಾಲಿಬಾನಿಗಳನ್ನು ಒಳ್ಳೆಯ ತಾಲಿಬಾನಿಗಳು ಮತು ಕೆಟ್ಟ ತಾಲಿಬಾನಿಗಳೆಂದು ವಿಂಗಡಿಸಿ ತನ್ನ ಪರವಾಗಿರುವ ತಾಲಿಬಾನಿಗಳೊಂದಿಗೆ ಮತುಕತೆ ಪ್ರಾರಂಭಿಸಿತು. 2019ರ ಫೆಬ್ರವರಿ 29ರಂದು ಟ್ರಂಪ್ ಮತ್ತು ತಾಲಿಬಾನಿಗಳ ನಡುವೆ ಒಪ್ಪಂದವೂ ಆಯಿತು. ಅದರ ಪ್ರಕಾರ ಆಮೆರಿಕ ಅಫ಼್ಘಾನಿಸ್ತಾನದಿಂದ ಸಂಪೂರ್ಣವಾಗಿ ಹಿಂತೆಗೆಯಬೇಕು. ಬದಲಿಗೆ ಅಫ಼್ಘಾನಿಸ್ತಾನ ಅಲ್ಲಿ ಅಲ್ ಖೈದಾ, ಐಎಸ್‌ಐಎಸ್ ನಂತ ವಿದೇಶಿ ಉಗ್ರಾಗಾಮಿಗಳಿಗೆ ಅವಕಾಶ ಕೊಡಬಾರದು ಮತ್ತು ಅಮೆರಿಕದ ಹೂಡಿಕೆಗಳಿಗೆ ರಕ್ಷಣೆ ನೀಡಬೇಕು. ಅಷ್ಟೆ. ಇದನ್ನು ಬಿಟ್ಟು ಅಲ್ಲಿ ಮಾನವ ಹಕ್ಕುಗಳನ್ನು, ಮಹಿಳೆಯರ ಹಕ್ಕುಗಳನ್ನು, ಪ್ರಜಾತಾಂತ್ರಿಕ ಬದಲಾವಣೆಗಳನ್ನು ತರಬೇಕೆಂಬ ಯಾವ ಶರತ್ತನ್ನು ಅಮೆರಿಕ ತಾಲಿಬಾನಿಗಳಿಗೆ ವಿಧಿಸಿಲ್ಲ. 2021ರಲ್ಲಿ ಅಧಿಕಾರಕ್ಕೆ ಬಂದ ಡೆಮಾಕ್ರಾಟ್ ಜೋ ಬಿಡೆನ್ ಸರ್ಕಾರ ಕೂಡಾ ರಿಪಬ್ಲಿಕ್ ಟ್ರಂಪಿನ ಈ ಸ್ವಾರ್ಥಪರ ಅಫ಼್ಘನ್ ಜನವಿರೋಧಿ ಒಪಂದವನ್ನು ಎತ್ತಿ ಹಿಡಿದು ಆಗಸ್ಟ್ 31 ಒಳಗೆ ತಮ್ಮ ಎಲ್ಲಾ ಸೈನ್ಯವನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಅದರಂತೆ ಅಗಸ್ಟ್ ಮೊದಲ ವಾರದಿಂದ ಅಮೆರಿಕನ್ ಸೈನ್ಯ ಹಿಂತೆಗೆಯಲು ಪ್ರಾರಂಭಿಸಿತು. ತಾಲಿಬಾನ್ ಸುಲಭವಾಗಿ ಗೆದ್ದಿದ್ದು ಹೇಗೆ? ಈಗಾಗಲೇ ಗಮನಿಸಿರುವಂತೆ ಅಫ಼್ಘನ್ ಪಡೆ 3 ಲಕ್ಷದಷ್ಟಿದ್ದರೂ ಅಮೆರಿಕ ಕೊಟ್ಟ ಶಸ್ತ್ರಾಸ್ತ್ರಗಳಿದ್ದರೂ 60 ಸಾವಿರಷ್ಟಿದ್ದ ತಾಲಿಬಾನಿಗಳನ್ನು ಎದುರಿಸಲಾಗಲಿಲ್ಲ. ಏಕೆಂದರೆ ಅಫ಼್ಘನ್ ಸೇನಾಧಿಕಾರಿಗಳು ಹಲವಾರು ತಿಂಗಳುಗಳಿಂದ ಸೈನಿಕರಿಗೆ ಸಂಬಳವನ್ನೇ ಕೊಟ್ಟಿರಲಿಲ್ಲ. ಬದಲಿಗೆ ಅಮೆರಿಕ ಕೊಟ್ತ ಹಣವನ್ನೆಲ್ಲಾ ಅಫ಼್ಘನ್ ಸೇನಾಧಿಕಾರಿಗಳೇ ಉಡಾಯಿಸುತ್ತಿದ್ದರು. ಅಧ್ಯಕ್ಷ ಘನಿ ಸರ್ಕಾರದ ಬಗ್ಗೆಯೂ ಸೈನಿಕರಿಗೆ ಯಾವ ವಿಶ್ವಾಸವೂ ಇರಲಿಲ್ಲ. ಜೊತೆಗೆ ಅಮೆರಿಕ ಹಿಂತೆಗೆಯುವುದು ಖಚಿತವಾಗಿ ವಾಯುಪಡೆಯ ಬೆಂಬಲವು ಇಲ್ಲವಾಯಿತು. ಇದರಿಂದ ದೂರದೂರದಲ್ಲಿದ್ದ ಸೈನಿಕ ಶಿಬಿರಗಳಿಗೆ ಮದ್ದುಗುಂಡು ಹಗೂ ಆಹಾರಗಳ ಸರಬರಾಜೇ ನಿಂತುಹೋಯಿತು. ಇದರ ನಡುವೆ ಪ್ರಮುಖ ಸೇನಾಧಿಪತಿಗಳೆ ಬರಲಿರುವ ಸೋಲನ್ನು ಮನಗಂಡು ಸೈನ್ಯ ತೊರೆದರು. ಈ ಎಲ್ಲಾ ಕಾರಣಗಳಿಂದ ಬಹುಪಾಲು ಸೈನಿಕರು ಯಾವ ಯುದ್ಧವನ್ನು ಮಾಡದೆ ಶರಣಾದರು. ಕೊನೆಯ ಹೊತ್ತಿನಲ್ಲಿ ಪಾಕಿಸ್ತಾನವು ತಾಲಿಬಾನಿಗಳಿಗೆ ಮಾನವ ಹಾಗೂ ಸೈನಿಕ ಸರಬರಾಜನ್ನು ಹೆಚ್ಚಿಸಿದ್ದೂ ಕೂಡ ತಾಲಿಬಾನಿಗಳ ವಿಜಯವನ್ನು ಸುಲಭ ಮಾಡಿತು. ಹೀಗಾಗಿ ತಾಲಿಬಾನಿಗಳ ರಕ್ತಪಾತ ರಹಿತ ಗೆಲುವಿಗೆ ಅವರ ಶೌರ್ಯವೂ ಕಾರಣವಲ್ಲ. ಅಥವಾ ಇದ್ದಕ್ಕಿದ್ದಂತೆ ಅವರಿಗೆ ಜೀವಪರತೆಯೂ ಉಕ್ಕಿಬಂದಿಲ್ಲ. ತಾಲಿಬಾನಿಗಳ ವಿಜಯ ಸಮ್ರಾಜ್ಯವಾದಿಗಳ ಜೊತೆ ಮಾಡಿಕೊಂಡ ಒಪ್ಪಂದದ ಫಲಿತಾಂಶ. ಅಷ್ಟೆ. ಅಮೆರಿಕ ಬಿಟ್ಟುಹೋದ ಬಂದೂಕಿನಲ್ಲಿ ಚೀನಾ ಗುಂಡುಗಳು- ಮುಂದೇನು? ಆಗಸ್ತ್ 15ಕ್ಕೆ ಕಾಬೂಲ್ ಕೈವಶವಾಗುವುದರೊಡನೆ ಅಫ಼್ಘಾನಿಸ್ತಾನದ ಉತ್ತರ ಭಾಗದಲ್ಲಿರುವ ಪಂಜ್ ಶೀರ್ ಪ್ರಾಂತ್ಯವೊಂದನ್ನು ಬಿಟ್ಟು ಮಿಕ್ಕೆಲ್ಲಾ ತಾಲಿಬಾನಿನ ವಶಾವಾಗಿದೆ. ಮೊದಲೆರಡು ದಿನ ವಿಶ್ವದ ಜನರಿಗೆ ಹಿತವಾಗುವ ಮತುಗಳನ್ನಾಡಿದ್ದ ತಾಲಿಬಾನಿಗರು ಮತ್ತೊಮ್ಮೆ ತಾವು 1995-2001ರ ನಡುವೆ ಜಾರಿ ಮಾಡಿದ್ದ ಬರ್ಬರ ಆಡಳಿತವನ್ನೇ ಜಾರಿಗೊಳಿಸುವ ಎಲ್ಲಾ ಸೂಚನೆಗಳನ್ನೂ ನೀಡಿದೆ. ಅಫ಼್ಘಾನಿಸ್ತಾನವನ್ನು ಇಸ್ಲಾಮಿಕ್ ಎಮಿರೇಟ್ ಆಫ್ ಅಫ಼್ಘಾನಿಸ್ತಾನವನ್ನಾಗಿ ಮರು ನಿರ್ಮಾಣಮಾಡುವುದಾಗಿ ಘೋಶಿಸಿರುವ ತಾಲಿಬಾನಿಗಳು ಸಾಮಾಜಿಕವಾಗಿ ತಾವು ಶರಿಯತ್ ಎಂದು ಹೇಳುವ ಕಾನೂನನ್ನೇ ಜಾರಿಗೊಳಿಸುವುದಾಗಿ ಹೇಳಿದ್ದರೆ. ಈಗಾಗಲೇ ಹಲವಾರು ಮಹಿಳಾ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಪ್ರಧಾನವಾಗಿ ಸುನ್ನಿ ಮುಸ್ಲಿಮರಾಗಿರುವ ತಾಲಿಬಾನಿಗಳು ಮುಸ್ಲಿಮರೇ ಅಲ್ಲವೆಂದು ಭಾವಿಸುವ ಶಿಯಾ ಪಂಥೀಯರಾದ ಹಜಾರ ಮುಸ್ಲಿಮರ ವಸತಿ ಪ್ರದೇಶಗಳಲ್ಲಿ ಮೊನ್ನೆಮೊನ್ನೆ ಕಾರ್ ಬಾಂಬ್ ಸ್ಪೋಟಗೊಳಿಸಿ 60 ಕ್ಕೂ ಹೆಚ್ಚು ಹಜಾರ ಹೆಣ್ಣುಮಕ್ಕಳ ಸಾವಿಗೆ ಕಾರಣವಾಗಿದೆ. ಇದೆಲ್ಲವನ್ನು ನೋಡಿಯೂ ನೋಡದಂತೆ ಚೀನಾ, ಪಾಕಿಸ್ತಾನ, ಇರಾನ್ ಗಳು ತಾಲಿಬಾನಿಗಳ ಜಯವನ್ನು ಕೊಂಡಾಡುತ್ತಿವೆ. ಅಮೆರಿಕದ ಸರ್ಕಾರ ಸಹ ತಾಲಿಬಾನಿಗಳು ಅಲ್ ಖೈದಾ ಗಿಂತ ಉತ್ತಮರು ಎಂದು ಪ್ರಮಾಣ ಪತ್ರ ನೀಡಿದೆ. ಹೀಗಾಗಿ ಎರಡನೆ ಬಾರಿ ಅಧಿಕಾರಕ್ಕೆ ಬಂದಿರುವ ತಾಲಿಬಾನ್ ಹಿಂದಿಗಿಂತ ಉತ್ತಮವಾಗಿರುತ್ತದೆಂದೂ, ಬದಲಾಗುವುದಿಲ್ಲ ಎಂದೇಕೆ ಭಾವಿಸಬೇಕು ಎನ್ನುವ ತರ್ಕಗಳೆಲ್ಲಾ ಹೆಚ್ಚೆಂದರೆ ರಾಜಕೀಯ ಅನಕ್ಷರತೆ ಅಥವಾ ಕುರುಡು ಆಶಾವಾದವಷ್ಟೆ. ಹೆಚ್ಚೆಂದರೆ ಎರಡನೆ ಬಾರಿ ಅಧಿಕಾರಕ್ಕೆ ಬಂದಿರುವ ತಾಲಿಬಾನ್ ಅಮೆರಿಕ ಬಿಟ್ಟುಹೋದ ಬಂದೂಕಿನಲ್ಲಿ ಚೀನಾದ ಗುಂಡುಗಳನ್ನು ತುಂಬಿ ಅಫ಼್ಘನ್ನರನ್ನು ಸಾಯಿಸುತ್ತಿದೆ ಎಂದು ಹೇಳಬಹುದಷ್ಟೆ. ಈ ಎಲ್ಲ ಬೆಳವಣಿಗೆಗಳು ಅಫ಼್ಘನ್ನರಿಗೆ ಅಮೆರಿಕ ಚೀನಗಳಾಗಲೀ, ತಾಲಿಬಾನಿಗಳಾಗಲಿ ಶತ್ರುಗಳೇ ಹೊರತು ಮಿತ್ರರಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ. ಆದ್ದರಿಂದ ಅಫ಼್ಘನಿಸ್ತಾನದ ವಿಮೋಚನೆಯನ್ನು ಅಫ಼್ಘನ್ ಜನರೇ ಮಾಡಿಕೊಳ್ಳುವ ರೀತಿ ಅಫ಼್ಘನ್ ಜನರನ್ನು ಗಟ್ಟಿಗೊಳಿಸುವ ಸಂದರ್ಭವನ್ನು ನಿರ್ಮಿಸುವ ಜವಾಬ್ದಾರಿ ಜಗತ್ತಿನ ಜನರಿಗಿದೆ. ಅಫ಼್ಘನ್ ಜನರು ಗೆಲ್ಲಬೇಕು-ತಾಲಿಬಾನಿಗಳಿಗೆ, ಸಾಮ್ರಾಜ್ಯವಾದಿಗಳಿಗೆ ಸೋಲಾಗಬೇಕು ಮೊದಲನೆಯದಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಅಫ಼್ಘನ್ ಆಡಳಿತ ವಿದೇಶೀ ಅನುದಾನದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಅಫ಼್ಘಾನಿಸ್ತಾನದ ಬಜೆಟ್ಟಿನ ಶೇ. 75 ಭಾಗ ವಿದೇಶಿ ಅನುದಾನವೇ. ಆದ್ದರಿಂದ ತಾಲಿಬಾನ್ ಸಹ ವಿದೇಶಿ ಅನುದಾನವಿಲ್ಲದೆ ಅಡಳಿತ ನಡೆಸಲಾಗುವುದಿಲ್ಲ. ಸೈನಿಕರ ಸಂಬಳವನ್ನು ಕೊಡಲಾಗುವುದಿಲ್ಲ. ಹೀಗಾಗಿ ಅಫ಼್ಘಾನಿಸ್ತಾನಕ್ಕೆ ಅನುದಾನ ಕೊಡುತ್ತಾ ಬಂದಿರುವ ಅಮೆರಿಕ, ಚೀನಾ, ರಷ್ಯಾ, ಪಾಕಿಸ್ತಾನ, ಭಾರತ ಸರ್ಕಾರಗಳು ಅನುದಾನ ಕೊಡುವಾಗ ತಾಲೀಬಾನ್ ಆಡಳಿತ ಕಡ್ಡಾಯವಾಗಿ ಮಾನವಹಕ್ಕುಗಳನ್ನು ಮಹಿಳಾ ಸ್ವಾತಂತ್ರ್ಯವನ್ನು ಮತ್ತು ಕನಿಷ್ಟ ಪ್ರಜಾತಾಂತ್ರಿಕ ಸ್ವಾತಂತ್ರ್ಯವನ್ನು ಖಾತರಿಗೊಳಿಸಿಕೊಳ್ಳಬೇಕೆಂದು ಆ ಸರ್ಕಾರಗಳ ಮೇಲೆ ಜನರು ಒತ್ತಡ ಹಾಕಬೇಕು. ಅಂತರರಾಷ್ಟ್ರೀಯ ಅಧಿಕೃತ ಹಾಗೂ ಅನಧಿಕೃತ ವೇದಿಕೆಗಳನ್ನು ಹಾಗೂ ತಮ್ಮ ತಮ್ಮ ದೇಶದ ವೇದಿಕೆಗಳನ್ನು ಜಾಗತಿಕ ಜನತೆ ಬಳಸಿಕೊಳ್ಳಬೇಕು. ಎರಡನೆಯದಾಗಿ ಅಫ಼್ಘಾನಿಸ್ತಾನದಿಂದ ನಿರಾಶ್ರಿತರಾಗಿ ಬರುತ್ತಿರುವ ಜನತೆಗೆ ಭಾರತವೂ ಒಳಗೊಂಡಂತೆ ಎಲ್ಲಾ ಸರ್ಕಾರಗಳು ಆಶ್ರಯವನ್ನು ಮತ್ತು ನಾಗರಿಕ ಜೀವನವನ್ನು ಕಲ್ಪಿಸಿಕೊಡಬೇಕು. ಮೂರನೆಯದಾಗಿ ಭಾರತ ಸರ್ಕಾರ ತನ್ನ ಕೋಮುವಾದಿ CAA ಕಾಯಿದೆಯನ್ನು ಪರಿಶ್ಕರಿಸಿ ಅಫ಼್ಘಾನಿಸ್ತಾನದ ಹಿಂದುಯೇತರ ನಿರಾಶ್ರಿತರಿಗೂ ಆಶ್ರಯ ಕೊಡಬೇಕು. ತಾಲಿಬಾನಿಗಳಿಗೂ ಹಾಗೂ ಭಾರತದ ಆಡಳಿತರೂಢ ಮನುವಾದಿಗಳಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಹೀಗಾಗಿ ಅಫ಼್ಘಾನಿಸ್ತಾನದ ಬೆಳವಣಿಗೆಯನ್ನು ನೆಪವಾಗಿಟ್ಟುಕೊಂಡು ಇಸ್ಲಾಮಿನ ವಿರುದ್ಧ ಹಾಗೂ ಮುಸ್ಲಿಮರ ವಿರುದ್ಧ ನಡೆಸುವ ಕೋಮುವಾದಿ ಅಪಪ್ರಚಾರವನ್ನು ತಡೆಗಟ್ಟಬೇಕು.. ತುರ್ತಾಗಿ ಇಷ್ಟಾಗಬೇಕು. ಸ್ವಾತಂತ್ರ್ಯದ ಗಾಳಿ ಬೀಸಿದರೆ ಅಫ಼್ಘನ್ ಜನತೆ ತಮ್ಮ ಭವಿಷ್ಯವನ್ನು ತಾವೇ ನಿರ್ಮಿಸಿಕೊಳ್ಳುತ್ತಾರೆ. ಅಫ಼್ಘನ್ ಜನತೆಗೆ ಜಯವಾಗಲಿ. ತಾಲಿಬಾನಿಗಳಿಗೆ, ಅವರನ್ನು ಬಂಬಲಿಸುವ ಸಾಮ್ರಾಜ್ಯವಾದಿ ಅಮೆರಿಕ, ಚೀನಾಗಳಿಗೆ ಸೋಲಾಗಲಿ. ಅಫ಼್ಘನ್ ಬೆಳವಣಿಗೆಯನ್ನು ತನ್ನ ಕೋಮುವಾದಿ ಹಾಗೂ ವಿಸ್ತರಣವಾದಿ ಯೋಜನೆಗಳಿಗೆ ಬಳಸಿಕೊಳ್ಳುವ ಪಾಕಿಸ್ತಾನ ಹಾಗೂ ಭಾರತದ ಕೋಮುವಾದಿಗಳ ಪ್ರಯತ್ನಗಳಿಗೆ ಧಿಕ್ಕಾರವಿರಲಿ. -ಕೃಪೆ: ವಾರ್ತಾಭಾರತಿ ►►ಇದನ್ನೂ ಓದಿ: ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement